ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗೇಶ ಹೆಗಡೆ ಅಂಕಣ – ವಿಜ್ಞಾನ ವಿಶೇಷ| ‘ನ್ಯಾನೊ ಯೂರಿಯಾ’: ನಾನಾ ಪ್ರಶ್ನೆ

20 ಕಿಲೊಗ್ರಾಂ ಬದಲು ಬರೀ 20 ಗ್ರಾಂ ಸಾರಜನಕದಲ್ಲಿ ಮೊದಲಿನಷ್ಟೆ ಭತ್ತ ಬೆಳೆಯಬಹುದೆ?
Last Updated 7 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಕಳೆದ ವರ್ಷ ಹೊಸದಾಗಿ ಹೊಲಕ್ಕಿಳಿದ ನ್ಯಾನೊ ಯೂರಿಯಾ ಈಗ ವಿವಾದದ ಕಣವಾಗಿದೆ.
45 ಕಿಲೊಗ್ರಾಂ ತೂಕದ ಒಂದಿಡೀ ಮೂಟೆಭರ್ತಿ ಯೂರಿಯಾದ ಬದಲು ಈಗ ಕೇವಲ ಅರ್ಧ ಲೀಟರ್‌ ಬಾಟಲಿಯಲ್ಲಿರುವ ದ್ರವವನ್ನು ಸಿಂಪಡಿಸಿದರೆ ಸಾಕು. ಬೆಲೆಯೂ ತೀರ ಜಾಸ್ತಿ ಏನಿಲ್ಲ. ಮೂಟೆಗೆ ₹ 242 ಇದ್ದರೆ, ಈ ಅರ್ಧ ಲೀಟರ್‌ ಯೂರಿಯಾಕ್ಕೆ ₹ 240 ಅಷ್ಟೆ. ಇದನ್ನು ನೀರಿಗೆ ಬೆರೆಸಿ ಭತ್ತ, ಗೋಧಿ, ಜೋಳ ಅಥವಾ ಆಲೂಗಡ್ಡೆ ಪೈರಿನ ಮೇಲೆ ಸಿಂಪಡನೆ ಮಾಡಿದರೆ ಇಳುವರಿ ಮೊದಲಿನಷ್ಟೇ ಇರುತ್ತದೆ. ಅಥವಾ ತುಸು ಹೆಚ್ಚೇ ಸಿಗಬಹುದು. ಹಾನಿಯಂತೂ ಇಲ್ಲ.

ನಾಗೇಶ ಹೆಗಡೆ
ನಾಗೇಶ ಹೆಗಡೆ

ಈ ನ್ಯಾನೊ ದ್ರವದಿಂದ ರೈತರಿಗೆ ಏನೆಲ್ಲ ಅನುಕೂಲವಿದೆ. ಪೇಟೆಯಿಂದ ಯೂರಿಯಾ ಮೂಟೆಗಳನ್ನು ಸಾಗಿಸಿ ತರಬೇಕಾಗಿಲ್ಲ. ಮನೆಯಲ್ಲಿ ತೇವ ತಟ್ಟದಂತೆ ಸುರಕ್ಷಿತ ಇಡಬೇಕಿಲ್ಲ. ಮೂಟೆಯನ್ನು ಹೊತ್ತು ಹೊಲಕ್ಕೆ ಹೋಗುವ ಬದಲು ಈ ಚಿಕ್ಕ ಲೀಟರ್‌ ಬಾಟಲಿ ಹಿಡಿದು ಹೊರಟರೆ ಸಾಕು.

ಗುಜರಾತ್‌ನ ಕಲೋಲ್‌ ಎಂಬಲ್ಲಿ ಈ ನ್ಯಾನೊ ಯೂರಿಯಾ ಫ್ಯಾಕ್ಟರಿಯನ್ನು ಕಳೆದ ಮೇ 28ರಂದು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿ, ‘ಇದೊಂದು ಕ್ರಾಂತಿಕಾರೀ ಸಾಧನೆ’ ಎಂದು ಘೋಷಿಸಿದರು. ನ್ಯಾನೊ ಯೂರಿಯಾದ ಎಲ್ಲ ಸದ್ಗುಣ
ಗಳನ್ನೂ ವಿಜ್ಞಾನಿಗಳನ್ನೂ ಹೊಗಳಿದರು. ಈ ಫ್ಯಾಕ್ಟರಿ ಯಲ್ಲಿ ದಿನಕ್ಕೆ ಇಂಥ ಒಂದೂವರೆ ಲಕ್ಷ ಬಾಟಲಿಗಳಲ್ಲಿ ನ್ಯಾನೊ ಯೂರಿಯಾ ತಯಾರಾಗುತ್ತಿದೆ. ದೇಶದ ಇತರ ಎಂಟು ಕಡೆಗಳಲ್ಲಿ ಇಂಥದ್ದೇ ಫ್ಯಾಕ್ಟರಿಯನ್ನು
ಸ್ಥಾಪಿಸುತ್ತೇವೆ’ ಎಂದರು. ಸಾರಜನಕ ಜೊತೆಗೆ ಸಸ್ಯಗಳಿಗೆ ಬೇಕಾದ ಇತರ ಪೋಷಕ ದ್ರವ್ಯಗಳನ್ನೂ (ಪೊಟ್ಯಾಸಿಯಂ, ರಂಜಕಗಳನ್ನೂ) ನ್ಯಾನೊ ರೂಪದಲ್ಲಿ ಉತ್ಪಾದಿಸಲಿದ್ದೇವೆ ಎಂತಲೂ ಹೇಳಿದರು.

ರಾಜಸ್ಥಾನದ ಹಳ್ಳಿಯೊಂದರಲ್ಲಿ ಜನಿಸಿದ
ಡಾ. ರಮೇಶ್‌ ರಲಿಯಾ (36) ಈ ನ್ಯಾನೊ ದ್ರವವನ್ನು ಸೃಷ್ಟಿಸಿ ಖ್ಯಾತರಾಗಿದ್ದಾರೆ. ಜೋಧಪುರದ ಕೃಷಿ ಸಂಸ್ಥೆಯಲ್ಲಿ ತರಬೇತಿ ಪಡೆದ ಅವರು ವಾಷಿಂಗ್ಟನ್‌ ಸ್ಟೇಟ್‌
ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಮಾಡುತ್ತಿದ್ದಾರೆ. ನ್ಯಾನೊ ತಂತ್ರಜ್ಞಾನದಲ್ಲಿ ಈಗಾಗಲೇ ಹದಿನೈದು ಉತ್ಪನ್ನಗಳ ಪೇಟೆಂಟ್‌ ಪಡೆದಿದ್ದಾರೆ. ದೇಶಕ್ಕೆ ಒಳ್ಳೆಯ ದಾಗಲೆಂದು ತಮ್ಮ ನ್ಯಾನೊ ಯೂರಿಯಾ ಪೇಟೆಂಟನ್ನು ಉಚಿತವಾಗಿ ಭಾರತದ ಇಫ್ಕೊ (IFFCO) ಸಂಸ್ಥೆಗೆ ನೀಡಿದ್ದಾರೆ. ಇಫ್ಕೊ ಗೊತ್ತಲ್ಲ? ದೇಶದಲ್ಲಿ ರಸಗೊಬ್ಬರ ಉತ್ಪಾದನೆ ಮತ್ತು ವಿತರಣೆಯ ಏಕಸ್ವಾಮ್ಯವನ್ನು ಪಡೆದಿರುವ ಇದು ಜಗತ್ತಿನ ಅತಿ ದೊಡ್ಡ ಸಹಕಾರಿ ಸಂಸ್ಥೆ ಎಂದೇ ಹೆಸರಾಗಿದೆ. ಡಾ. ರಲಿಯಾಗೆ ‘ಆತ್ಮನಿರ್ಭರ್‌ ಚಾಂಪಿಯನ್‌ ಮೆಡಲ್‌’ ಸಿಕ್ಕಿದೆ.

ನ್ಯಾನೊ ತಂತ್ರಜ್ಞಾನದ ನಾನಾ ಸದ್ಗುಣಗಳ ಬಗ್ಗೆ ನಾವು ಕೇಳುತ್ತಲೇ ಬಂದಿದ್ದೇವೆ. ‘ಅತಿ ಸೂಕ್ಷ್ಮ ಜಗತ್ತಿನ ಅತಿ ದೊಡ್ಡ ಅನ್ವೇಷಣೆ’ ಎಂಬ ಖ್ಯಾತಿ ಇದರದ್ದು. ನ್ಯಾನೊ ಮೀಟರ್‌ ಎಂದರೆ ಒಂದು ಮೀಟರಿನ ಶತಕೋಟಿಯಲ್ಲಿ ಒಂದು ಭಾಗ. ನಮ್ಮ ಹೆಬ್ಬೆರಳಿನಲ್ಲಿರುವ ರಕ್ತನಾಳ ಒಂದು ಮಿಲಿಮೀಟರ್‌ ದಪ್ಪ ಇದೆ ಎಂದುಕೊಂಡರೆ, ಅದರಲ್ಲಿ ಒಂದು ಸಾವಿರ ರಕ್ತಕಣಗಳು ಏಕಕಾಲಕ್ಕೆ ಚಲಿಸಬಲ್ಲವು. ಅಂಥ ಒಂದೊಂದು ರಕ್ತಕಣದಲ್ಲಿ ಔಷಧ (ಅಥವಾ ಬೇರಾವುದೇ) ದ್ರವ್ಯದ ಏಳು ಸಾವಿರ ನ್ಯಾನೊ ಕಣಗಳನ್ನು ತೂರಿಸಬಹುದು. ಅಷ್ಟು ಸೂಕ್ಷ್ಮ ಹಂತದಲ್ಲಿ, ದ್ರವ್ಯಗಳ ಸ್ವರೂಪ, ಗುಣಲಕ್ಷಣ, ಚಲನೆಯ ವೈಖರಿ ಎಲ್ಲ ಬದಲಾಗುತ್ತವೆ. ಯೂರಿಯಾ ಕಣ ಅಷ್ಟು ಚಿಕ್ಕ ಗಾತ್ರ
ದಲ್ಲಿದ್ದರೆ ಅದು ಸಸ್ಯದ ಜೀವಕೋಶದ ಜೊತೆ ಸಲೀಸಾಗಿ ಹೊಕ್ಕು ಹೊರಡುತ್ತ ಸಸ್ಯದ ಬೆಳವಣಿಗೆಗೆ ಚುರುಕು ನೀಡುತ್ತದೆ. ನಮ್ಮ ನಿಜ ಜೀವನದ ಅನುಭವವೂ ಹಾಗೇ ತಾನೆ? ಒತ್ತೊತ್ತಾಗಿ ನಿಂತ ಹತ್ತಾರು ಜನರಿಗಿಂತ ಪ್ರತ್ಯೇಕ ನಿಂತು ಕೈಕಾಲು ಆಡಿಸಬಲ್ಲವನ ತಾಕತ್ತು ಜಾಸ್ತಿ ಇರುತ್ತದೆ.

ನಮ್ಮ ದೇಶಕ್ಕೆ ಇಂಥ ಅಮೋಘ ತಂತ್ರಜ್ಞಾನ ಬೇಕಿತ್ತು, ಏಕೆಂದರೆ, ನಮ್ಮ ಫ್ಯಾಕ್ಟರಿಗಳ ಯೂರಿಯಾ ಉತ್ಪಾದನೆ ದೇಶಕ್ಕೆ ಸಾಕಾಗುತ್ತಿಲ್ಲ. ಬೇರೆ ದೇಶಗಳಿಂದ ಪ್ರತಿವರ್ಷ 40 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 90 ಲಕ್ಷ ಟನ್‌ ಯೂರಿಯಾ ಆಮದು ಮಾಡಿಕೊಳ್ಳು ತ್ತಿದ್ದೇವೆ. ಈ ಚಿಕ್ಕ ಬಾಟಲಿಯ ನ್ಯಾನೊ ಯೂರಿಯಾ
ಬಳಸುತ್ತಿದ್ದರೆ ಇನ್ನು ಮೂರು ವರ್ಷಗಳ ನಂತರ ನಮಗೆ ವಿದೇಶೀ ಯೂರಿಯಾ ಬೇಕಾಗುವುದಿಲ್ಲ ಎಂದು ಮೋದಿಯವರು ಘೋಷಿಸಿದ್ದಾರೆ.

ಪ್ರಧಾನಿಯವರೇ ಆಸಕ್ತಿ ವಹಿಸಿದ ಮೇಲೆ ಕೇಳಬೇಕೆ? ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್‌) ವಿಜ್ಞಾನಿಗಳು ನ್ಯಾನೊ ಯೂರಿಯಾ ತುಂಬಿದ ಶೀಶೆಗಳನ್ನು ಹಿಡಿದು ತ್ವರಿತವಾಗಿ ದೇಶದ ತುಂಬೆಲ್ಲ ಓಡಾಡಿ, 90 ಬಗೆಯ ಬೆಳೆಗಳ ಮೇಲೆ, ಎರಡು ಋತುಗಳಲ್ಲಿ ಸಿಂಚನ ಮಾಡಿ ಉಘೇ ಎಂದರು. ಎಲ್ಲೂ ಇಳುವರಿ ಕಮ್ಮಿ ಆಗಿಲ್ಲ; ಬದಲಿಗೆ ಕೆಲವೆಡೆ ಶೇಕಡ 8ರಷ್ಟು ಹೆಚ್ಚೇ ಆಗಿದೆ ಎಂದರು.

ಇದು ನಿಜಕ್ಕೂ ಸಾಧ್ಯವೆ? ಅಥವಾ ಕಣ್ಕಟ್ಟೆ? ಇದರ ಫಲಾಫಲಗಳ ಪೂರ್ತಿ ಅಧ್ಯಯನ ಮಾಡದೆ ಅವಸರದಲ್ಲಿ ಪರಿಚಯಿಸಿದ್ದು ಸರಿಯೆ? ಅಪಸ್ವರ ಎದ್ದಿದೆ. ಐಸಿಎಆರ್‌ ಸಂಸ್ಥೆಯ ನಿವೃತ್ತ ಉಪ ನಿರ್ದೇಶಕ
ಐ.ಪಿ. ಅಬ್ರೋಲ್‌ ಅವರಿಗೆ ಇದರಲ್ಲೇನೋ ಐಬು ಕಾಣುತ್ತಿದೆ. ‘ಎಲೆಗಳ ಮೇಲೆ ದ್ರವರೂಪದ ಪೋಷಕಾಂಶದ ಸಿಂಪಡನೆಯ ಲಾಭದ ಬಗ್ಗೆ ತುಂಬ ಹಿಂದೆಯೇ ಗೊತ್ತಿದೆ, ಹೊಸದೇನು?’ ಎಂದು ಅವರು ಕೇಳುತ್ತಾರೆ. ಹರಿಯಾಣ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್‌ ಎನ್‌.ಕೆ.ತೋಮರ್‌ ಅವರ ಪ್ರಕಾರ, ಇಫ್ಕೊ ಸಂಸ್ಥೆಯ ಈ ಹೆಜ್ಜೆ ಕೃಷಿಕರಿಗೆ ಅಷ್ಟೇ ಅಲ್ಲ, ದೇಶಕ್ಕೇ ಆತ್ಮಘಾತುಕ ಆಗಬಹುದಾಗಿದೆ. ಅವರ ಲೆಕ್ಕಾಚಾರದ ಪ್ರಕಾರ, ಒಂದು ಮೂಟೆಯಲ್ಲಿ 45 ಕಿಲೊ ಯೂರಿಯಾ ಅಂದರೆ 20 ಕಿಲೊಗ್ರಾಂ ಸಾರಜನಕ ಇರುತ್ತದೆ. ಅದೇ ಅರ್ಧ ಲೀಟರ್‌ ನ್ಯಾನೊದ್ರವದಲ್ಲಿ ಕೇವಲ 20 ಗ್ರಾಂ ಸಾರಜನಕ ಇರುತ್ತದೆ. ಅವೆರಡೂ ಸಮಸಮ ಆಗಲು ಹೇಗೆ ಸಾಧ್ಯ? ‘ಒಂದು ಟನ್‌ ಭತ್ತ ಬೆಳೆಯಲು 20 ಕಿ.ಗ್ರಾಂ. ಸಾರಜನಕ ಬೇಕೇ ಬೇಕು. ನೀವು ನ್ಯಾನೊ ಕಣಗಳ ರೂಪದಲ್ಲಿ 20 ಗ್ರಾಂ ಸಾರಜನಕ ಕೊಟ್ಟರೆ ಅದರಿಂದ 368 ಗ್ರಾಂ ಭತ್ತ ಸಿಗುತ್ತದೆ ಅಷ್ಟೆ’ ಎಂಬ ವಿವರ ಲೆಕ್ಕಾಚಾರ ನೀಡುವ ಅವರು, ನೀತಿ ಆಯೋಗಕ್ಕೆ ಹಾಗೂ ಕೃಷಿ ವಿಜ್ಞಾನಿಗಳ ರಾಷ್ಟ್ರೀಯ ಅಕಾಡೆಮಿಗೆ ದೂರು ಸಲ್ಲಿಸಿದ್ದಾರೆ. ಐಸಿಎಆರ್‌ ನಿವೃತ್ತ ಮಹಾನಿರ್ದೇಶಕ ತ್ರಿಲೋಚನ್‌ ಮಹಾಪಾತ್ರ ಕೂಡ ನ್ಯಾನೊ ಮ್ಯಾಜಿಕ್ಕನ್ನು ನಂಬುತ್ತಿಲ್ಲ. ಇದ್ದುದರಲ್ಲಿ ಸಂತಸದ ಸಂಗತಿ ಏನೆಂದರೆ, ಮೂಟೆಭರ್ತಿ ಯೂರಿಯಾ ಚೆಲ್ಲುವಾಗ ಶೇ 70ರಷ್ಟು ವ್ಯರ್ಥವಾಗಿ ಮಣ್ಣಿಗೆ, ಗಾಳಿಗೆ ಸೇರುತ್ತಿತ್ತು. ಅದರ ಬದಲು ‘ನೇರವಾಗಿ ಈಗ ಎಲೆಗಳಿಗೇ ಸಿಂಪಡನೆ ಮಾಡಿದರೆ ಪರಿಸರಕ್ಕೂ ಒಳ್ಳೆಯದು’
ಎನ್ನುತ್ತಾರೆ ಅವರು.

ಹಿಂದೆಲ್ಲ ಹೊಲದಲ್ಲಿ ಹೆಚ್ಚುವರಿಯಾಗಿ ಸೋರಿದ್ದ ಸಾರಜನಕವನ್ನೇ ಸಸ್ಯಗಳು ಈಗ ನ್ಯಾನೊ ಕಣಗಳ ಸಹಾಯದಿಂದ ಸಮರ್ಥವಾಗಿ ಮೇಲೆತ್ತಿ ಒಂದೆರಡು ವರ್ಷ ಬಳಸಿಕೊಳ್ಳಬಹುದು. ಮುಂದೆ? ಕೆಲ ವರ್ಷಗಳ ನಂತರ ನೆಲವೆಲ್ಲ ಪೂರ್ತಿ ಬರಡಾದ ಮೇಲೆ ‘ಆತ್ಮನಿರ್ಭರ ಅನ್ನೋದು ಆತ್ಮಘಾತುಕ ಆಗಲಾರದೆ?’ ಎಂದು ಚಿಂತನಶೀಲ, ಶ್ರಮಜೀವಿ ರೈತರು ಕೇಳುತ್ತಾರೆ. 1996ರಲ್ಲಿ ರಾಮರ್‌ ಪಿಳ್ಳೈ ಎಂಬಾತ ಬರೀ ನೀರಿಗೆ ಗಿಡಮೂಲಿಕೆ ಹಾಕಿ ಪೆಟ್ರೋಲ್‌ ತಯಾರಿಸುತ್ತೇನೆಂದು ಹೇಳಿ ವಿಜ್ಞಾನಿಗಳನ್ನೂ ಸರ್ಕಾರವನ್ನೂ ಏಮಾರಿಸಿದ್ದ. ಈಗಿನದು ಅಂಥ ಭಯಂಕರ ಬುರುಡೆ ಇರಲಿಕ್ಕಿಲ್ಲ. ಏನೇ ಇರಲಿ, ಗುಜರಾತಿನ ಕಲ್ಲೋಲದಲ್ಲಿ ಪ್ರಾರಂಭವಾದ ನ್ಯಾನೊ ಯೂರಿಯಾ ಕ್ರಾಂತಿ ನಾಳೆ ಕೃಷಿರಂಗದ ಅಲ್ಲೋಲ ಕಲ್ಲೋಲಕ್ಕೆ ಕಾರಣವಾಗದಿದ್ದರೆ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT