ಸೋಮವಾರ, ಜೂನ್ 1, 2020
27 °C
ನಮ್ಮ ಪೂರ್ವಜರ ಸ್ಥಾವರಗಳು ಪುಣ್ಯಭೂಮಿಯಾಗಿವೆ, ಪವಿತ್ರ ಸ್ಮಾರಕಗಳಾಗಿವೆ. ಕೈಗಾದ್ದು ಅಪಸ್ಮಾರಕ!

ಕೈಗಾ ಎಂಬ ನಿರಂತರ ಕೆಂಡ

ನಾಗೇಶ ಹೆಗಡೆ Updated:

ಅಕ್ಷರ ಗಾತ್ರ : | |

ನಿರಂತರ 943 ದಿನಗಳಿಂದ ವಿದ್ಯುತ್ ಉತ್ಪಾದನೆ ಮಾಡುತ್ತ ಕೈಗಾ ಪರಮಾಣು ಸ್ಥಾವರ ವಿಶ್ವದಾಖಲೆ ಸ್ಥಾಪಿಸಿದೆ. ಅಲ್ಲಿನ ತಾಂತ್ರಿಕ ಸಿಬ್ಬಂದಿಯ ಕಾರ್ಯತತ್ಪರತೆಗೆ ಶಾಭಾಸ್ ಹೇಳೋಣ. ಆದರೆ ಅದು ಹೆಮ್ಮೆಪಡುವಂಥ ಸಾಧನೆಯೇನೂ ಅಲ್ಲ. ಏಕೆಂದರೆ ಅದರ ನಿನ್ನೆಗಳಲ್ಲಿ ಕರಾಳ ಕತೆಯಿದೆ; ನಾಳೆಗಳಲ್ಲಿ ಅನೂಹ್ಯ ಆತಂಕಗಳಿವೆ.

ಪರಮಾಣು ವಿದ್ಯುತ್ ಸ್ಥಾವರಕ್ಕೆ ಯುರೇನಿಯಂ ಬೇಕು. ಎಲ್ಲೋ ಅದುರನ್ನು ಅಗೆದು, ಇನ್ನೆಲ್ಲೋ ಶುದ್ಧೀಕರಿಸಿ ಅದನ್ನು ಇಲ್ಲಿಗೆ ತಂದು ಉರಿಸಿ ವಿದ್ಯುತ್ ಉತ್ಪಾದಿಸಬೇಕು. ನಂತರ ಉಳಿಯುವ ಅಪಾಯಕಾರಿ ‘ಬೂದಿ’ಯನ್ನು ಹೂಳಬೇಕು. ಭೂಮಿಯಿಂದ ಹೀಗೆ ಏನನ್ನೋ ತೆಗೆದು ಅದರ ಕುರೂಪ ಅವಶೇಷಗಳನ್ನು ಭೂಮಿಗೇ ಮರಳಿಸುವ ಈ ಪ್ರಕ್ರಿಯೆಗೆ ‘ಪರಮಾಣು ಇಂಧನ ಚಕ್ರ’ ಎನ್ನುತ್ತಾರೆ. ಈ ಚಕ್ರದ ಒಂದು ಹಲ್ಲು ಮಾತ್ರ ಕೈಗಾದಲ್ಲಿ ಪಳಪಳ ಅನ್ನುತ್ತಿದ್ದು, ಇನ್ನುಳಿದ ಹುಳುಕು ಹಲ್ಲುಗಳ, ವಿಷದ ಹಲ್ಲುಗಳ ಕತೆ ಇಲ್ಲಿದೆ:

ಯುರೇನಿಯಂ ಗಣಿಗಾರಿಕೆ ಎಂದರೆ ಕಬ್ಬಿಣ, ನಿಕ್ಕೆಲ್, ಮ್ಯಾಂಗನೀಸ್, ಬಾಕ್ಸೈಟ್ (ಅಲ್ಯೂಮಿನಿಯಂ) ಗಣಿಗಾರಿಕೆಯ ಹಾಗಲ್ಲ. ಯುರೇನಿಯಂ ಬಂಡೆಗಳಲ್ಲಿ ರೇಡಾನ್ ವಿಕಿರಣ ಸೂಸುತ್ತದೆ. ಕಾರ್ಮಿಕರ ಶೋಷಣೆ, ಮಾನವ ಹಕ್ಕುಗಳ ದಮನ, ರೋಗರುಜಿನೆ, ಜಲಮಾಲಿನ್ಯ, ಜೀವಜಾಲ ನಾಶ ಇವೆಲ್ಲ ಇತರ ಲೋಹಗಳ ಗಣಿಗಾರಿಕೆಯ ಹಾಗೆ ಇಲ್ಲೂ ಇದ್ದದ್ದೇ. ಜೊತೆಗೆ ಯುರೇನಿಯಂ ಗಣಿಗಳ ಸುತ್ತ ಕ್ಯಾನ್ಸರ್‌ನಂಥ ವಿಕಿರಣ ಸಂಬಂಧಿ ಕಾಯಿಲೆಗಳು, ತ್ವರಿತಸಾವು, ಷಂಡತ್ವ, ಬಂಜೆತನ, ವಿರೂಪ ಸಂತಾನ ಇವೆಲ್ಲ ವಿಪರೀತ ಎಂಬಷ್ಟಿರುತ್ತವೆ. ಹೆಚ್ಚಿನ ಯುರೇನಿಯಂ ನಿಕ್ಷೇಪ ಇದ್ದಲ್ಲೆಲ್ಲ (ನೈಜೀರಿಯಾ, ಇಂಡಿಯಾ, ಕಝಾಕಿಸ್ತಾನ್, ನೈಗರ್, ಚೀನಾದ ಟಿಬೆಟ್, ಅಷ್ಟೇಕೆ ಆಸ್ಟ್ರೇಲಿಯಾ, ಅಮೆರಿಕದ ನೆವಾಡಾದಲ್ಲೂ) ಬುಡಕಟ್ಟು ಜನಾಂಗದ ಮುಗ್ಧ ಜನರಿದ್ದಾರೆ. ಅವರನ್ನು ಕೂಲಿಗಳನ್ನಾಗಿ ದುಡಿಸಿಕೊಂಡು, ಆಮೇಲೆ ‘ಹಾಸ್ಯುಂಡು ಬೀಸಿ ಒಗದ್ಹಾಂಗ’ ಬದಿಗೊತ್ತಿ ಪರಮಾಣು ಇಂಧನ ಚಕ್ರ ಮುಂದೆ ಸಾಗುತ್ತದೆ.

ನಮ್ಮ ಝಾರ್ಖಂಡ್ ರಾಜ್ಯದ ಜಾದೂಗುಡ ಎಂಬಲ್ಲಿನ ಯುರೇನಿಯಂ ಗಣಿಯಂತೂ ತನ್ನ ಕುಖ್ಯಾತಿಯಿಂದಾಗಿಯೇ ವಿಶ್ವ ದಾಖಲೆ ಮಾಡಿದೆ. ಕಳೆದ 50 ವರ್ಷಗಳಿಂದ ಇಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಸುತ್ತಲಿನ ಐದು ಕಿಲೊಮೀಟರ್ ದೂರದವರೆಗೆ ವಾಸಿಸುವ 35 ಸಾವಿರ ಸಂತಾಲ್ ಬುಡಕಟ್ಟು ಜನರ ಬಳಿ ಗಣಿಕ್ರೌರ್ಯದ ಅಸಂಖ್ಯ ಕತೆಗಳಿವೆ. ಎಷ್ಟೊಂದು ದೇಶಗಳ ವರದಿಗಾರರು, ವಿಕಿರಣ ತಜ್ಞರು ಇಲ್ಲಿಗೆ ಬಂದು ವರದಿ ಮಾಡಿದ್ದಾರೆ. ಆಸಕ್ತಿ ಇದ್ದವರು ಗೂಗಲ್‍ನಲ್ಲಿ jaduguda ಎಂಬ ಶೋಧ
ಪದ ಕೊಟ್ಟರೆ ಸಾಕು. ಅಂಥ ನೂರಾರು ವರದಿಗಳು ತೆರೆದುಕೊಳ್ಳುತ್ತವೆ. ಮೊದಲ ಪುಟದಲ್ಲೇ ಕಾಣುವ ‘ಬುದ್ಧನ ಕಣ್ಣೀರು’ (Buddha Weeps) ಹೆಸರಿನ ವಿಡಿಯೊ ನೋಡಬಹುದು. ಅಳ್ಳೆದೆಯವರು ‘ದೈನಿಕ್ ಭಾಸ್ಕರ್’ ಎಂಬ ಹಿಂದೀ ದಿನಪತ್ರಿಕೆಯಲ್ಲಿ 2017ರ ಆಗಸ್ಟ್ 24ರಂದು ಪ್ರಕಟವಾದ ಯುವತಿಯ ಚಿತ್ರವನ್ನು ನೋಡಬೇಡಿ. ಈ ವರದಿಗಳೆಲ್ಲ ಸತ್ಯಕ್ಕೆ ದೂರವೆಂದೂ ಜಾದೂಗುಡದ ಸಂಕಟಕ್ಕೂ ವಿಕಿರಣಕ್ಕೂ ಸಂಬಂಧ ಇಲ್ಲವೆಂದೂ ಅಲ್ಲಿ ಗಣಿಗಾರಿಕೆ ನಡೆಸುತ್ತಿರುವ ಯುಸಿಐಎಲ್ ಕಂಪನಿ ಹೇಳುತ್ತದೆ. ನಂಬುವವರು ನಂಬಬಹುದು. ಅಂದಹಾಗೆ, ಭೋಪಾಲ್ ದುರಂತಕ್ಕೆ ಕಾರಣವಾದ ಯುಸಿಐಎಲ್ ಕಂಪನಿ ಬೇರೆ, ಇದು ಬೇರೆ. ಇದೇ ಕಂಪನಿ ಈಗ ಮೇಘಾಲಯದ ಬುಡಕಟ್ಟು ಜನರಿಗೆ ಸೇರಿದ ಖಾಸಿ ಗುಡ್ಡಗಾಡಿನಲ್ಲಿ, ಕರ್ನಾಟಕದ ಗೋಗಿ ಮತ್ತು ತೆಲಂಗಾಣದ ಲಂಬಾಪುರಗಳಲ್ಲೂ ಗಣಿ ಅಗೆತಕ್ಕೆ ಸಿದ್ಧತೆ ನಡೆಸಿದೆ. ಅಲ್ಲೆಲ್ಲ ತೆಗೆದ ಯುರೇನಿಯಂ ಪುಡಿಯೆಲ್ಲ ಹಳದೀ ಹಿಂಡಿಯ ರೂಪದಲ್ಲಿ ಹೈದರಾಬಾದ್ ಬಳಿ ಬಂದು ಇಂಧನದ ಸರಳುಗಳಾಗಿ ಅಲ್ಲಿಂದ ವಿವಿಧ ಪರಮಾಣು ವಿದ್ಯುತ್ ಸ್ಥಾವರಗಳಿಗೆ ಹೋಗುತ್ತದೆ.

ಪರಮಾಣು ಸ್ಥಾವರಗಳಲ್ಲಿ ಯುರೇನಿಯಂ ಸರಳು ನಿಗಿನಿಗಿ ಉರಿಯುವಾಗ ಅತಿ ಒತ್ತಡದಲ್ಲಿ ನೀರು ಕುದಿದು, ಅದರ ಉಗಿಯಿಂದ ಚಕ್ರ ತಿರುಗುತ್ತ ವಿದ್ಯುತ್ ಉತ್ಪಾದನೆಯಾಗುತ್ತದೆ. ಅಪಾರ ಶಾಖದ ಆ ಕುಲುಮೆಯಲ್ಲಿ ತೀವ್ರ ವಿಕಿರಣ ಹೊಮ್ಮುತ್ತಿರುತ್ತದೆ. ಇಂಧನ ಸರಳುಗಳು, ಅವುಗಳನ್ನು ದೂರದಿಂದಲೇ ನಿಯಂತ್ರಿಸುವ ಮೀಟುಗೋಲು, ಉಕ್ಕಿನ ಪಿಪಾಯಿಗಳು, ಅದರ ಮೂಲಕ ಹಾದು ಹೋಗುವ ಕುದಿನೀರಿನ ಕೊಳವೆ, ಪಂಪ್‍ಗಳನ್ನು ಅವು ಶಿಥಿಲವಾದಂತೆಲ್ಲ ಕಿತ್ತು, ಯಾರಿಗೂ ಸಿಗದಂತೆ ಹೂಳಬೇಕು. ಯುರೇನಿಯಂ ಉರಿದು ಪ್ಲುಟೋನಿಯಂ ಎಂಬ ಭಾರೀ ವಿಕಿರಣಶೀಲ ಧಾತುವಾಗುತ್ತದೆ. ಅದನ್ನು ಮತ್ತೆ ಉರಿಸಬಹುದು ಇಲ್ಲವೆ ಅದರಿಂದ ಬಾಂಬ್ ತಯಾರಿಸಬಹುದು. ಹಾಗೇ ಬಿಟ್ಟರೆ ನಾಲ್ಕು ಕೆಜಿ ಪ್ಲುಟೋನಿಯಂ ತಂಪಾಗಿ 24,110 ವರ್ಷಗಳ ನಂತರ ಅರ್ಧದಷ್ಟು ಭಾಗ ಸುರಕ್ಷಿತ ರೂಪಕ್ಕೆ ಬರುತ್ತದೆ. ಇನ್ನುಳಿದ ಎರಡು ಕೆಜಿ ತಂಪಾಗುತ್ತ ಮತ್ತೆ 24,110 ವರ್ಷಗಳ ನಂತರ ಒಂದು ಕೆಜಿಗೆ ಇಳಿಯುತ್ತದೆ. ನಾಗಾಸಾಕಿಯಲ್ಲಿ ಬೀಳಿಸಿದ ಬಾಂಬ್‍ನಲ್ಲಿ ಆರು ಕೆಜಿ ಪ್ಲುಟೊನಿಯಂ ಇತ್ತು. ಕೈಗಾದ ಮೊದಲೆರಡು ಘಟಕಗಳಲ್ಲಿ ಒಟ್ಟು 2000 ಕೆಜಿ ಪ್ಲುಟೊನಿಯಂ ಸೃಷ್ಟಿಯಾಗುವ ಅಂದಾಜಿದೆ. ನಿಸರ್ಗದಲ್ಲಿ ಅದು ಎಂದೂ ತಾನಾಗಿ ಸೃಷ್ಟಿಯಾದದ್ದಿಲ್ಲ.

ಕುಲುಮೆಯಿಂದ ಹೊರಬರುವ ಪ್ಲುಟೋನಿಯಂ ಮತ್ತು ನೂರಾರು ಟನ್‍ಗಟ್ಟಲೆ ಯಂತ್ರೋಪಕರಣಗಳನ್ನು ಎಲ್ಲಿಟ್ಟರೆ ಸುರಕ್ಷಿತ ಎಂಬುದು ವಿಜ್ಞಾನಲೋಕಕ್ಕೆ ಗೊತ್ತಿಲ್ಲ. ಇಡೀ ಸ್ಥಾವರ ಶಿಥಿಲಗೊಂಡ ನಂತರ ಏನು ಮಾಡಬೇಕು ಎಂಬುದೂ ಗೊತ್ತಿಲ್ಲ. ಅಲ್ಲಿ ಸ್ಫೋಟ ಆಗದಂತೆ, ಬಾಂಬ್ ಬೀಳದಂತೆ, ಭೂಕುಸಿತ ಆಗದಂತೆ, ಪ್ರವಾಹ ನುಗ್ಗದಂತೆ, ಕೊಡಸಳ್ಳಿ ಅಣೆಕಟ್ಟೆ ಒಡೆಯದಂತೆ ಮುಂದಿನ ಸಾವಿರಾರು ಪೀಳಿಗೆಯ ಜನರು ತಮ್ಮ ಖರ್ಚಿನಲ್ಲಿ ಅದನ್ನು ಕಾಯಬೇಕು. ‘ಅಪಾಯ- ಎಚ್ಚರಿಕೆ!’ ಎಂಬ ಫಲಕ ಹಾಕುವುದಾದರೆ ಯಾವ ಭಾಷೆ, ಯಾವ ಲಿಪಿ, ಯಾವ ವಸ್ತುವಿನಮೇಲೆ ಬರೆಯಬೇಕು ಎಂಬುದೂ ಗೊತ್ತಿಲ್ಲ. ನಮ್ಮ ಇಂದಿನ ಅಗತ್ಯಗಳಿಗಾಗಿ ನಾಳಿನವರನ್ನು ಅಪಾಯಕ್ಕೆ ದೂಡುವ ನೈತಿಕ ಹಕ್ಕು ನಮಗಿದೆಯೆ? ಯಾವುದೋ ದೇಶದ ಬುಡಕಟ್ಟು ಜನರನ್ನು ಸಂಕಷ್ಟಕ್ಕೆ ದೂಡಿ, ಸುಂದರ ಕೈಗಾ ಕಣಿವೆಯನ್ನು ಕೆಂಡದ ಕಣಿವೆಯನ್ನಾಗಿಸಿ ಪಡೆದ ಶಕ್ತಿಯನ್ನು ಶಕ್ತಿ ಎನ್ನಬೇಕೆ? ಅದರಿಂದ ಬರುವ ಬೆಳಕನ್ನು ಬೆಳಕು ಎನ್ನಬೇಕೆ?

ಕೈಗಾದಲ್ಲಿ ಇನ್ನೆರಡು ಹೊಸ ಘಟಕಗಳ ಸ್ಥಾಪನೆ ಕುರಿತು ಸಾರ್ವಜನಿಕ ಅಭಿಪ್ರಾಯ ಕೇಳಲೆಂದು ಡಿ. 15ರಂದು ಸಭೆ ಕರೆಯಲಾಗಿದೆ. ವಿದ್ಯುತ್ ಉತ್ಪಾದನೆಯ ವಿಶ್ವದಾಖಲೆಯ ಹೆಗ್ಗಳಿಕೆಯ ಸುದ್ದಿಯನ್ನು ಹರಿಬಿಟ್ಟ ತುರ್ತಿನಲ್ಲೇ ಜನಾಭಿಪ್ರಾಯ ಕೋರುವ ಜಾಣ್ಮೆ ಇದರಲ್ಲಿದೆ. ಸಭೆಗೆಂದು ಸಿದ್ಧಪಡಿಸಿದ ‘ಪರಿಸರ ಪರಿಣಾಮ ವರದಿ’ಯಲ್ಲಿ ತ್ಯಾಜ್ಯ ವಿಲೆವಾರಿಯ ಸಮಸ್ಯೆಗೆ ಪರಿಹಾರ ಹಾಗಿರಲಿ, ನೂರು ವರ್ಷಗಳ ನಂತರ ಅದನ್ನು ನಿಭಾಯಿಸಲು ಎಷ್ಟು ಹಣ ಬೇಕಾದೀತೆಂಬ ಪ್ರಸ್ತಾಪ ಕೂಡ ಇಲ್ಲ. ಆ ವೆಚ್ಚವನ್ನು ಯಾರು ಭರಿಸಬೇಕು ಎಂಬ ಪ್ರಶ್ನೆಯೇ ಇಲ್ಲ. ಇಂದು ಪಾವಗಡದಂಥ ಬರಡು ನೆಲದಲ್ಲೂ ಎರಡೇ ವರ್ಷಗಳಲ್ಲಿ 2000 ಮೆಗಾವಾಟ್ ವಿದ್ಯುತ್ ಉತ್ಪಾದಿಸಲು ಸಾಧ್ಯವಿರುವಾಗ ಎಂಟು ವರ್ಷಗಳ ನಿರ್ಮಾಣ ಅವಧಿಯ, ಮೂರು ಪಟ್ಟು ಹೆಚ್ಚಿನ ವೆಚ್ಚದ, ನಾಳಿನವರ ಉಡಿಯಲ್ಲಿ ಕೆಂಡ ತುಂಬುವ ಯೋಜನೆ ಏಕೆ ಬೇಕೊ ಗೊತ್ತಿಲ್ಲ. ಯಾರ ಹಿತಾಸಕ್ತಿಗೊ ಯಾರೂ ಹೇಳುತ್ತಿಲ್ಲ.

ಹಿಂದಿನ ನಮ್ಮವರ ಸಾಧನೆಗಳನ್ನು ಹಳೇಬೀಡು, ಬಾದಾಮಿ, ಹಂಪಿಯ ಸ್ಮಾರಕಗಳಾಗಿ ನಾವು ಹೆಮ್ಮೆಯಿಂದ ತೋರಿಸುತ್ತೇವೆ. ನೂರು ವರ್ಷಗಳ ನಂತರ ಹುಟ್ಟಿ ಬರುವವರಿಗೆ ಈಗಿನ ನಾವು ಏನನ್ನು ತೋರಿಸೋಣ? ಕೈಗಾ ಸ್ಮಾರಕದ ‘ಹತ್ತಿರ ಹೋಗಬೇಡಿ ಅಪಾಯ!’ ಎಂಬ ಎಚ್ಚರಿಕೆ ಫಲಕವನ್ನು ಹಾಕಿ ನಾಳಿನವರು ಕಾವಲು ಕಾಯಬೇಕಾಗುತ್ತದೆ. ಕುಸಿಯದಂತೆ ಫಲಕವನ್ನೂ ಕಾಯಬೇಕಾಗುತ್ತದೆ.

ಹೆಮ್ಮೆಯ ಸಾಧನೆಯೆ ನಮ್ಮ ಇಂದಿನದು?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು