ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಾನ್ಸನ್- ಅನಿತಾ ಜೋಡಿಯ ಹೈಪರ್ ಲೂಪ್

ನೂರು ವರ್ಷಗಳ ನಂತರ ಹೊಸಬಗೆಯ ಸಂಚಾರ ತಂತ್ರಜ್ಞಾನ ಬರಲಿದೆ. ಅದು ಭಾರತಕ್ಕೇ ಮೊದಲು ಬಂದೀತೆ?
Last Updated 28 ಜೂನ್ 2018, 4:17 IST
ಅಕ್ಷರ ಗಾತ್ರ

ಹತ್ತು ದಿನಗಳ ಹಿಂದೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅಮೆರಿಕದ ನೆವಾಡಾ ಮರುಭೂಮಿಗೆ ಭೇಟಿಕೊಟ್ಟರು. ಹುಲ್ಲುಗರಿಕೆಯೂ ಬೆಳೆಯದ ಆ ಕಡುಘೋರ ಬೆಂಗಾಡಿನಲ್ಲಿ ಹಸುರು ಚಿಗುರಿಸುವ, ನೀರುಕ್ಕಿಸುವ ವಿಧಾನವನ್ನು ನೋಡಲೆಂದು ಹೋದರೆ? ಛೆ, ಹಾಗೇನಿಲ್ಲ. ಅಂಥ ಸಾಹಸವನ್ನು ನೋಡಬೇಕೆಂದರೆ ಚೀನಾಕ್ಕೆ ಹೋಗಬೇಕಿತ್ತು. ಅಥವಾ ನಮ್ಮ ಎಚ್.ಡಿ. ಕುಮಾರಸ್ವಾಮಿಯ ಹಾಗೆ ಇಸ್ರೇಲಿಗೆ ಹೋಗಬೇಕಿತ್ತು. ಫಡಣವೀಸ್ ನೆವಾಡಾಕ್ಕೆ 'ಹೈಪರ್ ಲೂಪ್' ಎಂಬ ಸೂಪರ್ ಹೈಟೆಕ್ ಸಂಚಾರ ಸಾಧನವನ್ನು ಕಣ್ಣಾರೆ ನೋಡಲೆಂದು ಹೋಗಿದ್ದರು. ಕಣ್ಣು ಹಾಯಿಸಿದಷ್ಟೂ ದೂರ ಉರಿಮರಳು ತುಂಬಿದ ಆ ಮಹಾಮೈದಾನದಲ್ಲಿ ಮಿರಿಮಿರಿ ಮಿಂಚುತ್ತ ಎರಡಾಳೆತ್ತರದ ಕೊಳವೆಯೊಂದು ಮಲಗಿತ್ತು. ಅದರೊಳಕ್ಕೆ ರಾಕೆಟ್ ಓಡಿಸಲು ಸಿದ್ಧತೆ ನಡೆದಿತ್ತು.

ಮುಂಬೈ ಮತ್ತು ಪುಣೆಯ ಮಧ್ಯೆ ಅಂಥದ್ದೊಂದು ಕೊಳವೆ ಮಾರ್ಗವನ್ನು ಹಾಕಿಸಿ ಅದರೊಳಕ್ಕೆ ಗಾಡಿ ಓಡಿಸುವ ಯೋಜನೆಗೆ ಈಗಾಗಲೇ ಫಡಣವೀಸ್ ನೇತೃತ್ವದ ಸರ್ಕಾರ ಅಮೆರಿಕದ ವರ್ಜಿನ್ ಕಂಪನಿಯ ಜೊತೆ ಒಡಂಬಡಿಕೆ (ಎಮ್‌ಓಯು) ಮಾಡಿಕೊಂಡಿದೆ. 2024ರಲ್ಲಿ ಈ ಯೋಜನೆ ನಿಜಕ್ಕೂ ಸಾಕಾರಗೊಂಡರೆ ಮುಂಬೈ-ಪುಣೆ ನಡುವಣ ಈಗಿನ ನಾಲ್ಕು ಗಂಟೆಗಳ ಪ್ರಯಾಣವನ್ನು ಕೇವಲ 25 ನಿಮಿಷಗಳಲ್ಲಿ ಮುಗಿಸಬಹುದಂತೆ. ಅಂದರೆ ಬುಲೆಟ್ ಟ್ರೇನಿಗಿಂತ, ವಿಮಾನ ಯಾನಕ್ಕಿಂತ ಶೀಘ್ರವಾಗಿ, ರಾಕೆಟ್ ವೇಗದಲ್ಲಿ ಪುಣೆ ತಲುಪಬಹುದು. ಈ ಬಗೆಯ ಕೊಳವೆ ಮಾರ್ಗವನ್ನು '5ನೇ ಸಂಚಾರ ಸಾಧನ' ಎಂದು ಬಣ್ಣಿಸಲಾಗುತ್ತಿದೆ. ಇದುವರೆಗೆ ನಮಗೆ ಕಾರು, ರೈಲು, ಹಡಗು, ವಿಮಾನ ಈ ನಾಲ್ಕೇ ಮಾದರಿ ಗೊತ್ತಿತ್ತು. ಐದನೆಯದೆನಿಸಿದ 'ಹೈಪರ್ ಲೂಪ್' ಇದುವರೆಗೆ ಜಗತ್ತಿನಲ್ಲಿ ಎಲ್ಲೂ ಬಳಕೆಗೆ ಬಂದಿಲ್ಲ. ಅದರ ಪ್ರಾಯೋಗಿಕ ಚಲನೆ ಇದೀಗ ನೆವಾಡಾ ಮರುಭೂಮಿಯಲ್ಲಿ ಪ್ರಾರಂಭವಾಗುತ್ತಿದೆ. ಮನುಷ್ಯರು ಅದರೊಳಕ್ಕೆ ಇನ್ನೂ ಕೂತಿಲ್ಲ. ಯಂತ್ರವನ್ನಷ್ಟೇ ಓಡಿಸಲಾಗುತ್ತಿದೆ.

ಈ ಕೊಳವೆ ಬಂಡಿಯ ಕಲ್ಪನೆಯೇ ಸೊಗಸಾಗಿದೆ. ನೀರು, ಪೆಟ್ರೋಲ್ ಅಥವಾ ಅನಿಲವನ್ನು ಸಾಗಿಸಲು ಬಳಸುವಂಥ ಕೊಳವೆಯೊಳಗೆ ಹಳಿಯಂಥ ಅಯಸ್ಕಾಂತ ಪಟ್ಟಿಗಳಿರುತ್ತವೆ. ಅವುಗಳ ಮಧ್ಯೆ 10-15 ಜನರು ಕೂರಬಹುದಾದ ಎರಡು ಮೀಟರ್ ಅಗಲದ 'ಕ್ಯಾಪ್ಸೂಲ್' ಅಂದರೆ ಸೌತೆಕಾಯಿ ಆಕಾರದ, ಅಥವಾ ಪಶುವೈದ್ಯರು ಕೊಡುವ ದನದ ಮಾತ್ರೆಯಂತೆ ಕಾಣುವ ಬೋಗಿ ಇರುತ್ತದೆ. ಅದಕ್ಕೆ ಚಕ್ರಗಳ ಬದಲು ಅಯಸ್ಕಾಂತದ ಪಟ್ಟಿ ಇರುತ್ತದೆ. ಇಡೀ ಕೊಳವೆ, ಅದೆಷ್ಟೇ ನೂರಿನ್ನೂರು ಕಿಲೊಮೀಟರ್ ಉದ್ದವಿದ್ದರೂ ಅದರೊಳಗಿನ ಬಹುಪಾಲು ಗಾಳಿಯನ್ನೆಲ್ಲ ತೆಗೆದಿರುತ್ತಾರೆ. ವಿದ್ಯುತ್ ಕರೆಂಟ್ ಹರಿಸಿದ ತಕ್ಷಣ ಪ್ರಯಾಣಿಕರನ್ನು ಕೂರಿಸಿಕೊಂಡ ಕ್ಯಾಪ್ಸೂಲ್ ಗಾಳಿಯ ಘರ್ಷಣೆ ಇಲ್ಲದೇ ಅತಿ ವೇಗವಾಗಿ ಚಲಿಸುತ್ತದೆ. ಹಳಿಯ ಘರ್ಷಣೆಯೂ ಇರುವುದಿಲ್ಲ. ಏಕೆಂದರೆ ಹಳಿಯ ಪಟ್ಟಿ ಮತ್ತು ಕ್ಯಾಪ್ಸೂಲಿನ ತಳದ ಪಟ್ಟಿ ಎರಡಕ್ಕೂ ವಿದ್ಯುತ್ಕಾಂತೀಯ ಬಲ ಬಂದಿರುವುದರಿಂದ ಅವೆರಡೂ ಒಂದಕ್ಕೊಂದು ಸ್ಪರ್ಶಿಸದೇ ಬೆರಳಷ್ಟು ಅಂತರ ಕಾಯ್ದುಕೊಳ್ಳುತ್ತವೆ. ಅದಕ್ಕೆ ಮ್ಯಾಗ್ನೆಟಿಕ್ ಲೆವಿಟೇಶನ್ ಅಥವಾ ಮ್ಯಾಗ್ಲೇವ್ ತಂತ್ರ ಎನ್ನುತ್ತಾರೆ. ಹೈಸ್ಕೂಲಿನಲ್ಲಿ ನಾವಿದನ್ನು ಕಲಿತಿದ್ದೇವೆ. ಎರಡು ಅಯಸ್ಕಾಂತಗಳ ದಕ್ಷಿಣ-ಉತ್ತರ ಧ್ರುವಗಳು ಪರಸ್ಪರ ಆಕರ್ಷಿಸಿ ಛಕ್ಕೆಂದು ಹಿಡಿದುಕೊಳ್ಳುತ್ತವೆ. ಅದೇ ದಕ್ಷಿಣ- ದಕ್ಷಿಣ ಅಥವಾ ಉತ್ತರ-ಉತ್ತರ ಧ್ರುವಗಳನ್ನು ಬೆಸೆಯಲು ಸಾಧ್ಯವಿಲ್ಲ. ಪರಸ್ಪರ ದೂರ ಇರುತ್ತವೆ. ಗಾಳಿ ಇಲ್ಲದ, ಘರ್ಷಣೆಯೂ ಇಲ್ಲದ ಕೊಳವೆಯಲ್ಲಿ ಪುಟ್ಟ ವಾಹನ ರಾಕೆಟ್ ವೇಗದಲ್ಲಿ ಸಾಗುತ್ತದೆ. ಪೆಟ್ರೋಲ್, ಡೀಸೆಲ್ ಉರಿಸಬೇಕಿಲ್ಲ. ಹಾಗಾಗಿ ಹೊಗೆ ಇಲ್ಲ. ವಾಯುಮಾಲಿನ್ಯ ಇರುವುದಿಲ್ಲ. ಕೊಳವೆಯ ಮೇಲೆ ಉದ್ದಕ್ಕೂ ಸೌರ ಫಲಕವನ್ನು ಹಾಕಿದರಂತೂ ತನಗೆ ಬೇಕಾದ್ದಕ್ಕಿಂತ ಅದೆಷ್ಟೊ ಪಟ್ಟು ಹೆಚ್ಚು ವಿದ್ಯುತ್ ಶಕ್ತಿಯನ್ನು ತಾನೇ ಉತ್ಪಾದಿಸುತ್ತದೆ. ಇದು ಪರಿಸರಕ್ಕೆ ನಷ್ಟ ಉಂಟುಮಾಡದೆ ವಿವಿಧ ನಗರಗಳ ಮಧ್ಯೆ, ದೇಶಗಳ ಮಧ್ಯೆ ಸರಕುಗಳನ್ನೂ ಸಿರಿಜನರನ್ನೂ ಶರವೇಗದಲ್ಲಿ ಸಾಗಿಸಬಲ್ಲ ಕ್ರಾಂತಿಕಾರಿ ತಂತ್ರಜ್ಞಾನ ಎಂಬ ಶ್ಲಾಘನೆಗಳು ವ್ಯಕ್ತವಾಗಿವೆ.

'ರಾಕೆಟ್ ಪಿತಾಮಹ' ಎಂದೇ ಖ್ಯಾತಿ ಪಡೆದ ರಾಬರ್ಟ್ ಗೊಡ್ಡಾರ್ಡ್ ಎಂಬಾತ ಸರಿಯಾಗಿ ನೂರು ವರ್ಷಗಳ ಹಿಂದೆ ಸಂಚಾರ ಸಾಗಾಟದ ಇಂಥದ್ದೊಂದು ಕಲ್ಪನೆಯನ್ನು ಮುಂದಿಟ್ಟಿದ್ದರೂ ರಾಕೆಟ್ ಎಂದರೆ ಆಕಾಶದ ಕಡೆಗೇ ಎಲ್ಲರೂ ದೃಷ್ಟಿ ಹರಿಸಿ ಇದನ್ನು ಮರೆತೇಬಿಟ್ಟಿದ್ದರು. ಐದು ವರ್ಷಗಳ ಹಿಂದೆ ಈಲಾನ್ ಮಸ್ಕ್ ಎಂಬ ಯುವ ಉದ್ಯಮಿಗೆ ಈ ಸಾಧ್ಯತೆ ಮತ್ತೆ ಹೊಳೆಯಿತು. ಪ್ರಚಂಡ ಬುದ್ಧಿಮತ್ತೆ ಮತ್ತು ಅಷ್ಟೇ ಪ್ರಚಂಡ ಬಿಸಿನೆಸ್ ಚಾಣಾಕ್ಷತೆಯುಳ್ಳ ಈಲಾನ್ ಮಸ್ಕ್ (Elan Musk- ಇಂದು ಆತನ 47ನೇ ಜನ್ಮದಿನ) ಇಂಥ ಅನೇಕ ಕ್ರಾಂತಿಕಾರಿ ತಾಂತ್ರಿಕ ಸಾಹಸಗಳನ್ನು ಮೆರೆಯುತ್ತ 'ನಾಳಿನ ದಂತಕತೆ' ಎಂದೇ ಖ್ಯಾತಿ ಪಡೆದಿದ್ದಾನೆ. ಬಾಹ್ಯಾಕಾಶಕ್ಕೆ ಹೋಗಿ ಇಡಿಯಾಗಿ ಹಿಂದಿರುಗಬಲ್ಲ ರಾಕೆಟ್‌ಗಳ ನಿರ್ಮಾಣಕ್ಕೆ ಆತ 'ಸ್ಪೇಸ್-ಎಕ್ಸ್' ಕಂಪನಿ, ವಿದ್ಯುತ್‌ಚಾಲಿತ ಕಾರುಗಳ ಉತ್ಪಾದನೆಗೆ 'ಟೆಸ್ಲಾ' ಕಂಪನಿ, ಭೂಗತ ಸುರಂಗ ಸಂಚಾರ ಜಾಲ ನಿರ್ಮಾಣಕ್ಕೆ 'ಬೋರಿಂಗ್' ಕಂಪನಿಗಳನ್ನು ಆರಂಭಿಸಿದ್ದೂ ಅಲ್ಲದೇ ಮಸ್ಕ್ ನಮ್ಮ ಮಿದುಳಿಗೇ ಮೆಮೊರಿ ಕಾರ್ಡ್ ಜೋಡಿಸುವ ಸಂಶೋಧನೆಗೂ ಹಣ ಹೂಡಿದ್ದಾನೆ. ಇವೆಲ್ಲವುಗಳ ಮಧ್ಯೆ, ಹೈಪರ್ ಲೂಪ್ ಯೋಜನೆಯನ್ನು ನೆವಾಡಾ ಮರುಭೂಮಿಯಲ್ಲಿ ಪ್ರಾಯೋಗಿಕ ಹಂತದವರೆಗೆ ತಂದಿದ್ದನ್ನು ಎರಡು ವರ್ಷಗಳ ಹಿಂದೆ ಇದೇ ಅಂಕಣದಲ್ಲಿ ವಿವರಿಸಲಾಗಿತ್ತು. ಮಸ್ಕ್ ಮಿದುಳಲ್ಲಿ ಅದೆಷ್ಟು ಯೋಜನೆಗಳಿವೆಯೊ, ಹೈಪರ್ ಲೂಪ್ ಯೋಜನೆಯನ್ನು ಅಷ್ಟಕ್ಕೇ ಬಿಟ್ಟು 'ನನಗಂತೂ ಬಿಡುವಿಲ್ಲ, ಯಾರಾದರೂ ಇದನ್ನು ಮುಂದುವರೆಸಲಿ' ಎಂದು ಹೇಳಿದ್ದೇ ತಡ, ಧನಂಧಾರಿ ಉದ್ಯಮಿಗಳು ಅತ್ತ ನುಗ್ಗಿದರು. ನೆಲಮಟ್ಟದಲ್ಲೇ ವಿಮಾನಕ್ಕಿಂತ ವೇಗ ಚಲಿಸಬಲ್ಲ ಈ ಕ್ರಾಂತಿಕಾರಿ ತಂತ್ರಜ್ಞಾನ ಯಾರಿಗೆ ಬೇಡ? ಅಮೆರಿಕದ ಉದ್ಯಮಕ್ಷೇತ್ರದಲ್ಲಿ ತರಂಗ ಎಬ್ಬಿಸುತ್ತಿರುವ ಬ್ರಿಟಿಷ್ ಸಾಹಸಿ ಉದ್ಯಮಿ ರಿಚರ್ಡ್ ಬ್ರಾನ್ಸನ್ ಇದನ್ನು ಖರೀದಿಸಿ 'ಹೈಪರ್ ಲೂಪ್1' ಎಂಬ ಹೆಸರಿನಲ್ಲಿ ಮುಂದುವರೆಸುತ್ತಿದ್ದಾನೆ. ಮರುಭೂಮಿಯಲ್ಲಿ ಹೂಡಲಾದ ಅರ್ಧ ಕಿಲೊಮೀಟರ್ ಉದ್ದದ ಕೊಳವೆಯಲ್ಲಿ ಇದೀಗ ಖಾಲಿಬಂಡಿಗಳು ಪ್ರಾಯೋಗಿಕವಾಗಿ 350 ಕಿ.ಮೀ. ವೇಗದಲ್ಲಿ ಸಾಗುತ್ತಿವೆ. ವೇಗವನ್ನು ಇಮ್ಮಡಿ ಮಾಡಬೇಕು; ನಂತರ ಕೋತಿಗಳನ್ನೂ ಆಮೇಲೆ ಪ್ರಯಾಣಿಕರನ್ನೂ ಕೂರಿಸಿ ಓಡಿಸಿ ಆರೋಗ್ಯ ಪರೀಕ್ಷೆ ಮಾಡಬೇಕು. ಅದಾದ ಬಳಿಕ ನೂರು, 200 ಕಿ.ಮೀ. ಉದ್ದದ ಕೊಳವೆ ಮಾರ್ಗ ಹಾಕಬೇಕು, ಅದರ ದೂರಗಾಮಿ ಪರಿಣಾಮ ನೋಡಬೇಕು…

ದಾರಿ ದೂರವಿದೆ, ಆದರೆ ರಾಕೆಟ್ ವೇಗದಲ್ಲೇ ಅದನ್ನು ಕ್ರಮಿಸಲು ಬ್ರಾನ್ಸನ್ ಮಾಲಿಕತ್ವದ 'ವರ್ಜಿನ್ ಹೈಪರ್ ಲೂಪ್ ವನ್' ಕಂಪನಿ ಹೊರಟಿದೆ. ಅದಾಗಲೇ ಈ ತಂತ್ರಜ್ಞಾನವನ್ನು ಕನಸಿನ ನಗರಿ ದುಬೈಯಿಂದ ಅಬುಧಾಬಿಯವರೆಗೆ ಅಳವಡಿಸಲು ಒಪ್ಪಂದವಾಗಿದೆ. ಒಂದೂವರೆ ಗಂಟೆಗಳ ಈಗಿನ ಪಯಣವನ್ನು ಹತ್ತೇ ನಿಮಿಷಗಳಲ್ಲಿ ಪೂರೈಸಬಲ್ಲ ಈ ಯೋಜನೆಗೆ ಮಾರ್ಗನಕ್ಷೆ ಕೂಡ ಹಾಕಿರಲಿಕ್ಕಿಲ್ಲ. ಆಗಲೇ ಪುಣೆಯಲ್ಲಿ 15 ಕಿಲೊಮೀಟರ್ ಪಟ್ಟಿಯನ್ನು ಅದಕ್ಕೆಂದೇ ಕಾದಿಟ್ಟು ಫಡಣವೀಸ್ ನೆವಾಡಾಕ್ಕೆ ಧಾವಿಸಿದ್ದಾರೆ. ಹೈಪರ್ ಲೂಪ್ ಭಾರತಕ್ಕೆ ಮೊದಲು ಬರುತ್ತದೊ ಅಥವಾ ದುಬೈಗೆ ಆ ಕೀರ್ತಿ ಸಿಗುತ್ತದೊ ಆ ಮಾತು ಹೇಗೂ ಇರಲಿ, ಈ ರಾಕೆಟ್ಟಿನೊಳಗೆ ಪ್ರಯಾಣಿಕರನ್ನು ಕೂರಿಸಿ ಮೊದಲ ಬಾರಿಗೆ ಓಡಿಸುವ ಖ್ಯಾತಿ ಅನಿತಾ ಸೇನ್‌ಗುಪ್ತಾ ಎಂಬ ಭಾರತೀಯ ಹೆಸರಿನ ಯುವ ವಿಜ್ಞಾನಿಗೆ ಸಿಗಲಿದೆ.

ಅಲ್ಲಿಗೆ ಈ ಕಥಾನಕಕ್ಕೆ ಹೊಸ ತಿರುವು ಸಿಕ್ಕಂತಾಗಿದೆ. ವಿಜ್ಞಾನ ಲೋಕದಲ್ಲಿ ಇದೀಗ ತಾರಾ ವರ್ಚಸ್ಸು ಪಡೆಯುತ್ತಿರುವ ಡಾ. ಅನಿತಾ ಸೇನ್‌ಗುಪ್ತಾ ಆಗಲೇ ಟ್ವಿಟ್ಟರ್, ಯೂ ಟ್ಯೂಬ್, ಫೇಸ್ ಬುಕ್‌ಗಳಲ್ಲಿ ಮಿಂಚುತ್ತಿದ್ದಾರೆ. ಅವರ ಜೀವನಕಥೆಯೂ ವಿಶೇಷವಾಗಿದೆ. ಸ್ಕಾಟ್ಲೆಂಡಿನಲ್ಲಿ ನೆಲೆಸಿ ಬ್ರಿಟಿಷ್ ಯುವತಿಯ ಕೈಹಿಡಿದ ಬೆಂಗಾಲಿ (ಐಐಟಿ) ಎಂಜಿನಿಯರ್ ಸೇನ್‌ಗುಪ್ತಾ ಮಗಳು ಈಕೆ. ಅಮೆರಿಕದಲ್ಲಿ ಎಂಜಿನಿಯರಿಂಗ್ ಓದಿ, ಕ್ಷುದ್ರಗ್ರಹಗಳತ್ತ ರಾಕೆಟ್ ಹಾರಿಸುವ ವಿಷಯದಲ್ಲಿ ಪಿಎಚ್‌.ಡಿ ಸಂಶೋಧನೆ ಮಾಡುತ್ತಲೇ ನಾಸಾ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ ಅನಿತಾ ಬಲುಬೇಗ ಎತ್ತರಕ್ಕೇರಿದವರು. ಎಷ್ಟೆತ್ತರಕ್ಕೆ ಎಂದರೆ, ಅಮೆರಿಕದವರು 2012ರಲ್ಲಿ ಮಂಗಳ ಗ್ರಹದತ್ತ ಹಾರಿಬಿಟ್ಟ 'ಕ್ಯೂರಿಯಾಸಿಟಿ' ಹೆಸರಿನ ಬಂಡಿಯನ್ನು ಸುರಕ್ಷಿತವಾಗಿ ಆ ಕೆಂಪು ಗ್ರಹಕ್ಕೆ ಇಳಿಸಲು ಬಳಸಿದ ವಿಶೇಷ ಪ್ಯಾರಾಶೂಟನ್ನು ನಿರ್ಮಿಸಿದ ಕೀರ್ತಿ ಇವರದ್ದು. ಮಂಗಳ ಗ್ರಹದ ತೆಳು ವಾತಾವರಣದಲ್ಲಿ ಏನನ್ನೇ ಇಳಿಸಲು ಹೋದರೂ ಧೊಪ್ಪೆಂದು ಬೀಳುತ್ತದೆ. 900 ಕಿಲೊ ತೂಕದ ಆ ಭಾರೀ ಯಂತ್ರ ಕೆಳಕ್ಕೆ ಇಳಿಯುವಾಗ ಪ್ಯಾರಾಶೂಟ್ ಕೈಕೊಟ್ಟಿದ್ದರೆ 250 ಕೋಟಿ ಡಾಲರ್ ಯೋಜನೆ ಹಾಗೂ ನಾಸಾ ಕೀರ್ತಿ ಎರಡೂ ಮಂಗಳನ ನೆಲ ಕಚ್ಚಬಹುದಿತ್ತು.

ಅಂಥ ಗುರುತರ ಜವಾಬ್ದಾರಿಯನ್ನು ನಿರ್ವಹಿಸಿದ ಅನಿತಾ ಇದೀಗ ಮತ್ತೊಂದು ಸಾಹಸ ಮೆರೆದಿದ್ದಾರೆ. ವಿಶ್ವದ ಅತಿ ತೀವ್ರ ಚಳಿಬಿಂದುವನ್ನು ಸೃಷ್ಟಿಸುವ ಪೆಟ್ಟಿಗೆಯನ್ನು ಇವರ ನೆರವಿನಿಂದ ಬಾಹ್ಯಾಕಾಶಕ್ಕೆ ರವಾನಿಸಲಾಗಿದೆ. ಅದರ ವಿವರಣೆ ಹೀಗಿದೆ: ಶೂನ್ಯದ ಕೆಳಗಿನ -273.15 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ನಿಖರ ಶೂನ್ಯ (ಝೀರೊ ಕೆಲ್ವಿನ್) ಎನ್ನುತ್ತಾರೆ. ಆ ಚಳಿಯಲ್ಲಿ ಪರಮಾಣುಗಳು ತಮ್ಮ ಚಲನೆಯನ್ನು ನಿಲ್ಲಿಸಿ ತರಂಗರೂಪ ತಳೆದು ತೆಪ್ಪಗೆ ನಿಲ್ಲುತ್ತವೆ. ಅದಕ್ಕೆ ಬೋಸ್- ಐನ್‌ಸ್ಟೀನ್ ಕಂಡೆನ್ಸೇಟ್ ಎನ್ನುತ್ತಾರೆ. ಬೆಳಕಿನ ವೇಗವನ್ನು ಸರಿಗಟ್ಟಲು ಎಂದೂ ಸಾಧ್ಯವಿಲ್ಲ ತಾನೆ? ಹಾಗೆಯೇ ನಿಖರ ಶೂನ್ಯವನ್ನು ತಲುಪಲು ಕೂಡ ಯಾರಿಗೂ ಸಾಧ್ಯವಿಲ್ಲ. ಅದಕ್ಕೆ ತೀರ ಅಂದರೆ ತೀರಾ ಸಮೀಪ ಅಂದರೆ -273.1499999999999 ವರೆಗೆ ಚಳಿಸ್ಥಿತಿಯನ್ನು ಸೃಷ್ಟಿ ಮಾಡಬಹುದು. ಅದೂ ಭೂಮಿಯ ಮೇಲೆ ಸಾಧ್ಯವಿಲ್ಲ. ಬಾಹ್ಯಾಕಾಶದಲ್ಲಿ ಅದನ್ನು ಸಾಧ್ಯವಾಗಿಸಬಲ್ಲ ಸಾಧನವನ್ನು ಸೃಷ್ಟಿಸಿದ ತಂಡದಲ್ಲಿ ಅನಿತಾ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದರು. ಈಗ ಆ ಪೆಟ್ಟಿಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ಅಟ್ಟಣಿಗೆಯನ್ನು ಏರಿ ಕೂತಿದೆ. ಅದರಿಂದ ಹೊಮ್ಮುವ ಜ್ಞಾನ ಅದೆಷ್ಟೊ ಹೊಸ ದ್ರವ್ಯಗಳ ಸೃಷ್ಟಿಗೆ ಮತ್ತು ಸಂಶೋಧನ ಪ್ರಬಂಧಗಳಿಗೆ ಆಕರವಾಗಲಿದೆ.

ಹೈಪರ್ ಲೂಪ್ ವನ್ ಯೋಜನೆಯಲ್ಲಿ ಸೀನಿಯರ್ ವೈಸ್ ಪ್ರೆಸಿಡೆಂಟ್ ಎಂಬ ಬಹು ಎತ್ತರದ ಹುದ್ದೆಯಲ್ಲಿರುವ ಅನಿತಾ ಈಗ ಕೊಳವೆ ಮಾರ್ಗವನ್ನು ಪೈಲಟ್ ಹಂತದಿಂದ ಜನಬಳಕೆಗೆ ತರುವ ಹೊಣೆ ಹೊತ್ತಿದ್ದಾರೆ. ಕಂಪನಿಯ ಮಾಲಿಕ ರಿಚರ್ಡ್ ಬ್ರಾನ್ಸನ್ ಥರಾ ಇವರೂ ಪ್ರಚಂಡ ಸಾಹಸಿ. ದೊಡ್ಡ ಬೈಕ್ ಸವಾರಿ ಮಾಡುತ್ತಾರೆ, ವಿಮಾನ ಹಾರಿಸುತ್ತಾರೆ. ಅಗ್ನಿ ಪರ್ವತವನ್ನೂ ಹಿಮ ಪರ್ವತವನ್ನೂ ಏರುತ್ತಾರೆ. ಆಳ ಸಮುದ್ರದಲ್ಲಿ ಡೈವ್ ಮಾಡುತ್ತಾರೆ. ಅರಳು ಹುರಿದಂತೆ ಮಾತಾಡುತ್ತ ಮಾಧ್ಯಮಗಳಲ್ಲಿ ಮಿಂಚುತ್ತ 'ಡಾಕ್ಟರ್_ಆಸ್ಟ್ರೊ' ಹೆಸರಿನಲ್ಲಿ ಟ್ವೀಟ್ ಮಾಡುತ್ತಿರುತ್ತಾರೆ. ವರ್ಣ ಸಮಾನತೆ, ಲಿಂಗ ಸಮಾನತೆ ಕುರಿತು ಉಪನ್ಯಾಸ ನೀಡುತ್ತಿರುತ್ತಾರೆ. 'ನಿಖರ ಗುರಿ ಇದ್ದರೆ, ಛಲವಿದ್ದರೆ ಮಹಿಳೆಯರಿಗೆ ಆಕಾಶವೂ ಮಿತಿಯಲ್ಲ, ಆರಂಭವಷ್ಟೆ' ಎಂದು ಹೇಳುತ್ತಾರೆ. ಆಕಾಶದಲ್ಲಿ ಚಲಿಸಬೇಕಿದ್ದ ರಾಕೆಟ್ಟನ್ನೇ ನೆಲದ ಮೇಲೆ ಓಡಿಸಲು ಶ್ರಮಿಸುತ್ತಾರೆ.
ಮುಂಬೈಯ ಅದೃಷ್ಟವೇ ಅದೃಷ್ಟ. ನಮ್ಮ ದೇಶದ ಮೊದಲ ಪ್ಯಾಸೆಂಜರ್ ರೈಲು 1853ರಲ್ಲಿ ಬ್ರಿಟಿಷರ ನೆರವಿನಿಂದ ಇಲ್ಲಿಂದಲೇ ಆರಂಭವಾಯಿತು. ದೇಶದ ಮೊದಲ ಬುಲೆಟ್ ಟ್ರೇನ್ ಕೂಡ ನಕಾಶೆಯ ಮೇಲೆ ಮುಂಬೈ ಕಡೆಗೇ ಮುಖ ಮಾಡಿದೆ. ಅದರ ವೇಗವನ್ನೂ ಮೀರಿಸಿ, ಅದಕ್ಕಿಂತ ಶೀಘ್ರವಾಗಿ ಹೈಪರ್ ಲೂಪ್ ರಾಕೆಟ್ ಪುಣೆಯಿಂದ ಹೊರಟು ಮುಂಬೈಗೇ ಬರುವಂತಿದೆ. ಅದೂ ಬ್ರಿಟಿಷ್ ಮೂಲದ ಸಾಹಸಿಗಳ ಬೆಂಬಲದಿಂದ. ನೋಡಬೇಕು, ದೊಡ್ಡ ಮಳೆ ಬಂದರೆ ಅರ್ಧ ಮುಳುಗಡೆಯಾಗುವ ಮುಂಬೈಗೆ ರಾಕೆಟ್ ಸಾಧನ ಹೇಗೆ ನೆರವಾಗುತ್ತದೆ ಅಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT