1975ರ ಒಂದು ದಿನ: ಕೀಟನಾಶಕ ವಿಷಗಳ ಮೂಟೆಯನ್ನು ಒಯ್ಯುತ್ತಿದ್ದ ಟ್ರ್ಯಾಕ್ಟರ್ ಹೇಗೋ ಪಕ್ಕದ ನಾಲೆಗೆ ಮಗುಚಿ ಬಿತ್ತು. ಅದು ಬೆಂಗಳೂರಿಗೆ ಕುಡಿಯುವ ನೀರನ್ನು ಪೂರೈಸುತ್ತಿದ್ದ ನಾಲೆಯಾಗಿತ್ತು. ಪತ್ರಿಕೆಗಳಲ್ಲಿ ಸುದ್ದಿ ಬಂದಿದ್ದೇ ತಡ, ಜಲಮಂಡಳಿಯ ಅಧಿಕಾರಿಯೊಬ್ಬ ನೀರು ತುಂಬಿದ ಬಾಟಲಿ ಹಿಡಿದು ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಯೋಗಶಾಲೆಗೆ ಬಂದ. ‘ಈ ನೀರಲ್ಲಿ ವಿಷದ ಅಂಶ ಇಲ್ಲವೆಂದು ಪ್ರಮಾಣಪತ್ರ ಕೊಡಿ. ಜನ ಕಂಗಾಲಾಗಿದ್ದಾರೆ’ ಎಂದ. ವಿಜ್ಞಾನಿ ಡಾ. ವಸಂತರಾಜನ್ ಹಾಗೆ ಮಾಡಲು ಸುತರಾಂ ನಿರಾಕರಿಸಿದರು. ‘ನೀವು ನೀರಿನ ಸ್ಯಾಂಪಲ್ಲನ್ನು ಎಲ್ಲಿಂದ ತಂದಿರುವಿರೋ ಗೊತ್ತಿಲ್ಲ; ನಾವೇ ಹೋಗಿ ನಾಲೆಯ ನೀರನ್ನು ತಂದು ವಿಶ್ಲೇಷಣೆ ಮಾಡಿ ವರದಿ ಕೊಡುತ್ತೇವೆ’ ಎಂದರು. ಅಧಿಕಾರಿ ತಕರಾರು ಎತ್ತಿದ. ‘ಸರ್ಕಾರಿ ಸಂಬಳ ಪಡೆಯುವ ನೀವು ಸರ್ಕಾರದ ವಿನಂತಿಯನ್ನು ಮಾನ್ಯ ಮಾಡಲೇಬೇಕು’ ಎಂದೆಲ್ಲ ಗುರ್ರೆಂದ. ವಿಜ್ಞಾನಿ ಜಪ್ಪೆನ್ನಲಿಲ್ಲ. ಕೊನೆಗೂ ಆ ಅಧಿಕಾರಿ, ‘ನೀವಲ್ಲದಿದ್ದರೆ ಬೇರೆ ಕಡೆಯಿಂದ ಪ್ರಮಾಣಪತ್ರ ದೊರಕಿಸುವುದು ನಮಗೆ ಗೊತ್ತು’ ಎಂದು ಹೇಳಿ ಹೊರಟ.

ತುಸು ಹಿಂದಷ್ಟೇ ಹಾರ್ವರ್ಡ್ನಿಂದ ಬಂದು ಈ ಸಂಸ್ಥೆಗೆ ಸೇರಿದ್ದ ಡಾ. ಮಾಧವ ಗಾಡ್ಗೀಳರ ಎದುರಲ್ಲೇ ಈ ಘಟನೆ ನಡೆದಿತ್ತು. ಅಮೆರಿಕದ ಎಷ್ಟೊಂದು ಆಮಿಷಗಳನ್ನು ಬದಿಗೊತ್ತಿ ಭಾರತದ ಪರಿಸರ ಸಂರಕ್ಷಣೆಗೆ ಏನೆಲ್ಲ ಕೊಡುಗೆ ನೀಡಬೇಕೆಂಬ ಕನಸಿನೊಂದಿಗೆ ಬಂದಿದ್ದ ಈ ಯುವ ವಿಜ್ಞಾನಿಗೆ ಆಘಾತವೇ ಆಗಿತ್ತು. ಈ ದೇಶದಲ್ಲಿ ಪರಿಸರ ವಿಜ್ಞಾನವನ್ನು ಮುನ್ನಡೆಸುವಲ್ಲಿ ಏನೆಲ್ಲ ಸವಾಲು ಎದುರಾ ದೀತು ಎಂಬ ಮುನ್ನೋಟ ಅವರಿಗೆ ಆಗಲೇ ಸಿಕ್ಕಿತ್ತು.

ಮುಂದೆ ಇಂಥ ಚಿತ್ರಣ ಅವರಿಗೆ ಪದೇ ಪದೇ ಸಿಗುತ್ತಲೇ ಹೋದವು. 1984ರಲ್ಲಿ ಭೋಪಾಲ್ ಅನಿಲ ದುರಂತ ಸಂಭವಿಸಿದ ಮುಂಜಾನೆ ಇವರು ದಿಲ್ಲಿಯ ನ್ಯಾಷನಲ್ ಸೈನ್ಸ್ ಅಕಾಡೆಮಿಯ ಅತಿಥಿಗೃಹದಲ್ಲಿ ಭಾರತೀಯ ವಿಷ ರಸಾಯನಗಳ ಸಂಶೋಧನಾ ಸಂಸ್ಥೆಯ ಮುಖ್ಯಸ್ಥನೊಡನೆ ತಿಂಡಿ ತಿನ್ನುತ್ತಿದ್ದರು. ಯಾರೋ ಒಬ್ಬ ಅಲ್ಲಿಗೆ ಧಾವಿಸಿ ಬಂದ. ಭೋಪಾಲದ ಅನಿಲ ಸೋರಿಕೆಯ ವಿಷಯವನ್ನು ತಿಳಿಸಿ, ‘ನಾವೆಲ್ಲ ತಕ್ಷಣ ಅಲ್ಲಿಗೆ ಹೋಗಿ ಸುದ್ದಿ ಹರಡದಂತೆ ನೋಡಿಕೊಳ್ಳಬೇಕು; ಇಲ್ಲಾಂದರೆ ಈ ದೇಶದ ದರಿದ್ರ ಜನರು ಸುಮ್ಮನೆ ಗಲಾಟೆ ಎಬ್ಬಿಸಿ ಕೈಗಾರಿಕೆಗಳ ಅಭಿವೃದ್ಧಿಯನ್ನೇ ನಿಲ್ಲಿಸಿಬಿಡುತ್ತಾರೆ’ ಎಂದ. ವಿಷಕ್ಕಿಂತ ವಿಷದ ಸುದ್ದಿ ಹರಡದಂತೆ ತಪ್ಪಿಸುವುದೇ ಅಧಿಕಾರಿಗಳ ಮುಖ್ಯ ಉದ್ದೇಶ ಆಗಿತ್ತೆಂದು ಗಾಡ್ಗೀಳ್ ಮನಗಂಡರು.

ಎಪ್ಪತ್ತರ ದಶಕದಲ್ಲಿ ಸ್ವದೇಶಕ್ಕೆ ಮರಳುತ್ತಲೇ ಇವರೂ (ಗಾಂಧೀಜಿಯವರ ಹಾಗೆ) ಭಾರತವನ್ನು ಅರ್ಥ ಮಾಡಿಕೊಳ್ಳಲು ಇಡೀ ದೇಶವನ್ನು ಸುತ್ತುತ್ತಾರೆ. ಅಭಿವೃದ್ಧಿಯ ಹೆಸರಿನಲ್ಲಿ ದಿನದಿನಕ್ಕೆ ನರಕದತ್ತ ಹೊರಳುತ್ತಿರುವ ಆದಿವಾಸಿಗಳ, ಮೀನುಗಾರರ, ಭೂರಹಿತ ಕೃಷಿಕಾರ್ಮಿಕರ, ಬಡರೈತರ ಸಂಕಷ್ಟಗಳನ್ನು ಕಣ್ಣಾರೆ ನೋಡುತ್ತಾರೆ. ನಗರಗಳ ಕೊಳೆಗೇರಿಗೆ ವಲಸೆ ಬಂದ ‘ಪರಿಸರ ನಿರಾಶ್ರಿತ’ರನ್ನು ಮಾತಾಡಿಸುತ್ತಾರೆ. ಪಾಶ್ಚಾತ್ಯರ ದೃಷ್ಟಿಯಲ್ಲಿ ಪರಿಸರಪ್ರಜ್ಞೆ ಎಂದರೆ ಬದುಕಿನ ಗುಣಮಟ್ಟವನ್ನು ಇನ್ನಷ್ಟು ಎತ್ತರಿಸುವುದಾಗಿದ್ದರೆ, ಭಾರತದ ಮಟ್ಟಿಗೆ ಪರಿಸರ ಹೋರಾಟವೆಂದರೆ ತಳವಾಸಿ ಜನರು ‘ಬದುಕುಳಿಯಲು ನಡೆಸುವ ಹೋರಾಟ’ ಎಂಬ ಹೊಸ ಪರಿಕಲ್ಪನೆಯನ್ನು (ರಾಮಚಂದ್ರ ಗುಹಾ ಜೊತೆ ಸೇರಿ) ಮುಂದೊಡ್ಡುತ್ತಾರೆ. ಅನಾದಿ ಕಾಲದಿಂದ ಈ ಭೂಖಂಡದಲ್ಲಿ ವಿಕಾಸವಾಗಿದ್ದ ಗಿಡಮರ, ಜಲಚರ, ಪಶುಪಕ್ಷಿಗಳ ಜೀವಸ್ತೋಮವನ್ನು ರಕ್ಷಿಸಿಕೊಂಡು ಬರುತ್ತಿರುವ ಈ ಬುಡಕಟ್ಟು ಜನರ ಮೇಲೆ ಏನೆಲ್ಲ ಬಗೆಯ ಅವೈಜ್ಞಾನಿಕ ಕಾನೂನುಗಳನ್ನು ಹೇರಲಾಗಿದೆ ಎಂದು ಆಯಾ ಕಾನೂನುಗಳ ಕಲಮುಗಳನ್ನು ಎತ್ತಿ ತೋರಿಸುತ್ತಾರೆ. ಈ ದೇಶದ ಜೀವಪರಿಸರವನ್ನು ರಕ್ಷಿಸಬೇಕೆಂದರೆ ಪರಿಸರಕ್ಕೆ ಹತ್ತಿರವಾಗಿ ಬದುಕುವ ಗ್ರಾಮವಾಸಿಗಳಿಂದ ಸಾಧ್ಯವೇ ಹೊರತೂ ನಗರದ ಆಡಳಿತಶಾಹಿಯಿಂದ ಅದು ಸಾಧ್ಯವಿಲ್ಲ ಎನ್ನುತ್ತಾರೆ.

ಮುಂದೆ ಇವರು ವಿಶ್ವಮಾನ್ಯ ವಿಜ್ಞಾನಿಯಾಗಿ ಬೆಳೆದರೂ ‘ವಿಜ್ಞಾನಿ ಹೇಗಿರಬಾರದು’ ಎಂಬುದಕ್ಕೆ ಪರಮೋಚ್ಚ ಉದಾಹರಣೆಯಂತೆ ರೂಪುಗೊಳ್ಳು ತ್ತಾರೆ. ಸಡಿಲ ಜುಬ್ಬಾ–ಪೈಜಾಮ; ದುರ್ಗಮ ನಿಸರ್ಗದ ಅಪಾಯಗಳನ್ನು ಲೆಕ್ಕಿಸದೆ ಸಾಗುವ ಉತ್ಸಾಹ, ಕಾಡಿನ ಹಾಡಿಗಳ ಜನರೊಂದಿಗೆ ಚಳಿ ಕಾಯಿಸುತ್ತ ಅವರು ತಿನ್ನುವುದನ್ನೇ ತಾನೂ ತಿನ್ನುತ್ತ, (ಸೋಲಿಗರ ಜೊತೆ ರಾತ್ರಿ ವೇಳೆಯಲ್ಲಿ ನೆಲ ಬಗೆದು ಇಲಿಗಳನ್ನು ಹಿಡಿದು ಬೇಯಿಸಿ ತಿನ್ನುತ್ತಾರೆ; ‘ರಾಜಮಹಾರಾಜರ, ಬ್ರಿಟಿಷರ ಹಾಗೂ ಬಂದೂಕುಧಾರಿಗಳ ಬೇಟೆಯ ತೆವಲಿನಿಂದಾಗಿ ಸೋಲಿಗರಿಗೆ ಉಳಿದಿದ್ದು ಇಲಿಬೇಟೆಯಷ್ಟೇ’ ಎನ್ನುತ್ತ) ಅವರ ಭಾಷೆಯಲ್ಲೇ ಮಾತಾಡಲು ಯತ್ನಿಸುವ ಮನೋಗುಣ; ಪ್ರಭುತ್ವಕ್ಕೆ ಕ್ಯಾರೇ ಎನ್ನದೇ ತನಗನಿಸಿದ್ದನ್ನು ಹೇಳುವ ಛಾತಿ. ಪರಿಸರ ವಿಜ್ಞಾನದ ಕ್ಲಿಷ್ಟ ಪರಿಕಲ್ಪನೆಗಳು ಸಾಮಾನ್ಯರಿಗೂ ಅರ್ಥವಾಗಲೆಂದು ಕನ್ನಡ, ಕೊಂಕಣಿ, ಮರಾಠಿ ಪತ್ರಿಕೆಗಳಲ್ಲಿ ಅಂಕಣ ಬರೆಯುವ ಆಸಕ್ತಿ, ವಿಜ್ಞಾನದ ಆಚಿನ ವೇದ, ಉಪನಿಷತ್ತು, ಕೌಟಿಲ್ಯನ ಅರ್ಥಶಾಸ್ತ್ರ, ಮರಾಠಿ ಸಪ್ತಶತಿ, ಸಮಾಜವಿಜ್ಞಾನ, ಕಾನೂನು, ಬುಡಕಟ್ಟು ಸಂಪ್ರದಾಯಗಳನ್ನೂ ಅರಗಿಸಿಕೊಂಡೇ ವಾದ ಮಂಡಿಸುವ ಗುಣ; ಸಂಶೋಧನೆ ಮತ್ತು ಪರಿಸರ ಸಂವರ್ಧನೆಗೆ ಹಳ್ಳಿ, ಪಟ್ಟಣಗಳ ಸಂಸ್ಥೆಗಳನ್ನೇ ಸಹಭಾಗಿಯನ್ನಾಗಿ ಮಾಡಿಕೊಳ್ಳುವ ಸ್ವಭಾವ; ಯಾವುದೇ ಜನಸಮೂಹ ಸಂಕಷ್ಟದಲ್ಲಿದ್ದರೂ ಅವರ ಹೋರಾಟಕ್ಕೆ ಬೆಂಬಲ ನೀಡಲೆಂದು ತನಗೆ ಬಂದ ಪ್ರಶಸ್ತಿಗಳ ಹಣವನ್ನೂ ಚಂದಾ ರೂಪದಲ್ಲಿ ನೀಡುವ ಮನೋಗುಣ (ಅವರೇ ಪ್ರಸಿದ್ಧಿಗೆ ತಂದ ‘ಹಳಕಾರ್ ವಿಲೇಜ್ ಫಾರೆಸ್ಟ್’ ಎಂಬ ಜನಪೋಷಿತ ಅರಣ್ಯಕ್ಕೆ ಕಳೆದ ವರ್ಷ ನೂರು ತುಂಬಿದಾಗ ಅದಕ್ಕೆ ನೂರು ಸಾವಿರ ರೂಪಾಯಿಗಳನ್ನು ನೀಡಿದವರು; ಗೋಂಡ್ ಬುಡಕಟ್ಟಿನ ಜನರು ಸುಸ್ಥಿರ ಬದುಕು ಕಟ್ಟಿಕೊಳ್ಳಲೆಂದು 20 ಲಕ್ಷ ರೂಪಾಯಿ ಬಂಡವಾಳ ಹೂಡಲು ಮುಂದಾದವರು).

ಕಾಲೇಜಿನಲ್ಲಿದ್ದಾಗ ಪದಕ ಗೆಲ್ಲುವ ಅಥ್ಲೀಟ್ ಆಗಿದ್ದ ಇವರು ಗಣಿಗಳ ತಪಾಸಣೆಗೆ ಹೋಗಿದ್ದಾಗ ಅಧಿಕಾರಿಗಳ ಎಚ್ಚರಿಕೆಯನ್ನೂ ಧಿಕ್ಕರಿಸಿ ಗುಡ್ಡ ಏರುತ್ತಿದ್ದರು, ಪ್ರಪಾತಕ್ಕೆ ಇಳಿಯುತ್ತಿದ್ದರು. ನಿವೃತ್ತಿಯ ನಂತರ ಭೋಪಾಲದ ಐಐಎಸ್ಇಆರ್ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದ ಇವರು ಶಿಥಿಲ ಯೂನಿಯನ್ ಕಾರ್ಬಾಯಿಡ್ ಫ್ಯಾಕ್ಟರಿಗೆ ನುಗ್ಗಿ, ತುಕ್ಕು ಹಿಡಿದ ಪೈಪ್ ಏರಿ ಒಳಕ್ಕೆ ತಲೆತೂರಿಸಿ, ಅಲ್ಲಿನ ಪಾದರಸದ ಹನಿಗಳು (ಅನಿಲ ಸೋರಿಕೆಯಾದ 28 ವರ್ಷಗಳ ನಂತರವೂ) ತೊಟ್ಟಿಕ್ಕುತ್ತ ಅಂತರ್ಜಲಕ್ಕೆ ವಿಷ ಸೇರ್ಪಡೆ ಆಗುತ್ತಿರುವುದನ್ನು ದಾಖಲಿಸುತ್ತಾರೆ.

ವಿಜ್ಞಾನಿ ಎಂದರೆ ಸಾರ್ವಕಾಲಿಕ ಸತ್ಯವನ್ನು ಸೂತ್ರರೂಪದಲ್ಲಿ ಮುಂದಿಡಬೇಕು ತಾನೆ? ಗಾಡ್ಗೀಳರು ರಾಮಚಂದ್ರ ಗುಹಾ ಅವರ ಜೊತೆ ಸೇರಿ ನಿರೂಪಿಸಿದ ‘ಗಾಡ್ಗೀಳ್–ಗುಹಾ ವಿಲೋಮ ನಿಯಮ’ ತುಂಬ ಮಜದ್ದಾಗಿದೆ. ಗ್ರಾಮ ಪಂಚಾಯಿತಿಗೆ ಚುನಾಯಿತರಾದರೆ ಕೆರೆ, ನದಿ, ಮೃಗಪಕ್ಷಿ, ಕಾಡುಮೇಡುಗಳ ಕುರಿತು ಜಾಸ್ತಿ ಕಾಳಜಿ ಇರುತ್ತದೆ. ಜಿಲ್ಲಾ ಪಂಚಾಯಿತಿ ಸದಸ್ಯರಲ್ಲಿ ಅದು ತುಸು ಕಮ್ಮಿ ಆಗುತ್ತದೆ. ಶಾಸಕರಲ್ಲಿ ಇನ್ನೂ ಕಮ್ಮಿ ಆಗುತ್ತ, ಸಂಸತ್ ಸದಸ್ಯನಾಗುವ ವೇಳೆಗೆ ಪರಿಸರ ಕಾಳಜಿ ಮಾಯ ವಾಗುತ್ತದೆ. ಇದು ಅವರ ವಿಲೋಮ ನಿಯಮ.

ಭಾರತದ ಅಭಿವೃದ್ಧಿ ವೈಖರಿಯನ್ನ ಗಾಡ್ಗೀಳ್ ‘ಕಬ್ಬಿಣದ ತ್ರಿಭುಜ’ದ ಮೂಲಕ ನಿರೂಪಿಸಿದ್ದಾರೆ. ರಾಜಕಾರಣಿ, ಗುತ್ತಿಗೆದಾರ/ಎಂಜಿನಿಯರ್ ಮತ್ತು ಅಧಿಕಾರಿ ವರ್ಗ ಎಂಬ ಮೂರು ತ್ರಿಭುಜಗಳಲ್ಲಿ ದೇಶದ ಇಡೀ ಸಂಪತ್ತು ಬಂದಿಯಾಗಿದೆ, ಅದು ಶೀಘ್ರ ಕರಗುತ್ತ ಮಹಲುಗಳಾಗುತ್ತಿವೆ ಎಂದು ಅನೇಕ ಸಂದರ್ಭಗಳಲ್ಲಿ ಸಾಧಾರ ಹೇಳಿದ್ದಾರೆ. ಬೃಹತ್ ಯೋಜನೆಯ ಪರಿಸರ ಪರಿಣಾಮಗಳ ಮೌಲ್ಯಮಾಪನ ಮಾಡುವಾಗ ಎಷ್ಟೊಂದು ಸುಳ್ಳುಗಳ ಸರಮಾಲೆಗಳು ಕಡತಗಳನ್ನು ಸೇರುತ್ತವೆ ಎಂದು ಸೋದಾಹರಣ ವಿವರಿಸುತ್ತಾರೆ. ಇಸ್ರೊ ಅಧ್ಯಕ್ಷ ಸತೀಶ್ ಧವನ್ ಸಲಹೆಯ ಮೇರೆಗೆ ಇವರು ‘ಥುಂಬಾ’ ಕ್ಷಿಪಣಿ ನೆಲೆಯ ಸ್ಥಾಪನೆಗೆ ಮುನ್ನ ಅದರ ಪರಿಸರ ಪರಿಣಾಮದ ಅಧ್ಯಯನಕ್ಕೆ ಹೋಗಿದ್ದಾಗ ದಟ್ಟಕಾಡಿನ ಮಧ್ಯೆ ಕಡಿದು ಸಾಗಿಸಿದ ಬೃಹತ್ ಬೀಟೆ ಮರದ ಬೊಡ್ಡೆಯಲ್ಲೇ ನಿಂತ ಅರಣ್ಯ ರಕ್ಷಣಾಧಿಕಾರಿ ‘ಇದು ವರ್ಜಿನ್ ಕಾಡು ಸಾರ್, ಯಾರೂ ಇದುವರೆಗೆ ಕಾಲಿಟ್ಟಿಲ್ಲ’ ಎಂದು ಹೇಳಿದ್ದನ್ನು ಚಿತ್ರಿಸಿದ್ದಾರೆ. ಬೇಡ್ತಿ ಯೋಜನೆಯ ಪರಿಶೀಲನೆಗೆ ಬಂದ ರಾಜಸ್ತಾನಿ ಎಂಜಿನಿಯರೊಬ್ಬ ಇಂಬಳ ಕಚ್ಚಿಸಿಕೊಂಡು ‘ಇಂಥ ಕ್ರೂರ ಕಾಡುಗಳನ್ನು ಯಾಕೆ ಉಳಿಸಬೇಕ್ರೀ?’ ಎಂದು ಚೀರಾಡಿದ್ದನ್ನು ದಾಖಲಿಸಿದ್ದಾರೆ.

ಎಂಟು ಭಾಷೆಗಳಲ್ಲಿ ಪ್ರಕಟವಾದ ಗಾಡ್ಗೀಳರ ‘ಏರುಘಟ್ಟದ ನಡಿಗೆ’ ಆತ್ಮಕಥೆಯ ಪ್ರತಿ ಅಧ್ಯಾಯದ ಆರಂಭದಲ್ಲೂ ಅವರೇ ರಚಿಸಿದ ಕವನಗಳಿವೆ. ಯೋಜನೆಗಳ ಮೌಲ್ಯಮಾಪನಗಳ ವೈಖರಿ ಕುರಿತ ಅವರ ಕವನ ಹೀಗಿದೆ (ಕನ್ನಡಕ್ಕೆ ತರ್ಜುಮೆ ನನ್ನದು):

ಈ ಮೌಲ್ಯಮಾಪನ ಅಂತಿಂಥದ್ದಲ್ಲಣ್ಣ / ಎಲ್ಲರನ್ನೂ ಏಮಾರಿಸಬಲ್ಲ ಬಹುಬಣ್ಣ/ ಬಗೆಬಗೆಯ ತಜ್ಞರಿಗಿದು ಎಂದಿದ್ದರೂ ಬೇಕು/ ಸಹಿ ಹಾಕಲೇನಡ್ಡಿ ಕಿಸೆ ತುಂಬಿದರೆ ಸಾಕು.

ಕೇರಳ ಮತ್ತು ಗೋವಾದ ಕಲ್ಲು ಕ್ವಾರಿಗಳಲ್ಲಿ ಓಡಾಡಿದ ಅನುಭವಗಳನ್ನು ದಾಖಲಿಸುವ ಅಧ್ಯಾಯಕ್ಕೆ ಅವರ ಕವನ ಹೀಗಿದೆ:

ಕಂಡಲ್ಲಿ ಕ್ವಾರಿ, ಧನದಾಹದ ಮಾರಿ/ ಬಡಜೀವಿಗಳ ಬದುಕಿಗೆ ಇನ್ನೆಲ್ಲಿದೆ ದಾರಿ?/ ಎಲ್ಲೆಲ್ಲಿ ನೋಡಿದರು ಬೆತ್ತಲೆಯೆ ವನಸ್ತ್ರೀ/ ಅದಿನ್ನೆಷ್ಟು ಸಹಿಸೀತು ಕ್ಷಮಯಾಧರಿತ್ರೀ?

ಕೇರಳದಲ್ಲಿ ಶೇ 90ರಷ್ಟು ಅನಧಿಕೃತ ಗಣಿಗಳೇ ಆಗಿದ್ದು ಅದರಿಂದ ಪರಿಸರಕ್ಕೂ, ಜೀವಜಗತ್ತಿನ ಆರೋಗ್ಯಕ್ಕೂ ಕೊನೆಗೆ ಬೊಕ್ಕಸಕ್ಕೂ ಆಗುವ ನಷ್ಟ
ಗಳನ್ನು ವಿವರಿಸುತ್ತಾರೆ. ಗಣಿಗಾರಿಕೆ ದೂಳು ಹೆಚ್ಚಿದ್ದಲ್ಲೆಲ್ಲ ಅಬ್ಬರದ ದಿಢೀರ್ ಜಡಿಮಳೆ ಆಗುವುದಕ್ಕೆ ವೈಜ್ಞಾನಿಕ ಕಾರಣಗಳನ್ನು ನೀಡುತ್ತಾರೆ. ಅಭಿವೃದ್ಧಿ ಗಾಗಿ ಗಣಿಗಾರಿಕೆ ಅನಿವಾರ್ಯವೇ ಆಗಿದ್ದರೆ ಅಂಥ ಗಣಿಗಳನ್ನು ಮಾಫಿಯಾಗಳಿಂದ ಕಿತ್ತು ಆಯಾ ಊರಿನ ಸಹಕಾರಿ ಸಂಘಗಳಿಗೇ ವಹಿಸಬೇಕೆಂದು ಹೇಳುತ್ತಾರೆ. ಹಾಗೆ ವಹಿಸಿಕೊಂಡು, ಕ್ವಾರಿಗಳ ನಿರ್ವಹಣೆ ಮಾಡುತ್ತಿರುವ ಮಹಿಳಾಸಂಘಗಳನ್ನೂ ಹೆಸರಿಸುತ್ತಾರೆ.

ತಾನು ಕಲ್ಲುಮುಳ್ಳುಗಳ ಕಾಲ್ದಾರಿಯಲ್ಲಿ ಸಾಗುತ್ತ ಹೊಸ ತಲೆಮಾರಿನ ಪರಿಸರ ವಿಜ್ಞಾನಿಗಳಿಗೆಂದು ಸಂಶೋಧನೆಯ ಹೆದ್ದಾರಿಯನ್ನೇ ರೂಪಿಸಿದವರು ಗಾಡ್ಗೀಳ್. ತಳವರ್ಗದ ಜೀವಿಗಳ ಬದುಕು ಸುಸ್ಥಿರವಾಗಲೆಂದು ರೂಪುಗೊಂಡ ಇಂದಿನ ಬಹಳಷ್ಟು ಕಾನೂನುಗಳ ರಚನೆಯಲ್ಲಿ ಅವರ ಪಾತ್ರವೂ ಇತ್ತು. ಆದರೆ, ಅವೆಲ್ಲವೂ ಒಂದೊಂದಾಗಿ ಸಡಿಲಗೊಳ್ಳುತ್ತ, ಉಳ್ಳವರು ನುಗ್ಗುವ ಹೆದ್ದಾರಿಗಳಾಗಿದ್ದನ್ನು ಖೇದದಿಂದ ನೋಡುತ್ತ ಅವರು ನಮ್ಮನ್ನು ಅಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.