ಶುಕ್ರವಾರ, ನವೆಂಬರ್ 27, 2020
22 °C
ಮೇಲ್ಮನವಿ ಸಲ್ಲಿಸುವುದರಿಂದ ಹೂಡಿಕೆದಾರರ ವಿಶ್ವಾಸ ಕುಸಿಯುತ್ತದೆ

ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಲೇಖನ: ವೊಡಾಫೋನ್ ಪ್ರಕರಣ, ಈಸೋಪನ ಕಥೆ

ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ Updated:

ಅಕ್ಷರ ಗಾತ್ರ : | |

ಕ್ಯಾಪ್ಟನ್ ಜಿ.ಆರ್. ಗೋಪಿನಾಥ್

ಯಾವುದಾದರೂ ಒಂದು ಮಾರ್ಗ ಬಳಸಿ ತಾನು ಒಂದು ಪಾಲನ್ನು ವೊಡಾಫೋನ್ ಕಂಪನಿಯಿಂದ ಪಡೆದುಕೊಳ್ಳಬೇಕು ಎಂದು ತೆರಿಗೆ ಇಲಾಖೆ ನಡೆದುಕೊಳ್ಳುತ್ತಿರುವ ರೀತಿಯು ಈಸೋಪನ ನೀತಿ ಕಥೆಯೊಂದನ್ನು ನೆನಪಿಸುವಂತಿದೆ. ಇದು ಕೋಳಿ ಮತ್ತು ಬೆಕ್ಕಿನ ಕಥೆ. ಕೋಳಿಯನ್ನು ತಿನ್ನಲು ಬೆಕ್ಕು ಏನಾದರೂ ಒಂದು ಕಾರಣ ಹುಡುಕುತ್ತಿರುತ್ತದೆ. ಬೆಳ್ಳಂಬೆಳಿಗ್ಗೆ ಕೂಗು ಹಾಕುವ ಮೂಲಕ ಕೋಳಿಯು ಜನರಿಗೆ ತೊಂದರೆ ಕೊಡುತ್ತಿದೆ ಎಂದು ಬೆಕ್ಕು ಆರೋಪಿಸುತ್ತದೆ. ತಾನು ಜನರಿಗೆ ಸಹಾಯ ಮಾಡುತ್ತಿರುವುದಾಗಿ, ಸಮಾಜಕ್ಕೆ ಸೇವೆ
ಸಲ್ಲಿಸುತ್ತಿರುವುದಾಗಿ ಕೋಳಿ ಉತ್ತರಿಸುತ್ತದೆ. ಆದರೆ, ಬೆಕ್ಕು ಹಸಿದಿತ್ತು. ತನ್ನ ತಿಂಡಿಯ ಸಮಯ ಆಯಿತು ಎಂದು ಮಾತುಕತೆಯನ್ನು ಸ್ಥಗಿತಗೊಳಿಸುತ್ತದೆ, ಕೋಳಿಯನ್ನು ತಿನ್ನುತ್ತದೆ.

ಒಂದರ ಹಿಂದೆ ಇನ್ನೊಂದರಂತೆ ಕೇಂದ್ರ ಸರ್ಕಾರದ ವಿರುದ್ಧ ವಿದೇಶದ ನ್ಯಾಯಾಲಯಗಳಲ್ಲಿ ಎರಡು ಆದೇಶಗಳು ಬಂದಿವೆ. ಇವು ಭಾರತದಲ್ಲಿ ಹೂಡಿಕೆ ಮಾಡುವ ಆಸಕ್ತಿ ಹೊಂದಿರುವವರು ಹಿಂದಡಿ ಇರಿಸುವಂತೆ ಮಾಡಬಲ್ಲವು. ಮೊದಲನೆಯದು, ವೊಡಾಫೋನ್‌ ಕಂಪನಿ ಮೇಲೆ ಪೂರ್ವಾನ್ವಯ ಆಗುವಂತೆ ತೆರಿಗೆ ವಿಧಿಸಿದ ಪ್ರಕರಣ. ಕಂಪನಿಯು ಪೂರ್ವಾನ್ವಯ ಆಗುವಂತೆ ತೆರಿಗೆ, ಬಡ್ಡಿ ಮತ್ತು ದಂಡ ಪಾವತಿಸಬೇಕು ಎಂದು ಭಾರತ ಹೇಳುತ್ತಿರುವುದು ಭಾರತ ಹಾಗೂ ನೆದರ್ಲೆಂಡ್ಸ್ ನಡುವೆ ಆಗಿರುವ ಹೂಡಿಕೆ ಒಪ್ಪಂದದ ಉಲ್ಲಂಘನೆ ಎಂದು ದಿ ಹೇಗ್‌ನಲ್ಲಿರುವ ಮಧ್ಯಸ್ಥಿಕೆ ನ್ಯಾಯಾಲಯ ತೀರ್ಪು ನೀಡಿತು. ತೆರಿಗೆ ವಸೂಲಿಗಾಗಿ ಭಾರತ ನಡೆಸುವ ಯತ್ನವು, ಅಂತರರಾಷ್ಟ್ರೀಯ ಕಾನೂನುಗಳ ವಿಚಾರದಲ್ಲಿ ಜಾರಿಯಲ್ಲಿರುವ ಕಟ್ಟುಪಾಡುಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಅಂತರರಾಷ್ಟ್ರೀಯ ನ್ಯಾಯಾಲಯ ಹೇಳಿತು. ವೊಡಾಫೋನ್‌ ಕಂಪನಿಯು ತೆರಿಗೆ ಪಾವತಿಸಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಹೀಗಿದ್ದರೂ, ಕೇಂದ್ರವು ಸುಪ್ರೀಂ ಕೋರ್ಟ್ ತೀರ್ಮಾನಕ್ಕೆ ಅಗೌರವ ತೋರಿಸಿತು. ಈ ನಡೆಯೇ ಭಾರತದ ವಾದಕ್ಕೆ ಸಮರ್ಥನೆ ಇಲ್ಲದಂತಾಗಿಸಿದೆ.

ಇನ್ನೊಂದು ಪ್ರಕರಣದಲ್ಲಿ ಬಂದಿರುವ ಆದೇಶ ಕೂಡ ಭಾರತದ ಮುಖಕ್ಕೆ ಬಾರಿಸಿದಂತಿದೆ. ದೇವಾಸ್ ಮಲ್ಟಿಮೀಡಿಯಾ ಎನ್ನುವುದು ಬೆಂಗಳೂರು ಮೂಲದ ನವೋದ್ಯಮ ಕಂಪನಿ. ಇದರಲ್ಲಿ ವಿದೇಶಿ ಹೂಡಿಕೆಗಳೂ ಇದ್ದವು. ಖ್ಯಾತ ವ್ಯಕ್ತಿಗಳು ಇದರ ಆಡಳಿತ ಮಂಡಳಿಯಲ್ಲಿದ್ದರು. ಡಾ. ಚಂದ್ರಶೇಖರ್ ಅವರು ಕಂಪನಿಯ ನೇತೃತ್ವ ವಹಿಸಿದ್ದರು. ಈ ಕಂಪನಿಗೆ ಇಸ್ರೊದ ವಾಣಿಜ್ಯ ಅಂಗವಾದ ಆ್ಯಂಟ್ರಿಕ್ಸ್ ಕಾರ್ಪೊರೇಷನ್‌ನವರು 1.2 ಬಿಲಿಯನ್ ಡಾಲರ್ ಪಾವತಿಸಬೇಕು ಎಂದು ಅಮೆರಿಕದ ನ್ಯಾಯಾಲಯವೊಂದು ಆದೇಶಿಸಿದೆ.

ದೇವಾಸ್ ಜೊತೆಗಿನ ಒಪ್ಪಂದ ಮುರಿದಿದ್ದು ತಪ್ಪು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ನ್ಯಾಯಮಂಡಳಿ ಕೂಡ 2015ರ ಸೆಪ್ಟೆಂಬರ್‌ನಲ್ಲಿ ನೀಡಿದ ಆದೇಶದಲ್ಲಿ, ದೇವಾಸ್‌ಗೆ ಪರಿಹಾರ ನೀಡಬೇಕು ಎಂದು ಹೇಳಿತ್ತು. ಈ ಪ್ರಕರಣದಲ್ಲಿ ಕೂಡ ಕೇಂದ್ರ ಸರ್ಕಾರವು ದೇಶದ ಅತ್ಯುನ್ನತ ನ್ಯಾಯಾಲಯದ ಆದೇಶಕ್ಕೆ ಬೆಲೆ ಕೊಡಲಿಲ್ಲ.

ವೊಡಾಫೋನ್ ಪ್ರಕರಣದಲ್ಲಿ ತೀರ್ಪು ನೀಡುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಅಂದಿನ ಯುಪಿಎ ಸರ್ಕಾರವನ್ನು ಟೀಕಿಸಿತ್ತು ಕೂಡ. ವಿದೇಶಿ ಹೂಡಿಕೆದಾರರು ಭಾರತದಲ್ಲಿ ಹಣ ಹೂಡುವಂತೆ ಮಾಡಿ, ನಂತರ ಕೊಟ್ಟ ಮಾತುಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವುದು ಒಳ್ಳೆಯ ಕ್ರಮವಲ್ಲ ಎಂದು ಹೇಳಿತ್ತು. ಸುಪ್ರೀಂ ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳುವ ಬದಲು ಅಂದಿನ ಹಣಕಾಸು ಸಚಿವ ಪ್ರಣವ್‌ ಮುಖರ್ಜಿ ಅವರು, ಆದೇಶವನ್ನೇ ಮೀರಲು ಅನುಕೂಲ ಆಗುವಂತೆ ಕಾನೂನು ತಿದ್ದುಪಡಿ ತಂದರು. ಅವಸರದಲ್ಲಿ ತಂದ ಕಾನೂನು ತಿದ್ದುಪಡಿ ಮೂಲಕ, ಪೂರ್ವಾನ್ವಯ ಆಗುವಂತೆ ತೆರಿಗೆ ಸಂಗ್ರಹಿಸಲು ಅವಕಾಶ ನೀಡಿದರು. ಯುಪಿಎ ಸರ್ಕಾರದ ಸಾಧನೆಗಳನ್ನು ಮುಖರ್ಜಿ ಅವರು ಒಂದೇ ಒಂದು ನಡೆಯ ಮೂಲಕ ಅಳಿಸಿಹಾಕಿದರು. ಕೇಂದ್ರದ ಈ ನಡೆಯನ್ನು ಅಂತರರಾಷ್ಟ್ರೀಯ ಸಮುದಾಯ ಖಂಡಿಸಿತು. ಭಾರತದಲ್ಲಿನ ಎಲ್ಲ ಹೂಡಿಕೆಗಳನ್ನು ತಡೆ ಹಿಡಿಯಲಾಗುವುದು ಎಂದು ಸಿಂಗಪುರ ಪ್ರಧಾನಿ ಬಹಿರಂಗವಾಗಿಯೇ ಹೇಳಿದರು. ಬೆಳವಣಿಗೆ ದಾಖಲಿಸುತ್ತಿದ್ದ ದೇಶದ ಅರ್ಥ ವ್ಯವಸ್ಥೆ ಕುಸಿಯಿತು. ಪ್ರಣವ್‌ ದಾ ಅವರನ್ನು ಹೊಣೆಗಾರಿಕೆಯಿಂದ ಮುಕ್ತಗೊಳಿಸಲಾಯಿತು. ಅವರಿಗೆ ರಾಷ್ಟ್ರಪತಿಯಾಗಿ ಬಡ್ತಿ ನೀಡಿ, ಸುರಕ್ಷಿತ ಸ್ಥಳವಾದ ರೈಸಿನಾ ಹಿಲ್‌ನಲ್ಲಿ ಕೂರಿಸಲಾಯಿತು.

ಭಾರತದ ಆರ್ಥಿಕ ಸುಧಾರಣೆಗಳ ಶಿಲ್ಪಿ ಎಂಬ ಹೆಗ್ಗಳಿಕೆ ಹೊತ್ತಿರುವ ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ, ಅವರ ಕಣ್ಣೆದುರೇ ಇವೆಲ್ಲ ನಡೆದವು ಎಂಬುದನ್ನು ಅರಗಿಸಿಕೊಳ್ಳುವುದು ತುಸು ಕಷ್ಟವಾಗುತ್ತದೆ. ನಂತರ ಹಣಕಾಸು ಸಚಿವರಾಗಿ ಅಧಿಕಾರ ವಹಿಸಿಕೊಂಡ ಪಿ. ಚಿದಂಬರಂ ಅವರು ಇನ್ನುಳಿದ ಎರಡು ವರ್ಷಗಳನ್ನು, ಅದಾಗಲೇ ಆಗಿದ್ದ ತಪ್ಪುಗಳನ್ನು ಸರಿಪಡಿಸುತ್ತ ಕಳೆದರು. ಆದರೆ, ಅಸ್ಥಿರವಾದ ಹಾಗೂ ಊಹಿಸಲು ಸಾಧ್ಯವಾಗದಂತಹ ನೀತಿಗಳನ್ನು ಹೊಂದಿರುವ ದೇಶ ಎಂದು ತನ್ನ ಬಗ್ಗೆ ಮೂಡಿರುವ ಚಿತ್ರಣವನ್ನು ಅಳಿಸಲು ಭಾರತಕ್ಕೆ ಇಂದಿಗೂ ಸಾಧ್ಯವಾಗಿಲ್ಲ. ಸರ್ಕಾರವು ಜವಾಬ್ದಾರಿ ಇಲ್ಲದೆ ನಡೆದುಕೊಂಡ ಅತ್ಯುತ್ತಮ ನಿದರ್ಶನ ದೇವಾಸ್ ಮೀಡಿಯಾ ಪ್ರಕರಣ.

ಈಗ ಬಂದಿರುವ ಎರಡು ಪ್ರತಿಕೂಲ ಆದೇಶಗಳಿಗೆ ಹೊಣೆ ಯುಪಿಎ ಸರ್ಕಾರವೇ ವಿನಾ, ಇಂದಿನ ಎನ್‌ಡಿಎ ಸರ್ಕಾರ ಅಲ್ಲ. ಆದರೆ, ಇಂದಿನ ಸರ್ಕಾರವು ಯುಪಿಎ ಸರ್ಕಾರವು ಆಲೋಚನೆಯೇ ಮಾಡದೆ ಕೈಗೊಂಡ ಕ್ರಮಗಳ ಪರಿಣಾಮವನ್ನು ಹೊತ್ತುಕೊಂಡಿದೆ. ಪೂರ್ವಾನ್ವಯ ತೆರಿಗೆ ವಿಚಾರದಲ್ಲಿ ಯುಪಿಎ ಸರ್ಕಾರದ ನಡೆಯನ್ನು ಇಂದು ಆಡಳಿತದಲ್ಲಿ ಇರುವವರು ಅಂದು ಬಹಳ ಜೋರಾಗಿ ಟೀಕಿಸಿದ್ದರು. ಆದರೆ, ಇಂದು ಈ ಸರ್ಕಾರಕ್ಕೆ ವೊಡಾಫೋನ್‌ ಪ್ರಕರಣದಲ್ಲಿ ಹಾಗೂ ದೇವಾಸ್–ಆ್ಯಂಟ್ರಿಕ್ಸ್ ಪ್ರಕರಣದಲ್ಲಿ ಮೆಲ್ಮನವಿ ಸಲ್ಲಿಸುವಂತೆ ತಪ್ಪಾಗಿ ಸಲಹೆ ನೀಡಲಾಗುತ್ತಿದೆ.

ಭಾರತಕ್ಕೆ ಬಂದು ಹೂಡಿಕೆ ಮಾಡುವಂತೆ ವಿದೇಶಿ ನೇರ ಹೂಡಿಕೆದಾರರಿಗೆ ಎಲ್ಲ ಅಂತರರಾಷ್ಟ್ರೀಯ ವೇದಿಕೆಗಳಿಂದಲೂ ಆಹ್ವಾನ ನೀಡುವ ನಮ್ಮ ಎಫ್‌ಡಿಐ ನೀತಿಗೆ ಇದು ವಿರುದ್ಧವಾಗಿದೆ. ಹೂಡಿಕೆ ಮಾಡುವಂತೆ ಆಮಿಷ ತೋರಿಸುವುದು, ಅವರು ಒಳ್ಳೆಯ ಉದ್ದೇಶದಿಂದ ಹಣ ಹೂಡಿಕೆ ಮಾಡಿದ ನಂತರ ತೆರಿಗೆ ಅಧಿಕಾರಿಗಳು ಬಲೆ ಬೀಸುವುದು ನಂಬಿಕೆಗೆ ದ್ರೋಹವೆಸಗುವುದಕ್ಕೆ ಸಮ. ಅಷ್ಟೇ ಅಲ್ಲ, ಮುಂದೆ ಭಾರತದಲ್ಲಿ ಹೂಡಿಕೆ ಮಾಡುವ ಬಯಕೆ ಇರುವವರಲ್ಲಿ ಭೀತಿ ಮೂಡಿಸುವಂಥದ್ದು ಕೂಡ. ಸಾರ್ವಭೌಮ ದೇಶವೊಂದು ತನಗೆ ಸೂಕ್ತವೆನಿಸಿದ ಕಾನೂನುಗಳನ್ನು ಇನ್ನೊಬ್ಬರ ಪ್ರಭಾವಕ್ಕೆ ಒಳಗಾಗದೆಯೇ ರೂಪಿಸುವ ಹಕ್ಕನ್ನು ಹೊಂದಿರುತ್ತದೆ ಎಂಬ ವಾದವು ಮೇಲ್ನೋಟಕ್ಕೆ ಸರಿ ಅನ್ನಿಸಬಹುದು. ಆದರೆ, ಇಂತಹ ಕ್ರಮಗಳಿಂದ ಅದೇ ಸಾರ್ವಭೌಮ ದೇಶವು ಹಿಂದೆ ನೀಡಿದ್ದ ವಚನಕ್ಕೆ, ಕೊಟ್ಟ ಮಾತಿಗೆ ತಪ್ಪಿ ನಡೆದಂತೆ ಆಗುತ್ತದೆ.

ಕೇವಲ ಐದಾರು ವರ್ಷಗಳ ಹಿಂದೆ ಹೂಡಿಕೆದಾರರ ಪಾಲಿಗೆ ಪ್ರೀತಿಪಾತ್ರ ಆಗಿದ್ದ ಭಾರತದ ಅರ್ಥವ್ಯವಸ್ಥೆಯು ಈಗ ತೀರಾ ಕೆಳಮಟ್ಟಕ್ಕೆ ಬಂದು ನಿಂತಿದೆ. ಸರ್ಕಾರಕ್ಕೆ ಬೋಧನೆ ಮಾಡುವ ಅಥವಾ ಸರ್ಕಾರದ ಆರ್ಥಿಕ ನೀತಿಗಳನ್ನು ಟೀಕಿಸುವ ಯತ್ನ ಇದಲ್ಲ. ಆದರೆ, ನಮ್ಮ ಕಾಲ ಮೇಲೆ ನಾವೇ ಕಲ್ಲು ಹಾಕಿಕೊಳ್ಳುವುದನ್ನು ತಡೆಯಬಹುದು ಎಂದು ಹೇಳುವ ಯತ್ನ ಇದು. ವೊಡಾಫೋನ್‌ ಪ್ರಕರಣ ಹಾಗೂ ದೇವಾಸ್ ಪ್ರಕರಣದಲ್ಲಿ ಬಂದಿರುವ ಆದೇಶಕ್ಕೆ ಮೇಲ್ಮನವಿ ಸಲ್ಲಿಸುವುದರಿಂದ ಹೂಡಿಕೆದಾರರ ವಿಶ್ವಾಸ ಕುಸಿಯುತ್ತದೆ. ವಾಣಿಜ್ಯ ವಹಿವಾಟು ನಡೆಸುವುದನ್ನು ಸುಲಭಗೊಳಿಸುವ ಉದ್ದೇಶಕ್ಕೆ ಇದು ವಿರುದ್ಧವಾದ ನಡೆಯಾಗುತ್ತದೆ.

ಹಸಿದ ಹೊಟ್ಟೆ ಉಪದೇಶ ಕೇಳಿಸಿಕೊಳ್ಳಲು ಸಿದ್ಧವಿರುವುದಿಲ್ಲ ಎಂಬ ಗಾದೆಯೊಂದಿದೆ. ಹಣಕಾಸು ಸಚಿವಾಲಯಕ್ಕೆ ವರಮಾನದಲ್ಲಿ ಭಾರಿ ಕೊರತೆ ಎದುರಾಗಿರಬಹುದು. ಆದರೆ ಅದು ನೀತಿ ಕಥೆಯಲ್ಲಿ ಬರುವ ಬೆಕ್ಕಿನ ರೀತಿಯಲ್ಲಿ ವರ್ತಿಸಬಾರದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು