ಬುಧವಾರ, ಸೆಪ್ಟೆಂಬರ್ 29, 2021
20 °C
ಕಾಲದ ಬಂಡಿಯಲ್ಲಿ ಅಡಕವಾಗಿರುವ ಸರ್ಕಾರಿ ಶಾಲೆಯ ಚಕ್ರ ಬೇರೆ ಬೇರೆಯದೇ ಕತೆ ಹೇಳುತ್ತದೆ

ಅಂಕಣ| ಸರ್ಕಾರಿ ಶಾಲೆ ಇಷ್ಟ, ಆದರೆ...

ಜಿ.ಎಸ್.ಜಯದೇವ/ ಕೃಷ್ಣಮೂರ್ತಿ ಹನೂರು Updated:

ಅಕ್ಷರ ಗಾತ್ರ : | |

ಈಗ ನಾವು ಇಲ್ಲಿ ಹೇಳಲು ಹೊರಟಿರುವ ಒಂದು ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಸಂಬಂಧಿಸಿದ ಸಂಗತಿಯು ಬಹುಮಟ್ಟಿಗೆ ಕರ್ನಾಟಕದ ಇತರ ಭಾಗಗಳಿಗೂ ಅನ್ವಯಿ ಸಬಹುದೇನೊ?


ಜಿ.ಎಸ್.ಜಯದೇವ

ಪಟ್ಟಣದವರಲ್ಲದೆ ಗ್ರಾಮೀಣ ಪೋಷಕರೂ ಸರ್ಕಾರಿ ಶಾಲೆ ಬೇಡವೆಂದು ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸಲು ಬಯಸುತ್ತಿರುವುದು ಯಾಕೆ, ಪೋಷಕರ ನಿಜವಾದ ಚಿಂತೆಯೇನು, ಅವರ ತಿಳಿ
ವಳಿಕೆಯಲ್ಲಿ ಒಳ್ಳೆಯ ಶಿಕ್ಷಣವೆಂದರೇನು, ಪೋಷಕರ ದೃಷ್ಟಿಯಲ್ಲಿ ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳು ಹೇಗೆ ಉತ್ತಮ ಎಂಬುದನ್ನು ಅರಿಯುವುದು ಚಾಮರಾಜನಗರದ ದೀನಬಂಧು ಸಂಸ್ಥೆಯ ಶಿಕ್ಷಕರ ಉದ್ದೇಶ ವಾಗಿದ್ದಿತು. ಇದರೊಂದಿಗೆ, ಎರಡು ವರ್ಷಗಳಿಂದ ಸರ್ಕಾರಿ ಶಾಲೆಗಳಲ್ಲೇ ಇಂಗ್ಲಿಷ್‌ ಮಾಧ್ಯಮ ಎಂಬಂತೆ ವರ್ಷಕ್ಕೆ ಒಂದೊಂದು ಸಾವಿರ ಶಾಲೆಗಳಲ್ಲಿ ತರಗತಿ ಆರಂಭಿಸುವಂತೆ ಆಜ್ಞೆ ಹೊರಡಿಸಲಾಗಿದೆ. ಈ ಸಾಲಿ ನಲ್ಲೂ 960 ಇಂಗ್ಲಿಷ್‌ ಮಾಧ್ಯಮ ತರಗತಿಗಳನ್ನು ತೆರೆ ಯಲು ಅನುಮತಿ ನೀಡಲಾಗಿದೆ. ಅದರ ಆರಂಭ ಮತ್ತು ಅದು ಹೇಗೆ ನಡೆಯುತ್ತಿದೆಯೆಂದರೆ, ಅದು ಸಹ ಶಾಲೆಯ ಇತರ ಹಲವು ಹತ್ತು ಸಮಸ್ಯೆಗಳೊಂದಿಗೆ ಸೇರಿಕೊಳ್ಳುತ್ತದೆ.

ಈಗಾಗಲೇ ಎಲ್ಲ ವಿದ್ಯಾವಂತರೂ ತಿಳಿದಿರುವಂತೆ, ಗ್ರಾಮೀಣರು ಸಹ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗೆ ಕಳಿಸುವುದಾದರೆ ಬಹಳ ಬೇಗ ಅವರು ಮೇಲೆ ಬರುತ್ತಾರೆ ಎಂಬ ನಂಬಿಕೆಯಲ್ಲಿ
ದ್ದಾರೆ. ಮುಖ್ಯವಾಗಿ ಅವರು ಹೇಳುವುದೆಂದರೆ, ಖಾಸಗಿ ಶಾಲೆಗಳಲ್ಲಿ ವಾಹನ ಸೌಲಭ್ಯವಿದೆ, ನಾವು ಕೂಲಿಗೆ ಹೋಗಿ ತಡವಾಗಿ ಬಂದರೂ ಮಕ್ಕಳು ಕ್ಷೇಮದಿಂದ ಮನೆ ತಲುಪುತ್ತಾರೆ. ಜತೆಗೆ ಮಕ್ಕಳು ಶಿಸ್ತಿನಿಂದ ಯೂನಿಫಾರ್ಮ್‌ನಲ್ಲಿ ಬರಬೇಕೆಂಬುದರಿಂದ ಹಿಡಿದು ಕಲಿಸುವ ಕ್ರಮದಲ್ಲೂ ಶಾಲೆಯವರು ಆಸಕ್ತಿ ವಹಿಸುತ್ತಾರೆ. ನಿತ್ಯ ಆದ ಪಾಠ, ಆಗುವ ಪಾಠದ ಬಗ್ಗೆ ಡೈರಿ ಬರೆಸುತ್ತಾರೆ. ಎಸ್‌ಎಂಎಸ್‌ ಮೂಲಕ ಮಕ್ಕಳ ಪ್ರಗತಿ ತಿಳಿಸುವುದಿದೆ.


ಹನೂರು ಕೃಷ್ಣಮೂರ್ತಿ 

ಆಮೇಲೆ ತರಗತಿವಾರು, ವಿಷಯವಾರು ಶಿಕ್ಷಕರು ಇರುತ್ತಾರೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಇಬ್ಬರು– ಮೂವರು ಅಥವಾ ನಾಲ್ವರು ಶಿಕ್ಷಕರು ಇರುತ್ತಾರೆ. ಕೆಲವು ಕಡೆ ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳಿರುವಲ್ಲಿ ಎಂಟು ಜನ ಶಿಕ್ಷಕರಿದ್ದು, ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿರುವ ಶಾಲೆಗಳಲ್ಲೂ ಎಂಟು ಜನ ಶಿಕ್ಷಕರಿರುತ್ತಾರೆ. ಇಷ್ಟಾಗಿ ಬಹುತೇಕ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ಕಡಿಮೆಯೇ ಇದೆ. ಈ ನಡುವೆ ಇಂಗ್ಲಿಷ್‌ ಮಾಧ್ಯಮ ತರಗತಿಗಳನ್ನು ಆರಂಭ ಮಾಡಿರುವುದರಿಂದ ಒಬ್ಬಿಬ್ಬರು ಶಿಕ್ಷಕರಿಗೆ ಇಂಗ್ಲಿಷ್‌ ಕಲಿಕೆಯ ತರಬೇತಿ ಕೊಟ್ಟು, ‘ನೀವು ಇಂಗ್ಲಿಷ್‌ ಮಾಧ್ಯಮ ತರಗತಿ ಬಗ್ಗೆ ನಿಗಾ ವಹಿಸಿ’ ಎಂದರೆ, ಉಳಿಯುವ ಒಬ್ಬಿಬ್ಬರು ಶಿಕ್ಷಕರು ಕನ್ನಡ ಮಾಧ್ಯಮ ತರಗತಿಗಳನ್ನು ನಿರ್ವಹಿಸಲಾಗುವುದಿಲ್ಲ.

ಖಾಸಗಿ ಶಾಲೆಗಳಲ್ಲಿ ಶಿಕ್ಷಕರಿಗೆ ಪಾಠ ಮಾಡುವುದು ಬಿಟ್ಟು ಬೇರೆ ಯಾವ ಜವಾಬ್ದಾರಿಯೂ ಇರುವುದಿಲ್ಲ. ಎಲ್ಲಕ್ಕಿಂತ ಮುಖ್ಯ ಈ ಶಿಕ್ಷಕರು ಆಗಾಗ್ಗೆ ಪೋಷಕರ ಸಭೆ ಕರೆದು ಮಕ್ಕಳ ಕಲಿಕಾ ಪ್ರಗತಿಯ ವರದಿ ಕೊಡುವುದುಂಟು. ಸರ್ಕಾರಿ ಶಾಲೆಗಳಲ್ಲಿ ಈ ಕ್ರಮ ಇಲ್ಲ. ಖಾಸಗಿ ಶಾಲಾ ಶಿಕ್ಷಕರು ಸಮಯಕ್ಕೆ ಸರಿಯಾಗಿ
ತರಗತಿಯಲ್ಲಿದ್ದು ಪಾಠ ಮಾಡುವರು. ಸರ್ಕಾರಿ ಶಾಲೆಯ ಎಷ್ಟೋ ಶಿಕ್ಷಕರು ಸರಿಯಾದ ಸಮಯಕ್ಕೆ ಬರುವುದಿಲ್ಲ. ಅದರಲ್ಲೂ ಬಸ್ಸಿನ ಅನುಕೂಲವಿಲ್ಲದ ಒಳಪ್ರದೇಶ
ಗಳಲ್ಲಿ ಅವರ ನಿತ್ಯಹಾಜರಿ ಇರುವುದಿಲ್ಲ. ಎಲ್ಲಕ್ಕಿಂತ ಮುಖ್ಯ ಖಾಸಗಿ ಶಾಲೆಗಳಲ್ಲಿ ಶಿಕ್ಷಕರು ಯಾವುದೇ ದುಶ್ಚಟ ಗಳನ್ನು ಪ್ರದರ್ಶಿಸುವುದಿಲ್ಲ, ಅಶ್ಲೀಲ ಭಾಷೆ ಬಳಸುವು ದಿಲ್ಲ. ಅಲ್ಲಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರಲ್ಲಿ ಇರಬಹುದಾದ ಚಟಗಳನ್ನು ಕುರಿತು ಮಕ್ಕಳ ತಾಯಂದಿರೇ ದೂರು ಹೇಳಿದ್ದು ಇದೆ.

ಹೀಗೆ ಹೇಳುವ ಪೋಷಕರೇ ತಮ್ಮ ದುಡಿಮೆಯ ಸಂಪಾದನೆಯಲ್ಲಿ ಖಾಸಗಿ ಶಾಲೆಯ ಫೀಸು ಕಟ್ಟಲಾಗ ದೆಂದು, ಸರ್ಕಾರಿ ಶಾಲೆ ಸರಿ ಹೋಗುವುದಾದರೆ ಮಕ್ಕಳನ್ನು ಅಲ್ಲಿಗೇ ಕಳಿಸುವ ಇಷ್ಟವಿದೆಯೆಂದು ಹೇಳು ತ್ತಾರೆ. ಖಾಸಗಿ ಶಾಲೆಗಳಲ್ಲಿ ಎಲ್ಲ ಮಕ್ಕಳನ್ನೂ ಸಮನಾಗಿ ನೋಡುವ ಕ್ರಮ ಇರುವುದು ನಿಜವಾದರೂ ಒಮ್ಮೊಮ್ಮೆ ಅದೆಲ್ಲ ನಾಟಕದಂತೆ ತೋರುವುದೆಂಬ ಅಂತರಂಗದ ಅಭಿಪ್ರಾಯವನ್ನು ಕೆಳ ಮಧ್ಯಮ ಕುಟುಂಬಗಳ ಗ್ರಾಮೀಣರು ಹೇಳುವುದುಂಟು. ಒಂದು ವೇಳೆ ಸರ್ಕಾರಿ ಶಾಲೆಗಳ ಸ್ಥಿತಿಗತಿ ಸರಿಹೋಗುವುದಾದರೆ ತಮ್ಮ ಮಕ್ಕಳನ್ನು ಸೇರಿಸುವುದಲ್ಲದೆ ಅಂಥ ಶಾಲೆ ಕುರಿತು ತಾವೇ ಪ್ರಚಾರ ಮಾಡುವುದಾಗಿ ಹೇಳುತ್ತಾರೆ.

ಸರ್ಕಾರಿ ಶಾಲೆಯ ಮೇಷ್ಟರುಗಳು ಪದವಿ ಪಡೆದ ವರೂ ಬುದ್ಧಿವಂತರೂ ಇರುತ್ತಾರೆ. ಯಾಕೆಂದರೆ ಅವರು ಬೇರೆ ಬೇರೆ ವರ್ಗ, ಸಮೂಹಗಳಿಂದ ಬಂದವರು. ಖಾಸಗಿ ಶಾಲೆಗಳಲ್ಲಿ ಒಂದೊಂದೇ ಕೋಮಿನ ಶಿಕ್ಷಕರು ಶಿಫಾರಸಿನ ಮೇಲೆ ಸೇರಿಕೊಂಡಿರುತ್ತಾರೆಂಬ ಅಭಿಪ್ರಾಯವಿದೆ. ಇದರೊಂದಿಗೆ ಖಾಸಗಿ ಶಾಲೆಗಳ ಶುಲ್ಕ ಭರಿಸಲಾಗದ ಜತೆಗೆ ಇತರ ಕಾರಣಕ್ಕೂ ಹಣ ವಸೂಲಿ ಮಾಡುವುದಿದೆ. ಇತ್ತ ಕಡೆ ಸರ್ಕಾರಿ ಶಾಲೆಗಳು ಗ್ರಾಮಗಳಲ್ಲಿ ದೊಡ್ಡ ಮೈದಾನದ ನಡುವೆ ಇದ್ದರೂ ಕಟ್ಟಡಗಳು ಸುವ್ಯವಸ್ಥೆಯಿಂದ ಕೂಡಿರುವುದಿಲ್ಲ, ಶೌಚಾಲಯ ವ್ಯವಸ್ಥೆ ಇರುವುದಿಲ್ಲ. ಇತ್ತೀಚೆಗೆ ಸರ್ಕಾರಿ ಶಾಲೆಗಳ ನಿರ್ವಹಣಾ ಸಮಿತಿಗೆ ಸರ್ಕಾರದಿಂದ ಬರುವ ಅನುದಾನದಡಿ ಶೌಚಾಲಯ ಮತ್ತಿತರ ಅನುಕೂಲಗಳು ಆಗುತ್ತಿವೆ ನಿಜ. ಆದರೆ ಈ ನಿರ್ವಹಣಾ ಸಮಿತಿಯು ಹಮ್ಮಿಕೊಳ್ಳುವ ಅಭಿವೃದ್ಧಿ ಕೆಲಸಗಳು ಸರ್ಕಾರಿ ಚಕ್ರದ ನಿಧಾನಗತಿಯಿಂದ ಹಾಗೂ ಅಲ್ಲಲ್ಲೇ ಹುಟ್ಟಿಕೊಳ್ಳುವ ಇನ್ನಿತರ ಕ್ಷುಲ್ಲಕ ಮನಃಸ್ಥಿತಿಯ ಕಾರಣಗಳಿಂದ ಬೇಗ ನೆರವೇರುವುದಿಲ್ಲ. ಶೌಚಾಲಯ ಕಟ್ಟುವುದೇನೋ ಸರಿ, ಇಡೀ ಶಾಲೆಯ ಸ್ವಚ್ಛತಾ ಕೆಲಸಕ್ಕೆ ಒಬ್ಬರ ನೇಮಕಾತಿಯ ಅವಕಾಶವೇ ಪ್ರಾಥಮಿಕ ಶಾಲೆಗೆ ಇರುವುದಿಲ್ಲ.

ಇಂಥ ಶಾಲೆಗಳಲ್ಲಿ ಈಗ ಎರಡು ವರ್ಷಗಳಿಂದ ಇಂಗ್ಲಿಷ್‌ ಮಾಧ್ಯಮ ತರಗತಿಗಳು ಆರಂಭಗೊಂಡಿವೆ. ಮೊದಲನೆಯದಾಗಿ, ಅಲ್ಲಿ ಶಿಕ್ಷಕರ ಕೊರತೆ ಇರುವುದ ರಿಂದ ಈ ತರಗತಿಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಅಷ್ಟೇನೂ ಹೆಚ್ಚಿಲ್ಲ. ಅಥವಾ ಹೆಚ್ಚು ಜನ ಇಂಗ್ಲಿಷ್‌ ಮಾಧ್ಯಮಕ್ಕೆ ಅವಕಾಶ ಕೊಡಿ ಅಂದರೆ ಅದೂ ಸಾಧ್ಯವಿಲ್ಲ. 30 ಅರ್ಜಿಗಳ ನಂತರ ಅರ್ಜಿ ಸಲ್ಲಿಸಿದ ವಿದ್ಯಾರ್ಥಿ ಕನ್ನಡ ಮಾಧ್ಯಮಕ್ಕೆ ಸೇರಿಕೊಳ್ಳಬೇಕು. ಇನ್ನು ಇಂಗ್ಲಿಷ್‌ ಮಾಧ್ಯಮದಲ್ಲಿ ಪಾಠ ಮಾಡುವ ಶಿಕ್ಷಕರಿಗೆ ಅಲ್ಲಿ ಬೋಧಿಸುವ ಇಷ್ಟವಿದೆಯೇ ಅಂದರೆ ಅವರು ‘ಹತ್ತಿಪ್ಪತ್ತು ವರ್ಷಗಳಿಂದ ಕನ್ನಡದಲ್ಲಿಯೇ ಬೋಧಿಸಿ ಅಭ್ಯಾಸ’ ಅನ್ನುತ್ತಾರೆ. ಇಂಗ್ಲಿಷ್‌ ಪಾಠದ ಅನುಭವ ಅಂದರೆ, ‘ಡಿಎಡ್ ತರಬೇತಿ ಕೇಂದ್ರಗಳಲ್ಲಿ ಆಗಾಗ ಕೆಲವು ದಿನಗಳ ಮಟ್ಟಿಗೆ ಪಡೆದ ತರಬೇತಿಯಷ್ಟೇ’ ಅನ್ನುತ್ತಾರೆ. ಇದು ಕರ್ನಾಟಕದ ಎಲ್ಲ ಗ್ರಾಮಭಾಗಗಳ ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಸಮಸ್ಯೆ. ಯಾವುದೇ ಪೂರ್ವತಯಾರಿ ಇಲ್ಲದೆ ಬರಿದೇ ಸರ್ಕಾರಿ ಆಜ್ಞೆಯ ಮೇಲೆ ಇವು ಆರಂಭವಾಗಿವೆ.

ಒಂದು ವೇಳೆ ಇಂಥ ಶಾಲೆಗಳಲ್ಲಿ ನಾಲ್ಕೈದು ತರಗತಿವರೆಗೆ ಅರೆಬರೆ ಇಂಗ್ಲಿಷ್‌ ಕಲಿತು ಒಬ್ಬ ಬಡ ಹುಡುಗ ಡ್ರಾಪ್ಔಟ್ ಆದರೆ ಅವನಿಗೆ ಎಷ್ಟು ಕನ್ನಡ, ಎಷ್ಟು ಇಂಗ್ಲಿಷ್‌ ಬರಬಹುದು ಎಂಬ ಪ್ರಶ್ನೆಗೆ ಅಧ್ಯಾಪಕರಲ್ಲಿ ಉತ್ತರವಿಲ್ಲ.

ಇಷ್ಟರ ಮೇಲೆ ಸರ್ಕಾರಿ ಶಾಲೆಗಳು ಚೆನ್ನಾಗಿ ನಡೆಯು ತ್ತಲೇ ಇಲ್ಲ ಎನ್ನುವಂತಿಲ್ಲ. ಖಾಸಗಿ ಶಾಲೆಯವರು ಪಡೆ ಯುವುದರ ಎರಡು– ಮೂರು ಪಟ್ಟು ಹೆಚ್ಚು ವೇತನ ಪಡೆಯುತ್ತಿರುವೆವೆಂಬ ಭಾವನೆಯುಳ್ಳ ಅಧ್ಯಾಪಕರು ತುಂಬ ಶ್ರಮ ವಹಿಸಿ ಶಾಲೆಯನ್ನು ನೋಡಿಕೊಳ್ಳುತ್ತಿರುವ ದಾಖಲೆಗಳೂ ಇವೆ. ಕೊರೊನಾ ಸಂದರ್ಭದಲ್ಲೂ ಒಂದೊಂದು ಬೀದಿಯ ಮಕ್ಕಳನ್ನು ಒಂದೊಂದು ಮನೆಯಲ್ಲಿ ಕೂರಿಸಿ ಪಾಠ ಹೇಳಿದ ಆದರ್ಶ ಶಿಕ್ಷಕರಿದ್ದಾರೆ. ಶಾಲೆಯ ಸುತ್ತ ಪಾರ್ಥೇನಿಯಂ ಬೆಳೆದರೆ ಏನು ಬಂದೀತು, ಹೂವಿನ ತೋಟ, ಗಿಡ, ಮರ ಬೆಳೆದರೆ ಹಕ್ಕಿ ಪಕ್ಷಿಗಳು ಬಂದೇ ಬರುತ್ತವೆ ಎನ್ನುವ ನಿಷ್ಠಾವಂತ ಶಿಕ್ಷಕರೂ ಇದ್ದಾರೆ. ಅಂತಹವರ ಸಮ್ಮುಖಕ್ಕೆ ಶಿಕ್ಷಣ ಸಚಿವರೇ ಹೋಗಿ ಬೆನ್ನು ತಟ್ಟಿ ಸನ್ಮಾನಿಸಿದ್ದಾರೆ. ಅದೇ ಪ್ರಾಮಾಣಿಕತೆಗೆ ಇನ್ನೊಬ್ಬ ಮಂತ್ರಿಯಿಂದ ಅದೇ ಶಿಕ್ಷಕ ಅಮಾನತು ಆದದ್ದೂ ಉಂಟು. ಇದು ಸರ್ಕಾರಿ ಚಕ್ರದ ಬೇರೆಯದೇ ಕಥೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು