ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಯ ಅಳತೆಗೋಲು ಪರಿಸರ ವ್ಯವಸ್ಥೆಗೆ ಪೂರಕವೇ?

Last Updated 25 ಜುಲೈ 2011, 19:30 IST
ಅಕ್ಷರ ಗಾತ್ರ

ಜನರಿಗೆ ಎಲ್ಲವನ್ನೂ ಅಳೆದೂ ತೂಗಿ ನೋಡುವ ಭ್ರಾಂತಿ. ನಾವೆಲ್ಲರೂ ಸದಾ ನಮ್ಮ ಸುತ್ತಮುತ್ತಲಿನ ಪ್ರತಿಯೊಂದು ವಸ್ತುವನ್ನೂ ಹೀಗೆ ಅಳೆಯುತ್ತಲೇ ಇರುತ್ತೇವೆ. ಅದು ನಮ್ಮದೇ ಸಂಪತ್ತಾಗಿರಬಹುದು, ನಮ್ಮ ಶೈಕ್ಷಣಿಕ ಸಾಧನೆ ಆಗಿರಬಹುದು, ನೋಡಲು ಉದ್ದೇಶಿಸಿರುವ ಚಲನಚಿತ್ರ, ಈಗಾಗಲೇ ನೋಡಿರುವ ಅಥವಾ ಆಗ ತಾನೇ ನೋಡಿ ಬಂದ ಚಲನಚಿತ್ರ ಆಗಿರಬಹುದು. ಇದ್ಯಾವುದೂ ಅಲ್ಲದೆ, ಇತ್ತೀಚೆಗಷ್ಟೇ ಮಾಡಿ ಬಂದ ವಿಮಾನ ಪ್ರಯಾಣವೇ ಇರಬಹುದು. ಎಲ್ಲವನ್ನೂ ತೂಗಿ ನೋಡಿ ಅದಕ್ಕೊಂದು ಬೆಲೆ ಕಟ್ಟಿ ಬಿಡಲು ಮುಂದಾಗುತ್ತೇವೆ. ಈ ಅಳೆಯುವುದು ನಮಗೆ ಎಷ್ಟರ ಮಟ್ಟಿಗೆ ರೂಢಿಗತ ಆಗಿಹೋಗಿದೆಯೆಂದರೆ ನಾವು ಎಲ್ಲವನ್ನೂ ಹೀಗೇಕೆ ಅಳೆದು ನೋಡುತ್ತಿದ್ದೇವೆ, ಅದಕ್ಕಾಗಿ ನಾವು ಅನುಸರಿಸುತ್ತಿರುವ ಅಳತೆಗೋಲಾದರೂ ಏನು ಎಂದು ಒಂದು ಕ್ಷಣವಾದರೂ ಯೋಚಿಸುವ ಗೊಡವೆಗೇ ಹೋಗದಷ್ಟು ಈ ಪ್ರಕ್ರಿಯೆ ನಮ್ಮಲ್ಲಿ ಅಂತರ್ಗತವಾಗಿ ಹೋಗಿದೆ.

ಅಭಿವೃದ್ಧಿ ವಲಯದ ಭಾಗವಾಗಿರುವ ನಾನು ವೈದ್ಯರು, ದಾನಿಗಳು, ಶಿಕ್ಷಣ ತಜ್ಞರು, ಸಮುದಾಯಗಳು ಪ್ರತಿಯೊಂದನ್ನೂ ಅಳೆಯುವುದನ್ನು, ಅದಕ್ಕೆ ಬೆಲೆ ಕಟ್ಟುವುದನ್ನು ಕಂಡು ಅಚ್ಚರಿಗೆ ಒಳಗಾಗಿದ್ದೇನೆ. ಇಂತಹ ಕಾರ್ಯದಲ್ಲಿ ಪಾಲ್ಗೊಳ್ಳುವ ಜನ, ಅದಕ್ಕಾಗಿ ಅವರು ಬಳಸುವ ಸಾಧನ ಸಲಕರಣೆಗಳು, ಪದ್ಧತಿ ಎಲ್ಲವೂ ದಿನೇ ದಿನೇ ಉತ್ತಮಗೊಳ್ಳುತ್ತಿದೆ. ಆದರೆ ಇವರೆಲ್ಲ ಈ ವಿಚಾರದಲ್ಲಿ ಎಷ್ಟು ಮಗ್ನರಾಗಿ ಹೋಗಿದ್ದಾರೆಂದರೆ ಕೆಲ ಒಪ್ಪಿತ ಅಳತೆಗೋಲುಗಳನ್ನು ಅನುಸರಿಸಲಾಗಿದೆಯೋ ಇಲ್ಲವೋ ಎಂಬುದರ ಮೇಲೆ ಆ ಇಡೀ ಕಾರ್ಯಕ್ರಮದ ಸೋಲು ಗೆಲುವನ್ನು ತೀರ್ಮಾನ ಮಾಡಿ ಬಿಡುತ್ತಾರೆ. ಆರೋಗ್ಯ, ಶಿಕ್ಷಣ ಮತ್ತು ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಹಲವಾರು ಪ್ರಸ್ತಾವಗಳನ್ನು ನಾನು ಬರೆದಿದ್ದೇನೆ. ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಇಂತಹ ಸಂದರ್ಭಗಳಲ್ಲೆಲ್ಲಾ ಈ ಯೋಜನೆಗಳ ಅಳತೆಗೋಲಿಗಾಗಿ ಬಳಸುವ ಮಾನದಂಡಗಳ ಬಗ್ಗೆ ನನ್ನೊಳಗೇ ಪ್ರಶ್ನೆಗಳು ಏಳುತ್ತವೆ. ಯಾವುದೇ ಒಂದು ವಿಷಯಕ್ಕೆ ಅಳತೆಗೋಲು ಇರುವುದೇ ತಪ್ಪು ಎಂದು ನಾನು ಹೇಳುವುದಿಲ್ಲ. ಆದರೆ ಇಲ್ಲಿ ನಾನು ಹೇಳ ಹೊರಟಿರುವುದು ನಾವು ಅಳತೆ ಮಾಡಲು ಹೊರಟಿರುವ ಕಾರ್ಯಕ್ರಮ ಯಾವುದು, ಅದಕ್ಕೆ ಬೆಲೆ ಕಟ್ಟಲು ಹೊರಟಿರುವವರ ಸಾಮರ್ಥ್ಯ ಏನು, ಅಳತೆಯ ಮಾಪನಗಳು, ಮಾನದಂಡಗಳು ಯಾವುವು ಮತ್ತು ಇವೆಲ್ಲಕ್ಕಿಂತಲೂ ಹೆಚ್ಚಾಗಿ ಆ ಸನ್ನಿವೇಶ ಯಾವುದು ಎಂಬುದನ್ನು ಅರಿಯುವುದೂ ಅಷ್ಟೇ ಮುಖ್ಯವಾಗುತ್ತದೆ ಎಂಬುದನ್ನು.

ಇದನ್ನು ನಾನು ವೈಯಕ್ತಿಕ ಉದಾಹರಣೆಯೊಂದರ ಮೂಲಕ ವಿವರಿಸ ಬಯಸುತ್ತೇನೆ. ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯ ಅರಣ್ಯ ಪ್ರದೇಶದಲ್ಲಿರುವ ಬುಡಕಟ್ಟು ಪ್ರದೇಶಕ್ಕೆ 1987ರಲ್ಲಿ ಬಂದ ನಾನು, ಅಲ್ಲೊಂದು ಸಣ್ಣ ಚಿಕಿತ್ಸಾಲಯ ಆರಂಭಿಸಿದೆ. ಪ್ರಸೂತಿ ಶಾಸ್ತ್ರ ನನ್ನ ಪ್ರಿಯವಾದ ವಿಷಯಗಳಲ್ಲಿ ಒಂದು. ಹೀಗಾಗಿ ಸ್ವಾಭಾವಿಕವಾಗಿಯೇ ತಾಯಂದಿರ ಆರೋಗ್ಯ ಮತ್ತು ಅವರ ಸಾವಿನ ಸಂಖ್ಯೆ ತಡೆಗಟ್ಟುವುದರತ್ತ ನಾನು ಹೆಚ್ಚಿನ ಗಮನ ಕೇಂದ್ರೀಕರಿಸಿದ್ದೆ. ಅದರಲ್ಲೂ, ಆ ಪ್ರದೇಶದಲ್ಲಿ ತಾಯಂದಿರ ಸಾವಿನ ಪ್ರಮಾಣ ಅಧಿಕವಾಗಿಯೇ ಇದ್ದುದರಿಂದ ಇದನ್ನು ನಿಯಂತ್ರಣಕ್ಕೆ ತರುವ ಪರಿಹಾರೋಪಾಯಗಳ ಬಗ್ಗೆ ಚಿಂತಿತನಾಗಿದ್ದೆ. ತಾಯಂದಿರ ಸಾವಿನ ಸಂಖ್ಯೆಯು ಯಾವುದೇ ಒಂದು ಸಮುದಾಯದ ಆರೋಗ್ಯ ಸೂಚಕವೂ ಹೌದು. ಅಲ್ಲದೆ, ಇದು ಆರೋಗ್ಯ ಕಾರ್ಯಕ್ರಮಗಳ ಫಲಿತಾಂಶ ನಿರ್ಧರಿಸುವ ಅಳತೆಗೋಲು ಸಹ ಹೌದು.

ಆ ಸಮಯದಲ್ಲಿ ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯುಎಚ್‌ಒ), ಕೇಂದ್ರ ಸರ್ಕಾರ ಸೇರಿದಂತೆ ಪ್ರತಿಯೊಬ್ಬರ ಕಳಕಳಿಯ ವಿಷಯವೂ ತಾಯಂದಿರ ಆರೋಗ್ಯ ಮತ್ತು ಸುರಕ್ಷಿತ ತಾಯ್ತನವೇ ಆಗಿತ್ತು. ಹೀಗಾಗಿ ಇಡೀ ಆರೋಗ್ಯ ಕ್ಷೇತ್ರವು ಸಾಂಸ್ಥಿಕ ಹೆರಿಗೆಗೆ ಪ್ರಾಮುಖ್ಯ ನೀಡಲು ಆರಂಭಿಸಿತ್ತು. ನಾವೂ ಈ ಪ್ರಯೋಗದಿಂದ ಹೊರತಾಗಲಿಲ್ಲ.

ಅಲ್ಲಿಂದಾಚೆಗೆ ಹಲವು ವರ್ಷಗಳ ಕಾಲ ನಾವು ಸಾಂಸ್ಥಿಕ ಹೆರಿಯ ಬಗ್ಗೆ ಪ್ರಚಾರ ಆಂದೋಲನಗಳನ್ನು ನಡೆಸಿದೆವು. ನಮ್ಮ ಆಸ್ಪತ್ರೆಗಳಲ್ಲಿ ಸುರಕ್ಷಿತ ಹೆರಿಗೆಗೆ ಅಗತ್ಯವಾದ ಸೌಲಭ್ಯಗಳು ಒದಗುವಂತೆ ನೋಡಿಕೊಂಡೆವು. ಈ ಪ್ರದೇಶದ ಬುಡಕಟ್ಟು ಜನರ ತಾಯ್ತನದಲ್ಲಿ ಪ್ರಗತಿ ಮತ್ತು ಶಿಶುಗಳ ಆರೋಗ್ಯ ಉತ್ತಮಪಡಿಸುವ ನಿಟ್ಟಿನಲ್ಲಿ 2001- 02ರಲ್ಲಿ ವಿಶ್ವ ಬ್ಯಾಂಕ್ ಪ್ರಾಯೋಜಿತ ಯೋಜನೆಯನ್ನೂ ನಾವು ನಿರ್ವಹಿಸುತ್ತಿದ್ದೆವು.

ಇದಾದ ಕೆಲವು ವಾರಗಳ ಬಳಿಕ ಈ ಕಾರ್ಯಕ್ರಮದಲ್ಲಿ ಬಹಳಷ್ಟು ಕಾಲದಿಂದ ತೊಡಗಿಸಿಕೊಂಡಿದ್ದ ಪ್ರಸೂತಿ ತಜ್ಞೆಯಾದ ನನ್ನ ಪತ್ನಿ ಬಿಂದು, ಬುಡಕಟ್ಟು ಮಹಿಳೆಯರು ಆರೋಗ್ಯ ವಿಷಯದಲ್ಲಿ ತೋರುತ್ತಿರುವ ಸಕಾರಾತ್ಮಕ ಕಾಳಜಿಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದರು. ಈಗ ಈ ಮಹಿಳೆಯರು ತಾವಾಗಿಯೇ ಆಸ್ಪತ್ರೆಯನ್ನು ಹುಡುಕಿಕೊಂಡು ಬರುತ್ತಾರೆ. ಆದರೆ ಇದೇ 20 ವರ್ಷಗಳ ಹಿಂದೆ ಇವರನ್ನು ಸಾಂಸ್ಥಿಕ ಹೆರಿಗೆಗೆ ಹುರಿದುಂಬಿಸುವ ಕಾರ್ಯ ಎಂತಹ ಸವಾಲಿನದಾಗಿತ್ತು ಎಂಬುದನ್ನು ಆಕೆ ಸ್ಮರಿಸಿದರು. ನಾನು ಈ ಪ್ರದೇಶಕ್ಕೆ ಮೊದಲು ಬಂದಾಗ ಅಸ್ತಿತ್ವದಲ್ಲೇ ಇಲ್ಲದ ಸಾಂಸ್ಥಿಕ ಹೆರಿಗೆ ಪದ್ಧತಿ 2002ರಲ್ಲಿ ವಿಶ್ವ ಬ್ಯಾಂಕ್ ಪ್ರಾಯೋಜಿತ ಕಾರ್ಯಕ್ರಮ ಕೊನೆಯ ಹಂತಕ್ಕೆ ಬರುವ ವೇಳೆಗೆ ಶೇ 40ರಷ್ಟು ಪ್ರಗತಿ ಸಾಧಿಸಿತ್ತು. ಈಗಂತೂ ಎಲ್ಲ ಆದಿವಾಸಿ ಮಹಿಳೆಯರೂ ಮಕ್ಕಳನ್ನು ಹೆರಲು ನಮ್ಮ ಆಸ್ಪತ್ರೆಗೆ ಬರುತ್ತಾರೆ.

ನಮ್ಮ ಆರ್‌ಸಿಎಚ್ ಕಾರ್ಯಕ್ರಮ ಅಧ್ಯಯನಕ್ಕೂ ಒಳಗಾಗಿದೆ. ನಮಗಾಗಿ ಪ್ರಾಯೋಜಿಸಿದ್ದ ಆರ್‌ಸಿಎಚ್ ಕಾರ್ಯಕ್ರಮವನ್ನು ವಿಶ್ವಬ್ಯಾಂಕ್ ಸಹ ತನ್ನ ಉತ್ತಮ ಯೋಜನೆಗಳಲ್ಲಿ ಒಂದು ಎಂದೇ ಪರಿಗಣಿಸಿದೆ. ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ತೊಡಗಿಕೊಂಡಿರುವವರು ಮತ್ತು ತಜ್ಞರು, ಇಳಿಮುಖವಾದ ತಾಯಂದಿರ ಸಾವಿನ ಸಂಖ್ಯೆ ಹಾಗೂ ಆರೋಗ್ಯದ ಗುಣಮಟ್ಟ ವೃದ್ಧಿಯಿಂದ ಪ್ರೇರೇಪಿತರಾಗಿದ್ದಾರೆ. ಹೀಗೆ ನಮ್ಮ ಸಾಧನೆಯನ್ನು ತಮ್ಮದೇ ಅತ್ಯಾಧುನಿಕ ಅಳತೆಗೋಲು, ಮಾನದಂಡಗಳಿಗೆ ಒಳಪಡಿಸಿದ ಹಲವಾರು ಮಂದಿ ಹಾಗೂ ಸಂಸ್ಥೆಗಳ ದೃಷ್ಟಿಯಲ್ಲಿ ನಮ್ಮದು ಸಾರ್ವಜನಿಕ ಸೇವೆಯಲ್ಲಿ ನಿಸ್ಸಂಶಯವಾಗಿಯೂ ಒಂದು ಯಶಸ್ಸು.

ಹೀಗೆ ಹಿಂದಿನಿಂದ ನಾವು ತೊಡಗಿಕೊಂಡು ಬಂದ ಕಾರ್ಯದ ಬಗ್ಗೆ ಆಗಾಗ್ಗೆ ನಾನು ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳುತ್ತೇನೆ. ಏನಾದರೂ ಮಾಡಬೇಕೆಂಬ ಉದ್ದೇಶದಿಂದ ನಾನು ಬುಡಕಟ್ಟು ಪ್ರದೇಶಕ್ಕೆ ಬಂದಾಗ ಇಲ್ಲಿನ ಪರಿಸ್ಥಿತಿ ಹೇಗಿತ್ತು, ನಂತರ ನನ್ನ ಉದ್ದೇಶವನ್ನು ಹೇಗೆ ಕಾರ್ಯರೂಪಕ್ಕೆ ತಂದೆ ಎಂಬುದರ ವಿಶ್ಲೇಷಣೆಯನ್ನೂ ಮಾಡಿಕೊಳ್ಳುತ್ತೇನೆ. ಜನರ ಅನಾರೋಗ್ಯ ನಿಯಂತ್ರಿಸಿ ಉತ್ತಮ ಆರೋಗ್ಯ ಸಾಧನೆ ಮಾಡಿರುವುದನ್ನು ಗಣನೆಗೆ ತೆಗೆದುಕೊಂಡರೆ ನಮ್ಮದು ಖಚಿತವಾಗಿಯೂ ಒಂದು ಯಶೋಗಾಥೆಯೇ ಸರಿ.

ಆದರೂ ನಮ್ಮ ಕೆಲಸ ಮತ್ತು ಉದ್ದೇಶವನ್ನು ತೂಗಿ ನೋಡಲು ಇದೇ ನಿಜವಾದ ಅಳತೆಗೋಲೇ? ಪರಿಸರ ವ್ಯವಸ್ಥೆಯಲ್ಲಿ ಅಸ್ತಿತ್ವದಲ್ಲಿರುವ ಎಲ್ಲವೂ ಈ ಅಳತೆಗೋಲಿನ ವ್ಯಾಪ್ತಿಗೆ ಬರುವುದೇ? ನಮ್ಮ ಈ ಕಾರ್ಯಕ್ರಮಗಳಿಂದ ಯಾವುದೇ ಉದ್ದೇಶವಿಲ್ಲದೇ ಹೊರಬಿದ್ದ ಫಲಿತಾಂಶಗಳನ್ನು ಅರಿಯಲು ಎಷ್ಟರಮಟ್ಟಿಗೆ ನಾವು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದ್ದೇವೆ? ಇಂತಹ ಫಲಿತಾಂಶಗಳು ಮೇಲ್ನೋಟಕ್ಕೆ ಕಾಣುವುದಿಲ್ಲ ಎಂದ ಮಾತ್ರಕ್ಕೆ ಅವು ಅಳತೆಗೋಲಿಗೆ ಅರ್ಹವಲ್ಲವೇ? ತಾಯಂದಿರ ಸಾವಿನ ಸಂಖ್ಯೆ ಕಡಿಮೆ ಮಾಡುವ ನಮ್ಮ ಮಹತ್ತರವಾದ ಗುರಿ ಸಾಧನೆಗಾಗಿ ಸಾಂಸ್ಥಿಕ ಹೆರಿಗೆಗಳನ್ನು ಉತ್ತೇಜಿಸುವ ಮೂಲಕ ನಮಗೇ ಅರಿವಿಲ್ಲದಂತೆ ಸಹಜವಾದ ಒಂದು ಪ್ರಕ್ರಿಯೆಯನ್ನು ನಾವು ಉಪೇಕ್ಷಿಸಿದ್ದೇವೆ. ಇದರಿಂದ ಹೆರಿಗೆಯಂತಹ ನೈಸರ್ಗಿಕ ಪ್ರಕ್ರಿಯೆಯನ್ನು ಯಾವ ಹೊರಗಿನವರ ಅವಲಂಬನೆಯೂ ಇಲ್ಲದೇ ಮಾಡಿಕೊಳ್ಳುತ್ತಿದ್ದ ಒಂದು ಸಮುದಾಯದ ಸಾಮರ್ಥ್ಯವನ್ನೇ ನಾವು ಕಿತ್ತುಕೊಂಡಂತಾಗಲಿಲ್ಲವೇ? ಇಂದಿನ ಬಹುತೇಕ ಮಹಿಳೆಯರು ನಮ್ಮ ಆಸ್ಪತ್ರೆಗಳಲ್ಲೇ ಮಕ್ಕಳನ್ನು ಹೆರುತ್ತಿದ್ದಾರೆ. ಆದರೆ ಶತಮಾನಗಳಿಂದಲೂ ತಮ್ಮ ತಮ್ಮ ಮನೆಗಳಲ್ಲೇ ಮಕ್ಕಳನ್ನು ಹೆರುವ ಸಾಂಪ್ರದಾಯಿಕ ಪದ್ಧತಿಯ ಬಗ್ಗೆ ಇವರಲ್ಲಿ ಎಷ್ಟು ಜನರಿಗೆ ತಾನೇ ಅರಿವಿದೆ? ಅದನ್ನು ತಿಳಿದುಕೊಳ್ಳುವ ಮನಸ್ಸಾದರೂ ಯಾರಿಗಿದೆ?

ತಮ್ಮ ಸಂಪನ್ಮೂಲಗಳಿಗೆ ಹೊತಾದ ಮತ್ತು ತಾವು ಭರಿಸಲು ಸಾಧ್ಯವಾಗದ ವೆಚ್ಚದಾಯಕ ಆರೋಗ್ಯ ರಕ್ಷಣಾ ವ್ಯವಸ್ಥೆಯ ಬದಲಿಗೆ ಕಡಿಮೆ ಬೆಲೆಯಲ್ಲಿ, ವಿವೇಚನಾಯುಕ್ತವಾದ ರೀತಿಯಲ್ಲಿ ಆರೋಗ್ಯ ಸೇವೆಯನ್ನು ಹೊಂದುವಂತೆ ಸಮುದಾಯಗಳ ಸಾಮರ್ಥ್ಯ ಹೆಚ್ಚಿಸುವಂತಹ ಅಳತೆಗೋಲುಗಳನ್ನು ನಾವು ಯಾಕೆ ಇಟ್ಟುಕೊಳ್ಳಬಾರದು? ದೂರದೂರುಗಳಿಂದ ಬಂದ ವೈದ್ಯರು, ನರ್ಸುಗಳು, ವ್ಯವಸ್ಥಾಪಕರನ್ನು ಒಳಗೊಂಡ ಅತ್ಯಾಧುನಿಕ ಆರೋಗ್ಯ ರಕ್ಷಣಾ ಕಾರ್ಯಕ್ರಮಗಳೇ ನಮಗೆ  ಅತ್ಯಗತ್ಯವೇ? ತಮ್ಮ ಆರೋಗ್ಯ ರಕ್ಷಣೆಗೆ ತಮ್ಮದೇ ಸಂಪನ್ಮೂಲ ಮತ್ತು ಸಾಮರ್ಥ್ಯವನ್ನು ಅವಲಂಬಿಸುವಂತೆ ಸಮುದಾಯಕ್ಕೆ ಬಲ ತುಂಬಬಲ್ಲ ಕಾರ್ಯ ಸಾಧ್ಯವಿಲ್ಲವೇ?

ಒಂದು ಸಮುದಾಯಕ್ಕೆ ಏನು ಮುಖ್ಯವಾಗುತ್ತದೆ ಎಂಬುದು ಅಭಿವೃದ್ಧಿ ವಲಯ ಯಾವುದರತ್ತ ಗಮನ ಕೇಂದ್ರೀಕರಿಸುತ್ತದೆ ಎಂಬುದನ್ನು ಅವಲಂಬಿಸಿದೆಯೇ ಹೊರತು ಯಾವುದು ಸರಳವಾದ ವ್ಯಾಖ್ಯಾನ ಮತ್ತು ನಿರ್ವಹಣಾ ವಿಧಾನಕ್ಕೆ ಒಳಪಡುತ್ತದೋ ಅದನ್ನಲ್ಲ. ಇದನ್ನೆಲ್ಲಾ ಅವಲೋಕಿಸಿದರೆ, ನಮ್ಮ ಕಣ್ಣಿಗೆ ಕಾಣುವ ಒಂದು ಭಾಗವನ್ನಷ್ಟೇ ನಮ್ಮ ಕಾರ್ಯಕ್ರಮಗಳ ಮಾನದಂಡವನ್ನಾಗಿ ಅಳವಡಿಸಿಕೊಳ್ಳುತ್ತಿದ್ದೇವೆ ಎನಿಸುತ್ತದೆ. ಅದರ ಬದಲು, ಒಟ್ಟಾರೆ ಇಡೀ ಪರಿಸರ ವ್ಯವಸ್ಥೆ ಯಾವುದರ ಮೇಲೆ ನಿಂತಿದೆ ಎಂಬುದನ್ನು ಆಧಾರವಾಗಿಟ್ಟುಕೊಂಡು ಅಳತೆಗೋಲುಗಳನ್ನು ನಿರ್ಧರಿಸುವುದು ಒಳಿತು.
(ನಿಮ್ಮ ಅನಿಸಿಕೆಗಳನ್ನು ಇಲ್ಲಿಗೆ ಕಳುಹಿಸಿ: ಛಿಜಿಠಿಜಛ್ಛಿಛಿಛಿಚಿಚ್ಚಃಟ್ಟಚ್ಜಚ್ಞಜಿ.್ಚಟ.ಜ್ಞಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT