ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೀರ್‌ಖಾನ್ ಬುರುಡೆ ಪುರಾಣ

Last Updated 24 ಮೇ 2012, 19:30 IST
ಅಕ್ಷರ ಗಾತ್ರ

ಆಸಿಡ್ ದಾಳಿಯಿಂದ ಶೇ ಅರವತ್ತರಷ್ಟು ಸುಟ್ಟು ಹೋದ ಮುಖ ಹೊತ್ತ ಜಯಲಕ್ಷ್ಮಿ ಮತ್ತು ಸಯ್ಯದ್ ರಹತ್ತುನ್ನೀಸಾ ಅವರ ಕರುಣಾಜನಕ ಕತೆ, ದಕ್ಷಿಣ ಭಾರತ ಮೂಲದ ರಾಷ್ಟ್ರೀಯ ವಾರಪತ್ರಿಕೆಯೊಂದರಲ್ಲಿ ಮುಖಪುಟದ ಲೇಖನವಾಗಿ ಪ್ರಕಟವಾಗಿತ್ತು. ಗಂಡನಿಂದಲೇ ಆಸಿಡ್ ದಾಳಿಗೆ ಒಳಗಾಗಿ ಅರವತ್ತು ಸೆಕೆಂಡುಗಳಲ್ಲಿ ವಿಕಾರವಾಗಿ ಪರಿವರ್ತನೆಯಾದ ಕತೆಯನ್ನು, ಆ ಗಳಿಗೆಯ ಯಾತನೆಯನ್ನು ದಾಳಿಗೆ ತುತ್ತಾದವರೇ ಖುದ್ದು ವರದಿಗಾರನ ಮುಂದೆ ನಿವೇದಿಸಿದ್ದರು.

ಪಾಕಿಸ್ತಾನದ ಸಿಂದ್ ಪ್ರಾಂತ್ಯದಲ್ಲಿ ಉಳಿದುಕೊಂಡಿರುವ ಭಾರತೀಯರು ಅನುಭವಿಸುತ್ತಿರುವ ವೇದನೆ, ಅಲ್ಲಿನ ಯುವತಿಯರು ಅಪಹರಣಕ್ಕೊಳಗಾಗಿ, ಅತ್ಯಾಚಾರಕ್ಕೊಳಗಾಗಿ, ಬಲವಂತ ಮತಾಂತರಕ್ಕೊಳಗಾಗುತ್ತಿರುವ ಚಿತ್ರಣವನ್ನು ದೆಹಲಿಯಿಂದ ಪ್ರಕಟವಾಗುವ ಮತ್ತೊಂದು ವಾರಪತ್ರಿಕೆ ಕವರ್ ಸ್ಟೋರಿ ರೂಪದಲ್ಲಿ ನೀಡಿತು.
 
ರಿಂಕಲ್‌ಕುಮಾರಿ ಎಂಬ ಯುವತಿಯನ್ನು ಅಪಹರಿಸಿ, ನವೀದ್ ಶಾ ಎಂಬ ಯುವಕ ಬಲವಂತವಾಗಿ ಮದುವೆಯಾದ ಕತೆ, ರಿಂಕಲ್‌ಗೆ ಮದುವೆ ಇಷ್ಟವಿಲ್ಲದಿದ್ದರೂ, ಪಾಕ್ ಗೂಂಡಾಗಳ, ಅಲ್ಲಿನ ಸಂಸದನ ಬೆದರಿಕೆಯಿಂದ, ನ್ಯಾಯಾಲಯದಲ್ಲಿ ಆಕೆಗೆ ನಿಜ ಹೇಳಲು ಆಗಲೇ ಇಲ್ಲ. ಆಕೆಯ ಅಜ್ಜನನ್ನು ಗುಂಡಿಟ್ಟು ಕೊಲ್ಲಲಾಯಿತು. ಬಲವಂತ ಮತಾಂತರ ವಿಷಯ ಹೇಳಿದರೆ ಇಡೀ ಕುಟುಂಬವನ್ನು ಹೀಗೆಯೇ ಮುಗಿಸುವುದಾಗಿ ಬೆದರಿಕೆ ಒಡ್ಡಿ ರಿಂಕಲ್ ಬಾಯಿ ಮುಚ್ಚಿಸಲಾಯಿತು. ಸಿಂದ್ ಪ್ರಾಂತ್ಯದ ನೂರಾರು ಭಾರತೀಯ ಕುಟುಂಬದ ಮಹಿಳೆಯರ ಮೌನರೋದನವನ್ನು ಈ ಸಂದರ್ಶನ ಮನಕರಗುವಂತೆ ಚಿತ್ರ ಸಹಿತ ವಿವರಿಸಿತ್ತು.

ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವ ಸಂಗತಿ, ಹೆಬ್ಬಾಳ ಕೆರೆಯ ಬಳಿ ಹೆಣ್ಣು ಶಿಶು ಭ್ರೂಣಗಳ ರಾಶಿ ಬಿದ್ದಿದ್ದುದು ಎಲ್ಲವೂ ನಮ್ಮ `ಪ್ರಜಾವಾಣಿ~ ಸೇರಿದಂತೆ ಎಲ್ಲ ಪತ್ರಿಕೆಗಳಲ್ಲೂ ಬಂದಿವೆ. ವೃತ್ತ ಪತ್ರಿಕೆಗಳು, ವಾರ ಪತ್ರಿಕೆಗಳು ಇಂತಹ ಮಾನವೀಯ ವರದಿಗಳನ್ನು ಸದಾ ಪ್ರಕಟಿಸುತ್ತಲೇ ಬಂದಿವೆ.

ಮೂರು ವಾರಗಳಿಂದ ಚಿತ್ರ ನಟ ಅಮೀರ್‌ಖಾನ್, ಸ್ಟಾರ್ ಟಿವಿಯ ಏಳು ಚಾನಲ್‌ಗಳು ಹಾಗೂ ದೂರದರ್ಶನದ್ಲ್ಲಲಿ ನೀಡುತ್ತಿರುವ ರಿಯಾಲಿಟಿ ಶೋ ಮಾಡುತ್ತಿರುವುದು ಏನು? ಮುದ್ರಣ ಮಾಧ್ಯಮಗಳು ಮಾಡುತ್ತಿರುವ ಕೆಲಸವನ್ನು, ಅಮೀರ್‌ಖಾನ್ ದೃಶ್ಯ ಮಾಧ್ಯಮದ ಮೂಲಕ ಮಾಡುತ್ತಿದ್ದಾರೆ. ಇದನ್ನು ವೈಭವೀಕರಿಸುತ್ತಿರುವ ವ್ಯವಸ್ಥಿತ ರೀತಿಯನ್ನು ಗಮನಿಸಿದರೆ ನನಗೆ ಜನಮರುಳೋ ಜಾತ್ರೆ ಮರುಳೋ ಎನಿಸುತ್ತಿದೆ.

ತಾನು ನಡೆಸುತ್ತಿರುವ ಈ ಧಾರಾವಾಹಿಯನ್ನು ಅತ್ಯಂತ ಜನಪ್ರಿಯಗೊಳಿಸಬೇಕು. ಚಾನಲ್‌ನ ಟಿಆರ್‌ಪಿ ರೇಟನ್ನು ಆ ಮೂಲಕ ಅತಿ ಎತ್ತರಕ್ಕೆ ಕೊಂಡೊಯ್ಯಬೇಕು ಎನ್ನುವ ಏಕಮೇವ ಉದ್ದೇಶ `ಸತ್ಯಮೇವ ಜಯತೇ~ ಹಿಂದೆ ರಹಸ್ಯವಾಗಿ ಅಡಗಿ ಕೂತಿರುವಂತೆ  ಕಾಣಿಸುತ್ತಿದೆ. ಸ್ಟಾರ್ ಮಹಿಮೆ ಹಾಗೂ ಅಮೀರ್‌ಖಾನ್ ಜನಪ್ರಿಯತೆಯಿಂದಾಗಿ ಈ ಕಾರ್ಯಕ್ರಮಕ್ಕೆ ದೊಡ್ಡ ದೊಡ್ಡ ಕಂಪೆನಿಗಳಿಂದ ಪ್ರಾಯೋಜಕತ್ವ ದೊರಕಿದ್ದು ಅದರ ಮೊತ್ತವೇ ಆರು ನೂರು ಕೋಟಿ ರೂಪಾಯಿಗಳನ್ನು ದಾಟಿದೆಯಂತೆ.

ಸತ್ಯಮೇವ ಜಯತೆ ಹೀಗೆ, ಸಾಮಾಜಿಕ ಬದ್ಧತೆ ಹೊಂದಿರುವ ವೃತ್ತ ಪತ್ರಿಕೆಯೊಂದು ಮಾಡುವ ಕೆಲಸವನ್ನು ದೃಶ್ಯ ಮಾಧ್ಯಮದಲ್ಲಿ ಮತ್ತಷ್ಟು ವಿಸ್ತೃತವಾಗಿ, ಅಚ್ಚುಕಟ್ಟಾಗಿ ಮಾಡುತ್ತಿದೆ. ಜ್ವಲಂತ ಸಮಸ್ಯೆಗಳನ್ನು ಆಯ್ಕೆ ಮಾಡಿಕೊಂಡು ಅಮೀರ್‌ಖಾನ್ ಅದನ್ನು ಪ್ರಸ್ತುತ ಪಡಿಸುತ್ತಿರುವ ರೀತಿ, ಆತ್ಮೀಯವಾಗಿ ಜನರೊಂದಿಗೆ ಬೆರೆಯುತ್ತಿರುವುದು, ಸರಳ ಭಾಷೆ ಎಲ್ಲವೂ ಈ ಕಾರ್ಯಕ್ರಮವನ್ನು ಆಪ್ಯಾಯಮಾನವನ್ನಾಗಿಸಿದೆ.

ಈಗಾಗಲೇ ಬಿತ್ತರಗೊಂಡಿರುವ ಮೂರು ವಿಷಯಗಳು ಮಹಿಳೆಯರ ಸಮಸ್ಯೆಗಳೇ. ಹೆಣ್ಣು ಭ್ರೂಣ ಹತ್ಯೆಯ ಜಟಿಲತೆಯನ್ನು ಮೊದಲ ಕಂತಿನಲ್ಲಿ ಚರ್ಚಿಸಿದ ಅಮೀರ್‌ಖಾನ್, ನಂತರ ಬಾಲಕಿಯರ ಲೈಂಗಿಕ ಶೋಷಣೆ, ವರದಕ್ಷಿಣೆಗಾಗಿ ಕಿರುಕುಳ ಸಮಸ್ಯೆಗಳನ್ನು ತೆಗೆದುಕೊಂಡು ಚರ್ಚಿಸಿದ್ದಾರೆ.
 
ಇದು ಮನೆ ಮನೆ ಕಥೆ. ರಾಜಸ್ತಾನದ ಇಬ್ಬರು ಪತ್ರಕರ್ತರು ಮಾರುವೇಷದ ಕಾರ್ಯಾಚರಣೆ ಮಾಡಿ, ಹೆಣ್ಣು ಭ್ರೂಣ ಪತ್ತೆ ಹಚ್ಚಿ ಅದನ್ನು ತೆಗೆದು ಹಾಕುವ ದಂಧೆಯಲ್ಲಿರುವುದನ್ನು ಚಿತ್ರಿಸಿಕೊಂಡಿದ್ದವರು. ಸಹರಾ ಸಮಯ್ ಚಾನಲ್‌ನಲ್ಲಿ ಈ ವರದಿ ಪ್ರಸಾರಗೊಂಡು ಕೋಲಾಹಲವಾಗಿತ್ತು. ಇದನ್ನೇ ಆಧಾರವಾಗಿಟ್ಟುಕೊಂಡು ಅಮೀರ್‌ಖಾನ್ ಅಹಮದಾಬಾದಿನ ಮಹಿಳೆಯೊಬ್ಬರ ಸಂದರ್ಶನ ಮಾಡಿದರು.
 
ಮಧ್ಯಪ್ರದೇಶದ ಪರ್ವಿನ್‌ಳ ದುಃಖದ ಕತೆಯನ್ನು ಜನರ ಮುಂದೆ ಹೇಳಿಸಿದರು. ಹೆಣ್ಣು ಮಗು ಎಂದ ಕೂಡಲೇ ಗಂಡನೂ, ಗಂಡನ ಮನೆಯವರೂ ವಿವಿಧ ರೀತಿಯಲ್ಲಿ ಕಿರುಕುಳ ನೀಡಿದ್ದನ್ನು, ಗಂಡ ಪತ್ನಿಯನ್ನೇ ಬಿಟ್ಟು ಹೋದದ್ದು, ಆನಂತರ ಜೀವನದಲ್ಲಿ ತಾವು ಪಟ್ಟ ಕಷ್ಟಗಳನ್ನು ಪರ್ವೀನ್ ಬಾಬಿ ವಿವರಿಸುತ್ತಿದ್ದಂತೆಯೇ, ಎದುರು ಕುಳಿತಿದ್ದ ಅನೇಕ ಮಹಿಳೆಯರು ಕಣ್ಣೀರೊರೆಸಿಕೊಳ್ಳುತ್ತಿದ್ದ ದೃಶ್ಯಗಳನ್ನು ಕ್ಯಾಮರಾ ಕ್ಲೋಸಪ್‌ನಲ್ಲಿ ತೋರಿಸುತ್ತಿತ್ತು.
 
ವರದಕ್ಷಿಣೆ ಕಿರುಕುಳಕ್ಕೆ ಒಳಗಾಗಿ ಅಮೆರಿಕದಲ್ಲಿರುವ ಗಂಡನನ್ನು ಬಿಟ್ಟು ಬಂದಿರುವ ಯುವತಿಯ ಕತೆಯನ್ನು ಕೇಳುತ್ತಿರುವಾಗಲೂ ಮಹಿಳೆಯರ ಕಣ್ಣೀರಿಗೆ ಬರವಿರಲಿಲ್ಲ. ಭಾರತೀಯ ಚಿತ್ರರಂಗದಲ್ಲಿ ಕಣ್ಣೀರ ಕತೆಗಳು ಬಾಕ್ಸಾಫೀಸನ್ನು ಕೊಳ್ಳೆ ಹೊಡೆಯುವುದು ಗ್ಯಾರಂಟಿ ಎನ್ನುವುದು ನೂರು ವರ್ಷದ ಇತಿಹಾಸ ಗಮನಿಸಿದರೆ ಸಾಬೀತಾಗುತ್ತದೆ.

ಇದನ್ನು ಅಮೀರ್‌ಖಾನ್ ಚೆನ್ನಾಗಿಯೇ ಅರಿತಿದ್ದಾರೆ ಎನ್ನುವುದು `ಸತ್ಯಮೇವ ಜಯತೆ~ಯಲ್ಲಿ ಗೊತ್ತಾಗುತ್ತದೆ. ಭಾರತೀಯ ಚಿತ್ರರಂಗದ ಮೊದಲ ಚಿತ್ರ `ಹರಿಶ್ಚಂದ್ರ~ದಲ್ಲಿ ದಾದಾಸಾಹೇಬ್ ಫಾಲ್ಕೆ ಚಂದ್ರಮತಿಯ ಮೂಲಕ ಕಣ್ಣೀರಿನ ಕತೆ ಹೇಳಿದ್ದರು. ಭಾರತದ ಮೊದಲ ವಾಕ್ಚಿತ್ರ ಆಲಂ ಆರಾ ಕೂಡ ಕಣ್ಣೀರಿನ ಕತೆ.
 
ಕನ್ನಡದ್ದೇ ಮೊದಲ ವಾಕ್ಚಿತ್ರ ಸತಿ ಸುಲೋಚನದಲ್ಲಿ ಸುಲೋಚನೆಯ ಸಹಗಮನ ಕಂಡು ಪ್ರೇಕ್ಷಕರು ಬಿಕ್ಕಿ ಬಿಕ್ಕಿ ಅಳುತ್ತಿದ್ದರಂತೆ. ತೆರೆಯ ಮೇಲಿನ ಕತೆಯೊಳಗೆ ತಲ್ಲೆನವಾಗಿ, ಪಾತ್ರಗಳಲ್ಲಿ ತಮ್ಮನ್ನೇ ಕಂಡುಕೊಳ್ಳುವ ಪ್ರೇಕ್ಷಕ ಸಮೂಹ ಅಂದಿನಿಂದ ಇಂದಿನವರೆಗೆ ಒಂದೇ ಮನೋಭಾವದಲ್ಲಿರುವುದರಿಂದಲೇ ಸಿನಿಮಾ ಆಗಲಿ, ಕಿರುತೆರೆಯಲ್ಲಾಗಲಿ ಮಹಿಳಾ ಕೇಂದ್ರೀಕೃತ ಕಥಾಹಂದರ ಎದ್ದು ಕಾಣುತ್ತದೆ. ಅಮೀರ್‌ಖಾನ್, ಪದೇ ಪದೇ ಮ್ಲಾನವದನರಾಗುವುದು, ತಾನೂ ಕಣ್ಣೊರೆಸಿಕೊಳ್ಳುವುದು, ಜನರೂ ಅಳುತ್ತಿರುವುದನ್ನು ತೋರಿಸುವುದು ಇವೆಲ್ಲಾ ಗಿಮಿಕ್ ಆಗಿಯೂ ಕಾಣುತ್ತದೆ. ಅಮೀರ್‌ಖಾನ್ ಟಿವಿ ಪರದೆಗೇ ಗ್ಲೀಸರಿನ್ ಹಾಕಿ ಬಿಟ್ಟಂತೆ ಕಾಣುತ್ತದೆ.

ಟಿ ವಿ ಧಾರಾವಾಹಿಗಳು ನಮ್ಮ ಜನರ ಮನಸ್ಸನ್ನು ಹೇಗೆ ಹಾಳುಗೆಡವಿದೆ ಎನ್ನುವುದನ್ನು ನೋಡುತ್ತಲೇ ಬಂದಿದ್ದೇವೆ. ಮನೆಮುರುಕುತನವನ್ನು ಹೇಳಿಕೊಡುವ, ಅತ್ತೆಯನ್ನು ವಿಲನ್‌ಗಳಂತೆ ಬಿಂಬಿಸುವ ಅತಿರಂಜಕ, ಅತಿರೇಕಗಳ ನಡುವೆ ಎಳೆದಾಡುವ ಕತೆಗಳು ವರ್ಷಗಟ್ಟಲೆ ಕಿರುತೆರೆಯ ಮೇಲೆ ಕಾಣಿಸಿಕೊಂಡಿವೆ. ಇಂತಹ ನಿರರ್ಥಕ ಕತೆಗಳ ನಡುವೆ `ಸತ್ಯಮೇವ ಜಯತೆ~ ವಿಭಿನ್ನವಾಗಿರುವುದು ಮೊದಲ ನೋಟದಲ್ಲೇ ಕಾಣುತ್ತದೆ.

ಜನಪ್ರಿಯತೆಯ ತುತ್ತತುದಿಯಲ್ಲಿರುವ ನಟರು ಇಂತಹ ಕೆಲಸಗಳನ್ನು ಮಾಡುವುದು ಸ್ವಾಗತಾರ್ಹ. ಅಮಿತಾಭ್ ಬಚ್ಚನ್ ಕಿರುತೆರೆಯಲ್ಲಿ ಈಗಾಗಲೇ ಮೆಚ್ಚುಗೆ ಪಡೆದ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಸತ್ಯಮೇವ ಜಯತೆ ಭಾರತದ ಕಿರುತೆರೆಯಲ್ಲೇ ವಿನೂತನ ಪ್ರಯೋಗ, ಇಂತಹ ಪ್ರಯತ್ನವನ್ನು ಯಾರೂ ಇದುವರೆಗೆ ಮಾಡಿಲ್ಲ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಅಗತ್ಯವಿಲ್ಲ.
 
ಆರು ನೂರು ಕೋಟಿ ರೂಪಾಯಿಗಳನ್ನು ಪ್ರಾಯೋಜಕತ್ವ ಕೊಡುವವರು, ಬ್ಲಾಗುಗಳಲ್ಲಿ ಪುಕ್ಕಟೆ ಅಭಿಪ್ರಾಯಗಳನ್ನು ಹಂಚುವವರು ಅಮೀರ್‌ಖಾನ್ ಪರವಾಗಿ ಪ್ರಚಾರಕ್ಕೆ ನಿಂತಿದ್ದಾರೆ. ಸತ್ಯಮೇವ ಜಯತೆಗೆ ಪ್ರಚಾರ ತಾನಾಗಿಯೇ ಹರಿದು ಬರುತ್ತಿದೆ. ಆದರೆ ಪ್ರಾದೇಶಿಕ ಭಾಷೆಗಳಲ್ಲಿ ಇದೇ ರೀತಿಯ ಕಾರ್ಯಕ್ರಮಗಳು ಈಗಾಗಲೇ ಬಂದಿರುವುದನ್ನು ಎಲ್ಲರೂ ಕ್ಷಣಕ್ಕೆ ಮರೆಯುತ್ತಾರೆ.

ತಮಿಳಿನಲ್ಲಿ ಖ್ಯಾತ ತಾರೆಯರು ಈ ರೀತಿಯ ಕೌನ್ಸೆಲಿಂಗ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ ಕೊಟ್ಟಿದ್ದಾರೆ. ನಟಿ ಲಕ್ಷ್ಮಿ, ಕಿರುತೆರೆ ನಟಿ ಮಾಳವಿಕಾ ಇವರೆಲ್ಲಾ ಕನ್ನಡದ ಕಿರುತೆರೆಯಲ್ಲಿ ಜನರ ಸಮಸ್ಯೆಗಳನ್ನು ಹೇಳುವುದು, ಗಂಡ - ಹೆಂಡಿರ ಭಿನ್ನಾಭಿಪ್ರಾಯವನ್ನು ಬಗೆಹರಿಸಲು ಯತ್ನಿಸಿ, ಒಂದುಗೂಡಿಸುವ ಪರಿಹಾರ ನೀಡುವುದು ಮೊದಲಾದವನ್ನೆಲ್ಲಾ ಚೆನ್ನಾಗಿಯೇ ನಿರ್ವಹಿಸಿದ್ದಾರೆ.

ನಮ್ಮವರು ಮಾಡಿದ್ದು ನಮಗೆ ಕಾಣುವುದೇ ಇಲ್ಲ. ಅಮೀರ್‌ಖಾನ್‌ಗೆ ಪ್ರಚಾರದ ಬಲ ಎಷ್ಟು ಪ್ರಬಲವಾಗಿದೆ ಎಂದರೆ ಸತ್ಯಮೇವ ಜಯತೆಯನ್ನು ಭಾರತದ ಎಲ್ಲ ಭಾಷಾ ಚಾನಲ್‌ಗಳಲ್ಲಿ ಡಬ್ ಮಾಡಿ ಪ್ರಸಾರ ಮಾಡಬೇಕು ಎಂಬ ಒತ್ತಡವಿದೆ (ಟಿ. ಆರ್. ಪಿ., ಜಾಹೀರಾತು ಲೂಟಿ ಮಾಡುವ ತಂತ್ರ ಇದು ಎನ್ನುವುದನ್ನು ಅಮೀರ್‌ಖಾನ್‌ನ ಗುಣಗಾನದಲ್ಲಿ ಎಲ್ಲರೂ ಮರೆಯುತ್ತಾರೆ).
 
ಟಿ ವಿ ಲೋಕದ ಮೇಲೆ ಸ್ವಾಮ್ಯ ಹೊಂದಿದ ಸ್ಟಾರ್ ಸಮೂಹದ ಚಾನಲ್‌ಗೆ ಇದು ಸುಲಭದ ಕೆಲಸ. ಕನ್ನಡದಲ್ಲೂ ಅಮೀರ್‌ಖಾನ್ ಅವರ ಈ ವರದಿಗಳನ್ನು ಡಬ್ ಮಾಡುವ ವಾಹಿನಿಯೊಂದರ ಪ್ರಯತ್ನಕ್ಕೆ ಶಿವರಾಜ್ ಕುಮಾರ್ ಕತ್ತರಿ ಹಾಕಿದರು. ಆದರೆ ಇದು ಕನ್ನಡದಲ್ಲಿ ಡಬ್ಬಿಂಗ್ ಬೇಕು, ಬೇಡ ಎನ್ನುವ ವಿವಾದ ಮತ್ತೆ ಭುಗಿಲೆದ್ದು ಚರ್ಚೆಗೆ ಒಳಗಾಗುವಂತೆ ಮಾಡಿತು.
 
ಪುನೀತ್ ಕೋಟ್ಯಾಧಿಪತಿಯನ್ನು ಸಮರ್ಥವಾಗಿಯೇ ನಿಭಾಯಿಸಬಹುದಾದರೆ, ಅಮಿತಾಭ್‌ರ ಕೌನ್ ಬನೇಗಾ ಕರೋಡ್‌ಪತಿಯನ್ನು ಡಬ್ ಮಾಡಬೇಕೇಕೆ? ಸಾಮಾಜಿಕ ಕಾಳಜಿಯ ವಸ್ತುಗಳನ್ನು ತೆಗೆದುಕೊಂಡು ಕನ್ನಡದ ನಟ - ನಟಿಯರೇ ಸಮಾಜ ಸುಧಾರಣೆಯ ಚಳವಳಿ ಆರಂಭಿಸುವುದಾದರೆ ಹಿಂದಿಯ ಅಮೀರ್‌ಖಾನ್ ಕನ್ನಡದಲ್ಲೇಕೆ ಮಾತನಾಡುವ ಶ್ರಮ ತೆಗೆದುಕೊಳ್ಳಬೇಕು?

ಹೆಣ್ಣು ಮಗು ಬೇಡ ಎಂದು ಮನೆಯಿಂದ ಹೊರದಬ್ಬಿದರು ಎಂದು ಮಹಿಳೆ ಅಳುವಾಗ, ಅಮೀರ್‌ಖಾನ್: `ಹೆಣ್ಣು ಮಗು ಆದರೆ ಅದರಲ್ಲಿ ಹೆಣ್ಣಿನ ದೋಷವೇನಿಲ್ಲ. ಇದು ಗಂಡನಿಂದ ಆಗುವ ಕ್ರಿಯೆ~ ಎಂದು ವಿವರಿಸುವುದು, ಭಾರತ ಮಾತೆ ಬರೀ ಗಂಡು ಮಕ್ಕಳೇ ಬೇಕೆನ್ನುತ್ತಾಳೆಯೇ?~ ಎನ್ನುವುದೆಲ್ಲಾ ಮನಮುಟ್ಟುವಂತೇ ಇದೆ. ವೈದ್ಯರ ಸಲಹೆ, ತಜ್ಞರ ಜೊತೆ ವೀಡಿಯೋ ಕಾನ್ಫರೆನ್ಸ್ ಮೊದಲಾದವನ್ನೆಲ್ಲಾ ವರದಿಗೆ ಪೂರಕವಾಗಿ ಅಮೀರ್‌ಖಾನ್ ಬಳಸುತ್ತಲೇ ಹೋಗುತ್ತಾರೆ.
 
ರಾಜಸ್ತಾನದ ಭ್ರೂಣ ಹತ್ಯೆಗೆ ಸಂಬಂಧಪಟ್ಟಂತೆ, ಸರ್ಕಾರಕ್ಕೆ ನಾನು ಪತ್ರ ಬರೆಯುತ್ತೇನೆ ಎಂದು ಹೇಳುತ್ತಾರೆ. ಜೊತೆಯಲ್ಲೇ `ನೀವೂ ಏರ್‌ಟೆಲ್ ಮೂಲಕ ಎಸ್.ಎಂ.ಎಸ್. ಕಳುಹಿಸಿ, ಕೇವಲ ಒಂದು ರೂಪಾಯಿ ಮಾತ್ರ~ ಎಂದು ಏರ್‌ಟೈಲ್ ಪರವಾಗಿ ವ್ಯಾಪಾರವನ್ನೂ ಮಾಡುತ್ತಾರೆ.

ರಿಲೆಯನ್ಸ್ ಫೌಂಡೇಷನ್, ಆ್ಯಕ್ಸಿಸ್ ಬ್ಯಾಂಕ್‌ಗಳ ಪರ ಪ್ರಚಾರವೂ ಇದರ ನಡುವೆ ಬರುತ್ತದೆ. ಸಮಸ್ಯೆಗಳನ್ನು ಅಮೀರ್‌ಖಾನ್ ಹೇಳುವಷ್ಟು ಸುಲಭವಾಗಿ ಪರಿಹರಿಸಲು ಸಾಧ್ಯವಾಗಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಯೋಚನೆ ಮಾಡಿ. ಒಂದು ಹೆಣ್ಣು ಅಮೀರ್‌ಖಾನ್ ಮುಂದೆ ಕುಳಿತು ತನ್ನ ಜೀವನದ ಘೋರ ಕತೆಯನ್ನು ನಿರೂಪಿಸುತ್ತಾ ಹೋಗುವುದು, ಅದಕ್ಕೆ ಅಮೀರ್ ಲೊಚಗುಟ್ಟುವುದು, ಎದುರು ಕುಳಿತ ಆಹ್ವಾನಿತ ಸಾರ್ವಜನಿಕರು ಕಣ್ಣೀರು ಒರೆಸಿಕೊಳ್ಳುತ್ತಲೇ ಇರುವುದು  ಸಮಸ್ಯೆಯ ಸರಳೀಕರಣವಾಗುತ್ತದೆಯೇ ಹೊರತು ಪರಿಹಾರದ ಹಾದಿಯನ್ನು ಹುಡುಕಿ ಕೊಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT