ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆವಿಷ್ಕಾರ: ಸಾಮಾಜಿಕ ಕ್ಷೇತ್ರಕ್ಕೂ ಇರಲಿ ಪುರಸ್ಕಾರ

Last Updated 23 ಜುಲೈ 2012, 19:30 IST
ಅಕ್ಷರ ಗಾತ್ರ

`ಆವಿಷ್ಕಾರ~ ಎಂಬುದು ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತಮುತ್ತ ಕೇಳಿಬರುತ್ತಿರುವ ಪದ. ಕಾರ್ಪೊರೇಟ್ ಕುಳಗಳು, ಸ್ವಯಂಸೇವಾ ಸಂಸ್ಥೆಗಳು, ಅಷ್ಟೇ ಏಕೆ ಸರ್ಕಾರ ಸಹ ಈ ಪದವನ್ನು ಪದೇ ಪದೇ ಬಳಸುತ್ತಿದೆ. ಕೇಂದ್ರ ಸರ್ಕಾರವಂತೂ ಈ ಉದ್ದೇಶಕ್ಕಾಗಿ ರಾಷ್ಟ್ರೀಯ ಆವಿಷ್ಕಾರ ಮಂಡಳಿಯನ್ನೇ ಸ್ಥಾಪಿಸಿದೆ.
 
ಕರ್ನಾಟಕ ಸರ್ಕಾರವೂ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಈ ಬಗೆಯ ಮಂಡಳಿಯನ್ನು ಅಸ್ತಿತ್ವಕ್ಕೆ ತರುವ ಬಗ್ಗೆ ಅದೂ ಚಿಂತನೆ ನಡೆಸುತ್ತಿದೆ. ಕಳೆದ ಹಲವಾರು ತಿಂಗಳುಗಳಿಂದ ಸರ್ಕಾರ ಹಾಗೂ ಖಾಸಗಿ ಕ್ಷೇತ್ರ ಎರಡರಿಂದಲೂ ಸಾಕಷ್ಟು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ನನಗೆ ಆಹ್ವಾನ ಬಂದಿತ್ತು.

ಈ ಎಲ್ಲ ಕಡೆಯೂ ಆವಿಷ್ಕಾರವೇ ಸಾಮಾನ್ಯ ವಿಷಯ ಆಗಿದ್ದರೂ, ಇವರಲ್ಲಿ ಬಹುತೇಕರು ಬರೀ ಉದ್ದಿಮೆ ಮತ್ತು ತಾಂತ್ರಿಕ ವಲಯದ ಆವಿಷ್ಕಾರಕ್ಕೆ ಮಾತ್ರ ಒತ್ತು ನೀಡಿರುವುದು ನನ್ನನ್ನು ಚಿಂತೆಗೀಡು ಮಾಡಿತು. ಉತ್ಪಾದನೆ ಮತ್ತು ಸೇವಾ ಕ್ಷೇತ್ರದಲ್ಲಿ ಆವಿಷ್ಕಾರ ಹೆಚ್ಚಾಗಿ ಕೇಳಿಬರುತ್ತಿದೆ. ಆದರೆ ಸಾಮಾಜಿಕ ವಲಯದಲ್ಲೂ ಆವಿಷ್ಕಾರ ಸಾಧ್ಯ ಎಂಬುದು ಹಲವರಿಗೆ ತಿಳಿದೇ ಇಲ್ಲದಿರುವುದು ಅಚ್ಚರಿಯ ಸಂಗತಿ.

`ಎಕನಾಮಿಸ್ಟ್~ ನಿಯತಕಾಲಿಕದ ಪ್ರಕಾರ ಆವಿಷ್ಕಾರ ಎಂದರೆ `ಐಶ್ವರ್ಯ ಅಥವಾ ಸಾಮಾಜಿಕ ಅಭ್ಯುದಯವನ್ನು ಸೃಷ್ಟಿಸುವ ಹೊಸ ಉತ್ಪನ್ನಗಳು, ವಾಣಿಜ್ಯ ಪ್ರಕ್ರಿಯೆ ಅಥವಾ ಸಮಗ್ರ ಬದಲಾವಣೆಗಳು~.

ಇನ್ನೂ ಸರಳವಾಗಿ ಹೇಳುವುದಾದರೆ `ಮೌಲ್ಯ ಸೃಷ್ಟಿಸುವ ನವೀನ ಆಲೋಚನೆಗಳು~. ಜಾಗತಿಕ ಆರ್ಥಿಕ ಪ್ರಗತಿ ಮತ್ತು ಅಭಿವೃದ್ಧಿಯಲ್ಲಿ ಆವಿಷ್ಕಾರ ಒಂದು ಪ್ರಮುಖ ಚಾಲಕ ಬಲ ಎಂಬುದನ್ನು ನಾನೂ ಒಪ್ಪುತ್ತೇನೆ. ಆದರೆ ಅದರ ಅರ್ಥವನ್ನು ಕೇವಲ ಇಷ್ಟು ಸಂಕುಚಿತ ಮಟ್ಟಕ್ಕೆ ಮಿತಿಗೊಳಿಸುವುದು ಸರಿಯೇ?

ಈಗಿರುವ ಆವಿಷ್ಕಾರ ಅಂತಿಮವಾಗಿ ಅದರ ಬಳಕೆದಾರರಿಗಿಂತ ಹೆಚ್ಚಾಗಿ, ಮಿತಿಗೊಳಪಟ್ಟ ಮಾನವ ಸಂಪನ್ಮೂಲ, ಜ್ಞಾನ ಪರಿಣತಿ, ಕಂಪೆನಿ ಪ್ರಣೀತ, ವೈಯಕ್ತಿಕ ಮಟ್ಟದಲ್ಲಿ ಆಗುವ ಆವಿಷ್ಕಾರಗಳು ಅಥವಾ ವಿಶೇಷವಾದ ಸಂಶೋಧಕರಿಗೆ ಸೀಮಿತವಾಗಿದೆ. ಸ್ಥೂಲವಾಗಿ ಹೇಳುವುದಾದರೆ, ಈಗಾಗಲೇ ಇರುವ ಪ್ರಕ್ರಿಯೆಯನ್ನು ನವೀಕರಿಸುವುದನ್ನೇ ನಾವು ಆವಿಷ್ಕಾರ ಎಂದು ಹೇಳುತ್ತಿದ್ದೇವೆ.
 
ಅದು ಒಂದು ಚಿಂತನಾ ಧಾಟಿಯಲ್ಲಿ ಆಗುವ ಬದಲಾವಣೆ ಆಗಬಹುದು ಅಥವಾ ಹಂತಹಂತವಾಗಿ ಆಗುವ ಹೆಚ್ಚುವರಿ ಲಾಭದಾಯಕ ಪ್ರಕ್ರಿಯೆ ಅಥವಾ ತಾರ್ಕಿಕವಾಗಿ ಆಗುವ ಬದಲಾವಣೆ ಆಗಿರಬಹುದು. ಆದರೂ ಈ ಪದ ಕೇವಲ ಉದ್ದಿವೆು ಮತ್ತು ತಾಂತ್ರಿಕ ಕ್ಷೇತ್ರಕ್ಕೆ ಮಾತ್ರ ಸೀಮಿತ ಆಗಿದ್ದು ಹೇಗೆ?

ಇದನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದರೆ 1942ರಲ್ಲಿ ಜೋಸೆಫ್ ಶುಮ್‌ಪೀಟರ್ ಅವರು ಬರೆದ `ಕ್ಯಾಪಿಟಲಿಸ್ಟ್, ಸೋಷಿಯಲಿಸ್ಟ್ ಅಂಡ್ ಡೆಮಾಕ್ರಸಿ~ ಎಂಬ ಜನಪ್ರಿಯ ಪುಸ್ತಕವನ್ನು ಅವಲೋಕಿಸಬೇಕಾಗುತ್ತದೆ.
 
ಬಹುಶಃ ಆವಿಷ್ಕಾರ ಮತ್ತು ಆರ್ಥಿಕತೆಯ ನಡುವಿನ ಸಂಬಂಧವನ್ನು ಮೊದಲ ಬಾರಿಗೆ ಅತ್ಯಂತ ಪ್ರಬಲವಾಗಿ ಪ್ರತಿಪಾದಿಸಿದ ಪುಸ್ತಕ ಅದು. `ಆರ್ಥಿಕ ಆವಿಷ್ಕಾರ~ದ ನುಡಿಗಟ್ಟು ಹುಟ್ಟಿದ್ದು ಸಹ ಆಗಲೇ ಇರಬೇಕು.
 
ಆವಿಷ್ಕಾರ ಎನ್ನುವುದನ್ನು ತಂತ್ರಜ್ಞಾನ ಮತ್ತು ಉದ್ದಿಮೆಗೆ ಸಂಬಂಧಿಸಿದ ಒಂದು ಪ್ರಕ್ರಿಯೆಯಾಗಿ ನೋಡುವುದು ರೂಢಿಯಾಗಿ, ಅದರ ಅರ್ಥ ಇನ್ನೂ ವಿಶಾಲವಾದದ್ದು ಎನ್ನುವುದೇ ಮರೆತುಹೋಯಿತು.

ಈಗ ಆವಿಷ್ಕಾರ ಎನ್ನುವುದನ್ನು ನಮ್ಮ ರಾಷ್ಟ್ರದ ಸನ್ನಿವೇಶಗಳ ಸಂದರ್ಭಕ್ಕೆ ಕೇಂದ್ರೀಕರಿಸಲು ಗಮನ ನೀಡೋಣ. ದೇಶ ದಾಖಲಿಸುತ್ತಿರುವ ಶೇ 8ರಷ್ಟು ಬೆಳವಣಿಗೆಯಿಂದಾಗಿ ಉದ್ಭವಿಸಿರುವ ಸಾಮಾಜಿಕ ಮತ್ತು ಆರ್ಥಿಕ ನ್ಯಾಯದ ಬೇಡಿಕೆಗಳ ಹಿನ್ನೆಲೆಯಲ್ಲಿ ಇದನ್ನು ವಿಶ್ಲೇಷಿಸೋಣ. ಸಾಮಾಜಿಕ ವಲಯದಲ್ಲಿ ಆವಿಷ್ಕಾರ ಎನ್ನುವುದು ಕೇವಲ ಭ್ರಮೆಯೇ ಅಥವಾ ಅದು ನಮ್ಮ ಅಸಂಖ್ಯಾತ ಸಮಸ್ಯೆಗಳಿಗೆ ಉತ್ತರ ನೀಡುವಂತಹ ದಿವ್ಯೌಷಧಿಯೇ?

ಕಣ್ಣಿಗೆ ರಾಚುತ್ತಿರುವ ಆರ್ಥಿಕ ಬೆಳವಣಿಗೆಯ ಜೊತೆಜೊತೆಗೇ ಹೆಚ್ಚುತ್ತಿರುವ ಅಂತರಗಳನ್ನು ಕಡಿಮೆ ಮಾಡಲು ಇದು ಸಹಾಯಕ ಆಗಬಹುದೇ? ಹೆಚ್ಚುತ್ತಿರುವ ಸಂಘರ್ಷಗಳು, ಸರ್ಕಾರ, ಸ್ವಯಂ ಸೇವಾ ಸಂಸ್ಥೆಗಳು ಮತ್ತು ಖಾಸಗಿ ವಲಯದ ಪಾತ್ರ ಬದಲಾಗುತ್ತಿರುವ ಇಂದಿನ ದಿನಮಾನದಲ್ಲಿ ಆವಿಷ್ಕಾರವನ್ನು ಹೇಗೆ ಅರ್ಥೈಸಿಕೊಳ್ಳಬೇಕು?
 
ಸಾಮಾಜಿಕ ವಲಯದ ಆವಿಷ್ಕಾರಕ್ಕೂ ಅದೇ ಆರ್ಥಿಕತೆಯೇ ಪ್ರಮುಖ ಮಾನದಂಡ ಆಗಬೇಕೇ? ಇಂತಹ ಪ್ರಶ್ನೆಗಳು ಕಗ್ಗಂಟಾಗಿ ನಮ್ಮನ್ನೆಲ್ಲಾ ಕಾಡುತ್ತವೆ. ವಿಶೇಷವಾಗಿ, ಆವಿಷ್ಕಾರದ ಕೊರತೆಯ ಪರಿಣಾಮ ಖುದ್ದಾಗಿ ಗೊತ್ತಾಗುವ ತಳಮಟ್ಟದಲ್ಲಿ ಕೆಲಸ ಮಾಡುವವರಿಗಂತೂ ಇದು ಇನ್ನಷ್ಟು ಕಾಡುತ್ತದೆ.

ಖಾಸಗಿ ಕ್ಷೇತ್ರದ ಬಹಳಷ್ಟು ಮಂದಿ ಬದಲಾವಣೆಗೆ ತೆರೆದುಕೊಳ್ಳುವುದಕ್ಕೆ ಕಾರಣ ಏನು? ಇಲ್ಲಿ ತುಂಬಾ ಸರಳವಾಗಿ ಮೇಲ್ನೋಟಕ್ಕೆ ಗೊತ್ತಾಗುವ ಸತ್ಯವೆಂದರೆ ಸ್ಪರ್ಧಾತ್ಮಕತೆ, ಲಾಭದಾಯಕತೆ, ಉತ್ಪನ್ನ ಮತ್ತು ಸೇವೆಯ ದರವನ್ನು ಕಡಿಮೆ ಮಾಡಬೇಕೆಂಬ ತುಡಿತ ಅವರು ಹೊಸತನ ಬಯಸುವಂತೆ ಮಾಡುತ್ತದೆ.

ಸರ್ಕಾರಿ ವಲಯದಲ್ಲಿ ಈ ಅಂಶಗಳ ಕೊರತೆ ಎದ್ದು ಕಾಣುತ್ತದೆ. ವಿಶೇಷವಾಗಿ ಭಾರತದ ಸಂದರ್ಭದಲ್ಲಿ, ಸಾಮಾಜಿಕ ಪ್ರಗತಿಯಲ್ಲಿ ಏಕಸ್ವಾಮ್ಯ ಹೊಂದಿರುವ ಸರ್ಕಾರಗಳಿಗೆ ಸ್ಪರ್ಧಾತ್ಮಕವಾಗಿ ಇರಬೇಕಾದ ಯಾವ ಜರೂರೂ ಇಲ್ಲ.
 
ನೀತಿಯಲ್ಲಿ ಆಗಿರುವ ಬದಲಾವಣೆ ಮತ್ತು ಆರ್ಥಿಕ ನೆರವಿಗೆ ಸರ್ಕಾರವನ್ನೇ ಅವಲಂಬಿಸಬೇಕಾದ ಕಾರಣದಿಂದ ಈ ವಿಷಯದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಈ ಮೊದಲು ಸ್ವತಃ ಸೃಷ್ಟಿಸಿಕೊಂಡಿದ್ದ ಅವಕಾಶಗಳೂ ಇಲ್ಲದಂತಾಗಿ ಸರ್ಕಾರದ ವಶವಾಗಿಬಿಟ್ಟಿವೆ. ಸೇವೆಯನ್ನು ನೇರವಾಗಿ ಒದಗಿಸುವುದರ ಬದಲು ಸ್ವಯಸೇವಾ ಸಂಸ್ಥೆಗಳ ಮೂಲಕ ಒದಗಿಸುವುದೇ ಸರ್ಕಾರ ಈಗ ಮಾತನಾಡುತ್ತಿರುವ ಏಕೈಕ ಆವಿಷ್ಕಾರದ ವಿಷಯ.

ಸರ್ಕಾರದ ಸಂರಚನೆ ಮತ್ತು ಕಾರ್ಯವಿಧಾನದಲ್ಲೇ ಲಾಭದಾಯಕತೆಗೆ ಅವಕಾಶವಿಲ್ಲ. ವಿವಿಧ ರಾಜಕೀಯ ಒತ್ತಡಗಳ ನಡುವೆ ಕಾರ್ಯ ನಿರ್ವಹಿಸುವ ಭಾರತದಲ್ಲಂತೂ ಇದೊಂದು ನಕಾರಾತ್ಮಕ ಅಂಶವೇ ಆಗಿದೆ.

ಈ ಧೋರಣೆ ಸ್ವಯಸೇವಾ ಸಂಸ್ಥೆಗಳ ಆವಿಷ್ಕಾರಶೀಲತೆಯನ್ನೇ ಕಿತ್ತುಕೊಂಡು ಪ್ರತಿಸ್ಪಂದನೆಯೇ ಇಲ್ಲದೆ ಅನಿವಾರ್ಯವಾಗಿ ಸರ್ಕಾರದ ನೀತಿಗಳ ಜೊತೆ ಬಡಿದಾಡಬೇಕಾದ ಪರಿಸ್ಥಿತಿ ನಿರ್ಮಿಸಿದೆ. ಅವರನ್ನು ಗುತ್ತಿಗೆದಾರರನ್ನಾಗಿ ಸೀಮಿತಗೊಳಿಸಿದೆ.

1960- 70ರ ದಶಕದಲ್ಲಿ ಸರ್ಕಾರ ಸ್ಥಾಪಿಸಿದ ಹಲವಾರು ಉದ್ದಿಮೆಗಳು ಇಂದು ತಮ್ಮ ಸಿಬ್ಬಂದಿಗೆ ವೇತನ ಕೊಡುವ ಸಲುವಾಗಿಯೇ ಇವೆಯೇನೋ ಮತ್ತು ರಾಜಕಾರಣಿಗಳು ತಮ್ಮ ಅನುಯಾಯಿಗಳಿಗೆ ಕೃಪೆ ತೋರುವುದಕ್ಕಾಗಿಯೇ ಕಾರ್ಯನಿರ್ವಹಿಸುತ್ತಿವೆಯೇನೋ ಎಂಬಂತೆ ತೋರುತ್ತಿವೆ.

`ಕೇಂದ್ರ ಸರ್ಕಾರ ಅಭಿವೃದ್ಧಿಗಾಗಿ ವ್ಯಯಿಸುವ ಪ್ರತಿ 100 ರೂಪಾಯಿಯಲ್ಲಿ ಕೇವಲ 15 ರೂಪಾಯಿ ಸಂಬಂಧಪಟ್ಟವರನ್ನು ತಲುಪುತ್ತಿದೆ~ ಎಂದು ಹಲವು ವರ್ಷಗಳ ಹಿಂದೆ ಆಗಿನ ಪ್ರಧಾನಿ ರಾಜೀವ್ ಗಾಂಧಿ ಸಂಸತ್ತಿನಲ್ಲಿ ವಿಷಾದಿಸಿದ್ದರು.

ಯಾವುದೇ ಒಂದು ವ್ಯವಸ್ಥೆಯಲ್ಲಿ ಫಲಾನುಭವಿಗಳನ್ನು ತಲುಪುವ ಮೊದಲೆ ಮಾರ್ಗ ಮಧ್ಯೆಯೇ ಶೇ 85ರಷ್ಟು ಸೋರಿಕೆಯಾದರೆ ಆವಿಷ್ಕಾರ ಹೇಗೆ ಸಾಧ್ಯವಾಗುತ್ತದೆ?

ಯೋಜನಾ ಆಯೋಗದ ಪ್ರಗತಿ ಮೌಲ್ಯಮಾಪನ ಸಂಸ್ಥೆಯ ಪ್ರಕಾರ, ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಒಂದು ಕೆ.ಜಿ ಆಹಾರಧಾನ್ಯಕ್ಕೆ 5.46 ರೂಪಾಯಿ ಉದ್ದೇಶಿತ ಸಬ್ಸಿಡಿ ನೀಡಲು ಸರ್ಕಾರ ಒಂದು ಕೆ.ಜಿ ಅಕ್ಕಿಯ ಮೇಲೆ 13.31 ರೂಪಾಯಿಯನ್ನು ಅನುದ್ದೇಶಿತ ಸಬ್ಸಿಡಿಗಾಗಿ ವ್ಯಯಿಸುತ್ತಿದೆ.

ಈ ರೀತಿಯ ಆಡಳಿತ ಲೋಪ ಮತ್ತು ಅದಕ್ಷತೆ ಇರುವ ಈ ಕ್ಷೇತ್ರದಲ್ಲಿ ಸುಧಾರಣೆ ತರಲು ಯಾವ ಮಟ್ಟಿಗಿನ ಆವಿಷ್ಕಾರದ ಅಗತ್ಯ ಇದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಈ ಸ್ಥಿತಿಯನ್ನು ನೋಡಿದ ಮೇಲಾದರೂ ಸರ್ಕಾರ ಮತ್ತು ಸಾರ್ವಜನಿಕ ವಲಯ ತಾವೇನು ಮಾಡುತ್ತಿದ್ದೇವೆ ಎಂಬುದರ ಪರಾಮರ್ಶೆ ಮಾಡಿಕೊಳ್ಳಬೇಕಾಗುತ್ತದೆ.

ಬಡತನದ ಬೇಗೆಯಿಂದ ಹೊರಬರಲು ಯಾವುದಾದರೂ ಒತ್ತಾಸೆಗಾಗಿ ಹಂಬಲಿಸುತ್ತಿರುವ ದುರ್ಬಲರು ಮತ್ತು ಅವಕಾಶ ವಂಚಿತ ಸಹೋದರರಿಗಾಗಿ ಯಾರಾದರೂ ಪರಿಣಾಮಕಾರಿಯಾಗಿ ಉತ್ಪನ್ನಗಳು ಹಾಗೂ ಸೇವೆಯನ್ನು ತಲುಪಿಸಲು ಸಾಧ್ಯವೇ? ಸರ್ಕಾರ ಹೆಚ್ಚು ಸ್ಪರ್ಧಾತ್ಮಕ, ಕಡಿಮೆ ವ್ಯಯ ಮತ್ತು ದಕ್ಷ ವ್ಯವಸ್ಥೆಯ ಅಡಿಯಲ್ಲಿ ಏನೆಲ್ಲಾ ಮಾಡಬಹುದು, ಎಷ್ಟೆಲ್ಲಾ ಸಾಧಿಸಬಹುದು ಎಂಬುದನ್ನು ಕಲ್ಪಿಸಿಕೊಳ್ಳಿ.
ನಿಜವಾಗಿಯೂ ಅಗತ್ಯ ಇರುವ ಲಕ್ಷಾಂತರ ಜನರನ್ನು ತಲುಪಬಹುದು, ವ್ಯವಸ್ಥೆಯನ್ನು ಹೆಚ್ಚು ಸ್ಪಂದನಶೀಲ, ಉತ್ತರದಾಯಿತ್ವ ಮತ್ತು ಜವಾಬ್ದಾರಿಯುತಗೊಳಿಸುವ ಮೂಲಕ ನಿರಂತರವಾಗಿ ಏರುತ್ತಿರುವ ಅಸಮಾನತೆಯ ಅಗಾಧ ಅಂತರವನ್ನು ಕಡಿಮೆ ಮಾಡಬಹುದು.

ಆದರೆ ಇದು ಏಕಾಂಗಿಯಾಗಿ ಆಗಲು ಸಾಧ್ಯವೇ? ಹಲವಾರು ದಶಕಗಳಿಂದ ಅದಕ್ಷತೆಗೇ ಹೊಂದಿಕೊಂಡಿರುವ ಆಡಳಿತ ಯಂತ್ರದ ಧೋರಣೆ ಮತ್ತು ಕಾರ್ಯವಿಧಾನವನ್ನು ಬದಲಿಸಲು ಸಾಧ್ಯವೇ? ನನ್ನ ಪ್ರಕಾರ, ಪ್ರಜ್ಞಾವಂತ ನಾಗರಿಕರು ಮತ್ತು ನಾಗರಿಕ ಸಮಾಜ ಮಾತ್ರ ಈ ರೂಪಾಂತರ ಹೊಂದುವಂತೆ ಸರ್ಕಾರದ ಮೇಲೆ ಒತ್ತಡ ತರಬಲ್ಲರು.
 
ಹೀಗಾಗಿ ಸರ್ಕಾರಿ- ಖಾಸಗಿ ಸಹಭಾಗಿತ್ವದ ಅಗತ್ಯ ನಮಗಿದೆ. ಈಗ ಈ ಸಹಭಾಗಿತ್ವವು ಮೂಲಸೌಲಭ್ಯ ಸೃಷ್ಟಿ ಮತ್ತು ಬಂದರು, ವಿಮಾನ ನಿಲ್ದಾಣ, ಟೋಲ್ ರಸ್ತೆ ನಿರ್ಮಾಣದಂತಹ ಲಾಭದಾಯಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಕ್ಕಷ್ಟೇ ಸೀಮಿತಗೊಂಡಿದೆ.

ಖಾಸಗಿ ಕ್ಷೇತ್ರ ಕೂಡ ಸಾಮಾಜಿಕ ಪ್ರಜ್ಞೆ ಬೆಳೆಸಿಕೊಂಡು ತನ್ನಲ್ಲಿರುವ ಸ್ಪರ್ಧಾತ್ಮಕತೆ, ಕೌಶಲ ಹಾಗೂ ಜ್ಞಾನವನ್ನು ಸರ್ಕಾರಿ ಕ್ಷೇತ್ರದೊಂದಿಗೆ ಹಂಚಿಕೊಳ್ಳಬೇಕು. ಹಲವು ಬೃಹತ್ ಕಂಪೆನಿಗಳು ಉತ್ತಮ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿವೆ.
 
ಕರ್ನಾಟಕ ಸರ್ಕಾರ ತನ್ನ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಆಹಾರಧಾನ್ಯ ತಲುಪಿಸಲು ಇನ್ನೂ ಮಾನವ ಸಂಪನ್ಮೂಲ ಸಿಬ್ಬಂದಿಯನ್ನೇ ನೆಚ್ಚಿಕೊಂಡು ಪರದಾಡುತ್ತಿರುವಾಗ, ದೊಡ್ಡ ದೊಡ್ಡ ಖಾಸಗಿ ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ನೂರಾರು ಕಿ.ಮೀ ದೂರದ ಮಳಿಗೆಗಳಿಗೂ ನಿರಾಯಾಸವಾಗಿ ಸಾಗಿಸಿ ಅವು ಅಲ್ಲಿ ಲಭ್ಯವಾಗುವಂತೆ ಮಾಡಿರುವುದಕ್ಕೆ ಏನೆನ್ನಬೇಕೋ ತಿಳಿಯುವುದಿಲ್ಲ."
 
ಇಂತಹ ಸಂದರ್ಭದಲ್ಲಿ, ಒಂದು ಖಾಸಗಿ ರೀಟೇಲ್ ಮಳಿಗೆ ತಾನು ಹೇಗೆ ಉತ್ಪನ್ನಗಳ ಸಾಗಣೆ ಮಾಡುತ್ತಿದೆ ಎನ್ನುವುದನ್ನು ಸಕಾರದ ಜೊತೆ ಹಂಚಿಕೊಂಡರೆ ಎಷ್ಟು ಸುಲಭವಾಗುತ್ತದೆ ಅಲ್ಲವೇ?

ದೇಶದ ಸರ್ಕಾರಿ ಸ್ವಾಮ್ಯದ ಮುಂದೆ ಇರುವ ದೊಡ್ಡ ಸವಾಲೆಂದರೆ ಉತ್ಪನ್ನಗಳನ್ನು ಕಟ್ಟಕಡೆಯ ವ್ಯಕ್ತಿಗೂ ಹೇಗೆ ತಲುಪಿಸಬೇಕು ಎಂಬುದು. ಆರೋಗ್ಯ, ಶಿಕ್ಷಣ, ಸಾಮಾಜಿಕ ಕ್ಷೇತ್ರ ಎಲ್ಲದಕ್ಕೂ ಇದು ಅನ್ವಯಿಸುತ್ತದೆ.
 
ಇಡೀ ಸಮುದಾಯದ ಪಾಲುದಾರಿಕೆ, ದಕ್ಷ ಆಡಳಿತ, ತಂತ್ರಜ್ಞಾನ, ಖಾಸಗಿ ಕ್ಷೇತ್ರದ ಸ್ಪರ್ಧಾತ್ಮಕತೆ ಇವೆಲ್ಲವನ್ನೂ ಒಳಗೊಂಡು ನಾವು ಹೊಸ ಬಗೆಯಲ್ಲಿ ಚಿಂತಿಸಿದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಬಹಳ ತೀವ್ರವಾಗಿ ಉಪೇಕ್ಷೆಗೆ ಒಳಗಾದ, ಆದರೆ ಆವಿಷ್ಕಾರಕ್ಕೆ ಅತ್ಯಂತ ಹೆಚ್ಚು ಅವಕಾಶ ಇರುವ ವಲಯವೆಂದರೆ ಒಂದು ಸಮದಾಯ ತನ್ನ ಅಭಿವೃದ್ಧಿಯಲ್ಲಿ ತಾನೇ ಪಾಲ್ಗೊಳ್ಳುವಂತೆ ಮಾಡುವುದು.

ಶಾಸನಬದ್ಧ ನಿಯಮಾವಳಿ ಮೂಲಕವೇ ಸಮುದಾಯಗಳನ್ನು ಸ್ಥಳೀಯ ಅಭಿವೃದ್ಧಿ ಯೋಜನೆಗಳ ಮೇಲ್ವಿಚಾರಣೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬಹುದು. ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನೆ ಅಳವಡಿಸಲು ನಡೆದಿರುವ ಯತ್ನ ಈ ರೀತಿಯ ಒಂದು ಆವಿಷ್ಕಾರ.

ಸಮುದಾಯಗಳಿಗೇ ಮೂಲ ಸೌಕರ್ಯ ಸೃಷ್ಟಿಯ ಗುತ್ತಿಗೆ ವಹಿಸುವುದು ಮತ್ತೊಂದು ಆವಿಷ್ಕಾರ ಆಗಬಹುದು. ಇದರಿಂದ ಮಧ್ಯವರ್ತಿಗಳ, ಆಸೆಬುರುಕ ಗುತ್ತಿಗೆದಾರರ ಹಾಗೂ ಲಂಚಕೋರ ಎಂಜಿನಿಯರುಗಳ ಹಾವಳಿಯನ್ನು ನಿಯಂತ್ರಿಸಬಹುದು. ಮಾಹಿತಿ ಲಭ್ಯವಾಗುವ ಆವಿಷ್ಕಾರ ಮಾಡಿದ್ದೇ ಆದರೆ ಅದು ಸದ್ಯ ಇರುವ ಅಂತರವನ್ನು ಹೋಗಲಾಡಿಸುವಲ್ಲಿ ಬಲು ಮಹತ್ವದ ಪಾತ್ರ ವಹಿಸುವ ಸಾಧ್ಯತೆ ಇದೆ.

ಆದರೆ ಕೇವಲ ಮಾಹಿತಿ ಹಕ್ಕು ಕಾಯ್ದೆಯೊಂದರಿಂದಲೇ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಿಲ್ಲ. ಬಿಹಾರವು ನಾಗರಿಕರಿಗೆ ಪ್ರಾಮಾಣಿಕವಾಗಿ ಹಾಗೂ ಸ್ಪಂದನಶೀಲವಾಗಿ ಮಾಹಿತಿ ತಲುಪಿಸಲು ಮೊಬೈಲ್ ತಂತ್ರಜ್ಞಾನ ಬಳಸಿಕೊಳ್ಳುತ್ತಿರುವುದು ಕೂಡ ಒಂದು ಆವಿಷ್ಕಾರವೇ ಆಗಿದೆ.

ಆವಿಷ್ಕಾರ ಎಂದರೆ ನಿರೀಕ್ಷೆಗಳಿಗೆ ಸ್ಪಂದಿಸಲು ಅಣಿಯಾಗುವುದು ಎಂದೇ ಅರ್ಥ. ಆದರೆ ಇದಕ್ಕೆ ಹೆಚ್ಚು ಧೈರ್ಯ ಬೇಕಾಗುತ್ತದೆ. ಇದರ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿ ಆವಿಷ್ಕಾರ ಮಾಡಬೇಕೆಂದರೆ ಸಾರ್ವಜನಿಕ ಸಂಸ್ಥೆಗಳು ಸಮುದಾಯದ ಅಹವಾಲುಗಳನ್ನು ಆಲಿಸುವ ಕಲೆಯನ್ನು ಕರಗತ ಮಾಡಿಕೊಂಡು, ಅದಕ್ಕೆ ಪೂರಕವಾಗಿ ಸ್ಪಂದಿಸಲು ತಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕಾಗುತ್ತದೆ.
 
ಅತ್ಯಾಧುನಿಕ ಆವಿಷ್ಕಾರ ಪ್ರಕ್ರಿಯೆಗಳನ್ನು ವ್ಯಾಪಕವಾಗಿ ಬಳಸಿಕೊಂಡರೆ ಅದರಿಂದ ಬಡವರು, ಅವಕಾಶ ವಂಚಿತರ ಸಾಮಾಜಿಕ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸಲು ಸಾಧ್ಯವಿದೆ.
 
ಸರ್ಕಾರ ಮತ್ತು ಸ್ವಯಂಸೇವಾ ಸಂಸ್ಥೆಗಳು ಈ ಆವಿಷ್ಕಾರ ಪ್ರಕ್ರಿಯೆಯ ಮಹತ್ವ ಏನೆಂಬುದನ್ನು ಅರಿತು ಅದನ್ನು ತಮ್ಮ ಸಂಸ್ಥೆಯ ಕಾರ್ಯವಿಧಾನದಲ್ಲಿ ಅಳವಡಿಸಿಕೊಳ್ಳಬೇಕು. ನಂತರ ಆರ್ಥಿಕ ವಂಚಿತರಿಗಾಗಿ ತಾವು ಒದಗಿಸುತ್ತಿರುವ ಸೇವೆಗಳ ಗುಣಮಟ್ಟ ಮತ್ತು ಪ್ರಮಾಣದಲ್ಲಿ ಅದು ಪ್ರತಿಬಿಂಬಿತವಾಗುವಂತೆ ಮಾಡಬೇಕು.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT