ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಅವಕಾಶ ಬಿಕ್ಕಟ್ಟಿಗೆ ಪರಿಹಾರ

Last Updated 11 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ನಾನೊಬ್ಬ ಗಾಲ್ಫ್‌ ಆಟಗಾರ. ಬೆಂಗಳೂರಿನ ಗಾಲ್ಫ್‌ ಕ್ಲಬ್‌ನಲ್ಲಿ ವಾರಕ್ಕೆರಡು ಬಾರಿ ಗಾಲ್ಫ್‌ ಆಡುವೆ. 18 ರಂಧ್ರಗಳ ಪೂರ್ಣ ಪ್ರಮಾಣದ ಆಟ ಪೂರ್ಣ­ಗೊಳ್ಳಲು ನಾಲ್ಕೂವರೆ ಗಂಟೆ ತೆಗೆದು­ಕೊಳ್ಳುತ್ತದೆ. ಈ ಆಟವು ಸಾಕಷ್ಟು ದೂರದ ನಡಿಗೆಯನ್ನೂ ಒಳಗೊಂಡಿ­ರುವುದರೊಂದಿಗೆ ಗಾಲ್ಫ್‌ ಕಿಟ್‌ ಜತೆಗೆ ಒಯ್ಯಲು ಸಹಾಯಕ­ನೊಬ್ಬನ (ಕ್ಯಾಡೀಸ್‌) ನೆರವು ಪಡೆ­ಯುವುದು ಅನಿವಾರ್ಯ­ವಾಗಿರುತ್ತದೆ. ಈ ಸಹಾಯಕರ ಕೆಲಸ ದೈಹಿಕ ಶ್ರಮ ಒಳಗೊಂಡಿದ್ದರೂ, ಅದಕ್ಕೆ ಅತಿ ಕಡಿಮೆ ಕೌಶಲ ಇದ್ದರೆ ಸಾಕು. ಪ್ರತಿಯೊಂದು ಕೆಲಸದಲ್ಲಿ ಕೆಲವು ಪರಿಣತರು ಇರುತ್ತಾರೆ. ಅವರು ತಮ್ಮ ಕೆಲಸದಲ್ಲಿ ಸಾಕಷ್ಟು ನೈಪುಣ್ಯತೆಯನ್ನೂ ಸಾಧಿಸಿ­ರುತ್ತಾರೆ. ಆದರೆ, ಇಂತಹ ಕುಶಲ­ಕರ್ಮಿಗಳ ಸಂಖ್ಯೆ ತುಂಬ ವಿರಳ­ವಾಗಿರುತ್ತದೆ. ಬೆಂಗಳೂರಿನ ಗಾಲ್ಫ್‌ ಕ್ಲಬ್‌­ಗಳಲ್ಲಿ  ಕೆಲಸ ಮಾಡುವ ಇಂತಹ ಸಹಾಯ­ಕ­ರಲ್ಲಿ  ಅಶಿಕ್ಷಿತರು ಇಲ್ಲವೇ ಅರ್ಧ­­ದಲ್ಲಿಯೇ ಶಿಕ್ಷಣ ತೊರೆದವರೇ ಹೆಚ್ಚು.

ಗಾಲ್ಫ್‌ ಆಡುವಾಗ ನನಗಾದ ವಿಚಿತ್ರ ಅನುಭವವೇ ನಾನು ಈ ಗಾಲ್ಫ್‌್ ಸಹಾಯಕರ ಬಗ್ಗೆ ಬರೆಯಲು ಪ್ರೇರಣೆ ನೀಡಿತು. ಇತ್ತೀಚೆಗೆ ನಾನು ಗಾಲ್ಫ್‌್ ಆಡುವಾಗ ನನಗೆ ಸಹಾಯಕ­ನಾಗಿ ಬಂದವ ಹೊಸಬನಾಗಿದ್ದ. ಆಕರ್ಷಕ ವ್ಯಕ್ತಿತ್ವದ ಯುವಕನ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ನಾನು ಕುತೂಹಲದಿಂದ ಆತನ ಶೈಕ್ಷಣಿಕ ಹಿನ್ನೆಲೆ ಬಗ್ಗೆ ಕೇಳಿದಾಗ ನನಗೆ ತುಂಬ ಆಶ್ಚರ್ಯವಾಯಿತು. ಆತ ಶಿವಮೊಗ್ಗದ ಎಂಜಿನಿ­ಯರಿಂಗ್‌ ಕಾಲೇಜ್‌ನ ಬಿ.ಇ. ಪದವೀಧರ. ಒಂದೂವರೆ ವರ್ಷದ ಹಿಂದೆಯೇ ವಿದ್ಯಾಭ್ಯಾಸ ಪೂರ್ಣ­ಗೊಳಿಸಿದ್ದರೂ ಕೆಲಸ ಸಿಗದೆ ನಿರುದ್ಯೋಗಿ­ಯಾಗಿ ಅಲೆಯುತ್ತಿದ್ದ. ಜೀವನೋಪಾಯಕ್ಕೆ ಪಾಲಕರ ಬಳಿ ಹಣಕ್ಕೆ ಕೈಚಾಚುವುದು ಸರಿಯಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದ ಆತ, ಗಾಲ್ಫ್‌ ಆಟಗಾರರ ಸಹಾಯಕನಾಗಿ ಕೆಲಸ ಮಾಡಲು ಮುಂದಾಗಿದ್ದ.

ಆತನ ಕತೆ ಕೇಳಿದ ನಾನು ನನ್ನ ಕಾರ್ಖಾನೆ­ಯಲ್ಲಿ ಕೆಲಸಕ್ಕೆ ಸೇರಿಸಿ­ಕೊಳ್ಳಲು ಬಯಸಿದೆ. ಎರಡು ದಿನಗಳ ನಂತರ ಕಾರ್ಖಾನೆಗೆ ಬಂದ ಆತನನ್ನು ನಾನು ನನ್ನ ಹಿರಿಯ ವ್ಯವಸ್ಥಾಪಕರಿಗೆ ಪರಿಚಯಿಸಿ ಆತನ ಜತೆ ಮಾತನಾಡಿ ಸೂಕ್ತ ಕೆಲಸ ಒದಗಿಸಿ ಕೊಡಲು ಸೂಚಿಸಿದೆ. ವಿವಿಧ ವಿಭಾ­ಗಗಳ ಮುಖ್ಯಸ್ಥರು ನಡೆಸಿದ ಪ್ರತ್ಯೇಕ ಸಂದರ್ಶನಗಳ ಕೊನೆಯಲ್ಲಿ, ನನ್ನ ಕಾರ್ಖಾ­ನೆಯ ಯಾವುದೇ ಒಂದು ವಿಭಾಗದ ಮುಖ್ಯಸ್ಥರೂ ಆತನನ್ನು ತಮ್ಮಲ್ಲಿ ಕೆಲಸಕ್ಕೆ ಸೇರಿಸಿ­ಕೊಳ್ಳಲು ಹಿಂದೇಟು ಹಾಕಿದ್ದು ನನ್ನ ಗಮನಕ್ಕೆ ಬಂದಿತು.

ಆತ ಕಾಲೇಜ್‌ನಲ್ಲಿ ಶೈಕ್ಷಣಿಕವಾಗಿ ಉತ್ತಮ ಫಲಿತಾಂಶ ತೋರಿದ್ದರೂ,  ಇತರ ಕೆಲಸಗಳನ್ನು ಮಾಡಲು ಸಂಪೂರ್ಣ­ವಾಗಿ ಅನರ್ಹನಾಗಿದ್ದ.  ನಮ್ಮ ಶಿಕ್ಷಣ ವ್ಯವಸ್ಥೆ ಅದೆಷ್ಟರ ಮಟ್ಟಿಗೆ ದಯ­ನೀಯ ಸ್ಥಿತಿಗೆ ತಲುಪಿದೆ ಮತ್ತು ಯುವ ಜನಾಂಗ­ವನ್ನು ಉದ್ಯೋಗಶೀಲ­ರನ್ನಾಗಿ ಮಾಡು­ವ­ಲ್ಲಿ­ಯೂ ಅದು ಸೋತಿರುವುದನ್ನು ಓದುಗರ ಗಮ­ನಕ್ಕೆ ತರುವ ಉದ್ದೇಶದಿಂದಲೇ ನಾನು ಇಲ್ಲಿ ನನಗಾದ ಅನುಭವ ಹಂಚಿಕೊಂಡಿರುವೆ. ಇಂತಹ ಅನೇಕ ಅನುಭವಗಳು ಅನೇಕರಿಗೆ ಆಗಿರಲಿಕ್ಕೂ ಸಾಕು.

ಕಾಲೇಜುಗಳಿಂದ ಹೊರ ಬರುವ ಪದವೀಧ­ರರಿಗೆ ತಕ್ಷಣಕ್ಕೆ ಉದ್ಯೋಗ ಅವಕಾಶ­ಗಳು ದೊರೆಯದ ಬಗ್ಗೆ ಅನೇಕ ಅಧ್ಯಯನಗಳು ಬೆಳಕು ಚೆಲ್ಲಿವೆ. ಭಾರತೀಯ ಕೈಗಾರಿಕಾ ಒಕ್ಕೂಟವು (ಸಿಐಐ) ವೀಬಾಕ್ಸ್‌ ಮತ್ತು ಪೀಪಲ್‌­ಸ್ಟ್ರಾಂಗ್‌ ಸಹಯೋಗದಲ್ಲಿ ಸಿದ್ಧಪ­ಡಿಸಿರುವ ‘ಭಾರತದ ಕೌಶಲ ವರದಿ–2014’, ಶೈಕ್ಷಣಿಕ ಅರ್ಹತೆ ಮತ್ತು ಉದ್ಯೋಗ ಅವಕಾಶಗಳ ಬಗ್ಗೆ ವಿಸ್ತೃತ ವಿವರಗಳನ್ನು ಒಳಗೊಂಡಿದೆ.

ಈ ವರದಿಯು  28 ರಾಜ್ಯಗಳು ಮತ್ತು ಏಳು ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಭಾರತದ ಎಲ್ಲ ಭೌಗೋಳಿಕ ವ್ಯಾಪ್ತಿ ಒಳ­ಗೊಂಡಿದೆ. ಒಂದು ಲಕ್ಷದಷ್ಟು ವಿದ್ಯಾರ್ಥಿಗಳು ನೀಡಿದ ಮಾಹಿತಿ ಆಧರಿಸಿದೆ. ಉದ್ಯೋಗ ಅವಕಾಶಕ್ಕೆ ಕಾದಿರುವ ನಿರುದ್ಯೋಗಿಗಳು ಮತ್ತು ಉದ್ಯೋಗ ನೀಡಲು ಮುಂದಾಗಿರುವ ಉದ್ದಿಮೆ ಸಂಸ್ಥೆಗಳು, ಸರ್ಕಾರಿ ಸಂಘಟನೆಗಳೂ ಈ ಅಧ್ಯಯನ ವರದಿಯಲ್ಲಿ ಪಾಲ್ಗೊಂಡಿದ್ದವು.
ಇಂತಹ ಮಹತ್ವದ ಅಧ್ಯಯನ ವರದಿ­ಯಲ್ಲಿನ ವಿವರಗಳನ್ನೆಲ್ಲ ಈ ಒಂದು ಅಂಕಣದಲ್ಲಿ ಬರೆಯಲು ಸಾಧ್ಯವಿಲ್ಲ. ವರದಿಯ ಕೆಲ ಮುಖ್ಯಾಂಶ­­ಗಳನ್ನು ಮಾತ್ರ ನಾನು ಇಲ್ಲಿ ಚರ್ಚಿಸಿರುವೆ. 2020ರ ವೇಳೆಗೆ ದೇಶದಲ್ಲಿ 80 ಕೋಟಿಯಷ್ಟು ಜನರು ದುಡಿಯುವ ವಯಸ್ಸಿನ­ರಾ­ಗಿರುತ್ತಾರೆ. ಇದು ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆಗೆ ಪ್ರಮುಖ ಎಂಜಿನ್‌ ಆಗಿಯೂ ಕಾರ್ಯನಿರ್ವಹಿಸಲಿದೆ.

ಭಾರತವು ಇಡೀ ವಿಶ್ವಕ್ಕೆ   ಮಾನವ ಸಂಪ­ನ್ಮೂಲದ ಪ್ರಮುಖ ಮೂಲವೂ ಆಗಿ­ರಲಿದೆ. ವ್ಯಕ್ತಿಗತ ಉದ್ಯೋಗ ಕೌಶಲವು ಉದ್ಯೋಗ ಅವಕಾಶಗಳಿಗೆ ಪೂರಕವಾಗಿರಲಿದೆ. ಕೌಶಲವು ಜ್ಞಾನದ ಮೂಲವಾಗಿಯೂ ಅಭಿವೃದ್ಧಿಗೆ ನೆರವಾಗಲಿದೆ. ಆದರೆ, ಕೌಶಲ ಮತ್ತು ಉದ್ಯೋಗ ಅವಕಾಶಗಳ ಮಧ್ಯದ ಅಂತರವು ಎಲ್ಲ ಕೈಗಾರಿಕಾ ವಲಯ­ಗಳಲ್ಲಿ ಶೇ 75ರಿಂದ ಶೇ 80ರಷ್ಟಿದೆ. ಈ ಅಗಾಧ ಪ್ರಮಾಣದ ಅಂತರವನ್ನು ಸೂಕ್ತವಾಗಿ ಭರ್ತಿ ಮಾಡದಿದ್ದರೆ ಒಟ್ಟಾರೆ ಅರ್ಥ ವ್ಯವಸ್ಥೆಗೆ ಅಪಾಯ ಕಾದಿದೆ.

ತಮಗೆ ಬೇಕಾದ ಪ್ರತಿಭಾನ್ವಿತರ ಪೈಕಿ ಶೇ 21ರಷ್ಟು ಮಾತ್ರ ದೊರೆ­ಯುತ್ತಾರೆ ಎಂದು ಉದ್ಯಮ ಮತ್ತು ವಹಿವಾಟು ವಲಯಗಳು ಹೇಳಿ­­ಕೊಂಡಿವೆ.  ರಾಷ್ಟ್ರೀಯ ಕೌಶಲ ಅಭಿ­ವೃದ್ಧಿ ಸಮ­ನ್ವಯ ಮಂಡಳಿ ಸ್ಥಾಪಿಸುವ ಕೇಂದ್ರ ಸರ್ಕಾ­ರದ ಪ್ರಯತ್ನಗಳೂ ನಿರೀಕ್ಷಿತ ಫಲಿತಾಂಶ ನೀಡಿಲ್ಲ.

ಈ ವರದಿಯು ಇನ್ನೂ ಕೆಲವು ಆಸಕ್ತಿದಾಯಕ ವಿವರಗಳನ್ನೂ ಒಳ­ಗೊಂಡಿದೆ. 2022ರ ಹೊತ್ತಿಗೆ ಕಟ್ಟಡ ನಿರ್ಮಾಣ ರಂಗದಲ್ಲಿ ಉದ್ಯೋಗ ಅವಕಾಶಗಳು ಗಮನಾರ್ಹವಾಗಿ ಹೆಚ್ಚ­ಲಿವೆ. ಇಲ್ಲಿ ಶೇ 85ರಷ್ಟು ಉದ್ಯೋಗ ಅವಕಾಶಗಳು ಕೈಬೀಸಿ ಕರೆಯಲಿವೆ. 

ಸಂಘಟಿತ ಚಿಲ್ಲರೆ ವಲಯವು ಶೇ 100ಕ್ಕಿಂತ ಹೆಚ್ಚು ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲಿರುವ ಬಗ್ಗೆಯೂ ವರದಿ ಗಮನ ಸೆಳೆದಿದೆ.
ಉದ್ಯೋಗದಾತರು ಸಾಮಾನ್ಯವಾಗಿ ಹೊಸ ಉದ್ಯೋಗ ಆಕಾಂಕ್ಷಿಗಳಲ್ಲಿ  ನಿರ್ದಿಷ್ಟ ಕ್ಷೇತ್ರದ ತಿಳಿವಳಿಕೆ, ಕಂಪ್ಯೂಟರ್ ನಿರ್ವಹಣೆ ಜ್ಞಾನ, ಸಂಖ್ಯೆ ಮತ್ತು ತಾತ್ವಿಕ ಜ್ಞಾನದ ಸಾಮರ್ಥ್ಯ– ಹೀಗೆ ನಾಲ್ಕು ಬಗೆಯ ಕೌಶಲಗಳನ್ನು ಬಯಸುತ್ತಾರೆ. ರಾಜಸ್ತಾನದ ಉದ್ಯೋಗ ಆಕಾಂಕ್ಷಿಗಳು ಇಂಗ್ಲಿಷ್‌ ಜ್ಞಾನ, ಕಂಪ್ಯೂಟರ್‌ ಕೌಶಲ ಮತ್ತು ಸಾಂಖ್ಯಿಕ ಸಾಮರ್ಥ್ಯದಲ್ಲಿ ಗರಿಷ್ಠ ಅಂಕಗಳನ್ನು ಪಡೆದಿದ್ದಾರೆ. ದಕ್ಷಿಣ ಭಾರತದಲ್ಲಿ ತಮಿಳುನಾಡು ಉದ್ಯೋಗ ಆಕಾಂಕ್ಷಿಗಳು ಅತ್ಯುತ್ತಮ ಸಾಧನೆ ಪ್ರದರ್ಶಿಸಿದ್ದಾರೆ. ದೇಶದಲ್ಲಿನ ಒಟ್ಟಾರೆ ಸ್ಥಾನಮಾನ ಪಟ್ಟಿಯಲ್ಲಿ ಕರ್ನಾಟಕ ಎಂಟನೇ ಸ್ಥಾನದಲ್ಲಿ ಇದೆ.

ದೇಶದಲ್ಲಿ ಉದ್ಯೋಗ ಆಕಾಂಕ್ಷಿಗಳ ಸಂಖ್ಯೆ ಅಪಾರ ಪ್ರಮಾಣದಲ್ಲಿ ಇದ್ದರೂ, ಸೂಕ್ತ ಕೌಶಲ ಇರುವ ಉದ್ಯೋಗಾ­ರ್ಥಿಗಳು ದೊರೆಯದೇ ಉದ್ಯೋಗ­ದಾತರು ಪರಿತಪಿಸುತ್ತಾರೆ.

ಈ ತಾರತಮ್ಯವನ್ನು ಆದಷ್ಟು ತುರ್ತಾಗಿ ಬಗೆಹರಿಸಬೇಕಾಗಿದೆ. ಇದರ ಹೊಣೆಗಾರಿಕೆಯು ಎಲ್ಲ ಭಾಗಿದಾರರ ಮೇಲೆ ಇದೆ. ಅದರಲ್ಲೂ ವಿಶೇಷವಾಗಿ ಶೈಕ್ಷಣಿಕ ಸಂಸ್ಥೆಗಳು ಮತ್ತು ಕೌಶಲ ಅಭಿವೃದ್ಧಿ ಸಂಘಟನೆಗಳ ಮೇಲೆ ಹೆಚ್ಚಿನ ಜವಾ­ಬ್ದಾರಿ ಇದೆ. ಇವುಗಳು ಉದ್ಯೋಗ ಮಾರು­ಕಟ್ಟೆಯ ಅಗತ್ಯಗಳನ್ನೆಲ್ಲ ಪೂರೈ­ಸಲು ನಿರಂತರ­ವಾಗಿ ಮಾಹಿತಿ ನವೀಕರಣ ಮತ್ತು ಬೋಧನಾ ಕಲೆಯನ್ನು ಬದಲಾವಣೆ ಮಾಡುತ್ತಲೇ ಇರಬೇಕಾ­ಗುತ್ತದೆ. ಭಾರತೀಯ ಕೈಗಾರಿಕಾ ಒಕ್ಕೂಟದ ಅಧ್ಯ­ಯನ ವರದಿಯು, ಕೌಶಲ ಅಭಿವೃದ್ಧಿಯ ಪಠ್ಯ ಪರಾಮರ್ಶೆ ಮತ್ತು ಬದಲಾವಣೆಯತ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕೈಗೊಂಡ ಉತ್ತಮ ಹೆಜ್ಜೆಯಾಗಿದೆ.

ಎಲ್ಲ ಬಗೆಯ ಶೈಕ್ಷಣಿಕ ಹಿನ್ನೆಲೆಯ ಉದ್ಯೋಗ ಆಕಾಂಕ್ಷಿಗಳು ಮತ್ತು ವಯೋಮಾನದವರು, ಉದ್ಯೋಗ ಅವಕಾಶ ಮಾರುಕಟ್ಟೆಯ ವಾಸ್ತ­ವತೆ ಮನವರಿಕೆ ಮಾಡಿಕೊಂಡು, ಸೂಕ್ತ ಕೌಶಲ ಅಳವಡಿಸಿಕೊಳ್ಳುವತ್ತ ಗಂಭೀರ ಪ್ರಯತ್ನ­ವನ್ನೂ ಮಾಡಬೇಕಾಗಿದೆ.

ನಿರುದ್ಯೋಗಿಗಳು ಮತ್ತು ಉದ್ಯೋಗ ಅವಕಾಶಗಳ ಮಧ್ಯೆ ಉದ್ಭವಿಸಿರುವ ಬಿಕ್ಕಟ್ಟನ್ನು ಸಮ­ರ್ಪಕ­ವಾಗಿ ಪರಿಹರಿಸಿ, ನಿರ್ದಿಷ್ಟ ಸಮ­ಯದ ಒಳಗೆ ಪರಿಹಾರ ಕಂಡುಕೊಂಡರೆ ದೇಶದ ಅರ್ಥ ವ್ಯವಸ್ಥೆಯಲ್ಲಿ ಖಂಡಿತ­ವಾ­ಗಿಯೂ ಆಮೂಲಾಗ್ರ ಬದಲಾವಣೆ ಕಂಡು ಬರಲಿದೆ. ಇಲ್ಲದಿದ್ದರೆ ‘ನಿರುದ್ಯೋಗ ಭೂತ’ವು ಸಾಮಾ­ಜಿಕ, ಆರ್ಥಿಕ ಸವಾಲಾಗಿ ಇನ್ನಷ್ಟು ವರ್ಷಗಳ ಕಾಲ ನಮ್ಮನ್ನು ಕಾಡಲಿದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT