ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಹುಲ್ಲಿನ ಇನ್ನೊಂದು ಕ್ರಾಂತಿ

Last Updated 15 ನವೆಂಬರ್ 2017, 19:30 IST
ಅಕ್ಷರ ಗಾತ್ರ

ದಟ್ಟ ಮೋಡಗಳ ಮಧ್ಯೆ ಸಾಗುತ್ತಿದ್ದ ವಿಮಾನ ಧಡಕ್ಕೆಂದು ಕೊಂಚ ಕುಪ್ಪಳಿಸಿ, ಮುಗ್ಗರಿಸಿ ಮುಂದಕ್ಕೆ ಧಾವಿಸಿತು. ಆಗಲೇ ನಮಗೆ ಗೊತ್ತಾಗಿದ್ದು- ಒಹ್ಹೋ ವಿಮಾನ ದಿಲ್ಲಿಯಲ್ಲಿ ನೆಲಕ್ಕಿಳಿದಿದೆ ಅಂತ. ‘ಸೀಟ್ ಬೆಲ್ಟ್ ಬಿಗಿದುಕೊಳ್ಳಿ, ಕೆಳಕ್ಕಿಳಿಯುತ್ತಿದ್ದೇವೆ’ ಎಂಬ ಸಂದೇಶ ಕೊಂಚ ಮೊದಲೇ ಬಂದಿತ್ತು ನಿಜ. ಆದರೆ ಕಿಟಕಿಯಲ್ಲಿ ಬಗ್ಗಿ ನೋಡಿದರೆ ನೆಲವೇ ಕಾಣುತ್ತಿರಲಿಲ್ಲ. ಇನ್ನೂ ಮೋಡದಲ್ಲೇ ಇದ್ದೇವೆಂಬ ಭ್ರಮೆ. ನೆಲಕ್ಕಿಳಿದ ಮೇಲೂ ಹೆಚ್ಚೆಂದರೆ 25 ಮೀಟರ್ ದೂರದವರೆಗಿನ ಕಂಬ, ಕಟ್ಟೆ, ದೀಪಗಳು ಮಾತ್ರ- ಅವೂ ಮಬ್ಬಾಗಿ ಕಾಣುತ್ತಿದ್ದವು. ಸಮಯ: ಮಧ್ಯಾಹ್ನ ಒಂದೂವರೆ.

‘ದಿಲ್ಲಿಯಲ್ಲಿ ಈಗ ಮೊದಲ ನೋಟಕ್ಕೆ ಪ್ರೇಮ ಅಂಕುರಿಸಲು ಸಾಧ್ಯವೇ ಇಲ್ಲ’ ಎಂದು ವಾಟ್ಸ್‌ಆ್ಯಪ್‌ನಲ್ಲಿತಮಾಷೆಯ ಮಾತು ಹರಿದಾಡುತ್ತಿತ್ತು. ದೂರದ ಯಾರ ಮುಖವೂ ಕಾಣಿಸುತ್ತಿರಲಿಲ್ಲ. ಹತ್ತಿರ ಬಂದರೂ ಯಾರೆಂಬುದು ಸುಲಭಕ್ಕೆ ಗೊತ್ತಾಗದಂತೆ ಎಲ್ಲೆಲ್ಲೂ ಮುಖವಾಡಗಳು. ಬ್ರೆಕಿಂಗ್ ನ್ಯೂಸ್‌ ಗಳಿಗಂತೂ ಬಿಡುವೇ ಇಲ್ಲ. ಚಾನೆಲ್‌ ಗಳಲ್ಲಿ ಜಗಳವೋ ಜಗಳ. ‘ಇಂಥ ದುಃಸ್ಥಿತಿಗೆ ಕಾರಣ ನಾವಲ್ಲ, ನೀವು’ ಎಂದು ಎಲ್ಲ ರಾಜಕೀಯ ಪಕ್ಷಗಳ ವಕ್ತಾರರ ಬೆರಳೂ ಇನ್ನೊಬ್ಬರ ಕಡೆಗೆ.

ಈ ಹಿಂದೆ ಬೀಜಿಂಗ್‌ನಲ್ಲಿ, ಮೆಕ್ಸಿಕೊದಲ್ಲಿ ಇಂಥದೇ ಸಂದರ್ಭದಲ್ಲಿ ಕೈಗೊಂಡಿದ್ದ ತುರ್ತುಕ್ರಮಗಳೆಲ್ಲ ದಿಲ್ಲಿಯಲ್ಲಿ ಕಳೆದ ವಾರ ಜಾರಿಗೆ ಬಂದಿವೆ. ಆರೋಗ್ಯ ತುರ್ತುಸ್ಥಿತಿ ಘೋಷಣೆ. ಎಲ್ಲ ಕಲ್ಲಿದ್ದಲ ವಿದ್ಯುತ್ ಘಟಕಗಳು ಸ್ಥಗಿತ; ಕಾರ್ಖಾನೆಗಳೆಲ್ಲ ಬಂದ್. ಶಾಲೆಗಳಿಗೆ ರಜೆ; ಲಾರಿಗಳಿಗೆ ಪ್ರವೇಶ ನಿಷೇಧ; ಎಲ್ಲ ಕಟ್ಟಡ ಕಾಮಗಾರಿ ನಿಷೇಧ; ಇಟ್ಟಿಗೆ ಬಟ್ಟಿಗಳು ಬಂದ್. ಕ್ರೀಡಾ ಕಾರ್ಯಕ್ರಮಗಳು ಬಂದ್. ಮುಂಜಾವಿನ ವಾಕಿಂಗ್, ವ್ಯಾಯಾಮ ಬಂದ್. ವಾಹನ ನಿಲುಗಡೆ ಶುಲ್ಕ ದುಪ್ಪಟ್ಟು; ಕೃತಕ ಮಳೆ ಸುರಿಸಲು ಸಿದ್ಧತೆ. ಸಮ- ಬೆಸ ಕ್ರಮಗಳನ್ನು ಮತ್ತೆ ಜಾರಿಗೆ ತರಲು ಚಿಂತನೆ. ದೂಳು ತಗ್ಗಿಸಲು ರಸ್ತೆಗಳಿಗೆ ವ್ಯಾಕ್ಯೂಮ್ ಕ್ಲೀನಿಂಗ್; ನೀರು ಎರಚಾಟ. ಮಾರುಕಟ್ಟೆಯಲ್ಲಿ ಏರ್ ಫಿಲ್ಟರ್ ಯಂತ್ರಗಳ ಮಾರಾಟ ಮೇಲಾಟ. ಮಾಧ್ಯಮ ವರದಿಗಾರರ ಕೈಯಲ್ಲಿ ವಾಯುಮಾಲಿನ್ಯ ಅಳೆಯುವ ಸಾಧನಗಳ ಓಡಾಟ. ವಾಯು ಗುಣಮಟ್ಟ ಸುರಕ್ಷಾ ಮಿತಿಗಿಂತ ಐದು ಪಟ್ಟು, ಏಳು ಪಟ್ಟು ಏರಿತೆಂಬ ಚೀರಾಟ.

ರಾಜಧಾನಿಯಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳನ್ನು ಕೈಗೊಂಡಿದ್ದಾಯಿತು. ಮಾಧ್ಯಮಗಳ ದೌಡು ಈಗ ರೈತರ ಕಡೆಗೆ. ದಿಲ್ಲಿಯ ಸುತ್ತಲಿನ (ಹರ್‍ಯಾಣಾ, ಪಂಜಾಬ್ ಮತ್ತು ಉ.ಪ್ರ. ಪಶ್ಚಿಮ) ಭಾಗಗಳ ರೈತರೆಲ್ಲ ಪ್ರತಿವರ್ಷ ನವಂಬರ್ ಆರಂಭದಲ್ಲಿ ಕಟಾವಾದ ಭತ್ತದ ಗದ್ದೆಗಳಲ್ಲಿ ಉಳಿದ ಮೊಳಕಾಲೆತ್ತರದ ಬೇಹುಲ್ಲಿಗೆ ಬೆಂಕಿ ಕೊಡುತ್ತಾರೆ. ಈ ವರ್ಷವಂತೂ ಬಂಪರ್ ಫಸಲು. ಈ ಎರಡು ವಾರಗಳಲ್ಲಿ ಅಂದಾಜು ಮೂರು ಕೋಟಿ ಟನ್ ಹುಲ್ಲು ಸುಟ್ಟು ಅದರ ಹೊಗೆಯೆಲ್ಲ ಆಕಾಶಕ್ಕೇರುತ್ತಿದೆ.ಸುತ್ತ ಎಲ್ಲೂ ಸಮುದ್ರ ಇಲ್ಲವಾದ್ದರಿಂದ ಗಾಳಿಯ ಓಡಾಟ ಈ ದಿನಗಳಲ್ಲಿ ತೀರ ಕಡಿಮೆ. ಹಾಗಾಗಿ ಪಾಕಿಸ್ತಾನದ ಲಾಹೋರದಿಂದ ಹಿಡಿದು ಕಾನಪುರ, ಲಖ್ನೋ, ವಾರಾಣಸಿವರೆಗೂ ಹೊಗೆ, ಮಂಜು ಮತ್ತು ಅವೆರಡರ ಮಿಶ್ರಣವಾದ ಹೊಂಜು ಕವಿತ. ರೈತರು ಹುಲ್ಲನ್ನು ಸುಡುವುದು ಯಾಕೆಂದರೆ ತುರ್ತಾಗಿ ಹಿಂಗಾರು ಗೋಧಿಯ ಬಿತ್ತನೆ ಮಾಡಬೇಕು. ತಡ ಮಾಡುವಂತಿಲ್ಲ. ಸುಡುವ ಬದಲು ಭತ್ತದ ಹುಲ್ಲನ್ನು ಮೇವಿಗೆ ಯಾಕೆ ಬಳಸುತ್ತಿಲ್ಲ ಅಂದರೆ, ಗೋಧಿಯ ಹುಲ್ಲು ಸಾಕಷ್ಟು ಸಿಗುತ್ತದೆ. ಪಶುಗಳಿಗೂ ಅದು ಒಳ್ಳೆಯದು ಯಾಕೆಂದರೆ ಭತ್ತದ ಹುಲ್ಲಿನಲ್ಲಿರುವ ಸಿಲಿಕಾ ಗೋಧಿಯ ಹುಲ್ಲಿನಲ್ಲಿ ಇಲ್ಲ. ಭತ್ತದ ನೆಲಸಮ ಕಟಾವು ಸಾಧ್ಯವಿಲ್ಲ ಯಾಕೆಂದರೆ ಕಟಾವು ಯಂತ್ರಗಳ ವಿನ್ಯಾಸವೇ ಹಾಗೆ ಇದೆ. ಅವು ತೆನೆಯನ್ನಷ್ಟೇ ಕತ್ತರಿಸಿ ಸಾಗಿಸುತ್ತವೆ.

ಹಸುರು ಕ್ರಾಂತಿಯ ಕೆಸರು ಇದು. ದೇಶಕ್ಕೆ ಆಹಾರ ಒದಗಿಸಬೇಕೆಂಬ ಹುಕ್ಕಿಯಲ್ಲಿ ಕೇವಲ ಧಾನ್ಯಕ್ಕೆ ಒತ್ತು ಕೊಟ್ಟಿದ್ದರಿಂದ ಎಷ್ಟೆಲ್ಲ ಎಡವಟ್ಟುಗಳಾಗಿವೆ. ಅದಕ್ಕೂ ಮುನ್ನ ಪಂಜಾಬಿ ರೈತರು ಗೋಧಿ, ಭತ್ತ, ಎಣ್ಣೆ ಕಾಳು, ತೊಗರಿ, ಅಲಸಂಡೆ, ಕಿರುಧಾನ್ಯ ಎಲ್ಲ ಬೆಳೆಯುತ್ತಿದ್ದರು.
ಅಂಥ ಸಮಗ್ರ ಕೃಷಿಯಲ್ಲಿ ರೈತರಿಗೆ ಸಮೃದ್ಧ ಊಟ, ಪಶುಗಳಿಗೆ ಪುಷ್ಕಳ ಮಿಶ್ರ ಮೇವು, ನೆಲಕ್ಕೆ ಸಾವಯವ ಗೊಬ್ಬರ ಎಲ್ಲ ಸಿಗುತ್ತಿತ್ತು. ಆಹಾರ ಸ್ವಾವಲಂಬನೆ ಸಾಧಿಸಲೆಂದು ಬೃಹತ್ ಅಣೆಕಟ್ಟು ಕಟ್ಟಿ, ಪಂಜಾಬಿನ ಶೇ 95ಕ್ಕೂ ಹೆಚ್ಚು ಭೂಮಿಗೆ ನೀರಾವರಿ ಒದಗಿಸಿ, ಕೃತಕ ಗೊಬ್ಬರ, ಕೆಮಿಕಲ್ ಕೀಟನಾಶಕ, ಭರ್ಜರಿ ಕೃಷಿ ಉಪಕರಣ ಪೂರೈಸಿ, ಬರೀ ಗೋಧಿ, ಭತ್ತದ ಹೈಬ್ರಿಡ್ ಬೀಜ ವಿತರಿಸಿ 1970ರ ಹೊತ್ತಿಗೆ ಪಂಜಾಬ್ ಎಂದರೆ ದೇಶದ ‘ಧಾನ್ಯದ ಕಣಜ’ ಎಂಬ ಕೀರ್ತಿ ಬಂದಿದ್ದೇನೊ ಹೌದು. ಇತರೆಲ್ಲ ಬೆಳೆಗಳನ್ನು ಕೈಬಿಟ್ಟು ಎರಡೇ ಧಾನ್ಯಗಳನ್ನು ಬೆಳೆಯುತ್ತಿದ್ದರೆ ಅದು ‘ಕಣಜ’ ಎನಿಸಿದ್ದರಲ್ಲಿ ಅಚ್ಚರಿಯೇನಿಲ್ಲ. ಇದರ ದುಷ್ಪರಿಣಾಮಗಳು ಒಂದೆರಡಲ್ಲ: ಮಣ್ಣು ಮತ್ತು ಅಂತರ್ಜಲ ವಿಷಮಯ. ಚಿಟ್ಟೆ, ಗುಬ್ಬಿ, ಏಡಿ, ಎರೆಹುಳಗಳೆಲ್ಲ ನಾಪತ್ತೆ.
ಕ್ಯಾನ್ಸರ್ ಪೀಡಿತ ಮಕ್ಕಳ ಸಂಖ್ಯೆ ಏರುಮುಖ. ಭಾರೀ ಪ್ರಮಾಣದಲ್ಲಿ ನೀರನ್ನು ಆವಿಯಾಗಿಸಿ ಮೇಲಕ್ಕೆ ಕಳಿಸುವುದರಿಂದ ವಾತಾವರಣದಲ್ಲಿ ತೇವಾಂಶ ಜಾಸ್ತಿ; ಈಗಂತೂ ದಟ್ಟ ಮಂಜು, ಡೀಸೆಲ್ ಮತ್ತು ಹುಲ್ಲಿನ ಹೊಗೆ ಸೇರಿ ಉತ್ತರ ಭಾರತ ತತ್ತರ.

ಒಂದು ದೃಷ್ಟಿಯಲ್ಲಿ ಈ ಹುಲ್ಲಿನ ಹೊಗೆ ದಿಲ್ಲಿಗೆ ಮುತ್ತಿಗೆ ಹಾಕಿದ್ದು ಒಳ್ಳೆಯದೇ ಎನ್ನಬೇಕು. ಹಳ್ಳಿಯ ಸಮಸ್ಯೆ ಜಗಜ್ಜಾಹೀರಾಯಿತು. ದೇಶದ ನೀತಿ ನಿರೂಪಕರು, ವಿಜ್ಞಾನಿಗಳು, ಉದ್ಯಮಪತಿಗಳು, ರಾಜಕಾರಣಿಗಳು, ಅಧಿಕಾರಿಗಳು ಮತ್ತು ಮಾಧ್ಯಮಗಳು ಎಚ್ಚೆತ್ತವು. ಇಲ್ಲಾಂದರೆ ಇಪ್ಪತ್ತು ನಗರಗಳನ್ನು, ಇನ್ನೂರಕ್ಕೂ ಹೆಚ್ಚು ಪಟ್ಟಣಗಳನ್ನು, ಅಸಂಖ್ಯ ಹಳ್ಳಿಗಳನ್ನು ಮುಸುಕಿರುವ ಮಾಲಿನ್ಯಕ್ಕೆ ಕ್ಯಾರೇ ಅನ್ನುವವರೇ ಇರಲಿಲ್ಲ. ಭಟಿಂಡಾದ ನಾಗರಿಕರು ಆಮ್ಲಜ
ನಕ ಸಿಲಿಂಡರನ್ನೇ ಹೆಗಲ ಮೇಲೆ ಹೊತ್ತು ಬೀದಿ ಮೆರವಣಿಗೆ ಮಾಡಿದ್ದು; ರೈಲು ತಡವಾಗಿದ್ದರಿಂದ ಪ್ರಯಾಣಿಕರು ಶಹಾದ್ರಾ ನಿಲ್ದಾಣದ ಬೆಂಚ್‌ಗಳನ್ನೇ ಕಿತ್ತು ಹಳಿಯ ಮೇಲೆ ಹಾಕಿದ್ದು; ಮಬ್ಬಿನಲ್ಲಿ ವಾಹನಗಳು ಅಪಘಾತಕ್ಕೀಡಾಗಿದ್ದು; ಆಸ್ಪತ್ರೆಗಳಲ್ಲಿ ಆಸ್ತಮಾ ರೋಗಿಗಳ ಸಾಲು ಉದ್ದವಾಗಿದ್ದು ಎಲ್ಲವೂ ಬೆಳಕಿಗೆ ಬಂದವು. ನಗರದವರಿಗೆ ತೃಣಸಮಾನ ಎನಿಸಿದ್ದ ಹುಲ್ಲು ಈಗಿನ ಮಬ್ಬಿನಲ್ಲಿ ಧಿಗ್ಗನೆದ್ದು ಕಾಣುವಂತಾಯಿತು.

ಹುಲ್ಲನ್ನು ಸುಡುವ ಬದಲು ಎಷ್ಟೊಂದು ವಿಧದಲ್ಲಿ ಬಳಸಬಹುದು. ಯಾವುದೇ ಸಸ್ಯದಲ್ಲಿ ಲಿಗ್ನಿನ್ ಮತ್ತು ಸೆಲ್ಯುಲೋಸ್ ಎಂಬ ಎರಡು ಘಟಕಗಳಿರುತ್ತವೆ. ಸೆಲ್ಯುಲೋಸ್ (ಅಂದರೆ ಸಕ್ಕರೆ) ಅಂಶವನ್ನು ಬೇರ್ಪಡಿಸಿ ಅದರಿಂದ ಮದ್ಯಸಾರ, ಸುಗಂಧ ವಸ್ತು, ಇಂಧನ ತೈಲವನ್ನು ಪಡೆಯಬಹುದು. ಲಿಗ್ನಿನ್‌ ನಿಂದ ರಟ್ಟು, ಕಾಗದ, ಪ್ಲಾಸ್ಟಿಕ್ ತಯಾರಿಸಬಹುದು. ಅಥವಾ ಒತ್ತಿಟ್ಟಿಗೆ ಮಾಡಿ ಕಲ್ಲಿದ್ದಲಿನಂತೆ ಕುಲುಮೆಯಲ್ಲಿ ಉರಿಸಬಹುದು; ವಿದ್ಯುತ್ ಉತ್ಪಾದನೆ ಮಾಡಬಹುದು. ಹುಲ್ಲು, ಜೋಳದ ದಂಟು, ಹತ್ತಿ ಕಡ್ಡಿ, ಕಬ್ಬಿನ ರೌದಿ, ಹಿಪ್ನೇರಳೆ ಕಡ್ಡಿ ಮುಂತಾದ ಎಲ್ಲ ಕೃಷಿ ತ್ಯಾಜ್ಯಗಳಿಂದ ಇವುಗಳನ್ನು ಪಡೆಯಲು ಸಾಧ್ಯವಿದೆ. ಇದೆಲ್ಲ ಗೊತ್ತಿದ್ದರೂ ದಿಲ್ಲಿಯ ಸುತ್ತ ಮುನ್ನೂರು ಲಕ್ಷ ಟನ್ ಹುಲ್ಲು ಹೊಗೆಯಾಗಿ, ಧಗೆಯಾಗಿ ಜೀವಲೋಕಕ್ಕೆ ಕಂಟಕವಾಗುತ್ತಿದ್ದರೆ ತಂತ್ರಜ್ಞರು ನೋಡುತ್ತ ಕೂತಿದ್ದಾರೆಯೆ?

ಹಾಗೇನಿಲ್ಲ; ಹುಲ್ಲನ್ನು ಉರಿಸಿ ವಿದ್ಯುತ್ ಉತ್ಪಾದಿಸುವ ಆರು ಘಟಕಗಳು ಪಂಜಾಬಿನಲ್ಲಿವೆ. ಆದರೆ ವಿದ್ಯುತ್ ಉತ್ಪಾದನಾ ವೆಚ್ಚ ಪ್ರತಿ ಯುನಿಟ್ಟಿಗೆ ಆರು ರೂಪಾಯಿ. ಇತ್ತ ಕಲ್ಲಿದ್ದಲ ವಿದ್ಯುತ್ತು ಮೂರು ರೂಪಾಯಿಗೆ ಸಿಗುವಾಗ ಹುಲ್ಲಿನ ವಿದ್ಯುತ್ತನ್ನು ಸರ್ಕಾರವೂ ಖರೀದಿಸುತ್ತಿಲ್ಲ. ಹಾಗಾಗಿ ಐದು
ಘಟಕಗಳು ಮುಚ್ಚಿವೆ. ಈಗ ವಿದ್ಯುತ್ ಬದಲು ಬೇರೆ ಉತ್ಪಾದನೆಗಳ ಸಾಧ್ಯತೆಯ ಪರೀಕ್ಷೆ ನಡೆದಿದೆ. ಹುಲ್ಲಿನಿಂದ ಮೀಥೇನ್ ಅನಿಲ ಉತ್ಪಾದಿಸಿ ಸಿಲಿಂಡರ್‌ಗೆ ತುಂಬಿ ಪೂರೈಕೆಮಾಡುವ ತಂತ್ರಜ್ಞಾನ ಪಾಕಿಸ್ತಾನದ ಗಡಿಯ ಬಳಿ ಫಜಿಲ್ಕಾದಲ್ಲಿ ಬಳಕೆಗೆ ಬಂದಿದೆ. ಅನಿಲದ ಬದಲು ಇಥೆನಾಲ್ (ಬಯೊ ಪೆಟ್ರೋಲ್) ಉತ್ಪಾದಿಸಲು ಭಾರತ್ ಪೆಟ್ರೋಲಿಯಂ ಮತ್ತು ಎನ್‌ಟಿಪಿಸಿಗಳು ಹೂಡಿಕೆ ಮಾಡುತ್ತಿವೆ. ಭಟಿಂಡಾ ಮತ್ತು ಪಾಟಿಯಾಲಾಗಳಲ್ಲಿ ಕೆಮಿಕಲ್ ಕಿಣ್ವಗಳನ್ನು ಸೇರಿಸಿ ಬಟ್ಟಿ ಇಳಿಸುವ ಮೂಲಕ ಬಯೊ ಪೆಟ್ರೋಲ್ ತೆಗೆಯುವ 12 ಘಟಕಗಳು ಶೀಘ್ರಮಾರ್ಗದಲ್ಲಿ ಸ್ಥಾಪನೆಗೊಳ್ಳುತ್ತಿವೆ.

‘ತಂತ್ರಜ್ಞಾನಗಳು ಎಷ್ಟೊಂದಿವೆ; ಆದರೆ ಇತರ ಅಡೆತಡೆ ನಿವಾರಣೆ ಆಗಬೇಕಿದೆ’ ಎನ್ನುತ್ತಾರೆ, ಜೈವಿಕ ಇಂಧನದ ರಾಷ್ಟ್ರೀಯ ಕಾರ್ಯಪಡೆಯ ಅಧ್ಯಕ್ಷ ವೈ.ಬಿ. ರಾಮಕೃಷ್ಣ. ಡೇರಿ ಹಾಲಿನ ಪೂರೈಕೆಯಷ್ಟು ಸುಲಭವಲ್ಲ ಕೃಷಿತ್ಯಾಜ್ಯ ವಿಲೆವಾರಿ. ಎರಡೇ ವಾರಗಳಲ್ಲಿ ಕಟಾವಾಗುವ ಅಷ್ಟೊಂದು ಹುಲ್ಲನ್ನು ಸಂಗ್ರಹಿಸಿ, ಸಾಗಿಸಿ, ಒಂದೆಡೆ ಒಟ್ಟಿಟ್ಟು ವರ್ಷವಿಡೀ ಬಳಸುವಂತೆ ಉದ್ಯಮಿಗಳ ಮನವೊಲಿಸಬೇಕು. ಹಳ್ಳಿಗರನ್ನೇ ತೊಡಗಿಸಿ ವ್ಯವಸ್ಥಿತ ಸಾಗಾಟ ಸರಪಳಿ ಸಿದ್ಧವಾಗಬೇಕು. ‘ಅವೆಲ್ಲ ಒಂದೊಂದಾಗಿ ಕಾರ್ಯರೂಪಕ್ಕೆ ಬರುತ್ತಿದೆ. ಇಥೆನಾಲ್ ತಯಾರಿಕೆಯ ಅನುಕೂಲ ಏನೆಂದರೆ, ದೇಶಕ್ಕೆ ಇಂಧನ ಸಿಗುತ್ತದೆ. ರೈತರಿಗೆ ಉತ್ಕೃಷ್ಟಗುಣಮಟ್ಟದ ಸಾವಯವ ಗೊಬ್ಬರ ಮರಳಿ ಬರುತ್ತದೆ’ ಎಂದು ರಾಮಕೃಷ್ಣ ಹೇಳುತ್ತಾರೆ. ಹಾಗಿದ್ದರೆ ಅಂಥ ತಂತ್ರಜ್ಞಾನ ನಮ್ಮಲ್ಲಿಗೂ ಬಂದೀತೆ ಎಂದು ಕೇಳಿದರೆ ‘ಬಂದಿದೇರೀ ಆಗ್ಲೇ’ ಎನ್ನುತ್ತ ಅವರು ಉದ್ದ ಪಟ್ಟಿಯನ್ನೇ ಕೊಡುತ್ತಾರೆ. ಮುಸುಕಿನ ಜೋಳದ ದಿಂಡು, ದಂಟುಗ
ಳಿಂದ ಇಂಧನ ತೆಗೆಯುವ ಎಮ್‍.ಆರ್‌.ಪಿ.ಎಲ್. ಘಟಕ ಹರಿಹರದ ಬಳಿ ಬರುತ್ತಿದೆ. ಶೆಲ್ ಕಂಪನಿಯವರು ಬೆಂಗಳೂರಿನ ಅಂಚಿನಲ್ಲೆ ಹಿಪ್ನೇರಳೆ ಕಡ್ಡಿ ಮತ್ತು ನಗರ ತ್ಯಾಜ್ಯಗಳಿಂದ ತೈಲ ತಯಾರಿಸುವ ಘಟಕ ಹಾಕುತ್ತಿದ್ದಾರೆ. ಬಿದಿರನ್ನು ರುಬ್ಬಿ ಮದ್ಯಸಾರ ತೆಗೆಯುವ ಕಾರ್ಖಾನೆ ಅಸ್ಸಾಮಿನಲ್ಲಿ ಫಿನ್ಲೆಂಡ್ ನೆರವಿನಿಂದ ಸಜ್ಜಾಗಿದೆ.

ಕೊಚ್ಚಿಯಲ್ಲಿ ಕೃಷಿತ್ಯಾಜ್ಯದಿಂದ ಬಯೊಪೆಟ್ರೋಲ್ಪಡೆಯುವ ಉದ್ಯಮವನ್ನು ಬಿಪಿಸಿಎಲ್ ಇದೀಗ ಆರಂಭಿಸುತ್ತಿದೆ. ಜೈವಿಕ ತಂತ್ರಜ್ಞಾನದಲ್ಲಿ ಇಂಥ ಏನೇನು
ಹೊಸ ಸಾಧ್ಯತೆಗಳಿವೆ ಎಂಬುದನ್ನು ತೋರಿಸಲೆಂದೇ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದಿನಿಂದ ಮೂರು ದಿನಗಳ ‘ತಂತ್ರಜ್ಞಾನ ಶೃಂಗಸಭೆ’ ಆರಂಭವಾಗಿದೆ. ದೇಶದ ಐಟಿ, ಬಿಟಿ ಧುರಂಧರರು, ಉದ್ಯಮಪತಿಗಳು, ಸಂಶೋಧಕರು, ಹೂಡಿಕೆದಾರರು ಎಲ್ಲ ಸೇರುತ್ತಿದ್ದಾರೆ. ಇದೇ ವೇಳೆಗೆ ಅತ್ತ ಜಿಕೆವಿಕೆಯಲ್ಲಿ ಅದ್ಧೂರಿಯ ಕೃಷಿಮೇಳವೂ ಆರಂಭವಾಗುತ್ತಿದೆ. ದಿಲ್ಲಿಯ ಗಾಳಿ ಬೀಸಿದ್ದರಿಂದಾಗಿ ಹಳ್ಳಿಯ ಕಡೆಗೆ ತಂತ್ರವಿಶಾರದರ ಗಮನ ಹರಿದಿದೆ.
ಜಪಾನೀ ಕೃಷಿಋಷಿ ಫುಕುವೊಕನ ‘ಒಂದು ಹುಲ್ಲಿನ ಕ್ರಾಂತಿ’ ಗ್ರಂಥದ ಪ್ರಕಾರ, ಹುಲ್ಲು ಎಂಬುದು ಕೃಷಿಕನ ಸುಸ್ಥಿರ ಬದುಕಿಗೆ ಬುನಾದಿಯಾಗಿತ್ತು. ಭತ್ತದ ಕೊಯ್ಲು ಮಾಡುವ ಎರಡು ವಾರ ಮೊದಲೇ ಫುಕುವೊಕ ಮುಂದಿನ ಬೆಳೆಗೆ ಬಿತ್ತನೆ ಮಾಡಿಬಿಡುತ್ತಿದ್ದ. ಕೊಯ್ಲಿನ ನಂತರ ಹುಲ್ಲನ್ನು ಅಲ್ಲೇ ಹಾಸುತ್ತಿದ್ದ. ಫಸಲಿನ ದಾಖಲೆ ಇಳುವರಿ ಪಡೆಯುತ್ತಿದ್ದ. ನಾವು ‘ಎಲ್ಲರಿಗೂ ಆಹಾರ’ ಒದಗಿಸುವ ಧಾವಂತದಲ್ಲಿ ಯಾಂತ್ರಿಕ ಕೃಷಿಗೆ ಆದ್ಯತೆ ನೀಡಿದೆವು. ಅದರ ಮುಂದುವರಿಕೆಯಾಗಿ ಎಲ್ಲರಿಗೂ ಹಾಲು, ಬಟ್ಟೆ, ಮನೆ, ಎಲ್ಲರಿಗೂ ಫ್ರಿಜ್ಜು, ಕಾರು... ಈಗ ಎಲ್ಲರಿಗೂ ಔಷಧ, ಎಲ್ಲರಿಗೂ ಮುಖವಾಡ ಎಂಬಲ್ಲಿಗೆ ತಲುಪಿದ್ದೇವೆ. ಉಸಿರ ತುಸು ಬಿಗಿ ಹಿಡಿದು ಕಾಯೋಣ. ತ್ಯಾಜ್ಯ ಮರುಬಳಕೆಯ ತಂತ್ರಜ್ಞಾನ ಸನಿಹದಲ್ಲೇ ಮಂಜು ಮಂಜಾಗಿ ಕಾಣತೊಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT