ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ್ಳೆ ಸಮಯ, ಒಳ್ಳೆ ಸಮಯ, ಕೊಳ್ಳೆ ಸಮಯವೂ...

Last Updated 26 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಅಂದಂದಿನ ಪೇಪರು ಓದುತಿದ್ದರೆ ರೈತ ಏನು ರೈತರಲ್ಲದವರೂ ಜೀವನದಲ್ಲಿ ಜಿಗುಪ್ಸೆ ಬಂದು ಆತ್ಮಹತ್ಯೆ ಮಾಡಿಕೊಳ್ಳಬೇಕು, ಹಾಗಿರುತ್ತದೆ. ಆದರೆ ಮನುಷ್ಯನಲ್ಲಿ ತನ್ನನ್ನೆ ತಾನು ಆಚೆ ನಿಲ್ಲಿಸಿ, ಪರಿಸ್ಥಿತಿಯನ್ನು ನೆನೆದು ಅದರ ವಕ್ರರೇಖೆಗಳನ್ನು ತಾನೇ ಗುರುತಿಸಿ ನಗುವ ಸಾಮರ್ಥ್ಯ ಇರುವುದರಿಂದಲೇ ಇವತ್ತು ಜಗತ್ತಿನಲ್ಲಿ ಜನ ಇನ್ನೂ ಇದ್ದಾರೆ - ಎಂದು ಬಲ್ಲವರು ಹೇಳುವ ಮಾತು.

ಎಷ್ಟೋ ಸಲ ಇನ್ನಿಲ್ಲದ ಕಷ್ಟ ಬಂದಾಗ ಅದರ ಮಧ್ಯೆಯೇ ದೂರ ನಿರ್ಮಿಸಿಕೊಂಡು ಮುಖದ ಮೇಲೆ ನಗೆಯೆಂಬಂತೆ ನಗೆ ಹರಡಿಕೊಳ್ಳುವುದಿದೆ. ನೋಡಲು ನಗೆಯಾದರೂ ಅದು ಅತ್ತ ನಗೆಯೂ ಅಲ್ಲ, ಇತ್ತ ಅಳುವೂ ಅಲ್ಲದ ಭಾವ. ಅದನ್ನು ವಿಷಾದ ಎನ್ನುವುದಿದೆ, ಆದರೆ ಇದು ಪೂರ್ತಿ ಸರಿಯಾದ ಶಬ್ದ ಹೌದೋ ಅಲ್ಲವೊ. ಅಂತಹ ನಗುವಿನ ಪ್ರಸಂಗಗಳು ನಮ್ಮಲ್ಲಿ ಇತ್ತೀಚೆಗೆ ಬಹಳ ಬಂದಿದ್ದವು. ಬಂದಿದ್ದವು ಅಂದರೆ ಭೂತಕಾಲವಾಯ್ತು.

ಈಗಲೂ ಬರುತ್ತಲೇ ಇವೆ. ಇನ್ನೂ ಬರುವ ಲಕ್ಷಣಗಳೂ ಇವೆಯಾಗಿ ಒಂದುರೀತಿಯಲ್ಲಿ ಭೂತ ವರ್ತಮಾನ ಭವಿಷ್ಯತ್ ಮೂರೂ ಇರುವ ತ್ರೀ ಇನ್ ವನ್ ಸಂಗಮದಲ್ಲಿರುವವರು ನಾವು. ಹೀಗಾಗಿ ಒಮ್ಮೊಮ್ಮೆ ಏನಾಗುತ್ತಿದೆ ಇಲ್ಲಿ ಅಂತ ಕಕ್ಕಾಬಿಕ್ಕಿಯಾಗಿ ನಾವು ನಕ್ಕದ್ದುಂಟು. ನಗುವ ಮೂಲಕ ಅತ್ತದ್ದುಂಟು. ಅಳು ಎಂಬುದು ನಗೆಯಾಗದು. ಆದರೆ ನಗೆ ಎಷ್ಟು ಪಾತ್ರವನ್ನೂ ಮಾಡಬಲ್ಲದು.

ನಮ್ಮ ಜಿಲ್ಲೆಯಲ್ಲಂತೂ ನಗುವ ಪ್ರಸಂಗವೇ ಇಲ್ಲ. ಅತ್ತ ಎಂಡೋಸಲ್ಫಾನ್‌ನಿಂದ ನರಳುತ್ತಿರುವ ಮಕ್ಕಳು, ಹೆತ್ತವರು. ಇತ್ತ ಬೀಳು ಬೀಳುತ್ತಿರುವ ಗದ್ದೆಗಳು, ಏಳುತ್ತಿರುವ ಕಟ್ಟಡಗಳು, ಭೂಮಿ ಕಳಕೊಂಡು ಅತಂತ್ರರಾಗಿರುವ ಮಂದಿ. ನಗೆಗೆ ಜಾಗ ಎಲ್ಲುಂಟು? ಇಷ್ಟಕ್ಕೂ ನಾವು ನಗು ಬಂದರೂ ಹೆಚ್ಚು ನಗುವಂತಿಲ್ಲವೇ! ಯು.ಪಿ.ಸಿ.ಎಲ್.ನ ಹಾಳು ಹಾರೋಬೂದಿ, ಶ್ವಾಸಕೋಶ ಹೊಕ್ಕು ಉಸಿರು ಕಟ್ಟಿಸುತ್ತದೆ.

(ಆದರೂ ಮೊನ್ನೆ ನಮ್ಮೂರಲ್ಲಿ ನಗೆಹಬ್ಬವಾದಾಗ ಸಭೆ ಮೆಲುದನಿಯಲ್ಲಿ ನಗುತಿತ್ತು, ಉಷ್ಣವಿದ್ಯುತ್ ಸ್ಥಾವರದ ದೂಳಿನ ತೆರೆಯ ಹಿಂದೆಯೇ. ಅವಿಭಜಿತ ದ.ಕ. ಜಿಲ್ಲೆಯವರಿಗೆ ನಗಲು ಬರುವುದಿಲ್ಲ ಅಂತ ಹೇಳುತ್ತಾರೆ. ಹಾಗೇನಿಲ್ಲ. ನಾವು ಬಹಿರಂಗವಾಗಿ - ಸಶಬ್ದವಾಗಿ - ನಗುವುದು ಕಡಿಮೆ ಅಷ್ಟೆ. ನಮ್ಮದು ಒಂದು ರೀತಿಯಲ್ಲಿ ಒಳಗೊಳಗೇ ತಿರುಗುವ ಸೈಲೆಂಟ್ ಅಥವಾ ಸೌಂಡ್‌ಲೆಸ್ ನಗು).ಒಟ್ಟಿನಲ್ಲಿ - ಅತ್ತರೆ ಉಳಿವಿಲ್ಲ, ನಕ್ಕರೆ ಉಳಿವಿಗಳಿವಿಲ್ಲ ಕೂಡಲ ಸಂಗಮದೇವಾ - ಎಂಬುದನ್ನು ದೇಶ್ ರಾಗದಲ್ಲಿ ಹಾಡುವ ಕಾಲ ಇದು.

‘ಈಗ ನಾನು ನಿಂತ ಭೂಮಿಯೇ ಯಾವತ್ತು ಮಾಯ ಆಗುತ್ತದೆ ಹೇಳುವಂತಿಲ್ಲ. ಆದ್ದರಿಂದ ಆದಷ್ಟು ನಡೆದುಬಿಡೋಣ. ಇನ್ನಿದು ನಡೆಯುವುದಕ್ಕಾದರೂ ಸಿಗುತ್ತದೋ ಇಲ್ಲವೋ’ ಎನ್ನುತಿದ್ದರು ನಮ್ಮಲ್ಲೊಬ್ಬರು. ಅವರಿರುವ ಬಡಾವಣೆಯಲ್ಲಿ ನಿತ್ಯವೂ ಬೆಳಿಗ್ಗೆ ಜನ ಮೈಲುಗಟ್ಟಲೆ ಓಡುವುದೋ ಬೀಸ ಬೀಸ ನಡೆಯುವುದೋ ಮಾಡುವಾಗ ಯಾಕೆ ಅಂತವೇ ಹೊಳೆಯಲಿಲ್ಲವಂತೆ.
 
ಕೊನೆಗೊಬ್ಬನನ್ನು ನಿಲ್ಲಿಸಿ ಕೇಳಿದರೆ ‘ಈಗ ಓಡಿದ್ದೇ ಬಂತು’ ಅಂದನಂತೆ. ಹೌದಲ್ಲ ಅಂತ ಥಟ್ಟನೆ ಹೊಳೆದು ತಾನೂ ದಿನಾ ಬೆಳಿಗ್ಗೆ ಮೈಲುಗಟ್ಟಲೆ ನಡೆಯುವ ಅಥವಾ ಓಡುವ ಹವ್ಯಾಸ ಇರಿಸಿಕೊಂಡರಂತೆ. ಹಾಗೆ ನಡೆವಾಗ ಜಾನುವಾರೋ ಹಕ್ಕಿಪಕ್ಕಿಯೋ ಎದುರು ಸಿಕ್ಕರೆ ‘ಇವತ್ತೇನೋ ನಿನ್ನನ್ನು ನೋಡಿದೆ. ನಾಳೆ ನೀನಿರುವುದಿಲ್ಲವೋ ನಾನೇ ಇರುವುದಿಲ್ಲವೋ ಯಾರು ಕಂಡವರು?’ ಅಂತಂದುಕೊಂಡೇ ಅವರು ಮನೆ ಸೇರುವುದಂತೆ!. ಹೇಳಿ ಅಳಲಿಲ್ಲ ಅವರು. ತಮಾಷೆ ಎಂಬಂತೆ ನಕ್ಕರು. ಅವರು ನಕ್ಕದ್ದು ಅತ್ತಂತೆ ಕಂಡಿತು.

ಹಳೆಯ ಜಾನಪದ ಕತೆಗಳಲ್ಲಿ ಒಂದು ರತ್ನಗಂಬಳಿ ಬಂದು ಮಲಗಿದ ರಾಜಕುಮಾರಿಯನ್ನೋ ರಾಜಕುಮಾರನನ್ನೋ ಸದ್ದಿಲ್ಲದಂತೆ ಎತ್ತಿ ಆಕಾಶಮಾರ್ಗವಾಗಿ ಒಯ್ದು ಎಲ್ಲೋ ಹೊತ್ತು ಹಾಕಿ ಮಾಯವಾಗುತಿತ್ತು. ಮಲಗಿದ್ದವರು ಎದ್ದು ಕಣ್ಣುಜ್ಜಿ ನೋಡುತ್ತಾರೆ, ಅರಮನೆಯಿಲ್ಲ, ಊರಿಲ್ಲ, ಸಖ-ಸಖಿಯರಿಲ್ಲ. ನಿಂತ ನೆಲವೇ ಇಲ್ಲ. ಈ ಊರು ಯಾವುದೆಂತ ತಿಳಿದಿಲ್ಲ. ಇಲ್ಲಿ ಏನು ಮಾಡುವುದೆಂತ ತಿಳಿಯುತ್ತಿಲ್ಲ.

ಯಾರು ತಮ್ಮನ್ನು ಇಲ್ಲಿ ತಂದು ಹಾಕಿದವರು ಅಂತಲೂ ತಿಳಿಯದೆ ಒಟ್ಟು ಅಯೋಮಯ. ಇವತ್ತು ಮತ್ತೇನು? ಕಾಲಡಿಯ ನೆಲ ಸಮುದ್ರದ ತೆರೆ ಬಂದು ಎಳೆದಂತೆ ಜಾರಿ ಹೋಗುತ್ತಿದೆ. ಇದ್ದಕ್ಕಿದ್ದ ಹಾಗೆ ಹೇಳದೆ ಕೇಳದೆ ಅಲ್ಲಿ ಬಾಳಿಕೊಂಡು ಬಂದ ಮಂದಿಯ ಎತ್ತಂಗಡಿಯಾಗುತ್ತದೆ. ಎಲ್ಲಿಗೆ ಏನು ಗೊತ್ತಿಲ್ಲ. ಕಣ್ಣು ತೆರೆದರೆ ತನ್ನ ತೋಟವಿಲ್ಲ, ಗದ್ದೆಯಿಲ. ಅಲ್ಲಿನ ಜಾನುವಾರು, ಖಗಮಿಗ ಒಂದೂ ಇಲ್ಲ.

‘ಎಲ್ಲಿಗೆ ಕರೆತಂದಿರಿ ನನ್ನ?
‘... ...’
‘ಹೋ ಇಲ್ಲೇನು ಮಾಡಲಿ ನಾನು? ನನಗೆ ಗೊತ್ತಿರುವುದು ಕೃಷಿಯೊಂದೇ’, ಬೊಬ್ಬೆ ಹೊಡೆದರೂ ಇಲ್ಲ, ಅಂಗಲಾಚಿದರೂ ಇಲ್ಲ.
‘ಆಹಹ! ಎಷ್ಟು ಚೆನ್ನಾಗಿ ನಾಟಕ ಮಾಡ್ತೀಯ. ಹೋಗು, ನಾಟಕವನ್ನೇ ಮಾಡು. ಇಲ್ಲ, ಸಿನೆಮಾ ಮಾಡು, ಧಾರಾವಾಹಿ ಮಾಡು, ತಕೊ, ದುಡ್ಡು, ಇನ್ನು ಬೇಕೆ ಇಕೋ ತಕೊ. ಆಲ್ ದಿ ಬೆಸ್ಟ್’. ಆಧುನಿಕ ಜಾನಪದವೆಂದರೆ ಇದುವೇ ಏನು?

ಇತ್ತ ರೈತನ ಬವಣೆ ಕುರಿತ ‘ಸ್ಟೋರಿ’ ಸಾಗುತ್ತಿದೆ. ಬಿಳೀ ಹೊದಿಕೆ ಹೊದಿಸಿದ ಶವ ಎದುರಿಗಿದೆ. ಸುತ್ತ ಕುಟುಂಬ ಬಾಯಿ ಬಡಿದುಕೊಳ್ಳುತ್ತಿದೆ. ಕೆಲವೇ ನಿಮಿಷ, ಬ್ರೇಕ್! (ಅಥವಾ... ಬ್ರೆಕ್ಟ್? ದುಃಖ ಪ್ರೇಕ್ಷಕನನ್ನು ಆವರಿಸದಂತೆ ...) ತಲೆಹೊಟ್ಟೆ? ಇದನ್ನು ಹಚ್ಚಿಕೊಳ್ಳಿ. ಈ ಸುಗಂಧ ನೋಡಿ, ಪರಿಮಳ, ವಶೀಕರಣಕ್ಕೆ ಬೇರೆ ಚೂರ್ಣಿಕೆ ಬೇಡ... ಬಾ ಹತ್ತಿರಾ...

ಚಾನಲ್ ಬದಲಿಸಿ ನೋಡಿ. ಅಲ್ಲಿ ಇನ್ನೊಂದು ಸ್ಟೋರೀ - ಅಲ್ಲೊಬ್ಬ ವ್ಯಕ್ತಿಯನ್ನು ಕೊಂದು ಕಾಲುವೆಗೆ ಎಸೆದಿದ್ದಾರೆ. ಆತ ಅದುವರೆಗೆ ನೆಲಸಿದ್ದ ದೇಹ ಯಾವ ಘನತೆಯ ಮರೆಯಿಲ್ಲದೆ ತೀರದಲ್ಲಿ ಎತ್ತಿ ಹಾಕಿದಂತಹ ಸ್ಥಿತಿಯಲ್ಲೇ ಇದೆ. ಮೈಕ್ ಅವನ ಹೆಂಡತಿಯೆದುರು ಮಕ್ಕಳೆದುರು ನಿಂದು ಪ್ರಶ್ನೆ ಕೇಳುತ್ತಿದೆ. ಅವರೆಲ್ಲ ಉತ್ತರ ಹೇಳುತಿದ್ದಾರೆ. ಅವರ ಆಚೀಚೆ ನಿಂತವರು ಕೆಮೆರಾ ಮುಂದೆ ತಾವೂ ಬರಲು ಅತ್ತಿತ್ತ ಪರಸ್ಪರ ತಳ್ಳಿಕೊಳ್ಳುತಿದ್ದಾರೆ...

ಅಲ್ಲಿಗೇ ಅದು ಕರಕ್ಕ ನಿಂತು, ‘ನನಗೊಂದು ಹನಿ ಕೊಡುವಿಯ?’- ಶೇವಿಂಗ್ ಬ್ರಶ್ ಹಿಡಿದು ಸಾಲುಸಾಲಾಗಿ ಜನ (ಗಂಡಸರು) ನಿಂತಿದ್ದಾರೆ. ಸಾವಿನ ಸುದ್ದಿ ಸಾಯಲಿ ಅತ್ತ. ಶೇವಿಂಗ್ ಕ್ರೀಂ ಕೊಂಡರೆ ಇದನ್ನೇ ಕೊಳ್ಳಬೇಕು ಅಂತ ಶೇವಿಂಗ್ ಮಾಡದವರಿಗೂ ಅನಿಸಬೇಕು ಹಾಗೆ!
ಅಲ್ಲೊಂದು ಬಲಾತ್ಕಾರದ ತನಿಖಾ ವರದಿ ಬಿತ್ತರವಾಗುತ್ತಿದೆ. ವಕೀಲರು ಅತ್ಯಾಚಾರ ಹೇಗಾಯಿತೆಂದು ಬಿಡಿಸಿ ಹೇಳಲು ಸೂಚಿಸಿದರೆಂದು ಸಂತಪ್ತೆ ಹೇಳಿ ಮುಖಮುಚ್ಚಿಕೊಂಡಿದ್ದಾಳೆ. ದಢಕ್ಕನೆ ಅದು ನಿಂತು -  ಈ ಕ್ರೀಂ ಹೀಗೆ ಹಚ್ಚಿಕೊಳ್ಳಿ, ಹೀಗೆ ತುಸು ಹೊತ್ತು ಬಿಟ್ಟು ಹಾಳೆ ಎಬ್ಬಿಸಿ. ನುಣುಪುನುಣುಪು ಚರ್ಮ. ‘ಈ ಬ್ರೇಸಿಯರ್ ನೋಡಿ...’ ಕಟ್. ಮತ್ತೆ ತನಿಖೆಯ ವರದಿ ಮುಂದರಿಯುತ್ತದೆ. ‘ವಿವರವಾಗಿ ಹೇಳಮ್ಮ. ಸುಮ್ಮನೆ ನಿಂತರೆ ಹೇಗೆ?’.

ಊರೊಳಗೆ ನುಗ್ಗಿ ಬಕೆಟ್ ಕದ್ದನೆಂದು ಒಬ್ಬನನ್ನು ಮರಕ್ಕೆ ಕಟ್ಟಿಹಾಕಿ ತದಕುತಿದ್ದಾರೆ. ‘ಊರವರೇ ಸರಿಯಾಗಿ ಗೂಸಾ ಕೊಟ್ಟು ಬುದ್ಧಿ ಕಲಿಸಿದರು’. ಅತ್ತ ಇನ್ನೊಂದು ಚಾನಲ್‌ನಲ್ಲಿ ಭ್ರಷ್ಟಾಚಾರದ ಪ್ರಕರಣವೊಂದು ಬೆಳಕಿಗೆ ಬಂದಿದೆ. ‘ಭ್ರಷ್ಟಾಚಾರಿ’ (ಹೆಸರಿನಲ್ಲಿ ಸಿನೆಮಾ ಬಂದರೂ ಬರಬಹುದು. ಗಲ್ಲಾಪೆಟ್ಟಿಗೆ ತುಂಬಲೂಬಹುದು) ತನ್ನ ತಿರುಗು ಕುರ್ಚಿಯಲ್ಲಿ ಕುಳಿತು ಅತ್ತ ಇತ್ತ ರವರವಂಡಾಗಿ ತಿರುಗುತ್ತ, ‘ನೀವು ನನ್ನ ಭ್ರಷ್ಟಾಚಾರ ಸಾಬೀತು ಮಾಡಿ. ಸಾಬೀತು ಮಾಡಿದಿರಾದರೆ ಆ ಕ್ಷಣವೇ ನಾನು ರಾಜೀನಾಮೆ ಕೊಟ್ಟೆ, ತಿಳಕೊಳ್ಳಿ’- ಅಟ್ಟಹಾಸದ ನಗೆ ಬೀರುತಿದ್ದಾನೆ.

ಗಣಿಗಳಲ್ಲಿ ಕಾರ್ಮಿಕರು ಸಿಲುಕಿ ಸತ್ತ ಸುದ್ದಿ, ಅದರ ಆಚೆ ಬದಿಯೇ ಒಂದು ಹೆಸರಾಂತ ಚಿನ್ನದಂಗಡಿಯಲ್ಲಿ ಹೆಸರಾಂತರೊಬ್ಬರು ಮೈತುಂಬ ಚಿನ್ನ ಹೇರಿಕೊಂಡು ನಿಂತಿದ್ದ ಫೋಟೋ ಇದೆ. ಅದರ ಕೆಳಗೆ - ಈ ಅಂಗಡಿಯ ಪ್ರತೀ ಆಭರಣ ಖರೀದಿಗೆ ಗ್ರಾಮು ಒಂದಕ್ಕೆ ನೂರು ರೂ ಡಿಸ್ಕೌಂಟ್. ಇನ್ನು ಎಂಟೇ ದಿನಗಳು ಮಾತ್ರ...

ಪುಟದ ಅಲ್ಲೇ ಆಚೆ - ದೇಹದ ತೂಕದ ಬಗ್ಗೆ ಯೋಚಿಸದಿರಿ. ಹೆಚ್ಚಿಸಿಕೊಳ್ಳಬೇಕೆ? ಇದೋ... ಇಲ್ಲಿದೆ (ಏನೋ ತುಂಬಿಕೊಂಡ ಔಷಧಿ ಬಾಟಲಿಯ ಚಿತ್ರದ ಪ್ರಿಂಟು). ಕಡಿಮೆಯಾಗಬೇಕೆ? ಇದೋ, ಇದನ್ನು ಕುಡಿಯಿರಿ. ಪರಿಣಾಮ ಕಂಡಿಲ್ಲವಾದರೆ ಹಣ ವಾಪಸ್... (ಅಲ್ಲಿ ಸೊಂಟದ ಸುತ್ತಳತೆಯನ್ನು ಯಾರೋ ಅಳೆಯುತ್ತಿರುವ ಚಿತ್ರದ ಪ್ರಿಂಟು). ಹೇಳುತ್ತ ಹೋದರೆ ಮುಗಿವುಂಟೆ?

ಏನನ್ನೂ ‘ಆಧುನಿಕ’ಗೊಳಿಸಬಹುದು. ಲೀಲಾಜಾಲವಾಗಿ. ಆಧುನಿಕ ಎಂಬುದರ ಅರ್ಥವನ್ನೂ ಬೇಕಾದರೆ. ಚಿಟಿಕೆ ಹೊಡೆಯುವಷ್ಟು ಸುಲಭವಾಗಿ. ಏನನ್ನು ಬೇಕಾದರೂ ಬಳಸಿ ವ್ಯಾಪಾರಕ್ಕೆ ಬೇಕಾದ ಭಾಷೆ ತಯಾರಿಸುವ ಘಟಕಗಳು ತಲೆಯೆತ್ತಿವೆ. ವೀರರೂ ಚತುರರೂ ಈಗ ಎಷ್ಟು ಆಧುನಿಕವಾಗಿರುವರೆಂದರೆ ವೈರಿಯನ್ನು ಸೋಲಿಸಲು ಅವರಿಗೆ ಆಯುಧಗಳೇ ಬೇಡ.
 
ಒಂದು ಯಃಕಶ್ಚಿತ್ ಬ್ರಶ್ಶು, ಒಂದು ಹೆಸರಾಂತ ಪೇಸ್ಟು ಸಾಕು. ಹಿಂದೆ ಆ ಬಿರುದು ತೊಟ್ಟವರು ಈಗ ಬಂದಲ್ಲಿ ಈ ವೀರರನ್ನು ನೋಡಿ ಗಾಬರಿ ಬಿದ್ದು ನಡುಗಿ ಓಟ ಕೀಳಬೇಕು. ಇನ್ನು - ಮಕ್ಕಳ ಕತೆ, ಪಂಚತಂತ್ರ, ಕಥಕ್ಕಳಿ, ಭರತನಾಟ್ಯಂ, ಯಕ್ಷಗಾನ, ಶಾರುಕ್, ಬಚ್ಚನ್, ಸಚಿನ್, ಹೇಮಾ, ಐಶ್, ಮಕ್ಕಳು ಮರಿಗಳು ಎಲ್ಲವೂ ಎಲ್ಲರೂ ಮೊಬೈಲು, ಕೋಲ, ಪೆಪ್ಸಿ ಸೂಪು, ಸೋಪು, ಶಾಂಪು, ವೈನು, ವಿಸ್ಪರ್, ಬೆಡ್ಡು, ಫುಡ್ಡು, ಹೊರಅಂಗಿ, ಒಳ ಅಂಗಿ - (ಬರೀ ಪಾಪದವರಂತೆ ಇತ್ತೀಚಿನವರೆಗೂ ಇದ್ದ ಅಗರುಬತ್ತಿಯನ್ನೂ, ಅದೂ ಹೋಗಲಿ, ನೀರನ್ನೂ!) ಬನ್ನಿಬನ್ನಿ ಕೊಳ್ಳಿ ಕೊಳ್ಳಿ ಕೊಳ್ಳಿ ಎನ್ನುತ್ತಿವೆ.

ಅವರಿಗೊಂದಿಷ್ಟು ದುಡ್ಡು ಕೊಟ್ಟರೆ ಸೈ ‘ಈ ಸೋಪು ಕೊಳ್ಳಿ’ ಎನ್ನುವವರೆಗೂ ತಮ್ಮ ಕರಿಷ್ಮಾ ಮಾರಿಕೊಳ್ಳುತ್ತಾರೆ. ಘಮಘಮ. ಚಿನ್ನದಂಥ ಚರ್ಮ. ಈ ನೀರು ಕುಡಿಯಿರಿ ಮತ್ತು ಈ ಮೊಬೈಲಿನಲ್ಲಿ ಭೂಮಿಯ ಆ ತುದಿಯಲ್ಲಿ ಇರುವವರೊಡನೆಯೂ ಸೆಕೆಂಡಿನಲ್ಲಿ ಮಾತಾಡಿ. (ಅವರಿಗೆ ಅದು ಅರ್ಥವಾಗಲಿ ಬಿಡಲಿ. ಅದು ಮುಖ್ಯವಲ್ಲ. ಸಿಗ್ನಲ್ ಸಿಗುವುದರ ಮತ್ತು ಮಾತಾಡುವುದರ ಎದುರು, ಅರ್ಥ ಸಂವಹನವೆ?- ಹಾಗೆಂದರೇನು?) ಇಲ್ಲಿ ಮರೆಯದೆ ್ಠಛಿ ‘ವಸುದೈವ ಕುಟುಂಬಕಂ’ - ಕೋರಸ್ ಹಾಡು.

ಏನೇ ಇರಲಿ, ಬೇಕಾದರೆ ತೆರೆದಿಟ್ಟ, ಇಲ್ಲವಾದರೆ ಆಫ್ ಮಾಡಿದ ಎಂದು ಸಮಾಧಾನ ಮಾಡಿಕೊಂಡು, ಹೇಗೊ ಅಂತೂ ಓದುತ್ತ ನೋಡುತ್ತ ಕೇಳುತ್ತ ಇರುವ ಹೊತ್ತಿಗೆ-ಈ ಎಲ್ಲವನ್ನೂ ಒಡೆದು ಬಂದ ಮೊನ್ನಿನ ಸುದ್ದಿ! ಜಪಾನ್ ಕಂಪಿಸುತ್ತಿದೆ. ಸುನಾಮಿಯ ತೆರೆಗೆ ತತ್ತರಿಸುತ್ತಿದೆ. (ಅದೇ ಹೊತ್ತಿಗೆ ಇಲ್ಲಿ ನೆನೆಗುದಿಗೆ ಬಿದ್ದುಬಿದ್ದು ಈಗ ಮುಹೂರ್ತ ಕಂಡಂತೆ ಛೆ, ವಿಶ್ವ ಕನ್ನಡಮೇಳದ ತೆರೆ ಏಳುತ್ತಿದೆ).

ಅದನ್ನೇ ಹೇಳಿಕೊಳ್ಳಲು ಹೊರಟು ಒಳಗುದಿಯಲ್ಲಿ ತಡೆತಡೆದು ಬೇರೆಬೇರೆಯೆಲ್ಲ ತಿರುಗಿ ಬಂದೆ... ಅದು ಐವತ್ತರ ದಶಕವಿರಬೇಕು. ಜಪಾನಿನಲ್ಲಿ ಒಂದು ಭೂಕಂಪವಾಯಿತು. ಆಗ ಇಷ್ಟೆಲ್ಲ ವೃತ್ತ ಪತ್ರಿಕೆಗಳು ಇರಲಿಲ್ಲವಾದರೂ ಸುದ್ದಿ ಉರೆಲ್ಲ ಹರಡಿತ್ತು. ‘ಭೂಮಿ ಆ ಅಂತ ಬಾಯಿ ಕಳೆುತು, ಆಗ ಒಂದು ಮಗು ತೊಟ್ಟಿಲಲ್ಲಿದ್ದಂತೆಯೇ ಅದರೊಳಗೆ ಕಾಣೆಯಾಯಿತು’ ಅಂತ ಕೇಳಿದ್ದು ಮಾತ್ರ ಒಡಲೊಳಗೇ ಹೊಕ್ಕಿ ಕುಳಿತಿದೆ.

ಪ್ರಾಥಮಿಕದ ಆ ವಯಸ್ಸಿನಲ್ಲಿ ಮಗುವೊಂದು ಆರೀತಿ ಕಾಣೆಯಾದ ಸುದ್ದಿ ಕೇಳಿದ ತಳಮಳವೆಂದರೆ ಅಂಥಿಂಥದಲ್ಲ. ಸಂಜೆ ಶಾಲೆಯಿಂದ ಮನೆಗೆ ಬಂದವಳು, ತಂದೆ ಬರುವವರೆಗೂ ಗೇಟಿನ ಬುಡದಲ್ಲೇ ಕಾದು ಅವರು ಬರುತ್ತಲೂ ಓಡಿಹೋಗಿ ಭೂಮಿ ಆ ಅಂತ ಬಾಯಿ ತಳೆದದ್ದು, ಮಗು ತೊಟ್ಟಿಲ ಸಮೇತ ಒಳಗೆ ಹೋದದ್ದು, ಆ ಮೇಲೆ ಭೂಮಿ ಬಾಯಿ ಮುಚ್ಚಿಕೊಂಡದ್ದು ಎಲ್ಲ ಹೇಳಿದೆ. ಆಗಲೇ ಅವರಿಗೆ ತಿಳಿದಿತ್ತೋ ಎಂಬಂತೆ ಅವರು ಗಂಭೀರರಿದ್ದರು. ಹೂಂಗುಡುತ್ತ ಕೇಳಿ, ಕೈಹಿಡಿದು ತನ್ನ ಜೊತೆಗೆ ಒಳಗೆ ಕರೆತಂದರು. ನನ್ನ ಕಳವಳದ ಪ್ರಶ್ನೆಯೊಂದಿತ್ತು. ಮೆಲ್ಲ ಕೇಳಿದೆ- ‘ಇಲ್ಲಿಯೂ ಭೂಕಂಪವಾಗುತ್ತದೆಯೇ? ನಾವು ಕೂಡ ಒಂದು ದಿನ ಭೂಮಿಯೊಳಗೆ ಹೋಗುತ್ತೇವೆಯೆ?’

’ಛೆ ಛೆ. ಇಲ್ಲ ಇಲ್ಲ. ಇಲ್ಲೆಲ್ಲ ಆಗುವುದಿಲ್ಲ. ಹಾಗೆಲ್ಲ ಹೆದರಬಾರದು. ಭೂಕಂಪದ ಜಾಗವದು, ಜಪಾನು. ಆದ್ದರಿಂದ ಆಯಿತು’. ತಳಮಳದ ಜೊತೆಗೇ ಉತ್ಪನ್ನವಾದ ಭಯ ಕಡಿಮೆಯಾಗಿತ್ತು. ಆಗ ಅದು ದೂರದಲ್ಲೆಲ್ಲೊ ನಡೆದ ಭೂಕಂಪ, ಒಂದು ದಾರುಣ ಸುದ್ದಿ ಮಾತ್ರ. ಆದರೆ ಇಂದು? ಇಲ್ಲೇ ಹತ್ತಿರದಲ್ಲೇ ಇದೆ ಜಪಾನ್. ಅಪ್ಪಳಿಸುವ ತೆರೆಗೆ ಸಿಕ್ಕಿ ತತ್ತರಿಸಿದೆ. ಸುನಾಮಿ (ಅಲ್ಲ ಅದು, ಕುನಾಮಿ) ತೆಕ್ಕೆಗೆ ಸಿಕ್ಕಿದ್ದನ್ನೆಲ್ಲ ಬರಗಿ ಬಾಚಿ ಹಾಳುಗೆಡವಿ ಅಟ್ಟಹಾಸಗೈದಿದೆ. ಇನ್ನಷ್ಟು ಮತ್ತಷ್ಟು ವಿನಾಶಕ್ಕಾಗಿ ಅಲ್ಲಿನ ಅಣುಸ್ಥಾವರಗಳೊಡನೆ ಸ್ನೇಹಹಸ್ತ ಚಾಚಿದೆ.  

ಜಪಾನ್. ಸಾಕ್ಷಾತ್ ಪ್ರಕೃತಿಯೇ ನಿರಂತರ ಹಿಂಸಿಸಲು ಆಯ್ದುಕೊಂಡ ಬೌದ್ಧಧರ್ಮದ ನಾಡು! ಆಕಾರದಲ್ಲಿ ಸಮುದ್ರನಾಲಗೆಯಷ್ಟಿದ್ದರೂ ಅದರ ಕಾರುಭಾರು, ಅದರ ಪರಿಶ್ರಮ, ಸಮಯ ಪ್ರಜ್ಞೆ! ಎರಡನೇ ಯುದ್ಧದ ನಂತರ ತಮ್ಮ ದೇಶಕ್ಕೆ ಮತ್ತೆ ಹೊಸದಾಗಿ ಜೀವವೂದಿ ಪ್ರಪಂಚದ ಮುಂಚೂಣಿಯಲ್ಲಿ ನಿಲ್ಲಿಸಿದ ಧೀರ ಜಪಾನೀಯರು ಅವರು. (ನಮ್ಮ ಕಾರಂತರಿಗಂತೂ ಆ ಜನರನ್ನು ಕಂಡರೆ ಅಷ್ಟೂ ಒಂದು ಮೆಚ್ಚುಗೆ. ಪ್ರಾಮಾಣಿಕ ದುಡಿಮೆಗೊಂದು ಮಾದರಿಯಾಗಿ ಅವರನ್ನು ತಮ್ಮ ಭಾಷಣಗಳಲ್ಲಿ ಸದಾ ನೆನೆಯುತಿದ್ದವರು ಅವರು).

ಅಣುಬಾಂಬಿನ ರಕ್ಕಸ ಆಟವನ್ನು ಜನ್ಮಾಂತರಕೆ ಮರೆಯದಂತೆ ಅನುಭವಿಸಿದ ಆ ಪ್ರಥಮರು ಈಗ ತಮ್ಮದೇ ಅಣುಸ್ಥಾವರಗಳಿಂದ ಭಯಾವೃತರಾಗಬೇಕೆ! ಬುದ್ಧನ ನಾಡು ಹೋಗಿ ಹೋಗಿ ಅಣುವಿಗೆ ಶರಣಾಯಿತೆ? ಮನುಷ್ಯ ತಿಳಿದೂ ತಿಳಿದೂ ಅಣುವಿನ ಗೂಡಿಗೆ ಕೈ ಹಾಕಿದ್ದಾದರೂ ಯಾಕೆ? ಯಾವ ಭರವಸೆಯಿಂದ? ಗ್ಲೋಬಲ್ ವಿಲೇಜ್ ಕಲ್ಪನೆ ಪ್ರತಿವಾದಗಳನ್ನು ಮುರಿದು ಹೌದೆನಿಸಿದ್ದು ಮಾತ್ರ ಮೊನ್ನೆ ಜಪಾನಿನ ಭೂಕಂಪನದೊಂದಿಗೆ, ಅಣುಸ್ಥಾವರಗಳ ಹೊಗೆ ಕಂಡಾಗ. ನಿಜವೆ.

ಜಗತ್ತು ಪುಟ್ಟ ಗೋಲಿಯಾಗಿದೆ, ಈಗಾದರೆ ನಂಬಲೇಬೇಕು. ಜಪಾನಿನಲ್ಲಿ ತೊಡಗಿದ ಅಣುವಿಕಿರಣದ ‘ಗಾಳಿಸೋಂಕು’ ನಾನಾ ಸೋಂಕು ಈಚೆಗೂ ತಾಕುವ ವರ್ತಮಾನವಿದೆ. ವರ್ತಮಾನವೋ ಅದು ಭವಿಷ್ಯವೋ. ಒಟ್ಟಿನಲ್ಲಿ ಅಂಥಾ ಜಪಾನೀಯರೇ ಕಂಗೆಡುವ ಸ್ಥಿತಿ ಬಂತು ಎಂದರೆ ನಮ್ಮಲ್ಲಿನ ಸಿಂಗಳೀಕದಂಥ ಸ್ಥಾವರಗಳು ಎಷ್ಟು ಸುರಕ್ಷಿತ? ಅಳಿವ ಸ್ಥಾವರಗಳ ಅಪಾಯವನ್ನು ಯಾವ ಬುದ್ಧಜಂಗಮ ತಪ್ಪಿಸುವ?

ವ್ಯಂಗ್ಯವೆಂದರೆ - ಹತ್ತು ಜನರ ಮರಣ ಮದುವೆಗೆ ಸಮಾನ ಎಂಬ ಗಾದೆಯಿತ್ತು. ಕ್ಷಾಮಡಾಮರಗಳು ಅಂಟುರೋಗಗಳು ಬಂದು ಊರಿಗೆ ಊರೇ ಸಾಯುತ್ತಿದ್ದ ಕಾಲದ ಗಾದೆ ಅದು. ಆದರೆ ಆ ಗಾದೆ ಈಗ ಅಡಿಮೇಲಾಗಿ ಹತ್ತು ಜನರ ಮರಣ ಕೋಟಿಹಣಕೆ ಸಮಾನ ಅಂತಾಗಿದೆ. ಜಪಾನ್ ದುರಂತದ ಚಿತ್ರಣಗಳ ಜೊತೆಗೇ, ಜಾಹೀರಾತುಗಳು, ಒಳ್ಳೆ ಸಮಯ ಒಳ್ಳೆ ಸಮಯ ಕೊಳ್ಳೆ ಸಮಯವೂ...

ಕತೆ ಕೇಳಿ- ನಡು ರಾತ್ರಿ ಒಂದು ಮನೆಯಲ್ಲಿ ಏನೋ ಶಬ್ದವಾಯಿತಂತೆ. ಏನದು, ಕಳ್ಳ ಇರಬಹುದೆ? ಇಲ್ಲ, ಬೆಕ್ಕಿರಬಹುದು, ಇಲ್ಲ ಕಳ್ಳ ಇಲ್ಲ ಬೆಕ್ಕು. .. ಹೀಗೆ ವಾದ ವಿವಾದ ಆಗಿಆಗಿ ‘ಏನೊ, ಬೆಳಿಗ್ಗೆ ನೋಡೋಣ. ವಸ್ತುಗಳೆಲ್ಲ ಇದ್ದರೆ, ಬೆಕ್ಕು ಅಂತ, ಇಲ್ಲವಾದರೆ ಕಳ್ಳ ಅಂತ ನಿರ್ಧಾರ’ ಅಂತಂದು ನಿದ್ದೆಯ ಅಮಲಿನಿಂದ ಹೊರಬರಲು ಮನಸಿಲ್ಲದೆ ಎಲ್ಲ ಹೊದಿಕೆ ಮುಚ್ಚಿಕೊಂಡು ಮಲಗಿದರು. ಬೆಳಗೆದ್ದು ನೋಡಿದರೆ ಏನಂದರೆ ಏನೂ ಇಲ್ಲದಂತೆ ಮನೆ ಖಾಲಿಯಾಗಿತ್ತು.

ನಮ್ಮ ಅವಸ್ಥೆಯಾದರೂ ಇನ್ನೇನು? ಅವರಿವರ ಮೇಲೆ ದೂರು ಹಾಕುತ್ತ ನಾವು ನಮ್ಮಷ್ಟಕೆ ಇದ್ದೇವೆ. ಎಚ್ಚರಾಗುವ ಹೊತ್ತಿಗೆ, ‘ಕುಡಿಯುವ ನೀರು ಕಲುಷಿತ, ಬೆಳೆಹಾನಿ’, ಮಣ್ಣಿಲ್ಲ, ನೀರಿಲ್ಲ, ಗಾಳಿಯಿಲ್ಲ, ಬೆಳೆಯಿಲ್ಲ. ಇಲ್ಲ ಇಲ್ಲ ಊರೆಲ್ಲಾ, ಇಲ್ಲಾಂದೇವಿಯ ದೇಗುಲವಾಗಲು- ದೂರಾ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT