ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಂಸ್ಕೃತಿಯ ಅಭಿವ್ಯಕ್ತಿಗಳನ್ನುಬೆಳೆಸುವ ಬಗೆ...

Last Updated 29 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಸನ್ಮಾನ್ಯ ಮುಖ್ಯಮಂತ್ರಿಯವರೇ, ಹಿಂದಿನ ಪತ್ರದಲ್ಲಿ ಕನ್ನಡದ ಏಳಿಗೆಗಾಗಿ ಕರ್ನಾಟಕದ ಹೊರಗಡೆ ಆಗಬೇಕಾದ ಕೆಲಸದ ಬಗ್ಗೆ ಬರೆದಿದ್ದೆ. ಈಗ ಕರ್ನಾಟಕದೊಳಗೆ ತುರ್ತಾಗಿ ಆಗಬೇಕಾದದ್ದರ ಬಗ್ಗೆ ಬರೆಯುತ್ತಿದ್ದೇನೆ.

ಕನ್ನಡಪರ ಹೋರಾಟಗಾರರ, ಸರ್ಕಾರದ ದೀರ್ಘಕಾಲೀನ ಪ್ರಯತ್ನದ ಮೂಲಕ ಆಡಳಿತದ ಎಲ್ಲಾ ಹಂತಗಳಲ್ಲಿ ಕನ್ನಡ ಬಳಕೆಯಾಗುತ್ತಿರುವುದು ಸಂತಸದ ಸಂಗತಿ. ಆಡಳಿತಾತ್ಮಕ ಬಳಕೆಗಾಗಿ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಒಪ್ಪಿತವಾದ ಶಿಷ್ಟಭಾಷೆಯೊಂದು ತಯಾರಾಗಿದೆ. ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಒತ್ತನ್ನು ನೀಡಿ, ಕನ್ನಡ ಪ್ರದೇಶಗಳ ಅಲ್ಪಸಂಖ್ಯಾತ ಭಾಷೆಗಳಿಗೂ ಪ್ರೋತ್ಸಾಹ ನೀಡುತ್ತಿರುವ ಸರ್ಕಾರದ ಪ್ರಯತ್ನಗಳೂ ಸ್ತುತ್ಯರ್ಹ. ಇಷ್ಟಾದರೂ ಕನ್ನಡದ ಮುಂಗಾಲದ ಬಗ್ಗೆ ಅನುಮಾನ ಮೂಡಿಸುವ ಹಲವು ಬೆಳವಣಿಗೆಗಳು ಉಂಟಾಗಿವೆ. ಈ ಬಗ್ಗೆ ನಾವು ಕೂಡಲೇ ಎಚ್ಚೆತ್ತುಕೊಂಡು ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ಗೋಳೀಕರಣದ ಬಿರುಗಾಳಿಗೆ ಸಿಕ್ಕಿರುವ ಜಗತ್ತಿನಲ್ಲಿ ಇಂಗ್ಲಿಷನ್ನು ಆಶ್ರಯಿಸದಿದ್ದರೆ ನಮ್ಮ ಏಳಿಗೆ ಸಾಧ್ಯವಿಲ್ಲವೆನ್ನುವ ದೃಢ ವಿಶ್ವಾಸ ನಮ್ಮಲ್ಲಿ ಜನಜನಿತವಾಗುತ್ತಿದೆ. ಅಪ್ರಜ್ಞಾಪೂರ್ವಕ ನೆಲೆಯಲ್ಲಿ ನಮ್ಮಲ್ಲಿ ಬಹುತೇಕರು ಈ ವಿಶ್ವಾಸವನ್ನಿಟ್ಟುಕೊಂಡಿದ್ದೇವೆ. ಚೀನಾ, ಜಪಾನ್, ಕೊರಿಯಾ ಮುಂತಾದ ಏಷಿಯಾದ ದೇಶಗಳಲ್ಲಿ, ಇಸ್ರೇಲಿನಲ್ಲಿ ಇಂಗ್ಲಿಷಿನ ಮೇಲೆ ಅವಲಂಬಿತರಾಗದೆ ಅಲ್ಲಿನ ಜನತೆ ವಿಜ್ಞಾನ, ತಂತ್ರಜ್ಞಾನಗಳಲ್ಲಿ ಗಣನೀಯ ಮುನ್ನಡೆ ಸಾಧಿಸಿರುವುದನ್ನು ನೋಡಿದರೆ ನಮ್ಮ ಈ ಆಳದ ನಂಬಿಕೆ ನಮ್ಮ ಇತಿಹಾಸದ ಪರಿಣಾಮ ಮಾತ್ರವೆಂದೂ ಅದು ವಿಶ್ವಸತ್ಯವಲ್ಲವೆಂದೂ ಗೋಚರವಾಗುತ್ತದೆ.

ಆದರೆ ಕರ್ನಾಟಕ, ಬಹುಭಾಷಿಕ ಭಾರತದ ಭಾಗವಾಗಿರುವುದರಿಂದ ಏಕಭಾಷಿಕವಾದ ಆ ದೇಶಗಳ ರೀತಿಯ ಪರಿಸ್ಥಿತಿ ನಮ್ಮಲ್ಲಿಲ್ಲ. ಹೀಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವನ್ನೂ ಒಳಗೊಂಡು ಎಲ್ಲ ರಾಜ್ಯಗಳಲ್ಲಿ ಹಿಂದಿಯ ಜೊತೆಗೆ ಇಂಗ್ಲಿಷೂ ಒಂದು ಅಂತರ್‌ಪ್ರಾದೇಶಿಕ ಸಂಪರ್ಕ ಭಾಷೆಯಾಗಿ ಮುಂದುವರಿಯುವುದು ಅನಿವಾರ್ಯವಾಗಿದೆ. ಜೊತೆಗೆ ಇಂಗ್ಲಿಷ್ ಹೊರಜಗತ್ತಿನ ತಿಳಿವಳಿಕೆಗೆ ಮತ್ತು ಹೊರಗಿನ ವ್ಯವಹಾರಗಳಿಗೆ ಚಾರಿತ್ರಿಕ ಕಾರಣಗಳಿಂದ ನಮಗೆ ಅಗತ್ಯವಾಗಿದೆ. ಆದ್ದರಿಂದ ಇಂಗ್ಲಿಷನ್ನು ನಮ್ಮ ಎಲ್ಲ ಮಕ್ಕಳಿಗೆ ಎಲ್ಲ ಹಂತದಲ್ಲೂ ಕಲಿಸುವುದು ಅನಿವಾರ್ಯ.

ಆದರೆ ಸದ್ಯ ಉಳ್ಳವರ ಮಕ್ಕಳು ಹೋಗುವ ಕಾನ್ವೆಂಟ್ ಶಾಲೆಗಳಲ್ಲಿ ಮಾತ್ರ ಭರ್ಜರಿಯಾಗಿ ಇಂಗ್ಲಿಷನ್ನು ಕಲಿಸಲಾಗುತ್ತಿದೆ. ನಮ್ಮಂಥವರು ಕಲಿಯುವ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಕೆ ಇದೆಯಾದರೂ ಕಲಿಸುವವರಿಗೇ ಸರಿಯಾದ ಇಂಗ್ಲಿಷ್ ಬರದಿರುವುದರಿಂದ ಬೋಧನೆ ಸಮರ್ಪಕವಾಗಿ ಆಗುವುದಿಲ್ಲ. ಇಂತಹ ಶಾಲೆಗಳಲ್ಲಿ ಕಲಿತವರಿಗೆ ಜೀವನಪರ್ಯಂತ ಇಂಗ್ಲಿಷಿನ ಬಗ್ಗೆ ಕೀಳರಿಮೆ ಉಳಿದುಬಿಡುತ್ತದೆ. ಪ್ರೌಢಶಾಲೆಯವರೆಗೆ ಕನ್ನಡ ಮಾಧ್ಯಮದ ವಿದ್ಯಾಕೇಂದ್ರಗಳಲ್ಲೇ ಕಲಿತ ನನ್ನಂಥವರಿಗೂ ಈ ಕೀಳರಿಮೆ ತಪ್ಪಿದ್ದಲ್ಲ. ಹರಸಾಹಸ ಮಾಡಿ ಇಂಗ್ಲಿಷನ್ನು ಸ್ವಂತ ಪ್ರಯತ್ನದಿಂದ ತಕ್ಕಮಟ್ಟಿಗೆ ಕಲಿತ ಮೇಲೂ ಕರ್ನಾಟಕದ, ಭಾರತದ ಹೊರಗೆ ಇಂಗ್ಲಿಷಿನಲ್ಲೇ ವ್ಯವಹರಿಸುವ ನನ್ನಂಥವರ ಮನದಾಳದಲ್ಲೂ ಈ ಅಳುಕು ಅಳಿಸಿಹೋಗಿಲ್ಲ. ಕಾರಣ ನಾವು ಇಂಗ್ಲಿಷ್ ಕಲಿತ ವಿಧಾನ.

ಇದೇ ಪರಿಸ್ಥಿತಿಯ ಇನ್ನೊಂದು ಮುಖವನ್ನು ಕಾನ್ವೆಂಟ್ ಶಾಲೆಗಳಲ್ಲಿ ಕಾಣಬಹುದು. ಅಲ್ಲಿ ಹಿಂದಿ ಅಥವಾ ಪ್ರಾದೇಶಿಕ ಭಾಷೆಗಳನ್ನು ಶಾಸ್ತ್ರಕ್ಕೆ ಕಲಿಸಲಾಗುತ್ತಿದೆಯಾದರೂ ಮಿಕ್ಕೆಲ್ಲ ಕಲಿಕೆ-ಬಳಕೆಗಳಿಗೆ ಇಂಗ್ಲಿಷಿನ ಸಾರ್ವಭೌಮತ್ವ ಇರುವುದರಿಂದ ಅಲ್ಲಿ ಕಲಿತ ಮಕ್ಕಳು ಕನ್ನಡ ಭಾಷೆ ಮತ್ತು ಬಹುಮಟ್ಟಿಗೆ ಸಂಸ್ಕೃತಿಗಳಿಗೆ ಪರಕೀಯರಾಗುತ್ತಾರೆ. ಇಂಥ ಉತ್ತಮ ಶಿಕ್ಷಣ ಪಡೆದ ನಮ್ಮ ನಂತರದ ತಲೆಮಾರಿನ ಪ್ರತಿಭಾವಂತರು ಯಾವುದೇ ಕ್ಷೇತ್ರದಲ್ಲಿರಲಿ ಕನ್ನಡವನ್ನೂ ಒಂದು ವಿದೇಶಿ ಭಾಷೆಯೆಂಬಂತೆ ಮಾತಾಡುತ್ತಾರೆ.

ನಮ್ಮ ವಿಶಿಷ್ಟ ಚಾರಿತ್ರಿಕ ಸುತ್ತುನೆಲೆಯಲ್ಲಿ ಇಂಗ್ಲಿಷ್ ಭಾಷೆ ಸಾಂಸ್ಕೃತಿಕ ದುರಹಂಕಾರದ ಜೊತೆಗೆ ತಳುಕು ಹಾಕಿಕೊಂಡಿರುವುದರಿಂದ ತಮ್ಮ ಒಟ್ಟು ಯೋಗ್ಯತೆಗಿಂತಲೂ ಹೆಚ್ಚಿನ ಆತ್ಮವಿಶ್ವಾಸವನ್ನು ಹೊಂದಿರುವ ಕಾನ್ವೆಂಟ್ ಕರಕಮಲಸಂಜಾತರೂ ಬದುಕಿನ ಬಹುತೇಕ ಕ್ಷೇತ್ರಗಳಲ್ಲಿ ಕನ್ನಡ ಮಾಧ್ಯಮದ ಮಕ್ಕಳಿಗಿಂತ ಮುಂದೆ ಹೋಗಿಬಿಡುತ್ತಾರೆ. ಇಂಗ್ಲಿಷ್ ಕೇಂದ್ರಿತ ಉನ್ನತ ಶಿಕ್ಷಣ, ಸೇವಾ ಪರೀಕ್ಷೆಗಳು ಇತ್ಯಾದಿಗಳಲ್ಲಿ ಇವರೇ ಮೇಲುಗೈ ಸಾಧಿಸಿ ಆಳುವ, ಆಲೋಚಿಸುವ ವರ್ಗದವರಾಗಿಬಿಡುತ್ತಾರೆ. ಉಳಿದವರು ಅವರನ್ನು ಅನುಸರಿಸುವ ಮಟ್ಟಿಗಿನ ಸಾರ್ಥಕ್ಯವನ್ನು ಪಡೆದುಕೊಳ್ಳುವ ಸ್ಥಿತಿ ಬಂದೊದಗಿದೆ.

ದ್ವಿಮುಖಿಯಾದ ಶಿಕ್ಷಣ ವ್ಯವಸ್ಥೆಯಿಂದ ದೇಶೀಯ ಇಂಗ್ಲಿಷ್ ಜನರು ಹೆಚ್ಚುಹೆಚ್ಚಾಗಿ ಆಡಳಿತ, ಪೊಲೀಸ್, ಉನ್ನತ ಶಿಕ್ಷಣ, ನ್ಯಾಯಾಂಗ, ಸ್ವಾಸ್ಥ್ಯ ಸಂಬಂಧಿಯಾದ ವೃತ್ತಿಗಳಲ್ಲಿ ಎಲ್ಲ ಕಡೆ ರಾರಾಜಿಸುವ ಸಾಧ್ಯತೆಗಳು ದಿನೇದಿನೇ ವಿಸ್ತಾರಗೊಳ್ಳುತ್ತಿವೆ. ಇದರಿಂದ ಸಂಭವಿಸಬಹುದಾದ ಸಾಮಾಜಿಕ ವೈಷಮ್ಯವನ್ನು ತಡೆಯಲು ಶೈಕ್ಷಣಿಕ ಸಮಾನತೆಯೊಂದೇ ಮಾರ್ಗ. ಅಂದರೆ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಮಾಧ್ಯಮವನ್ನೇ ಉಳಿಸಿಕೊಂಡು ಇಂಗ್ಲಿಷನ್ನು ಪ್ರಾಥಮಿಕ ಹಂತದಿಂದಲೂ ಸರಿಯಾದ ರೀತಿಯಲ್ಲಿ ಕಲಿಸುವ ವ್ಯವಸ್ಥೆಯಾಗಬೇಕು.

ಹೀಗೆ ಕನ್ನಡದ ಆದ್ಯತೆಯನ್ನುಳಿಸಿಕೊಂಡು ಸಮಾನಾಂತರವಾಗಿ ಇಂಗ್ಲಿಷ್ ಕಲಿಸುವ ಖಾಸಗಿ ಶಾಲಾಕಾಲೇಜುಗಳಿಗೆ ಮಾತ್ರ ರಾಜ್ಯ ಸರ್ಕಾರದ ನೆರವು ಮತ್ತು ಪ್ರೋತ್ಸಾಹ ದೊರಕಬೇಕು. ಈಚಿನ ದಿನಗಳಲ್ಲಿ ಸ್ವದೇಶೀ ಪರಕೀಯರನ್ನು ಬೆಳೆಸುವ ಇಂಗ್ಲಿಷ್ ಶಾಲೆಗಳು ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಮೇಲೂ ತಮ್ಮ ಮಾಯಾದಂಡವನ್ನು ಬೀಸುತ್ತಿರುವುದರಿಂದ ಶಿಕ್ಷಣ ಸಮಾನತೆಯ ಪರವಾದ ಕ್ರಮಗಳನ್ನು ಒಂದು ಹೋರಾಟದ ರೀತಿಯಲ್ಲಿ ಕೈಗೆತ್ತಿಕೊಳ್ಳಬೇಕಾಗಿದೆ. ಅಲ್ಲದೇ ನಮ್ಮ ಅನೇಕ ರೀತಿಯ ವೃತ್ತಿಗಳಲ್ಲಿ ತೊಡಗಿರುವ ಇಂಗ್ಲಿಷ್ ಅಸ್ತ್ರಧಾರಿಗಳಿಗೆ ಕನ್ನಡಿಗರ ಜೊತೆಗಿನ ವ್ಯವಹಾರದಲ್ಲಿ ಕನ್ನಡವನ್ನೇ ಬಳಸಬೇಕೆನ್ನಿಸುವ ವಾತಾವರಣ ನಿರ್ಮಿತವಾಗಲು ಎಲ್ಲ ಕನ್ನಡಪರ ಸಂಸ್ಥೆಗಳೂ ಪ್ರಯತ್ನಿಸಬೇಕು. ನನ್ನ ಪ್ರಕಾರ ಸ್ಥಾನಿಕ ಭಾಷೆಗಳ ಪಾರಮ್ಯವನ್ನು ಎಲ್ಲ ಕ್ಷೇತ್ರಗಳಲ್ಲೂ ಉಳಿಸಿಕೊಂಡೇ ಹೊರವ್ಯವಹಾರಗಳಿಗೆ ಇಂಗ್ಲಿಷ್ ಕಲಿಕೆಯನ್ನು ಸಮರ್ಪಕವಾಗಿ ಬೆಳೆಸುತ್ತಿರುವ ಜರ್ಮನಿ, ಸ್ವೀಡನ್, ಡೆನ್ಮಾರ್ಕ್, ನಾರ್ವೆ ಮುಂತಾದ ಐರೋಪ್ಯ ರಾಷ್ಟ್ರಗಳ ಭಾಷಿಕ ನೀತಿ ನಮಗೆ ಮಾದರಿ.

ಕನ್ನಡ ಸಾಹಿತ್ಯ ಅತ್ಯಧಿಕ ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿದೆಯೆಂದು ನಾವು ಹೆಮ್ಮೆಪಡುತ್ತೇವೆ. ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಒಟ್ಟಾರೆಯಾಗಿ ಕನ್ನಡ ಸಾಹಿತ್ಯ ಬಹು ದೊಡ್ಡದನ್ನು ಸಾಧಿಸಿದೆ, ನಿಜ. ಅದರೆ ಕನ್ನಡ ವಿಶ್ವಮಟ್ಟದಲ್ಲಿ ಪ್ರತಿಷ್ಠಿತ ಭಾಷೆಯಾಗಿ ತಲೆಯೆತ್ತಿ ನಿಲ್ಲಬೇಕಾದರೆ ವೈಜ್ಞಾನಿಕ, ಮಾನವಿಕ ಕ್ಷೇತ್ರಗಳಲ್ಲಿಯೂ ಕನ್ನಡದ ವಿಕಾಸವಾಗಬೇಕಿದೆ. ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಈ ಕ್ಷೇತ್ರಗಳ ಚಿಂತನೆ, ಮಹಾಪ್ರಬಂಧ ರಚನೆ ಕನ್ನಡದಲ್ಲೇ ಆಗುವಂತಾಗಬೇಕು.

ಈ ಕ್ಷೇತ್ರಗಳ ತಜ್ಞರು ಇಂಗ್ಲಿಷ್ ಭಾಷೆ ಮತ್ತು ಚಿಂತನೆಗಳ ಗುಲಾಮರಾಗಿರುವುದರಿಂದ ಇಂಥ ಮಹತ್ತರ ಬದಲಾವಣೆಯನ್ನು ಉನ್ನತ ಶಿಕ್ಷಣದಲ್ಲಿ ತರುವುದು ಕಠಿಣಸಾಧ್ಯವಾದರೂ ಕನ್ನಡ ಜನತೆಯ ಮಾನಸಿಕ ವಿಕಾಸಕ್ಕೆ ಇದು ಅತ್ಯಗತ್ಯ. ವಿಜ್ಞಾನ ಮತ್ತು ಮಾನವಿಕ ಜ್ಞಾನಶಾಖೆಗಳಿಗೆ ಕನ್ನಡದ ದೀಕ್ಷೆ ನೀಡಿ ಕನ್ನಡವಿಶಿಷ್ಟವಾದ ಚಿಂತನೆ, ವಿಶ್ಲೇಷಣೆ ಮತ್ತು ಧಾರಣೆಗಳು ನಿರ್ಮಾಣವಾಗಲು ಬೇರೆ ಮಾರ್ಗವಿಲ್ಲ. ಶಂಬಾ ಜೋಷಿ ಅವರಂತಹ ಹಿರಿಯ ಚಿಂತಕರು ಯಾವುದೇ ವಿಶ್ವವಿದ್ಯಾಲಯದ ನೆರವಿಲ್ಲದೇ ಕನ್ನಡವಿಶಿಷ್ಟವಾದ ಬೃಹತ್ ಚಿಂತನಾ ಕ್ರಮವನ್ನು ಕಟ್ಟಿದ ನಿದರ್ಶನ ಈಗಾಗಲೇ ನಮ್ಮ ಮುಂದಿದೆ. ಒಬ್ಬ ವ್ಯಕ್ತಿ ಮಾಡಿದ್ದನ್ನು ಸಂಸ್ಥೆಗಳು ಯಾಕೆ ಮಾಡಬಾರದು?

ಸಾಮೂಹಿಕ ಸಂಕಲ್ಪದ ಅಭಾವವಲ್ಲದೇ ಯಾವ ಕಾರಣವೂ ಇಲ್ಲ. ಭೌತಿಕ ವಿಜ್ಞಾನಗಳು ಬಹುಮಟ್ಟಿಗೆ ಏಕರೂಪಿಯೆಂದು ಒಪ್ಪಿಕೊಂಡರೂ ಮಾನವಿಕ ಮತ್ತು ಚಿಕಿತ್ಸಾಸಂಬಂಧಿ ಕ್ಷೇತ್ರಗಳಲ್ಲಿ ನಮ್ಮ ವಿಶಿಷ್ಟ ಛಾಪನ್ನು ನಾವು ಇನ್ನೂ ಮೂಡಿಸಬೇಕಾಗಿದೆ.

ಇಂದು ದಿನನಿತ್ಯದ ಸಂಪರ್ಕಕ್ಕೆ ಅನಿವಾರ್ಯವಾದ ವಿದ್ಯುನ್ಮಾನ ಲೋಕವನ್ನು ಕನ್ನಡ ಪ್ರವೇಶಿಸಿರುವುದು ಸಂತೋಷ. ಕರ್ನಾಟಕ ಸರ್ಕಾರವು ಅಂಗೀಕರಿಸಿರುವ ನುಡಿ ಅಕ್ಷರಗಳು ಉಪಯಕ್ತ. ಆದರೆ ಅಷ್ಟು ಸಾಲದು. ಅಂತರರಾಷ್ಟ್ರೀಯವಾಗಿ ಕನ್ನಡ ಬಳಕೆಗೆ ಅನುವು ಮಾಡಿಕೊಡಲು ಡಾ. ಚಿದಾನಂದ ಗೌಡ ಮತ್ತವರ ಸಹಾಯಕ ತಜ್ಞರು ಶಿಫಾರಸು ಮಾಡಿರುವ ಕನ್ನಡ ಯೂನಿಕೋಡ್ ಶಿಷ್ಟತೆಯನ್ನು ಒಪ್ಪಿಕೊಂಡು ತುರ್ತಾಗಿ ಜಾರಿಗೊಳಿಸಬೇಕಾಗಿದೆ.

ಕನ್ನಡ ನುಡಿಯ ಉಳಿವು ಕನ್ನಡ ಸಂಸ್ಕೃತಿಯ ಉಳಿವಿನ ಜೊತೆಗೆ ಕೂಡಿಕೊಂಡಿದೆ. ನಮ್ಮ ವಿಕಾಸಶೀಲ ಸಂಸ್ಕೃತಿಯ ಸ್ವರೂಪದ ಬಗ್ಗೆ ಅಂತಿಮವಾದ ನಿರ್ವಚನ ನೀಡುವ ಸ್ಥಿತಿಯಲ್ಲಿ ನಾವ್ಯಾರೂ ಇಲ್ಲವೆಂಬುದು ನಿಜವಾದರೂ ಅಂಥದೊಂದು ಇದೆಯೆನ್ನುವುದು ನಮಗೆಲ್ಲರಿಗೂ ಗೊತ್ತಿದೆ. ಅದು ಯಾವುದೇ ಪ್ರತ್ಯೇಕ ಜಾತಿ, ವರ್ಣ, ವರ್ಗ, ಪ್ರದೇಶದ ಸಿದ್ಧಿಯಲ್ಲ. ಶತಶತಮಾನಗಳಿಂದ ಈ ಭೂವಲಯದಲ್ಲಿ ಬಾಳುತ್ತಾ ಬಂದಿರುವ ಕವಿಗಳು, ಕಲೆಗಾರರು, ದಾರ್ಶನಿಕರು, ಸಂತರು, ಸುಧಾರಕರು ಇದನ್ನು ನಿರ್ಮಿಸುತ್ತಾ ಬಂದಿದ್ದಾರೆ.

ಹೊರಗಿನದಿಂದ ಬೇಕಾದ್ದನ್ನು ಸ್ವೀಕರಿಸಿ ಒಳಗಿನ ಸತುವನ್ನು ಬೆಳೆಸಿದ್ದಾರೆ. ವಸಾಹತು ಯುಗದಲ್ಲಿ ಈ ಪ್ರಕ್ರಿಯೆಗೆ ದೊಡ್ಡ ಸವಾಲು ಬಂತು. ಆದರೂ ನಮ್ಮ ಜನವರ್ಗಗಳು ಅದನ್ನು ಎದೆಗಾರಿಕೆಯಿಂದ ಎದಿರುಗೊಂಡವು. ಆದರೆ ಗೋಳೀಕರಣದ ಯುಗದಲ್ಲಿ ಸಂಸ್ಕೃತಿನಿರ್ಮಾಣದ ಪ್ರಕ್ರಿಯೆ ಅತ್ಯಂತ ಸಂದಿಗ್ಧವಾಗಿದೆ. ಸಾಹಿತ್ಯವನ್ನೂ ಒಳಗೊಂಡು ನಮ್ಮ ಇತರ ಸಾಂಸ್ಕೃತಿಕ ನಿರ್ಮಿತಿಗಳನ್ನು ಸಂರಕ್ಷಿಸುವ ಹೊಣೆ ನಮ್ಮ ಮೇಲಿದೆ. ಈ ಹೊಣೆಯನ್ನು ಸಮರ್ಥವಾಗಿ ನಿರ್ವಹಿಸಲು ಎರಡು ಅತಿಗಳನ್ನು ತೊರೆಯಬೇಕು: ಮೊದಲನೆಯದು ಗತವನ್ನು ವೃಥಾ ವೈಭವಿಸುವ ಮಾರ್ಗ; ಎರಡನೆಯದು ಗತವನ್ನು ತ್ಯಾಜ್ಯವೆಂದು ಬಗೆಯುವ ಪ್ರಗತಿಯ ವಿಕಾರ.

ಒಂದೆರಡು ವರ್ಷಗಳ ಹಿಂದೆ ಕನ್ನಡವನ್ನೂ ಒಳಗೊಂಡು ಭಾರತೀಯ ಭಾಷೆಗಳಿಗಾಗುತ್ತಿರುವ ಅಪಾಯವನ್ನು ಅಮೆರಿಕದ ಭಾರತೀಯ ತಜ್ಞ ಷೆಲ್ಡನ್ ಪೋಲಕರು ತಮ್ಮ ಪತ್ರಿಕಾಲೇಖನದಲ್ಲಿ ಸೂಚಿಸಿದ್ದರು. ಅಮೆರಿಕದ ವಿಸ್‌ಕಾನ್ಸಿನ್ ವಿಶ್ವವಿದ್ಯಾಲಯದ ತೆಲುಗು ಪ್ರಾಧ್ಯಾಪಕರು ನಿವೃತ್ತಿಯಾದ್ದರಿಂದ ತೆಲುಗು ಬೋಧಕರ ಹುದ್ದೆಗೆ ಜಾಹೀರಾತು ನೀಡಲಾಯಿತು. ಬಂದ ಸಾವಿರಾರು ಅರ್ಜಿಗಳಲ್ಲಿ ಆಯ್ದ ನೂರಕ್ಕೂ ಹೆಚ್ಚಿನ ಅರ್ಜಿದಾರರನ್ನು  ಸಂದರ್ಶನ ಮಾಡಿದಾಗ ಒಂದು ಆಶ್ಚರ್ಯ ಅವರನ್ನು ಕಾದಿತ್ತು.

ತೆಲುಗಿನಲ್ಲಿ ಎಂ.ಎ., ಪಿಎಚ್.ಡಿ ಮಾಡಿದ್ದ ಅವಷ್ಟೂ ಅಭ್ಯರ್ಥಿಗಳಲ್ಲಿ ಒಬ್ಬರೂ ಒಂದು ಪ್ರಾಚೀನ ತೆಲುಗು ಕೃತಿಯನ್ನು ಓದಲು ಸಮರ್ಥರಾಗಿರಲಿಲ್ಲ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ರಚಿತವಾಗಿರುವ ಆಧುನಿಕಪೂರ್ವ ಭಾರತೀಯ ಭಾಷೆಗಳ ಗ್ರಂಥರಾಶಿಯ ವಿಶಿಷ್ಟ ಚಿಂತನಾವಿಧಾನದಿಂದ ಆಯಾ ಭಾಷೆಗಳ ತಜ್ಞರೇ ಹೀಗೆ ಪರಕೀಯರಾದಾಗ ಅವುಗಳಲ್ಲಿ ಅಡಗಿರಬಹುದಾದ ಜ್ಞಾನಭಂಡಾರದಿಂದ ಇಂದಿನ ನಾವು ವಂಚಿತರಾಗುತ್ತಿದ್ದೇವೆಯೇ ಎಂಬ ಪ್ರಶ್ನೆಯನ್ನು ಅವರು ಕೇಳಿದ್ದರು. ನಮ್ಮ ಸಾಹಿತ್ಯ ಪರಿಷತ್ತನ್ನೂ ಒಳಗೊಂಡು ಹಲವು ಸಂಸ್ಥೆಗಳು ಪ್ರಕಟಿಸಿರುವ ಹಳೆಗನ್ನಡ ಕೃತಿಗಳು ಚೆನ್ನಾಗಿ ಮರಾಟವಾಗಿವೆ ಎಂದು ಅಂಕಿ-ಸಂಖ್ಯೆಗಳಿಂದ ಗೊತ್ತಾಗುತ್ತಿದೆ. ನಾವು ಅವನ್ನು ಕಡೆಗಣಿಸುತ್ತಿಲ್ಲ ಎಂಬುದು ಶುಭಸೂಚನೆ.

ಆದರೆ ನನ್ನ ಮತ್ತು ನನ್ನಂಥವರ ಅನುಭವದಲ್ಲಿ ಶಾಲೆ, ಕಾಲೇಜು ಮತ್ತು ವಿ.ವಿಗಳಲ್ಲಿ ಹಳೆಗನ್ನಡ, ನಡುಗನ್ನಡಗಳನ್ನು ಇಂದಿಗೆ ತಕ್ಕ ಸ್ವಾರಸ್ಯಕರ ರೀತಿಯಲ್ಲಿ ಓದುವ, ಓದಿಸುವವರ ಸಂಖ್ಯೆ ಕುಗ್ಗಿಹೋಗಿದೆ. ಈ ಕೊರೆಯನ್ನು ಸರಿಪಡಿಸುವ ಕ್ರಮಗಳನ್ನು ಸಂಬಂಧಪಟ್ಟ ಎಲ್ಲಾ ಸಂಸ್ಥೆಗಳೂ ಮಾಡಬೇಕಾಗಿದೆ. ಕನ್ನಡಕ್ಕೆ ಕ್ಲಾಸಿಕಲ್ ಭಾಷೆಯ ಜಾಗ ಸಂದಿದೆಯಾದರೆ ಇದರಿಂದ ನಮಗೆ ದೊರಕುವ ಸಂಪನ್ಮೂಲಗಳನ್ನು ಹೇಗೆ ಪ್ರಯೋಜನಪಡಿಸಿಕೊಳ್ಳಬೇಕು ಎಂಬುದರ ಬಗ್ಗೆ ವ್ಯವಸ್ಥಿತ ಚಿಂತನೆಗಳಾಗಲೀ ಕಾರ್ಯಪ್ರಣಾಲಿಗಳಾಗಲೀ ತಯಾರಾಗುತ್ತಿಲ್ಲ.

ಕನ್ನಡದಂತಹ ಸಂಪದ್ಭರಿತ ಭಾಷೆಗೆ ಉತ್ತಮ ನಿಘಂಟುಗಳ ಅಗತ್ಯವುಂಟು. ಸದ್ಯಕ್ಕೆ ನಾವು ಕಿಟ್ಟೆಲ್ ಅಥವಾ ಪರಿಷತ್ತಿನ ನಿಘಂಟುಗಳನ್ನು ಆಶ್ರಯಿಸಿದ್ದೇವೆ. ಸದಾ ಬೆಳೆಯುತ್ತಿರುವ ಕನ್ನಡ ಭಾಷೆಯ ಈ ಪ್ರಸಿದ್ಧ ನಿಘಂಟುಗಳನ್ನು ಕಾಲಕಾಲಕ್ಕೆ ಪರಿಷ್ಕರಿಸುವ ವಾಡಿಕೆ ನಮಗೆ ಬಂದಿಲ್ಲ. ಇಂಗ್ಲಿಷಿನ ಆಕ್ಸ್‌ಫರ್ಡ್ ನಿಘಂಟನ್ನು ಪ್ರತೀ ದಶಕ ನವೀಕರಿಸುತ್ತಾ ಬಂದಿದ್ದಾರೆ. ನಮ್ಮ ನಿಘಂಟುಗಳ ಉಪಯುಕ್ತತೆ ಬೆಳೆಸಲು ನಾವೂ ಇದನ್ನು ಮಾಡಬೇಕಾಗಿದೆ. ಜೊತೆಗೆ ಪದಗಳ ಅರ್ಥ, ವಿವರಣೆ, ಪ್ರಯೋಗಗಳ ಇತಿಹಾಸವನ್ನು ವಿಸ್ತೃತವಾಗಿ ನಿರೂಪಿಸಲು ನಮ್ಮಲ್ಲಿ ಪದಪ್ರಯೋಗಕೋಶಗಳ (ಕನ್ಕಾರ್ಡೆನ್ಸ್) ಜರೂರಿಯೂ ಇದೆ.

ಒಂದು ಅರ್ಥಪೂರ್ಣ ಸಾಂಸ್ಕೃತಿಕ ನೀತಿಯ ಕಡೆಗೆ ಸರ್ಕಾರ ಹೆಜ್ಜೆ ಹಾಕುತ್ತಿರುವುದು ಸಂತೋಷ. ಗಮನಿಸಬೇಕಾದ ವಿಷಯವೆಂದರೆ ಸಂಸ್ಕೃತಿ ಸದಾ ಚಲನಶೀಲ. ಆದರೆ ಹಿಂದಿನ, ಇಂದಿನ ಕನ್ನಡ ಸಂಸ್ಕೃತಿಯ ಅಭಿವ್ಯಕ್ತಿಗಳನ್ನು ಉಳಿಸುವ, ಬೆಳೆಸುವ ಮತ್ತು ಅವುಗಳ ಮೂಲಕ ನಮ್ಮ ಪ್ರಸ್ತುತವನ್ನು ಬೆಳಗಿಸುವ ಕಡೆಗೆ ನಾವು ಹೋಗಬೇಕಾಗಿದೆ.

ಉದಾಹರಣೆಗೆ ನಶಿಸಿಹೋಗುತ್ತಿರುವ ಜಾನಪದ ಕಲೆಗಳನ್ನು ಏನು ಮಾಡಬೇಕು? ನಮ್ಮ ಹಲವು ಜಾನಪದಕಲೆಗಳು ಜಾತಿವಿಶಿಷ್ಟ. ಆ ಜಾತಿಗಳ ಸಾಮಾಜಿಕ ಮತ್ತು ದೈನಿಕ ಬದುಕಿನಲ್ಲಿ ಈಗ ಬದಲಾವಣೆಗಳು ಬರುತ್ತಿರುವಾಗ ಆ ಕಲೆಗಾರರನ್ನು ಗತದ ಜೀವನಕ್ರಮಕ್ಕೆ ಕಟ್ಟಿಹಾಕಲು ಸಾಧ್ಯವಿಲ್ಲ. ಆ ಕಲೆಗಾರರ ಮುಂದಿನ ಪೀಳಿಗೆಯವರು ಹೊಸ ಶಿಕ್ಷಣ ಪದ್ಧತಿಗೆ ಹೋಗಬಯಸುವುದರಿಂದ, ಸಮಾಜದ ಮುಖ್ಯವಾಹಿನಿಯಲ್ಲಿ ಹೋಗಲು ಉತ್ಸುಕರಾಗಿರುವುದರಿಂದ ಅವರು ಬಹುಶಃ ತಲತಲಾಂತರದಿಂದ ಬಂದಿರುವ ಕಲೆಗಳನ್ನು ಮುಂದುವರಿಸಲು ಇಚ್ಛಿಸುವುದಿಲ್ಲ.

ಆದ್ದರಿಂದ ಆ ಕಲೆಗಳಲ್ಲಿ ಪರಿಣತಿಯನ್ನು ಇನ್ನೂ ಉಳಿಸಿಕೊಂಡ ತಲೆಮಾರಿನವರು ಅಸ್ತಂಗತರಾಗುವ ಮುಂಚೆಯೇ ಅವರ ನೆರವಿನಿಂದ ಎಲ್ಲ ವರ್ಗದ ಆಸಕ್ತ ಹೊಸಬರಿಗೆ ಅವನ್ನು ಕಲಿಸಬೇಕಾಗಿದೆ. ಇಲ್ಲದಿದ್ದರೆ ಕಂಸಾಳೆ ಕುಣಿತ, ಸೋಮನ ಕುಣಿತ, ಡೊಳ್ಳು ಕುಣಿತ, ವೀರಗಾಸೆ, ನಂದೀಧ್ವಜ ಮುಂತಾದ ಕನ್ನಡವಿಶಿಷ್ಟ ಕಲೆಗಳು ಕಾಲಪ್ರವಾಹದಲ್ಲಿ ಕಾಣೆಯಾಗುವ ಅಪಾಯವಿದೆ. ಇದೇ ರೀತಿ ಜಾನಪದವೈದ್ಯ ಮುಂತಾದ ಜ್ಞಾನ ಪ್ರಯೋಗ ಕ್ರಮಗಳನ್ನು ವಿಮರ್ಶಾತ್ಮಕ ರೀತಿಯಲ್ಲಿ ಉಳಿಸಿ, ಉಪಯುಕ್ತ ರೀತಿಯಲ್ಲಿ ಬಳಸುವ ವಿಧಿವಿಧಾನಗಳು ಆಗಬೇಕಾಗಿವೆ.

ಕರ್ನಾಟಕ ಶಿಲ್ಪ, ವಾಸ್ತುಶಿಲ್ಪಗಳು ಜಗತ್ತಿಗೆ ನಾವು ಕೊಟ್ಟ ಅಗ್ಗಳದ ಕೊಡುಗೆಗಳು. ಆದರೆ ಅವುಗಳ ಸಂರಕ್ಷಣೆ ಕನಿಷ್ಠ ಮಟ್ಟದಲ್ಲಿದೆ. ಹಂಪಿ ಅಥವಾ ಚಿತ್ರದುರ್ಗದಂಥ ಪ್ರೇಕ್ಷಣೀಯ ಸ್ಥಳಗಳನ್ನು ಇನ್ನೂ ಉತ್ತಮ ರೀತಿಯ ನಿರ್ವಹಣೆ ಮತ್ತು ಪ್ರಚಾರದ ಮೂಲಕ ಆಂತರರಾಷ್ಟ್ರೀಯ ಪ್ರವಾಸಿ ಆಕರ್ಷಣೆಗಳನ್ನಾಗಿ ಮಾಡಬಹುದು. ಐತಿಹಾಸಿಕ ಇಮಾರತಿಗಳ ಸಂಖ್ಯೆ ಮತ್ತು ಗುಣದಲ್ಲಿ ನಮಗಿಂತ ಕಡಿಮೆ ಸಂಪನ್ಮೂಲಗಳನ್ನು ಹೊಂದಿರುವ ಗ್ರೀಕರು, ಜರ್ಮನರು, ಜಪಾನಿಗರು ನಮಗಿಂತ ದೊಡ್ಡಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದಾರೆ. ಆ ಮಾದರಿಗಳು ನಮಗೆ ಅನುಕರಣೀಯವಾಗಿರುವುದಲ್ಲದೇ ಗಣನೀಯ ಆರ್ಥಿಕ ಲಾಭವನ್ನೂ ನೀಡಬಲ್ಲವು.

ಸಹಸ್ರಮುಖಿಯಾದ ಕನ್ನಡ ಸಂಸ್ಕೃತಿಯ ಬಗ್ಗೆ ಒಂದು ಅಂತಿಮ ತೀರ್ಮಾನ ನೀಡುವ ಅರ್ಹತೆ ನಮಗಾರಿಗೂ ಇಲ್ಲ. ಈ ಬಗ್ಗೆ ದೀರ್ಘಕಾಲೀನ ಚಿಂತನೆ ಮತ್ತು ಪ್ರಯತ್ನಗಳನ್ನು ಮಾಡುತ್ತಿರುವ ಅಸಂಖ್ಯರಿದ್ದಾರೆ. ಅವರಲ್ಲಿ ಎಲ್ಲರೂ ಸರ್ಕಾರದ ಕೇಂದ್ರಗಳಿಗೆ ಲಗ್ಗೆಯಿಕ್ಕುವವರಲ್ಲ. ಅವರ ಪಿಸುದನಿಗಳೂ ಉಪಯುಕ್ತ ಮಾರ್ಗಸೂಚಿಗಳನ್ನು ನೀಡಬಲ್ಲವೆಂಬುದನ್ನು ಸಾಂಸ್ಕೃತಿಕ ಆಡಳಿತಗಾರರು ಮರೆಯಬಾರದು.

ಹೇಳಬೇಕಾದ್ದು ಬೇಕಾದಷ್ಟಿದೆ. ಆದರೆ ಮುಖ್ಯಮಂತ್ರಿಯವರಾದ ನಿಮಗೆ ಸಮಯದ ಕೊರತೆ ಇರುವುದು ಸ್ವಾಭಾವಿಕ. ಇಳಿವಯಸ್ಸಿನಲ್ಲಿ ಹೊಟ್ಟೆಪಾಡಿಗೆ ಇನ್ನೂ ದುಡಿಯುತ್ತಿರುವ ನನಗೂ ಸಮಯದ ಅಭಾವ. ಹೀಗಾಗಿ ಇಲ್ಲೇ ಈ ಪತ್ರವನ್ನು ಕೊನೆಗೊಳಿಸುತ್ತೇನೆ. ಕನ್ನಡ ನುಡಿ ಮತ್ತು ಜನಪದರ ಸರ್ವಾಂಗೀಣ ಬೆಳವಣಿಗೆಗೆ ಅವಶ್ಯಕವೆಂದು ನನಗೆ ತೋರಿದ ಕೆಲವು ವಿಚಾರಗಳನ್ನು ತಮ್ಮಲ್ಲಿ ನಿವೇದನೆ ಮಾಡಿಕೊಂಡಿದ್ದೇನೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT