ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪುದೀಪಗಳ ಕೆಳಗೆ ‘ಮಿಂಚುಹುಳು’ಗಳು

Last Updated 4 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬಿಹಾರದ ಮುಜಫ್ಫರಪುರ ಜಿಲ್ಲೆಯ ಚತುರ್ಭುಜಸ್ತಾನಎಂಬಲ್ಲಿನ ವೇಶ್ಯಾವಾಟಿಕೆಯ ಇತಿಹಾಸ ಮೊಗಲರಕಾಲದ್ದು. ಭಾರತ-ನೇಪಾಳ ಸರಹದ್ದಿನ ಸನಿಹದ ಈ ಊರಿನ ಜನಸಂಖ್ಯೆ ಹತ್ತಿರ ಹತ್ತಿರ ಹತ್ತು ಸಾವಿರ. ಪೀಳಿಗೆಯಿಂದ ಪೀಳಿಗೆಗೆ ದಾಟಿ ಬಂದ ಕಸುಬು ವೇಶ್ಯಾವೃತ್ತಿ.

ಈ ಕೆಂಪುದೀಪ ಪ್ರದೇಶವಾಸಿಗಳು ಕಟ್ಟಿಕೊಂಡಿರುವ ತಮ್ಮದೇ ಸ್ವಯಂಸೇವಾ ಸಂಸ್ಥೆಯ ಹೆಸರು ‘ಪರ್ಛಮ್’ (ಬಾವುಟ ಅಥವಾ ಬ್ಯಾನರ್). 32 ಪುಟಗಳ ‘ಜುಗ್ನು’ (ಮಿಂಚುಹುಳು) ಹೆಸರಿನ ನಿಯತಕಾಲಿಕವೊಂದನ್ನು ಹೊರತರುತ್ತಾರೆ.

ಪ್ರವಾಹಕ್ಕೆ ಎದುರಾಗಿ ಈಜಿ ‘ಪರ್ಛಮ್’ ಮತ್ತು ‘ಜುಗ್ನು’ವನ್ನು ಹುಟ್ಟು ಹಾಕಿದ್ದು ನಸೀಮಾ ಖಾತೂನ್ ಎಂಬ ದಿಟ್ಟ ಯುವತಿ. ಖುದ್ದು ಲೈಂಗಿಕ ವೃತ್ತಿನಿರತೆಯೊಬ್ಬಾಕೆಯ ‘ಮಗಳು’. ನಸೀಮಾ ಹುಟ್ಟಿದ್ದು ಚತುರ್ಭುಜಸ್ತಾನದಲ್ಲಿ. ಹೆತ್ತವರಿಬ್ಬರೂ ತೊರೆದು ಹೋದಾಗ ಬಾಲೆಯ ವಯಸ್ಸು ಎಂಟು ವರ್ಷ. ಈ ಪುಟ್ಟ ಪೋರಿಯನ್ನು ಓದಿಸಿ ಬೆಳೆಸಿದ್ದು ಅದೇ ಊರಿನ ಲೈಂಗಿಕ ವೃತ್ತಿನಿರತೆ. ಚತುರ್ಭುಜಸ್ತಾನದ ಇತಿಹಾಸದಲ್ಲೇ ಓದು– ಬರಹ ಕಲಿತ ಮೊದಲ ಹೆಣ್ಣುಮಗಳು ನಸೀಮಾ.

ನಸೀಮಾ ಮಾತುಗಳಲ್ಲೇ ಹೇಳುವುದಾದರೆ... ‘ನಾನು ಕೆಂಪು ದೀಪದ ನೆರಳಿನ ಮಗಳು’ ಎಂದು ಹೇಳಿದರೂ ಹೊರಗಿನ ‘ಸಜ್ಜನ’ ಸಮಾಜ ಅವಮಾನಿಸದೆ ಬಳಿಗೆ ಕರೆದು ಆದರಿಸಬೇಕು ಎಂಬುದು ‘ಪರ್ಛಮ್’ ಗುರಿ. ‘ಇಲ್ಲಿನ ಹೆಣ್ಣುಮಕ್ಕಳ ಬಳಿ ಬರುವ ಗ್ರಾಹಕ ಸೇವೆಯನ್ನು ಡಿಮಾಂಡ್ ಮಾಡುತ್ತಾನೆ. ಇಲ್ಲಿಗೆ ರೇಡ್ ಮಾಡುವ ಪೊಲೀಸಪ್ಪ ಡಿಮಾಂಡ್ ಮಾಡುತ್ತಾನೆ. ಆದರೆ ನಮ್ಮವೂ ಡಿಮಾಂಡ್ ಇವೆ. ಅವುಗಳನ್ನು ಯಾರು ಕೇಳು
ತ್ತಾರೆ? ಯಾರು ನೆರವೇರಿಸುತ್ತಾರೆ?’ ಅಂತಹ ಡಿಮಾಂಡ್ ಗಳನ್ನು ‘ಪರ್ಛಮ್’ ತಲಾಶು ಮಾಡಿತು. ಅವುಗಳಿಗೆ ಕೇಳ್ವಿಯ ರೂಪ ನೀಡಿತು. ಬಿಹಾರದ ಉದ್ದಗಲಕ್ಕೆ ಎಲ್ಲೆಲ್ಲಿ ಕೆಂಪುದೀಪದ ನೆರಳುಗಳಿವೆಯೋ ಅಲ್ಲೆಲ್ಲ ಸಂಚರಿಸಿತು. ಓದು– ಬರಹದ ಮಹತ್ವ ಸಾರುವ ಬೀದಿ ನಾಟಕಗಳನ್ನು ಅಭಿನಯಿಸಿ ತೋರಿತು. ಹೆಣ್ಣುಮಕ್ಕಳನ್ನು ಪರಂಪರಾಗತ ಕಸುಬಿನಿಂದ ಬಿಡಿಸಿ ಬದುಕುವ ಪರ್ಯಾಯ ದಾರಿಗಳನ್ನು ತೋರಿತು. ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವಂತೆ ಲೈಂಗಿಕ ವೃತ್ತಿನಿರತರ ಮನ ಒಲಿಸಿತು.

ಹತ್ತಾರು ಮಂದಿ ಲೈಂಗಿಕ ವೃತ್ತಿನಿರತರು ತಮ್ಮ ಪರಂಪರಾಗತ ಕಸುಬು ತೊರೆದು ನಸೀಮಾಗೆ ಹೆಗಲು ನೀಡಿ ನಿಂತರು. ಅವರಿಗೆ ಓದು– ಬರಹ ಕಲಿಸಿದಳು ನಸೀಮಾ. ‘ಜುಗ್ನು’ ಪತ್ರಿಕೆಯ ಹಿಂದಿನ ಚಾಲಕ ಶಕ್ತಿಯಾದಳು. ಕೈಬರಹದ ಮಾಸಪತ್ರಿಕೆ ‘ಜುಗ್ನು’ವಿನ ಸಂಪಾದಕಿ ನಿಖತ್ ಬದುಕು ಆರಂಭ ಆದದ್ದು ಮುಜಫ್ಫರಪುರದ ಕೆಂಪು ದೀಪದ ಕರಿ ನೆರಳಲ್ಲಿ. ಕೆಂಪುದೀಪದ ನೆರಳಲ್ಲಿ ಬದುಕುವ ಜನ ತಮ್ಮದೇ ಪತ್ರಿಕೆಯನ್ನು ಹೊರತರುತ್ತಿರುವ ಮತ್ತೊಂದು ಉದಾಹರಣೆ ಇಲ್ಲ. ಈ ಕತ್ತಲ ಕೂಪದ ಗಾಳಿ–ಬೆಳಕಿನಲ್ಲಿ ತೂಗುವ ಕನಸುಗಳನ್ನು ಹಿಡಿದು ಒಟ್ಟು ಮಾಡಬಾರದೇಕೆ, ಒಂದಷ್ಟು ಜನ ಒಂದೆಡೆ ಸೇರಿ ಓದಬಾರದೇಕೆ, ಬರೆಯಬಾರದೇಕೆ, ನಮ್ಮ ನೋವಿನ ಕತೆಗಳನ್ನು, ವ್ಯಥೆ– ವಿಷಾದಗಳನ್ನು ಹೊರಜಗತ್ತಿಗೆ ಹೇಳಿಕೊಳ್ಳಲು ಒಂದು ಮ್ಯಾಗಜೀನು ತರಬಾರದೇಕೆ ಎಂಬ ಆಲೋಚನೆಯಿಂದ ಹುಟ್ಟಿದ್ದು ‘ಜುಗ್ನು’. 2004ರಲ್ಲಿ ನಾಲ್ಕು ಪುಟಗಳು, ನಾಲ್ಕೈದು ವರ್ಷಗಳಲ್ಲಿ 32ಕ್ಕೆ ಏರಿದ್ದವು.

ಪೊಲೀಸ್ ದಾಳಿಗಳು, ತಲೆಹಿಡುಕರ ಹಿಂಸಾಚಾರ ಪ್ರಕರಣಗಳ ಜೊತೆಗೆ ಲೈಂಗಿಕ ವೃತ್ತಿನಿರತರ ಸಂದರ್ಶನಗಳು- ಕನಸುಗಳನ್ನು ‘ಮಿಂಚುಹುಳು’ ಪ್ರಕಟಿಸಿತು. ಬಹುತೇಕ ಲೈಂಗಿಕ ವೃತ್ತಿನಿರತರ ಕತೆಗಳು ಒಂದೇ ತೆರನಾದವು. ಹಣಕಾಸಿನ ತೊಂದರೆಯಿಂದ ಈ ದಂಧೆಗೆ ಇಳಿದ ಅವರು ಸಾಮಾನ್ಯ ಕೌಟುಂಬಿಕ ಬದುಕಿಗಾಗಿ ಹಂಬಲಿಸುತ್ತಾರೆ. ಪೊಲೀಸ್- ಪಬ್ಲಿಕ್ ಸಭೆಯನ್ನು ಮತ್ತು ಕಾನೂನು ಶಿಬಿರವೊಂದನ್ನು ಕೆಂಪುದೀಪ ಪ್ರದೇಶದಲ್ಲಿ ಏರ್ಪಡಿಸಲು ಪ್ರಯತ್ನಿಸಿದ್ದಕ್ಕಾಗಿ ಮಿಂಚುಹುಳು ತಂಡವನ್ನು ಕೊಂದು ಹಾಕುವ ಬೆದರಿಕೆ ಹಾಕಿದ್ದರು ತಲೆಹಿಡುಕರು. ಕೈಯಲ್ಲಿ ಬರೆದು ನೆರಳಚ್ಚು ಪ್ರತಿಗಳನ್ನು ತೆಗೆಯಲಾಗುತ್ತಿತ್ತು.

ಹೊಸ ಅಸಹಾಯಕ ಹೆಣ್ಣುಮಕ್ಕಳ ವೇಶ್ಯಾವೃತ್ತಿ ಪ್ರವೇಶವನ್ನು ನಸೀಮಾ ಮತ್ತು ಆಕೆಯ ಸಂಗಾತಿಗಳು ತಡೆದರು. ನೇಪಾಳ, ಬಾಂಗ್ಲಾದೇಶದ ಹೊಸ ಬಾಲೆಯರನ್ನು ಅವರ ಮನೆ ಮುಟ್ಟಿಸಿದರು. ಪರಿಣಾಮವಾಗಿ ಶತ್ರುಗಳನ್ನು ಎದುರು ಹಾಕಿಕೊಂಡರು. ಸ್ಥಳೀಯ ವೇಶ್ಯಾಲಯದ ರಾಣೀ ಬೇಗಂ ಎಂಬಾಕೆಯ ‘ವ್ಯಾಪಾರ ಕೆಟ್ಟಿತು’. ಆಕೆಯ ಗೂಂಡಾಗಳು, ದಲ್ಲಾಳಿಗಳು ನಸೀಮಾ ಮತ್ತು ಆಕೆಯ ಸಂಗಾತಿಗಳ ಮೇಲೆ ಬಹಿರಂಗ ಹಲ್ಲೆ ನಡೆಸಿದರು, ಅಪಮಾನಿಸಲು ಮುಂದಾದರು.

2002ರಲ್ಲಿ ಚತುರ್ಭುಜಸ್ತಾನದ ಕೆಂಪುದೀಪ ಪ್ರದೇಶದ ಮೇಲೆ ಪೊಲೀಸರು ನಡೆಸಿದ ಬರ್ಬರ ದಾಳಿಯೊಂದು ಹದಿನೇಳು ವರ್ಷದ ನಸೀಮಾಳ ನೆತ್ತರು ಕುದಿಸಿತು. ತಿರುಗಿ ನಿಂತು ಹೋರಾಡುವ ಕೆಚ್ಚು ತುಂಬಿಸಿತು.

ಸೀತಾಮಡಿ ಜಿಲ್ಲೆಯ ಬೋಹಾ ಟೋಲಾ ಎಂಬಲ್ಲಿನ ‘ವೇಶ್ಯಾ ಮಂಡಿ’ಯ ಹೆಣ್ಣುಮಕ್ಕಳು ಎದುರಿಸಿದ ನೋವು, ಸಂಕಟ, ಅಪಮಾನಗಳು ಈ ಸಮಾಜದ ಬೂಟಾಟಿಕೆಗೆ, ಜನಸಾಮಾನ್ಯರ ಸಂವೇದನಾಹೀನತೆಗೆ ಹಿಡಿದ ಕನ್ನಡಿ. ಕೆಂಪುದೀಪ ಪ್ರದೇಶವನ್ನು ತೊಲಗಿಸಲು ಗ್ರಾಮಸ್ಥರು ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದರು. ಮನೆಗಳಿಗೆ ಬೆಂಕಿ ಇಟ್ಟರು. ಲೈಂಗಿಕ ವೃತ್ತಿನಿರತರೊಬ್ಬರ ಕೂಸನ್ನು ಬೆಂಕಿಗೆಸೆದು ಕೊಂದರು. ಅರವತ್ತು ವರ್ಷದ ಮಹಿಳೆಯೊಬ್ಬಳ ಮೇಲೆ ಹತ್ತು ಮಂದಿ ಬಲಾತ್ಕಾರ ಎಸಗಿದರು. ಆಕೆ ಬದುಕಿ ಉಳಿಯಲಿಲ್ಲ.

ಈ ಅನಾಚಾರವನ್ನು ಪ್ರತಿಭಟಿಸಿ ಉಪವಾಸ ಸತ್ಯಾಗ್ರಹ ಕುಳಿತ ‘ಪರ್ಛಮ್’ ಕಾರ್ಯಕರ್ತೆಯರನ್ನು ಜೈಲಿಗೆ ತಳ್ಳಲಾಯಿತು.

ಲೈಂಗಿಕ ವೃತ್ತಿನಿರತರ ‘ವ್ಯವಹಾರ’ವೇ ಈ ಕಾಂಡಕ್ಕೆ ಕಾರಣ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ದೂಷಿಸಿದರು. ‘ಹಾಗಿದ್ದರೆ ತಪ್ಪು ವ್ಯವಹಾರ ಮಾಡುವವರನ್ನೆಲ್ಲ ಹಿಡಿದು ಬೆಂಕಿಗೆ ತಳ್ಳಿ ಸುಡುವುದು ಸರಿಯಾದ ವ್ಯವಹಾರವೇನು, ಯಾವ ಸಂವಿಧಾನದಲ್ಲಿ ಬರೆದಿದೆ ಹಾಗೆಂದು’ ಎಂಬ ನಸೀಮಾ ಪ್ರಶ್ನೆಗೆ ಮುಖ್ಯಮಂತ್ರಿಯ ಬಳಿ ಜವಾಬು ಇರಲಿಲ್ಲ. ‘ಕೊಲ್ಲಬೇಕೆಂದಿದ್ದರೆ ಇಲ್ಲಿಯೇ ಕೊಂದು ಹಾಕಿ, ಬೋಹಾ ಟೋಲಾದಲ್ಲಿ ನಮ್ಮ ಮನೆ
ಮಾರು ಸುಟ್ಟು ಹೋಗಿವೆ’ ಎಂದಾಗ ಮೆತ್ತಗಾದರು ಮುಖ್ಯಮಂತ್ರಿ. ಆನಂತರ ಸರ್ಕಾರ ತಂಡವೊಂದನ್ನು ಕಳಿಸಿ ಲೈಂಗಿಕ ವೃತ್ತಿನಿರತರ ಸಮಸ್ಯೆ ಬಗೆಹರಿಸುವ ಹೊಣೆಗಾರಿಕೆ ವಹಿಸಲಾಯಿತು.

ನಸೀಮಾ ತಾನು ನಡೆದು ಬಂದ ದಾರಿಯನ್ನು ಸಂದರ್ಶನವೊಂದರಲ್ಲಿ ಹೀಗೆ ಗುರುತಿಸುತ್ತಾಳೆ-

‘ನಾನು ಹುಟ್ಟಿದ್ದು ಚತುರ್ಭುಜಸ್ತಾನ ಎಂಬ ಬಿಹಾರದ ಸಣ್ಣ ಕಸಬಾದಲ್ಲಿ ಇರುವ ಲಾಲ್ಟೆನ್ ಪಟ್ಟಿ ಎಂಬ ಕೆಂಪುದೀಪ ಪ್ರದೇಶದಲ್ಲಿ. ಇಂತಹ ಬಸ್ತಿಯಲ್ಲಿದ್ದೇನೆ ಎಂಬ ಸಂಗತಿ ಶಾಲೆಗೆ ಸೇರುವ ತನಕ ಗೊತ್ತಿರಲಿಲ್ಲ. ‘ನಮ್ಮ ಮನೆ ಎಲ್ಲಿ ಎಂದು ಯಾರಿಗೂ ಹೇಳಬೇಡ’ ಎಂದಿದ್ದ ತಂದೆ, ಶಾಲೆ ಸೇರಿಸುವಾಗ ಸುಳ್ಳು ವಿಳಾಸ ಕೊಟ್ಟಿದ್ದರು. ಅಪ್ಪನ ಮಾತನ್ನು ಎಂದಿಗೂ ಮೀರಲಿಲ್ಲ. ಗೆಳತಿಯರನ್ನು ದೀಪಾವಳಿ, ಹೋಳಿ ಹಬ್ಬಗಳಿಗೆ ಮನೆಗೆ ಕರೆಯುತ್ತಿರಲಿಲ್ಲ. ಕರೆಯುವುದಾದರೂ ಹೇಗೆ? ಗುರುತನ್ನು ಮರೆಮಾಚಿಕೊಂಡು ಸುಳ್ಳಿನಲ್ಲಿ ಕಳೆಯಬೇಕಾದ ಬಾಲ್ಯ ಕಠೋರವಾಗಿತ್ತು. ನಾನು ಲೈಂಗಿಕ ವೃತ್ತಿನಿರತಳ ಮಗಳು ಎಂದು ಹೇಳಲು ಹೆಮ್ಮೆ ನನಗೆ. ಆ ಅಮ್ಮ ನನ್ನನ್ನು ಹಡೆಯಲಿಲ್ಲ. ಆದರೆ ಸಾಕಿ ಬೆಳೆಸಿದಳು. ಹೆತ್ತವರು ಎಂಟು ವರ್ಷದವಳಿದ್ದಾಗ ಬಿಟ್ಟು ಹೋದರು’.

‘ನಮ್ಮ ಕಡೆ ಯಾರು ಬೇಕಾದರೂ ಧಾರಾಳ ಸಾಲ ಕೊಡುತ್ತಾರೆ, ಮನೆಯಲ್ಲಿ ಬೆಳೆದು ನಿಂತ ಮಗಳಿರಬೇಕು ಅಷ್ಟೇ. ಆದರೆ ಅಂತಹ ಮಗಳು ದಂಧೆಗೆ ಇಳಿಯುವ ತನಕ ಸಾಲ ಕೈಗೆ ಸಿಗುವುದಿಲ್ಲ. ಉಪವಾಸ ಸತ್ತರೂ ಕೇಳುವವರಿಲ್ಲ. ಸಾಕು ತಾಯಿ ನನ್ನನ್ನು ದಂಧೆಗೆ ಇಳಿಸಬಹುದಿತ್ತು. ಆದರೆ ತಾನು ಹಾದು ಬಂದ ನೋವು, ನರಕ ಇನ್ನೊಬ್ಬರಿಗೆ ಬೇಡ ಎಂದ ಮಹಾತಾಯಿ ಅವಳು. ಕಠಿಣ ಸನ್ನಿವೇಶಗಳಲ್ಲಿ ಢಾಲಿನಂತೆ, ಭರ್ಜಿಯಂತೆ ಅಡ್ಡ ನಿಂತು ನಸೀಮಾಳನ್ನು ಕಾಪಿಟ್ಟಳು. ನಾಲ್ಕೈದು ದಿನ... ಕೆಲವೊಮ್ಮೆ ಹತ್ತು ಹತ್ತು ದಿನಗಟ್ಟಲೆ ರೊಟ್ಟಿ ಬೇಳೆ ಸಿಗುತ್ತಿರಲಿಲ್ಲ. ಇಲ್ಲವೆಂದು ಯಾರ ಬಳಿಯೂ ಹೇಳಿಕೊಳ್ಳುತ್ತಿರಲಿಲ್ಲ. ಬೇರೆ ದಾರಿಯಿಲ್ಲದೆ ಈ ದಂಧೆಗೆ ಇಳಿದಿದ್ದೇವೆ ಎನ್ನುವವರನ್ನು ನೋಡಿದ್ದೇನೆ. ನಾವು ರಾಜೀ ಮಾಡಿಕೊಳ್ಳಲಿಲ್ಲ’.

‘ಕೆಂಪುದೀಪ ಪ್ರದೇಶಗಳಲ್ಲಿ ಎಚ್.ಐ.ವಿ. ಪರೀಕ್ಷಾ ಕೇಂದ್ರ ತೆರೆಯುತ್ತಾರೆ. ಆದರೆ ಸಾಧಾರಣ ಆರೋಗ್ಯ ಕೇಂದ್ರವನ್ನು ತೆರೆದದ್ದು ನಾನಂತೂ ಎಲ್ಲಿಯೂ ನೋಡಿಲ್ಲ. ಕೇಂಪು ದೀಪದ ನೆರಳಲ್ಲಿ ಬದುಕುವವರಿಗೆ ಸಾಧಾರಣ ನೆಗಡಿ, ಜ್ವರ, ಕೆಮ್ಮು, ಜಡ್ಡು ಜಾಪತ್ತು ಬರೋದೇ ಇಲ್ಲವೇನು? ಬರೀ ವೇಶ್ಯೆಯರಲ್ಲ...ಅವರ ಮಕ್ಕಳೂ ಇರ್ತಾರೆ, ಅವುಗಳಿಗೂ ಕಾಯಿಲೆ ಕಸಾಲೆ ಬರುತ್ತದೆ. ಮಕ್ಕಳು ಅದರಲ್ಲೂ ಎಲ್ಲ ಮಕ್ಕಳೂ ಎಚ್.ಐ.ವಿ. ಸೋಂಕು ಪೀಡಿತರು ಆಗಿರುವುದಿಲ್ಲ ಅಲ್ಲವೇ’?

‘ಬದುಕಿನಲ್ಲಿ ಅತ್ಯಂತ ಬೆಲೆಬಾಳುವ ಗೆಳೆಯ ಪುಸ್ತಕ. ಯಾವ ಕೆಲಸವನ್ನು ಕೈಗೆತ್ತಿಕೊಂಡರೂ ಜನ ಅದರ ಮೂಲಕವೇ ನಿನ್ನನ್ನು ಗುರುತಿಸುವಷ್ಟು ಮಗ್ನಳಾಗು ಎಂಬ ಎರಡು ಬುದ್ಧಿ ಮಾತನ್ನು ಹಿರಿಯರೊಬ್ಬರು ಹೇಳಿದ್ದ ಮಾತು ಮನಸಿಗೆ ನಾಟಿಬಿಟ್ಟಿತು. ಶಾಲೆ ಸೇರಿದ ಮತ್ತು ಸೀತಾಮಡಿ ಜಿಲ್ಲೆಯಲ್ಲಿ ಅದಿತಿ ಮತ್ತು ಮಹಿಳಾ ಅಧಿಕಾರ ಮೋರ್ಛಾ ಜೊತೆಗೂಡಿ ಮಹಿಳಾ ಸಂಘಟನೆಗೆ ತೊಡಗಿದ ಎರಡು ಕಾಲಘಟ್ಟಗಳಲ್ಲಿ ನಸೀಮಾ ಎಂಬ ಅಸಲಿ ಗುರುತಿನ ಮೇಲೆ ಪರದೆ ಸರಿಸಿಬಿಟ್ಟಿದ್ದೆ. ಸಮಾಜ ಬಲು ಕ್ರೂರಿ. ಅಡಗಿಸಿಟ್ಟ ಗುರುತನ್ನು ಕಿತ್ತು ಹೊರಗೆಳೆದು ಹಾದಿ ಬೀದಿಗಳಲ್ಲಿ ಉರುಳಾಡಿಸಿ ಗಹಗಹಿಸುತ್ತದೆ. ಪೊಲೀಸ್ ರೇಡ್ ಮತ್ತು ಸಾರ್ವಜನಿಕ ವಿಚಾರಣೆ ಎರಡೂ ನನಗೆ ಅತೀವ ಭಯ ಹುಟ್ಟಿಸಿದ್ದ ಸಂಗತಿಗಳು. ಪುರುಷ ಪೊಲೀಸರು ಮಧ್ಯರಾತ್ರಿಗಳಲ್ಲಿ ದಾಳಿ ನಡೆಸಿ ಕೆಟ್ಟ ಕೆಟ್ಟ ಬೈಯ್ಗಳ ಬೈದು ಹೆಣ್ಣುಮಕ್ಕಳನ್ನು ವ್ಯಾನಿಗೆ ತುಂಬಿಕೊಂಡು ಹೋಗುತ್ತಿದ್ದರು. ಇಂತಹ ದಾಳಿಗಳು ನಡೆವಾಗ ನನ್ನ ತಲೆಯ ಮೇಲೆ ಮುಸುಗು ಹೊದಿಸಿ ಕೈಯಲ್ಲಿ ಪುಸ್ತಕ ಇಟ್ಟು ಉರ್ದು ವರ್ಣಮಾಲೆಗಳನ್ನು ಗಟ್ಟಿಯಾಗಿ ಉಚ್ಚರಿಸಲು ಹೇಳುತ್ತಿದ್ದಳು ಅಮ್ಮ. ಓದುವ ಹುಡುಗಿ, ದಂಧೆಯಲ್ಲಿಲ್ಲ ಎಂದು ಪೊಲೀಸರು ಬಿಟ್ಟು ಹೋಗುತ್ತಿದ್ದರು’.

‘ಇಂತಹ ಕ್ರೂರ ಅಮಾನವೀಯ ಪೊಲೀಸ್ ದಾಳಿಗಳು ತಪ್ಪು, ಅವುಗಳನ್ನು ತಡೆಯಲು ಸಂಘಟನೆ ಕಟ್ಟಬೇಕೆನಿಸಿತು. ಸಂಘಟನೆಗೆ ಪರ್ಛಮ್ ಎಂದು ಹೆಸರಿಟ್ಟೆವು ನನ್ನೊಡನೆ ಇಲ್ಲಿನ ಇನ್ನೂ 25 ಹೆಣ್ಣುಮಕ್ಕಳು ಸೇರಿದರು. ಮಾನಸಮ್ಮಾನ ಅಧಿಕಾರ ಗಳಿಸುವುದೇ ಪರ್ಛಮ್ ಲಕ್ಷ್ಯವಾಗಿತ್ತು. ಲೈಂಗಿಕ ವೃತ್ತಿನಿರತರು ಮತ್ತು ಅವರ ಮಕ್ಕಳು ಸ್ವಾಭಿಮಾನದಿಂದ ತಲೆ ಎತ್ತಿ ಜೀವಿಸುವಂತೆ ಆಯಿತು. ಲೈಂಗಿಕ ವೃತ್ತಿಗಿಳಿಯಲು ಇಷ್ಟವಿಲ್ಲದ ಹುಡುಗಿಯರನ್ನು ಬಲವಂತಪಡಿಸಕೂಡದು ಎಂದು ಷರತ್ತು ವಿಧಿಸಲಾಯಿತು’.

ಪಟ್ನಾದ ಕಾರ್ಯಾಗಾರವೊಂದರಲ್ಲಿ ಕಲೆತ ರಾಜಸ್ಥಾನದ ಹಂಸರಾಜ್- ನಸೀಮಾ ಹತ್ತು ವರ್ಷಗಳ ಪರಸ್ಪರ ಪರಿಚಯದ ನಂತರ ಸತಿಪತಿಗಳಾದರು.

ಮದುವೆಗೆ ಮುನ್ನ ತಾನು ಯಾರು, ತನ್ನ ಅಸಲಿ ಗುರುತು ಪರಿಚಯವೇನು ಎಂದು ಹಂಸರಾಜ್ ಕುಟುಂಬಕ್ಕೆ ಖುದ್ದು ತಿಳಿಸಲು ತೆರಳಿದ್ದ ನಸೀಮಾಗೆ ಹುಡುಗಿ ಒಳ್ಳೆಯವಳು ಎಂಬ ಪ್ರಶಸ್ತಿ ಪತ್ರ ಸಿಕ್ಕಿತ್ತು ಹಂಸರಾಜ್ ತಾಯಿಯಿಂದ. ಕೆಂಪುದೀಪ ಪ್ರದೇಶದ ಹೆಣ್ಣುಮಕ್ಕಳ ಬದುಕು, ಬವಣೆ ಕುರಿತು ನಸೀಮಾ ಬರೆದ ಪುಸ್ತಕ ‘ಸಫರ್’ ಓದಿದ ಹಂಸರಾಜ್ ತಂದೆ, ಮಗನಿಗೆ ಹೇಳಿದ ಮಾತು- ‘ನಸೀಮಾಳನ್ನು ಮದುವೆ ಮಾಡಿಕೊಳ್ಳದಿದ್ದರೆ ನೀನು ನಾಲಾಯಕ್ ಮಗ’.

‘ಸರಿಯಪ್ಪಾ ಮದುವೆ ಮಾಡಿಕೊಂಡು ಕರೆತಂದೆ. ಆದರೆ ಮುಸ್ಲಿಮಳೇ ಯಾಕೆ? ಹಿಂದೂ ಹುಡುಗೀನ ತರಬಹುದಿತ್ತಲ್ಲ’ ಎಂದು ಗ್ರಾಮಸ್ತರು ಹಂಸರಾಜನ ಕಟಕಿದರು. ‘ಇದು ವಿಚಾರದ ಮಾತು... ವಿಚಾರ ಎಲ್ಲಿ ಸಿಗ್ತದೋ ಅದೇ ಬದುಕನ್ನು ಹಸನು ಮಾಡುತ್ತದೆ’ ಎಂದು ಅವರ ಬಾಯಿ ಮುಚ್ಚಿಸಿದ್ದರು ಹಂಸರಾಜ್.

ತನ್ನ ಅನುಪಸ್ಥಿತಿಯಲ್ಲೂ ಕೆಲಸ ಕಾರ್ಯ ನಿಲ್ಲದೆ ನಡೆಯುವಂತೆ ತಯಾರು ಮಾಡಿದ್ದ ಎರಡನೆಯ ಪಂಕ್ತಿ ಸೋತು ಕುಸಿದಿದೆ. ‘ಪರ್ಛಮ್’ ಎಂಬ ಬಾವುಟ ಈಗ ಪಟಪಟಿಸುತ್ತಿಲ್ಲ. ‘ಜುಗ್ನು’ ಎಂಬ ಮಿಂಚುಹುಳು ಕಣ್ಮರೆಯಾಗಿ ಹೋಗಿದೆ. 2013ರಲ್ಲೇ ಎರಡಕ್ಕೂ ಹಣಕಾಸಿನ ಕೊರತೆ ಕಾಡಿತ್ತು. ನಸೀಮಾ ಮನವಿಯಿಂದಲೂ ಆರ್ಥಿಕ ನೆರವು ಹರಿದು ಬರಲಿಲ್ಲ.

ತಾನು ಹುಟ್ಟು ಹಾಕಿದ್ದ ಎರಡೂ ಸಂಸ್ಥೆಗೆ ಮರುಜೀವ ನೀಡಲು ನಸೀಮಾ ಮತ್ತೆ ಮುಜಫ್ಫರಪುರಕ್ಕೆ ಮರಳುವುದಾಗಿ ಹೇಳಿದ್ದಾಳೆ. ಆ ದಿನಗಳು ಬೇಗನೆ ಬರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT