ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುತು ದೃಢೀಕರಣ: ಶಂಖದಿಂದ ಬೀಳುವ ತೀರ್ಥವೇ?

Last Updated 26 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

ಅತ್ತ ದೂರವಾಣಿಯಿಂದ ಕೇಳಿಬರುತ್ತಿದ್ದ ಅಕ್ಕಮ್ಮನ ಧ್ವನಿಯಲ್ಲಿ ಸಿಟ್ಟಿತ್ತು. ನಾನು ಯಾರೆಂದೇ ತಿಳಿಯದವರು ನನ್ನನ್ನು ಗುರುತಿಸಿ `ನಿನ್ನ ಹೆಸರು ಅಕ್ಕಮ್ಮ~ ಎಂದು ಘೋಷಿಸಬೇಕಾದ ಅಗತ್ಯವಾದರೂ ಏನಿದೆ ಎಂದಾಕೆ ಕೇಳುತ್ತಿದ್ದಳು. ಅಕ್ಕಮ್ಮನ ನಿಜವಾದ ಸಮಸ್ಯೆ ಏನೆಂದು ಅರ್ಥ ಮಾಡಿಕೊಂಡು ಅವಳನ್ನು ಸಮಾಧಾನಪಡಿಸುವಷ್ಟರಲ್ಲಿ, ನನ್ನ ಸಹೋದ್ಯೋಗಿ ಪೋಷಿಣಿಗೆ ಒಂದಷ್ಟು ಸಮಯವೇ ಹಿಡಿಯಿತು.

ಜೇನುಕುರುಬ ಸಮುದಾಯಕ್ಕೆ ಸೇರಿದ ಅಕ್ಕಮ್ಮ ಬಾವಿಕೆರೆ ಬುಡಕಟ್ಟು ಕಾಲೊನಿಯ ನಿವಾಸಿ. ಕಳೆದ ಎರಡು ದಶಕಗಳಿಂದ ತಾಲ್ಲೂಕಿನಲ್ಲಿ ಬುಡಕಟ್ಟು ಜನರ ಪರವಾಗಿ ಕೆಲಸ ಮಾಡುತ್ತಿರುವ ಎಸ್‌ವಿವೈಎಂ ಸಂಸ್ಥೆಯ ಮಹಿಳಾ ಸ್ವಸಹಾಯ ಗುಂಪಿನ ಪ್ರಮುಖ ಸದಸ್ಯೆ. ಈ ಗುಂಪಿನ ಸದಸ್ಯರಿಗೆ ಆಹಾರ ಭದ್ರತೆ, ಅನುಭೋಗದ ಹಕ್ಕು, ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಂತಹ (ಪಿಡಿಎಸ್) ಮೂಲಭೂತ ಸಂಗತಿಗಳ ಬಗ್ಗೆ ಆಗಷ್ಟೇ ತರಬೇತಿ ನೀಡಲಾಗಿತ್ತು.

ಇದರಿಂದ ತನ್ನ ಕುಟುಂಬಕ್ಕೆ ಗರಿಷ್ಠ ಸಬ್ಸಿಡಿ ದರದಲ್ಲಿ ಪಡಿತರ ಸಿಗುತ್ತದೆ, ಪ್ರತಿ ತಿಂಗಳೂ 29 ಕೆ.ಜಿ ಆಹಾರ ಧಾನ್ಯ ಪಡೆದುಕೊಳ್ಳಲು ಅವಕಾಶ ಒದಗಿಸುವ `ಅಂತ್ಯೋದಯ ಕಾರ್ಡ್~ ಹೊಂದುವ ಅರ್ಹತೆ ತಮಗಿದೆ ಎಂಬುದು ಆಕೆಗೆ ತಿಳಿದುಬಂತು. ಇದು ಗೊತ್ತಾದ ಮೇಲೆ ಅಕ್ಕಮ್ಮ 60 ರೂಪಾಯಿಗೂ ಹೆಚ್ಚು ಖರ್ಚು ಮಾಡಿಕೊಂಡು ಹೆಗ್ಗಡದೇವನಕೋಟೆಗೆ ಹೋಗಿ ಅಧಿಕಾರಿಗಳನ್ನು ಕಂಡು ಬಂದಿದ್ದಳು. ಆದರೆ ಇಂತಹ ಸೌಲಭ್ಯ ಸಿಗಬೇಕಾದರೆ ಮೊದಲು ತಾನು `ಬಾವಿಕೆರೆ ಗ್ರಾಮಕ್ಕೆ ಸೇರಿದ ಅಕ್ಕಮ್ಮ~ ಎಂಬುದನ್ನು ಸಾಬೀತುಪಡಿಸುವ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಅಧಿಕಾರಿಗಳು ಆಕೆಗೆ ಸೂಚಿಸಿದರು. ಇದನ್ನು ಕೇಳಿದ ಅಕ್ಕಮ್ಮನಿಗೆ ಇಂತಹದ್ದೊಂದು ವ್ಯವಸ್ಥೆಯ ತಲೆಬುಡವೇ ಅರ್ಥವಾಗಲಿಲ್ಲ. ತನ್ನ ಹಳ್ಳಿಯಿಂದ 30 ಕಿ.ಮೀಗೂ ಹೆಚ್ಚು ದೂರ ಇರುವ ಈ ಊರಿನ ಯಾರೋ ಅಪರಿಚಿತರು ತನ್ನ ಗುರುತನ್ನು ಸಾಬೀತುಪಡಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಆಕೆಯನ್ನು ಕಾಡತೊಡಗಿತು. ಆಗ `ನೋಟರಿಯಿಂದ ಈ ಕೆಲಸ ಸಾಧ್ಯ, ಅವರು ನಿನ್ನ ಗುರುತನ್ನು ದೃಢೀಕರಿಸುವ ಪ್ರಮಾಣಪತ್ರ ನೀಡಬಲ್ಲರು~ ಎಂದು ಯಾರೋ ತಿಳಿಸಿದರು.

ಇದನ್ನು ಕೇಳಿದ ಮೇಲಂತೂ ಅಕ್ಕಮ್ಮ ಇನ್ನಷ್ಟು ಗೊಂದಲಕ್ಕೆ ಬಿದ್ದಳು. ಈ ಸಂದರ್ಭದಲ್ಲೇ ಪೋಷಿಣಿಗೆ ದೂರವಾಣಿ ಕರೆ ಮಾಡಿದ್ದ ಆಕೆ, ತನ್ನ ಪೂರ್ವಾಪರ ಅರಿಯದವರು ತನ್ನನ್ನು ದೃಢೀಕರಿಸುವುದಕ್ಕಿಂತ ತನ್ನ ಬಗ್ಗೆ ಚೆನ್ನಾಗಿ ಅರಿತ ತನ್ನದೇ ಊರಿನವರು ಅಥವಾ ಅಕ್ಕಪಕ್ಕದ ಊರವರು ಈ ಕೆಲಸ ಮಾಡಬಾರದೇಕೆ ಎಂದು ಕೇಳುತ್ತಿದ್ದಳು. ಅಕ್ಕಮ್ಮನ ಈ ಪ್ರಶ್ನೆಯೇನೋ ಅರ್ಥಪೂರ್ಣವಾಗೇ ಇತ್ತು. ತಾನು ಯಾರೆಂಬುದನ್ನು ಸಾರಿ ಸಾರಿ ಹೇಳುತ್ತಿದ್ದರೂ ನಂಬದ ಸರ್ಕಾರ, 100 ರೂಪಾಯಿ ತೆತ್ತು ಪಡೆಯುವ ಪ್ರಮಾಣಪತ್ರ ಹೇಳುವ ತನ್ನ ಗುರುತನ್ನು ಮಾತ್ರ ಹೇಗೆ ನಂಬುತ್ತದೆ ಎಂಬ ಅಚ್ಚರಿಗೆ ಆಕೆ ಒಳಗಾಗಿದ್ದಳು.

ಇದೇನು ಪೌರತ್ವಕ್ಕೆ ಕಟ್ಟುವ ಬೆಲೆಯೇ? ಅಕ್ಕಮ್ಮನಂತಹ ವ್ಯಕ್ತಿಗಳಿಗೆ ನಿಜವಾಗಲೂ ಯಾವ ಸವಲತ್ತಿನ ಹಕ್ಕುಗಳು ಇವೆ ಎಂಬ ಬಗ್ಗೆ ನಾವು ಎಂದಾದರೂ ಯೋಚಿಸಿದ್ದೇವೆಯೇ ಎಂದು ನನ್ನನ್ನೇ ನಾನು ಕೇಳಿಕೊಳ್ಳುತ್ತೇನೆ. ತನ್ನ ನಾಗರಿಕರಿಗೆ ಸೇವೆಗಳನ್ನು ಒದಗಿಸಲು ಸರ್ಕಾರ ಅನುಸರಿಸುತ್ತಿರುವ ಇಂತಹ ಅರ್ಥಹೀನ ಮತ್ತು ಸುತ್ತುಬಳಸು ಮಾರ್ಗಗಳನ್ನು ನಾವು ಸಹಿಸಿಕೊಂಡಿರುವುದಾದರೂ ಹೇಗೆ? ನಾಗರಿಕರ ಬಗ್ಗೆ ಸರ್ಕಾರ ಇಡುವ `ನಂಬಿಕೆ~ಯೇ ಸವಲತ್ತು ಪಡೆಯಲು ಅಗತ್ಯವಾದ `ದೃಢೀಕರಣ~ ಆಗಲಾರದೇ?

ಬುಡಕಟ್ಟು ಪಂಗಡಕ್ಕೆ ಸೇರಿದ ಬಡ ಅನಕ್ಷರಸ್ಥ ಮಹಿಳೆ ಆಗಿರದಿದ್ದರೆ ಅಕ್ಕಮ್ಮನಿಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲವೇನೋ? ನಾವು ಯಾರು ಎಂಬ ನಮ್ಮ ಅಸ್ತಿತ್ವದ ಪ್ರಶ್ನೆ ಅಂತರಂಗದಿಂದಲೇ ಮೂಡುವಂತಾದ್ದೋ ಅಥವಾ ಸರ್ಕಾರಿ ಏಜೆಂಟರು ಮತ್ತು ಇತರ ಪ್ರಕ್ರಿಯೆಗಳ ಮೂಲಕ ಮಾತ್ರ ಅದು ದೃಢಪಡುವಂತಾದ್ದೋ?

ಸಿದ್ಧ ಉತ್ತರ: ಹೀಗೆ ಅಕ್ಕಮ್ಮನಂತಹವರ ಸ್ಥಿತಿಗತಿಯ ವಿಮರ್ಶೆಗೆ ಹೊರಡುವವರಿಗೆ ಸರ್ಕಾರದ ಬಳಿ ಇಂದು ಸಿಗುವ ಸಿದ್ಧ ಉತ್ತರ  `ಆಧಾರ್~. ಪ್ರಜೆಗಳಿಗೆಲ್ಲ ತಾನು ನೀಡಲು ಹೊರಟಿರುವ ಈ ವಿಶಿಷ್ಟ ಗುರುತು ಸಂಖ್ಯೆ ನೀಡಿಕೆ ಯೋಜನೆ ಇಂತಹ ಪ್ರಶ್ನೆಗಳಿಗೆಲ್ಲ ನಿಖರ ಉತ್ತರ ನೀಡಬಲ್ಲದು ಎಂದೇ ಕೇಂದ್ರ ಸರ್ಕಾರ ಪ್ರತಿಪಾದಿಸುತ್ತಿದೆ. ಸರ್ಕಾರದ ಪ್ರಕಾರ, ತನ್ನ ಎಲ್ಲ ನಾಗರಿಕರ ಗುರುತು ದೃಢೀಕರಣಕ್ಕೆ ಈ ಮಹತ್ವಾಕಾಂಕ್ಷಿ ಯೋಜನೆ ನೆರವಾಗುತ್ತದೆ. ಈ ಪ್ರಕ್ರಿಯೆಯ ಸುತ್ತ ಎದ್ದಿರುವ ಇತ್ತೀಚಿನ ವಿವಾದಗಳು ಸರ್ಕಾರದ ವಾದ ಮತ್ತು ಸಮರ್ಥನೆಯಲ್ಲಿ ಇರುವ ಹುಳುಕನ್ನು ಬಯಲುಮಾಡಿವೆ. ಸರ್ಕಾರ ಏನನ್ನು ಪ್ರತಿಪಾದಿಸುತ್ತಿದೆಯೋ ವಾಸ್ತವದಲ್ಲಿ `ಆಧಾರ್~ ಅದನ್ನೇ ಪ್ರತಿನಿಧಿಸುವುದೇ?

ಅಕ್ಕಮ್ಮನಂತಹವರು ತಮ್ಮ ಗುರುತನ್ನು ದೃಢೀಕರಿಸಿ ಹತ್ತಾರು ಸರ್ಕಾರಿ ಯೋಜನೆಗಳ ಲಾಭ ಪಡೆಯಲು ನಿಜವಾಗಲೂ ಅದು ನೆರವಾಗುವುದೇ?

ನೂರಾರು ಸರ್ಕಾರಿ ಯೋಜನೆಗಳು ಮತ್ತು ಲಂಚಗುಳಿತನ ಹತ್ತಿಕ್ಕಲು ನಡೆಸಿದ ಹಲವಾರು ಪ್ರಯತ್ನಗಳು ಮಾಡಲಾಗದ್ದನ್ನು 12 ಅಂಕಿಗಳ ವಿಶಿಷ್ಟ ಗುರುತು ಸಂಖ್ಯೆ ಸಾಧಿಸುತ್ತದೆ ಎಂದು ಸರ್ಕಾರ ಭ್ರಮಿಸಿದೆ. ಇದರಿಂದ ಸೌಲಭ್ಯವಂಚಿತ ನಾಗರಿಕರಿಗೆ ಎಲ್ಲವನ್ನೂ ಒದಗಿಸಿಬಿಡಬಹುದು, ಅಂದರೆ ಬಡವರಿಗೆ ನೀಡುವ ಸವಲತ್ತು ಮಧ್ಯವರ್ತಿಗಳಿಂದ ದುರ್ಬಳಕೆ ಆಗದಂತೆ ನೋಡಿಕೊಳ್ಳಬಹುದು ಎಂದೇ ಅದು ತಿಳಿದಿದೆ. `ಆಧಾರ್~ ಎಂದರೆ ಬೆಂಬಲ, ಅಡಿಗಲ್ಲು ಅಥವಾ ಪೋಷಣಶಕ್ತಿ ಎಂದರ್ಥ. ಆದರೆ ದಯಾಳುವಾದ ಸರ್ಕಾರದಿಂದ ಬಡವರು ಏನನ್ನು ಬಯಸುತ್ತಾರೋ ಅದನ್ನು ನೀಡುವ ಮಂತ್ರದಂಡ ಎಂಬಂತೆ ಅದನ್ನು ಬಿಂಬಿಸಲಾಗುತ್ತಿದೆ.

ಸೌಲಭ್ಯವಂಚಿತರಿಗೆ ಬಹಳ ಅನುಕೂಲವಾಗುತ್ತದೆ ಎಂಬುದನ್ನೇ ಪ್ರಧಾನ ಅಂಶವಾಗಿ ಇಟ್ಟುಕೊಂಡು `ಆಧಾರ್~ ಬಗ್ಗೆ ಪ್ರಚಾರ ನಡೆಯುತ್ತಿದೆ. ಅಂದರೆ ಎಲ್ಲ ಮಂತ್ರದಂಡದಂತೆ ಇದೂ ಕೂಡ ಮರೀಚಿಕೆ ಆಗುವ ಸಾಧ್ಯತೆಯೇ ಹೆಚ್ಚು. ಪ್ರತಿ ವ್ಯಕ್ತಿಯ ಮೂಲಭೂತ ಮಾಹಿತಿ (ಹೆಸರು, ವಿಳಾಸ, ಪೋಷಕರ ಹೆಸರು, ಹುಟ್ಟಿದ ದಿನಾಂಕ ಇತ್ಯಾದಿ) ಮತ್ತು ಜೈವಿಕ ಮಾಹಿತಿ (ಭಾವಚಿತ್ರ, ಎಲ್ಲ 10 ಬೆರಳುಗಳ ಅಚ್ಚು, ಅಕ್ಷಿಪಟಲದ ಸ್ಕ್ಯಾನಿಂಗ್) ಎಲ್ಲವನ್ನೂ ಸಂಗ್ರಹಿಸಿ ಇಟ್ಟುಕೊಂಡುಬಿಟ್ಟರೆ ಯಾವ ಜಾದೂ ಬೇಕಾದರೂ ಮಾಡಬಹುದು ಎಂದು ಸರ್ಕಾರ ಅಂದುಕೊಂಡಿದೆ. ವಿಶಿಷ್ಟ ಗುರುತು ಸಂಖ್ಯೆ ನೀಡಿ ಅದನ್ನು ಬಿಪಿಎಲ್ ಕಾರ್ಡ್ ಮೂಲಕ ಪಡಿತರ ಪಡೆಯುವುದರಿಂದ ಹಿಡಿದು ಉದ್ಯೋಗ ಖಾತರಿ ಯೋಜನೆಗೆ ಹೆಸರು ನೋಂದಣಿ, ಬ್ಯಾಂಕ್ ಖಾತೆ ತೆರೆಯುವವರೆಗೆ ಎಲ್ಲ ವ್ಯವಹಾರಗಳಿಗೂ ಬಳಸುವ ಉದ್ದೇಶವನ್ನೂ ಅದು ಹೊಂದಿದೆ. ಯುಐಡಿಯನ್ನು ನಕಲು ಮಾಡಲು ಸಾಧ್ಯವಿಲ್ಲವಾದ್ದರಿಂದ ಇದು ಸೋರಿಕೆಯನ್ನು ತಡೆಗಟ್ಟುತ್ತದೆ ಎಂದು ಸಹ ಹೇಳಲಾಗುತ್ತಿದೆ. ಈ ಹೇಳಿಕೆಯಲ್ಲಿ ಸುಳ್ಳಿಲ್ಲ ಎಂದು ನಾವು ಅಂದುಕೊಂಡರೂ, ಉತ್ಪ್ರೇಕ್ಷೆಯಂತೂ ಇದ್ದೇ ಇದೆ.

ಕಣ್ಗಾವಲು, ನಾಗರಿಕರ ಗುರುತು ಪತ್ತೆ ಮತ್ತು ದಾಖಲೆಯಂತಹ `ರಾಷ್ಟ್ರೀಯ ಭದ್ರತೆ~ಯು `ಆಧಾರ್~ನ ನಿಜವಾದ ಗುರಿ ಮತ್ತು ಉದ್ದೇಶ. ವಿಶಿಷ್ಟ ಗುರುತು ಸಂಖ್ಯೆ ಪ್ರಾಧಿಕಾರವು ತನಿಖಾ ದಳ, ಸಂಶೋಧನೆ ಮತ್ತು ವಿಶ್ಲೇಷಣಾ ಘಟಕ (ರಾ), ಸಿಬಿಐ, ಕೇಂದ್ರ ಅಬಕಾರಿ ಮತ್ತು ನೇರ ತೆರಿಗೆ ಮಂಡಳಿಯಂತಹ 11 ಸಂಸ್ಥೆಗಳನ್ನು ಒಳಗೊಂಡ ನ್ಯಾಟ್‌ಗ್ರಿಡ್ (ನ್ಯಾಷನಲ್ ಇಂಟೆಲಿಜೆನ್ಸ್ ಗ್ರಿಡ್) ಜೊತೆ ದತ್ತಾಂಶ ವಿನಿಮಯ ಮಾಡಿಕೊಳ್ಳಬೇಕಾಗುತ್ತದೆ. ಮುಂದಿನ ಮೇ ತಿಂಗಳಲ್ಲಿ ಅಸ್ತಿತ್ವಕ್ಕೆ ಬರಲಿರುವ ನ್ಯಾಟ್‌ಗ್ರಿಡ್, ವ್ಯಕ್ತಿಗಳ ಬ್ಯಾಂಕ್ ಖಾತೆ, ಕ್ರೆಡಿಡ್ ಕಾರ್ಡ್ ವ್ಯವಹಾರ, ಚಾಲನಾ ಪರವಾನಗಿಯಂತಹ 21 ದತ್ತಾಂಶಗಳನ್ನು ಬೇಕೆಂದ ಕ್ಷಣದಲ್ಲಿ ಒದಗಿಸುತ್ತದೆ.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಳಿನ ಬದಲು ಕಾಸನ್ನು ನೀಡಲಾಗುತ್ತಿದೆ ಹಾಗೂ ಈ ಯೋಜನೆಯಲ್ಲಿ ಉದ್ಯೋಗ ಕಾರ್ಡ್‌ಗಳ ನಕಲು ಮಾಡಲಾಗಿದೆ ಎಂಬಂತಹ ದೂರುಗಳನ್ನೂ `ಆಧಾರ್~ನಿಂದ ನಿರ್ಮೂಲನೆ ಮಾಡಬಹುದು ಎಂದು ಸಹ ಹೇಳಲಾಗುತ್ತಿದೆ. ಆದರೆ ಇದು ವಾಸ್ತವವಲ್ಲ.

ಹಣವನ್ನು ಲಪಟಾಯಿಸಲು ಪ್ರಮುಖವಾಗಿ ಮೂರು ಮಾರ್ಗಗಳಿವೆ. ಅವೆಂದರೆ ಸುಲಿಗೆ, ಅಪವಿತ್ರ ಮೈತ್ರಿ ಮತ್ತು ವಂಚನೆ. ಕಾರ್ಮಿಕರು ತಮ್ಮ ಖಾತೆಗಳಿಂದ ಪಡೆದುಕೊಳ್ಳುವ ಹೆಚ್ಚುವರಿ ಹಣದಲ್ಲಿ ಮಧ್ಯವರ್ತಿ ಪಾಲು ತೆಗೆದುಕೊಳ್ಳುವ ಮೂಲಕ `ಸುಲಿಗೆ~ಕೋರ ಆಗುತ್ತಾನೆ. ಕಾರ್ಮಿಕ ಮತ್ತು ಮಧ್ಯವರ್ತಿ ಒಳ ಒಪ್ಪಂದ ಮಾಡಿಕೊಂಡು ಹೆಚ್ಚುವರಿ ಹಣವನ್ನು ಹಂಚಿಕೊಳ್ಳುವ ಸಂಧಾನಕ್ಕೆ ಬಂದಾಗ ಅದು `ಅಪವಿತ್ರ ಮೈತ್ರಿ~ ಎನಿಸಿಕೊಳ್ಳುತ್ತದೆ. ಕಾರ್ಮಿಕರ ಪರವಾಗಿ ಮಧ್ಯವರ್ತಿಯೇ ಖಾತೆ ತೆರೆದು ನಿರ್ವಹಿಸಿದರೆ ಅದು `ವಂಚನೆ~ ಆಗುತ್ತದೆ. ಈ ಮೂರು ವಾಮಮಾರ್ಗಗಳ ಪೈಕಿ ಯುಐಡಿಯು ಹೆಚ್ಚೆಂದರೆ ವಂಚನೆಯನ್ನು ತಡೆಗಟ್ಟಬಹುದೇ ಹೊರತು ಅತ್ಯಂತ ಸಾಮಾನ್ಯ ಸಂಗತಿಯಾಗಿ ಹೋಗಿರುವ ಸುಲಿಗೆ ಅಥವಾ ಅಪವಿತ್ರ ಮೈತ್ರಿಯನ್ನು ಅಲ್ಲ. ಭ್ರಷ್ಟಾಚಾರ ಹೆಚ್ಚಿಗೆ ನಡೆಯುವುದು ಸಂಬಳಕ್ಕಿಂತ ಹೆಚ್ಚಾಗಿ ಸಾಮಗ್ರಿ, ಸಲಕರಣೆಗಳ ಖರೀದಿ, ದುರ್ಬಳಕೆ ಇತ್ಯಾದಿಗಳಲ್ಲಿ. ಇದಕ್ಕೂ `ಆಧಾರ್~ ಬಳಿ ಉತ್ತರ ಇಲ್ಲ. ಅದೇನಿದ್ದರೂ ಪಾರದರ್ಶಕ ಲೆಕ್ಕಪತ್ರ, ಮೇಲ್ವಿಚಾರಣೆ ಮತ್ತು ಪರಿಶೀಲನೆಯನ್ನು ಮಾತ್ರ ನೋಡಿಕೊಳ್ಳಬಲ್ಲದು.

ಹಾಗೆಯೇ ಇದು ನಕಲಿ ಪಡಿತರ ಕಾರ್ಡ್ ಬಳಸುವ ಸಂದರ್ಭದಲ್ಲಿ ಮಾತ್ರ ಪಡಿತರ ಸೋರಿಕೆಯನ್ನು ತಡೆಗಟ್ಟುತ್ತದೆ. ದಾಖಲೆಗಳ ಕಂಪ್ಯೂಟರೀಕರಣ ಮತ್ತು ಹಾಲೋಗ್ರಾಮ್ ಕಾರ್ಡ್‌ಗಳ ಬಳಕೆಯಿಂದ ಈಗಾಗಲೇ ನಕಲಿ ಕಾರ್ಡ್‌ಗಳ ಬಳಕೆ ಗಣನೀಯವಾಗಿ ಕಡಿಮೆ ಆಗಿಹೋಗಿದೆ. ಕರ್ನಾಟಕದಲ್ಲಿ ಇಂತಹ ಕಾರ್ಡ್‌ಗಳ ಸಂಖ್ಯೆ ಹೆಚ್ಚಾಗಿಯೇ ಇರಬಹುದು. ಆದರೆ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ತಮಿಳುನಾಡಿನಲ್ಲಿ ಕೇವಲ ಶೇ 2ರಷ್ಟು ಹಾಗೂ ಛತ್ತೀಸ್‌ಗಡದಲ್ಲಿ ಶೇ 8ರಷ್ಟು ಮಾತ್ರ ನಕಲಿ ಕಾರ್ಡ್‌ಗಳ ಹಾವಳಿ ಇದೆ.

ಸೋರಿಕೆಯ ಮೂಲ: ಪಡಿತರ ವ್ಯವಸ್ಥೆಯ ಒಳಗೇ ಸೋರಿಕೆಯ ಎರಡು ಪ್ರಮುಖ ಮೂಲಗಳನ್ನು ನಾವು ಗುರುತಿಸಬಹುದು. ಮೊದಲನೆಯದು, ಗ್ರಾಮೀಣ ನ್ಯಾಯಬೆಲೆ ಅಂಗಡಿಗೆ ಹೋಗಬೇಕಿದ್ದ ಪಡಿತರವನ್ನು ಬೇರೆಡೆ ಸಾಗಿಸುವುದು. ಆಗ ಅಸಹಾಯಕರಾಗುವ ವಿತರಕರಿಗೆ, ತಮಗೆ ಸರಬರಾಜಾಗಿರುವುದೇ ಅಲ್ಪ ಎಂದು ಹೇಳದೇ ಬೇರೆ ವಿಧಿಯಿಲ್ಲ. ಎರಡನೆಯದು, ವಿತರಕರು ಕಡಿಮೆ ಪ್ರಮಾಣದಲ್ಲಿ ಪಡಿತರ ಮಾರಾಟ ಮಾಡಿದರೂ (ಅಂದರೆ 35 ಕೆ.ಜಿ ಪಡೆಯುವ ಅರ್ಹತೆ ಇದ್ದವರಿಗೆ ಕೇವಲ 25 ಕೆ.ಜಿ ನೀಡುವುದು) ಅಧಿಕೃತ ದಾಖಲೆಗಳಲ್ಲಿ ಮಾತ್ರ ಜನರಿಗೆ ಸಿಗಬೇಕಾದ ಪ್ರಮಾಣದಲ್ಲೇ ಎಲ್ಲ ಪಡಿತರವೂ ಸಿಕ್ಕಿದೆ ಎಂದು ನಮೂದಿಸುವುದು.

ಈ ಎರಡು ಬಗೆಯ ಸೋರಿಕೆಗಳನ್ನೂ ತಡೆಗಟ್ಟುವುದು `ಆಧಾರ್~ಗೆ ಸಾಧ್ಯವಿಲ್ಲ. ಸೇವೆ ಒದಗಿಸಲು `ಆಧಾರ್~ಅನ್ನು ಸರ್ಕಾರ ಕಡ್ಡಾಯ ಮಾಡಿದರೆ, ಯುಐಡಿ ಹೊಂದದವರನ್ನು ಪ್ರತ್ಯೇಕಿಸಿದಂತಾಗುತ್ತದೆ. ಇದು ನ್ಯಾಯಸಮ್ಮತವಲ್ಲದ್ದು ಮತ್ತು ವಿರೋಧಾಭಾಸದಿಂದ ಕೂಡಿರುವಂತಾದ್ದು.

ಬಡವರನ್ನು ಗುರಿಯಾಗಿಟ್ಟುಕೊಂಡಿರುವ `ಆಧಾರ್~, ಸೇವೆ ಪಡೆಯುವಲ್ಲಿ ಅವರಿಗೆ ತಲೆದೋರುವ ಅಡೆತಡೆಗಳನ್ನು ನಿವಾರಿಸುತ್ತದೆ ಎಂದು ಒಂದೆಡೆ ಯುಐಡಿ ಅಧಿಕಾರಿಗಳು ಹೇಳುತ್ತಾರೆ. ಮತ್ತೊಂದೆಡೆ ಯೋಜನೆಯು ಮುಕ್ತವಾಗಿ ಹೇಳುವಂತೆ, ಅದರ ಪ್ರಮುಖ ಕೆಲಸ ಗುರುತು ಪತ್ತೆ ಮಾತ್ರ. ಫಲಾನುಭವಿಗಳ ಆಯ್ಕೆ ಹಾಗೂ ಅವರಿಗೆ ಸೇವೆ ಒದಗಿಸುವ ಕೆಲಸವನ್ನು ಸಂಬಂಧಪಟ್ಟ ಸಂಸ್ಥೆಗಳೇ ನಿರ್ವಹಿಸುತ್ತವೆ; ಯುಐಡಿ ಸಂಖ್ಯೆಯು ಕೇವಲ ಗುರುತನ್ನು ದೃಢೀಕರಿಸುತ್ತದೆ ಹೊರತು ಹಕ್ಕುಗಳು, ಸೌಲಭ್ಯ ಅಥವಾ ಸವಲತ್ತುಗಳು ಅರ್ಹರನ್ನು ತಲುಪುತ್ತಿವೆ ಎಂಬುದನ್ನು ಖಾತರಿಪಡಿಸುವುದಿಲ್ಲ.

ಪ್ರಜಾ ಸ್ವಾತಂತ್ರ್ಯಕ್ಕೂ `ಆಧಾರ್~ ಯೋಜನೆ ತೊಡಕುಂಟು ಮಾಡುತ್ತದೆ. ಇದರಿಂದ ನಾಗರಿಕರ ಚಲನವಲನ ಮತ್ತು ವ್ಯವಹಾರಗಳ ಬಗ್ಗೆ ಸರ್ಕಾರ ಹದ್ದಿನ ಕಣ್ಣಿಡಲು ಅವಕಾಶ ಆಗುತ್ತದೆ. ಇಲ್ಲಿ ವ್ಯಕ್ತಿಗಳ ವೈಯಕ್ತಿಕ ಮಾಹಿತಿಯು ಇತರ ಸಂಸ್ಥೆಗಳ ಜೊತೆ ವಿನಿಮಯ ಆಗುವುದಿಲ್ಲ ಎಂಬ ಖಾತರಿಯೂ ನಮಗೆ ದೊರೆಯುವುದಿಲ್ಲ.

ತಂತ್ರಜ್ಞಾನದ ಮೇಲಿನ ಅತಿಯಾದ ಅವಲಂಬನೆ, ಅದರಲ್ಲೂ ಭ್ರಷ್ಟಾಚಾರದಂತಹ ವಿಶೇಷ ಸಮಸ್ಯೆಗಳನ್ನು ತಡೆಗಟ್ಟುವ ವಿಷಯದಲ್ಲಿ ಅದರ ಬಳಕೆ ಆಪತ್ತು ತಂದೊಡ್ಡಬಹುದು. ತಂತ್ರಜ್ಞಾನ ಕೆಲವೊಮ್ಮೆ ಕೈಕೊಡಬಹುದು. ದೇಶದ ಬಹುತೇಕ ಭಾಗಗಳಲ್ಲಿ ಈಗ ಆಗುತ್ತಿರುವಂತೆ ವಿದ್ಯುತ್ ಕಡಿತ ಉಂಟಾದಾಗ ಜೈವಿಕ ಮಾಹಿತಿ ತಪ್ಪಾಗುವ ಸಾಧ್ಯತೆ ಇರುತ್ತದೆ. ಬೆರಳಚ್ಚಿನ ಗುಣಮಟ್ಟ ಉತ್ತಮವಾಗಿ ಇಲ್ಲದವರ (ನಿರ್ಮಾಣ ಕಾರ್ಮಿಕರಂತಹವರು) ಬೆರಳಚ್ಚು ಪಡೆಯುವುದು ಮತ್ತು ಅಕ್ಷಿಪಟಲದ ಸಮಸ್ಯೆ ಇರುವವರ ಸ್ಕ್ಯಾನಿಂಗ್ ಮಾಡುವುದು ಕಷ್ಟವಾಗುತ್ತದೆ. ಇಂತಹ ಕಾರಣಗಳಿಂದಾಗಿ 10ರಿಂದ 60 ದಶಲಕ್ಷ ಜನ ಯುಐಡಿ ಯೋಜನೆಯಿಂದ ಹೊರಗುಳಿಯುತ್ತಾರೆ. ದತ್ತಾಂಶ ಸಂರಕ್ಷಣಾ ಸಮಸ್ಯೆಗೂ `ಆಧಾರ್~ ಕಾರಣವಾಗುತ್ತದೆ. `ಗುರುತುಪತ್ರ ಯೋಜನೆಗಳು ಅತ್ಯಂತ ಸಂಕೀರ್ಣವಾಗಿರುತ್ತವೆ, ತಾಂತ್ರಿಕವಾಗಿ ದೃಢಪಡಿಸಲಾಗದ ಅವು ಅಸುರಕ್ಷಿತ~ ಎಂದು ಲಂಡನ್ ಅರ್ಥಶಾಸ್ತ್ರ ಅಧ್ಯಯನ ಶಾಲೆ ಹೇಳಿದೆ.

ಭಾರತದ ರಕ್ಷಣಾ ಸಚಿವಾಲಯ, ಅಮೆರಿಕದ ಪೆಂಟಗನ್ ಸೇರಿದಂತೆ ಯಾವುದನ್ನು ಅತ್ಯಂತ ಸಂರಕ್ಷಿತ ಎಂದು ಈವರೆಗೆ ನಾವು ಭಾವಿಸಿದ್ದೆವೊ ಅಂಥವುಗಳ ದತ್ತಾಂಶ ಮತ್ತು ವೆಬ್‌ಸೈಟ್‌ಗಳಿಗೇ ಕನ್ನ ಹಾಕಿ ಮಾಹಿತಿ ಕದಿಯಲಾಗಿದೆ. ಈ ರೀತಿ ಕದ್ದ ಮಾಹಿತಿಯನ್ನು ಭದ್ರತಾ ಸಂಸ್ಥೆಗಳಿಗೆ ಅಥವಾ ಇತರ ಸಂಸ್ಥೆಗಳಿಗೆ ಒದಗಿಸುವುದು ಅತ್ಯಂತ ಕೆಡುಕಿನ ಪರಿಣಾಮಗಳನ್ನು ಉಂಟು ಮಾಡಬಹುದು. ಇಂತಹ ಪರಿಣಾಮಗಳು ಹಾಗೂ ದುಬಾರಿ ವೆಚ್ಚದ ಕಾರಣದಿಂದ  ಬ್ರಿಟನ್, ಅಮೆರಿಕ, ಆಸ್ಟ್ರೇಲಿಯದಂತಹ ಹಲವು ದೇಶಗಳು ರಾಷ್ಟ್ರೀಯ ಗುರುತು ಪತ್ರ ಯೋಜನೆಗಳನ್ನು ಕೈಬಿಟ್ಟಿವೆ.

ಲಭ್ಯ ವರದಿಗಳ ಪ್ರಕಾರ, ಒಬ್ಬ ವ್ಯಕ್ತಿಗೆ ಯುಐಡಿ ನೀಡಲು ಆಗುವ ಖರ್ಚು 31 ರೂಪಾಯಿಯಿಂದ 450- 500 ರೂಪಾಯಿಗೆ ಏರಿದೆ. ಇದರಿಂದ `ಆಧಾರ್~ಗಾಗಿ ಸುಮಾರು 1.50 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಇಷ್ಟರ ನಡುವೆಯೂ ಈ ಯೋಜನೆಯನ್ನು ಯಾವುದೇ ಕಾನೂನಿನ ತಳಹದಿ ಇಲ್ಲದೆ, ಸಾರ್ವಜನಿಕರ ಅಥವಾ ಸಂಸತ್ತಿನ ಚರ್ಚೆಗೆ ಒಳಪಡಿಸದೇ ಜಾರಿಗೆ ತರುವ ಪ್ರಯತ್ನ ನಡೆದಿದೆ. ಸಂಸತ್ತಿನ ಒಪ್ಪಿಗೆ ಇಲ್ಲದೆ ಆಡಳಿತಾತ್ಮಕ ಆದೇಶವನ್ನು ಮಾತ್ರ ಹೊರಡಿಸಿ ಯೋಜನೆ ಜಾರಿಗೆ ತರುವ ಪ್ರಯತ್ನವನ್ನು ಕೇವಲ ಇತ್ತೀಚೆಗಷ್ಟೇ ಸಂಸದೀಯ ಸ್ಥಾಯಿ ಸಮಿತಿ ಬಲವಾಗಿ ವಿರೋಧಿಸಿದೆ. ಇಂತಹ ದುಬಾರಿ ಮತ್ತು ಪ್ರಶ್ನಾರ್ಹ ವ್ಯವಸ್ಥೆ ಅಕ್ಕಮ್ಮನಂತಹವರಿಗೆ ಬೇಕಿಲ್ಲ. ಭಾರತದ ನಾಗರಿಕರಾಗಿ ಅರ್ಥಪೂರ್ಣವಾಗಿ ತಮ್ಮ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗುವಂತಹ ದಕ್ಷ ಮತ್ತು ಭ್ರಷ್ಟಾಚಾರ ಮುಕ್ತ ಸಾರ್ವಜನಿಕ ಸೇವೆಯನ್ನು ಮಾತ್ರ ಅವರು ನಿರೀಕ್ಷಿಸುತ್ತಾರೆ.

ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT