ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರ್‌ಮಿನಾರ್‌ಬಳಿ ಧನಿಕ ದೇಶಗಳ ಛಮ್ಮಕ್‌ಛಲ್ಲೊ

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

ಪಕ್ಕದ ಹೈದರಾಬಾದ್‌ನಲ್ಲಿ 193 ದೇಶಗಳ `ಜೀವಿವೈವಿಧ್ಯ ಮಹಾಮೇಳ~ ನಡೆಯುತ್ತಿದೆ. ಕೆನಡಾದ ಬಿಳಿಯರು, ಆಫ್ರಿಕದ ಕರಿಯರು, ಇರಾಕಿನ ಲಂಬೂಗಳು, ಜಪಾನಿನ ಕುಳ್ಳರು, ಮೊಂಗೋಲಿಯಾದ ಹಳದಿ ಮಂದಿ, ಬಾಂಗ್ಲಾದ ಕಂದುಮಂದಿ, ಕಝಾಕಿಸ್ತಾನದ ಕೆಂಪುಮಂದಿ...

ಇವರ ಊಟೋಪಚಾರಕ್ಕೆ ಲಖ್ನೋದ ಬಾಸ್ಮತಿ, ಢಾಕಾದ ಹಿಲ್ಸಾ, ಇಟಲಿಯ ಆಲಿವ್, ಮೆಡಿಟೇರಿಯನ್ ಕೇವಿಯರ್, ಪೆರುವಿನ ಕೆಂಪು ಆಲೂಗಡ್ಡೆ, ದಕ್ಷಿಣ ಚೀನಾ ಸಮುದ್ರದ ಟೈಗರ್ ಪ್ರಾನ್, ಆಸ್ಟ್ರೇಲಿಯಾದ ಲ್ಯಾಂಬ್, ಹಾಲೆಂಡಿನ ನೀಲಿಗಿಣ್ಣ, ಫ್ರಾನ್ಸಿನ ಟ್ರಫಲ್ಸ್ (ಅಣಬೆ), ತೈವಾನಿನ ಕಳಲೆ, ಸ್ಪೇನಿನ ಪಾಸ್ತಾ, ಮಡಗಾಸ್ಕರ್ ವೆನಿಲಾ, ಸುರಿನಾಮ್ ಚೆರ‌್ರಿ, ಮಸ್ಕಟ್‌ನ ಖರ್ಜೂರ... 

ಇವರು ಇಳಿದುಕೊಂಡ ಹೊಟೆಲ್‌ಗಳಲ್ಲಿ, ಚರ್ಚಾ ವೇದಿಕೆಗಳಲ್ಲಿ ಫ್ರೆಂಚ್ ಗುಲಾಬಿ, ನೆದರ್‌ಲ್ಯಾಂಡಿನ ಟ್ಯೂಲಿಪ್, ಕೋಸ್ಟಾರಿಕಾದ ಆರ್ಕಿಡ್, ಮೈಸೂರು ಮಲ್ಲಿಗೆ, ಬ್ರಿಟನ್ನಿನ ಕಾರ್ನೇಶನ್, ಪುಣೆಯ ಗ್ಲಾಡಿಯೋಲಿಸ್, ಕೊರಿಯಾದ ಹ್ಯಾಲಿಕ್ರೈಸಂ...

ಪೃಥ್ವಿಯ ನಾನಾ ಭಾಗಗಳಿಂದ ಬಂದ ಇವರೆಲ್ಲರ ಮೂಲ ಕಾಳಜಿ ಏನೆಂದರೆ, ಈ ಎಲ್ಲ ಸಮೃದ್ಧ ಜೈವಿಕ ಸಂಪತ್ತು ಇಂದಿನ ತಲೆಮಾರಿಗೇ ಮುಗಿದು ಹೋಗಬಾರದು. ಮುಂದಿನ, ನೂರನೆಯ ತಲೆಮಾರಿನ ಮನುಷ್ಯರೂ ಸುಖಿಸುವಂತೆ, ಸುಸ್ಥಿರ ಬದುಕು ನಡೆಸುವಂತೆ, ಇತರ ಜೀವಿಗಳೊಂದಿಗೆ ಸಹಬಾಳ್ವೆ ಮಾಡುವಂತೆ ಸೂಕ್ತ ಸಂರಕ್ಷಣಾ ಸೂತ್ರಗಳನ್ನು ನಾವು ಹೆಣೆಯಬೇಕು.

ಈಗಾಗಲೇ ನಮ್ಮ ಅತಿಭಕ್ಷಣ ಪ್ರವೃತ್ತಿಯಿಂದಾಗಿ  ಪೃಥ್ವೀ ಮಿತಿಯನ್ನು ಧಿಕ್ಕರಿಸುತ್ತಿದ್ದೇವೆ. ನೀರಿನ ಮಿತಿಮೀರಿದ ಬಳಕೆಯಿಂದಾಗಿ ಭೂಗ್ರಹದ ಸ್ವಯಂಶುದ್ಧೀಕರಣ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಅದೇ ರೀತಿ ಶುದ್ಧ ಗಾಳಿ, ಅರಣ್ಯ, ಖನಿಜ ಸಂಪನ್ಮೂಲ, ಜೀವಿವೈವಿಧ್ಯ ಇವೆಲ್ಲವೂ ಮರಳಿ ಗಳಿಸಲಾಗದ ಪ್ರಮಾಣದಲ್ಲಿ ನಾಶವಾಗುತ್ತಿವೆ. ಹೇಗಾದರೂ ಮಾಡಿ ಅಳಿದುಳಿದವನ್ನು ರಕ್ಷಿಸಿಕೊಳ್ಳಬೇಕು.

ಇವರ ಇನ್ನೊಂದು ಕಾಳಜಿ ಏನೆಂದರೆ, ಅಪರೂಪದ ವಿಶ್ವಮಾನ್ಯ ತಳಿಗಳನ್ನು,ದೇಸೀ ಜೈವಿಕ ಸಂಪತ್ತನ್ನು ಶತಮಾನಗಳಿಂದ ಪೋಷಿಸಿಕೊಂಡು ಬಂದ ರೈತರಿಗೆ, ಆದಿವಾಸಿಗಳಿಗೆ ತಕ್ಕ ಪ್ರತಿಫಲ ಸಿಗುತ್ತಿರಬೇಕು. ಈ ಮುಗ್ಧರನ್ನು ದೊಡ್ಡ ಕಂಪೆನಿಗಳು ವಂಚಿಸಿ, ಪೇಟೆಂಟ್ ಪಡೆಯದಂತೆ ಪ್ರತಿಬಂಧಕ ಕಾನೂನುಗಳು ಸಿದ್ಧವಾಗಬೇಕು.

ಮೂರನೆಯ ಕಾಳಜಿ ಏನೆಂದರೆ, ಈ ಭೂಮಿಯ ಮೇಲೆ ನಾವು ನೋಡದೆ ಇರುವಂಥ ಇನ್ನೂ ಕೆಲವು ಪ್ರದೇಶಗಳಿವೆ. ಅಮೆನ್ ಕಾಡಿನಲ್ಲಿ, ಇಂಡೊನೇಶ್ಯದ ನಡುಗಡ್ಡೆಗಳಲ್ಲಿ, ಭಾರತದ ಪಶ್ಚಿಮ ಘಟ್ಟಗಳಲ್ಲಿ, ಧನುಷ್ಕೋಡಿಯಾಚಿನ ಪಾಕ್ ಸಂಧಿಯಲ್ಲಿ ಏನೆಲ್ಲ ಬಗೆಯ ಜೀವಿ ವೈವಿಧ್ಯ ಇವೆಯೆಂಬುದು ಗೊತ್ತಾಗುವ ಮೊದಲೇ ಅಲ್ಲೆಲ್ಲ ಬೃಹತ್ ಅಭಿವೃದ್ಧಿ ಯೋಜನೆಗಳು ಬರುತ್ತಿವೆ.

ಅವಸಾನದ ಸ್ಥಿತಿಗೆ ಬಂದಿರುವ ಜೀವಿ ಸಂತತಿಗಳ  ಕೆಂಪು ಪಟ್ಟಿ  ದಿನದಿನಕ್ಕೆ ಬೆಳೆಯುತ್ತಿದೆ. ಶೇಕಡಾ 45ರಷ್ಟು ಜಲಜೀವಿಗಳು, ಶೇಕಡಾ 20ರಷ್ಟು ಪಕ್ಷಿ ಸಂಕುಲಗಳು ನಾಮಾವಶೇಷ ಆಗುವ ಹಂತಕ್ಕೆ ಬಂದಿವೆ. ಪ್ರತಿವರ್ಷ ಕನಿಷ್ಠ 5000 ಜೀವಜಾತಿಗಳು ನಿರ್ನಾಮವಾಗುತ್ತಿವೆ.

ವಿಜ್ಞಾನಿಗಳ ಪ್ರಕಾರ, ಹಿಂದೆ ಡೈನೊಸಾರ್‌ಗಳ ಸರ್ವನಾಶದ ನಂತರ ಈಗಿನ ಆಧುನಿಕ ಮನುಷ್ಯನ ಆಳ್ವಿಕೆಯಲ್ಲೆ ಅತಿ ಹೆಚ್ಚು ಜೀವಿ ಸಂತತಿಗಳು ಅಳಿವಿನಂಚಿಗೆ ಬಂದಿವೆ. ಇಂಥ ಮಾರಣಹೋಮವನ್ನು ತಡೆಯುವಂತೆ ಪರಿಣಾಮಕಾರಿ ಬೇಲಿಯನ್ನು ಹಾಕಬೇಕಾಗಿದೆ.

ನಾಲ್ಕನೆಯದಾಗಿ, ಸಿರಿವಂತ ದೇಶಗಳ ಐಷಾರಾಮಿ ಬದುಕೇ ಜೀವಸ್ತೋಮದ ನಿರಂತರ ಹರಣಕ್ಕೆ ಕಾರಣವಾಗಿದೆ. ಅಭಿವೃದ್ಧಿ ಸಾಧಿಸಿದ ದೇಶಗಳು ಬಡ ರಾಷ್ಟ್ರಗಳ ಜೀವಸಂಪತ್ತನ್ನು ದೋಚುತ್ತಿವೆ. ಇಲ್ಲವೆ ತಮ್ಮ ಬಕಾಸುರ ಶೈಲಿಯನ್ನೇ ಜಗತ್ತಿನ ಇತರ ಜನಾಂಗದವರಿಗೂ ಅಂಟಿಸಲೆಂದು ತಂತಮ್ಮ ಕಾರ್ಪೊರೇಟ್ ಸಂಸ್ಥೆಗಳನ್ನು ಛೂ ಬಿಡುತ್ತ ದಕ್ಷಿಣದ ದೇಶಗಳ ನಿಸರ್ಗದ ದಿವಾಳಿಗೆ ಕಾರಣವಾಗುತ್ತಿವೆ.

ಈ ತಪ್ಪಿಗಾಗಿ ಅವು ದಂಡ ತೆರಬೇಕು. ಅಂದರೆ, ದಕ್ಷಿಣದ ದೇಶಗಳ ಜೀವಸಮೃದ್ಧಿಯ ರಕ್ಷಣೆಗೆ ಬೇಕಾದ ಧನಸಂಪತ್ತನ್ನು ಅವು ದೇಣಿಗೆ ರೂಪದಲ್ಲಿ ನೀಡಬೇಕು.
ಇವೆಲ್ಲವೂ ಈ `ಜೀವಿವೈವಿಧ್ಯ ಮಹಾಸಭೆ~ಯ( `ಸಿಬಿಡಿ~ -ಕನ್ವೆನ್ಷನ್ ಆನ್ ಬಯಾಲಾಜಿಕಲ್ ಡೈವರ್ಸಿಟಿ) ಘನ ಉದ್ದೇಶಗಳು ನಿಜ. ಪೃಥ್ವಿರಕ್ಷಣೆಗೆಂದು 22 ವರ್ಷಗಳ ಹಿಂದೆ ರಿಯೊ ಶೃಂಗಸಭೆಯಲ್ಲಿ ಕೈಗೊಂಡ ಅನೇಕ ನಿರ್ಧಾರಗಳ ಪೈಕಿ `ಸಿಬಿಡಿ~ಯೂ ಒಂದು.

ವಿನಾಶದ ಅಂಚಿನಲ್ಲಿರುವ ಜೀವಿಗಳನ್ನು ರಕ್ಷಿಸಲೆಂದು ಎಲ್ಲ ರಾಷ್ಟ್ರಗಳೂ ಒಟ್ಟಾಗಿ ಪ್ರತಿ ಎರಡು ವರ್ಷಗಳಿಗೊಮ್ಮೆ ಬೇರೆ ಬೇರೆ ದೇಶಗಳಲ್ಲಿ ಸಭೆ ಸೇರಿ, ಹಿಂದೆ ರೂಪಿಸಲಾದ ಒಪ್ಪಂದಗಳನ್ನು ಪರಿಶೀಲಿಸಬೇಕು; ಸಾಧಿಸಿದ ಪ್ರಗತಿಯನ್ನು, ವೈಫಲ್ಯಗಳನ್ನು ವಿಮರ್ಶಿಸಬೇಕು. ಈ ಉದ್ದೇಶದೊಂದಿಗೆ ಇದುವರೆಗೆ ಹತ್ತು ಸಮಾವೇಶಗಳು ನಡೆದಿವೆ. ಹತ್ತನೆಯದು 2010ರಲ್ಲಿ ಜಪಾನಿನ ನಾಗೊಯಾ ಎಂಬಲ್ಲಿ ನಡೆದಿತ್ತು. ಇದು ಹನ್ನೊಂದನೆಯದು. 

ಮೂರು ವಾರಗಳ ಕಾಲ ನಡೆಯುವ  `ಸಿಬಿಡಿ~  ಒಂದು ರೀತಿಯಲ್ಲಿ ಜಾಗತಿಕ ಸಂಸತ್ ಕಲಾಪವೆಂದೇ ಹೇಳಬಹುದು. ಉದ್ದೇಶ ಒಳ್ಳೆಯದಾಗಿದ್ದರೂ ವಿವಿಧ ದೇಶಗಳ ಸರ್ಕಾರಗಳೇ ನಾನಾ ಬಣಗಳಲ್ಲಿ, ನಾನಾ ಬಣ್ಣಗಳಲ್ಲಿ ತಂತಮ್ಮ ಸ್ವಾರ್ಥ, ಹೊಣೆಗೇಡಿ ವರ್ತನೆ, ಸೋಗಲಾಡಿತನ, ಜಿಗುಟು ವರ್ತನೆಗಳನ್ನು ಪ್ರದರ್ಶಿಸುತ್ತ, ಮಾತಿನಲ್ಲೇ ತೌಡುಕುಟ್ಟುವ ಕೆಲಸ ಇಲ್ಲಿ ನಡೆಯುತ್ತದೆ.

ತನ್ನವರ ಹಿತಾಸಕ್ತಿಗೆ ಧಕ್ಕೆ ಬಾರದಂತೆ ಕಾನೂನು ರೂಪಿಸಲು ಪ್ರತಿಯೊಂದು ದೇಶದ ರಾಜತಾಂತ್ರಿಕ ಪ್ರತಿನಿಧಿಗಳು ಹೆಣಗುತ್ತಾರೆ. ಭೂಗ್ರಹದ ಸ್ಥಿತಿ ವರ್ಷವರ್ಷವೂ ದುರ್ಭರವಾಗುತ್ತಲೇ ಹೋಗುತ್ತದೆ.

ಇಂದಿನ ವಾಸ್ತವ ನಮಗೆಲ್ಲ ಗೊತ್ತೇ ಇದೆ: ಜೀವಸಮೃದ್ಧಿ ಇರುವ ಬಡರಾಷ್ಟ್ರಗಳಲ್ಲಿ ರಕ್ಷಣೆಗೆ ಬೇಕಾದ ಹಣವಿಲ್ಲ, ಅರ್ಥಾತ್ ರಾಜಕೀಯ ಇಚ್ಛಾಶಕ್ತಿ ಇಲ್ಲ. `ನಮಗೆ ಹುಲಿಧಾಮ ಬೇಡ, ಯುನೆಸ್ಕೊ ಮಾನ್ಯತೆ ಬೇಡ~ ಎನ್ನುವ ಜನಪ್ರತಿನಿಧಿಗಳು ಒಂದು ಕಡೆ; ರಕ್ಷಕರೇ ಭಕ್ಷಕರಾಗಿ, ಹುಲ್ಲುಬೇರಿನ ಮಟ್ಟದಲ್ಲೂ ಭ್ರಷ್ಟಬೀಜಗಳನ್ನು ಬಿತ್ತುತ್ತ ವನ್ಯಸಂಪತ್ತನ್ನು ದೋಚುವವರು ಇನ್ನೊಂದು ಕಡೆ;

ಹಿಂದುಳಿದ ದೇಶಗಳ ಜಲಚರಗಳ, ವನ್ಯಜೀವಿಗಳ ರಕ್ಷಣೆಗೆ ಚಿಕ್ಕಾಸನ್ನೂ ಬಿಚ್ಚಲೊಲ್ಲದ ಶ್ರಿಮಂತ ದೇಶಗಳು ಮತ್ತೊಂದು ಕಡೆ; ಸಂಶೋಧನೆಯ ಹೆಸರಿನಲ್ಲಿ ಹಳ್ಳಿಗಾಡಿನ ಜೀವಪ್ರಭೇದಗಳ ಪೇಟೆಂಟ್ ಪಡೆಯಲು ಹವಣಿಸುವ ಬಹುರಾಷ್ಟ್ರೀಯ ಕಂಪನಿಗಳು ಮಗದೊಂದು ಕಡೆ.

ಶಕ್ತರಾಷ್ಟ್ರಗಳ ಸೂತ್ರದ ಬೊಂಬೆಯಾದ ವಿಶ್ವಸಂಸ್ಥೆ ಸಾವಿರಾರು ಕೋಟಿ ಹಣ ಸುರಿದು ವೈಭವದ ಸಭಾಂಗಣಗಳಲ್ಲಿ ಮಹಾಮೇಳ ನಡೆಸುತ್ತದೆ.  ಹಿಂದಿನ ಒಪ್ಪಂದಗಳಿಗೆ ಸಹಿ ಹಾಕಿದ 192 ದೇಶಗಳಲ್ಲಿ ಕೇವಲ 14 ದೇಶಗಳು ಮಾತ್ರ ತಂತಮ್ಮ ಪರಿಸರದ ಜೀವ ಸಂಕುಲ ರಕ್ಷಣೆಯ ವಚನವನ್ನು ಪಾಲಿಸಿವೆ.

ಈಗಿನ ಸಮ್ಮೇಳನದ ಅತಿಥೇಯ ರಾಷ್ಟ್ರವಾಗಿ ಮಹಾಮೇಳದ ಅಧ್ಯಕ್ಷಸ್ಥಾನಕ್ಕೇರಿರುವ ಭಾರತವೇ ವಚನಭ್ರಷ್ಟ ದೇಶಗಳ ಪಟ್ಟಿಯಲ್ಲಿದೆ. ಜೀವಿವೈವಿಧ್ಯದ ದೃಷ್ಟಿಯಿಂದ ಜಗತ್ತಿನ ಕೆಲವೇ ಕೆಲವು ಅತ್ಯಮೂಲ್ಯ ದೇಶಗಳ ಸಾಲಿನಲ್ಲಿ ಬರುವ ಭಾರತ ತನ್ನ ಶೇ.
17ರಷ್ಟು ಭೂಭಾಗವನ್ನು ಮನುಷ್ಯನಿಂದ ದೂರವಿಟ್ಟು ಸಂರಕ್ಷಣೆ ಮಾಡುತ್ತೇನೆಂದು ಹೇಳಿ ಸಹಿ ಮಾಡಿತ್ತಾದರೂ ಕೇವಲ ಶೇಕಡಾ 4ರಷ್ಟು ಭೂಭಾಗವನ್ನು ಮಾತ್ರ `ಸಂರಕ್ಷಿತ ಕ್ಷೇತ್ರ~ವೆಂದು ಘೋಷಿಸಿಕೊಂಡು ಅತ್ಯಂತ ಕಳಪೆ ಸ್ಥಾನದಲ್ಲಿದೆ (ಪಾಕಿಸ್ತಾನ ತನ್ನ ಶೇ. 12ರಷ್ಟನ್ನು ಸಂರಕ್ಷಣೆಗೆ ಮೀಸಲಿಟ್ಟಿದೆ).

ಈ ಮಧ್ಯೆ ವ್ಯಂಗ್ಯ, ತಮಾಷೆ, ರಂಜನೆಯ ಪ್ರದರ್ಶನವೂ ನಡೆಯುತ್ತವೆ. ಉದಾಹರಣೆಗೆ, ಜೀವಿವೈವಿಧ್ಯ ಮೇಳಕ್ಕೆ ವಿದ್ಯುತ್ ಪೂರೈಕೆಗೆ ಅಡ್ಡಿಬಂದ 40 ಮರಗಳನ್ನು ಕತ್ತರಿಸಿದ್ದಕ್ಕೆ ಹೈದರಾಬಾದ್‌ನ ವೃಕ್ಷಪ್ರೇಮಿಗಳ ಪ್ರತಿಭಟನೆ ನಡೆದಿದೆ.

ಹುಲಿ, ಜಿಂಕೆಗಳ ಆವಾಸಸ್ಥಾನಗಳನ್ನೂ ಕಲ್ಲಿದ್ದಲ ಗಣಿಗಾರಿಕೆಗೆ ಗುತ್ತಿಗೆ ನೀಡಿದ್ದನ್ನು ವಿರೋಧಿಸಿ ಪ್ರಧಾನಿ ವಿರುದ್ಧ ಗ್ರೀನ್‌ಪೀಸ್ ಯೋಧರು 500 ಅಡಿ ಉದ್ದದ ಭಿತ್ತಿ ಫಲಕವನ್ನು ಚಾರ್‌ಮಿನಾರ್ ಸ್ಮಾರಕದ ಮೇಲೆ ನಿಲ್ಲಿಸಿ ಬಂಧನಕ್ಕೊಳಗಾಗಿದ್ದಾರೆ.

ಪ್ರತಿನಿಧಿಗಳ ರಂಜನೆಗೆಂದು ಗಾಚಿಬೌಲಿ ಕ್ರೀಡಾಂಗಣದಲ್ಲಿ ಸಿನೆಕಲಾವಿದರೆಲ್ಲ ಸೇರಿ  `ಛಮ್ಮಕ್‌ಛಲ್ಲೊ~ ಶೋ ಕೊಡುತ್ತಿರುವಾಗ ವಿದೇಶೀ ತಜ್ಞರೂ ವೇದಿಕೆಯೇರಿ ಕುಣಿದಿದ್ದಾರೆ. ಸಮ್ಮೇಳನಕ್ಕೆ ನಿಜವಾದ ಕಳೆ ನಾಳೆಯಿಂದ ಕಟ್ಟಲಿದೆ. ಸರ್ಕಾರೇತರ ಸಂಘಟನೆಗಳು, ಲಾಭಕ್ಕಲ್ಲದ ಸಂಸ್ಥೆಗಳು ಇದೇ ಸಂದರ್ಭದಲ್ಲಿ ನಾಲ್ಕು ದಿನಗಳ `ಜನತಾ ಜೀವಿವೈವಿಧ್ಯ ಉತ್ಸವ~ವನ್ನು ಹಮ್ಮಿಕೊಂಡಿವೆ.

ಇದರ ಪ್ರತಿನಿಧಿಗಳು ಅಲ್ಲೇ ನಾಂಪಳ್ಳಿ ಮೈದಾನದಲ್ಲಿ ಇದೀಗ ತಾನೆ ಜಮಾಯಿಸುತ್ತಿದ್ದಾರೆ. ಬುಡಕಟ್ಟು ಜನರು, ದ್ವೀಪವಾಸಿಗಳು, ಮೀನುಗಾರರು, ವನ್ಯಪ್ರೇಮಿಗಳು, ಕುಲಾಂತರಿ ವಿರೋಧಿಗಳು, ತಳಿರಕ್ಷಣ ಸಂಘಗಳು, ರೈತ

ಸಂಸ್ಥೆಗಳು, ವೈಜ್ಞಾನಿಕ ಸಂಘಟನೆಗಳು ಸಮಾನಾಂತರ ವೇದಿಕೆಗಳಲ್ಲಿ ತಮ್ಮ ಅನಿಸಿಕೆಗಳನ್ನು ಪ್ರಕಟಿಸಲು, ಮಳಿಗೆಗಳಲ್ಲಿ ತಳಿವೈವಿಧ್ಯಗಳನ್ನು ಪ್ರದರ್ಶಿಸಲು, ಹೋರಾಟದ ದನಿ ಮೊಳಗಿಸಲು ವಿಶ್ವಸಂಸ್ಥೆ ಅನುವು ಮಾಡಿಕೊಟ್ಟಿದೆ.

ಇಂಥ ಜನಪರ ಸಂಘಟನೆಗಳ ತಕರಾರುಗಳು, ಹೋರಾಟಗಳು ಜಗತ್ತಿನ ಎಲ್ಲ ಕಡೆ ಒಂದೇ ಸ್ವರೂಪದ್ದಾಗಿವೆ. ತಂತಮ್ಮ ಸರ್ಕಾರಗಳ ನೀತಿಯ ವಿರುದ್ಧ, ಆಡಳಿತಯಂತ್ರಗಳ ಜಡತ್ವದ ವಿರುದ್ಧ, ದಮನಕಾರಿ ಗುತ್ತಿಗೆದಾರರ ವಿರುದ್ಧ, ಲಾಭಕೋರ ಕಂಪನಿಗಳ ವಿರುದ್ಧ, ಕಂಪನಿಪರ ವಿಜ್ಞಾನಿಗಳ ವಿರುದ್ಧ ದನಿಯೆತ್ತಬೇಕು.
ಇವರ ದನಿ ಈಗ ಹಿಂದೆಂದಿಗಿಂತ ಜೋರಾಗಿದೆ.

ಏಕೆಂದರೆ, ವಿಜ್ಞಾನಿಗಳು ಭೂದುಃಸ್ಥಿತಿ ಕುರಿತ ಹೊಸ ಹೊಸ ವರದಿಗಳನ್ನು ನೀಡುತ್ತಿದ್ದಾರೆ. ಯಾರ ಒಡೆತನಕ್ಕೂ ಸೇರಿಲ್ಲದ ಸಮುದ್ರಜೀವಿಗಳು, ಹವಳದಿಬ್ಬಗಳು, ಹಿಮವಾಸಿಗಳು ಈಗಿನ ಹವಾಮಾನ ಬದಲಾವಣೆಯಿಂದಾಗಿ ವಿನಾಶದಂಚಿಗೆ ಬರುತ್ತಿವೆ. ಕೃತಕ ಜೀವಿಗಳ ಆಗಮನವಾಗುತ್ತಿದೆ; ಕುಲಾಂತರಿ ತಂತ್ರಜ್ಞಾನ ಈಗೀಗ ಪ್ರಾಣಿಲೋಕಕ್ಕೂ ಬಂದಿವೆ. ಇವೆಲ್ಲಕ್ಕಿಂತ ಮುಖ್ಯವಾಗಿ ಸರ್ಕಾರಗಳು ಕಂಪನಿಗಳ ಕೈಗೊಂಬೆಗಳಾಗುತ್ತಿವೆ.

ರಿಯೊ ಒಪ್ಪಂದದ ಪ್ರಕಾರ ಭಾರತವೂ ರಾಷ್ಟ್ರೀಯ ಜೀವಿವೈವಿಧ್ಯ ಪ್ರಾಧಿಕಾರವನ್ನು ರಚಿಸಿ ಕಾನೂನುಗಳನ್ನು ರೂಪಿಸಿದೆ ನಿಜ. ವಿನಾಶದಂಚಿನಲ್ಲಿರುವ ಜೀವಿಗಳ ರಕ್ಷಣೆಗೆ ತಾನು ಬೇಲಿ ಹಾಕಿದೆನೆಂದು ಬೀಗಿದೆ ಕೂಡ. ಬೇಲಿ ಹಾಕಿ, ಗೇಟ್ ಇಟ್ಟು, ಆ ಗೇಟಿನಲ್ಲಿಯೇ ದರೋಡೆಕೋರರು ನುಗ್ಗಲು ಸಲೀಸಾಗಿ ಅನುವು ಮಾಡಿಕೊಟ್ಟಿದೆ ಎಂದು  `ಜನತಾ ಜೀವೈ ಉತ್ಸವ~ ದ ರೂವಾರಿಗಳು ಹೇಳುತ್ತಾರೆ.

ಉದಾಹರಣೆಗೆ ಬ್ರಿಟಿಷರ ಕಾಲದಿಂದಲೇ ರೂಪಿಸಲಾಗಿದ್ದ ನಮ್ಮ ಅಪರೂಪದ ತಳಿ ಭಂಡಾರಗಳಲ್ಲಿ ಸಂಗ್ರಹವಾಗಿರುವ ನಾಲ್ಕು ಲಕ್ಷ ಕೃಷಿ ತಳಿಮೂಲಗಳನ್ನು ಇದೀಗ ಬಹುರಾಷ್ಟ್ರೀಯ ಕಂಪನಿಗಳಿಗೆ ಬಿಡುಗಡೆ ಮಾಡಲಾಗಿದೆ.  ಬರನಿರೋಧಕ, ಲವಣಸಹಿಷ್ಣು, ಬಿಸಿಲುಸಹಿಷ್ಣು ಮುಂತಾದ ವಿಶಿಷ್ಟ ತಳಿಗುಣಗಳಿರುವ ಬೆಳೆಸಸ್ಯಗಳೆಲ್ಲ ಪರಭಾರೆಯಾಗಿವೆ. ಇತ್ತ ಬೇಲಿಯಾದರೂ ಭದ್ರವಿದೆಯೆ, ಅದೂ ಇಲ್ಲ.

ಕಾನೂನನ್ನು ಕಡೆಗಣಿಸಿ ಗುಳ್ಳ ಬದನೆಯನ್ನು ಮಾನ್ಸಾಂಟೊ ಕಂಪನಿ ಕುಲಾಂತರಿ ಪ್ರಯೋಗಕ್ಕೆ ಬಳಸಿಕೊಂಡಿದ್ದು ಗೊತ್ತಾದರೂ ಕ್ರಮ ಕೈಗೊಳ್ಳಲು ಸರ್ಕಾರ ತಾನಾಗಿ ಮುಂದೆ ಬರಲಿಲ್ಲ. ರಾಜ್ಯಮಟ್ಟದಲ್ಲಿ ಜೀವಿವೈವಿಧ್ಯ ಮಂಡಲಿಗಳು ನೆಪಮಾತ್ರಕ್ಕೆ ಅಸ್ತಿತ್ವಕ್ಕೆ ಬಂದಿವೆ.

ಪಂಚಾಯತಿ ಮಟ್ಟದಲ್ಲಿ ಜೀವಿವೈವಿಧ್ಯ ರಕ್ಷಣಾ ಸಮಿತಿಗಳನ್ನು ರಚಿಸಿ ತರಬೇತಿ ಕೊಡಬೇಕಿತ್ತು. ಜಾಗತಿಕಮಟ್ಟದಲ್ಲಿ ಯಾರೆಷ್ಟೇ ಶಂಖ ಹೊಡೆದುಕೊಂಡರೂ ಅಂತಿವಾಗಿ ಪಂಚಾಯತಿ- ಗ್ರಾಮಸಭೆಯ ಮಟ್ಟದಲ್ಲಿ ತಾನೆ, ರಕ್ಷಣೆ ನಡೆಯಬೇಕು? ಇಂದು ಯಾರು ಬೇಕಾದರೂ ನಾಡಿನ ಯಾವುದೇ ಕೆರೆಗೆ, ಕಾಡಿಗೆ, ಕಣಿವೆಗೆ ನುಗ್ಗಿ ತಳಿಚೌರ್ಯ ಮಾಡಬಹುದು.

ಗ್ರಾಮಮಟ್ಟದಲ್ಲಿ ಪ್ರಜ್ಞೆ ಮೂಡಿಸುವ, ತಮ್ಮೂರಿನ ತಳಿವೈವಿಧ್ಯಗಳ ಬಗ್ಗೆ ಶಾಲಾಮಟ್ಟದಲ್ಲಿ ಪಾಠಗಳನ್ನು ತೂರಿಸುವ ಕೆಲಸ ಈಗಿನ್ನೂ ಆರಂಭವಾಗಬೇಕಿದೆ. ಅಂಥ ಪಾಠಗಳನ್ನು ಶಾಸಕರೂ ಸಂಸದರೂ ಓದುವಂತೆ ಮಾಡಬೇಕಿದೆ. 
 
`ಬಹಳಷ್ಟು ಧನಿಕ ದೇಶಗಳು ಶೃಂಗಸಭೆಗೆ ಖಾಲಿ ಜೇಬಿನೊಂದಿಗೆ ಬಂದಿದ್ದು ದುರದೃಷ್ಟಕರ~ ಎಂದು ಎರಡು ವರ್ಷಗಳ ಹಿಂದೆ ನಾಗೊಯಾ ಸಮ್ಮೇಳನದಲ್ಲಿ ವಿಶ್ವ ವನ್ಯನಿಧಿಯ ವಕ್ತಾರರು ಟೀಕಿಸಿದ್ದರು.

ಈ ಬಾರಿಯಂತೂ ಖಾಲಿ ಜೇಬಿನವರೇ  `ಸಿಬಿಡಿ~ಯ ಅತಿಥೇಯರಾಗಿದ್ದಾರೆ. ಹಿಂದಿನ ಹತ್ತು ಸಮ್ಮೇಳನಗಳಲ್ಲಿ ಸಾಧಿಸಲಾಗದ ಹೊಸದೇನನ್ನಾದರೂ ಈ ಮಹಾಸಭೆ ಸಾಧಿಸೀತೆ?ಅಥವಾ ಹತ್ತರ ಜತೆ ಹನ್ನೊಂದು ಎಂಬಂತಾದೀತೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT