ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ಯತೀತತೆಯ ಪರ ವಿರುದ್ಧ ಧ್ರುವೀಕರಣ ಸಾಧ್ಯತೆ

Last Updated 5 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಮಹಾತ್ಮ ಗಾಂಧೀಜಿಯವರನ್ನು ಹಿಂದೂ ಮೂಲಭೂತವಾದಿಯೊಬ್ಬ ಗುಂಡಿಟ್ಟು ಕೊಂದ ದಿನ ಜನವರಿ 30. ಭಾರತವು ವಿಭಜನೆಗೊಂಡು ಪಾಕಿಸ್ತಾನ ದೇಶ ಹುಟ್ಟು ಪಡೆದುದರಿಂದ ಸಿಟ್ಟುಗೊಂಡ ಆತ ಆ ದುಷ್ಕೃತ್ಯ ಎಸಗಿದ್ದ.

ಗಾಂಧೀಜಿಯವರನ್ನು ಕೊಂದ ಗೋಪಾಲ ಗೋಡ್ಸೆ ತನ್ನ ಬದುಕಿನ ಕೊನೆಯವರೆಗೂ ತಾನು ಮಾಡಿದ ಕೃತ್ಯವನ್ನು ಇನ್ನಿಲ್ಲದಂತೆ ಸಮರ್ಥಿಸಿಕೊಳ್ಳುತ್ತಲೇ ಇದ್ದ. ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗಲೆಲ್ಲಾ ಆತ `ಗಾಂಧೀಜಿ ಒಬ್ಬ ಕಪಟಿ. ಮುಸಲ್ಮಾನರಿಂದ ಹಿಂದೂಗಳ ನರಮೇಧ ನಡೆದಾಗ ಗಾಂಧಿ ಸಂತಸ ಪಟ್ಟಿದ್ದರು. ಹಿಂದೂಗಳ ಕಗ್ಗೊಲೆಗಳು ಹೆಚ್ಚಾದಷ್ಟೂ ಗಾಂಧಿ ಜಾತ್ಯತೀತತೆಯ ಬಗ್ಗೆ ಇನ್ನೂ ಧ್ವನಿ ಎತ್ತರಿಸಿ ಮಾತನಾಡುತ್ತಿದ್ದರು' ಎಂದೆಲ್ಲಾ ಕಿಡಿ ಕಾರುತ್ತಿದ್ದ.

ಪ್ರಜಾಸತ್ತೆಯ ಮೌಲ್ಯಗಳು, ಬಹುಮತದ ಮಹತ್ವವನ್ನು ಎತ್ತಿ ಹಿಡಿಯುವ ಹಾದಿಯಲ್ಲಿ ಈ ರೀತಿ ಭಾರತ ಬಹಳಷ್ಟು ದಂಡ ತೆತ್ತಿದೆ. ಒಂದು ಧರ್ಮದ ಅಥವಾ ಸಮುದಾಯದ ಪರವಾಗಿ ಸಮರ್ಥನೆಗಳನ್ನು ನೀಡುತ್ತಿರುವ ಗುಂಪೊಂದು ಒಂದೊಂದೇ ಹೆಜ್ಜೆ ಇಡುತ್ತಿದ್ದು, ಜಾತ್ಯತೀತ ಮೌಲ್ಯಗಳನ್ನು ಮೂಲೆಗೊತ್ತುವ ವಿಚಾರಗಳನ್ನು ಹರಡುತ್ತಿದೆ. ಜತೆಗೆ ಧರ್ಮದ ಹೆಸರಿನಲ್ಲಿ ಸಾತ್ವಿಕತೆಯ ಮುಖವಾಡ ಧರಿಸಿರುವ ಇಂತಹ ಚಿಂತನೆ ಇರುವ ಮಂದಿ ರಾಷ್ಟ್ರ ಅಥವಾ ರಾಜ್ಯಗಳ ಮುಖ್ಯವಾಹಿನಿ ರಾಜಕಾರಣದಲ್ಲಿ ಆಳವಾಗಿ ಬೇರೂರಿಬಿಟ್ಟಿದ್ದಾರೆ.

ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಕೆಲವು ದಿನಗಳ ಹಿಂದೆ ಮಾತನಾಡುತ್ತಾ `ನ್ಯಾಶನಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎನ್‌ಐಎ) ನಡೆಸಿರುವ ತನಿಖೆಯ ಸಂದರ್ಭದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಘಟನೆಗಳು ದೇಶದ ಕೆಲವು ಕಡೆ ಭಯೋತ್ಪಾದಕ ಚಟುವಟಿಕೆಗಾಗಿಯೇ ತರಬೇತಿ ಶಿಬಿರಗಳನ್ನು ನಡೆಸಿದ್ದು ಗೊತ್ತಾಗಿದೆ.

ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವುದೇ ಈ ಶಿಬಿರಗಳ ಉದ್ದೇಶವಾಗಿದೆ. ಸಂಜೋತಾ ಎಕ್ಸ್‌ಪ್ರೆಸ್‌ನಲ್ಲಿ, ಮೆಕ್ಕಾ ಮಸೀದಿಯಲ್ಲಿ ಬಾಂಬು ಇರಿಸಿದ್ದ ಘಟನೆಗಳು ಮತ್ತು ಮಾಲೆಗಾಂವ್ ಸ್ಫೋಟ ಪ್ರಕರಣಗಳು ನಮ್ಮನ್ನು ಗಂಭೀರವಾಗಿ ಯೋಚಿಸುವಂತೆ ಮಾಡಿವೆ' ಎಂದಿದ್ದರು.

ಈ ಹೇಳಿಕೆ ಒಂದಿಷ್ಟು ಪ್ರಚೋದನಾಕಾರಿಯೇ ಹೌದು. ಆದರೆ ಅವರು ಜೈಪುರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ರೀತಿ ಮಾತನಾಡಿರುವುದು ಹಲವು ತೆರನಾದ ಚರ್ಚೆಗೆ ಗ್ರಾಸ ಒದಗಿಸಿಬಿಟ್ಟಿತು. ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಘಟನೆಗಳ ಮುಖಕ್ಕೆ ಮಸಿ ಬಳಿಯುವ ಉದ್ದೇಶದಿಂದಲೇ ಹೇಳಿದ್ದಾರೆನ್ನುವುದಂತು ನಿಜ. ಜಾತ್ಯತೀತ ಮೌಲ್ಯಗಳನ್ನು ನಗಣ್ಯವಾಗಿ ಕಾಣುವ ಆ ಎರಡು ಸಂಘಟನೆಗಳ ಬಗ್ಗೆ ಶಿಂಧೆಯವರ ಅಭಿಪ್ರಾಯದ ಬಗ್ಗೆ ನನ್ನಲ್ಲಿ ಭಿನ್ನಾಭಿಪ್ರಾಯವೇನೂ ಇಲ್ಲ.

ಆದರೆ ಶಿಂಧೆಯವರು ತಮ್ಮ ಈ ಗಂಭೀರ ಆರೋಪ ಅಥವಾ ಹೇಳಿಕೆಗೆ ಪೂರಕವಾಗಿ ದಾಖಲೆಗಳನ್ನು ಒದಗಿಸಬೇಕಿತ್ತು. ಅದನ್ನು ಅವರು ಮಾಡಿಲ್ಲ. ಇನ್ನೂ ಕಾಲ ಮಿಂಚಿಲ್ಲ.  ಸದ್ಯದಲ್ಲೇ ನಡೆಯಲಿರುವ ಸಂಸತ್ ಅಧಿವೇಶನಲ್ಲಿ ಈ ಕುರಿತು ಶಿಂಧೆಯವರು ಶ್ವೇತಪತ್ರ ಹೊರಡಿಸುವುದು ಸೂಕ್ತ. ಪ್ರಸಕ್ತ ಇಸ್ಲಾಮ್ ಭಯೋತ್ಪಾದಕತೆಯು ಆಡಳಿತಗಾರರಿಗೆ, ಜನಸಾಮಾನ್ಯರಿಗೆ ಅದೆಷ್ಟು ಸಿಂಹಸ್ವಪ್ನವಾಗಿ ಕಾಡುತ್ತಿದೆಯೋ, ಹಿಂದೂ ಭಯೋತ್ಪಾದಕತೆ ಕೂಡಾ ಅದಕ್ಕಿಂತ ಭೀಕರವಾಗಿ ಜನಸಾಮಾನ್ಯರನ್ನು ಕಾಡುವ ಸಾಧ್ಯತೆ ಇದೆ. ಏಕೆಂದರೆ ಭಯೋತ್ಪಾದಕರು ಬಹುಸಂಖ್ಯಾತರ ನಡುವೆ ಸೇರಿಕೊಳ್ಳುವುದಿದೆಯಲ್ಲಾ, ಅದು ಅತ್ಯಂತ ಅಪಾಯಕಾರಿ ಕೂಡಾ.

ಅಲ್ಪಸಂಖ್ಯಾತರಲ್ಲಿರುವ ಭಯೋತ್ಪಾದಕ ಚಟುವಟಿಕೆಗಳನ್ನು ದಮನ ಮಾಡುವುದು ತೀರಾ ಪ್ರಯಾಸಕರವೇನಲ್ಲ. ಆದರೆ ಬಹುಸಂಖ್ಯಾತರಲ್ಲಿ ಅದು ಸೇರಿಹೋದಾಗ ಅದು ಫ್ಯಾಸಿಸಮ್‌ನ ಸ್ವರೂಪ ಪಡೆದುಕೊಂಡು ಬಿಡುತ್ತದೆ ಎನ್ನುವುದು ಗೊತ್ತಿರುವಂತದ್ದು ತಾನೆ. ಅದೇನೆ ಇರಲಿ, ಶಿಂಧೆಯವರ ಹೇಳಿಕೆಯ ಬಗ್ಗೆ ಬಿಜೆಪಿ ಕಿಡಿಕಿಡಿಯಾಗಿದ್ದು ಸಹಜ. ಪ್ರಧಾನಿಯವರೇ ಕ್ಷಮಾಪಣೆ ಕೇಳಬೇಕೆಂದೂ ಬಿಜೆಪಿ ಒತ್ತಾಯಿಸಿತ್ತು. ದೇಶದಾದ್ಯಂತ ಬಂದ್‌ಗೆ ಕರೆ ಕೊಡುವುದಾಗಿ ಎಚ್ಚರಿಕೆಯನ್ನೂ ನೀಡಿತ್ತು.

ಪಕ್ಷದ ಮಹಾಕಾರ್ಯದರ್ಶಿ ಸ್ಥಾನದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಏರಿರುವ ರಾಹುಲ್ ಗಾಂಧಿಯವರು ಮುಂಬರುವ ಸಾರ್ವತ್ರಿಕ ಚುನಾವಣೆಯ ನಂತರ ಪ್ರಧಾನಿ ಹುದ್ದೆಗೆ ಏರಲಿರುವವರು ಎಂದು ಹೇಳಿಲ್ಲ, ನಿಜ. ರಾಹುಲ್ ಕೂಡಾ ತಾವು ಪಕ್ಷವನ್ನು ಜನರ ನಡುವೆ ಇನ್ನಷ್ಟು ಗಟ್ಟಿಗೊಳಿಸಲು ಯತ್ನಿಸುವುದಾಗಿ ಹೇಳಿದ್ದಾರೆ. ಈಗ ಪಕ್ಷದ ಅಧ್ಯಕ್ಷೆಯೂ ಆಗಿರುವ ತಾಯಿ ಸೋನಿಯಾ ಗಾಂಧಿಯವರ ಜತೆಗೂಡಿ ರಾಹುಲ್ ಪಕ್ಷ ಕಟ್ಟುವುದರಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ವಿಶೇಷ ಅರ್ಥವೇನಿಲ್ಲವಂತೆ. ಪಕ್ಷ ವಂಶಪಾರಂಪರ್ಯವಾದ ಹಿಡಿತದಲ್ಲಿ ಇನ್ನೂ ಬಿಗಿಯಾಗಿ ಸಿಲುಕಿಕೊಂಡಂತಾಯಿತಷ್ಟೇ. ಅದೇನೇ ಇದ್ದರೂ, ಸೋನಿಯಾ ಗಾಂಧಿಯವರ ಆದೇಶವನ್ನು ಎಲ್ಲರೂ ತಲೆಬಾಗಿ ಪಾಲಿಸುವಂತಹ ವ್ಯವಸ್ಥೆ ಇನ್ನಷ್ಟೂ ಗಟ್ಟಿಗೊಂಡಂತಾಯಿತು. ಸರ್ಕಾರದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರೂ ನಾಮಕಾವಾಸ್ತೆ ತಾನೆ.

ಜೈಪುರದಲ್ಲಿ ರಾಹುಲ್‌ಗಾಂಧಿಯವರು ಉತ್ತಮವಾದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಭಾವನಾತ್ಮಕವಾದ ಭಾಷಣ ಮಾಡಿ ಎಲ್ಲರ ಮನಗೆದ್ದಿದ್ದಾರೆ ನಿಜ. ಆದರೆ ಆ ಭಾಷಣ ಅವರ ಲೇಖನಿಯಿಂದಲೇ ಬಂದಿರಬಹುದೆನಿಸುತ್ತಾ. `ಆಡಳಿತ ವ್ಯವಸ್ಥೆ ಜಡ್ಡುಗಟ್ಟಿದಂತಿದೆ. ಅದರಲ್ಲಿ ವಿದ್ಯುತ್ ಸಂಚಲನವಾಗಬೇಕಿದೆ. ಲಂಚಗುಳಿತನದ ವಿರುದ್ಧ ನಾವೆಲ್ಲರೂ ಧ್ವನಿ ಎತ್ತಬೇಕಿದೆ, ಹೋರಾಡಬೇಕಿದೆ...' ಎಂಬುದಾಗಿ ರಾಹುಲ್ ವೀರಾವೇಶದಿಂದ ಮಾತನಾಡಿದ್ದಾರೆ.

ರಾಹುಲ್ ಅವರ ಈ ಅನಿಸಿಕೆಗಳನ್ನು ಅದೆಷ್ಟು ಗಂಭೀರವಾಗಿ ನಾವು ಪರಿಗಣಿಸಬೇಕೆನ್ನುವುದೇ ಈಗಿನ ಪ್ರಶ್ನೆ. ರಾಹುಲ್ ಅವರ ಸೋದರಿಯ ಗಂಡ ರಾಬರ್ಟ್ ವಾದ್ರಾ ಹರಿಯಾಣದಲ್ಲಿ ಅಪಾರ ಪ್ರಮಾಣದ ಭೂಮಿಯನ್ನು ಪಡೆದಿರುವುದು ರಾಹುಲ್‌ಗೆ ಗೊತ್ತಿಲ್ಲವೇ. ಅಲ್ಲಿ ನಡೆದಿರಬಹುದಾದ ಅವ್ಯವಹಾರಗಳ ಬಗ್ಗೆ ರಾಹುಲ್‌ಗೆ ಗೊತ್ತಿಲ್ಲವೇ ?

ಭಾರತವನ್ನು ನಿತ್ಯವೂ ಕಾಡುತ್ತಿರುವ ಜ್ವಲಂತ ಸಮಸ್ಯೆಗಳಿವೆ. ಇಂತಹ ಸಮಸ್ಯೆಗಳ ಬಗ್ಗೆ ರಾಹುಲ್ ಏನು ಹೇಳುತ್ತಾರೆ ಎಂಬ ಬಗ್ಗೆ ಭಾರತದ ಒಳಗಿರುವವರು ಮತ್ತು ವಿದೇಶಿಯರು ಹೆಚ್ಚು ಕುತೂಹಲದಿಂದಿದ್ದಾರೆ. ಪರಿಸ್ಥಿತಿ ಈ ರೀತಿ ಇರುವಾಗ ರಾಹುಲ್ ಅವರ `ಒಳ್ಳೆಯ ಭಾಷಣ' ಯಾರಿಗೆ ಬೇಕಿದೆ ಹೇಳಿ. ಅಂತರರಾಷ್ಟ್ರೀಯ ಆಗುಹೋಗುಗಳ ಬಗ್ಗೆ ರಾಹುಲ್ ಎಲ್ಲಿಯೂ ಬಾಯಿ ಬಿಚ್ಚಿಲ್ಲ. ಪ್ರಸಕ್ತ ರಾಹುಲ್ ಅಂತಹ ವಿಷಯಗಳ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದೇ ಎಲ್ಲರೂ ಹೇಳಬಹುದು. ಆದರೆ ಮುಂದಿನ ದಿನಗಳಲ್ಲಿ ಭಾರತದ ಪ್ರಧಾನಿ ಪಟ್ಟಕ್ಕೆ ಏರಲಿರುವ ವ್ಯಕ್ತಿ ಇವರು ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿರುವುದರಿಂದ ಅಂತರರಾಷ್ಟ್ರೀಯ ಸಂಗತಿಗಳ ಬಗ್ಗೆಯೂ ಇವರ ತಿಳಿವಳಿಕೆ ಎಷ್ಟರ ಮಟ್ಟಿಗಿದೆ ಎಂದು ತಿಳಿದುಕೊಳ್ಳುವ ಕುತೂಹಲ ಜನಸಾಮಾನ್ಯರಲ್ಲಿ ಇದ್ದೇ ಇರುತ್ತದಲ್ಲ.

ಆದರೆ ಮುಂದಿನ ಚುನಾವಣೆಯ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಪ್ರಧಾನ ಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿರಲು ಸಾಧ್ಯವಿಲ್ಲ ಎಂಬ ಅನಿಸಿಕೆಯೊಂದು ನನ್ನ ಮನಸ್ಸಿನಾಳದಲ್ಲಿ ಇದ್ದೇ ಇದೆ. ಮೊನ್ನೆ ರಾಹುಲ್ ಅವರನ್ನು ಕಾಂಗ್ರೆಸ್‌ನಲ್ಲಿ ಉನ್ನತ ಸ್ಥಾನಕ್ಕೆ ಏರಿಸಿದಾಗ ಸೋನಿಯಾ ಗಾಂಧಿಯವರು ಅಧಿಕಾರ ಎನ್ನುವುದು ವಿಷವಿದ್ದಂತೆ ಎನ್ನುತ್ತಾ ರಾಹುಲ್ ಅವರನ್ನು ಎದೆಗಪ್ಪಿಕೊಂಡು ಅತ್ತಿದ್ದರಲ್ಲಾ, ಇದು ಏನು ಹೇಳುತ್ತೆ ನೋಡಿ. ಬಹುಶಃ ಚುನಾವಣೆಯ ನಂತರ ಕಾಂಗ್ರೆಸ್ ಬಾಗಿಲಿಗೆ ಅಧಿಕಾರ ಬಂದಿತೆಂದರೆ, ಸೋನಿಯಾ ಅವರು ಮನಮೋಹನ್ ಸಿಂಗ್ ಅವರನ್ನೇ ಮುಂದುವರಿಸಿದರೆ ಅಚ್ಚರಿಯಂತೂ ಆಗಲಾರದು. ಬಹುಶಃ ಕಾಂಗ್ರೆಸ್ ನೇತೃತ್ವದ ಒಕ್ಕೂಟಕ್ಕೆ ಬಹುಮತ ಇರುವವರೆಗೆ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿಯೇ ಇರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಬಹುಶಃ ಸಿಂಗ್ ಬದುಕಿರುವವರೆಗೂ. ಆ ನಂತರ ರಾಹುಲ್ ಪಟ್ಟಕ್ಕೆ ಏರಲೂ ಬಹುದು.

ಅದಿಲ್ಲವೆಂದರೆ, ಇನ್ನು ಯಾರಾದರೂ ಆ ಗಾದಿಯಲ್ಲಿ ಕುಳಿತುಕೊಳ್ಳಲೂಬಹುದು. ಈಗಾಗಲೇ ಹಣಕಾಸು ಸಚಿವ ಪಿ.ಚಿದಂಬರಂ ಅವರಿಗೆ ಮಾಸ್ತರರೊಬ್ಬರು ಹಿಂದಿ ಪಾಠ ಹೇಳಿಕೊಡುತ್ತಿದ್ದಾರೆ. ಸಂಸದೀಯ ವ್ಯವಹಾರಗಳ ಸಚಿವ ಕಮಲಾನಾಥ್ ಅವರಿಗೂ ಸೋನಿಯಾ ಗಾಂಧಿಯವರು ಪ್ರಾಮುಖ್ಯತೆ ನೀಡುತ್ತಿದ್ದಾರೆ. ದಾವೋಸ್‌ಗೆ ತೆರಳಿರುವ ನಿಯೋಗದ ನೇತೃತ್ವವನ್ನು ಕಮಲಾನಾಥ್ ಅವರಿಗೇ ನೀಡಲಾಗಿದೆ. ಏಕೆಂದರೆ ಹಿಂದೆಲ್ಲಾ ವಾಣಿಜ್ಯ ಸಚಿವರೇ ನಿಯೋಗದ ನೇತೃತ್ವ ವಹಿಸುತ್ತಿದ್ದರಲ್ಲ. ಆದರೆ ಈ ಸಲ ವಾಣಿಜ್ಯ ಸಚಿವ ಆನಂದಶರ್ಮ ಅವರು ಈ ನಿಯೋಗದಲ್ಲಿ ಓರ್ವ ಸದಸ್ಯ ಅಷ್ಟೇ.

ನಾನು ಗಮನಿಸಿರುವಂತೆ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಜಾತ್ಯತೀತ ಧೋರಣೆಯ ಪಕ್ಷಗಳು ಮತ್ತು ಜಾತ್ಯತೀತ ಮನಸ್ಥಿತಿ ಇಲ್ಲದ ಪಕ್ಷಗಳ ನಡುವಣ ಮುಖಾಮುಖಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಪರಿಸ್ಥಿತಿ ಈ ರೀತಿ ಇದ್ದರೂ ಬಿಜೆಪಿ ಮಾತ್ರ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂಬುದಾಗಿ ಪ್ರಕಟಿಸುವ ಧೈರ್ಯ ತೋರುತ್ತಲೇ ಇಲ್ಲ. ಬಹುಶಃ ಮೋದಿಯವರು ಈ ರೀತಿಯಾಗಿ ಮುಂಚೂಣಿಗೆ ಬಂದರೆ ದೇಶದ ರಾಜಕಾರಣದಲ್ಲಿ ಸ್ಪಷ್ಟ ಧ್ರುವೀಕರಣ ಉಂಟಾಗುವ ಸಾಧ್ಯತೆಗಳ ಬಗ್ಗೆ ಬಿಜೆಪಿಗೆ ಗೊತ್ತಿರುವಂತಿದೆ. ಅದಷ್ಟೇ ಅಲ್ಲ ಮೋದಿಯವರನ್ನು ಮುಂದಿಟ್ಟುಕೊಂಡು ಹೊರಟರೆ ಎನ್‌ಡಿಎ ಕೂಟದಲ್ಲಿ ಮಿತ್ರರನ್ನು ಜತೆಗಿಟ್ಟುಕೊಳ್ಳುವುದು ಅಥವಾ ಹೊಂದಿಸಿಕೊಳ್ಳುವುದು ಬಹಳ ಕಷ್ಟವಾಗಬಹುದು ಎಂಬ ಚಿಂತನೆಯೂ ಬಿಜೆಪಿಗೆ ಇದ್ದಂತಿದೆ.

ಅಟಲ್ ಬಿಹಾರಿ ವಾಜಪೇಯಿ ಅವರು ಮೊದಲ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಿದಾಗ ಅದು ಕೇವಲ 13 ದಿನಗಳಷ್ಟೇ ಕಾಲ ಆಸ್ತಿತ್ವದಲ್ಲಿತ್ತು ಎಂಬುದನ್ನು ಬಿಜೆಪಿ ಮರೆತಿಲ್ಲ. ಏಕೆಂದರೆ ಅಂದು ಬಿಜೆಪಿಯ ಜತೆಗೆ ನಿಲ್ಲಲು ಬಹಳಷ್ಟು ಪಕ್ಷಗಳು ಹಿಂದೇಟು ಹೊಡೆದಿದ್ದವು. ಈ ರೀತಿ ಇತಿಹಾಸದ ಪಾಠಗಳ ಜತೆಗೇ ಬಿಜೆಪಿ ಇದೀಗ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT