ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್ ನೆವದಲ್ಲಿ ಹವಾಮಾನ ಬದಲಾವಣೆ ಜಿಜ್ಞಾಸೆ

Last Updated 4 ಜೂನ್ 2017, 19:30 IST
ಅಕ್ಷರ ಗಾತ್ರ

ಅಪಾಯಕಾರಿ ಸಂದರ್ಭವೊಂದನ್ನು ವಿಶ್ವ ಎದುರಿಸುತ್ತಿದೆ. ಆದರೆ ಭಾರತದ ಮಾಧ್ಯಮಗಳು ಇದರ ಬಗ್ಗೆ ಗಮನ ನೀಡುತ್ತಿಲ್ಲ. ಜಾಗತಿಕ ತಾಪಮಾನ ಏರಿಕೆಯನ್ನು ತಡೆಯುವ ಕಾರ್ಯದಲ್ಲಿ ಸಹಕಾರ ನೀಡುವುದಾಗಿ ಮಾತು ಕೊಟ್ಟಿದ್ದ ಅಮೆರಿಕ, ಈಗ ಆ ಮಾತಿನಿಂದ ಹಿಂದೆ ಸರಿದಿದೆ. ಕೈಗಾರಿಕಾ ಘಟಕಗಳು ಹಾಗೂ ವಾಹನಗಳು ಹೊರಸೂಸುವ ಇಂಗಾಲದ ಡೈ ಆಕ್ಸೈಡ್‌ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಹಲವು ರಾಷ್ಟ್ರಗಳು 2015ರಲ್ಲಿ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಮಾಡಿದ್ದವು. ಒಪ್ಪಂದದ ಅನ್ವಯ, ಈ ದೇಶಗಳು ಕಲ್ಲಿದ್ದಲು, ಪೆಟ್ರೋಲ್ ಹಾಗೂ ಡೀಸೆಲ್ ಬಳಕೆಯನ್ನು ಸ್ವಯಂಪ್ರೇರಿತವಾಗಿ ಕಡಿಮೆ ಮಾಡಿ, ಸೌರಶಕ್ತಿ ಹಾಗೂ ಪವನ ಶಕ್ತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವ ಮೂಲಕ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ತಗ್ಗಿಸುವ ಕೆಲಸ ಮಾಡಬೇಕು. ಭಾರತ ಈಗಾಗಲೇ ಸೌರಶಕ್ತಿಯ ಅತಿದೊಡ್ಡ ಮಾರುಕಟ್ಟೆಯಾಗಿದೆ. ಹಾಗಾಗಿ, ಸೌರಶಕ್ತಿ ವೆಚ್ಚ ಇಲ್ಲಿ ತೀರಾ ಕಡಿಮೆಯಾಗಿದೆ.

ಪ್ಯಾರಿಸ್ ಒಪ್ಪಂದಕ್ಕೆ ಸಹಿ ಮಾಡಿದ ಎಲ್ಲ ದೇಶಗಳೂ ತಮ್ಮ ಮಾತಿಗೆ ತಕ್ಕಂತೆ ನಡೆದುಕೊಂಡರೆ, ಜಾಗತಿಕ ತಾಪಮಾನದ ಹೆಚ್ಚಳವು ಕೈಗಾರಿಕೀಕರಣಕ್ಕಿಂತ ಮೊದಲು ಇದ್ದ ತಾಪಮಾನಕ್ಕಿಂತ ಎರಡು ಡಿಗ್ರಿ ಸೆಲ್ಸಿಯಸ್‌ಗಳಿಗೆ ಸೀಮಿತವಾಗಿರಲಿದೆ. ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯಲ್ಲಿ ಚೀನಾ ಎಲ್ಲರಿಗಿಂತ ಮುಂದಿದೆ, ಇಂಗಾಲದ ಡೈ ಆಕ್ಸೈಡ್‌ ಹೊರಸೂಸುವಿಕೆಯಲ್ಲಿ ಚೀನಾದ ಕೊಡುಗೆ ಶೇಕಡ 30ರಷ್ಟು. ಚೀನಾದ ನಂತರದ ಸ್ಥಾನಗಳಲ್ಲಿ ಅಮೆರಿಕ (ಶೇ 15), 28 ದೇಶಗಳ ಐರೋಪ್ಯ ವಲಯ (ಶೇ 9) ಇವೆ. ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯಲ್ಲಿ ಭಾರತದ ಕೊಡುಗೆ ಶೇಕಡ 7ರಷ್ಟು. ಆದರೆ ವಿಶ್ವದ ಅಂದಾಜು ಶೇಕಡ 15ರಷ್ಟು ಜನ ಇರುವುದು ಭಾರತದಲ್ಲಿ ಎಂಬುದನ್ನು ಮರೆಯಬಾರದು. ಹಾಗಾಗಿ, ತಲಾವಾರು ಲೆಕ್ಕಾಚಾರದಲ್ಲಿ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯಲ್ಲಿ ಭಾರತದ ಪಾಲು ಅಮೆರಿಕ ಅಥವಾ ಚೀನಾದಷ್ಟಿಲ್ಲ.

ಆದರೆ, ಭಾರತದಲ್ಲಿ ಕೈಗಾರಿಕೀಕರಣದ ಪ್ರಕ್ರಿಯೆ ವೇಗವಾಗಿ ಆಗುತ್ತಿದೆ. ಇಲ್ಲಿ ವಿದ್ಯುತ್, ಪೆಟ್ರೋಲ್ ಮತ್ತು ಡೀಸೆಲ್ ಬಳಸುವ ಮಧ್ಯಮ ವರ್ಗದ ಜನರ ಸಂಖ್ಯೆ ಹೆಚ್ಚುತ್ತಿದೆ. ಹಾಗಾಗಿ, ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣೀಭೂತರು ಬೇರೆ ದೇಶಗಳ ಜನ ಎಂದು ನಾವು ಸುಮ್ಮನಿರುವಂತಿಲ್ಲ.

ಈ ವಿಚಾರದಲ್ಲಿ ದೂರದೃಷ್ಟಿ ಹಾಗೂ ಎದೆಗಾರಿಕೆ ಹೊಂದಿರುವುದಕ್ಕೆ, ನಾಯಕತ್ವದ ಗುಣ ಪ್ರದರ್ಶಿಸಿರುವುದಕ್ಕೆ ನಾವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಬೇಕು. ‘ಪ್ಯಾರಿಸ್ ಒಪ್ಪಂದ ಇರಲಿ, ಇಲ್ಲದಿರಲಿ. ಮುಂದಿನ ಪೀಳಿಗೆಯನ್ನು ಗಮನದಲ್ಲಿ ಇರಿಸಿಕೊಂಡು ನಾವು ತಾಪಮಾನ ಹೆಚ್ಚಳ ತಡೆಯುವ ಬದ್ಧತೆ ಹೊಂದಿದ್ದೇವೆ’ ಎಂದು ಮೋದಿ ಅವರು ಕಳೆದ ವಾರ ಹೇಳಿದ್ದಾರೆ. ದೇಶದಲ್ಲಿ ಮಾರಾಟವಾಗುವ ಎಲ್ಲ ಕಾರುಗಳು 2030ರೊಳಗೆ ವಿದ್ಯುತ್ ಚಾಲಿತ ಆಗಿರಬೇಕು ಎಂದು ಕೇಂದ್ರ ಸರ್ಕಾರ ಈಗಾಗಲೇ ಹೇಳಿದೆ. ಅದು ಹೇಗೆ ಸಾಧ್ಯವಾಗುತ್ತದೆ ಎಂಬುದರ ವಿವರಗಳು ಇನ್ನೂ ಬಹಿರಂಗವಾಗಿಲ್ಲ. ಆದರೆ, ಮೋದಿ ಅವರು ಈ ಕಾರ್ಯದಲ್ಲಿ ಯಶಸ್ಸು ಸಾಧಿಸಿದರೆ,
ಅದು ಅವರನ್ನು ನಿಜವಾಗಿ ವಿಶ್ವ ನಾಯಕನನ್ನಾಗಿ ಮಾಡುತ್ತದೆ.

ಹವಾಮಾನ ಬದಲಾವಣೆಗೆ ಸಂಬಂಧಿಸಿದ ಕಳವಳಕ್ಕಿಂತಲೂ ತಮಗೆ ಅಮೆರಿಕನ್ನರ ಉದ್ಯೋಗವೇ ಹೆಚ್ಚು ಪ್ರಮುಖ ಎಂಬ ಮಾತನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಿದ್ದಾರೆ. ಪ್ಯಾರಿಸ್ ಒಪ್ಪಂದಕ್ಕೆ ಅಮೆರಿಕ ಬದ್ಧವಾಗಿ ಉಳಿದರೆ, ಮುಂದಿನ ಏಳು ವರ್ಷಗಳಲ್ಲಿ 27 ಲಕ್ಷ ಉದ್ಯೋಗಗಳು ನಷ್ಟವಾಗಲಿವೆ ಎಂದು ಅವರು ಹೇಳಿದ್ದಾರೆ. ಈ ಮಾತಿನ ಬಗ್ಗೆ ಒಮ್ಮತ ಇಲ್ಲ. ವಾಸ್ತವದಲ್ಲಿ ಕಳೆದ ದಶಕದಲ್ಲಿ ಅಮೆರಿಕದಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸಿದ ಉದ್ಯಮ ಕ್ಷೇತ್ರಗಳ ಪಟ್ಟಿಯಲ್ಲಿ ವಿದ್ಯುತ್ ಚಾಲಿತ ಕಾರು ತಯಾರಿಕೆ ಹಾಗೂ ಸೌರವಿದ್ಯುತ್ ಉತ್ಪಾದನೆ ಸೇರಿವೆ. ಅಮೆರಿಕ ಈಗ ತೆಗೆದುಕೊಂಡಿರುವ ತೀರ್ಮಾನ ತಪ್ಪು ಎಂದು ಆ ದೇಶದ ಹಲವು ಬೃಹತ್ ಕಂಪೆನಿಗಳು ಮತ್ತು ಅಲ್ಲಿನ ಉದ್ಯಮಿಗಳು ಹೇಳಿದ್ದಾರೆ. ಇದು ಟ್ರಂಪ್ ಅಲ್ಲಿ ಎಷ್ಟರಮಟ್ಟಿಗೆ ಏಕಾಂಗಿಯಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಹವಾಮಾನ ಬದಲಾವಣೆಯನ್ನು ತಡೆಯುವ ಉದ್ದೇಶದಿಂದ ಅಲ್ಲವಾದರೂ, ಆರ್ಥಿಕ ದೃಷ್ಟಿಕೋನದಿಂದ ಹಾಗೂ ಕ್ಷಮತೆಯ ಕಾರಣಗಳಿಂದಾಗಿ ಸಾಂಪ್ರದಾಯಿಕ ಇಂಧನಗಳ ಬದಲು ಪರಿಸರ ಸ್ನೇಹಿ ಇಂಧನಗಳ ಬಳಕೆ ಹೆಚ್ಚುತ್ತದೆ ಎಂಬ ನಿರೀಕ್ಷೆಯನ್ನು ಈಗ ನಾವು ವೈಯಕ್ತಿಕ ನೆಲೆಯಲ್ಲಿ ಹೊಂದಿರಬಹುದು.

ತಾಪಮಾನ ಹೆಚ್ಚಳಕ್ಕೆ ಸಂಬಂಧಿಸಿದ ಅಂಕಿ-ಅಂಶಗಳು ತೀರಾ ಸ್ಪಷ್ಟವಾಗಿವೆ. ಹಾಗಾಗಿಯೇ ನಾನು, ನಾವೀಗ ಅಪಾಯಕಾರಿ ಸಂದರ್ಭದಲ್ಲಿ ನಿಂತಿದ್ದೇವೆ ಎಂದು ಹೇಳಿದೆ. ಮಾನವಕೃತ ಜಾಗತಿಕ ತಾಪಮಾನ ಹೆಚ್ಚಳದ ಕಾರಣಕ್ಕೆ ವಾತಾವರಣದಲ್ಲಿ ಬದಲಾವಣೆ ಆಗುತ್ತಿದೆ. 1880ರ ನಂತರ ಭೂಮಿಯ ಮೇಲ್ಮೈ ತಾಪಮಾನವು ಪ್ರತಿ ಹತ್ತು ವರ್ಷಗಳಿಗೆ ಒಮ್ಮೆ ಸರಾಸರಿ 0.07 ಡಿಗ್ರಿ ಸೆಲ್ಸಿಯಸ್‌ನಂತೆ ಏರಿಕೆ ಆಗಿದೆ. ಅಲ್ಲಿಂದ ಇಲ್ಲಿಯವರೆಗೆ ಆಗಿರುವ ತಾಪಮಾನದ ಒಟ್ಟು ಹೆಚ್ಚಳ 0.95 ಡಿಗ್ರಿ ಸೆಲ್ಸಿಯಸ್. ಇಲ್ಲಿಯವರೆಗೆ ಸಮುದ್ರದಲ್ಲಿನ ತಾಪಮಾನಕ್ಕಿಂತ ಭೂಪ್ರದೇಶದ ತಾಪಮಾನದಲ್ಲಿ ಹೆಚ್ಚಿನ ಏರಿಕೆ ಕಂಡುಬಂದಿದೆ. ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ಕಡಿಮೆ ಮಾಡದಿದ್ದರೆ ಪರಿಸ್ಥಿತಿ ಹೀಗೇ ಇರುವುದಿಲ್ಲ. ಸಮುದ್ರದ ತಾಪಮಾನ ಹೆಚ್ಚಲು ಆರಂಭವಾದರೆ, ಹಲವು ದೇಶಗಳು ತಕ್ಷಣ ಭಾರಿ ತೊಂದರೆಗೆ ಸಿಲುಕಲಿವೆ.

ಇದು ಭಾರತೀಯರಿಗೆ ಮೂರು ರೀತಿಯಲ್ಲಿ ತೊಂದರೆ ತರಲಿದೆ. ಹವಾಮಾನ ಬದಲಾವಣೆಯ ಪರಿಣಾಮವಾಗಿ ಸಮುದ್ರದ ಮಟ್ಟದಲ್ಲಿ ಹೆಚ್ಚಳ ಆಗಲಿದೆ. ಇದು ಮುಂಬೈ, ಚೆನ್ನೈ, ಕೋಲ್ಕತ್ತದಂತಹ ಸಮುದ್ರದ ದಂಡೆಯ ಮೇಲಿನ ನಗರಗಳಿಗೆ ಭಾರಿ ಸಮಸ್ಯೆ ತಂದಿಡಲಿದೆ. ಅಲ್ಲದೆ, ಮುಂಗಾರು ಮಳೆ ತೀರಾ ಅನಿಶ್ಚಿತವಾಗಲಿದೆ. ಇದರ ದುಷ್ಪರಿಣಾಮ ದೇಶದ ರೈತನ ಮೇಲೆ ಆಗಲಿದೆ.

ಕಲ್ಲಿದ್ದಲಿನಂತಹ ಸಾಂಪ್ರದಾಯಿಕ ಇಂಧನಗಳ ಬಳಕೆಯನ್ನು ಮುಂದುವರಿಸಿದರೆ ನಮಗೆ ಮೂರನೆಯ ಸಮಸ್ಯೆಯೊಂದು ಎದುರಾಗಲಿದೆ. ನಮ್ಮಲ್ಲಿ ಕಲ್ಲಿದ್ದಲು ಸಿಗುವುದು ಛತ್ತೀಸಗಡ, ಜಾರ್ಖಂಡ್ ಮತ್ತು ಒಡಿಶಾ ರಾಜ್ಯಗಳ ಆದಿವಾಸಿಗಳು ಹೆಚ್ಚಿರುವ ಪ್ರದೇಶಗಳಲ್ಲಿ. ಈ ಆದಿವಾಸಿಗಳನ್ನು ಈಗಾಗಲೇ ಅತ್ಯಂತ ಕ್ರೂರವಾಗಿ ಶೋಷಣೆಗೆ ಗುರಿಪಡಿಸಲಾಗಿದೆ. ನಮಗೆ ಕಲ್ಲಿದ್ದಲು ಸಿಗಬೇಕು ಎಂದಾದರೆ ಈ ಆದಿವಾಸಿಗಳು ತಮ್ಮ ನೆಲ ಹಾಗೂ ಅರಣ್ಯವನ್ನು ಬಿಟ್ಟುಕೊಡಬೇಕಾಗುತ್ತದೆ. ‘ಭಾರತ ರತ್ನ’ ಲತಾ ಮಂಗೇಶ್ಕರ್ ಅವರ ನಿವಾಸದ ಎದುರು ಮೇಲ್ಸೇತುವೆ ನಿರ್ಮಿಸುವ ಪ್ರಸ್ತಾವವನ್ನು ಮುಂಬೈ ಆಡಳಿತ ಮುಂದಿಟ್ಟಾಗ, ದೇಶ ತೊರೆಯುವುದಾಗಿ ಲತಾ ಬೆದರಿಕೆ ಒಡ್ಡಿದರು.ಮೇಲ್ಸೇತುವೆ ಯೋಜನೆ ರದ್ದಾಗುವಂತೆ ಮಾಡಿದರು. ಆದರೆ ಇಂತಹ ಶಕ್ತಿ ಆದಿವಾಸಿಗಳಿಗೆ ಇಲ್ಲ. ಹಾಗಾಗಿ ಅವರು ತಮ್ಮ ನೆಲವನ್ನು ಬಿಟ್ಟುಕೊಡಬೇಕಾಗುತ್ತದೆ. ನಾವು ಸೌರಶಕ್ತಿ ಅಥವಾ ಪವನಶಕ್ತಿಯನ್ನು ಬಳಸಲು ಆರಂಭಿಸಿದರೆ ಆದಿವಾಸಿಗಳ ಶೋಷಣೆ ನಿಲ್ಲುತ್ತದೆ.

ಸಾಂಪ್ರದಾಯಿಕ ಇಂಧನಗಳ ಬಳಕೆ ನಿಲ್ಲಿಸುವುದರಿಂದ ನಮಗೆಲ್ಲರಿಗೂ ಒಳ್ಳೆಯದಾಗುತ್ತದೆ. ಭಾರತದಲ್ಲಿ ಪ್ರತಿ ವರ್ಷ 12 ಲಕ್ಷಕ್ಕಿಂತ ಹೆಚ್ಚು ಜನ ಮಾಲಿನ್ಯದ ಕಾರಣದಿಂದ ಸಾವನ್ನಪ್ಪುತ್ತಿದ್ದಾರೆ. ಆದರೆ ಈ ಸಾವು ಹಾಗೂ ಹವಾಮಾನ ಬದಲಾವಣೆಯ ಅಪಾಯಗಳು ನಮ್ಮ ಮಾಧ್ಯಮಗಳ ಪಾಲಿಗೆ ಆದ್ಯತೆಯ ವಿಚಾರಗಳಲ್ಲ. ಇದರ ಪರಿಣಾಮ ಎಂಬಂತೆ, ನಮ್ಮ ಸರ್ಕಾರಗಳು ಹಾಗೂ ಉದ್ದಿಮೆಗಳ ಮೇಲೆ ‘ಧೋರಣೆಯನ್ನು ತ್ವರಿತವಾಗಿ ಬದಲಾಯಿಸಿಕೊಳ್ಳಬೇಕು’ ಎಂಬ ಒತ್ತಡ ದೊಡ್ಡ ಮಟ್ಟದಲ್ಲಿ ಇಲ್ಲ. ಟ್ರಂಪ್‌ ತೀರ್ಮಾನವನ್ನು ನೆಪವಾಗಿಸಿಕೊಂಡು ನಾವು ನಮ್ಮ ಗಮನವನ್ನು ಇಡೀ ವಿಶ್ವದ ಮೇಲೆ ಪರಿಣಾಮ ಬೀರುವ ಜಾಗತಿಕ ತಾಪಮಾನ ಹೆಚ್ಚಳದ ಸಮಸ್ಯೆಯ ಮೇಲೆ ಹರಿಸಬೇಕು.

ಯುರೋಪಿನ ದೇಶಗಳಲ್ಲಿ ಹವಾಮಾನ ಬದಲಾವಣೆ ಎಂಬುದು ಚುನಾವಣಾ ವಿಚಾರ. ಅಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಈ ಕುರಿತ ಚರ್ಚೆಗಳಲ್ಲಿ ಭಾಗಿಯಾಗಬೇಕಾಗುತ್ತದೆ. ಈ ಸಮಸ್ಯೆಯ ಬಗ್ಗೆ ಅರಿವಿರುವ ಭಾರತದ ಮಧ್ಯಮ ವರ್ಗದ ಸುಶಿಕ್ಷಿತ ಮತದಾರ, ಯುರೋಪಿನಲ್ಲಿ ಸಾಧ್ಯವಾಗಿರುವುದು ಇಲ್ಲೂ ಆಗುವಂತೆ ಮಾಡಬೇಕು. ನಮ್ಮ ಒಳಿತಿಗಾಗಿ, ಮುಂಬರುವ ತಲೆಮಾರುಗಳ ಒಳಿತಿಗಾಗಿ ನಾವು ಈ ಕೆಲಸ ಮಾಡಬೇಕು.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT