ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್ ಹಾದಿಯಲ್ಲಿ ಅನೇಕ ಸವಾಲುಗಳಿವೆ

Last Updated 17 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಚುನಾವಣೆ ಮುಗಿದು ವಾರ ಕಳೆದಿದೆ. ಆದರೂ ಬಹುತೇಕ ಅಮೆರಿಕನ್ನರು ಹಿಲರಿ ಕ್ಲಿಂಟನ್ ಮತ್ತು ಡೊನಾಲ್ಡ್ ಟ್ರಂಪ್ ಕನವರಿಕೆಯಲ್ಲೇ ಇದ್ದಾರೆ. ಹಿಲರಿ ಅವರ ಸೋಲಿಗೆ ಕಾರಣವೇನು, ಟ್ರಂಪ್ ಗೆದ್ದದ್ದು ಹೇಗೆ ಎಂಬ ಬಗ್ಗೆ ತಮ್ಮದೇ ತರ್ಕ ಮುಂದಿಡುತ್ತಿದ್ದಾರೆ. ಕೆಲವು ನಗರಗಳಲ್ಲಿ ಫಲಿತಾಂಶಕ್ಕೆ ಅಸಮ್ಮತಿ ಸೂಚಿಸಿ, ಜನ ರಸ್ತೆಗೆ ಇಳಿದದ್ದೂ ಆಗಿದೆ.

ಬಹುಶಃ ಒಂದು ಮಹತ್ವದ ಚುನಾವಣೆ ಮುಗಿದ ಮೇಲೆ ಹೀಗೆಲ್ಲಾ ಆಗುವುದು ಸಹಜ. ಅದರಲ್ಲೂ ಅನಿರೀಕ್ಷಿತ ಫಲಿತಾಂಶ ಬಂದಾಗ, ಜನ ದಿಗ್ಭ್ರಮೆಗೆ ಒಳಗಾಗುತ್ತಾರೆ, ತಮ್ಮ ನಿರೀಕ್ಷೆ ಹುಸಿಯಾದಾಗ ವ್ಯಗ್ರರಾಗುತ್ತಾರೆ. ‘ಹೀಗೂ ಉಂಟೇ’ ಎನ್ನಿಸುವ ಹಲವು ಪ್ರಸಂಗಗಳೂ ನಡೆಯುತ್ತವೆ. ಮೊನ್ನೆ ಹಾಗೆಯೇ ಆಯಿತು. ‘ಡೊನಾಲ್ಡ್ ಟ್ರಂಪ್ 240ಕ್ಕೂ ಹೆಚ್ಚು ಎಲೆಕ್ಟೋರಲ್ ಮತ ಗಳಿಸಲು ಸಾಧ್ಯವೇ ಇಲ್ಲ. ಹಾಗೊಮ್ಮೆ ನನ್ನ ಮಾತು ಸುಳ್ಳಾದರೆ, I will eat a Bug’ ಎಂದು ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಸ್ಯಾಮ್ ವಾಂಗ್, ಚುನಾವಣೆಗೆ ಎರಡು ವಾರಗಳ ಮೊದಲು ಟ್ವಿಟರ್ ಶಪಥ ಮಾಡಿದ್ದರು. ಚುನಾವಣೆಯ ಮರುದಿನ ಸಿಎನ್ಎನ್ ವಾಹಿನಿಯ ನೇರಪ್ರಸಾರದ ಕಾರ್ಯಕ್ರಮದಲ್ಲಿ, ‘ಹುಳುಂ ಸ್ವಾಹಾ’ ಮಾಡಿ ಮಾತು ಉಳಿಸಿಕೊಂಡರು.

ಇನ್ನು, ಮಾಧ್ಯಮಗಳನ್ನಂತೂ ಪೂರ್ತಿಯಾಗಿ ಟ್ರಂಪ್ ಆವರಿಸಿಕೊಂಡಿದ್ದಾರೆ. ಎಷ್ಟರಮಟ್ಟಿಗೆ ಎಂದರೆ, ಕಳೆದ ಗುರುವಾರ ಟ್ರಂಪ್ ಮತ್ತು ಒಬಾಮ ಶ್ವೇತಭವನದಲ್ಲಿ ಮೊದಲ ಬಾರಿಗೆ ಭೇಟಿಯಾದಾಗ, ಟ್ರಂಪ್ ತಮ್ಮ ಕೈಗಳನ್ನು ಗೋಪುರದ ಆಕೃತಿಯಲ್ಲಿ ಇಟ್ಟುಕೊಂಡಿದ್ದರು. ಅದು ಎದುರಿಗಿರುವವರನ್ನು ನಿಯಂತ್ರಿಸುವ ಸೂಚನೆ, ಒಬಾಮ ಪದೇ ಪದೇ ಕಣ್ರೆಪ್ಪೆ ಬಡಿಯುತ್ತಿದ್ದರು, ಅದು ಮುಂದಿರುವವರ ಬಗ್ಗೆ ಆಸಕ್ತಿ, ಗೌರವ ಇಲ್ಲ ಎನ್ನುವ ಸೂಚನೆ ಎಂದೆಲ್ಲಾ ವ್ಯಾಖ್ಯಾನ ಮಾಡಲಾಯಿತು. ಇದೆಲ್ಲದರ ಜೊತೆ ಟ್ರಂಪ್ ಅವರ ಸಂಪುಟ ಹೇಗಿರುತ್ತದೆ, ಮುಂದಿನ 73 ದಿನಗಳ ಒಬಾಮ- ಟ್ರಂಪ್ ಜುಗಲ್ಬಂದಿ ಹೇಗಿರುತ್ತದೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಪ್ರಶ್ನೆ ಮುಖ್ಯವೂ ಹೌದು.

ಅಮೆರಿಕದ ಪ್ರಜಾಪ್ರಭುತ್ವ ವ್ಯವಸ್ಥೆಯ ಉತ್ತಮ ಅಂಶಗಳಲ್ಲಿ, ವ್ಯವಸ್ಥಿತವಾಗಿ ನಡೆಯುವ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಕೂಡ ಒಂದು. ಅಮೆರಿಕದ ಮಟ್ಟಿಗೆ, ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುವುದು ಎಷ್ಟು ಪ್ರಯಾಸವೋ, ಗೆದ್ದ ಮರುದಿನದಿಂದ ಅಧಿಕಾರ ಸ್ವೀಕರಿಸುವ ದಿನದವರೆಗಿನ ಸುಮಾರು 73 ದಿನಗಳನ್ನು ನಿಭಾಯಿಸುವುದು ಅಷ್ಟೇ ತ್ರಾಸ. ಅಧಿಕಾರ ಹಸ್ತಾಂತರ ಎಂಬ ಈ ಕಸರತ್ತು ಚುನಾವಣೆಯ ಮರುದಿನದಿಂದಲೇ ಆರಂಭವಾಗುತ್ತದೆ ಮತ್ತು ಜನವರಿ 20ರ ಪ್ರಮಾಣವಚನ ದಿನದವರೆಗೂ ನಡೆಯುತ್ತದೆ. ಈ ಪ್ರಕ್ರಿಯೆಯ ಮೂರು ಮುಖ್ಯ ಆಶಯ, ಆಡಳಿತ ಯಂತ್ರ ಸ್ಥಗಿತಗೊಳ್ಳದಂತೆ ತಡೆಯುವುದು, ಯೋಜನಾಬದ್ಧ ರೀತಿಯಲ್ಲಿ ಆಡಳಿತವನ್ನು ಮುಂದಿನ ಅಧ್ಯಕ್ಷರಿಗೆ ಒಪ್ಪಿಸುವುದು. ರಾಷ್ಟ್ರೀಯ ಭದ್ರತೆಗೆ ಅಪಾಯ ಒದಗದಂತೆ ನೋಡಿಕೊಳ್ಳುವುದು. ಹಾಗಾಗಿ ಚುನಾವಣೆ ನಂತರ, ಅಧ್ಯಕ್ಷರಿಗೆ ಮತ್ತು ಭಾವೀ ಅಧ್ಯಕ್ಷರಿಗೆ ಗುಪ್ತಚರ ಇಲಾಖೆ, ಅಮೆರಿಕದ ಭದ್ರತಾ ಸಂಸ್ಥೆ ಹೋಂಲ್ಯಾಂಡ್ ಸೆಕ್ಯುರಿಟಿ, ದೇಶದ ಆಗುಹೋಗುಗಳ ಬಗ್ಗೆ ಮಾಹಿತಿ ನೀಡಲು ಆರಂಭಿಸುತ್ತವೆ.

ಫೆಡರಲ್ ಸರ್ಕಾರದ ಸುಮಾರು 4000 ಹುದ್ದೆಗಳಿಗೆ ನೇಮಕಾತಿ ಈ ಸಂದರ್ಭದಲ್ಲಿ ನಡೆಯುತ್ತದೆ. ಮೊದಲ 100 ದಿನಗಳಲ್ಲಿ ಅನುಷ್ಠಾನಗೊಳಿಸಬೇಕಾದ ಯೋಜನೆಯ ನೀಲನಕ್ಷೆ ರೂಪಿಸಲಾಗುತ್ತದೆ. ಅಟಾರ್ನಿ ಜನರಲ್‌ನಂತಹ ಹುದ್ದೆಗಳ ನೇಮಕ ಊರ್ಜಿತಗೊಳ್ಳುವುದು ಸೆನೆಟ್ ಅನುಮೋದಿಸಿದಾಗ ಮಾತ್ರ. ಅದೇ ಕಾರಣಕ್ಕೆ, ಈ ಹಿಂದೆ ಕ್ಲಿಂಟನ್ ಮೂರು ಪ್ರಸ್ತಾವಗಳನ್ನು ಬದಲಿಸಬೇಕಾಗಿ ಬಂದಿತ್ತು. ಸಾಮಾನ್ಯವಾಗಿ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಸಂಪುಟದ ಭಾಗವಾಗುವ ಅವಕಾಶ ಸಂಸತ್ತಿನ ಮೇಲ್ಮನೆ ಮತ್ತು ಕೆಳಮನೆ ಸದಸ್ಯರಿಗೆ ಸೀಮಿತವಾಗಿರುತ್ತದೆ. ಆದರೆ ಅಧ್ಯಕ್ಷೀಯ ಮಾದರಿಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಸಂಪುಟಕ್ಕೆ ಕಾಂಗ್ರೆಸ್ ಸದಸ್ಯರನ್ನೇ ಆಯ್ದುಕೊಳ್ಳಬೇಕು ಎಂಬ ಕಟ್ಟುಪಾಡಿಲ್ಲ.

ತನಗೆ ಬೇಕಾದವರನ್ನು ಹೆಕ್ಕಿಕೊಳ್ಳಲು ಅಧ್ಯಕ್ಷರು ಉದ್ದ ಕೈ ಚಾಚಬಹುದು. ಅಂತೆಯೇ ಸಂಪುಟದ ಭಾಗವಾಗಲು ಲಾಬಿ ಕೂಡ ನಡೆಯುತ್ತದೆ. ಈ ಲಾಬಿಗಳನ್ನು ದಾಟಿ ಅಧ್ಯಕ್ಷರು ಸೂಕ್ತ ಆಯ್ಕೆಗಳನ್ನು ಮಾಡಿಕೊಂಡಾಗ ಮಾತ್ರ ಆಡಳಿತ ಸರಿದಾರಿಯಲ್ಲಿ ನಡೆಯುತ್ತದೆ. ಮುಂದಿನ ಎರಡು ತಿಂಗಳ ಅವಧಿಯಲ್ಲಿ ಆಡಳಿತ ಹಸ್ತಾಂತರ ಹೇಗೆ ನಡೆಯುತ್ತದೆ,  ಏನೆಲ್ಲಾ ಹಂತಗಳು ಇರುತ್ತವೆ ಎಂಬ ನೀಲನಕ್ಷೆಯನ್ನು ಶ್ವೇತಭವನ ತನ್ನ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿದೆ. ಟ್ವಿಟರ್, ಫೇಸ್‌ಬುಕ್, ಯೂಟ್ಯೂಬ್ ಮೂಲಕ ಜನರೊಂದಿಗೆ ಒಡನಾಡಿದ ಮೊದಲ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ. ಹಾಗಾಗಿ ಶ್ವೇತಭವನಕ್ಕೆ ಸಂಬಂಧಿಸಿದ ಸುಮಾರು 30 ಸಾವಿರ ಟ್ವೀಟ್‌ಗಳು, ನೂರಾರು ಗಂಟೆ ವಿಡಿಯೊ, 4.5 ಲಕ್ಷ ಬಿನ್ನಹ ಪತ್ರಗಳು ಸೇರಿದಂತೆ ಡಿಜಿಟಲ್ ಸ್ವತ್ತುಗಳ ಹಸ್ತಾಂತರ ಈ ಬಾರಿ ಆ ಪಟ್ಟಿಗೆ ಸೇರಿದೆ. ಅದು ಬಿಟ್ಟರೆ, ಉಳಿದ ಪ್ರಕ್ರಿಯೆಯಲ್ಲಿ ಹೊಸದೇನಿಲ್ಲ.

ಕೆಲವೊಮ್ಮೆ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಜಟಿಲಗೊಳ್ಳುತ್ತದೆ. ಚುನಾವಣಾ ಪ್ರಚಾರ ಸಮಯದ ವಾಗ್ಯುದ್ಧ, ವೈಯಕ್ತಿಕ ನೆಲೆಯ ಸ್ನೇಹ, ವಿಶ್ವಾಸವನ್ನು ಹಾಳುಗೆಡವಿರುತ್ತದೆ. ಅದು ಈ ಸಮಯದಲ್ಲಿ ಪರಿಣಾಮ ಬೀರುತ್ತದೆ. ಅಮೆರಿಕದ ಎರಡನೆಯ ಅಧ್ಯಕ್ಷ ಜಾನ್ ಆಡಮ್ಸ್ ಅವರ ಅವಧಿಯಲ್ಲಿ, ಥಾಮಸ್ ಜೆಫರ್ಸನ್ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಆದರೆ ನಂತರದ ಚುನಾವಣೆಯ ಹೊತ್ತಿಗೆ, ಫೆಡರಲಿಸ್ಟ್ ಮತ್ತು ರಿಪಬ್ಲಿಕನ್ ಎಂದು ಪಕ್ಷ ಎರಡು ಹೋಳಾಯಿತು. ಇಬ್ಬರೂ ಆಚೀಚೆ ನಿಂತರು. ಮಾತಿನ ಯುದ್ಧ ಚುನಾವಣೆಯಲ್ಲಿ ನಡೆಯಿತು. ನಂತರವೂ ವೈಮನಸ್ಯ ಆರಲಿಲ್ಲ.  ಜೆಫರ್ಸನ್ ಅಧಿಕಾರ ಸ್ವೀಕರಿಸುವಾಗ, ನಿಕಟಪೂರ್ವ ಅಧ್ಯಕ್ಷ ಜಾನ್ ಆಡಮ್ಸ್ ಸಹಕರಿಸಲಿಲ್ಲ, ಸಮಾರಂಭಕ್ಕೆ ಗೈರುಹಾಜರಾಗಿದ್ದರು.

1824ರ ಚುನಾವಣೆಯ ಹೊತ್ತಿಗೆ ಫೆಡರಲಿಸ್ಟ್ ಪಕ್ಷ ಅವಸಾನ ಹೊಂದಿತ್ತು. ಉಳಿದದ್ದು, ಡೆಮಾಕ್ರಟಿಕ್-ರಿಪಬ್ಲಿಕನ್ ಪಕ್ಷ. ಒಂದೇ ಪಕ್ಷದ ನಾಲ್ವರು ಅಭ್ಯರ್ಥಿಗಳು ಅಧ್ಯಕ್ಷಗಾದಿಗೆ ಸ್ಪರ್ಧೆಯಲ್ಲಿದ್ದರು. ಅದರಲ್ಲಿ ಆಂಡ್ರೀವ್ ಜಾಕ್ಸನ್, ಜನಪ್ರಿಯ ಮತ ಮತ್ತು ಎಲೆಕ್ಟೋರಲ್ ಮತಗಳನ್ನು ಹೆಚ್ಚು ಪಡೆದಿದ್ದರು. ಆದರೆ ಭ್ರಷ್ಟಾಚಾರದ ಆರೋಪದಿಂದಾಗಿ, ಅಧ್ಯಕ್ಷರನ್ನು ಕಾಂಗ್ರೆಸ್ ಮೇಲ್ಮನೆ ಸದಸ್ಯರು ಆರಿಸಬೇಕಾಗಿ ಬಂದಿತ್ತು. ಕಡಿಮೆ ಮತ ಪಡೆದಿದ್ದರೂ ಜಾನ್ ಕ್ವಿನ್ಸಿ ಆಡಮ್ಸ್ ಅಧ್ಯಕ್ಷರಾದರು. ಮರು ಚುನಾವಣೆಯಲ್ಲಿ ಮತ್ತೆ ಆಂಡ್ರಿವ್ ಜಾಕ್ಸನ್ ಸ್ಪರ್ಧಿಸಿದರು. ಪ್ರಚಾರ ಸಭೆಗಳಲ್ಲಿ ಇಬ್ಬರ ನಡುವಿನ ಮಾತು ತೀರಾ ಕೆಳಮಟ್ಟ ತಲುಪಿತ್ತು. ಚುನಾವಣೆಯಲ್ಲಿ ಆಂಡ್ರಿವ್ ಜಾಕ್ಸನ್ ಗೆದ್ದುಬಿಟ್ಟರು. ಫಲಿತಾಂಶ ಬಂದೊಂಡನೆ ಜಾಕ್ಸನ್ ಬೆಂಬಲಿಗರು ಶ್ವೇತಭವನಕ್ಕೆ ಮುತ್ತಿಗೆ ಹಾಕಿದರು. ವಿಧಿಯಿಲ್ಲದೆ ಜಾನ್ ಕ್ವಿನ್ಸಿ ಆಡಮ್ಸ್ ಹಿತ್ತಲ ಬಾಗಿಲಿನ ಮೂಲಕ ಶ್ವೇತಭವನ ತೊರೆಯಬೇಕಾಗಿ ಬಂದಿತ್ತು!

ಕೆಲವೊಮ್ಮೆ ಕ್ಷುಲ್ಲಕ ಕಾರಣಗಳೂ ಅಧ್ಯಕ್ಷರ ನಡುವೆ ಗೋಡೆ ಎಬ್ಬಿಸುತ್ತವೆ. 1969ರ ಚುನಾವಣೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಮತ್ತು ನೂತನ ಅಧ್ಯಕ್ಷರ ಮಧ್ಯೆ, ಪ್ರಮಾಣವಚನ ಸಮಾರಂಭಕ್ಕೆ ಯಾವ ವಾಹನದಲ್ಲಿ ತೆರಳಬೇಕು ಎಂಬ ವಿಷಯವೇ ದೊಡ್ಡದಾಗಿ ಬೆಳೆದಿತ್ತು. ಅಧ್ಯಕ್ಷ ಪದವಿಗೆ ಆಯ್ಕೆಯಾಗಿದ್ದ ಉಲಿಸಸ್ ಗ್ರಾಂಟ್, ತೆರೆದ ವಾಹನದಲ್ಲಿ ಆಂಡ್ರಿವ್ ಜಾನ್ಸನ್ ಪಕ್ಕ ಕೂರುವುದಿಲ್ಲ ಎಂದು ಹಟ ಹಿಡಿದರು. ಕೊನೆಗೆ ಜಾನ್ಸನ್ ಶ್ವೇತಭವನದಲ್ಲೇ ಉಳಿದು, ಅಲ್ಲಿಂದಲೇ ಗಂಟುಮೂಟೆ ಕಟ್ಟಬೇಕಾಯಿತು. 1932ರ ಕಥೆಯೂ ಅದೇ. ಅದಾಗ ದೇಶ ಆರ್ಥಿಕವಾಗಿ ತಲ್ಲಣಿಸಿ ಹೋಗಿತ್ತು, ಅದಕ್ಕೆ ಅಧ್ಯಕ್ಷ ಹೂವರ್ ಕಾರಣ ಎಂದು ಫ್ರಾಂಕ್ಲಿನ್ ರೂಸ್ವೆಲ್ಟ್ ತಮ್ಮ ಪ್ರಚಾರ ಭಾಷಣಗಳಲ್ಲಿ ಜರೆಯುತ್ತಿದ್ದರು.

ಒಂದು ಹೆಜ್ಜೆ ಮುಂದೆ ಹೋಗಿ, ಹೂವರ್ ದೈಹಿಕ ರಚನೆಯನ್ನೇ ಅಣುಕಿಸಿ, ಹೂವರ್ ಅವರನ್ನು ‘Fat, Timid Capon’ ಎಂದಿದ್ದರು. ಹೂವರ್ ಸುಮ್ಮನಾಗಲಿಲ್ಲ, ‘ರೂಸ್ವೆಲ್ಟ್ ಒಬ್ಬ ಗೋಸುಂಬೆ’ ಎಂದು ತಿರುಗೇಟು ನೀಡಿದ್ದರು. ಈ ಇಬ್ಬರ ನಡುವೆ ಅಧಿಕಾರ ಹಸ್ತಾಂತರ ಗೋಜಲಾಯಿತು. ಒಬ್ಬರು ಪಾಲ್ಗೊಂಡ ಸಭೆಗಳಲ್ಲಿ ಮತ್ತೊಬ್ಬರು ಗೈರುಹಾಜರಾಗುತ್ತಿದ್ದರು. ಇದಾದ ಇಪ್ಪತ್ತು ವರ್ಷಗಳ ನಂತರ ಹ್ಯಾರಿ ಎಸ್ ಟ್ರೂಮನ್, ಐಸೆನ್ ಹೋವರ್ ಅವರಿಗೆ ಅಧಿಕಾರ ವಹಿಸಿಕೊಡಬೇಕಾದ ಸಂದರ್ಭ ಬಂತು. ಹಾಗೆ ನೋಡಿದರೆ, ಇಬ್ಬರ ನಡುವೆ ಉತ್ತಮ ಬಾಂಧವ್ಯ ಆ ಮೊದಲಿತ್ತು. ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಇಬ್ಬರೂ ಜೊತೆಯಾಗಿ ಕೆಲಸ ಮಾಡಿದ್ದರು. ಆದರೆ ಅಧಿಕಾರ ಹಸ್ತಾಂತರ ನಡೆಯಬೇಕಾದಾಗ ಮಾತ್ರ ಸೆಟೆದುಕೊಂಡರು.

1980ರ ಚುನಾವಣೆಯ ಬಳಿಕ ಕಾರ್ಟರ್ ಮತ್ತು ರೇಗನ್ ನಡುವೆ ಆಡಳಿತ ಹಸ್ತಾಂತರ ನಡೆಯಬೇಕಿತ್ತು. ಈ ಇಬ್ಬರು ನಾಯಕರು ‘ಎಲ್ಲವೂ ಸರಿಯಿದೆ’ ಎಂದು ಹಸ್ತಲಾಘವ ಮಾಡಿದ್ದರು. ಆದರೆ ಮುಚ್ಚಿದ ಬಾಗಿಲುಗಳ ಹಿಂದೆ, ಮುಸುಕಿನ ಗುದ್ದಾಟ ನಡೆದೇ ಇತ್ತು ಎಂಬುದನ್ನು ಇತಿಹಾಸ ತಜ್ಞ ಡಾಗ್ಲಸ್ ಬ್ರಿಂಕ್ಲೇ ‘The Unfinished Presidency’ ಕೃತಿಯಲ್ಲಿ ವಿವರಿಸುತ್ತಾರೆ. ಎರಡು ತಂಡಗಳ ನಡುವೆ ವಾಗ್ವಾದ ಸಾಮಾನ್ಯವಾಗಿತ್ತು, ಜೊತೆಗೆ ಪ್ರಥಮ ಮಹಿಳೆ ರೊಸಲಿನ್ ಕಾರ್ಟರ್ ಮತ್ತು ಭಾವೀ ಪ್ರಥಮ ಮಹಿಳೆ ನ್ಯಾನ್ಸೀ ರೇಗನ್ ನಡುವೆ, ಶ್ವೇತಭವನದ ಅಡುಗೆ ಸಿಬ್ಬಂದಿಯ ವಿಷಯಕ್ಕೇ ಮಾತು ಬೆಳೆದಿತ್ತು ಎಂಬುದನ್ನು ಉಲ್ಲೇಖಿಸಿದ್ದಾರೆ.

ಅಪರೂಪದ ಸಂದರ್ಭಗಳಲ್ಲಿ, ಈ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಇಬ್ಬರು ಅಧ್ಯಕ್ಷರ ನಡುವೆ ಸ್ನೇಹ ಸೇತುವೆಯಾಗಿ ಮಾರ್ಪಾಡಾಗಿದ್ದೂ ಇದೆ. 1960ರಲ್ಲಿ ಕೆನಡಿ ಮತ್ತು ಐಸೆನ್ ಹೋವರ್ ಚುನಾವಣೆಯುದ್ದಕ್ಕೂ ಒಬ್ಬರನ್ನೊಬ್ಬರು ಮಾತಿನಿಂದ ತಿವಿಯುತ್ತಿದ್ದರು. ಅದು ಅಧಿಕಾರ ಹಸ್ತಾಂತರ ಪ್ರಕ್ರಿಯೆಗೆ ಮುಳುವಾಗಬಹುದು ಎಂಬುದು ರಾಜಕೀಯ ತಜ್ಞರ ಅಭಿಪ್ರಾಯವಾಗಿತ್ತು. ಆದರೆ ಈ ಪ್ರಕ್ರಿಯೆ ಮುಗಿಯುವ ಹೊತ್ತಿಗೆ ಇಬ್ಬರಲ್ಲೂ ಹಗೆ ಆರಿತ್ತು. ಚುನಾವಣೆಗೆ ಮೊದಲು ‘ಕೆನಡಿ ಒಬ್ಬ ಅಪಕ್ವ, ಆತುರದ ರಾಜಕಾರಣಿ’ ಎಂದಿದ್ದ ಹೋವರ್, ಶ್ವೇತಭವನದಿಂದ ಹೊರಡುವ ಹೊತ್ತಿಗೆ ‘ಕೆನಡಿ ನಿಜಕ್ಕೂ ಸಮರ್ಥ, ಬುದ್ಧಿವಂತ ರಾಜಕಾರಣಿ’ ಎಂದು ತಮ್ಮ ಅಭಿಪ್ರಾಯ ಬದಲಿಸಿಕೊಂಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಕ್ಲಿಂಟನ್-ಬುಷ್ ನಡುವೆ ಅಧಿಕಾರ ವರ್ಗಾವಣೆಯಾದಾಗ ಸಣ್ಣ ಪುಟ್ಟ ಘರ್ಷಣೆ ಆಗಿತ್ತು. ಆದರೆ ಬುಷ್-ಒಬಾಮ ನಡುವೆ ಶ್ವೇತಭವನದ ಕೀಲಿಕೈ ಬದಲಾದಾಗ ಯಾವುದೇ ಸಮಸ್ಯೆಯಾಗಲಿಲ್ಲ. ಈ ಬಾರಿ ಟ್ರಂಪ್ ಮತ್ತು ಒಬಾಮರ ಜಗಳ್ಬಂದಿ ಚುನಾವಣೆಯುದ್ದಕ್ಕೂ ಕಂಡು ಬಂದಿದ್ದರಿಂದ, ಟ್ರಂಪ್ ಅವರೊಂದಿಗೆ ಒಬಾಮ, ಮುಂದಿನ ಎರಡು ತಿಂಗಳ ಅವಧಿಯಲ್ಲಿ ಎಷ್ಟರಮಟ್ಟಿಗೆ ಸಹಕರಿಸಲಿದ್ದಾರೆ ಎಂಬ ಕುತೂಹಲವಂತೂ ಇದೆ.

ಇನ್ನು, ಸಂಪುಟ ರಚನೆಯ ಸಮೀಕರಣವೂ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬಂದಿದೆ. ಐಸೆನ್ ಹೋವರ್ ಸಂಪುಟದಲ್ಲಿ ಕೇವಲ ಒಬ್ಬ ಮಹಿಳೆ ಸ್ಥಾನ ಪಡೆದಿದ್ದರು. ಕೆನಡಿ, ನಿಕ್ಸನ್ ಅವಧಿಯಲ್ಲಿ ಸಂಪುಟದ ಮೇಲಿನ ಪೂರ್ಣ ಹಿಡಿತ ಶ್ವೇತ ವರ್ಣೀಯರದ್ದಾಗಿತ್ತು. ಕಾರ್ಟರ್ ಮತ್ತು ರೇಗನ್, ಆಫ್ರಿಕನ್ ಅಮೆರಿಕನ್ ಸಮುದಾಯದ ಒಬ್ಬ ಪ್ರತಿನಿಧಿಯನ್ನು ಸಂಪುಟದಲ್ಲಿ ಇರಿಸಿಕೊಂಡಿದ್ದರು. ಜಾರ್ಜ್ ಬುಷ್ ಸೀನಿಯರ್ ಅವಧಿಯಲ್ಲಿ ಹಿಸ್ಪಾನಿಕ್ ಸಮುದಾಯಕ್ಕೂ ಅಧ್ಯಕ್ಷರ ಸಂಪುಟದಲ್ಲಿ ಜಾಗ ದೊರೆಯಿತು. 90ರ ದಶಕದಲ್ಲಿ ಬಿಲ್ ಕ್ಲಿಂಟನ್ ಅಧ್ಯಕ್ಷರಾದ ಬಳಿಕ, ‘Cabinet should look like America’ ಎಂಬ ಪ್ರತಿಪಾದನೆ ಬಂತು. ಕ್ಲಿಂಟನ್ ಸಂಪುಟದಲ್ಲಿ, ವಿವಿಧ ಸಮುದಾಯಗಳ ಪ್ರತಿನಿಧಿಗಳು ಸ್ಥಾನ ಪಡೆದುಕೊಂಡಿದ್ದರು. ಜಾರ್ಜ್ ಬುಷ್ ಜೂನಿಯರ್, ಒಬಾಮ ಅವಧಿಯಲ್ಲೂ ಅದೇ ಮಾದರಿ ಮುಂದುವರೆಯಿತು. ಈ ಬಾರಿ ಟ್ರಂಪ್ ಸಂಪುಟದಲ್ಲಿ ಯಾರೆಲ್ಲಾ ಇರುತ್ತಾರೆ ಎಂಬುದರ ಮೇಲೆ, ಅವರ ಆಡಳಿತ ಯಾವ ದಿಕ್ಕಿನತ್ತ ಸಾಗುತ್ತದೆ ಎಂಬುದನ್ನು ಊಹಿಸಬಹುದು.

ಒಟ್ಟಿನಲ್ಲಿ, ಚುನಾವಣೆ ಗೆದ್ದರೂ ಶ್ವೇತಭವನದ ಹಾದಿಯಲ್ಲಿ ಹಲವು ಬುಗುಟೆಗಳನ್ನು ದಾಟಿಯೇ ಟ್ರಂಪ್ ನಡೆಯಬೇಕಿದೆ. ಇತ್ತೀಚಿನ ಸಂದರ್ಶನದಲ್ಲಿ, ‘ನಾನು ದ್ವೇಷದ ರಾಜಕಾರಣ ಮಾಡುವುದಿಲ್ಲ. ಶಿಷ್ಟಾಚಾರಕ್ಕಾಗಿ ಒಂದು ಡಾಲರ್ ಸಂಬಳ ಪಡೆದು, ಜನರ ಕಷ್ಟ ನಿವಾರಿಸಲು ದುಡಿಯುತ್ತೇನೆ. ಉದ್ಯೋಗ ಸೃಷ್ಟಿಗೆ ಮೊದಲ ಆದ್ಯತೆ’ ಎಂಬ ಎಲ್ಲರನ್ನೂ ಒಳಗೊಳ್ಳುವ ಮಾತನ್ನು ಟ್ರಂಪ್ ಆಡಿದ್ದಾರೆ. ಆದರೂ ಡೊನಾಲ್ಡ್ ಟ್ರಂಪ್ ಬಗ್ಗೆ ಅಮೆರಿಕನ್ನರಲ್ಲಿ ವಿಶ್ವಾಸ ಚಿಗುರಲು, ಇನ್ನಷ್ಟು ಸಮಯ ಬೇಕಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT