ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿತಾಶ್ ಕೇವಲ ಒಂದು ನದಿಯ ಹೆಸರಲ್ಲ

Last Updated 17 ಜನವರಿ 2013, 19:59 IST
ಅಕ್ಷರ ಗಾತ್ರ

ದೆಹಲಿ, ಗ್ಯಾಂಗ್ ರೇಪ್‌ನ ಶಾಕಿನಿಂದ ದೇಶ ಇನ್ನೂ ಚೇತರಿಸಿಕೊಂಡಿಲ್ಲ. ಅದರಿಂದ ಚೇತರಿಸಿಕೊಳ್ಳುವುದರೊಳಗೆ ಹೊಸ ಹೊಸ ರೇಪ್‌ಗಳ ತಾಜಾ ಸುದ್ದಿಗಳನ್ನು ಮೀಡಿಯಾ ನಮ್ಮ ನಾಚಿಕೆಗೇಡಿ ಮುಖಗಳ ಮೇಲೆ ರಾಚುತ್ತಿದೆ. ಗಾಂಧೀಜಿಯವರ ಮೂರು ಜಾಣಗುರುಡ, ಜಾಣ ಕಿವುಡ, ಜಾಣ ಮೂಕ ಮಂಗಗಳ ಥರ ಕೆಟ್ಟದ್ದರ ಉಸಾಬರಿಯೇ ನಮಗೆ ಬೇಡ ಎಂದು ಕುಳಿತಿದ್ದ 'ಸಜ್ಜನ'ರೂ ಕೇಳಿಸಿಕೊಳ್ಳಲೇ ಬೇಕಾದ, ಚಿಂತಿಸಲೇ ಬೇಕಾದ ಪರಿಸ್ಥಿತಿ ಬಂದೆರಗಿದೆ.

ತನ್ನನ್ನು ಕೆಡಿಸಲು ಬಂದ ಅಣ್ಣನಿಂದ ಪಲಾಯನ ಮಾಡುತ್ತಿರುವ ತಂಗಿಯ ಕತೆ, ತಂದೆ, ಚಿಕ್ಕಪ್ಪ, ಮಾಮಯ್ಯಗಳಿಂದ ಹಲ್ಲೆಗೊಳಗಾದ ಹೆಣ್ಣು ಮಕ್ಕಳ ಕತೆ-ಇತ್ಯಾದಿ ವಿಧವಿಧವಾದ ದಾರುಣ ಘಟನೆಗಳು ಎಲ್ಲೋ ಒಂದು ಮೂಲೆಯಲ್ಲಿ ಕೆಟ್ಟ ಕನಸಿನಂತೆ ಜರುಗಿ, ನಾವ್ಯಾರೂ ಧೈರ್ಯವಾಗಿ ಕೆದಕಿನೋಡಲಿಚ್ಛಿಸದ ನೆನೆಗುದಿಯಲ್ಲಿ ಹುದುಗಿ ಹೋಗುತ್ತಿದ್ದವು. ಅವೂ ಈಗ ಬಯಲಿಗೆ ಬಂದು ಬಗೆಗಣ್ಣ ಮುಂದೆ ಕರಾಳ ನಾಟ್ಯ ಮಾಡತೊಡಗಿವೆ.

ಪೋಲಿಸರಿಗೆ, ಸರ್ಕಾರಕ್ಕೆ, ಸಾರ್ವಜನಿಕರಿಗೆ-ಎಲ್ಲರಿಗೂ ಬಿಸಿ ತಟ್ಟಿದೆ. ಎಲ್ಲರ ಮನಸ್ಸಿನಲ್ಲೂ ದಿಗಿಲು ಹೊತ್ತಿಕೊಂಡಿದೆ: `ನಮ್ಮ ಮಗಳಿಗೋ, ಅಕ್ಕ-ತಂಗಿಯರಿಗೋ, ಹೆಂಡತಿಗೋ, ಪ್ರೇಯಸಿಗೋ ಹೀಗೇನಾದರೂ ಆದರೆ?' ಒಬ್ಬ ಉನ್ನತ ಸರ್ಕಾರಿ ಅಧಿಕಾರಿ ನನಗೆ ಹೇಳಿದರು: `ಇನ್ನು ಮುಂದೆ ನನ್ನ ಹೆಂಡತಿಯನ್ನು ಸಂಜೆ ನಂತರ ಆಟೋರಿಕ್ಷಾದಲ್ಲಿ  ಪ್ರಯಾಣ ಮಾಡಲು ಬಿಡುವುದಿಲ್ಲ.' ಅಷ್ಟು ಉನ್ನತ ಅಧಿಕಾರಿಗಳಿಗೇ ಈ ಥರ ಭಯವಾದರೆ ಸಾಮಾನ್ಯರ ಕಥೆ ಹೇಗೆ?'

ಇಡೀ ದೇಶವನ್ನು ತತ್ತರಿಸುವಂತೆ ಮಾಡಿರುವ ಈ ಭಯಾನಕ ಸುದ್ದಿಯಿಂದ ನಾವೆಲ್ಲಾ ಗರಬಡಿದವರಂತಾಗಿರುವುದು ನಿಜವಾದರೂ ಇಂಥಾ ಘಟನೆಗಳಲ್ಲಿ ನಾವೇನೂ ಮೊದಲಿಗರಲ್ಲ. ನಾವು ಮುಂದುವರಿದವರೆಂದು ಕೊಳ್ಳುವವರ ದೇಶಗಳಲ್ಲೂ ಇಷ್ಟೇ ಘನಂದಾರಿ ಅಪರಾಧಗಳು ನಡೆಯುತ್ತಿವೆ. ದೆಹಲಿ ಘಟನೆ ನಡೆದ ಕೆಲವು ದಿನಗಳ ನಂತರ ಜರ್ಮನಿಯ ಸುದ್ದಿಪತ್ರಿಕೆಯೊಂದು ಗ್ಯಾಂಗ್ ರೇಪ್ ಭಾರತದ ರಾಷ್ಟ್ರೀಯ ಕ್ರೀಡೆಯೆಂದು ಕಟಕಿಯಾಡಿತ್ತು. ಅದಾದ ಕೆಲವೇ ದಿವಸಗಳಲ್ಲಿ ಜರ್ಮನಿಯ ಮಾಧ್ಯಮಗಳಲ್ಲಿ ಭೀಕರ ಘಟನೆಯೊಂದು ವರದಿಯಾಗಿದೆ.

ಅತ್ಯಂತ ಪ್ರಸಿದ್ಧ ಸಿನಿಮಾ ನಟನೊಬ್ಬ ಆರು ವರ್ಷಗಳಿಂದ ತನ್ನ ಮಗಳ ಜೊತೆಗೆ ಲೈಂಗಿಕ ಸಂಬಂಧವನ್ನಿಟ್ಟುಕೊಂಡು ಒಂದು ಮಗುವನ್ನೂ ಹಡೆದಿದ್ದಾನೆಂಬ ಸುದ್ದಿ ಜರ್ಮನ್ ಮೀಡಿಯಾದಲ್ಲಿ ಸ್ಫೋಟಗೊಂಡು ಭಾರತವನ್ನು ಹಂಗಿಸುವ ಅವರ ಒಣ ಜಂಭಕ್ಕೆ ಸರಿಯಾದ ಲಾತ ಕೊಟ್ಟಿದೆ. ಜಗತ್ತಿನ ಮೊದಲಿಗರೆಂದು ಕೊಚ್ಚಿಕೊಳ್ಳುವ ಕೆನಡಾ ಅಮೆರಿಕಾಗಳಲ್ಲೂ ಇಂಥ ಘಟನೆಗಳಿಗಾಗಲಿ ಅಪರಾಧಗಳಲ್ಲಿ ಪಾರಾಗುವವರ ಸಂಖ್ಯೆಯಲ್ಲಾಗಲಿ ಯಾವ ಕೊರತೆಯೂ ಇಲ್ಲ ಎಂಬ ವಿಷಯ ಗೋಚರವಾಗುತ್ತಿದೆ.

ಸ್ತ್ರೀ ಪುರುಷ ಸಂಬಂಧಗಳ ಬಗ್ಗೆ ಅತ್ಯಂತ ಮುಕ್ತ ವಾತಾವರಣ ಹೊಂದಿರುವ ಸ್ವೀಡನ್ನಂಥ ಕಡೆ ಮಾನ ಭಂಗಗಳ ಸಂಖ್ಯೆ ಬಹಳ ದೊಡ್ಡದಾಗಿದೆ.ಇದು ಎಲ್ಲ ಕಡೆಯೂ ಇದ್ದದ್ದೆ ಎಂದು ಜಾಣಗುರುಡುತನ ತಳೆಯುವುದು ಇಂದಿನ ಪರಿಸ್ಥಿತಿಯಲ್ಲಿ ತುಂಬಾ ಸುಲಭವಾದ ಆಕರ್ಷಕವಾದ ಆಯ್ಕೆಯಾಗಬಹುದಾದರೂ ಅದು ಅತ್ಯಂತ ಘಾತುಕವಾದ ಹೊಣೆಗೇಡಿತನವೂ ಆಗಿದೆ. ದೆಹಲಿಯ ಘಟನೆಯನ್ನು ಹಲವರು ಪಾಶವೀಕೃತ್ಯವೆಂದು ಬಣ್ಣಿಸಿದ್ದಾರೆ. ಆದರೆ ಅದೂ ಒಂದು ಅಲ್ಪೋಕ್ತಿಯೇ. ಯಾಕೆಂದರೆ ಪ್ರಾಣಿಪ್ರಪಂಚದಲ್ಲಿ  ಮಾನಭಂಗಗಳಾಗುವುದಿಲ್ಲ. ಇನ್ನು ಕೆಲವರು ರೇಪಿಸ್ಟುಗಳನ್ನು ಕಾಡುಜನರಿಗೆ ಹೋಲಿಸಿದ್ದಾರೆ. ಅದೂ ಸರಿಯಲ್ಲ. 

ಕಾಡುಜನರಲ್ಲಿ,ಬುಡಕಟ್ಟು ಸಮಾಜಗಳಲ್ಲಿ  ಮಾನಭಂಗವೆಂಬ ನಾಗರಿಕರ ಅವಗುಣ ಇರುವುದಿಲ್ಲ.'ಅನಟಮಿ ಆಫ್ ಹ್ಯೂಮನ್ ಡಿಸ್ಟ್ರಕ್ಷನ್' ಎಂಬ ಪುಸ್ತಕದಲ್ಲಿ  ಪ್ರಸಿದ್ಧ ಜರ್ಮನ್ ಮನೋವಿಜ್ಞಾನಿ ಎರಿಕ್ ಫ್ರೊಂ ವಿಶ್ಲೇಷಿಸಿರುವ ಪ್ರಕಾರ ಮಾನವ ಸಮಾಜಗಳಲ್ಲಿರುವಷ್ಟು ಹಿಂಸೆ ಪಶುಲೋಕದಲ್ಲಿ ಎಲ್ಲಿಯೂ ಕಂಡುಬರುವುದಿಲ್ಲ. ಪ್ರಾಣಿಗಳ ಕ್ರೌರ‌್ಯಕ್ಕೆ ಕಾರಣ ಹಸಿವು ಅಥವಾ ಕಾಮದಂಥ ಜೈವಿಕ ಜರೂರಿಗಳು. ಆದರೆ ಖುಷಿಗಾಗಿ ಹಿಂಸೆಯನ್ನಾಚರಿಸುವ ಮನುಷ್ಯರು ನಾಗರಿಕ ಬದುಕಿನ ಹಲವು ಕ್ಷೇತ್ರಗಳಲ್ಲಿ ಸೂಕ್ಷ್ಮಾತಿಸೂಕ್ಷ್ಮ ಪರಿಷ್ಕಾರಗಳನ್ನು ಸಾಧಿಸಿರುವ ಹಾಗೆ ಹಿಂಸೆಯನ್ನೂ ಒಂದು ಸಂಕೀರ್ಣ ಕಲೆಯನ್ನಾಗಿ ಬೆಳೆಸಿದ್ದಾರೆ.

ನನಗೊಂದು ಘಟನೆ ನೆನಪಾಗುತ್ತಿದೆ. ಒಬ್ಬ ಭಾರತದ ಅತ್ಯಂತ ಹಿರಿಯ ಸ್ಥಾನವನ್ನಲಂಕರಿಸಿರುವ ಮಹಿಳೆಯೊಬ್ಬರು ನನಗೂ ನನ್ನ ಕೆಲವು ಮಿತ್ರರಿಗೂ ಅವರ ಭವ್ಯಭವನದಲ್ಲಿ ಭೋಜನಕ್ಕೆ ಆಮಂತ್ರಣ ಕೊಟ್ಟರು. ತಮ್ಮ ಮನೆಯಲ್ಲಿ ಒಂದು ಪುಟ್ಟ ವಸ್ತುಸಂಗ್ರಹಾಲಯವನ್ನೇ ಇಟ್ಟುಕೊಂಡಿರುವ  ಆ ಪುಣ್ಯಾತಗಿತ್ತಿ ತಮ್ಮ ದೇಶವಿದೇಶಗಳ ಕಲಾಕೃತಿಗಳನ್ನೆಲ್ಲಾ ವಿವರವಿವರವಾಗಿ ನಮಗೆ ತೋರಿಸಿ 'ಇನ್ನೊಂದು ವಿಶೇಷವಿದೆ, ಬನ್ನಿ' ಎಂದು ನಮ್ಮನ್ನೆಲ್ಲಾ ತಮ್ಮ ವಿಶಾಲ ನಡುಮನೆಯ ಇನ್ನೊಂದು ಮೂಲೆಗೆ ಕರೆದೊಯ್ದು ಅಲ್ಲಿನ ಗಾಜಿನ ಕೇಸಿನಲ್ಲಿದ್ದ ಕೆಲವು ಅನುಪಮ ಸುಂದರ ವಸ್ತುಗಳ ಕಡೆಗೆ ನಮ್ಮ ಗಮನ ಸೆಳೆದರು.

'ಇವೇನು ಗೊತ್ತಾ?'ಎಂದು ನಮ್ಮೆಲ್ಲರನ್ನೂ ಕೇಳಿದರು. ಉತ್ತರ ನಮಗೆ ಹೊಳೆಯಲಿಲ್ಲ. ನಮ್ಮ ಅಜ್ಞಾನಾಂಧಕಾರವನ್ನು ನಿವಾರಿಸುವ ಉತ್ಸುಕತೆಯಿಂದ ತಮ್ಮ ಮುಖದ ಮೇಲೆ ಸುಜ್ಞಾನಪ್ರಜ್ವಲಿತವಾದ ಒಂದು ಮುಗುಳುನಗೆಯನ್ನು ಸ್ಥಾಪಿಸಿಕೊಂಡು ಬಣ್ಣಿಸತೊಡಗಿದರು: 'ಇಗೋ ಈ ಸುಂದರ ಕಲಾವಸ್ತು ಅಪರಾಧಿಗಳ ಕಣ್ಣು ಗುಡ್ಡೆ ತೆಗೆಯುವುದಕ್ಕಾಗಿ ಮಾಡಿದ್ದು. ಈ ಇನ್ನೊಂದು ಹೆಬ್ಬೆಟ್ಟು ಕತ್ತರಿಸುವುದಕ್ಕಾಗಿ. ಅಗೊ ಅದು ಉಗುರುಗಳನ್ನು ಕೀಳುವುದಕ್ಕಾಗಿ. ಇದು ಕಾಲು ಕತ್ತರಿಸುವುದಕ್ಕಾಗಿ.' ನನ್ನ ಕಣ್ಣುಗಳಲ್ಲಿ ಕತ್ತಲಿಳಿಯಿತು. ಹಿಂಸೆಯ ಸಾಧನಗಳನ್ನು ಇಷ್ಟು ಸುಂದರವಾಗಿ ಮಾಡುವ ಮಾನವ ಬುದ್ಧಿಯ ಬಗ್ಗೆ ತಿರಸ್ಕಾರ ಮೂಡತೊಡಗಿತು. ಎರಿಕ್ ಫ್ರೊಂ ನ  ಹೇಳಿಕೆಗೆ ಇದೊಂದು ಜ್ವಲಂತ ನಿದರ್ಶನ.

ಗ್ರೀಕರಲ್ಲಿ ಒಂದು ಪುರಾಣ ಕಥೆಯಿದೆ. ಹರ್ಕ್ಯುಲಿಸ್ ತನ್ನ ಉನ್ಮತ್ತ ಕ್ಷಣಗಳಲ್ಲಿ ತನ್ನನ್ನು ಹೆತ್ತವರನ್ನೇ ಕೊಂದು ಹಾಕಿದನಂತೆ. ಬುದ್ಧಿ ತಿಳಿಯಾದಾಗ ಅವನಿಗಿದು ಗೊತ್ತಾಗಿ ಗರಬಡಿದವನಂತಾಗಿ ಬಿಟ್ಟನಂತೆ. ಅಂಥದೇ ಮಾನಸಿಕ ಸ್ಥಿತಿ ಇಂದು ನಮ್ಮದು. ಗ್ಯಾಂಗ್‌ರೇಪಿನ ವೀರರೂ ನಾವು ಕಟ್ಟಿರುವ ನಾಗರಿಕತೆಯ ಪ್ರಜೆಗಳೇ.

ಘಟನೆ ವರದಿಯಾದ ಹೊಸತರಲ್ಲಿ ಕೇಳಿಬಂದ ಉದ್ರೇಕದ ಪ್ರತಿಕ್ರಿಯೆಗಳು ಸಹಜವೇ. ಅದರೆ ಘಟನೆಯ ಸೂಕ್ಷ್ಮ ವಿವರಗಳು ಹೊರಬರತೊಡಗಿದ ನಂತರ ಮತ್ತು ಘಟನೆಯ ಇತರ ಮರುಕಳಿಕೆಗಳ ಬಾಹುಳ್ಯ ತಿಳಿಯತೊಡಗಿದ ನಂತರ ಮೊದಲ ಪ್ರತಿಕ್ರಿಯೆಯ ಆತುರದ ಅಂಶಗಳೂ ಗಮನಕ್ಕೆ ಬರತೊಡಗಿವೆ. ಅರುಂಧತಿ ರಾಯ್ ಅವರು ಇದೊಂದು ಮಧ್ಯಮವರ್ಗೀಯ ಘಟನೆಯೆಂದು ಮೂದಲಿಸಿದ್ದೂ ಈಗ ನಿರಾಧಾರವಾಗಿದೆ. ಯಾಕೆಂದರೆ ರೇಪಿಗೆ ಶಿಕಾರಿಯಾದ ಹೆಣ್ಣು ಮಗಳು ಬಡಕುಟುಂಬದ ಜವಾಬ್ದಾರಿಯುತ ಹೆಣ್ಣುಮಗಳೆಂದು ಗೊತ್ತಾಗಿದೆ.

ಇಡೀ ಘಟನೆಯ ಕಾರಣ ಮತ್ತು ಪ್ರೇರಣೆಗಳ ಬಗೆಗೂ ಪುನರಾಲೋಚಿಸುವ ಅಗತ್ಯವೂ ಬಂದಿದೆ.ಕೆಲವರಿಗನಿಸಿತ್ತು ನಮ್ಮ ಸಮಾಜದ ಲೈಂಗಿಕ ಅಪ್ರಾಮಾಣಿಕತೆ ಇಂಥ ಘಟನೆಗಳಿಗೆ ಪ್ರೇರಕವೆಂದು. ಹಾಗಿದ್ದರೆ ಸ್ವೀಡನ್ನಿನಂಥ ಮುಕ್ತ ರಾಷ್ಟ್ರಗಳಲ್ಲಿಯೂ ಇದೇ ಥರದ ಘಟನೆಗಳು ಯಾಕೆ ನಡೆಯುತ್ತಿವೆ? ಅಥವಾ ಪೋಲಿಸರ ತಾಮಸ ಗತಿಯೇ ಲೈಂಗಿಕ ಅಪರಾಧಗಳ ಕಾರಣವಾಗಿದ್ದರೆ ಪೋಲಿಸು ವ್ಯವಸ್ಥೆ ಚುರುಕಾಗಿರುವ ಪಶ್ಚಿಮದ ರಾಷ್ಟ್ರಗಳಲ್ಲಿ ಇದೇ ತೆರನ ಅಪರಾಧಗಳೂ ನಡೆಯುತ್ತವಲ್ಲ? ಅಥವಾ ಕಾನೂನಿನ ಮಂದಗತಿಯನ್ನೂ ದೂಷಿಸೋಣವೆಂದರೆ ಕಾನೂನು ಶೀಘ್ರಗತಿಯಲ್ಲಿ ಕೆಲಸಮಾಡುವ ಕಡೆ ಅಪರಾಧಗಳ ಸಂಖ್ಯೆ ಕಡಿಮೆಯಾಗಿಲ್ಲವಲ್ಲ?

ಜನರ ಬಡತನ ಅಜ್ಞಾನಗಳನ್ನು ದೂರೋಣವೆಂದರೆ ಸುಶಿಕ್ಷಿತ ಹಾಗೂ ಶ್ರೀಮಂತ ರಾಷ್ಟ್ರಗಳಲ್ಲಿ, ವರ್ಗಗಳಲ್ಲಿಯೂ ಇದೇ ಕತೆಯಲ್ಲ? ಇನ್ನೊಬ್ಬರು ಮಹನೀಯರು ಹೇಳಿದರು: ರೇಪುಗಳು ನಡೆಯುವುದು ಇಂಡಿಯಾದಲ್ಲಿ, ಭಾರತದಲ್ಲಲ್ಲ. ಹಾಗಿದ್ದರೆ ದಲಿತ ಮಹಿಳೆಯರ ಬರ್ಬರ ಮಾನಭಂಗ ಮತ್ತು ಕೊಲೆಗಳು ಘಟಿಸಿದ ಕೇರ್ಲಂಜಿ ಎಂಬ ಮಹಾರಾಷ್ಟ್ರದ ಗ್ರಾಮ ಇರುವುದು ಭಾರತದಲ್ಲೋ ಇಂಡಿಯಾದಲ್ಲೋ? ಅಹಲ್ಯೆ ಮತ್ತು ದ್ರೌಪದಿಯರ ಮಾನಭಂಗ ನಡೆದದ್ದು ಭಾರತದಲ್ಲೇ ಹೊರತು ಇಂಡಿಯಾದಲ್ಲಲ್ಲ. ಮಹಿಳೆಯರ ಶರೀರವನ್ನು ಅಪಮೌಲ್ಯಗೊಳಿಸುವ ನಾಗರಿಕ ಮಾಧ್ಯಮಗಳ ಮೇಲೆ ತಪ್ಪು ಹೊರಿಸೋಣವೆಂದರೆ ಇವೆಲ್ಲಾ ಇಲ್ಲದ ಕಡೆಗಳಲ್ಲೂ ಮಾನಭಂಗ ನಡೆಯುತ್ತದಲ್ಲ?

ಇನ್ನೊಂದು  ಸುಲಭವಾದ ಆದರೂ ಬೇಜವಾಬ್ದಾರಿತನದ ದಾರಿಯೆಂದರೆ ಮಾನವಸ್ವಭಾವವೆನ್ನುವುದೇ ಹೀಗೆ ಎಂದು ಪಿಲಾತನಂತೆ ಕೈತೊಳೆದುಕೊಂಡುಬಿಡುವುದು. ಆಗ ಇದೊಂದು ಚರಿತ್ರಾತೀತವಾದ ಘಟನೆಯೆಂದು ಸಮಾಧಾನ ಪಟ್ಟುಕೊಳ್ಳಬಹುದಾಗಿತ್ತು. ನಮ್ಮ ಕಲುಷಿತ ಮನಸ್ಸುಗಳ ಅಳುಕನ್ನು ಹಗುರ ಮಾಡಿಕೊಳ್ಳಬಹುದಿತ್ತು. ಆದರೆ ಖಾಸಗಿ ಆಸ್ತಿಯ ಕಲ್ಪನೆಯಿರದ ಬುಡಕಟ್ಟು ಸಮಾಜಗಳಲ್ಲಿ ಗ್ಯಾಂಗ್ ರೇಪುಗಳ ಪೂರ್ವಮಾದರಿಗಳಿಲ್ಲದ ಕಾರಣ ರೇಪುಗಳ ಕಾಲವಿಶಿಷ್ಟತೆ ಸೂರ್ಯಸ್ಪಷ್ಟ.
ಹೀಗೆ ಯೋಚಿಸುತ್ತಾ ಹೋದರೆ ರೇಪುಗಳ ಕಾರಣಗಳು ಪ್ರೇರಣೆಗಳು ಅತ್ಯಂತ ಸಂಕೀರ್ಣವಾಗಿ ತೋರುತ್ತವೆ.

ಮನಶ್ಶಾಸ್ತ್ರೀಯವಾದ, ಸಾಮಾಜಿಕವಾದ ಹಲಬಗೆಯ ಕಾರಣಗಳಿದ್ದು ಅವು ಒಂದರ ಜೊತೆಗೊಂದು ತಳುಕು ಹಾಕಿಕೊಂಡಿರುವ ಹಾಗೆ ಕಾಣತೊಡಗುತ್ತದೆ. ಆದ್ದರಿಂದ ರೇಪಿನಂಥ ಸಂಕೀರ್ಣ ಘಟನೆಗಳ ಬಿಚ್ಚುನೋಟವನ್ನು ವೈಚಾರಿಕವಾಗಿ ಕಂಡುಕೊಳ್ಳುವುದಕ್ಕಿಂತಾ ಸಮಂಜಸ ಬಗೆಯ ಕಲಾಭಿವ್ಯಕ್ತಿಗಳಲ್ಲಿ ಸಾಧ್ಯವಾಗುವ ಸಮಗ್ರ ನೋಟ.ಹೀಗೆಂದು ನನಗೆ ಸ್ಪಷ್ಟ ತಿಳುವಳಿಕೆ ಮೂಡಲು ಮಾಧ್ಯಮವಾದದ್ದು ಋತ್ವಿಕ್ ಘಟಕ್ ಅವರ ಕೊನೆಯ ಸಿನಿಮಾ. ಅದರ ಹೆಸರು 'ತಿತಾಶ್ ಎಕ್ಟಿ ನದೀರ್ ನಾಮ್'. ಋತ್ವಿಕ್ ಘಟಕ್ ಎಂಥ ಆಳದ ಕಲಾಕಾರರೆಂದರೆ ಅವರ ಸಿನಿಮಾಗಳನ್ನು ನಾವಿನ್ನೂ ಪೂರ್ತಿಯಾಗಿ ಅರಗಿಸಿಕೊಳ್ಳಲಾಗಿಯೇ ಇಲ್ಲ. 

ಸಾಧಾರಣ ಕಲಾವಿದರು ತಮ್ಮ ಕೃತಿಗಳಲ್ಲಿ ಸಮಸ್ಯೆಗಳ ಮೇಲುಮೇಲಿನ ಆಯಾಮಗಳನ್ನು ಮಾತ್ರ ತೋರಿಸುತ್ತಾರೆ. ಆದರೆ ಘಟಕ್‌ರಂಥವರು ಸೀದಾ ಸಮಸ್ಯೆಗಳ ಬುಡಕ್ಕೇ ಕೈ ಹಾಕುತ್ತಾರೆ. ಉದ್ಯೋಗಸ್ತ ಮಹಿಳೆಯರ ಸಮಸ್ಯೆಗಳನ್ನು ವಸ್ತುವನ್ನಾಗಿಸಿಕೊಂಡು ಘಟಕ್ 'ಮೇಘೇ ಢಾಕೇ ತಾರಾ' ಎಂಬ ಸಿನಿಮಾ ಮಾಡಿದ್ದರು. ಅದನ್ನಾಧರಿಸಿ ಅನೇಕ ಜನಪ್ರಿಯ ಸಿನಿಮಾಗಳು ತಯಾರಾದವು. ಅವುಗಳಲ್ಲಿ  ಕನ್ನಡದಲ್ಲಿ ಬಂದ 'ಬೆಂಕಿಯಲ್ಲಿ ಅರಳಿದ ಹೂ' ಎಂಬುದೂ ಒಂದು. ಘಟಕ್ ಅವರ ಸಿನಿಮಾಗಳನ್ನು ಇಂಥ ಜನಪ್ರಿಯ ರೂಪಾಂತರಗಳ ಜೊತೆಗಿಟ್ಟು ನೋಡಿದರೆ ಅಜಗಜಾಂತರ ವ್ಯತ್ಯಾಸ. ಘಟಕ್ ಅವರು ಈ ಸಮಸ್ಯೆಯ ಸಾಮಾಜಿಕ, ರಾಜಕೀಯ, ಲೈಂಗಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಕಾರಣಗಳ ಒಂದು ಹೊಲೋಗ್ರಾಂ ಮಾದರಿಯ ಸಿನಿಮಾ ಮಾಡಿದರೆ ಜನಪ್ರಿಯ ನಿರ್ದೇಶಕರುಗಳು ಅದರ ಒಂದೋ ಎರಡೋ ಆಯಾಮಗಳನ್ನು ಮುಟ್ಟುತ್ತಾರೆ ಅಷ್ಟೆ.
ರೇಪುಗಳ ಮೂಲಚೂಲಗಳನ್ನು ಮನವರಿಕೆ ಮಾಡಿಕೊಳ್ಳಬಯಸುವವರೆಲ್ಲಾ ಈ ಸಿನಿಮಾವನ್ನು ನೋಡಿ ಅದರ ಬಗ್ಗೆ ಆಳವಾಗಿ ಚಿಂತಿಸಬೇಕು.

`ತಿತಾಶ್..' ಒಂದು ಬಾಂಗ್ಲಾದೇಶದ ನದಿಯ ಕತೆ. ಆ ನದೀ ದಂಡೆಯ ಗ್ರಾಮೀಣ ಬದುಕಿನ ಅವನತಿಯ ಕತೆ. ಕಥಾವಸ್ತು ತೀರಾ ಸರಳ ಹಾಗೂ ನೇರ. ಆದರೆ ಅದರ ನಿರ್ವಹಣೆ ಅತ್ಯಂತ ಸಂಕೀರ್ಣ. ತೀರದ ಒಂದು ಹಳ್ಳಿಯಲ್ಲಿ ಒಬ್ಬ ಬಡಹುಡುಗಿಯ ಮದುವೆ ಇನ್ನೊಂದು ಊರಿನ ಬೆಸ್ತರವನ ಜೊತೆಗೆ ನಡೆದು ಅವರಿಬ್ಬರೂ ಹುಡುಗಿಯ ತಂದೆತಾಯಿಯರ ಆಶೀರ್ವಾದ ಪಡೆದುಕೊಂಡು ದೋಣಿಯನ್ನು ಹತ್ತಿ ನದಿಯ ಇನ್ನೊಂದು ದಂಡೆಯಲ್ಲಿರುವ ಹುಡುಗನ ಊರಿಗೆ ಪ್ರಯಾಣ ಬೆಳೆಸತೊಡಗುತ್ತಾರೆ. ದಾರಿಯಲ್ಲಿ ಕತ್ತಲಾಗುತ್ತದೆ. ಮೋಡ ಕವಿದು ಮಳೆ ಧೋಧೋ ಎಂದು ಬೀಳತೊಡಗುತ್ತದೆ. ದೋಣಿಯಲ್ಲಿ ಸಹ ಗಂಡುಪ್ರಯಾಣಿಕರು ಈ ಸಂದರ್ಭ ಬಳಸಿಕೊಂಡು ಹುಡುಗಿಯ ಗ್ಯಾಂಗ್ ರೇಪ್ ಮಾಡುತ್ತಾರೆ. ಆನಂತರ ಒಂದು ನೌಕಾಘಾತವಾಗಿ ಈ ಗಲಭೆಗಳ ನಡುವೆ ಗಂಡು ನಾಪತ್ತೆಯಾಗಿ ಗರ್ಭವತಿಯಾದ ಕಥಾನಾಯಕಿ ಪರವೂರಿನ ದಂಡೆಯ ಮೇಲೆ ಬಂದು ಬೀಳುತ್ತಾಳೆ.

ಆ ಊರಿನ ಸಮಾಜದ ಕಣ್ಣಿಗೆ ತುತ್ತಾಗಿರುವ ಇನ್ನೊಬ್ಬ ಯುವ ವಿಧವೆ ತನ್ನವರನ್ನು ಎದುರು ಹಾಕಿಕೊಂಡು ಕಥಾನಾಯಕಿಗೆ ನೆರವಾಗತೊಡಗುತ್ತಾಳೆ. ಹಳ್ಳಿಗರ ತಾತ್ಸಾರದ ನಡುವೆ ಕಥಾನಾಯಕಿ ಕೂಲಿನಾಲಿ ಮಾಡಿಕೊಂಡು ಯುವವಿಧವೆಯ ನೆರವಿನಿಂದ ಮಗನನ್ನು ಬೆಳೆಸುತ್ತಾಳೆ. ಆ ಊರಿನ ಸ್ಥಿತಿವಂತರ ಮನೆಗೆ ಕೂಲಿ ಮಾಡಲು ಹೋದಾಗ ಅಲ್ಲಿರುವ ಒಬ್ಬ ತರುಣ ಹುಚ್ಚ ಅವಳ ಮನಸೆಳೆಯುತ್ತಾನೆ. ತನ್ನ ಜಗತ್ತು ಮುಳುಗಿ ಹೋದ ಆ ಕರಾಳ ರಾತ್ರಿಯಲ್ಲೆೀ ಅವನೂ ತನ್ನ ಹೆಂಡತಿಯನ್ನು ಕಳೆದುಕೊಂಡು ಹುಚ್ಚನಾಗಿರುತ್ತಾನೆ. ಕಥಾನಾಯಕಿಗೆ ಅವನ ಮೇಲೆ ಪ್ರೀತಿ ಮೂಡುತ್ತದೆ.

ಅವನಿಗೂ ಅಷ್ಟೆ.  ಆದರೆ ಗಾಯಗೊಂಡ ಅವನನ್ನು ನದೀದಂಡೆಯಲ್ಲಿ ಅವಳು ಉಪಚರಿಸುವಾಗ ಹುಚ್ಚ ಅವಳನ್ನು ತನ್ನ ಹೆಂಡತಿಯೆಂದು ಗುರುತಿಸಿ ಆ ಸಂತೋಷವನ್ನು ತಡೆಯಲಾಗದೆ ಸತ್ತು ಹೋಗುತ್ತಾನೆ. ಕಥಾನಾಯಕಿಯೂ ಅದೇ ನದೀದಂಡೆಯಲ್ಲಿ ಅವನಿಗಾಗಿ ಚಡಪಡಿಸುತ್ತಾ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಅನಾಥನಾದ ಅವಳ ಮಗನಿಗೆ ತನ್ನ ತಾಯಿ ದುರ್ಗಾಮಾತೆಯ ರೂಪದಲ್ಲಿ ಎಲ್ಲೆಲ್ಲೂ ಕಾಣತೊಡಗುತ್ತಾಳೆ. ಅವನ ಸಾಕುತಾಯಾಗಿದ್ದ ಯುವವಿಧವೆಯೂ ಅವನನ್ನು ಮನೆಯಿಂದ ಹೊರದೂಡುತ್ತಾಳೆ. ಕೊನೆಗವನು ಮೀನುಗಳನ್ನು ಹಳ್ಳಿಯಿಂದ ಕೊಂಡುಹೋಗಿ ನಗರಗಳಲ್ಲಿ ಮಾರುವ ಲಾಭಕೋರರ ಪಡೆಗೆ ಸೇರಿ ತನ್ನವರಾದ ಜನರನ್ನು ಶೋಷಣೆ ಮಾಡುವುದರಿಂದಲೇ ಹೊಟ್ಟೆ ಹೊರೆಯುವ ಅನಿವಾರ್ಯತೆಗೆ ಬಲಿಯಾಗುತ್ತಾನೆ.

ವ್ಯಕ್ತಿಗಳ, ಸಮುದಾಯದ ಇಂಥ ದುರಂತಗಳು ನಡೆಯುವುದಕ್ಕೆ ಭಿತ್ತಿಯಾಗಿರುತ್ತದೆ ಇಡೀ ಗ್ರಾಮೀಣ ಪರಿಸರದ ವ್ಯವಹಾರೀಕರಣ ವ್ಯಕ್ತಿಗಳ ಮನಸ್ಸುಗಳ ಸ್ವಾರ್ಥೀಕರಣ ಮತ್ತು ಅದರ ನೇರ ಪರಿಣಾಮವಾದ ಅಮಾನವೀಕರಣ: ಮಾರ್ಕೇಟ್ಟಿನ ಏಜೆಂಟರ ಪ್ರವೇಶ, ಸಾಲ ನೀಡಿಕೆಯ ಹೊಸ ವ್ಯವಸ್ಥೆ ಇತ್ಯಾದಿಗಳೆಲ್ಲವೂ ಒಂದೇ ಪ್ರಕ್ರಿಯೆಯ ಮಗ್ಗುಲುಗಳಾಗಿರುತ್ತವೆ. ಆದರೆ ಘಟಕ್ ಅವರ ಕಲಾತ್ಮಕ ಹಿರಿಮೆಯಿರುವುದು  ಈ ಎಲ್ಲ ಕಾರ್ಯಕಾರಣಗಳ ಒಂದು ಸಮಗ್ರ ದರ್ಶನ ನೀಡುವುದರಲ್ಲಿ. ಹೀಗಾಗಿ ನಿಸರ್ಗದ ವಿಕೋಪವನ್ನಾಗಲಿ ಹಳ್ಳಿಹುಡುಗಿಯ ಮಾನಭಂಗವನ್ನಾಗಲಿ ಯುವಕನ ಹುಚ್ಚನ್ನಾಗಲಿ ತನ್ನ ಜನಕ್ಕೇ ಹಗೆಯಾಗುವ ಕಥಾನಾಯಕಿಯ ಮಗನ ಅಸಹಾಯಕತೆಯನ್ನಾಗಲಿ ಪ್ರತ್ಯೇಕಿಸಿ ನೋಡಲು ಬರುವುದಿಲ್ಲ.

ದೆಹಲಿ ಗ್ಯಾಂಗ್ ರೇಪಿನ ಕಾರಣಗಳು ಅಷ್ಟೇ ಜಟಿಲ. ಅಂದಮಾತ್ರಕ್ಕೇ ತತ್ ಕ್ಷಣ ಮಾಡಬೇಕಾದ ಕ್ರಮಗಳಾಗಲೀ ಸುಧಾರಣೆಗಳಾಗಲೀ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳಾಗಲಿ ಅನಗತ್ಯವೆಂದು ನಾನು ಹೇಳುತ್ತಿಲ್ಲ. ಆದರೆ ಈ ಸಮಸ್ಯೆಯನ್ನು ಬುಡಸಮೇತ ಕೀಳಬೇಕಾದರೆ, ದೀರ್ಘಕಾಲೀನ ಪರಿಹಾರ ಕಂಡುಕೊಳ್ಳಬೇಕಾದರೆ ಅದರೆ ಜೊತೆಗೆ ಅವಿನಾ ಸಂಬಂಧ ಹೊಂದಿರುವ, ತಳುಕುಹಾಕಿಕೊಂಡಿರುವ ಇತರ ಜಟಿಲ ಸಮಸ್ಯೆಗಳಿಗೂ ಪರಿಹಾರ ಹುಡುಕುವ ಜರೂರಿಯಿದೆ ಎಂದು ಮಾತ್ರ ಹೇಳುತ್ತಿದ್ದೇನೆ.

ನದಿಗಳು ಮಾರಾಟವಾಗುತ್ತಿರುವ ಜಗತ್ತಿನಲ್ಲಿ, ಮರಗಿಡಗಳು ನಾಗರೀಕತೆಯ ಖಾಂಡವದಹನಕ್ಕೊಳಗಾಗುತ್ತಿರುವ ಸಂದರ್ಭದಲ್ಲಿ ಎಲ್ಲ ದೈವೀಕ ಶಕ್ತಿಗಳ ತಂಗುದಾಣವಾಗಿರುವ ಮಾನವ ಶರೀರವನ್ನು ಹೇಯವಾಗಿಸುವ ರೇಪಿನಂಥ ಘಟನೆಗಳು ನಡೆಯುತ್ತಿವೆ. ಆದರೆ ಅವುಗಳಲ್ಲಿ ಯಾವುವೂ ರೇಪಿನ ಸಮರ್ಥನೆಯಲ್ಲ. ಆದರೆ ನಾವು ನಮ್ಮ ವಿರುದ್ಧ ಎಸಗುತ್ತಿರುವ ಮಹದಪರಾಧ ರೇಪೊಂದೇ ಅಲ್ಲ.ಘಟಕ್ ಅವರ ಸಿನಿಮಾದ ಹೆಸರು 'ತಿತಾಶ್ ಒಂದು ನದಿಯ ಹೆಸರು.' ಆದರೆ ಆ ಸಿನಿಮಾವನ್ನು ನಮ್ಮ ಇಂದಿನ ಅನುಭವಗಳ ಚೌಕಟ್ಟಿನಲ್ಲಿಟ್ಟು ನೋಡಿದಾಗ ತಿತಾಶ್ ಕೇವಲ ಒಂದು ನದಿಯ ಹೆಸರಲ್ಲ. ದಿನನಿತ್ಯ ನಡೆಯುತ್ತಿರುವ ಎಲ್ಲ ರೇಪುಗಳ ಹೆಸರೂ ಆಗಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT