ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದನಗಾಹಿಯೂ `ಕ್ಷೀರ ಸಮುದ್ರ' ಮಥನವೂ

Last Updated 18 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಶಾಲಾ ದಿನಗಳಲ್ಲಿ ನನಗೆ `ದನ ಕಾಯುವುದು' ಎಂದರೆ ತುಂಬಾ ಇಷ್ಟವಾದ ಕೆಲಸವಾಗಿತ್ತು. ಶಾಲೆಗೆ ರಜೆ ಸಿಕ್ಕರೆ ಸಾಕು, ದನ ಕಾಯುವ ಅವಕಾಶಕ್ಕೆ ಹಾತೊರೆಯುತ್ತಿದ್ದೆ. ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ದನ ಕಾಯುವ ಕಾಯಕ ವಿವಿಧ ರೀತಿಯದು.

ನಮ್ಮ ಊರಿನಲ್ಲಿ ದನ ಕಾಯುವುದು ಎಂದರೆ ಎಲ್ಲರ ಮನೆಗಳ ದನಗಳನ್ನು ಒಟ್ಟಿಗೆ ತರುಬಿಕೊಂಡು ಗೋಮಾಳ, ಕಿರುಕಾಡು ಮತ್ತಿತರ ಪಾಳು ಜಾಗಗಳಲ್ಲಿ ಇಡೀ  ದಿನ ಮೇಯಿಸಿ ಬೇರೆಯವರ ಹೊಲ-ಗದ್ದೆಗಳಿಗೆ ಹೋಗದಂತೆ ನೋಡಿಕೊಂಡು ಅವುಗಳನ್ನು ಅಟ್ಟಿ ತರುವುದು. ಹೇಳಲು ಇದು ಬಹಳ ಸುಲಭ. ಮಾಡಲು ವಿಪರೀತ ಕಷ್ಟದ ಕೆಲಸ.

ಯಾವ ಹೊಲಗದ್ದೆಗಳಲ್ಲಿ ಹಸಿರು ಕಂಡರೂ ಅಲ್ಲಿಗೆ ಜಿಗಿದು ಓಡುತ್ತಿದ್ದವು. ಅವುಗಳ ಹಿಂದೆ ಓಡಿ, ಅವುಗಳನ್ನು ತಡೆದು, ಹಿಂದಕ್ಕಟ್ಟಿ ತರುವುದು ಒಂದು ಸಾಹಸವೇ! ತುಡುಗು ಹೋದ ದನಗಳನ್ನು ದೊಡ್ಡಿಗೆ ಕೊಡುತ್ತಿದ್ದರು. ಅವುಗಳನ್ನು ದಂಡ ಕಟ್ಟಿ ಬಿಡಿಸಿಕೊಳ್ಳಲಾಗುತ್ತಿತ್ತು.

ಇಷ್ಟೆಲ್ಲ ಕೆಲಸಗಳಿದ್ದರೂ ದನ ಕಾಯುತ್ತಿದ್ದ ಕೆಲಸದಲ್ಲಿ ಇರುತ್ತಿದ್ದ ಮೋಜಿನ ಮುಂದೆ ಆ ಕಷ್ಟಗಳೆಲ್ಲ ತೃಣ ಮಾತ್ರ. ಕಾಡಿನಲ್ಲಿ ತಿನ್ನಲು ಸಿಗುತ್ತಿದ್ದ ಬಗೆ ಬಗೆಯ ಕಾಡು ಹಣ್ಣುಗಳು; ದಿಢೀರನೆ ನಮಗಾಗುತ್ತಿದ್ದ ವನ್ಯಜೀವಿಗಳ ದರ್ಶನ; ಕದ್ದು ಬೀಡಿ ಸೇದುವ ಮಜ; ಒಮ್ಮಮ್ಮೆ ಆಗುತ್ತಿದ್ದ ವನಭೋಜನ... ಒಟ್ಟಾರೆ `ದನ ಕಾಯುವ' ಕಾಯಕ ಒಂದು ರೋಚಕ ಅನುಭವ.

ಒಂದು ದಿನ ನಮ್ಮದೊಂದು ಕೊಬ್ಬಿ ಬೆಳೆದ ಹೋರಿ ಕರವನ್ನು ದೊಡ್ಡಿಗೆ ಒಯ್ದಿದ್ದರು. ನನಗೆ ಮನೆಯಲ್ಲಿ ಎರಡಾಣೆ (12 ಪೈಸೆ) ಕೊಟ್ಟು ಅದನ್ನು ಬಿಡಿಸಿಕೊಂಡು ಬರಲು ಕಳುಹಿಸಿದರು. ಅದನ್ನು ಬಿಡಿಸಿಕೊಂಡು, ಹಗ್ಗದ ಒಂದು ತುದಿಯನ್ನು ನನ್ನ ಸೊಂಟಕ್ಕೆ ಕಟ್ಟಿಕೊಂಡು, ಯಾವುದೋ `ಕಂದ ಪದ್ಯ'ವನ್ನು ಗುನುಗುತ್ತಾ ಎಳೆದುಕೊಂಡು ಹೊರಟೆ.

ಸ್ವಲ್ಪ ದೂರ ಸಾಗಿದ್ದೇ ತಡ, ಜೋರಾಗಿ ಓಡುತ್ತಾ ನಾಗಾಲೋಟ ಕಿತ್ತಿತು. ಅದು ಓಡುವ ರಭಸಕ್ಕೆ `ನರಪೇತಲ ನಾರಾಯಣ'ನಂತಿದ್ದ ನಾನು ಕೆಳಗೆ ಬಿದ್ದು, ಒಂದು ಮುಳ್ಳು ಗುತ್ತಿಗೆ ಸಿಕ್ಕಿಹಾಕಿಕೊಂಡೆ. ಆ ಹೋರಿ ಕರು ಜೋರಾಗಿ ಎಳೆಯುತ್ತಲೇ ಇತ್ತು. ನನ್ನ ಮೈಯಲ್ಲಾ ತರಚಿಕೊಂಡು ರಕ್ತಮಯವಾಗಿತ್ತು. ಸೊಂಟಕ್ಕೆ ಕಟಿದ್ದ ಹಗ್ಗ ಕಗ್ಗಂಟಾಗಿ ಬಿಚ್ಚಲು ಬರಲಿಲ್ಲ.

ನಾನು ಸತ್ತೇ ಹೋಗುವೆನೆಂಬ ಜೀವಭಯದಿಂದ ಗಟ್ಟಿಯಾಗಿ ಕಿರುಚಿದೆ. ನನ್ನ ಅರಚಾಟ-ರಂಪಾಟ ಕೇಳಿ, ಸುತ್ತಮುತ್ತ ಕೆಲಸ ಮಾಡುತ್ತಿದ್ದವರೆಲ್ಲ ಬಂದು ಕರುವನ್ನು ಹಿಡಿದೆಳೆದು ನನ್ನ ಸೊಂಟದ ಹಗ್ಗ ಬಿಚ್ಚಿ ಕಾಪಾಡಿದರು. ಈ ಸಾಹಸ ಕೃತ್ಯಕ್ಕಾಗಿ ನನಗೆ ಮನೆಯಲ್ಲಿ ಸಿಗಬಹುದಾದ `ಪೂಜೆ'ಗೆ ಹೆದರಿ ಇಡೀ ದಿನ ಕಣ್ಣಿಗೆ ಬೀಳದಂತೆ ಕಳೆದೆ.

ನಮ್ಮೂರಿನ ದನಗಳ ಬಗೆಗೆ ಕೇಳಿ ನಮ್ಮೂರಿನಲ್ಲಿ ಹಾಲಿನ ಹೊಳೆ ಹರಿಯುತ್ತಿತ್ತೆಂದು ಯಾರೂ ಭಾವಿಸಬೇಕಾಗಿಲ್ಲ. ಊರಿನಲ್ಲಿದ್ದ ಎಲ್ಲ ದನಗಳನ್ನು ಒಟ್ಟಾಗಿ ಸೇರಿಸಿ, ಊರಿನವರೆಲ್ಲ ಸೇರಿ ಹಾಲು ಕರೆದರೂ ಹೆಚ್ಚೇನೂ ಹಾಲು ಸಿಗುತ್ತಿರಲಿಲ್ಲ. ಅವು `ಮಲೆನಾಡ ಗಿಡ್ಡ' ತಳಿಯವು. ಅವು ಹಾಲು ಕೊಡುವುದಕ್ಕಿಂತ ಒದೆಯುತ್ತಿದ್ದುದೇ ಹೆಚ್ಚು.

ಮಕ್ಕಳ ತಾಯಂದಿರು ಒಂದೆರಡು ಒಳಲೆ ಹಾಲಿಗೆ ಹಸುಗಳ ಕೆಚ್ಚಲಿಗೆ ನೀರು ಎರಚಿ, ಹಾಲು ಕರೆಯಲು ಪ್ರಯತ್ನ ಮಾಡಿದರೆ, ಅವರ ಕೈಯಲ್ಲಿ ಇರುತ್ತಿದ್ದ ಚೆಂಬು ಹಸುವಿನ ಒದೆತಕ್ಕೆ ಒಳ್ಳೆಯ ಫುಟ್‌ಬಾಲ್ ಆಟಗಾರ ಒದೆದ ಚೆಂಡಿನಂತೆ ಮಾಯವಾಗುತ್ತಿತ್ತು. ಆ ಮಕ್ಕಳ ತಾಯಂದಿರ ಪರದಾಟ ನೋಡಿದರೆ ಕನಿಕರ ಉಂಟಾಗುತ್ತಿತ್ತು. ನಮ್ಮೂರಿನ ಜನ, ದನಗಳಿಂದ ಸಿಗುತ್ತಿದ್ದ ಸಗಣಿಯಿಂದಲೇ ತೃಪ್ತಿಪಟ್ಟುಕೊಳ್ಳಬೇಕಾಗಿತ್ತು. ಈಗ ಗೋಮಾಳಗಳಿಲ್ಲದೆ ದನಕರುಗಳಿಗೆ ಮೇಯಲು ಜಾಗವೇ ಇಲ್ಲ. ದನ ಕಾಯುವ ಕಾಯಕವೂ ಇಲ್ಲವಾಗಿದೆ.

ನನ್ನ ಇಷ್ಟೆಲ್ಲ ಅನುಭವಗಳ ಯಾವ ಪೂರ್ವ ಮಾಹಿತಿಯೂ ಇಲ್ಲದ ಸರ್ಕಾರ ನನ್ನನ್ನು ಹಾಸನದ  ಹಾಲು ಉತ್ಪಾದಕರ ಒಕ್ಕೂಟಕ್ಕೆ ವ್ಯವಸ್ಥಾಪಕ ನಿರ್ದೇಶಕನನ್ನಾಗಿ ನೇಮಿಸಿತ್ತು. ಸೋಮವಾರಪೇಟೆಯಲ್ಲಿ ಗುಂಡೂರಾಯರ ಚುನಾವಣಾ `ಬಿಸಿ' ಅನುಭವಿಸಿದ ಮೇಲೆ ಬಡ್ತಿ ಪಡೆದು ನೇರವಾಗಿ ಕ್ಷೀರ ಸಮುದ್ರಕ್ಕೆ ಜಿಗಿದೆ.

ನಾವು ಒಟ್ಟು ಮೂರು ಜನ ಅಧಿಕಾರಿಗಳು ಬಡ್ತಿ ಪಡೆದು ಕೆಎಂಎಫ್‌ಗೆ ನಿಯೋಜನೆಗೊಂಡಿದ್ದೆವು. ನನ್ನನ್ನು ಹಾಸನಕ್ಕೆ, ಸಿದ್ದಯ್ಯನನ್ನು ತುಮಕೂರಿಗೆ ಮತ್ತು ದೇವೇಂದ್ರನ್‌ನನ್ನು ಬೆಂಗಳೂರಿಗೆ ವರ್ಗಾಯಿಸಿದರು. ಮೂಲತಃ ಬೇಲೂರಿನ ಹುಡುಗನಾದ ನನಗೆ ತವರು ಜಿಲ್ಲೆಯಲ್ಲೇ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು.

ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮೀನಾಕ್ಷಿ ಸುಂದರಂ, ಕ್ಷೀರ ಕ್ಷೇತ್ರದಲ್ಲಿ ಪರಿಣತಿ ಪಡೆಯಲು ಸಿದ್ದಯ್ಯ, ದೇವೇಂದ್ರನ್ ಹಾಗೂ ನನ್ನನ್ನು ಗುಜರಾತಿನ ಅಮೂಲ್‌ಗೆ ಕಳುಹಿಸಿಕೊಟ್ಟರು. ಅಲ್ಲಿ ಡಾ. ಕುರಿಯನ್ ಮಾಡಿದ ಕ್ಷೀರ ಕ್ರಾಂತಿ, ಸಂಸ್ಥೆಯ ಶಿಸ್ತು, ನೌಕರರ ಬದ್ಧತೆ ನೋಡಿ ನಾವು ದಂಗಾದೆವು.

ಅಲ್ಲಿಯ ವಿವಿಧ ತಳಿಯ ರಾಸುಗಳು, ಹಾಲಿನ ಸೊಸೈಟಿಗಳು, ಅವುಗಳು ಸಂಗ್ರಹಿಸುತ್ತಿದ್ದ ಹಾಲಿನ ಪ್ರಮಾಣ, ಹೈನುಗಾರಿಕೆಯಿಂದಾದ ಗ್ರಾಮೀಣ ಅಭಿವೃದ್ಧಿ... ಇವುಗಳನ್ನೆಲ್ಲ ನೋಡಿ ಕರ್ನಾಟಕದ ಹಳ್ಳಿಗಳ ಹೈನುಗಾರಿಕೆ ನೆನೆದು ಖಿನ್ನನಾದೆ. ಅಮೂಲ್‌ನಲ್ಲಿ ನಾವು ಇಡುತ್ತಿದ್ದ ಪ್ರತಿ ಹೆಜ್ಜೆಯೂ ನಮ್ಮನ್ನು ಪುಳಕಿತರನ್ನಾಗಿ ಮಾಡುತ್ತಿತ್ತು. ಒಂದೊಂದು ಹೆಜ್ಜೆಯಲ್ಲೂ ಒಂದೊಂದು ಕಥೆ. ತಮ್ಮ ಜೀವಿತ ಕಾಲದಲ್ಲೇ ದಂತಕಥೆಯಾದ ಕುರಿಯನ್ ಅವರು ನಮಗೆ ಆದರ್ಶಪ್ರಾಯರಾದರು, ಸ್ಫೂರ್ತಿಯಾದರು.

ಹಾಸನದ ಕೆಎಂಎಫ್ ಘಟಕವೆಂದರೆ ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಈ ಮೂರು ಜಿಲ್ಲೆಗಳನ್ನು ಅದು ಒಳಗೊಂಡಿತ್ತು. ಆದಾಯಕ್ಕಿಂತ ಖರ್ಚು ಹೆಚ್ಚಾಗಿದ್ದ ಈ ಘಟಕ ಆಗ ಸಂಪೂರ್ಣವಾಗಿ ಅಯೋಮಯವಾಗಿತ್ತು. ಆದಾಯಕ್ಕಿಂತ ಖರ್ಚು ಹೆಚ್ಚಾಗಿತ್ತು. ಹೇಗಾದರೂ ಅದನ್ನು ಸರಿಪಡಿಸಬೇಕೆಂಬ ಚಿಂತೆ ಕಾಡುತ್ತಿತ್ತು.

ಬೆಳಿಗ್ಗೆ ಐದಕ್ಕೆ ಎದ್ದು ಒಐಸಿ (ಆಫೀಸರ್ ಇನ್‌ಚಾರ್ಜ್) ಡಾ. ಗುಪ್ತಾ ಹಾಗೂ ಇನ್ನಿತರ ಅಧಿಕಾರಿಗಳೊಂದಿಗೆ ಒಂದು ದಿನ ಸಕಲೇಶಪುರ, ಮತ್ತೊಂದು ದಿನ ಬಾಳೆಹೊನ್ನೂರು, ಮಗದೊಂದು ದಿನ ಸೋಮವಾರಪೇಟೆ... ಹೀಗೆ ಲೆಕ್ಕ ಇಲ್ಲದಷ್ಟು ಊರು-ಕೇರಿಗಳನ್ನು ಆ ದಿನಗಳಲ್ಲಿ ಸುತ್ತಿದ್ದೆ. ಹಳ್ಳಿಗಳಿಗೆ ಹೋದೊಡನೆ ಸೀದಾ ರೈತರ ಮನೆಗಳ ಕೊಟ್ಟಿಗೆಗೆ ಭೇಟಿ ನೀಡುತ್ತಿದ್ದೆ.

ಹಾಲು ಕರೆಯಲು ಹಸುವಿನ ಕೆಚ್ಚಲು ತೊಳೆಯುತ್ತಿದ್ದ ರೈತರನ್ನು, ಹಸುವಿನ ತಳಿ ಯಾವುದು, ಹಾಲು ಎಷ್ಟು ಕೊಡುತ್ತದೆ, ಹಸು ಗರ್ಭ ಧರಿಸಿದೆಯಾ, ಆರೈಕೆ ಹೇಗೆ ನಡೆದಿದೆ, ಯಾವ ಪೌಷ್ಟಿಕ ಆಹಾರ ಕೊಡಲಾಗುತ್ತಿದೆ ಇವೇ ಮೊದಲಾದ ಮಾಹಿತಿ ಪಡೆಯುತ್ತಿದ್ದೆ. ರೈತರು ಅವರ ಅನುಭವದಿಂದ ಗಳಿಸಿದ ಜ್ಞಾನ, ಜೊತೆಯಲ್ಲಿ ಇರುತ್ತಿದ್ದ ಅಧಿಕಾರಿಗಳಿಗಿಂತ ಹೆಚ್ಚಿರುತ್ತಿತ್ತು. ಮನೆ ಮಕ್ಕಳೆಲ್ಲ ಸೇರಿ ಪ್ರೀತಿ, ಶ್ರದ್ಧೆಯಿಂದ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ದೃಶ್ಯ ಇಂದಿಗೂ ಹಸಿರಾಗಿದೆ. ಈ ರೈತ ಕುಟುಂಬಗಳನ್ನು ನೋಡಿ ನನಗೆ ಮನ ತುಂಬಿ ಬರುತ್ತಿತ್ತು.

ಒಕ್ಕೂಟದ ವಾಹನಗಳೆಲ್ಲ ನಿತ್ಯ ರಿಪೇರಿಗೆ ಬರುತ್ತಿದ್ದವು. ಡೀಸೆಲ್ ಸಹ ಇದ್ದಕ್ಕಿದ್ದಂತೆ ಖಾಲಿ ಆಗುತ್ತಿತ್ತು. ಕಚೇರಿಯಲ್ಲಿ ದೂರವಾಣಿ ಸದ್ದು ಮಾಡಿದರೆ ಸಾಕು, ಅದು ವಾಹನ ಕೆಟ್ಟಿದೆ ಎನ್ನುವ ಸುದ್ದಿಯನ್ನೇ ತಂದಿರುತ್ತಿತ್ತು.ಅವುಗಳ ಚಾಲಕರನ್ನು ನಿಯಂತ್ರಿಸುವುದೇ ಕಷ್ಟವಾಗಿತ್ತು. ರಾಜಕೀಯ ಪಕ್ಷಗಳ ಸ್ಥಳೀಯ ಕಾರ್ಯಕರ್ತರು ಒಕ್ಕೂಟದ ವಾಹನಗಳನ್ನು ಬಳಸಿಕೊಳ್ಳುತ್ತಿದ್ದ ಗುಮಾನಿ ಬೇರೆ ಇತ್ತು. ನನ್ನ ವಾಹನ ಚಾಲಕ ರಾಮಚಂದ್ರ ದಕ್ಷ ಹಾಗೂ ಪ್ರಾಮಾಣಿಕನಾಗಿದ್ದ. ನನ್ನ ಸಮಸ್ಯೆಗೆ ಅವನಿಂದ ಪರಿಹಾರ ಕೇಳಿದೆ.

ಒಕ್ಕೂಟದ ವಾಹನಗಳಿಗೆ ಸಂಬಂಧಿಸಿದಂತೆ ನಡೆಯುತ್ತಿದ್ದ ಅವ್ಯವಹಾರಗಳ ಬಗೆಗೆ ನನಗೆ ಮಾಹಿತಿ ನೀಡಿದ. `ಬಾಡಿಗೆಗೆ ವಾಹನ ತೆಗೆದುಕೊಂಡು ಓಡಿಸಿದರೆ, ಆ ಖರ್ಚು ಒಕ್ಕೂಟದ ವಾಹನಗಳ ಖರ್ಚಿನ ಅರ್ಧದಷ್ಟು ಆಗಬಹುದು' ಎಂದ. ಅವನು ಆ ಸಲಹೆಯನ್ನು ಬರೀ ಮಾತಿಗಾಗಿ ಹೇಳಿದ್ದ. ನಾನು ಮಾತ್ರ ಅವನ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದೆ. `ನಮ್ಮ ಒಕ್ಕೂಟದ ಚಾಲಕರು ವಾಹನ ನಿಲ್ಲಿಸಿ ಒಂದು ತಿಂಗಳು ಮನೆಯಲ್ಲಿರಬೇಕು. ಅವರಿಗೆ ಪುಕ್ಕಟೆ ಸಂಬಳ ಕೊಡಲಾಗುವುದು ಎಂದು  ತಿಳಿಸಿದೆ.

ಅವರೆಲ್ಲ ಖುಷಿಯಿಂದಲೇ ಒಪ್ಪಿದರು. ಗುತ್ತಿಗೆ ವಾಹನ ಪಡೆದು ಕೆಲಸ ನಿರ್ವಹಿಸಿದೆ. ತಿಂಗಳಾಂತ್ಯದಲ್ಲಿ ಲೆಕ್ಕ ಹಾಕಿದಾಗ ಒಕ್ಕೂಟದ ವಾಹನಗಳ ನಿರ್ವಹಣೆ ಖರ್ಚಿನ ಅರ್ಧ ಮೊತ್ತದಲ್ಲಿ ಬಾಡಿಗೆ ವಾಹನಗಳಿಂದ ಎಲ್ಲ ಕೆಲಸಗಳು ಸುಗಮವಾಗಿ ನಡೆದಿದ್ದವು. ಇದಾದ ಮೇಲೆ ಆಡಳಿತದಲ್ಲಿ ಹಂತಹಂತವಾಗಿ ಶಿಸ್ತು ಬಂತು. ಪರಿಸ್ಥಿತಿ ನಿಧಾನವಾಗಿ ಸುಧಾರಿಸತೊಡಗಿತು.

ಈ ಮಧ್ಯೆ ಜಿಲ್ಲೆಯ ವಿವಿಧೆಡೆ ಘಟಕಗಳನ್ನು ಸ್ಥಾಪಿಸಲು ನೂರಾರು ಪತ್ರಗಳು ಬರುತ್ತಿದ್ದವು. ಅವುಗಳಿಗೆಲ್ಲ ಅಂದಿನ ಲೋಕೋಪಯೋಗಿ ಸಚಿವ ಎಚ್.ಡಿ. ದೇವೇಗೌಡ ಅವರ ಶಿಫಾರಸು ಇರುತ್ತಿತ್ತು. ಆ ಪತ್ರಗಳಿಗೆ ನಮ್ಮ ಐಒಸಿ ಡಾ. ಗುಪ್ತಾ ಅವರಿಂದ ಪರಿಶೀಲನೆ ನಡೆಸಿದ ಬಳಿಕ `ಸದ್ಯ ನಿಮ್ಮ ಬೇಡಿಕೆಯನ್ನು ಪರಿಶೀಲಿಸಲು ಆಗದಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ' ಎಂದು ಹಿಂಬರಹ ಬರೆದು ವಾಪಸು ಕಳುಹಿಸುತ್ತಿದ್ದೆ.

ಈ ರೀತಿಯ ಪತ್ರ ತರುತ್ತಿದ್ದವರು `ಮಂತ್ರಿಗಳ ಪತ್ರ'ಗಳಿಗೆ ನಾನು ಬೆಲೆ ಕೊಡುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಡಾ. ಕುರಿಯನ್ ಅವರಿಂದ ದೀಕ್ಷೆ ಪಡೆದಿದ್ದ ನಾನು ಇದ್ಯಾವುದಕ್ಕೂ ವಿಚಲಿತನಾಗಬಾರದೆಂದು ನಿಶ್ಚಯಿಸಿದ್ದೆ. ಒಂದು ಭಾನುವಾರದ ಮಧ್ಯಾಹ್ನ ಸಚಿವ ದೇವೇಗೌಡರು ಸಭೆ ಕರೆದಿದ್ದರು. ಜನತಾ ಪಕ್ಷದ ಜಿಲ್ಲಾ ಘಟಕದ ಅಂದಿನ ಅಧ್ಯಕ್ಷರಾದ ಡಾ. ದೊಡ್ಡೇಗೌಡರ ಮನೆಯಲ್ಲಿ ಸಭೆ ಸೇರಿತ್ತು.

ಜಿಲ್ಲೆಯ ಶಾಸಕರು, ಲೋಕೋಪಯೋಗಿ, ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಇನ್ನಿತರರು ಸೇರಿದ್ದರು. ಸಭೆ ನಡೆದ ಸ್ಥಳಕ್ಕೆ ಹೋದೊಡನೆ ವಾತಾವರಣ ಗಂಭೀರವಾಗಿದೆ ಎಂಬುದು ಅನುಭವಕ್ಕೆ ಬಂತು. ಯಾವುದೇ ಕಾರಣಕ್ಕೂ ಮಣಿಯಬಾರದು ಎಂದುಕೊಂಡೆ.

ಹಾಸನ ಜಿಲ್ಲೆಯಲ್ಲಿ 35-40 ಕಡೆ ಹಾಲಿನ ಸೊಸೈಟಿಗಳನ್ನು ಸ್ಥಾಪಿಸಬೇಕು ಎಂದು ಒಂದು ಪಟ್ಟಿ ಕೊಟ್ಟರು. ನನ್ನೊಡನೆ ಇದ್ದ ಡಾ. ಗುಪ್ತಾ ಹಾಗೂ ನಾನು ಪಟ್ಟಿ ಪರಿಶೀಲಿಸಿ 5-6 ಕಡೆ ಮಾತ್ರ ಘಟಕ ಸ್ಥಾಪಿಸಲು ಸಾಧ್ಯ, ಉಳಿದೆಡೆ ಸಾಧ್ಯವಿಲ್ಲ ಎಂದು ಹೇಳಿದೆವು. ಎಲ್ಲರ ಸಮ್ಮುಖದಲ್ಲಿ `ಮಾಡಲು ಸಾಧ್ಯವಿಲ್ಲ' ಎಂದು ಖಚಿತವಾದ ಧ್ವನಿಯಲ್ಲಿ ಹೇಳಿದ್ದು, ಮಾನ್ಯ ಸಚಿವರಿಗೆ ಹಿತವೆನಿಸಲಿಲ್ಲ. ಅವರಿಗೆ ವಿಪರೀತ ಕೋಪ ಬಂತು.

‘I say you don’t listen to me, how should I build the organization?’  ಎಂದು ಇಂಗ್ಲಿಷ್‌ನಲ್ಲಿ ರೇಗಿದರು. ಅದಕ್ಕೆ ನಾನು `ಮಾನದಂಡಗಳನ್ನು ಬದಿಗೊತ್ತಿ ಸೊಸೈಟಿಗಳನ್ನು ತೆರೆಯಲು ಸಾಧ್ಯವಿಲ್ಲ' ಎಂದು ತಿಳಿಸಿದೆ. ಅದಕ್ಕೆ, ‘If you don’t do what I say why should I be district minister I say?’ ಎಂದರು. ನಾನು ‘I don’t know’ ಎಂದುಬಿಟ್ಟೆ.

ನಮ್ಮಿಬ್ಬರ ನಡುವೆ ಏನು ಚರ್ಚೆಯಾಗುತ್ತಿದೆ ಎಂದು ಅಲ್ಲಿದ್ದ ಬಹಳ ಜನಕ್ಕೆ ಅರ್ಥವಾಗಲಿಲ್ಲ. ಮಾನ್ಯ ದೇವೇಗೌಡರು ಮತ್ತೇನನ್ನೂ ಹೇಳದೆ, `ಅವರನ್ನು ಮನೆಗೆ ಬಿಟ್ಟು ಬನ್ನಿ' ಎಂದು ಗೌರವಯುತವಾಗಿ ಮನೆಗೆ ಕಳುಹಿಸಿದರು. ಇಡೀ ರಾತ್ರಿ `ನನ್ನದು ಹದ್ದು ಮೀರಿದ ವರ್ತನೆಯೇ' ಎಂದು ಪ್ರಶ್ನಿಸಿಕೊಂಡೆ. `ಇಲ್ಲ ಸರಿಯಾದ ಕೆಲಸವನ್ನೇ ಮಾಡಿದ್ದೇನೆ' ಎಂದುಕೊಂಡು ಚೆನ್ನಾಗಿ ನಿದ್ರೆ ಮಾಡಿದೆ.

ಮಾರನೇ ದಿನ ಡಿಪಿಎಆರ್ ಉಪ ಕಾರ್ಯದರ್ಶಿ ಶಮೀಮ್ ಬಾನು ದೂರವಾಣಿ ಕರೆ ಮಾಡಿ `ನಿಮ್ಮನ್ನು ವರ್ಗಾವಣೆ ಮಾಡಲಾಗುತ್ತಿದೆ. ಬೇರೆ ಯಾವ ಊರಿಗೆ ಹೋಗಬಯಸುತ್ತೀರಿ' ಎಂದು ಪ್ರಶ್ನಿಸಿದರು. ನಾನು ಹಿಂದಿನ ದಿನ ‘I don’t know’ ಎಂದಿದ್ದರ ಪರಿಣಾಮ 24 ಗಂಟೆಯೊಳಗೆ ತಿಳಿದಿತ್ತು.

ಆ ಸಮಯದಲ್ಲಿ ದುಗುಡದಲ್ಲಿದ್ದ ನನಗೆ ಚಿರಂಜೀವಿ ಸಿಂಗ್ ಮತ್ತು ಮೀನಾಕ್ಷಿ ಸುಂದರಂ ಸಾಂತ್ವನ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹೆಚ್ಚುವರಿ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಯಿತು. ಸಾಹಿತ್ಯಾಸಕ್ತನಾಗಿದ್ದ ನನಗೆ ಪ್ರೀತಿಯಿಂದ ಕೆಲಸ ಮಾಡಲು ಮತ್ತೊಂದು ಒಳ್ಳೆಯ ಅವಕಾಶವೆಂದು ಭಾವಿಸಿದೆ.

ಬೆಂಗಳೂರಿಗೆ ಬಂದ ಮೇಲೆ ದೇವೇಗೌಡರು ನನ್ನನ್ನು ತಮ್ಮ ಕಚೇರಿಗೆ ಕರೆಸಿದರು. ವಿಷಯ ಏನು ಅಂತ ನನಗೆ ತಿಳಿದಿರಲಿಲ್ಲ. ಆದರೂ ಗೌಡರನ್ನು ಹೋಗಿ ಭೇಟಿ ಮಾಡಿದೆ. ಪ್ರೀತಿಯಿಂದ ಮಾತನಾಡಿಸಿದ ಅವರು `ಎಲ್ಲಿ ಉಳಿದುಕೊಂಡಿದ್ದೀರಿ' ಎಂದು ಕೇಳಿದರು. `ಗೆಸ್ಟ್‌ಹೌಸ್‌ನಲ್ಲಿ ಸರ್' ಎಂದು ಹೇಳಿದೆ.

ತಕ್ಷಣ ವಸತಿ ಗೃಹವೊಂದನ್ನು ಅವರ ವಿವೇಚನಾ ಕೋಟಾದಿಂದ ನನಗೆ ಹಂಚಿಕೆ ಮಾಡಿದರು. ಅವರಿಗೆ ನನ್ನ ಮೇಲಿದ್ದ ಕೋಪ ಆರಿದ್ದನ್ನು ಕಂಡು ನನಗೆ ಸ್ವಲ್ಪ ಸಮಾಧಾನವಾಯಿತು. ಆಗ ಸಿಟ್ಟಿನಿಂದ ರೇಗಿ ವರ್ಗಾವಣೆ ಮಾಡಿಸಿ, ಈಗ ಪ್ರೀತಿಯಿಂದ ಕರೆದು ವಾಸವಿರಲು ಮನೆ ಕೊಟ್ಟಿದ್ದರು!

3 ದಶಕಗಳಲ್ಲಿ ಕೆಎಂಎಫ್ ನಿಜವಾಗಿಯೂ ಉತ್ತಮ ಸಾಧನೆ ಮಾಡಿದೆ. ಲಕ್ಷಾಂತರ ರೈತರ ಬದುಕನ್ನು ಹಸನಾಗಿಸಿದೆ. ಅಭಿವೃದ್ಧಿ ಕೆಲಸಕ್ಕೆ ಸುದ್ದಿಯಾಗಬೇಕಾಗಿದ್ದ ಈ ಸಂಸ್ಥೆ, ಕ್ಷುಲ್ಲಕ ರಾಜಕೀಯ ಕಾರಣಗಳಿಗೆ ಮತ್ತು ಕೆಟ್ಟ ಸ್ವಪ್ರತಿಷ್ಠೆ ವಿಷಯಗಳಿಗೆ ಸದಾ ಸುದ್ದಿಯಲ್ಲಿರುತ್ತದೆ. ಅದರ ಬದಲಾಗಿ ಅಭಿವೃದ್ಧಿ ಕಾರಣಗಳಿಗೆ ಕೆಎಂಎಫ್ ಸುದ್ದಿಯಾಗಬೇಕು.

ಹೈನುಗಾರಿಕೆಯಲ್ಲಿ ಹಿಂದುಳಿದ ಉತ್ತರ ಕರ್ನಾಟಕ ಮತ್ತು ಮಲೆನಾಡಿನ ಕೆಲ ಪ್ರಾಂತಗಳಿಗೆ ಹೈನುಗಾರಿಕೆ ಅಭಿವೃದ್ಧಿಗೆ ವಿಶೇಷ ಕ್ರಿಯಾಯೋಜನೆ ಜಾರಿಗೊಳಿಸಬೇಕು. ರಾಜ್ಯದ ಹಲವೆಡೆ ಪಶು ವೈದ್ಯಕೀಯ ಸೇವೆ ದಯನೀಯ ಸ್ಥಿತಿಯಲ್ಲಿದೆ. ಆ ಸಮಸ್ಯೆ ಬಗೆಹರಿಸಿ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಬಲ ತುಂಬುವ ಕೆಲಸ ಆಗಬೇಕು.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT