ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಆರ್ಥಿಕ ಚಿತ್ರಣ ಆಶಾದಾಯಕವೇ?

Last Updated 4 ಜೂನ್ 2013, 19:59 IST
ಅಕ್ಷರ ಗಾತ್ರ

ದೇಶದ ಅರ್ಥ ವ್ಯವಸ್ಥೆಗೆ ಸಂಬಂಧಿಸಿದಂತೆ ಪ್ರಕಟವಾಗಿರುವ ಎರಡು ವರದಿಗಳು ಸಮ್ಮಿಶ್ರ ಚಿತ್ರಣ ನೀಡಿವೆ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆಯ (ಒಇಸಿಡಿ) ಸಂಶೋಧನಾ ವಿಭಾಗವು ದೇಶದ ಅರ್ಥವ್ಯವಸ್ಥೆಯ ದೀರ್ಘಾವಧಿ ಚಿತ್ರಣ ವರ್ಣರಂಜಿತವಾಗಿದೆ ಎಂದು ಹೇಳಿದೆ. ಆದರೆ, ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದ ಅರ್ಥಿಕ ಸ್ಥಿತಿಗತಿಗಳ ತ್ರೈಮಾಸಿಕ ಮತ್ತು ವಾರ್ಷಿಕ ಸಾಧನೆಯ ವರದಿ ಪರಾಮರ್ಶಿಸಿದಾಗ ಭವಿಷ್ಯ ಇನ್ನಷ್ಟು ನಿರಾಶಾದಾಯಕವಾಗಿ ಕಾಣುತ್ತಿದೆ. ಈ ಆರ್ಥಿಕ ದುಃಸ್ಥಿತಿ ಕಳೆದ ದಶಕದಲ್ಲೇ ಅತ್ಯಂತ ಹೀನಾಯ ಸ್ಥಿತಿಯದು ಎನ್ನಬೇಕಾಗಿದೆ.

ಎರಡರ ಕಾಲಾವಧಿ ಭಿನ್ನವಾಗಿರುವುದರಿಂದ ಈ ಎರಡೂ ವರದಿಗಳು ಒಂದಕ್ಕೊಂದು ಹೊಂದಿಕೆಯಾಗದ ವಿಚಾರಗಳು ಎಂದೂ ಹೇಳಬಹುದು. ಅಲ್ಪಾವಧಿಯ ಸಾಧನೆ ಹೇಗಿದೆ ಎಂಬುದೇ ಇಲ್ಲಿ ಹೆಚ್ಚು ಮಹತ್ವದ ಸಂಗತಿಯಾಗಿದೆ. ಅಲ್ಪಾವಧಿಯ ಸಾಧನೆಗಳು ಕಳಪೆ ಎಂದಾದರೆ ದೀರ್ಘಾವಧಿಯಲ್ಲಿ ಆರ್ಥಿಕ ಸ್ಥಿತಿಗತಿ ಉತ್ತಮವಾಗಿರಲು ಸಾಧ್ಯವಿಲ್ಲ ಎಂದು ನಿಖರವಾಗಿ ಹೇಳುವಂತಹ ರಾಕೆಟ್ ವಿಜ್ಞಾನವೂ ಇದಲ್ಲ.

ಪ್ರತಿ ತ್ರೈಮಾಸಿಕದಲ್ಲೂ ಆರ್ಥಿಕ  ಸ್ಥಿತಿಗತಿ ಕುಸಿತದ ಹಾದಿಯಲ್ಲೇ ಮುಂದುವರಿದರೆ ಅದು ಆತಂಕದ ಸಂಗತಿಯಲ್ಲದೆ ಮತ್ತೇನೂ ಅಲ್ಲ. ಈ ಇಳಿಮುಖದ ಅಂತಿಮ ಹಂತ ಹೇಗಿರುತ್ತದೆ ಎಂದು ಸ್ಪಷ್ಟವಾಗಿ ತಿಳಿಸದೇ  ಜಾರಿಗೊಳ್ಳುವ ಪರಿಸ್ಥಿತಿ ಇದೆ. `ಕುರುಡರ ರಾಜ್ಯಕ್ಕೆ ಒಕ್ಕಣ್ಣನೇ ರಾಜ' ಎಂಬ ಮಾತು ಇದೆ. ಜಗತ್ತಿನ ಬಹುತೇಕ ದೇಶಗಳ ಅರ್ಥ ವ್ಯವಸ್ಥೆಗಳು ಸದ್ಯಕ್ಕೆ ಅತ್ಯಂತ ಕೆಟ್ಟ ಸ್ಥಿತಿಯಲ್ಲಿವೆ. ವಸ್ತುಸ್ಥಿತಿ ಹೀಗಿರುವಾಗ, ದೇಶದ ಆರ್ಥಿಕತೆಯನ್ನು ಈಗಲೂ ಪ್ರಶಂಸಿಸಲಾಗುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.

ನನ್ನ ಪ್ರಕಾರ ನಿಜವಾದ ವಿಚಾರ ಏನೆಂದರೆ, ತನ್ನ ನಿಜವಾದ ಸಾಮರ್ಥ್ಯದ ಹತ್ತಿರದಲ್ಲಾದರೂ ಭಾರತ ಇದೆಯೇ? ಇದಕ್ಕೆ `ಇಲ್ಲ' ಎಂದೇ ಸ್ಪಷ್ಟವಾಗಿ ಉತ್ತರ ನೀಡಬೇಕಾಗುತ್ತದೆ. ಸತತ ಕುಸಿತದ ಹಾದಿಯಲ್ಲಿರುವ ಆರ್ಥಿಕ ಸ್ಥಿತಿಗತಿಗಳಿಗೆ ಏನು ಕಾರಣ  ಎಂಬುದನ್ನು ನಾವೀಗ ಗಂಭೀರವಾಗಿ ಚಿಂತಿಸಲೇಬೇಕಾಗಿದೆ. ಹಿರಿಯ ಆರ್ಥಿಕ ತಜ್ಞರು ಮತ್ತು ವಿಶ್ಲೇಷಣೆಕಾರರು  ಕೊನೆಗೂ ದೇಶದ ಅರ್ಥ ವ್ಯವಸ್ಥೆಯ ಬಗ್ಗೆ  ವಿಶ್ಲೇಷಣೆ ಮಾಡತೊಡಗಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ಹಣಕಾಸು ನಿಯತಕಾಲಿಕವೊಂದು ಭಾರತದ ಯುವಜನತೆ ಮತ್ತು ಕೈತಪ್ಪಿದ ಅವಕಾಶಗಳ ಬಗ್ಗೆ ಪ್ರಮುಖ ಲೇಖನವೊಂದನ್ನೇ ಬರೆದುಬಿಟ್ಟಿದೆ. ಜೊಳ್ಳಿನಿಂದ ಕಾಳನ್ನು ಬೇರ್ಪಡಿಸಿದಾಗ ಸಿಗುವ ಎರಡು ಪ್ರಮುಖ ಅಂಶಗಳೆಂದರೆ ನಾಯಕತ್ವ ಮತ್ತು ಭಾವನೆ. ಈ  ಎರಡೂ ಒಂದಕ್ಕೊಂದು ಸಂಬಂಧ ಹೊಂದಿರುವಂತದ್ದು ಎಂದು ಕೆಲವರು ವಾದ ಮಾಡಬಹುದಾದರೂ ಈ ಎರಡು ಸಂಗತಿಗಳೇ ಭಾರತದಲ್ಲಿ ವಿಶೇಷವಾಗಿ ಗಮನ ಸೆಳೆದಿವೆ.

ಕಳೆದ ತಿಂಗಳು ನಾನು ನನ್ನ ಈ ಅಂಕಣದಲ್ಲಿ ಮಾರ್ಗರೇಟ್ ಥ್ಯಾಚರ್ ಬಗ್ಗೆ  ಬರೆದಿದ್ದೆ. ಅವರ ಸಮರ್ಥ ನಾಯಕತ್ವದಿಂದಾಗಿ ಕುಸಿತದ ಅಂಚಿನಲ್ಲಿದ್ದ ಬ್ರಿಟನ್ನಿನ ಅರ್ಥ ವ್ಯವಸ್ಥೆ ಹೇಗೆ ಪಾರಾಯಿತು ಎಂಬುದನ್ನು ತಿಳಿಸಿದ್ದೆ. ಒಬ್ಬ ಸಮರ್ಥ ನಾಯಕನಿಂದ ದೇಶದ ಭವಿಷ್ಯವೇ ಬದಲಾದ ಅದೆಷ್ಟೋ ನಿದರ್ಶನಗಳಿವೆ. ಈ ವಿಷಯದಲ್ಲಿ ಇತಿಹಾಸ ಪುನರಾವರ್ತನೆಯಾಗುತ್ತಲೂ ಇದೆ.

ಡೆಂಗ್ ಕ್ಸಿಯಾಪಿಂಗ್ ಅವರು ಚೀನಾದಲ್ಲಿ ಅಧಿಕಾರಕ್ಕೇರುವ ಮೊದಲು ಆ ದೇಶದ ಭವಿಷ್ಯ ಡೋಲಾಯಮಾನ ಸ್ಥಿತಿಯಲ್ಲಿತ್ತು. ಈಗ ಅದು ಹೇಗೆ ಬದಲಾಗಿದೆ ಎಂಬುದನ್ನು ಬಣ್ಣಿಸಲು ಪದಗಳ ಅಗತ್ಯ ಇಲ್ಲ. ಹೆಚ್ಚೇನೂ ದೂರ ಹೋಗಬೇಕಿಲ್ಲ, 1990ರ ದಶಕದಲ್ಲಿ ದೇಶದ ಅರ್ಥ ವ್ಯವಸ್ಥೆಯ ಪರಿಸ್ಥಿತಿ ಶೋಚನೀಯವಾಗಿತ್ತು. ಅಂದಿನ ನಾಯಕತ್ವ ಸಮರ್ಥ ನಿರ್ಧಾರ ಕೈಗೊಂಡಿದ್ದರಿಂದ ದೇಶದ ಆರ್ಥಿಕತೆ ಅಭೂತಪೂರ್ವ ಬದಲಾವಣೆ ಕಾಣುವಂತಾಯಿತು.

ಪಿ.ವಿ.ನರಸಿಂಹ ರಾವ್ ಅವರ ಸಮರ್ಥ ನಾಯಕತ್ವ ಮತ್ತು ಡಾ.ಮನಮೋಹನ್ ಸಿಂಗ್ ಅವರ ಪರಿಣತಿ ಅದ್ಭುತವನ್ನೇ ಮಾಡಿಬಿಟ್ಟಿತು. ಆರ್ಥಿಕ ಉದಾರೀಕರಣದ ಕ್ರಮಗಳ ಫಲವಾಗಿ ದೇಶವು ಅಭಿವೃದ್ಧಿ ಮತ್ತು ಸಮೃದ್ಧಿಯಲ್ಲಿ ನಿಜವಾದ ಸುವರ್ಣ ಅವಧಿಯನ್ನೇ ದಾಖಲಿಸಿತು. ದುರದೃಷ್ಟದ ಸಂಗತಿಯೆಂದರೆ ಈಗಿನ ನಾಯಕತ್ವಕ್ಕೆ ಆರ್ಥಿಕ ಸಂಕಷ್ಟ ನಿವಾರಿಸುವ ಯಾವ ಸುಳಿವೂ ಸಿಕ್ಕಿದಂತಿಲ್ಲ.

ಜತೆಗೆ, ದಿಟ್ಟ ನಿರ್ಧಾರ ಕೈಗೊಳ್ಳುವ ಎದೆಗಾರಿಕೆಯೂ ಇದ್ದಂತಿಲ್ಲ. ಡಾ.ಮನಮೋಹನ್ ಸಿಂಗ್ ಅವರ ಬಳಿ ಈಗ ಈ ಮೊದಲಿಗಿಂತ ಅಧಿಕ ಅಧಿಕಾರ ಇದ್ದರೂ ಅವರು ಶಕ್ತಿಹೀನರಂತೆ ಕಾಣಿಸುತ್ತಿದ್ದಾರೆ. ಒಬ್ಬ ನಾಯಕನಾಗಿ ಮಾತ್ರವಲ್ಲ, ಆರ್ಥಿಕ ತಜ್ಞನಾಗಿ ಸಹ ಅವರು ದೇಶವನ್ನು ತಲೆ ತಗ್ಗಿಸುವಂತೆ ಮಾಡಿದ್ದಾರೆ. ಇದಕ್ಕಾಗಿಯೇ ಅವರನ್ನು ಎಲ್ಲರೂ ಗೇಲಿ ಮಾಡುವಂತಾಗಿದೆ. ಇಂತಹ ಮಹಾನ್ ಆರ್ಥಿಕ ತಜ್ಞ ಅತ್ಯುತ್ತಮ ಅವಕಾಶವನ್ನು ಕೈಚೆಲ್ಲಿ, ಯಾವುದೇ ಸಾಧನೆ ಮಾಡದೆ ಅಧಿಕಾರವನ್ನು ಕೈಯಲ್ಲಿ ಇಟ್ಟುಕೊಂಡಿರುವುದಾದರೂ ಏಕೆ ಎಂದು ಅನೇಕರು ಪ್ರಶ್ನಿಸುವುದರಲ್ಲೂ ಅರ್ಥವಿದೆ. ಅವರ ಬಗ್ಗೆ ಇತಿಹಾಸ ಮತ್ತು ಭವಿಷ್ಯದ ಪೀಳಿಗೆ ಬಹಳ ಕಠೋರವಾಗಿ ವರ್ತಿಸಿದರೆ ಅಚ್ಚರಿ ಪಡಬೇಕಾಗಿಲ್ಲ.

ದೇಶದ ಅರ್ಥ ವ್ಯವಸ್ಥೆ ಇನ್ನೂ ಪ್ರಗತಿಯ ಶೈಶಾವಸ್ಥೆಯಲ್ಲೇ ಇದೆ. ಆರ್ಥಿಕ ಸುಧಾರಣೆಯ ಫಲಗಳು ಕಂಡುಬಂದಿದ್ದರೂ, ಇನ್ನಷ್ಟು ಆರ್ಥಿಕ ಸುಧಾರಣೆ ಮಾಡುವುದಕ್ಕೆ ಇಲ್ಲಿ ಅಸೀಮ ಅವಕಾಶಗಳು ಇದ್ದೇ ಇವೆ. ಇದೇ ಅವಕಾಶ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇಲ್ಲ ಎಂಬುದನ್ನು ಗಮನಿಸಬೇಕು.

ಭಾರಿ ಜನಸಂಖ್ಯೆಯಿಂದ ಉದ್ಭವವಾಗುವ ಬೇಡಿಕೆಗಳು, ಮಧ್ಯಮ ವರ್ಗದವರ ಆಶೋತ್ತರಗಳು, ಯುವ ಪೀಳಿಗೆಯ ಹೆಚ್ಚಳ ಅಭೂತಪೂರ್ವ ಸಾಮರ್ಥ್ಯವನ್ನು ದೇಶಕ್ಕೆ ತಂದುಕೊಟ್ಟಿದೆ. ಇಂತಹ ಸ್ಥಿತಿಯಲ್ಲಿ ಪ್ರತಿಯೊಂದು ಉತ್ಪನ್ನ ಮತ್ತು ಸೇವೆಯೂ ಬಹಳ ಸ್ಥಿತಿಸ್ಥಾಪಕ ಗುಣ ಉಳ್ಳದ್ದಾಗಿರುತ್ತದೆ. ಅನಗತ್ಯ ತಪ್ಪುಗಳನ್ನು ಮಾಡದೆ ಸರ್ಕಾರ ಕೇವಲ ಬೇಡಿಕೆ ಈಡೇರಿಸುವ ಕೆಲಸವನ್ನಷ್ಟೇ ಮಾಡಿದರೂ ಸಾಕು, ಆರ್ಥಿಕ ಸ್ಥಿತಿ ಮಿಂಚುವುದು ನಿಶ್ಚಿತ.

ಆರ್ಥಿಕ ಪುನಃಶ್ಚೇತನದ ವಿಚಾರ ಬಂದಾಗ ಇನ್ನೊಂದು ಆಯಾಮವನ್ನೂ ನೋಡಬೇಕಾಗುತ್ತದೆ. ಆರ್ಥಿಕ ಸ್ಥಿತಿಯ ಪ್ರಗತಿಗೆ ಜನರ ಉಳಿತಾಯ ಅಗತ್ಯ, ಇಂತಹ ಉಳಿತಾಯದಿಂದ ಉತ್ತೇಜನ ಪಡೆದು ಕೆಲವು ಉದ್ಯಮಿಗಳು ಬಂಡವಾಳ ತೊಡಗಿಸಿ ಆರ್ಥಿಕ ಪ್ರಗತಿಗೆ ಕಾರಣರಾಗುತ್ತಾರೆ. ಸಹಜ ಸ್ಥಿತಿಯಲ್ಲಿ ಇದೆಲ್ಲ ಸರಿ. ಆದರೆ ಇದು `ಭಾವನೆ' ವಿಚಾರಕ್ಕೆ ಬಂದಾಗ ಅರ್ಥಹೀನವಾಗಿಬಿಡುತ್ತದೆ.
ಇತರ ಆರ್ಥಿಕ ಸಿದ್ಧಾಂತಗಳಂತೆ ಇದನ್ನು ವ್ಯಾಖ್ಯಾನಿಸುವುದು ಕಷ್ಟವಾದರೂ, ಭಾವನೆ ಎಂಬುದು ನಿರ್ಣಾಯಕ ಪಾತ್ರ ವಹಿಸುತ್ತದೆ.

ಸವಲತ್ತು ಬಯಸುವುದು ಮತ್ತು ಆಶಾಭಾವನೆಯಿಂದ ಇರುವ ಸನ್ನಿವೇಶದಲ್ಲಿ ಉದ್ಯಮದ ಅಪಾಯ ಮೈಮೇಲೆ ಎಳೆದುಕೊಳ್ಳುವ ಸಾಮರ್ಥವೂ ಹೆಚ್ಚುತ್ತದೆ. ದುರದೃಷ್ಟದ ಸಂಗತಿಯೆಂದರೆ, ಕಳೆದ ನಾಲ್ಕೈದು ವರ್ಷಗಳಲ್ಲಿ ಈ ಹಿಂದೆ ಎಂದೂ ಕಂಡಿರದಂತಹ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಸ್ವಾರ್ಥ ಬಂಡವಾಳಶಾಹಿ ಮನೋಭಾವ ಎಲ್ಲೆಡೆ ತುಂಬಿಬಿಟ್ಟಿದೆ. ಇದರಿಂದ ಉದ್ಯಮಿಗಳು ಮತ್ತು ಹೂಡಿಕೆದಾರರ ಆತ್ಮವಿಶ್ವಾಸವೇ ಅಲುಗಾಡುವಂತಾಗಿದೆ.

ಸ್ವಾತಂತ್ರ್ಯಾನಂತರ ಕಟ್ಟಿ ಬೆಳೆಸಿದಂತಹ ಮಹಾನ್ ಸಂಸ್ಥೆಗಳನ್ನು ಕೆಲವು ಸ್ಥಾಪಿತ ಹಿತಾಸಕ್ತಿಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಅನಿಶ್ಚಿತತೆ ಮತ್ತು ಹತಾಶ ವಾತಾವರಣ ಎಲ್ಲೆಡೆ ತುಂಬಿಬಿಟ್ಟಿದೆ. ಇಂತಹ ವಿದ್ಯಮಾನಗಳು ಮೇಲಿಂದ ಮೇಲೆ ನಡೆಯುತ್ತಿರುವುದರಿಂದಲೇ ಆಡಳಿತ ನಡೆಯುತ್ತಿದೆಯೇ ಎಂದು ಪ್ರಶ್ನಿಸುವಂತಾಗಿದೆ.  ಸರ್ಕಾರ ತನ್ನ ತಪ್ಪೇನಿಲ್ಲ ಎಂದು ಹೇಳುತ್ತಿದ್ದರೂ, ಸಮರ್ಥ ಆರ್ಥಿಕ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಅದು ಸೋತಿದೆ ಎಂದೇ ಹೇಳಬೇಕು. ಜನಸಾಮಾನ್ಯರು ಹತಾಶರಾಗಿದ್ದಾರೆ, ಉದ್ಯಮಿಗಳ ಆತ್ಮವಿಶ್ವಾಸ ಕುಸಿದು ಹೋಗಿದೆ. ಪರಿಸ್ಥಿತಿ ತೀವ್ರಗತಿಯಲ್ಲಿ ಬದಲಾಗದೆ ಇದ್ದರೆ, ದೇಶ ಜುಗುಪ್ಸೆಯೊಂದಿಗೆ ತನ್ನ ಇನ್ನಷ್ಟು ಅಧೋಗತಿಯನ್ನು ಕಾಣುತ್ತಲೇ ಹೋಗಬೇಕಾಗಬಹುದು.

ಲ್ಯಾಟಿನ್ ಅಮೆರಿಕದ ದೇಶಗಳಿಗೆ ಪ್ರವಾಸ ಮಾಡಿ ನಾನು ಇತ್ತೀಚೆಗಷ್ಟೇ ದೇಶಕ್ಕೆ ಮರಳಿದ್ದೇನೆ. `ಬ್ರಿಕ್ಸ್' ಸಮೂಹದ ಎಲ್ಲಾ ದೇಶಗಳಿಗೆ ನಾನು ಭೇಟಿ ನೀಡಿದ್ದೇನೆ. ಈ ಗುಂಪಿನಲ್ಲಿ ದೇಶ ಹೇಗೆ ಸ್ಥಾನ ಪಡೆಯಿತು ಎಂಬ ಅಚ್ಚರಿಯೂ ಕೆಲವೊಮ್ಮೆ ನನಗಾಗುವುದುಂಟು.
ಗುಂಪಿನ `ಒಳಗೆ' ಸೇರಿಕೊಂಡಿದ್ದರೂ, ಆರ್ಥಿಕ ಅಭಿವೃದ್ಧಿ ವಿಚಾರದಲ್ಲಿ ಭಾರತವು ಇತರ ದೇಶಗಳಿಗೆ ಸರಿಸಮಾನವಾಗಿ ನಿಲ್ಲುವುದು ಸಾಧ್ಯವಿದೆಯೇ ಎಂಬ ಅಚ್ಚರಿಯೂ ನನಗಾಗುತ್ತಿದೆ. ಈ ಬಗ್ಗೆ ನಾನು ಇನ್ನೊಂದು ಬಾರಿ ವಿವರವಾಗಿ ಚರ್ಚಿಸಬೇಕು ಎಂದುಕೊಂಡಿದ್ದರೂ, ಈ ವಿಷಯದಲ್ಲಿ ನನ್ನ ಪುಟ್ಟ ಅನಿಸಿಕೆಯನ್ನು ಇಲ್ಲಿ ನೀಡಲೇಬೇಕೆಂಬ ಅನಿವಾರ್ಯ ಸನ್ನಿವೇಶ ಸೃಷ್ಟಿಯಾಗಿಬಿಟ್ಟಿದೆ. ಅದಕ್ಕಾಗಿಯೇ ಇದರ ಉಲ್ಲೇಖ ಇಲ್ಲಿ ಮಾಡಿದೆ.

ದೇಶ ಯಾವಾಗ ಉತ್ತಮ ಆಡಳಿತದ ಬೆಳಕು ಕಂಡೀತು? ಇದೊಂದು ಕಷ್ಟಕರ ಪ್ರಶ್ನೆ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆಯ (ಒಇಸಿಡಿ) ಸಂಶೋಧನಾ ವಿಭಾಗದ (ಒಇಸಿಡಿ) ಮುನ್ನೋಟ ಮತ್ತು ಆಶಾವಾದ ನಿಜವಾಗಲಿ ಎಂದು ನಾವೆಲ್ಲ ಆಶಿಸೋಣ.

ಕೊನೆಗೊಂದು ಮಾತು: ದಕ್ಷಿಣ ಅಮೆರಿಕದಿಂದ ನಾನು ಹಿಂದಿರುತ್ತಿದ್ದಾಗ ಬೆಂಗಳೂರು ವಿಮಾನನಿಲ್ದಾಣ ರಸ್ತೆಯಲ್ಲಿ ಕೇವಲ ಇಬ್ಬರಷ್ಟೇ ಕೆಲಸ ಮಾಡುತ್ತಿದ್ದುದನ್ನು ಗಮನಿಸಿದೆ. ಬೆಂಗಳೂರಿಗರು ಇನ್ನೆಷ್ಟು ದಿನ ಇಂತಹ ತೊಂದರೆ ಅನುಭವಿಸಬೇಕು ಎಂಬ ಅನಪೇಕ್ಷಿತ ಪ್ರಶ್ನೆಯನ್ನು ನಾನು ಜನರ ಮನಸ್ಸಲ್ಲಿ ತುಂಬುತ್ತಿಲ್ಲ. ಮೂಲ ಸೌಕರ್ಯ ಒದಗಿಸುವ ಬಗ್ಗೆ ಸರ್ಕಾರದ ನಿರಾಸಕ್ತಿಗೆ ಇದೂ  ಒಂದು ನಿದರ್ಶನ ಎಂದಷ್ಟೇ ಇಲ್ಲಿ ಹೇಳಬಯಸುತ್ತೇನೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT