ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷಕ್ಕೆ ತಮಾಷೆಯ ಪರಿಭಾಷೆ ಸಖತ್ ಕಾಂಬಿನೇಷನ್ನು!

Last Updated 9 ಮಾರ್ಚ್ 2016, 19:35 IST
ಅಕ್ಷರ ಗಾತ್ರ

ಪರೀಕ್ಷೆಗಳು ಹತ್ತಿರ ಬಂದವು. ಪ್ರಾಕ್ಟಿಕಲ್ಸು, ವೈವಾ ಹೀಗೆ ಏನೇನೋ ವಿಘ್ನಗಳು ಪರೀಕ್ಷೆಗಳಿಗೂ ಮೊದಲು ಕಾಲಿಟ್ಟವು. ಹುಡುಗಿಯರು ಬಹಳ ಬಿಜಿಯಾದರು. ಸ್ಟಡಿ ಹಾಲಿಡೇಸ್ ಅಂತ ಸ್ವಲ್ಪ ದಿನದ ರಜೆ ಬಂದು ಕೆಲಸ ಕೆಟ್ಟಿತು. ಹಾಸ್ಟೆಲ್‌ ಬಿಕೋ ಅನ್ನುತ್ತಿತ್ತು. ಹಾಗಾಗಿ ಮೆಸ್ಸಿನ ಕಾರ್ಯಕ್ಷಮತೆಯೂ ಕಡಿಮೆಯಾಗಿ ಡೈನಿಂಗ್ ಹಾಲಿನಲ್ಲಿ ಊಟಕ್ಕೆ ಜಾಸ್ತಿ ಹುಡುಗಿಯರಿರುತ್ತಲೇ ಇರಲಿಲ್ಲ. ಹತ್ತಿರದ ಊರಿನವರೆಲ್ಲ ಮನೆಗೆ ಹೋಗಿದ್ದರು. ಆದರೆ ‘ನಮ್ಮ’ ಹುಡುಗಿಯರು ಹಾಗೆಲ್ಲ ಮನೆಗೆ ಹೋಗಿ ಓದುವ ಕುಲದವರೇ? ಸುಮ್ಮನೆ ಊರಿಗೆ ಹೋಗಿ ಬರೋದು ದುಡ್ಡು ಹಾಳು ಅಂತ ಅಲ್ಲೇ ಉಳಿದುಕೊಂಡಿದ್ದರು.

ಇರುವ ದೂರದರ್ಶನ ಚಾನೆಲ್ಲಿನಲ್ಲೇ ತಮ್ಮ ಸಕಲ ಮನರಂಜನೆಯ ಅವಶ್ಯಕತೆಗಳನ್ನೂ ತೀರಿಸಿಕೊಳ್ಳುತ್ತಾ, ಯಾರೂ ಇರಲಿಲ್ಲವಾದ್ದರಿಂದ ಟವಲ್ಲು, ಕರ್ಚೀಪು ಹಾಕಿ ಸೀಟು ಹಿಡಿಯುವ ಪ್ರಮೇಯ ಇಲ್ಲದ್ದನ್ನು ಮನಃಪೂರ್ತಿಯಾಗಿ ತುಂಬಿಕೊಳ್ಳುತ್ತಾ ಒಂಥರಾ ಕೂಡು ಕುಟುಂಬದ ಹಿರಿ ಸೊಸೆ ಇದ್ದಕ್ಕಿದ್ದ ಹಾಗೆ ಸ್ವತಂತ್ರಳಾದಂತೆ ಹೊಸ ಉತ್ಸಾಹವನ್ನು ತುಂಬಿಕೊಂಡಿದ್ದರು. ಆಗಾಗ ಕ್ಯಾಂಟೀನಿನ ಹತ್ತಿರ ಸ್ನೇಹಿತರು, ಅಲ್ವ ಸ್ವಲ್ಪ ದುಡ್ಡು ಇಟ್ಟಿದ್ದ ಕ್ಲಾಸ್ ಮೇಟುಗಳು ಸಿಗುತ್ತಿದ್ದರು. ಕ್ಯಾಂಟೀನಿನವ ಬೆಳಗ್ಗಿನಿಂದ ಕುದಿಸಿದ ಟೀ ಸೊಪ್ಪನ್ನೇ ಮತ್ತೆ ಮತ್ತೆ ಕುದಿಸಿ ಕೊಡುವ ಅಸಾಮಾನ್ಯ ರುಚಿಯ ಟೀಯನ್ನು ಅರ್ಧರ್ಧ ಹಾಕಿಕೊಂಡು ಓದುವ ಪ್ಲಾನ್ ಮಾಡುತ್ತಾ, ಅದನ್ನು ಸದಾ ಕಾಲವೂ ಮಾರನೇ ದಿನಕ್ಕೆ ಮುಂದೂಡುತ್ತಾ ಭವ್ಯ ಭಾರತದ ಭಾವೀ ಪ್ರಜೆಗಳು ಬದುಕುತ್ತಿದ್ದರು.

ಒಂದು ದಿನ ಟೀ ಕುಡಿದು ರಶ್ಮಿ, ವಿಜಿ ವಾಪಾಸು ಹೋಗುವಾಗ ಇಬ್ಬರು ಸೀನಿಯರ್ಸ್ ಪರೀಕ್ಷೆಗೆ ಗೋಲಿ ಹೊಡೆದು ಕ್ಯಾಂಟೀನಿನ ಮುಂದಿನ ಮರಗಳೆಲ್ಲಾ ಬಿದ್ದು ಹೋಗುವಷ್ಟು ಜೋರಾಗಿ ಗಹಗಹಿಸಿ ಕೇಕೆ ಹಾಕಿ ನಗುತ್ತಾ ಕೂತಿದ್ದರು.

‘ಏನೋ ಇಲ್ಲಿ ಕೂತಿದೀರಾ? ನಾಳೆ ಎಕ್ಸಾಮ್ ಪೇಪರ್ ಅಲ್ವ?’ ಸುರೇಶ, ರಾಜೇಶರನ್ನು ರಶ್ಮಿ ಕೇಳಿದಳು.
‘ನಾಳೆ ಪೇಪರ್ ಇದೆ. ಅದಕ್ಕೆ?’
‘ಓದ್ಕೊಳಲ್ವಾ?’
‘ಓದ್ಕೊಂಡ್ವಿ ಕಣೇ! ಸಮಾಧಾನ ಆಯ್ತಾ? ಈಗ ಸುಮ್ನೆ ಹೋಗು!’ ಎಂದು ಇನ್ನೂ ಉಕ್ಕುತ್ತಿರುವ ನಗುವನ್ನು ತಡೆಯುತ್ತಾ ಕಣ್ಣಿನಲ್ಲಿ ತುಂಬಿಕೊಂಡ ನೀರನ್ನು ಒರೆಸಿಕೊಳ್ಳುತ್ತಾ ರಾಜೇಶ ಹೇಳಿದ.

‘ಯಾಕ್ ನಗ್ತಿದೀರೋ?’
‘ಯಾಕೂ ಇಲ್ಲ ಹೋಗೇ!’
‘ಹೇಳೋ ಪ್ಲೀಸ್’
ಇವಳು ಇಲ್ಲೇ ನಿಂತು ತಮ್ಮ ಸಮಯ ಹಾಳುಮಾಡಿಯಾಳೆಂಬ ಆತಂಕ ಸುರೇಶ ಅಲಿಯಾಸ್ ಸೂರಿಗೆ ಉಂಟಾಯ್ತು.

‘ಯಾವ್ದೋ ಜೋಕ್ ಹೇಳ್ಕಂಡು ನಗ್ತಿದ್ವಿ ಕಣೆ. ನೀನ್ ಕೇಳುಸ್ಕೊಳೋದಲ್ಲ!’ ಅಂದ. ಅವನು ಹಾಗೆ ಹೇಳಿದ್ದನ್ನು ಕೇಳಿ ವಿಜಿಗೆ ಇನ್ನೂ ಕುತೂಹಲ ಉಂಟಾಯಿತು. ಅದ್ಯಾವ್ ಜೋಕು ಇವ್ನಿಗೆ ಕಣ್ಣಲ್ಲಿ ನೀರ್ ತರ್ಸೋ ಅಷ್ಟು ತಮಾಷೆ ಇರೋದು? ಮೇಲೆ ನಾವು ಕೇಳಬಾರದಂಥದ್ದು? ಆಗಿದ್ದಾಗ್ಲಿ! ಈ ಜೋಕನ್ನ ಕೇಳೇ ಬಿಡಬೇಕು ಅಂತ ಹಟ ಬಂತು.

‘ಹೇಳ್ರೋ ನಾವೂ ಕೇಳ್ತೀವಿ’ ಎಂದು ಕೇಳಿಕೊಂಡಳು. ಸೂರಿಗೆ ಆತಂಕವಾಯಿತು. ಇವರನ್ನ ಜೋರು ಮಾಡಿ ಓಡಿಸೋದೇ ಒಳ್ಳೇದು ಅಂತ ಎಣಿಸಿ, ‘ಒಳ್ಳೇ ಮಾತಲ್ಲಿ ಹೇಳ್ತಿದೀನಿ ಇಲ್ಲಿಂದ ಜಾಗ ಖಾಲಿ ಮಾಡಿ. ಇಲ್ಲಾಂದ್ರೆ ನಾವೇ ಹೋಗ್ತೀವಿ’.

‘ಅದೆಂಥಾ ಜೋಕೋ ಇನ್ನೊಬ್ಬರಿಗೆ ಹೇಳೋಕಾಗ್ದೆ ಇರೋದು?’ ವಿಜಿ ಹಾಗೇ ಹೋಗುವ ಮಾತೇ ಇಲ್ಲ. ಸೂರಿ ರಶ್ಮಿ ಕಡೆಗೆ ನೋಡಿದ. ಅವಳು ಭುಜ ಕುಣಿಸಿ ಆಕಾಶದತ್ತ ನೋಡುತ್ತ ತಾನೇನೂ ಮಾಡೋಕಾಗಲ್ಲ ಅನ್ನೋದನ್ನ ಜಾಹೀರುಪಡಿಸಿದಳು.

‘ಹೇಳ್ಬೋದಪ್ಪ, ಆದರೆ ಹುಡುಗೀರಿಗೆ ಹೇಳೋ ಅಂಥದ್ದಲ್ಲ’
‘ಅಯ್ಯೋ ಕೂರೋ ಕಂಡಿದೀನಿ. ಹೇಳೋಕೆ ದಮ್ಮಿಲ್ಲ ಅಂತ ಹೇಳು, ಆ ಮಾತನ್ನ ಬೇಕಾದ್ರೆ ಒಪ್ಕೋತೀನಿ’
‘ಲೈ ದಂ ಗಿಂ ಅಂತ ಮಾತಾಡಬೇಡ. ಹೇಳ್ತೀವಿ ಆದ್ರೆ ಮುಗಿದ ಮೇಲೆ ಸುಮ್ಮನೆ ಹೊರಡಬೇಕು’
‘ಆಯ್ತು ಹೇಳಪ್ಪ!’

‘ಒಬ್ಬನಿಗೆ ಹುಶಾರಿರಲಿಲ್ಲವಂತೆ. ಅದಕ್ಕೆ ಡಾಕ್ಟ್ರ ಹತ್ತ್ರ ಹೋದ್ನಂತೆ. ‘ಡಾಕ್ಟ್ರು ಏನಪ್ಪಾ ತೊಂದ್ರೆ ಅಂತ ಕೇಳಿದ್ರಂತೆ. ಇವನು ಸರ್, ನನಗೆ ಪೈಲ್ಸ್ ಆಗಿದೆ. ಜೀವನವೇ ಕಷ್ಟ ಆಗಿದೆ ಅಂತ ಅತ್ತುಕೊಳ್ತಾ ಹೇಳಿದ್ನಂತೆ’
‘ಹೂಂ’
‘ಡಾಕ್ಟ್ರು ಅವನಿಗೆ ‘ಸರಿ ಟೇಬಲ್ ಮೇಲೆ ಮುಖ ಅಡಿಯಾಗಿ ಮಲಕ್ಕೋ. ಚೆಕ್ ಮಾಡ್ತೀನಿ’ ಅಂತ ಅಂದು ಚೆಕ್ ಮಾಡೋಕೆ ಶುರು ಮಾಡಿದ್ರಂತೆ’
‘ಹೂಂ’

‘ಡಾಕ್ಟ್ರು ಒತ್ತುತ್ತಾ ಕೇಳಿದ್ರು. ಇಲ್ಲಿ ನೋವಾಗ್ತಾ ಇದೆಯಾ? ಇವನು ಇಲ್ಲ ಸರ್ ಇನ್ನೂ ಸ್ವಲ್ಪ ಮೇಲೆ ಅಂದ. ಡಾಕ್ಟ್ರು ಗ್ಲೌಸ್ ಸರಿ ಮಾಡಿಕೊಂಡು ಸ್ವಲ್ಪ ಒಳಕ್ಕೆ ಬೆರಳು ಹಾಕಿದರು. ‘ಇಲ್ಲಿ ನೋವುತ್ತಾ ಅಂದ್ರು, ಸ್ವಲ್ಪ ನೋಯ್ತಾ ಇದೆ ಸರ್ ಆದರೆ ನೋವಿನ ಕೇಂದ್ರ ಇರೋದು ಇನ್ನೂ ಮೇಲಕ್ಕೆ ಅಂದ. ಇನ್ನೂ ಮೇಲಕ್ಕೆ ಕೈ ಹಾಕಿದರು. ಅವನನ್ನ ಕೇಳಿದರು ‘ಈಗ? ನೋವು ಇರೋದು ಇಲ್ಲಿಯಾ?’ ಹತ್ತಿರವೇ ಇದ್ದೀರಾ ಸರ್, ಇನ್ನೂ ಚೂರು ಮೇಲಕ್ಕೆ ಅಂದ’
‘ಹಹಹಹ! ಹೂಂ’

‘ಡಾಕ್ಟ್ರಿಗೆ ಸಿಟ್ಟು ಬಂದು ಪೂರ್ತಿ ಮೇಲಕ್ಕೆ ಕೈ ಹಾಕಿ ಇಲ್ಲೇನೋ ನೋಯ್ತಾ ಇರೋದು? ಅಂತ ಜೋರಾಗಿ ಕೇಳಿದರು’
‘ಆಆಆಆಅ ಅಂತ ಸಮಾಧಾನದ ನಿಟ್ಟುಸಿರು ಬಿಡುತ್ತಾ, ಕರೆಕ್ಟ್ ಸಾರ್. ಅಲ್ಲೇ ನೋವಾಗ್ತಾ ಇದೆ. ತುಂಬಾ ದಿನದಿಂದ ಅಂದ. ಡಾಕ್ಟ್ರುಅವನಿಗೆ ಸರಿಯಾಗಿ ಒದ್ದು ಹೇಳಿದರು ‘ಬೋಳಿ ಮಗ್ನೆ. ಇನ್ನೊಂದ್ ಸಾರಿ ಈ ಥರಾ ‘ಪೈಲ್ಸ್’ ಪೇನ್ ಬಂದ್ರೆ ಗಂಟಲಿನ ಡಾಕ್ಟ್ರ ಹತ್ತ್ರಿರ ಹೋಗು. ನನ್ ಹತ್ರ ಬರ್ಬೇಡ ಅಂತ ಹೊರಗೆ ಹಾಕಿದ್ರು’ ಎನ್ನುತ್ತಲೇ ವಿಜಿ, ಸೂರಿ ಮತ್ತು ರಾಜೇಶ ನಗಲು ಶುರು ಮಾಡಿದರು. ವಿಜಿಯಂತೂ ಹುಡುಗರಿಗಿಂತಾ ಜೋರಾಗಿ ನಗುತ್ತಿದ್ದಳು.

ಕನ್ನಡದ ಗಂಧ ಗಾಳಿಯನ್ನು ಬಹಳ ಕಡಿಮೆ ಕುಡಿದಿದ್ದ ರಶ್ಮಿ ಬಹು ಮುಗ್ಧವಾಗಿ ಕೇಳಿದಳು. ‘ಇದ್ರಲ್ಲಿ ಜೋಕ್ ಏನಿದೆ? ಅವನಿಗೆ ಆಗಿದ್ದು ಏನು?’
ಸೂರಿಯಂತೂ ಉಸಿರು ಸಿಕ್ಕಿಹಾಕಿಕೊಳ್ಳುವಂತೆ ಗಕ್ಕನೆ ನಗು ನಿಲ್ಲಿಸಿದ. ರಾಜೇಶ ಎದ್ದು ಎತ್ತಲೋ ಹೋಗಿ ಬಿಟ್ಟ. ಸೂರಿ ಕೈ ಮುಗಿದು ವಿಜಿಗೆ ಹೇಳಿದ. ‘ಅಮ್ಮಾ ತಾಯೀ ನಿನ್ ಫ್ರೆಂಡಿಗೆ ನೀನೇ ಉತ್ತರ ಹೇಳು’.

ಇವಳ ಜೊತೆ ನಿಂತು ಇಂಥ ದೃಶ್ಯಾತ್ಮಕವಾದ ಜೋಕನ್ನು ಕೇಳಿದ್ದೇ ಅಲ್ಲದೆ, ಅದರ ರಸಭಂಗ ಕೂಡ ಆಗಿದ್ದಕ್ಕೆ ಮರುಕ ಪಡುತ್ತಾ ವಿಜಿ ರಶ್ಮಿಗೆ ಹೇಳಿದಳು –‘ಅವನಿಗೆ ಆಗಿದ್ದು ಗಂಟಲು ನೋವು ಕಣೇ’
‘ಅಂದ್ರೆ? ವಾಟ್ ವಾಸ್ ಹಿಸ್ ಪ್ರಾಬ್ಲಂ?’

‘ಟಾನ್ಸಿಲೈಟಿಸ್’ ಎಂದು ಸೂರಿ ಚುಟುಕಾಗಿ ಹೇಳಿ ವಿಜಿಯನ್ನು ಉದ್ದೇಶಿಸಿ ಹೇಳಿದ ‘ಅಧೆಂಗ್ ಇರ್ತೀಯ ನೀನು ಇವಳ ಜೊತೆ? ಜೋಕ್ ಹೇಳಿದ್ರೆ ನಗಕ್ಕೂ ಮೀನಿಂಗ್ ಕೇಳ್ತಾಳಲ್ಲ?’

‘ನಾವು ಅವಳನ್ನ ಹಂಗೇ ಮಾತಾಡ್ಸೋದು ಕಣೋ. ಡಬಲ್ ಮೀನಿಂಗ್ ಜೋಕ್ ಹೇಳಿದ್ರೆ ಎರಡೂ ಮೀನಿಂಗನ್ನೂ ನಾವೇ ಹೇಳಿಕೊಡಬೇಕು’ ಎಂದು ವಿಜಿ ಕಣ್ಣೊರಿಸಿಕೊಳ್ಳುತ್ತಾ, ಮಧ್ಯೆ ಮಧ್ಯೆ ನಗುತ್ತಾ ಹೇಳಿದಳು.

‘ಆಯ್ತು ಮಹಾತಾಯೀ! ಈಗ್ ಹೊರಡಿ ಇಲ್ಲಿಂದ! ಹೋಗಿ ಓದ್ಕೊಳಿ. ಆಮೇಲೆ ರಿಸಲ್ಟ್ ಬರೋ ಹೊತ್ತಿಗೆ ನಿಮ್ಮಲ್ಲಿ ಯಾರ್‍್ಯಾರ ಮದುವೆ ಆಗಿರುತ್ತೋ ದೇವರಿಗೇ ಗೊತ್ತು!’ ಎಂದು ಮತ್ತೆ ಕೈಮುಗಿದ ಮೇಲೆ ಇಬ್ಬರೂ ಅಲ್ಲಿಂದ ಹೊರಟರು. ರೂಮಿನ ಹತ್ತಿರ ಬರುವಾಗ ಇಂದುಮತಿಗೂ ರಿಂಕಿಗೂ ಜಗಳ ಹತ್ತಿದ್ದು ಗೊತ್ತಾಯಿತು. ಮಾತುಗಳು ಜೋರು ಜೋರಾಗಿ ಕೇಳಿಸುತ್ತಿದ್ದವು. ಈಗ ರೂಂ ಪ್ರವೇಶ ಆದರೆ ಪಂಚಾಯಿತಿ ಮಾಡುವ ರೆಫ್ರೀ ಆಗಬೇಕಾಗುತ್ತೆ ಅಂತ ಅಲ್ಲೇ ಹೊರಗೆ ಡೈನಿಂಗ್ ಹಾಲಿನಲ್ಲಿ ಕೂತರು. ಕಿಚನ್ ಕಾಂಟ್ರಾಕ್ಟ್ ತೆಗೆದುಕೊಂಡಿದ್ದ ಮನೋಹರ ಈಗ ಅಪರೂಪವಾಗಿದ್ದ. ಮತ್ತು ಹುಡುಗಿಯರಿಗೂ ಅವನ ಗಾಡಿ ಅವಶ್ಯಕತೆ ಬಿದ್ದಿರಲಿಲ್ಲವಾದ್ದರಿಂದ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ.

   ‘ಊರ್ ಬಿಡೋ ಮುಂಚೆ ಒಂದ್ ಸಾರಿ ಬೆಟ್ಟವನ್ನ ಕಣ್ತುಂಬಾ ತುಂಬ್ಕೊಳೋ ಹಾಗೆ ಹೋಗಿ ಬರ್ಬೇಕು ಕಣೇ’ ಎಂದು ನಿಟ್ಟುಸಿರು ಬಿಡುತ್ತಾ ವಿಜಿ ರಶ್ಮಿಗೆ ಹೇಳಿದಳು. ರಶ್ಮಿ ಹೂಂ ಎನ್ನುವಂತೆ ತಲೆಯಲ್ಲಾಡಿಸಿದಳು. ಮನೋಹರ ಯಾವಾಗ ಹಾಸ್ಟೆಲಿಗೆ ಬರುತ್ತಾನೆ ಅಂತ ಕೇಳಿಕೊಂಡು ಬಂದಳು. ‘ನಾಡಿದ್ದು ಬರ್ತಾನಂತೆ. ಅವನು ಯಾವತ್ತು ಗಾಡಿ ಕೊಡ್ತಾನೋ ಆವತ್ತು ಹೋಗೋಣ’ ಎಂದಳು.

ಎಲ್ಲರಲ್ಲೂ ಅನ್ಯಮನಸ್ಕತೆ ತುಂಬಿತ್ತು. ಪರೀಕ್ಷೆ ಹುಡುಗರಿಗೆ ಒಂಥರಾ ನಿರ್ಣಾಯಕ ಘಟ್ಟವಾದರೆ ಹುಡುಗಿಯರಿಗೆ ಇನ್ನೊಂದು ಥರಾ. ಏಕೆಂದರೆ ಬಹುತೇಕ ಹುಡುಗಿಯರಿಗೆ ಎಕ್ಸಾಮ್ ಮುಗಿದ ಕೂಡಲೇ ಇರುವುದೊಂದೇ ದಾರಿ. ಉಪ್ಪಿಟ್ಟು, ಕೇಸರಿಬಾತು ಮಾಡಿಟ್ಟುಕೊಂಡು ಹೋಗೋ ಬರೋ ಗಂಡುಗಳ ಎದುರಿಗೆ ನಾಚಿಕೆ ನಟಿಸುತ್ತಾ ಕೂರುವುದು.

‘ಎಷ್ಟ್ ಸಾರೀಂತ ನಾಚಿಕೆ ಪಟ್ಕೋತಾರೆ? ಇವಳು ಅವನನ್ನ ನೋಡಿ ನಗ್ತಾ ಇದ್ರೆ ಅವನಿಗೆ ತಾನು ಮಂಗನ ಥರಾ ಕಾಣ್ತಾ ಇರಬೋದು ಅಂತ ಅನುಮಾನ ಬರೋಲ್ವಾ? ಅಥವಾ ಬಟ್ಟೆ ಸರಿಯಾಗಿ ಹಾಕ್ಕೊಂಡು ಬಂದಿಲ್ಲ ಅಂತಲೂ ಡೌಟಾಗಲ್ವಾ?’ ಅಂತ ವಿಜಿ ಆಶ್ಚರ್ಯ ಪಡುತ್ತಿದ್ದಳು.

ಹೆಂಗಸಿನ ನಾಚಿಕೆಯ ಮೇಲೆ, ಅವಳ ಕಿರು ನೋಟದ ಭಂಗಿ ಮೇಲೆ, ಕಂಪಲ್ಸರಿಯಾಗಿ ತೆಳ್ಳಗಿರಲೇಬೇಕಾದ ಸೊಂಟದ ಮೇಲೆ ಇಡೀ ಗಂಡುಕುಲದ ಗಂಡಸ್ತನ ಹೇಗೆ ನಿಂತಿದೆ ಅಂದ್ರೆ ವಸ್ತುವಿನ ಗುರುತ್ವದ ಕೇಂದ್ರ ಒಂದು ಚಿಕ್ಕ ಬಿಂದುವಿನಲ್ಲಿ ಅಡಗಿರುವ ಹಾಗೆ ಇದೆ. ಆ ಬಿಂದುವೇನಾದರೂ ಅತ್ತಿತ್ತ ಆದರೆ ಎಂಥ ಗಂಡೂ ಆ ಸಾಮಾಜಿಕ, ವೈಯಕ್ತಿಕ ಬದಲಾವಣೆಯನ್ನು ಒಪ್ಪಿಕೊಳ್ಳಲು ಒದ್ದಾಡಿ ಬಿಡುತ್ತಾನೆ. ಇದನ್ನೆಲ್ಲ ಮೀರಿ ನೋಡುವ ಉದಾತ್ತ ಮನಸ್ಸಿನ ಗಂಡಸರೂ ಇದ್ದಾರು, ಆದರೆ ಆ ‘ಉದಾತ್ತತೆ’ ಎನ್ನುವ ಪದ ಸಹಜಕ್ಕೆ ಮೀರಿದ್ದು ಎನ್ನುವ ಸತ್ಯ ಕಣ್ಣಿಗೆ ರಾಚುತ್ತದೆ.

ಸಮಾಜದ ಕಟ್ಟುಪಾಡುಗಳನ್ನು ಬಿಟ್ಟು ನೋಡಿದರೆ ನಿಸರ್ಗ ಹೆಣ್ಣನ್ನು ಸೃಷ್ಟಿಸಿರುವ ನೆಲೆ ಶಕ್ತಿ ಕೇಂದ್ರದ್ದು. ಪ್ರಕೃತಿಗೆ ಪರ್ಯಾಯ ಹೆಣ್ಣೇ ಅಲ್ಲವೇ? ಜೀವ ಪ್ರಕ್ರಿಯೆಗೆ ಹೆಣ್ಣಿನ ಕೊಡುಗೆ ಬಹಳ ತೂಕದ್ದು. ಹಾಗಿರುವ ಹೆಣ್ಣು ಏಕಸೂತ್ರದಲ್ಲಿ ಎಲ್ಲವನ್ನೂ ಹಿಡಿದಿಟ್ಟುಕೊಳ್ಳಬಲ್ಲ ಚೈತನ್ಯವುಳ್ಳವಳು. ಅವಳನ್ನು ತೆಳ್ಳಗಿರು, ಬೆಳ್ಳಗಿರು, ನಾಜೂಕಾಗಿರು, ನಾಚಿಕೊಳ್ಳುತ್ತಿರು, ಕಣ್ಣಿಗೆ ಕಾಣುವಂತಿರು ಆದರೆ ಕಾಣದಂತಿರು ಅಂತ ಗೆರೆಗಳನ್ನು ಕೊರೆಯುತ್ತಲೇ ಹೋಗುವುದು ನಿಸರ್ಗಕ್ಕೆ ಹೊರತಾದ ನಡೆಯಲ್ಲವೇ? ದೇವರು, ದೆವ್ವಗಳನ್ನು ಸೃಷ್ಟಿಸಿಕೊಂಡಿರುವ ಮನುಷ್ಯ, ಅಂಗೈಯಲ್ಲಿನ ಗೆರೆಗಳನ್ನೂ ಓದಲು ಕಲಿತಿರುವ ಮನುಷ್ಯ ಇಷ್ಟು ಸರಳವಾದ ಸತ್ಯಕ್ಕೆ ಏಕೆ ವಿಮುಖನಾಗುತ್ತಾನೆ? ಹೆಚ್ಚುವರಿ ಹೆಣ್ತನವನ್ನೇ ಅವಲಂಬಿಸಿ ವಿಜೃಂಭಿಸಬೇಕಾದ ಗಂಡಸ್ತನಕ್ಕೆ ಯಾವ ಅಂತಃಸಾಕ್ಷಿಯೂ ಕನ್ನಡಿ ಹಿಡಿಯುವುದಿಲ್ಲವೇನೋ.

ಬಹಳ ಹೊತ್ತು ವಿಜಿ ಹಾಗೂ ರಶ್ಮಿ ಹಾಗೇ ಭವಿಷ್ಯದ ಅವಕಾಶಗಳನ್ನು ಯೋಚಿಸುತ್ತಾ, ತಮಗೆ ಇರುವ ಆಯ್ಕೆಗಳ ಬಗ್ಗೆ ನಿಖರತೆಯತ್ತ ಕ್ರಮಿಸುತ್ತಾ ನಡೆಯುತ್ತಿದ್ದರು. ಅವರಿಬ್ಬರ ಮಾತುಗಳು ಮುಗಿದರೂ ರಿಂಕಿ ಮತ್ತು ಇಂದುಮತಿಯರ ಜಗಳ ಮುಗಿಯುವ ಹಂತಕ್ಕೂ ಬಂದ ಹಾಗೆ ಕಾಣಲಿಲ್ಲ.

‘ಇಲ್ಲೇ ಕೂತಿದ್ರೆ ಅವರಿಬ್ರೂ ಜಗಳ ಮುಗಿಸಲ್ಲ ಕಣೇ. ನಡಿ ಒಳಗೆ ಹೋಗಿ ನೋಡೋಣ’ ಅಂತ ರಶ್ಮಿ ವಿಜಿಗೆ ಹೇಳಿದಳು. ಒಳಗೆ ಹೋಗಿ ನೋಡಿದರೆ ಇಂದುಮತಿ ತಲೆಯ ತುಂಡು ಕೂದಲನ್ನೆಲ್ಲ ಕೆದರಿಕೊಂಡು ನಿಂತಿದ್ದಳು. ರಿಂಕಿ ಆಗಾಗ ಬಿದ್ದು ಬಿದ್ದು ನಗುತ್ತಲೂ, ಅದರ ನಡುನಡುವೆ ಇಂದುಮತಿಯೊಂದಿಗೆ ವಾದ ಮಾಡುತ್ತಲೂ, ಇನ್ನು ಕೆಲವೊಮ್ಮೆ ‘ನಾನಲ್ಲ ಕಣೆ. ನಿನಗೆ ತೊಂದರೆ ಮಾಡಲು ನಾನೇನು ನಿನ್ನ ಶತ್ರುವಾ?’ ಅಂತ ಹೇಳುತ್ತಾ ನಿಂತಿದ್ದಳು.

ಇಂದುಮತಿ ‘ಅಹಹಹಹ! ರಾಸ್ಕಲ್ ನೀನು. ನಿನ್ನ ಮಾತನ್ನು ಒಪ್ಪಲು ಆಗುತ್ತಾ? ನನಗೆ ಗೊತ್ತು ನೀನು ಬೇಕಂತ್ಲೇ ಹಾಗೆ ಮಾಡಿದೀಯ ಲೌಡಿ. ನಿನ್ ಕೊಂದಾಕಿಬಿಡ್ತೀನಿ’ ಅಂತ ತಲೆ ಸವರಿಕೊಳ್ಳುತ್ತಾ ಅವೇ ಮಾತನ್ನು ಪುನರಾವರ್ತಿಸುತ್ತಿದ್ದಳು.

ಇಂದುಮತಿಗೆ ಹಿಂದಿ ಬಾರದು. ರಿಂಕಿಗೆ ಜಗತ್ತಿನ ವ್ಯವಹಾರಕ್ಕೆ ಹಿಂದಿಯೇ ಪ್ರಧಾನ. ಆ ಭಾಷೆಯನ್ನು ಬಿಟ್ಟರೆ ಬರುತ್ತಿದ್ದುದು ಅವಳ ಮಾತೃಭಾಷೆ ಒಡಿಯಾ ಮಾತ್ರ. ಆದರೆ ಇಬ್ಬರೂ ಇಂಗ್ಲೀಷನ್ನು ಧಾರಾಳವಾಗಿ ಬಳಸುತ್ತಿದ್ದರು. ಈ ಸಂದರ್ಭದಲ್ಲಿ ಮಾತ್ರ ಇಂಗ್ಲೀಷೂ ಕೈ ಕೊಟ್ಟಂತಿತ್ತು. ಯಾಕೆಂದರೆ ಮನಸ್ಸುಪೂರ್ತಿಯಾಗಿ ಜಗಳವಾಡಲು ಅವಶ್ಯವಾದಷ್ಟು ಇಂಗ್ಲೀಷಾಗಲೀ, ಹಿಂದಿಯಾಗಲೀ ಇಬ್ಬರಿಗೂ ಬರುತ್ತಿರಲಿಲ್ಲ.

ಮಾತು ಬರುತ್ತಿತ್ತೇ ವಿನಃ ಆ ಭಾಷೆಯಲ್ಲಿ ಬೈಗುಳಗಳ ಭಂಡಾರ ಬೆಳೆದಿರಲಿಲ್ಲ. ಹಾಗಾಗಿ ಇಂಗ್ಲೀಷಿನಲ್ಲಿ ಸಮಾಧಾನವಾಗುವಷ್ಟು ಜಗಳ ಆಡಲು ಸಾಧ್ಯವಿರಲಿಲ್ಲ. ಪ್ರೀತಿಗೆ ಒಂದು ಪರಿಭಾಷೆ ಇದ್ದಂತೆ ಸಿಟ್ಟಿಗೂ ಒಂದು ಪರಿಭಾಷೆಯಿರುತ್ತದೆ. ಅದರದ್ದೇ ಆದ ವಲಯವಿರುತ್ತದೆ, ಪ್ರೀತಿಯನ್ನು ಹೇಗೆ ಭೌಗೋಳಿಕ ಪ್ರಜ್ಞೆಯಿಲ್ಲದಂತೆ ಪ್ರದರ್ಶಿಸಲು ಸಾಧ್ಯವಿಲ್ಲವೋ, ಹಾಗೇ ಸಿಟ್ಟನ್ನೂ ಮನುಷ್ಯರು ಒಂದು ಸಾಮಾಜಿಕ ಅಭಿವ್ಯಕ್ತಿಯಂತೆ ಬಳಸುತ್ತಾರೆ.

ಉದಾಹರಣೆಗೆ ಮನೆಯಲ್ಲಿ ಸಿಟ್ಟು ಮಾಡಿಕೊಂಡಷ್ಟು ಸರಳವಾಗಿ ಆಫೀಸಿನಲ್ಲೋ, ಇನ್ನೊಬ್ಬರ ಮನೆಯಲ್ಲೋ ನಾವು ಸಿಟ್ಟು ಮಾಡಿಕೊಳ್ಳುವುದಿಲ್ಲ. ಒಂದು ಪಕ್ಷ ಸಿಟ್ಟು ಮಾಡಿಕೊಂಡರೂ ಬಳಸುವ ಭಾಷೆ ತರ್ಕದಲ್ಲಿ ಮಿಂದೇಳುತ್ತದೇ ಹೊರತು ಧಿಗ್ಗನೆ ಹೊತ್ತಿ ಉರಿಯುವ ಬೆಂಕಿಯಾಗುವುದಿಲ್ಲ. ಆ ಮಾತು ಹಾಗಿರಲಿ. ಒಳಗೆ ಹೋಗಿ ರಶ್ಮಿ ‘ಏನಾಯ್ತೇ ಇಂದೂ?’ ಎಂದು ಕೇಳಿದ ತಕ್ಷಣ ಇಂದುಮತಿ ತನ್ನ ಅಂಗೈಯನ್ನು ರಶ್ಮಿಯ ಮುಂದಕ್ಕೆ ಹಿಡಿದಳು. ಅವಳ ಕೈತುಂಬಾ ಹಿಡಿ ಹಿಡಿ ಕೂದಲಿತ್ತು. ರಿಂಕಿ ಕಡೆ ನೋಡಿದರೆ ‘ನನ್ನ ತಪ್ಪೇನೂ ಇಲ್ಲ’ ಎಂದು ನಗುತ್ತಲೇ ಹೇಳಿದಳು.

‘ಈಗ ಏನಾಯ್ತು ಅಂತ ಹೇಳ್ತೀರಾ ಇಲ್ಲಾ ಜಗಳ ಆಡ್ಕೊಂಡೇ ಇರ್ತೀರಾ?’ ಎಂದು ರಶ್ಮಿ ರೇಗಿದಳು.
‘ನೋಡೇ! ಹೊಸ ಹೇರ್ ಕ್ರೀಂ ಅಂತ ಯಾವುದೋ ಕೊಟ್ಲು. ಅದನ್ನ ತಲೆಗೆ ಹಚ್ಕೊಂಡ್ರೆ ಕೂದಲು ಹಿಡಿಹಿಡಿಯಾಗಿ ಕೈಗೆ ಬಂತು. ಹೊರಗೆ ಬಂದು ಚೆಕ್ ಮಾಡಿದ್ರೆ ಹೇರ್ ರಿಮೂವಿಂಗ್ ಕ್ರೀಂ ಕೊಟ್ಟಿದಾಳೆ ಲೌಡಿ’ ಸಿಡಿಸಿಡಿಯಾದಳು ಇಂದುಮತಿ.

ಅವಳ ಸಿಟ್ಟೇನೋ ನ್ಯಾಯವಾದದ್ದೇ. ಆದರೆ ಇದು ತನ್ನ ತಪ್ಪು ಅಂತ ರಿಂಕಿ ಒಪ್ಪುವಂತಿರಲಿಲ್ಲ.
‘ಹೇರ್ ಕ್ರೀಮು, ಹೇರ್ ರಿಮೂವಿಂಗ್ ಕ್ರೀಮೂ ಒಂದೇ ಥರ ಬಾಟಲಿಯಲ್ಲಿ ಇದ್ದವು. ಹಚ್ಕೊಳೋವಾಗ ನೋಡಿ ಹಚ್ಕೋಬೇಕು ತಾನೇ? ಕಣ್ಣ್ ಕಾಣಲ್ವಾ ಇವಳಿಗೆ?’ ಅಂತ ಕೇಳಿದಳು ರಿಂಕಿ.

ಅದೂ ಸರಿಯಾದ ಮಾತೇ.
‘ಅಹಹಹಹ! ಕಳ್ಳ್ ಲೌಡಿ ತಂದು. ಅವಳ ಮಾತನ್ನ ನಂಬಬೇಡ ಕಣೆ. ಸೇಡು ತೀರಿಸಿಕೊಳ್ಳಕ್ಕೆ ಅಂತ ಹಿಂಗ್ ಮಾಡಿದಾಳೆ. ಬ್ಲಡಿ ಬಿಚ್!’ ಇಂದುಮತಿ ಉವಾಚ. ‘ಸೇಡು’ ಅಂದ ಕೂಡಲೇ ವಿಜಿಯ ಕಿವಿ ಜಾಗೃತವಾದವು.

‘ಓಹೋ! ಕರ್ಮಫಲಕ್ಕೆ ತಮ್ಮ ಕಾಂಟ್ರಿಬ್ಯೂಷನ್ನೂ ಇದೆ? ವಾಟ್ ಡಿಡ್ ಶಿ ಡೂ?’ ಅಂತ ರಿಂಕಿಯನ್ನು ಕೇಳಿದಳು.
‘ಹೋದ ವಾರ ನಾನು ಯಾವುದೋ ಹುಡುಗನ ಜೊತೆ ಹೊರಗೆ ಹೊರಟಿದ್ದೆ. ನಮ್ಮಪ್ಪ ಫಾರಿನ್ನಿನ ಸೆಂಟು ತಂದಿದಾರೆ ಹಾಕ್ಕೊಂಡು ಹೋಗು ಅಂತ ಕೊಟ್ಲು. ನಾನೂ ಸರಿಯಾಗೇ ಹಾಕ್ಕೊಂಡೆ... ಆಮೇಲೆ...’

‘ಆಮೇಲೆ?’
‘ಆಮೇಲೆ ಗೊತ್ತಾಯ್ತು ಅದು ರೂಮ್ ಫ್ರೆಶ್ನರ್ ಅಂತ’
‘ಅಯ್ಯೋ ನಿನ್ ಮಕವೇ! ನೋಡ್ಕೊಂಡು ಹಾಕ್ಕೊಳೋದಲ್ವಾ?’
‘ಇಲ್ಲಾ, ಬಾಟಲಿ ಸೆಂಟಿನ ಥರಾನೇ ಇತ್ತು. ನಾನು ಕನ್ನಡಕ ಹಾಕ್ಕೊಂಡಿರಲಿಲ್ಲ. ಹುಡುಗನ ಜೊತೆ ಹೋಗುವಾಗ ಕನ್ನಡಕ ಹಾಕ್ಕೊಬೇಡ, ಚೆನ್ನಾಗಿ ಕಾಣಲ್ಲ ಇವಳೇ ಅಂದ್ಲು. ಸ್ವಲ್ಪ ಹೊತ್ತಿನಲ್ಲೇ ಆ ಹುಡುಗ ನನ್ ಸೆಂಟು ರೂಮ್ ಫ್ರೆಶ್ನರ್ ಥರಾ ಇದೆ ಅಂತ ಹೇಳಿದ್ದಲ್ಲದೇ ಆ ವಾಸನೆಗೆ ತಲೆ ನೋವು ಬರ್ತಿದೆ ಅಂತ ಹೇಳಿ ಹೋದ’

ಇಂದುಮತಿಯ ಕಡೆ ನೋಡಿದರೆ ಅವಳಾಗಲೇ ನಾಪತ್ತೆ. ಮುಂದಿನ ಒಂದು ತಿಂಗಳು ತಲೆಗೆ ಚೆ ಗವೇರ ಹಾಕಿಕೊಳ್ಳುವ ಟೋಪಿಯಂಥ ಟೋಪಿಯನ್ನೂ, ಇನ್ನು ಕೆಲವೊಮ್ಮೆ ಬಟ್ಟೆಯನ್ನೂ ಕಟ್ಟಿಕೊಂಡು ಕೇಳಿದವರಿಗೆಲ್ಲ ‘ತಿರುಪತಿ ಮುಡಿ’ ಕೊಟ್ಟಿರುವುದಾಗಿ ಹೇಳಿದಳು. ರಿಂಕಿ ಆಗಾಗ ಸಿಕ್ಕವರ ಹತ್ತಿರ ಇಂದುಮತಿಯ ಕೂದಲು ಉದುರಿ ಹೋದ ಸತ್ಯವನ್ನು ಸಾದ್ಯಂತವಾಗಿ ಹೇಳುತ್ತಿದ್ದಳು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT