ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಸಾಮಾಜಿಕ ಭದ್ರತಾ ವ್ಯವಸ್ಥೆ ಮತ್ತು ಬಿರುಕು

Last Updated 22 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಸಮುದಾಯದ ಅಭಿವೃದ್ಧಿಗಾಗಿ ಇರುವ ಪ್ರಣಾಳಿಕೆಗಳಲ್ಲಿ ಆಹಾರ ಭದ್ರತೆಯೂ ಒಂದು ಎಂಬುದು ನನ್ನ ಬಲವಾದ ನಂಬಿಕೆ. ಆಹಾರ ಭದ್ರತೆ ಎಂಬುದೇನೂ ಪ್ರತ್ಯೇಕವಾಗಿ ಘಟಿಸುವ ಸಂಗತಿಯಲ್ಲ.

ಅದು ಜನರ ಆದ್ಯತೆಯನ್ನು ಪ್ರತಿಫಲಿಸುತ್ತದೆ. ಅವರ ಖರ್ಚು ಮಾಡುವ ಸಾಮರ್ಥ್ಯ, ಆಹಾರ ಧಾನ್ಯಗಳ ಲಭ್ಯತೆ, ಅವುಗಳನ್ನು ಪಡೆಯುವ ಮಾರ್ಗ, ಕೃಷಿ ಭೂಮಿಯ ಪ್ರಗತಿ, ಸರ್ಕಾರದ ಸಾಮಾಜಿಕ ನೀತಿಗಳು ಎಲ್ಲವನ್ನೂ ಒಳಗೊಳ್ಳುತ್ತದೆ.

ಇದೆಲ್ಲಕ್ಕಿಂತಲೂ ಹೆಚ್ಚಾಗಿ, ಯಾವೊಬ್ಬ ವ್ಯಕ್ತಿಯೂ ಹಸಿವಿನಿಂದ ನರಳದಂತೆ ನೋಡಿಕೊಳ್ಳುವ ಸಾಮಾಜಿಕ ಬದ್ಧತೆಯ ಭರವಸೆಯನ್ನೂ ಅದು ನೀಡಬೇಕಾಗುತ್ತದೆ. ಈ ವಿಶ್ಲೇಷಣೆಯ ಆಧಾರದ ಮೇಲೆಯೇ, ಕರ್ನಾಟಕದ ಮಾನ್ಯ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ಮತ್ತು ಅಸಮರ್ಪಕ ನಿರ್ವಹಣೆಯನ್ನು ತನಿಖೆಗೊಳಪಡಿಸುವಂತೆ ನನ್ನನ್ನು ಕೇಳಿದಾಗ ನಾನು ಒಪ್ಪಿಕೊಂಡಿದ್ದೆ.

ಭ್ರಷ್ಟಾಚಾರದ ಬಗ್ಗೆ ನನ್ನ ವೈಯಕ್ತಿಕ ನಿಲುವಿನ ಜೊತೆಗೆ ರಾಜ್ಯದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು (ಪಿಡಿಎಸ್) ಪರಿಣಾಮಕಾರಿ ಆಗಿಸುವ ನಿಟ್ಟಿನಲ್ಲಿ ನೆರವಾಗಲು ಇದು ನನಗೆ ದೊರೆತ ಅವಕಾಶ ಎಂದೇ ಭಾವಿಸಿದ್ದೆ. ಈ ಹಿನ್ನೆಲೆಯಲ್ಲಿ ನಾಗರಿಕರಿಗೆ, ಅದರಲ್ಲೂ ಗ್ರಾಮೀಣರಿಗೆ ಆಹಾರ ಭದ್ರತೆ ಒದಗಿಸಲು ನನ್ನ ಕೈಲಾದಷ್ಟು ನೆರವಾಗಬಹುದು ಎಂದುಕೊಂಡೆ.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಕ್ಷೇತ್ರದ ಭ್ರಷ್ಟಾಚಾರ ಆರೋಪಗಳ ಬಗ್ಗೆ ಅದಾಗಲೇ ಲೋಕಾಯುಕ್ತ ಕಚೇರಿ ನಡೆಸುತ್ತಿದ್ದ ತನಿಖೆಯ ಅನುಭವ ನನಗಾಗಿತ್ತು. ಆದರೆ ನನ್ನ ತನಿಖೆಗೆ ಇದೊಂದೇ ಅನುಭವ ಸಾಲದು ಎಂಬ ಅರಿವೂ ನನಗಿತ್ತು.

ದೇಶದ ಪಿಡಿಎಸ್ ಯೋಜನೆಯು ಐದು ಲಕ್ಷ ನ್ಯಾಯಬೆಲೆ ಅಂಗಡಿಗಳ ಮೂಲಕ ರಿಯಾಯಿತಿ ದರದಲ್ಲಿ ಆಹಾರ ಧಾನ್ಯ ಒದಗಿಸುವ ಜಗತ್ತಿನ ಒಂದು ಬೃಹತ್ ವ್ಯವಸ್ಥೆಯೂ ಹೌದು. ಆದರೆ ಯೋಜಕರು ಈ ಮಳಿಗೆಗಳಿಗೆ `ನ್ಯಾಯಬೆಲೆ ಅಂಗಡಿ~ ಎಂಬ ಹೆಸರನ್ನು ಆಯ್ದುಕೊಂಡದ್ದೇಕೆ ಎಂಬ ಅಚ್ಚರಿಗೆ ನಾನು ಒಳಗಾಗಿದ್ದೆ. ಹೀಗಾಗಿ ಈ ವ್ಯವಸ್ಥೆಯು ನಿಜವಾಗಲೂ ನ್ಯಾಯವಾಗಿ ನಡೆಯುತ್ತಿದೆಯೇ ಎಂಬುದನ್ನು ಕಂಡುಹಿಡಿಯುವುದು ನನ್ನ ಮೂಲೋದ್ದೇಶವಾಗಿತ್ತು.

2010ರ ಸೆಪ್ಟೆಂಬರ್ ತಿಂಗಳಲ್ಲಿ ನನ್ನ ಕಾರ್ಯ ಆರಂಭವಾಯಿತು. ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಸಣ್ಣ ಹಳ್ಳಿಯೊಂದಕ್ಕೆ ಸ್ಥಳೀಯ ಅಧಿಕಾರಿಗಳೊಂದಿಗೆ ಭೇಟಿ ಕೊಟ್ಟೆ.

ಸುಮಾರು ಎರಡು ಸಾವಿರ ಜನಸಂಖ್ಯೆಯ ಆ ಗ್ರಾಮ ಕೆಲವು ಆದಿವಾಸಿ ಹಾಡಿಗಳಿಂದ ಸುತ್ತುವರಿದಿದೆ. ಸ್ಥಳೀಯ ರೈತರ ಸೊಸೈಟಿಯು ಆ ಗ್ರಾಮದ `ನ್ಯಾಯಬೆಲೆ ಅಂಗಡಿ~ಯನ್ನು ನಿರ್ವಹಿಸುತ್ತಿದ್ದು, ಅಲ್ಲಿನ ವ್ಯವಸ್ಥೆಯಲ್ಲಿನ ದೋಷಗಳ ಬಗ್ಗೆ ಆರೋಪ ಕೇಳಿಬಂದಿತ್ತು.

ನ್ಯಾಯಬೆಲೆ ಅಂಗಡಿಯಲ್ಲಿ ಆಹಾರಧಾನ್ಯ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಗಲೀಜು ಢಾಳಾಗಿ ಎದ್ದು ಕಾಣುತ್ತಿತ್ತು. ಮಳಿಗೆಯನ್ನು ನಡೆಸುತ್ತಿದ್ದ ಪ್ರಮುಖ ವ್ಯಕ್ತಿ ನಾವು ಬರುವ ಸಂಗತಿಯನ್ನು ಮೊದಲೇ ಅರಿತು ನಮ್ಮ ಭೇಟಿಯನ್ನು ತಪ್ಪಿಸಿಕೊಂಡಿದ್ದ. ತನ್ನ ಸಹಾಯಕ ಮಾತ್ರ ಇರುವಂತೆ ನೋಡಿಕೊಂಡಿದ್ದ. ಅಲ್ಲಿ ನೆರೆದಿದ್ದ ಆ ಪ್ರದೇಶದ ಜನ ತಮ್ಮ ಪಾಲಿನ ಆಹಾರಧಾನ್ಯ ಪಡೆದುಕೊಳ್ಳಲು ಕಾಯುತ್ತಿದ್ದರು. ಅವರನ್ನು ಮಾತನಾಡಿಸಿದಾಗ ಅವರಲ್ಲಿ ಯಾರೊಬ್ಬರಿಗೂ ನಿಜವಾಗಲೂ ಅವರಿಗೆ ದೊರೆಯಬೇಕಾದಷ್ಟು ಪ್ರಮಾಣದ ಆಹಾರಧಾನ್ಯ ಕೊಡುತ್ತಿಲ್ಲ ಎಂಬುದು ನನ್ನ ಗಮನಕ್ಕೆ ಬಂತು.

ವಾಸ್ತವದಲ್ಲಿ `ಅಂತ್ಯೋದಯ~ ಕಾರ್ಡ್‌ದಾರರಿಗೆ 29 ಕೆ.ಜಿ ಅಕ್ಕಿ ಮತ್ತು 6 ಕೆ.ಜಿ ಗೋಧಿಯನ್ನು ಕ್ರಮವಾಗಿ ಕೆ.ಜಿಗೆ 3 ಹಾಗೂ 2 ರೂಪಾಯಿಯಂತೆ ಕೊಡಬೇಕು. ಆದರೆ ಅವರಿಗೆ ಕೊಡುತ್ತಿದ್ದುದು 25 ಕೆ.ಜಿ ಅಕ್ಕಿ ಮತ್ತು 3 ಕೆ.ಜಿ ಗೋಧಿ ಮಾತ್ರ. ಅದೂ ಕೆ.ಜಿಗೆ 3.25 ರೂಪಾಯಿ ಹಾಗೂ 2.25 ರೂಪಾಯಿಯಂತೆ.

ಆ ಜನರು ಎಷ್ಟು ಮುಗ್ಧರಾಗಿದ್ದರೆಂದರೆ ತಮಗೆ ಸಿಗಬೇಕಾದ ಹಕ್ಕಿನ ಪಾಲೆಷ್ಟು ಮತ್ತು ಎಷ್ಟು ಬೆಲೆಗೆ ಅದನ್ನು ತಮಗೆ ನೀಡಬೇಕು ಎಂಬುದರ ಅರಿವೇ ಅವರಿಗಿರಲಿಲ್ಲ.

ಅಂಗಡಿಯ ಮಾಲೀಕ ಕೊಡುತ್ತಿದ್ದುದನ್ನು ಆತ ಹೇಳಿದಷ್ಟು ಬೆಲೆ ಕೊಟ್ಟು ಕೊಂಡು ಹೋಗುತ್ತಿದ್ದರು. ತಾವು ಕೊಟ್ಟ ಹಣಕ್ಕೆ ಆತನಿಂದ ರಸೀದಿ ಪಡೆದುಕೊಳ್ಳಬೇಕು ಎಂಬ ಅರಿವೂ ಅವರಿಗಿರಲಿಲ್ಲ.

ನನ್ನ ಭೇಟಿಯ ಸುದ್ದಿ ಅರಿತು ಜನರ ಗುಂಪೇ ಮಳಿಗೆಯ ಹೊರಗೆ ನೆರೆಯಿತು. ಈ ಸಂದರ್ಭದಲ್ಲಿ ಭಾಗಶಃ ಅಂಧಳಾಗಿದ್ದ ಹಿರಿಯ ಮಹಿಳೆಯೊಬ್ಬಳು ನಿಧಾನವಾಗಿ ಹಿಂಜರಿಯುತ್ತಾ ನನ್ನ ಬಳಿಗೆ ಬಂದಳು.

ಯಾವುದೇ ಆದಾಯ ಮೂಲ ಇಲ್ಲದ 70 ವರ್ಷದ ಆ ವೃದ್ಧೆ ತನಗೆ ಅಧಿಕಾರಿಗಳಿಂದ ಪಡಿತರ ಕಾರ್ಡ್ ಕೊಡಿಸುವಂತೆ ನನ್ನ ಕೈ ಹಿಡಿದು ಬೇಡಿಕೊಂಡಳು. `ಅಂತ್ಯೋದಯ~ ಕಾರ್ಡ್ ಪಡೆಯುವ ಎಲ್ಲ ಅರ್ಹತೆಯೂ ಆಕೆಗಿತ್ತು.

ಸಾಮಾಜಿಕ ಭದ್ರತೆ ಒದಗಿಸುವ ಕಾರಣಕ್ಕೇ ಸರ್ಕಾರ ಅಂತ್ಯೋದಯ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಅದರಲ್ಲೂ ಹಿರಿಯರು, ವಿಧವೆಯರು, ಶೋಷಿತರ ಕಲ್ಯಾಣದ ಗುರಿ ಇದರ ಹಿಂದಿದೆ.

ಈ ಮಹಿಳೆ ಪಡಿತರ ಕಾರ್ಡ್‌ನಿಂದ ವಂಚಿತಳಾದದ್ದು ಹೇಗೆ ಎಂದು ನಾನು ಸ್ಥಳದಲ್ಲಿದ್ದ ಆಹಾರ ನಿರೀಕ್ಷಕರನ್ನು ಕೇಳಿದೆ. ಆಕೆ ತಾಲ್ಲೂಕು ಕಚೇರಿಗೆ ಬಂದು ತನ್ನ ಹೆಸರು ನೋಂದಾಯಿಸಿಲ್ಲ ಎಂದು ಅವರು ಪ್ರತಿಕ್ರಿಯಿಸಿದರು. ಓಹ್! ಹಾಗಿದ್ದರೆ ಈ ವೃದ್ಧೆ 20 ಕಿ.ಮೀ ದೂರದ ತಾಲ್ಲೂಕು ಕಚೇರಿಗೆ ಬಂದು ಭ್ರಷ್ಟ ವ್ಯವಸ್ಥೆಯ ಜೊತೆ ರಾಜಿ ಮಾಡಿಕೊಂಡು ತನ್ನ ಹಕ್ಕಿನ ಪಾಲನ್ನು ಪಡೆದುಕೊಳ್ಳಬೇಕೇ? ಹಾಗಿದ್ದರೆ ಸಾಮಾಜಿಕ ಭದ್ರತಾ ವ್ಯವಸ್ಥೆಗೆ ಯಾವ ಅರ್ಥವಿದೆ?

ನಾನು ಆ ಮಹಿಳೆಯತ್ತ ತಿರುಗಿ ಏನೋ ಹೇಳಬೇಕೆಂಬಷ್ಟರಲ್ಲಿ, `ದಿಕ್ಕುದೆಸೆಯಿಲ್ಲದ ನನ್ನಂತ ಬಡ, ಕುರುಡು ಮಹಿಳೆಗೇ ನೀವು ಕಾಳುಕಡ್ಡಿ ಕೊಡದಿದ್ದ ಮೇಲೆ ಇನ್ಯಾರಿಗೆ ಕೊಡುತ್ತೀರಿ?~ ಎಂದಾಕೆ ಮುಗ್ಧವಾಗಿ ಕೇಳಿದಳು. ಆಕೆಯ ಈ ಪ್ರಶ್ನೆಗೆ ನನ್ನ ಬಳಿ ಉತ್ತರ ಇರಲಿಲ್ಲ!

ಕೆಲ ತಿಂಗಳ ಬಳಿಕ ಗುಲ್ಬರ್ಗ ನಗರದ ಹೊರವಲಯದಲ್ಲೂ ಇಂತಹುದೇ ಅನುಭವ ನನಗಾಯಿತು. ಸುಮಾರು 70 ವರ್ಷದ ಹಿರಿಯ ಮಹಿಳೆಯೊಬ್ಬಳು ನನ್ನ ಬಳಿ ದೂರು ದುಮ್ಮಾನ ಹೇಳಿಕೊಂಡಳು.

30 ವರ್ಷ ಪ್ರಾಯದ ಬುದ್ಧಿಮಾಂದ್ಯ ಮಗ ಇದ್ದ ವಿಧವೆ ಅವಳಾಗಿದ್ದಳು. 10 ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡಿದ್ದ ಅವಳಿಗೆ ಯಾವುದೇ ಸಾಮಾಜಿಕ ಅಥವಾ ಆರ್ಥಿಕ ಬೆಂಬಲ ಇರಲಿಲ್ಲ. ಆದರೆ ತನ್ನಂತೆಯೇ ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ನೆರೆಹೊರೆಯ ಸ್ನೇಹಿತರ ಅನುಕಂಪ ಮತ್ತು ಬೆಂಬಲ ಮಾತ್ರ ಇತ್ತು. ಅವರ ನೆರವಿನಿಂದ ನನ್ನ ಬಳಿ ಬಂದಿದ್ದ ಆಕೆ ಬಿಪಿಎಲ್ ಕಾರ್ಡ್ ಕೊಡಿಸುವಂತೆ ಕೋರಿಕೊಂಡಳು.

ನಮ್ಮ ಸರ್ಕಾರ ಮತ್ತು ಅದರ ಬೃಹತ್ ಕಾರ್ಯತಂತ್ರಕ್ಕಿಂತಲೂ ಹೆಚ್ಚಿನ ಸಾಮಾಜಿಕ ಪ್ರಜ್ಞೆ ಆಕೆಯ ಬಡ ಸ್ನೇಹಿತರಿಗಿತ್ತು ಎಂಬುದರಲ್ಲಿ ಯಾವುದೇ ಅನುಮಾನ ಇರಲಿಲ್ಲ. ವಾಸ್ತವದಲ್ಲಿ ಬಿಪಿಎಲ್ ಕಾರ್ಡ್ ಅಲ್ಲ, ಅಂತ್ಯೋದಯ ಕಾರ್ಡ್ ಪಡೆಯುವ ಎಲ್ಲ ಅರ್ಹತೆಯೂ ಆಕೆಗಿತ್ತು. ಆದರೆ ತನ್ನ ಹಕ್ಕಿನ ಪಾಲನ್ನು ಪಡೆಯಲು ಸಂಬಂಧಪಟ್ಟ ಅಧಿಕಾರಿಗಳಿಗೆ ಲಂಚ ಕೊಡುವ ಶಕ್ತಿಯಾಗಲಿ ಅಥವಾ ಗಟ್ಟಿ ದನಿಯಾಗಲಿ ಇಲ್ಲದೇ ಇದ್ದ ಕಾರಣಕ್ಕೆ ವ್ಯವಸ್ಥೆ ಆಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತ್ತು.

ಮೇಲಿನ ಈ ಎರಡು ಉದಾಹರಣೆಗಳ ಜೊತೆಗೆ ಹಾಸನ ಜಿಲ್ಲೆಯಲ್ಲಿ ಆದ ಮತ್ತೊಂದು ಅನುಭವ ನನ್ನನ್ನು ಕ್ರುದ್ಧ ಮತ್ತು ಅಸಹಾಯಕನನ್ನಾಗಿಸಿತು. ವ್ಯವಸ್ಥೆ ಎಷ್ಟೊಂದು ಹೊಣೆರಹಿತವಾಗಿದೆಯಲ್ಲ ಎಂಬ ಕಾರಣಕ್ಕೆ ರೋಷ ಮತ್ತು ಇಂತಹವರಿಗೆ ಯಾವ ರೀತಿಯಲ್ಲೂ ನೆರವಾಗಲು ನನಗೆ ಆಗುತ್ತಿಲ್ಲವಲ್ಲಾ ಎಂಬ ಕಾರಣಕ್ಕೆ ಅಸಹಾಯಕತೆ ನನ್ನನ್ನು ಆವರಿಸಿಕೊಂಡಿತು.

ಹಾಸನದ ನ್ಯಾಯಬೆಲೆ ಅಂಗಡಿ ಮಾಲೀಕನಿಗೆ ಸಮೀಪದಲ್ಲೇ 15 ಎಕರೆಯ ಎಸ್ಟೇಟ್ ಮತ್ತು ದೊಡ್ಡದಾದ ಮನೆ ಇದ್ದರೂ ಆತನ ಬಳಿ ಬಿಪಿಎಲ್ ಕಾರ್ಡ್ ಇತ್ತು. ರಾಜ್ಯದಲ್ಲಿ ಬಡವರನ್ನು ಗುರುತಿಸುವ ಇಡೀ ವ್ಯವಸ್ಥೆ ಎಷ್ಟೊಂದು ದೋಷಪೂರಿತ ಮತ್ತು ಅಸಂಬದ್ಧವಾಗಿದೆ ಎಂಬುದನ್ನು ತನಿಖೆಯ ಸಂದರ್ಭದಲ್ಲಿ ನಾನು ಖುದ್ದಾಗಿ ಕಂಡುಕೊಂಡೆ.
 
ಸಾಕಷ್ಟು ಸಂಖ್ಯೆಯ ಶ್ರೀಮಂತರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ, ಅಷ್ಟೇ ಅಲ್ಲ, ಪಡಿತರ ಕಾರ್ಡನ್ನೇ ಹೊಂದಿರದ ಬಡವರು ಮತ್ತು ಎಪಿಎಲ್ ಕಾರ್ಡ್ ಇಟ್ಟುಕೊಂಡಿರುವ ನಿರ್ಗತಿಕರೂ ನಮ್ಮಲ್ಲಿದ್ದಾರೆ.

ನಮ್ಮ ವ್ಯವಸ್ಥೆಯಲ್ಲಿನ ಇಂತಹ ಸ್ಥಿತಿಗೆ ಯಾರನ್ನು ಹೊಣೆ ಮಾಡಬೇಕು? ಬಡತನ ನಿರ್ಮೂಲನೆಗೆ ಕೇವಲ ಯೋಜನೆಗಳನ್ನು ಚುನಾವಣಾ ಭರವಸೆಗಳಲ್ಲಿ ಘೋಷಿಸುವ ರಾಜಕಾರಣಿಗಳನ್ನೇ, ನೀತಿ ನಿರ್ಬಂಧಗಳ ಹಿಡಿತದಲ್ಲಿ ಸಿಲುಕಿಕೊಂಡಿರುವ ಅಧಿಕಾರಶಾಹಿಯನ್ನೇ ಅಥವಾ ನಾಗರಿಕರಾಗಿ ಉತ್ತಮ ಆಡಳಿತ ಹೊಂದುವ ಹಕ್ಕು ನಮಗಿದೆ ಎಂಬುದನ್ನೇ ಮರೆತುಹೋಗಿರುವ ಸಮಾಜವನ್ನೇ?

ಇದೆಲ್ಲದರ ವಿರೋಧಾಭಾಸವೆಂಬಂತೆ ಇಡೀ ದೇಶದಲ್ಲಿ ಈಗ ಪ್ರತಿದಿನವೂ ಒಂದಿಲ್ಲೊಂದು ಹಗರಣ ಬೆಳಕಿಗೆ ಬರುತ್ತಲೇ ಇದೆ. ಲಕ್ಷಾಂತರ ಹಣ ನಿಗದಿತ ಗುರಿ ಬಿಟ್ಟು ಅನ್ಯ ಕಾರ್ಯಕ್ಕೆ ಬಳಕೆಯಾಗುತ್ತಿದೆ. ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಬಡವರ ಮೇಲಾಗುತ್ತಿರುವ ಭ್ರಷ್ಟಾಚಾರದ ಪರಿಣಾಮಗಳು ನಾಗರಿಕ ಸಮಾಜದ ಸಮಷ್ಟಿ ಪ್ರಜ್ಞೆಯ ಅರಿವಿಗೆ ಬಂದಂತೆ ಕಾಣುತ್ತಿಲ್ಲ ಅಥವಾ ಆಡಳಿತಗಾರರ ಮೇಲೂ ಆದಂತೆ ಕಾಣುತ್ತಿಲ್ಲ.

ಮಾಧ್ಯಮಗಳಿಗೂ ಇಂತಹ ವಿಷಯಗಳು ಪ್ರಮುಖ ಎನಿಸುತ್ತಿಲ್ಲ. ಒಟ್ಟಾರೆ, ನಮಗೆ ಸಣ್ಣಪುಟ್ಟದ್ದು ಎನಿಸುವ ಸಂಗತಿಗಳು ಬಡತನದ ಮೇಲೆ ಬೀರುವ ಅಸಾಧಾರಣ ಪರಿಣಾಮಗಳನ್ನು ಗುರುತಿಸಲು ನಾವು ವಿಫಲರಾಗಿದ್ದೇವೆ ಎಂಬುದು ಮಾತ್ರ ನಿಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT