ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯತ್‌ರಾಜ್‌ಗೆ ‘ಗಂಡಾಂ’ತರ

Last Updated 8 ಜನವರಿ 2015, 8:46 IST
ಅಕ್ಷರ ಗಾತ್ರ

ಮಹಾಭಾರತದ ಸಂಕೀರ್ಣ ರಾಜ­ಕಾರಣದ ನಡುವೆಯೇ ಹುಟ್ಟಿ ಬೆಳೆದ ದ್ರೌಪದಿ ‘ಅಯ್ಯೋ ಈ ರಾಜಕಾರಣದ ನಯ­ನಾಜೂಕು ಎತ್ತ, ನಮ್ಮಂಥ ಅಬಲೆಯರ ಬುದ್ಧಿ ಎತ್ತ’ ಎಂದು ಸುಮ್ಮನೆ ಕೊರಗುತ್ತಿದ್ದಳಂತೆ; ಆದರೆ ರಾಜಕಾರಣದಲ್ಲಿ ತನಗೆ ಏನು ಸರಿ ಅನ್ನಿಸುತ್ತದೋ ಆ ಕೆಲಸವನ್ನೇ ತನ್ನ ಐವರು ಗಂಡಂದಿರು ಮತ್ತು ಶ್ರೀಕೃಷ್ಣ ಮುಂತಾದ ಮಹಾ­ಪುರುಷರಿಂದ ಮಾಡಿಸುತ್ತಿದ್ದ ಅಸಾಮಾನ್ಯ ರಾಜಕಾರಣಿ ಅವಳಾಗಿದ್ದಳು. ಅಂಥ ದ್ರೌಪದಿಯ ನಾಡಿನಲ್ಲಿ ಮಹಿಳಾ ರಾಜಕಾರಣಿ­ಗಳು ತುಂಬಿ­ತುಳುಕದಿದ್ದರೂ ಅವರ ಸಂಖ್ಯೆ ಎದ್ದು ಕಾಣ­ಬೇಕಿತ್ತು. ಆದರೆ ಸಾವಿರಾರು ವರ್ಷ­ಗಳ ನಮ್ಮ ಇತಿಹಾಸವನ್ನು ಅವಲೋಕಿಸಿದರೆ ರಾಜ್ಯಭಾರ ಮತ್ತು ರಾಜಕಾರಣ ನಡೆಸಿದ ಮಹಿಳೆಯರ ಸಂಖ್ಯೆ ನೂರಾರೂ ದಾಟುವುದಿಲ್ಲ. ಏಕೆಂದರೆ ನಮಗೆಲ್ಲ ಗೊತ್ತು, ನಮ್ಮ ನಾಡಿನದು ಬಿಡಿ, ಇಡೀ ಜಗತ್ತಿನ Historyಯೇ ಎಷ್ಟಾ­ದರೂ His storyಯೇ ಹೊರತು Her story ಅಲ್ಲವಲ್ಲ! 

ಆದರೆ, ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ನಡೆದಾಗ ಅದರ ಅಂತರಂಗ ಬಹಿರಂಗಗಳಲ್ಲಿ ಮಹಿಳೆಯರು ನಿಜವಾಗಿ ಪಾಲ್ಗೊಂಡರು.
ಬ್ರಿಟಿ­ಷರ ವಿರುದ್ಧ ನಡೆದ ಸತ್ಯಾಗ್ರಹಗಳಲ್ಲಿ ಪಾಲ್ಗೊ­ಳ್ಳಲು ಹಲವು ಧೀರ ಮಹಿಳೆಯರು ಬೀದಿಗಿಳಿ­ದರೆ, ಗಂಡಸರನ್ನು ಸತ್ಯಾಗ್ರಹಕ್ಕೆ ಕಳಿಸಿಕೊಟ್ಟು ಅನೇಕ ಮಹಿಳೆಯರು ಹೋರಾಟಕ್ಕೆ ನೆರವಾ­ದರು. ಮಹಿಳೆಯರ ಈ ‘ಪಾಲ್ಗೊಳ್ಳುವಿಕೆ’ ಮುಂದೆ ಸ್ವತಂತ್ರ ಭಾರತದ ರಾಜಕಾರಣದಲ್ಲಿ ಗಟ್ಟಿ­ಗೊಂಡು ಬೆಳೆಯಲಿಲ್ಲ. ಸ್ವಾತಂತ್ರ್ಯ ಬಂದು ದಶಕಗಳು ಕಳೆದರೂ ಆಡಳಿತ ಮತ್ತು ಅಭಿ­ವೃದ್ಧಿಯಲ್ಲಿ ಅವರ ಹಾಜರಿ ಹೆಚ್ಚದಿರಲು ಹಲ­ವಾರು ರಾಜಕೀಯ– ಸಾಮಾಜಿಕ ಕಾರಣಗಳಿ­ದ್ದವು. ಈ ರಾಷ್ಟ್ರೀಯ ನ್ಯೂನತೆಗೆ ಮೀಸಲಾತಿ ಎಂಬ ‘ವಿಟಮಿನ್ ಆರ್’ ಪೋಷಣೆಯಲ್ಲದೆ ಬೇರೆ ಪರಿಹಾರವೇ ಇರಲಿಲ್ಲ.

ರಾಜಕೀಯ ಮತ್ತು ಸಾರ್ವಜನಿಕ ಆಡಳಿತ­ದಲ್ಲಿ ಮಹಿಳೆಯರನ್ನು ಸಕ್ರಿಯವಾಗಿ ತೊಡಗಿ­ಸುವ ದಾರಿಯಲ್ಲಿ ಮೊದಲ ಹೆಜ್ಜೆಯಾಗಿ ಪಂಚಾಯತ್‌ರಾಜ್ ವ್ಯವಸ್ಥೆಯಲ್ಲಿ, ಗ್ರಾಮೀಣ, ಪಟ್ಟಣ ಮತ್ತು ನಗರಗಳ ಸ್ಥಳೀಯ ಆಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಅವರಿಗೆ ಮೀಸ­ಲಾತಿ ಕಲ್ಪಿಸಲಾಯಿತು. ಈ ಚಾರಿತ್ರಿಕ ನಿರ್ಧಾರ ನಮ್ಮ ದೇಶದ ಆಡಳಿತ ಸಂರಚನೆ ಮತ್ತು ಸಮೀಕರಣ­ವನ್ನೇ ಬದಲಾಯಿಸಿದ್ದು ಸುಳ್ಳಲ್ಲ. ಇದನ್ನು ‘ಜಗತ್ತಿನ ಅತ್ಯಂತ ದೊಡ್ಡ ಸಾಮಾಜಿಕ ಪ್ರಯೋಗ’ ಮತ್ತು ‘ನಮ್ಮ ಕಾಲದ ರಕ್ತರಹಿತ, ಮೌನ ರಾಜಕೀಯ ಕ್ರಾಂತಿ’ ಎಂದೆಲ್ಲ ಪ್ರಶಂಸೆ ಮಾಡಲಾಗಿದೆ. ಇದೀಗ ಅನೇಕ ರಾಜ್ಯಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಶೇ 50 ರ ಪ್ರಮಾಣ­ವನ್ನೂ ಮೀರುತ್ತಿದ್ದು, ಹತ್ತಿರ ಹದಿ­ನೈದು ಲಕ್ಷ ಮಹಿಳೆಯರು ಆಡಳಿತದಲ್ಲಿ ತೊಡಗಿಕೊಂಡಿ­ದ್ದಾರೆ. ಇಷ್ಟೊಂದು ಚುನಾಯಿತ ಸದಸ್ಯೆಯರು ಇನ್ನಾವ ರಾಜಕೀಯ ವ್ಯವಸ್ಥೆ­ಯಲ್ಲೂ ಇಲ್ಲ. ಹೀಗೆ ಭಾರತದಲ್ಲಿರುವ ‘ಚುನಾ­ವಣೆಗೆ ನಿಂತು ಮತ ಪಡೆದು ಗೆದ್ದ ಮಹಿಳಾ ಪ್ರತಿನಿಧಿ’ಗಳ ಒಟ್ಟು ಸಂಖ್ಯೆ ಜಗತ್ತಿನಲ್ಲೇ ಅತಿ ಹೆಚ್ಚು!

ಪೌರುಷಮಯ ಪರಂಪರೆಯಲ್ಲೇ ಬೆಳೆದು­ಬಂದ ನಮ್ಮ ದೇಶದ ‘ಹೆಣ್ಣೆಂಗಸು’ ಈಮೀಸ­ಲಾತಿ ಮೂಲಕ ನಾಯಕಿಯಾಗಿ, ಆಡಳಿತಗಾರ್ತಿ­ಯಾಗಿ, ಜನಪ್ರತಿನಿಧಿಯಾಗಿ ಪರಿವರ್ತನೆ ಪಡೆದ ರೀತಿಯೇ ರೋಮಾಂಚಕ. ಅವಳು ಈ ತನ್ನ ಹೊಸ ಅಸ್ಮಿತೆಯ ಮೂಲಕ ಬಡತನ, ಅಸಮಾನತೆ, ಜಾತಿ ದಬ್ಬಾಳಿಕೆ, ಪುರುಷ ದೌರ್ಜನ್ಯಗಳಿಗೆ ಎಸೆದ ಸವಾಲುಗಳ ವೈವಿಧ್ಯ­ವಂತೂ ಊಹಾತೀತ. ಗ್ರಾಮೀಣ ಪ್ರದೇಶದಲ್ಲಿ ಜಾತಿ ಮತ್ತು ಲಿಂಗ ಸಮೀಕರಣಗಳು ಇದುವರೆಗೆ ಅದೃಶ್ಯಳಾಗಿದ್ದ ಅವಳನ್ನೂ ಒಳಗೊಳ್ಳುವಂತೆ ಬದಲಾದ ಪರಿ ನಿಜವಾಗಿ ಅಧ್ಯಯನಯೋಗ್ಯ. ಆ ಪಾಂಚಾಲಿಯಿಂದ ಈ ಪಂಚಾಯತ್ ಸದಸ್ಯೆ ವರೆಗೆ ಭಾರತೀಯ ಹೆಣ್ಣು ಪಡೆದ ರೂಪಾಂತರ­ವಂತೂ ವಿಸ್ಮಯಕರ.

ಆದರೆ, ದೇಶದ ಎಲ್ಲ ಬದಲಾವಣೆಗಳ ಹಾಗೆ ಇದಕ್ಕೂ ಸಿಕ್ಕಿದ ಬೈಗುಳ, ಟೀಕೆಟಿಪ್ಪಣಿಗಳಿಗೆ ಮಿತಿಯಿಲ್ಲ. ಪುರುಷ ಪ್ರತಿನಿಧಿ ಸತ್ತರೆ ಮತ್ತು ಮೀಸಲಾತಿಯ ಕಾರಣಕ್ಕೆ– ನಮ್ಮ ದೇಶದಲ್ಲಿ ಗಂಡಸರ ಬದಲಿಗೆ ಅವರ ಮನೆಯ ಹೆಂಗಸರೇ ಚುನಾವಣೆಗೆ ನಿಲ್ಲುತ್ತಾರೆ, ‘ಬಿ–ಫೋರ್ ರಾಜಕೀಯ’ ಅಂದರೆ ‘ಬೀವಿ ಬಹೆನ್ ಬೇಟಿ ಬಹು’ ರಾಜಕೀಯ  ಎಂಬಂಥ ‘ಲೇಡಿ ಲೇವಡಿ’ ಗಳು ಇನ್ನೂ ಕೇಳುತ್ತಿವೆ. ಅದೇನೇ ಇರಲಿ, ಮನೆಗಳಲ್ಲಿ ರಾಜಕೀಯದ ಗಂಧಗಾಳಿಯೂ ಇರದಿದ್ದ ಲಕ್ಷಾಂತರ ಬಡ ಮಹಿಳೆಯರೂ ಚುನಾವಣೆಗೆ ನಿಂತು ಗೆದ್ದು ಅಧಿಕಾರದ ಕುರ್ಚಿಯಲ್ಲಿ ಕುಳಿತದ್ದು ಮಾತ್ರ ಅದ್ಭುತ ಸಾಮಾಜಿಕ ವಾಸ್ತವ. ಆದರೆ ಇದು ಶಾಸನಸಭೆ ಮತ್ತು ಸಂಸತ್‌ವರೆಗೆ ಬೆಳೆಯಲಿಲ್ಲ ಎನ್ನುವುದು ಬೇರೆ ಕಥೆ.  ಈ ಇಪ್ಪತ್ತು ವರ್ಷಗಳಲ್ಲಿ ಮಹಿಳೆ­ಯರು ಎದುರಿಸಿದ ಸಂದಿಗ್ಧತೆ, ಸಮಸ್ಯೆ, ಸವಾಲು­ಗಳು ಅಸಂಖ್ಯಾತ. ಆದರೆ ಇವೆಲ್ಲ ಮಹಿಳೆಯರ ಪಾಲಿಗೆ ಬರೀ ಹೊರಗಿನವಲ್ಲ.

ನಮ್ಮ ಪಂಚಾಯಿತಿ – ಪುರಸಭೆ – ಪಾಲಿಕೆ ಸದಸ್ಯೆಯರು ತಮ್ಮ ಜೊತೆಗೇ ಇರುವ  ‘ಗಂಡಾ’ಂತರವನ್ನು ನಿವಾರಿಸಿಕೊಳ್ಳುವುದು ಹೇಗೆ? ಈ ರಾಷ್ಟ್ರವ್ಯಾಪಿ ‘ಗಂಡಾಂತರ’ಕ್ಕೆ ಪರಿಹಾರ ಕಂಡುಹಿಡಿಯುವುದು ಹೇಗೆ?

‘ಹೆಂಗಸರಾದ ನಮಗೆ ಆಡಳಿತದ ವಿಚಾರ ತಿಳಿಯುವುದಿಲ್ಲ. ಆದ್ದರಿಂದ  ನಮ್ಮ ಗಂಡಂದಿರೂ ಸಭೆಗಳಿಗೆ ಹಾಜರಾಗಲು ಅನುಮತಿ ಕೊಡಿ’ ಎಂದು (ಬಹುಶಃ ಗಂಡಂದಿರೇ ಬರೆದುಕೊಟ್ಟ) ಮನವಿ ಸಲ್ಲಿಸುತ್ತಿರುವ ನಮ್ಮ ಚುನಾಯಿತ ಮಹಿಳಾ ಪ್ರತಿನಿಧಿಗಳಿಗೆ ಏನು ಹೇಳೋಣ? ಈ ವಿನೂತನ ‘ಪತಿಭಕ್ತಿ’ ಮತ್ತು ‘ಪತಿವ್ರತಾ ಧರ್ಮಪಾಲನೆ’ ಎಂಥ ನಾಚಿಗೆಗೇಡು ಎಂಬು­ದನ್ನು ನಮ್ಮ ಸತೀಮಣಿ ರಾಜಕಾರಣಿಗಳಿಗೆ ಹೇಗೆ ತಿಳಿಸೋಣ? ಮನೆಯ ಹೊರಗೆ ಗಂಡನಿಂದ ಅಂತರ (ದೂರ) ಕಾದುಕೊಳ್ಳುವುದು ನಿಮ್ಮ ಆಡಳಿತ ದಕ್ಷತೆಯ ಫಲವಂತಿಕೆಗೆ ಒಳ್ಳೆಯದು ಎಂದು ಈ ಹೆಂಡತಿಯರಿಗೆ ಹೇಗೆ ಅರ್ಥ ಮಾಡಿಸೋಣ? ಗಂಡನಾದ್ದರಿಂದ ಸಭೆಗಳಿಗೆ ತಾನೂ ಬರಲೇಬೇಕು ಎಂದು ಕೆಟ್ಟ ಹಟ ಹಿಡಿಯುವ ಅವನ ‘ಪುರುಷಸೂಕ್ತ’ ಸ್ತ್ರೀಯರ ರಾಜಕೀಯ ಶಕ್ತಿಯ ಬೆಳವಣಿಗೆಗೆ ಸೂಕ್ತವಲ್ಲ ಎಂಬ ಅರಿವನ್ನು ಹೇಗೆ ಮೂಡಿಸೋಣ?

ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಗಂಡು ಹೆಣ್ಣಿನ ನಡುವೆ ಇರುವ ಸ್ಥಾನಮಾನ, ತಾರತಮ್ಯ, ಅಧಿಕಾರ ಗ್ರಹಿಕೆಗಳೆಲ್ಲವೂ ಪಂಚಾಯತ್ ವ್ಯವಸ್ಥೆಯಲ್ಲೂ ಮುಂದು­ವರೆಯು­ವುದು ಅತೀ ಸಹಜ; ಹಾಗೇ ಮನೆ, ಸಂಸಾರ, ಕುಟುಂಬ, ಮನೆತನ, ಸಮುದಾಯ, ಸಮಾಜ ಇತ್ಯಾದಿಗಳಲ್ಲಿ ಹೆಣ್ಣಿಗಿರುವ ಎರಡನೇ ದರ್ಜೆ ಇಲ್ಲೂ ಇರುತ್ತದೆಯೇ ಹೊರತು ಬೇರೆ ರೀತಿ ಇರಲು ಸಾಧ್ಯವಿಲ್ಲ ಎನ್ನುವುದೂ ಗೊತ್ತಿರುವ ಸಂಗತಿ. ಆದ್ದರಿಂದ ರಾಜಕೀಯ ಚಿಂತನೆ, ಪ್ರಜ್ಞೆ, ಪಾಲ್ಗೊಳ್ಳುವಿಕೆ ಮುಂತಾದ ಎಲ್ಲ ಆಶಯಗಳನ್ನು ಧಿಕ್ಕರಿಸುವ ಈ ‘ಗಂಡಾಂತರ’ ಸಮಸ್ಯೆಗಿರುವುದು ಬರೀ ರಾಜಕೀಯ ಸ್ವರೂಪವಲ್ಲ; ಇದಕ್ಕಿರುವುದು ಸಾಂಸಾರಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸ್ವರೂಪ. ಮತ್ತು ಅವುಗಳ ಜೊತೆ ದೇಶದ ರಾಜಕೀಯ ಸ್ವಾಸ್ಥ್ಯಕ್ಕೇ ದಿಗಿಲು ಹುಟ್ಟಿಸುವಂಥ ಅಪ್ಪಟ ‘ವ್ಯಾವಹಾರಿಕ’ ಸ್ವರೂಪ.

ಈ ವ್ಯಾವಹಾರಿಕ ಸ್ವರೂಪದ ಬಗ್ಗೆ ಕನಿಷ್ಠ ಪದಗಳಲ್ಲಿ ಹೇಳುವುದಾದರೆ–ಪಂಚಾಯತ್‌­ರಾಜ್ ಎನ್ನುವುದು ನಿಜವಾಗಿ ಗಂಡಂದಿರ ಪರ್ಸೆಂಟೇಜ್ ರಾಜ್. ಗ್ರಾಮ, ತಾಲ್ಲೂಕು, ಜಿಲ್ಲೆ, ನಗರಗಳ ಯಾವ ಸಂಸ್ಥೆಯೂ ಇದಕ್ಕೆ ಹೊರ­ತಲ್ಲ. ಎಲ್ಲ ಅರ್ಥಗಳಲ್ಲಿ ‘ಗಂಡಾಂತರ’ ವಾದ ಇದು ನಮ್ಮ ಸಮಾಜದ ಸಂಕೀರ್ಣಾತಿ ಸಂಕೀರ್ಣ ಸಮಸ್ಯೆ.

ಪಂಚಾಯಿತಿ– ಪುರಸಭೆ– ಪಾಲಿಕೆ ಮತ್ತಿತರ ಸಂಸ್ಥೆಗಳ ಅಧಿಕೃತ ಸಭೆಗಳಲ್ಲಿ ಅನಧಿಕೃತವಾಗಿ ಹಾಜರಿರುವ ಗಂಡಂದಿರ ಭಂಡ ಗದ್ದಲ ದೇಶದುದ್ದಗಲ ಎಲ್ಲರ ಕಿವಿಗಳಿಗೆ ಅಪ್ಪಳಿಸುತ್ತಿದೆ. ಚುನಾಯಿತ ಹೆಂಡತಿಯರ ಅಧಿಕಾರವನ್ನು ತಾವೇ ಝಳಪಿಸುತ್ತ ಅವರು ಮಾಡುತ್ತಿರುವ ಅವಾಂತರ­ಗಳು ಮಹಿಳೆಯರಿಗೆ ಮೀಸಲಾತಿಯ ಮೂಲ ಉದ್ದೇಶವನ್ನೇ ಅಣಕ ಮಾಡುತ್ತಿದೆ. ‘ಇದು ಇರಬೇಕಾದುದೇ ಹೀಗೆ, ನಾವು ಮತ ಹಾಕಿ ಆ ಮಹಿಳೆಯನ್ನು ಗೆಲ್ಲಿಸಿರಬಹುದು, ಆದರೆ ಏನಾದರೂ ಕೆಲಸ ಆಗಬೇಕಿದ್ದರೆ ಆಕೆಯ ಗಂಡನ ಬಳಿಗೆ ಹೋಗಬೇಕು’ ಎಂದು ಹಳ್ಳಿ, ನಗರಗಳ ಜನರೆಲ್ಲ ಒಪ್ಪಿಕೊಂಡಿದ್ದಾರೆ. ಅದರ ಪರಿಣಾಮ­ವಾಗಿ ಬರುವ ಸಾಮಾಜಿಕ ಸಂಕೇತಗಳಂತೂ ಆತಂಕ ಮೂಡಿಸುತ್ತವೆ. ಹಿಂದಿ ಭಾಷಾ ಪ್ರದೇಶದಲ್ಲಿ ‘ಸರಪಂಚ್ ಪತಿ’ ಎಂಬ ಪದವೇ ವ್ಯಾಪಕ ಬಳಕೆಯಲ್ಲಿದೆ. ‘ಸರಪಂಚ್’ ಅಂದರೆ ಅಧ್ಯಕ್ಷಸ್ಥಾನವನ್ನು ಒಬ್ಬ ಮಹಿಳೆ ‘ಅಲಂಕರಿಸಿದ್ದರೆ’ ಅವಳು ಇರುವುದು ಬರೀ ಅಲಂಕಾರಕ್ಕೆ, ಅಧಿಕಾರವೇನಿದ್ದರೂ ಅವಳ ಗಂಡನ ಹಕ್ಕು. ‘ಸರಪಂಚ್ ಪತಿ’ ಯದೇ ಆದೇಶಿಸುವ ಅಧಿಕಾರ. ಬಹುಶಃ ಇದು ನಮ್ಮ ದೇಶದಲ್ಲಿರುವ ಅತ್ಯಂತ ವ್ಯಾಪಕ ಸಂವಿಧಾನಾತೀತ ಅಧಿಕಾರ.

ಗಂಡಂದಿರ ಈ ಸಂವಿಧಾನಾತೀತ ಅಧಿಕಾರಕ್ಕೆ ಹೆಂಡತಿಯರೇ ಒತ್ತಾಯಿಸುವ ವಿಷಾದನೀಯ ಉದಾಹರಣೆಗಳು ಯಾವ ರಾಜ್ಯದಲ್ಲಿ ಇಲ್ಲ?  ‘ನಮ್ಮ ಗಂಡಂದಿರನ್ನು ಸಭೆಗೆ ಬಿಡಲೇಬೇಕು’ ಎಂದೊಮ್ಮೆ ಮನವಿ ಕೊಟ್ಟಿದ್ದ ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯೆಯರು ಮತ್ತು ಕಲಬುರ್ಗಿ ಜಿಲ್ಲಾ ಪಂಚಾಯಿತಿ ಸದಸ್ಯೆಯರು, ಸಭೆಗಳು– ಕಾರ್ಯಕ್ರಮಗಳಿಗೆ ಗಂಡಂದಿರನ್ನು ಬಿಡದೆ ಧೈರ್ಯ ತೋರಿದ ಅಧಿಕಾರಿ ಕುರಿತು ಖಂಡನಾ ಗೊತ್ತುವಳಿ ಸ್ವೀಕರಿಸಿದ ಬೀದರ್ ಜಿಲ್ಲಾ ಪಂಚಾಯಿತಿ ಸದಸ್ಯೆಯರು, ಸಭೆಯಲ್ಲಿ ಅಧಿಕಾರಿಗಳಿಗೆ ತನ್ನ ಗಂಡ ಕೊಡುತ್ತಿದ್ದ ಆದೇಶ­ಗಳನ್ನು ಸುಮ್ಮನೆ ನೋಡುತ್ತಿದ್ದ ಅಧ್ಯಕ್ಷೆ ಮತ್ತು ಸಭೆಗೆ ಬಂದಿದ್ದ ತಮ್ಮ ಗಂಡಂದಿರು ಮಾಡುತ್ತಿದ್ದ ಗದ್ದಲವನ್ನು ಸದ್ದಿಲ್ಲದೆ ಆನಂದಿಸುತ್ತಿದ್ದ ಬಳ್ಳಾರಿ ನಗರ ಪಾಲಿಕೆಯ ಸದಸ್ಯೆಯರು, ಸರ್ಕಾರಿ ಕಚೇರಿ ಕಡತಗಳನ್ನು ಧಿಮಾಕಿನಿಂದ ಮನೆಗೆ ಹೊತ್ತೊ­ಯ್ಯುವ ಗಂಡಂದಿರಿಗೆ ಕುಮ್ಮಕ್ಕು ಕೊಡುವ ಮಹಿಳಾ ಮೇಯರ್‌ಗಳು, ಅಧ್ಯಕ್ಷೆ ಉಪಾಧ್ಯಕ್ಷೆ­ಯರು– ಮುಂತಾದ ನಮ್ಮ ರಾಜ್ಯದ ಸ್ವಘೋಷಿತ ‘ಜಾಣದಡ್ಡಿ’ಯರ (ನಮಗೇನೂ ಗೊತ್ತಾಗಲ್ಲ, ನಮಗೇನೂ ತಿಳಿಯಲ್ಲ ಎಂದು ಉದ್ದೇಶಪೂರ್ವಕ­ವಾಗಿ ಹೇಳುವವರನ್ನು ಇನ್ನೇನು ಕರೆಯುತ್ತಾರೆ!?) ಅಕ್ಕತಂಗಿಯರೇ ದೇಶದ ತುಂಬಾ ಹರಡಿ­ಕೊಂಡಿದ್ದಾರೆ. ನಾಮ­ಕಾವಾಸ್ತೆ ಅಧಿಕಾರ­ದ­ಲ್ಲಿ­ರುವ ಇಂಥ ಮಹಿಳಾ ಪ್ರತಿನಿಧಿಗಳ ‘ಜಾಣ­ದಡ್ಡತನ’ಕ್ಕೆ ಬುದ್ಧಿ ಹೇಳುವ, ಬುದ್ಧಿ ಕಲಿಸುವ ನೂರಾರು ಪ್ರಯತ್ನಗಳು ಸರ್ಕಾರಗಳು ಮತ್ತು ಸರ್ಕಾರೇತರ ಸಂಸ್ಥೆಗಳಿಂದ ನಡೆಯುತ್ತಿವೆ. ತರಬೇತಿ ಕಾರ್ಯಕ್ರಮಗಳಿಗಂತೂ ಲೆಕ್ಕವೇ ಇಲ್ಲ. ಆದರೆ ಅವುಗಳ ಪರಿಣಾಮಗಳು, ಫಲಿತಾಂಶಗಳು ಸ್ಪಷ್ಟವಾಗಿ ಗೋಚರಿಸುತ್ತಿಲ್ಲ.

‘ನಮ್ಮ ರಾಜ್ಯದ ಗ್ರಾಮೀಣ ಮತ್ತು ನಗರ ಆಡಳಿತದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ– ಉಪಾಧ್ಯಕ್ಷ ಸ್ಥಾನಗಳಲ್ಲಿ ಮಹಿಳೆಯರು ಇದ್ದಲ್ಲಿ, ಅವರ ಪತಿ ಸಂಸ್ಥೆಯ ಅಧಿಕಾರ ಮತ್ತು ಕಾರ್ಯ ನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ಕೊಡಬಾರದು. ಅಧಿಕೃತ ಕಲಾಪಗಳು ಮತ್ತು ಸಭೆಗಳಲ್ಲಿ ಭಾಗವಹಿಸಲು ಅವಕಾಶ ಕೊಡ­ಬಾರದು. ಯಾವುದೇ ಪಂಚಾಯತ್ ಸಂಸ್ಥೆ­ಗಳಲ್ಲಿ, ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಅಧ್ಯಕ್ಷೆಯ ಪತಿ ಅಧಿಕಾರ ಚಲಾಯಿಸಲು ಅವಕಾಶ ನೀಡಿದರೆ, ಸಂಬಂಧಿಸಿದ ಜಿಲ್ಲಾ ಪಂಚಾಯಿತಿಯ ಸಿಇಒ, ಕಾರ್ಯನಿರ್ವಾಹಕ ಅಧಿಕಾರಿ, ನಗರ­ಪಾಲಿಕೆ, ನಗರಸಭೆ, ಪುರಸಭೆ ಆಯುಕ್ತ ಮುಂತಾದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ’ ಎಂದು ನಮ್ಮ ರಾಜ್ಯದ ಸರ್ಕಾರದ ಸಂಬಂಧಿತ ಇಲಾಖೆಗಳು ತಾವೇ ಹಿಂದೆ ಊದಿದ್ದ ಎಚ್ಚರಿಕೆಯ ಶಂಖವನ್ನು ಇತ್ತೀಚೆಗೆ ಮತ್ತೊಮ್ಮೆ ಊದಿವೆ. ಬಹುತೇಕ ಎಲ್ಲಾ ರಾಜ್ಯಗಳೂ ಒಂದಲ್ಲಾ ಒಂದು ರೀತಿ­ಯಲ್ಲಿ ಎಚ್ಚರಿಕೆ ಕೊಡುತ್ತಿವೆ. ಸರ್ಕಾರಿ ಅಧಿಕಾರಿ­ಗಳು ಈ ವಿಚಾರದಲ್ಲಿ ತಾವು ಅಸಹಾಯಕರು ಎಂದು ಹೇಳಿಕೊಂಡರೂ ಅದು ಎಲ್ಲ ಸಂದರ್ಭ­ಗಳಲ್ಲಿ ನಿಜವಲ್ಲ. ಏಕೆಂದರೆ ಪರ್ಸೆಂಟೇಜ್ ರಾಜ್ ನಲ್ಲಿ ಇವರೂ ಪಾಲುದಾರರೆನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. 

‘ಹಣಬಲ, ತೋಳ್ಬಲಗಳೇ ತುಂಬಿರುವ ದುಷ್ಟ ರಾಜಕೀಯ ರಂಗದಲ್ಲಿ, ಭ್ರಷ್ಟಾಚಾರ ತುಂಬಿ­ತುಳುಕುವ ದುರುಳ ಅಧಿಕಾರಶಾಹಿಯಲ್ಲಿ ಗಂಡ­ಸರ ಜೊತೆ ಕೆಲಸ ಮಾಡುವುದು ನಮಗೆ ತುಂಬಾ ದೊಡ್ಡ ಕಷ್ಟ, ಹುಲಿಗಳ ಜೊತೆ ಇರಬೇಕಾದ ಹುಲ್ಲೆಗಳು ನಾವು, ಬಹಳ ಬೇಗ ಅವರಿಗೆ ಬಲಿ ಆಗಿಬಿಡುತ್ತೇವೆ’ ಎಂಬಂತೆ ಮಾತನಾಡಿ ತಮ್ಮ ಗಂಡನ ಅಧಿಕಾರ ಚಲಾವಣೆಯನ್ನು ಎಲ್ಲ ಚುನಾಯಿತ ಮಹಿಳಾ ಪ್ರತಿನಿಧಿಗಳು ಸಮರ್ಥಿಸಿ­ಕೊಳ್ಳುತ್ತಾರೆ. ಆದರೆ ಭ್ರಷ್ಟಾಚಾರವನ್ನು ಮಾತ್ರ ಬಹಳ ಬೇಗ ಕಲಿಯುವ ಇವರು ಸಾರ್ವಜನಿಕ ಕಾರ್ಯನಿರ್ವಹಣೆಯನ್ನು ಯಾಕೆ ಕಲಿಯುವು­ದಿಲ್ಲ ಎಂಬ ಬಹಳ ಮುಖ್ಯವಾದ ಪ್ರಶ್ನೆಯನ್ನು ಬೇರೆಯವರು ಬಿಡಿ, ನಮ್ಮ ದೇಶದಲ್ಲಿ ಭ್ರಷ್ಟಾ­ಚಾರಕ್ಕೆ ಇರುವ ಹೆಣ್ಣುಮುಖವೇ ಕೇಳುತ್ತದೆ.

ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರಲು ನಮ್ಮ ರಾಜ್ಯ ಸರ್ಕಾರವೂ ಸೇರಿದಂತೆ ಹಲವು ಸರ್ಕಾರಗಳು ನೇಮಿಸಿದ ಸಮಿತಿಗಳು ತಮ್ಮ ಒಳ್ಳೆಯ ಶಿಫಾರಸುಗಳನ್ನು ಮುಂದಿಟ್ಟಿವೆ. ಆದರೆ ಈ ‘ಗಂಡಾಂತರ’ದ ನಿವಾರಣೆಗೂ ನಿರ್ದಿಷ್ಟ ಶಿಫಾರಸುಗಳು, ದೃಢಕ್ರಮಗಳು ಅತ್ಯಗತ್ಯ. ಆದರೆ ಆಡಳಿತ, ಕರ್ತವ್ಯ ನಿರ್ವಹಣೆ ಮುಂತಾದುವನ್ನು ಕಲಿಸುವವರು ಅವರಲ್ಲೇ ಇದ್ದಾರಲ್ಲ?

ಹೆಬ್ಬೆಟ್ಟು ಒತ್ತುವುದು ಮಾತ್ರ ಗೊತ್ತಿದ್ದರೂ ತನ್ನ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಶಾಲೆಗಳನ್ನು ಆರಂಭಿಸಿದ, ಬುಡಕಟ್ಟು ಭಾಷೆ ಮಾತ್ರ ತಿಳಿದಿದ್ದರೂ ಹಳ್ಳಿಯ ಹೆಂಗಸರಿಗೆ ಆರೋಗ್ಯದ ಬಗ್ಗೆ ಅದ್ಭುತ ತಿಳಿವಳಿಕೆ ಮೂಡಿಸಿದ, ಕುಡಿಯುವ ನೀರಿಗೆ ದಿನಾ ಎಂಟು ಕಿ.ಮೀ. ನಡೆದಿದ್ದರೂ ಕೊಳವೆ ಬಾವಿಗಳಿಗೆ ಆಗ್ರಹಿಸಿ ಬಾವಿ ಕೊರೆಸಿದ, ಘೂಂಘಟ್ (ಮೇಲುಮುಸುಕು) ಕಿತ್ತೆಸೆಯುವ ಮೂಲಕ ಹಳ್ಳಿಯ ಗಂಡಸರಿಗೆ ದಿಟ್ಟ ಸಂದೇಶ ರವಾನಿಸಿದ, ಫತ್ವಾ ಧಿಕ್ಕರಿಸಿ ಚುನಾವಣೆಗೆ ನಿಂತು ಗೆದ್ದು ಗುಂಡೇಟು ತಿಂದರೂ ಕೆಲಸ ಮುಂದುವರೆಸಿದ, ‘ನನ್ನ ಹೆಸರು ಹೇಳಿ ನನ್ನ ಗಂಡ ಇಂಥವರಿಂದ ದುಡ್ಡು ತಿಂದಿದ್ದಾನೆ’ ಎಂದು ಪೊಲೀಸ್ ಠಾಣೆಗೆ ದೂರುಕೊಟ್ಟ ಮತ್ತು ಇವರಂಥ ಸಾವಿರಾರು ಮಾದರಿ ಮಹಿಳಾ ಪ್ರತಿನಿಧಿಗಳು ದೇಶದಲ್ಲಿದ್ದಾರೆ. ಅಸಾಮಾನ್ಯ ಬದ್ಧತೆ ಇರುವ ಈ ಸಾಮಾನ್ಯ ಮಹಿಳೆಯರನ್ನು ನೋಡಿ ‘ಗಂಡಾಂತರ’ ದೂರವಿಡುವುದನ್ನು ಕಲಿಯಬಹುದಲ್ಲವೇ?
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT