ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಫೆಡರಲ್ ಪೊಲೀಸ್' ವ್ಯವಸ್ಥೆಯ ಅನಿವಾರ್ಯತೆ

Last Updated 5 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಅದು ನೆನಪಿಟ್ಟುಕೊಳ್ಳುವಂತಹ ಮಹತ್ವದ ಸಂಗತಿ ಏನಲ್ಲ. ಆದರೂ 1980ರ ಅದೊಂದು ದಿನ ನಡೆದ ಆ ಘಟನೆ ನನ್ನ ಸ್ಮೃತಿಪಠಲದಲ್ಲಿನ್ನೂ ಜೀವಂತವಿದೆ. ಅತ್ಯುತ್ತಮ ಕಾರ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳಿಗೆ ಪದಕಗಳ ವಿತರಣಾ ಸಮಾರಂಭವದು. 

ಮತ್ತೆ ಅಧಿಕಾರದ ಗದ್ದುಗೆ ಏರಿದ್ದ ಶ್ರೀಮತಿ ಇಂದಿರಾಗಾಂಧಿಯವರು ಪಾಲ್ಗೊಳ್ಳುತ್ತಿದ್ದುದರಿಂದ ಆ ಸಮಾರಂಭಕ್ಕೂ ವಿಶೇಷ ಕಳೆ ಬಂದಿತ್ತು. ಆದರೆ, ಅಲ್ಲಿ ನಡೆದದ್ದೇ ಬೇರೆ. ಇಂದಿರಾಗಾಂಧಿಯವರು ಇದ್ದಕ್ಕಿದ್ದಂತೆ ಎದ್ದು ಹೊರನಡೆದೇ ಬಿಟ್ಟರು. ಸಮಾರಂಭದಲ್ಲಿ ಲಕಲಕ ಎನ್ನುತ್ತಿದ್ದ ಉತ್ಸಾಹ ಠುಸ್ಸೆಂದಿತ್ತು. ಸಭೆಯೂ ಬರಕಾಸ್ತಾಯಿತು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ದೌರ್ಜನ್ಯ ಎಸಗಿದ್ದವರನ್ನು ತಹಬಂದಿಗೆ ತರುವಲ್ಲಿ `ಪರಾಕ್ರಮ' ತೋರಿದ್ದ ಅಧಿಕಾರಿಗಳ ಹೆಸರುಗಳು ಸನ್ಮಾನಿತರ ಪಟ್ಟಿಯಲ್ಲಿದ್ದುದನ್ನು ಕಂಡು ಶ್ರೀಮತಿ ಗಾಂಧಿಯವರು ಮುಜುಗರದಿಂದ ಎದ್ದು ನಡೆದಿದ್ದರು !

ಪದಕ ವಿತರಣಾ ಸಮಾರಂಭಗಳೆಲ್ಲಾ ಈಚೆಗೆ ವಾಡಿಕೆಯ ಸಾಮಾನ್ಯ ಕಾರ್ಯಕ್ರಮಗಳಾಗಿಬಿಟ್ಟಿವೆ. ಆದರೆ ಅಂದು ರಾಷ್ಟ್ರೀಯ ಪೊಲೀಸ್ ಆಯೋಗದ ವರದಿಯ ಪ್ರತಿಯೊಂದನ್ನು ಆ ಸಭೆಯಲ್ಲಿಯೇ ಪ್ರಧಾನಿಯವರಿಗೆ ನೀಡಲಾಗಿತ್ತು. ತುರ್ತು ಪರಿಸ್ಥಿತಿಯ ನಂತರ ಆ ಆಯೋಗವನ್ನು ನೇಮಿಸಲಾಗಿತ್ತು.

ಆಯೋಗವು ಮೂರು ವರ್ಷಗಳ ಕಾಲ ಶ್ರಮವಹಿಸಿ ಅಧ್ಯಯನ ನಡೆಸಿ ವರದಿಯೊಂದನ್ನು ತಯಾರಿಸಿದ್ದು, ಅದರಲ್ಲಿ ಪೊಲೀಸ್ ಪಡೆಯನ್ನು ಯಾವ ರೀತಿ ರಾಜಕಾರಣಿಗಳಿಂದ ಮತ್ತು ರಾಜಕೀಯಗಳಿಂದ ದೂರವಿಡಬಹುದೆಂಬ ಬಗ್ಗೆ ಕೆಲವು ಶಿಫಾರಸುಗಳನ್ನು ಮಾಡಿತ್ತು. ಅದೊಂದು ಉತ್ತಮ ವರದಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಶ್ರೀಮತಿ ಗಾಂಧಿಯವರು ಆ ವರದಿಯನ್ನು ಮೂಲೆಗೆಸೆದು ಬಿಟ್ಟರು.

ಇದೀಗ ಮೂವತ್ತ ಮೂರು ವರ್ಷಗಳು ಉರುಳಿವೆ. ಆ ವರದಿಯ ಬಗ್ಗೆ ರಾಜ್ಯಗಳು ಅಪಸ್ವರ ಎತ್ತಿದ್ದವು. ಕೇಂದ್ರ ಸರ್ಕಾರಕ್ಕಂತೂ ಈ ಕುರಿತು ಇಚ್ಛಾಶಕ್ತಿಯೇ ಇಲ್ಲ ಬಿಡಿ. ವರ್ಷಗಳಿಂದ ಮೂಲೆಯಲ್ಲಿದ್ದ ಆ ವರದಿಯ ಮೇಲೆ ದೂಳು ಕುಳಿತಿತ್ತು. ಆಗ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿ, ವರದಿಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸೂಚನೆ ನೀಡಿತು. ಶಿಫಾರಸುಗಳನ್ನು ಜಾರಿಗೆ ತನ್ನಿ ಎಂದೂ ಸಲಹೆ ನೀಡಿತು.

ಆದರೆ ಏನೇನೂ ಪ್ರಯೋಜನವಾಗಲಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ವಿಚಾರವು ಸಾಂವಿಧಾನಾತ್ಮಕವಾಗಿ ರಾಜ್ಯಕ್ಕೆ ಸಂಬಂಧಪಟ್ಟ ಸಂಗತಿ ಎಂಬ ಅಂಶವೇ ಇದರ ಅನುಷ್ಠಾನಕ್ಕೆ ತೊಡರುಗಾಲಾಯಿತು. ಅಧಿಕಾರಸ್ತರಿಗೆ ಇದೊಂದು ನೆಪವೂ ಆಯಿತೆನ್ನಿ. ರಾಜ್ಯಗಳ ಸ್ವಾಯತ್ತ ವಲಯಗಳಲ್ಲಿ ಕೇಂದ್ರ ಸರ್ಕಾರವು ಮಧ್ಯ ಪ್ರವೇಶಿಸುವಂತಿಲ್ಲವಲ್ಲ.

ಆದರೆ ಹೈದರಾಬಾದ್‌ನಲ್ಲಿ ಬಾಂಬು ಸ್ಫೋಟವಾಗಿರುವಾಗ, ದೇಶದ ಅಲ್ಲಲ್ಲಿ ಉಗ್ರರ ಬೆದರಿಕೆ ಕೇಳಿ ಬರುತ್ತಿರುವಾಗ ರಾಷ್ಟ್ರೀಯ ಪೊಲೀಸ್ ಆಯೋಗದ ವರದಿ ಮತ್ತೆ ಚರ್ಚೆಗೆ ಗ್ರಾಸ ಒದಗಿಸಿದೆ. ಇಂತಹ ಸಂದಿಗ್ಧದಲ್ಲಿ ದಿಲ್‌ಸುಖ್ ನಗರದಲ್ಲಿ ನಡೆದ ಬಾಂಬು ಸ್ಫೋಟಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂರಿಸಲೆತ್ನಿಸಿದರೆ, ಕೇಂದ್ರ ಸರ್ಕಾರ ಬಾಂಬು ಸ್ಫೋಟದ ಸಾಧ್ಯತೆ ಬಗ್ಗೆ ಎರಡು ದಿನಗಳ ಮೊದಲೇ ಹೈದರಾಬಾದಿನ ಆಡಳಿತಗಾರರಿಗೆ ಮಾಹಿತಿ ನೀಡಲಾಗಿತ್ತಲ್ಲ ಎನ್ನುತ್ತದೆ.

ಸಹಜವಾಗಿಯೇ ಪರಸ್ಪರ ಸಹಕಾರದ ಕೊರತೆ ಕಂಡು ಬಂದಾಗ ಅಧಿಕಾರಶಾಹಿಯು ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ಕೇಂದ್ರದ (ಎನ್‌ಸಿಟಿಸಿ) ಪ್ರಸ್ತಾಪವನ್ನು ಪುನರ್‌ಪರಿಶೀಲಿಸಬೇಕೆಂಬ ಬಗ್ಗೆ ಯೋಚಿಸುತ್ತದೆ. ಆ ಮೂಲಕ ಸಮಗ್ರ ನಿಯಂತ್ರಣ ಸಾಧಿಸುವ ಆಲೋಚನೆ ಅದಕ್ಕೆ. ಈ ಪ್ರಸ್ತಾಪವು ಕ್ಷೀಣಧ್ವನಿಯಲ್ಲಿ ಕೇಳಿ ಬಂದರೂ ಅಷ್ಟರ ಮಟ್ಟಿಗೆ ಸ್ವಾಗತಾರ್ಹ ಸಂಗತಿಯೇ ಹೌದು. ಏಕೆಂದರೆ ಹಲವು ರಾಜ್ಯಗಳ ತೀವ್ರ ಅಸಮಾಧಾನದ ನಡುವೆಯೂ ಹುಟ್ಟು ಪಡೆದ ರಾಷ್ಟ್ರೀಯ ತನಿಖಾ ಏಜೆನ್ಸಿಯ (ಎನ್‌ಐಎ) ಕಾರ್ಯಕ್ಷಮತೆ ಬಗ್ಗೆ ಅಷ್ಟೇನೂ ಮೆಚ್ಚುಗೆಯ ಮಾತು ಕೇಳಿ ಬರುತ್ತಿಲ್ಲ.

ಮುಂಬೈ ದಾಳಿಯ ನಂತರ ಈ ಘಟಕವನ್ನು ಹುಟ್ಟು ಹಾಕಲಾಗಿದೆ. ಎನ್‌ಐಎ ಈಗಾಗಲೇ ಕೈಗೆತ್ತಿಕೊಂಡಿರುವ ಸುಮಾರು ಹನ್ನೊಂದು ಪ್ರಕರಣಗಳಲ್ಲಿ ಎರಡರಲ್ಲಿ ಮಾತ್ರ ಸಮರ್ಪಕ ಮತ್ತು ದಿಟ್ಟ ಹೆಜ್ಜೆಗಳನ್ನಿರಿಸಿದೆ, ಅಷ್ಟೇ. ಈ ನಡುವೆ ಎನ್‌ಐಎಯ ವ್ಯಾಪ್ತಿಯನ್ನು ಪ್ರಶ್ನಿಸಲಾಗಿರುವ ಮೊಕದ್ದಮೆಯೊಂದು ಬಾಂಬೆ ಹೈಕೋರ್ಟ್‌ನಲ್ಲಿ ಕಡತಗಳ ನಡುವೆ ಸೇರಿಕೊಂಡಿದೆ. ಈ ಸಂದರ್ಭದಲ್ಲಿ ಮತ್ತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಣ ಅಧಿಕಾರ ಹಂಚಿಕೆ `ವಿವಾದ'ವು ಗರಿಗೆದರಿದೆ.

ಸಾಮಾನ್ಯವಾಗಿ ಇಂತಹ ಪ್ರಶ್ನೆಗಳು ಪರಿಹಾರ ಕಂಡುಕೊಳ್ಳಲಾಗದಂತಹ ಪರಿಸ್ಥಿತಿಗೆ ತಲುಪಬಾರದು. ಇಂತಹ ವಿವಾದಗಳು ಸುದ್ದಿಯಾದಾಗ ಅದಕ್ಕೊಂದು ತೃಪ್ತಿಕರವಾದ ಪರಿಹಾರೋಪಾಯ ಸಿಗುತ್ತಿಲ್ಲವೆಂದರೆ, ಅದಕ್ಕೆ ಕಾರಣ ಕೇಂದ್ರ-ರಾಜ್ಯಗಳ ಸಂಬಂಧ ಅಥವಾ ಇದಕ್ಕೆ ಸಂಬಂಧಿಸಿದ ಸಾಂವಿಧಾನಿಕ ಸಂಗತಿಗಳು ರಾಜಕೀಯಕರಣಗೊಂಡಿರುವುದೇ ಆಗಿದೆ. ವಿಭಿನ್ನ ರಾಜಕೀಯ ಚಿಂತನೆ, ಯೋಜನೆ, ಮನೋಭಾವಗಳ ರಾಜಕೀಯ ಪಕ್ಷಗಳ ಹಿಡಿತದಲ್ಲಿರುವ ವಿವಿಧ ರಾಜ್ಯ ಸರ್ಕಾರಗಳು ಈ ವಿಷಯವನ್ನೇ ಗೊಂದಲದ ಗೂಡಾಗಿಸಿವೆ. ಕೇಂದ್ರ ಮತ್ತು ರಾಜ್ಯಗಳ ಸಂಬಂಧಗಳಿಗೆ ಸಂಬಂಧಿಸಿದಂತಿರುವ ಸರ್ಕಾರಿಯಾ ಆಯೋಗದ ವರದಿಯ ಶಿಫಾರಸುಗಳನ್ನು ಕೇವಲ ಕೆಲವು ರಾಜ್ಯಗಳಷ್ಟೇ ಗಂಭೀರವಾಗಿ ಪರಿಗಣಿಸಿವೆ.

ಎಲ್ಲಿ ಒಂದಿನಿತು ಎಚ್ಚರ ತಪ್ಪಿದರೂ ತಮ್ಮ  ಅಧಿಕಾರ ವ್ಯಾಪ್ತಿಯ ಮೇಲೆಯೇ ಕರಿಛಾಯೆ ಕವಿದು ಬಿಡಬಹುದೇನೋ ಎಂಬ ಭಯ ರಾಜ್ಯಗಳನ್ನು ಸದಾ ಕಾಡುತ್ತಿರುವುದೊಂದು ವಿಪರ್ಯಾಸ. ಈ ತೆರನಾಗಿ ಇಂತಹದ್ದೊಂದು ಸಾಂವಿಧಾನಿಕ ಅಂಶವನ್ನು ರಾಜಕೀಯಕರಣಗೊಳಿಸಿದುದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವನ್ನೇ ನಾವು ಹೆಚ್ಚು ದೂರ ಬೇಕಾಗುತ್ತದೆ. ಒಂದು ರೀತಿಯಲ್ಲಿ ಪೂರ್ವಗ್ರಹ ಪೀಡಿತ ಸ್ಥಿತಿಯಿಂದ ಯಾವ ಸಂಸ್ಥೆಯನ್ನು ಕಾಂಗ್ರೆಸ್ ಮುಕ್ತಗೊಳಿಸಿದೆ ಹೇಳಿ ನೋಡೋಣ?

ಪಕ್ಷವು ತನಗೆ ಇಷ್ಟವಾದ ವ್ಯಕ್ತಿಯೊಬ್ಬನನ್ನು ಗುರುತಿಸಿ ಆತನಿಗೆ ಯಾವುದೋ ಒಂದು ರಾಜ್ಯದ ರಾಜ್ಯಪಾಲ ಹುದ್ದೆಯನ್ನು ನೀಡಿ ಬಿಡುತ್ತದೆ. ಆದರೆ ಇಂತಹ ನೇಮಕಗಳ ಸಂದರ್ಭಗಳಲ್ಲಿ ರಾಜ್ಯಗಳನ್ನು ಕಾಟಾಚಾರಕ್ಕೆ ವಿಶ್ವಾಸಕ್ಕೆ ತೆಗೆದುಕೊಂಡಂತೆ ಮಾಡುತ್ತದೆ ಅಷ್ಟೇ. ಇದು ಸಂವಿಧಾನದ ಮೂಲತತ್ವಗಳನ್ನೇ ಅಲ್ಲಗಳೆದಂತಲ್ಲವೇ? ಇಂತಹ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರ ರಾಜ್ಯಗಳ ನಡುವಣ ಸಂವಾದ ಹಂತ ಹಂತವಾಗಿ ಕಡಿಮೆಯಾಗುತ್ತಾ ಬಂದು, ರಾಜ್ಯಪಾಲರ ನೇಮಕಗಳಿಗೆ ಸಂಬಂಧಿಸಿದಂತೆ ಏಕಪಕ್ಷೀಯ ನಿರ್ಧಾರಗಳು ಸಾಮಾನ್ಯವಾಗಿ ಬಿಟ್ಟಿದೆ. ಸಂವಿಧಾನದ ನಿಯಮಗಳ ಮೇಲೆ ರಾಜಕೀಯ ಕರಿನೆರಳು ಕವಿಯತೊಡಗಿದೆ. ಹೀಗಾಗಿ ಸಂವಿಧಾನದ ಗಟ್ಟಿ ಅಡಿಪಾಯದ ಮೇಲೆ ನಿಂತ ವ್ಯವಸ್ಥೆಯೇ ಬಲಹೀನಗೊಳ್ಳುತ್ತಾ ಹೋಗುತ್ತದೆ.

ಇಂತಹದ್ದೊಂದು ಪ್ರತಿಕೂಲ ಪರಿಸ್ಥಿತಿಯ ಲಾಭ ಪಡೆಯುವಲ್ಲಿ ರಾಜಕೀಯ ಪ್ರಭಾವಕ್ಕೆ ಒಳಗಾದ ಪೊಲೀಸ್ ವ್ಯವಸ್ಥೆ ಸದಾ ಮುಂದಾಗಿರುತ್ತದೆ. ಸಂಬಂಧಪಟ್ಟ ರಾಜ್ಯದಲ್ಲಿರುವ ಪೊಲೀಸ್ ಪಡೆಯು ಆ ರಾಜ್ಯದ ಮುಖ್ಯಮಂತ್ರಿಯ ಖಾಸಗಿ ಸೇನೆಯಂತೆ ವರ್ತಿಸತೊಡಗುತ್ತದೆ. ಪೊಲೀಸರು ಆ ರೀತಿ ನಡೆದುಕೊಳ್ಳದಿದ್ದರೆ ರಾಜಕೀಯ ಶಕ್ತಿಗಳು ತಮಗೆ ತೋಚಿದಂತೆ ನಡೆದುಕೊಂಡು ಬಿಡುತ್ತವೆ. ಪಶ್ಚಿಮ ಬಂಗಾಳದ ಪೊಲೀಸ್ ಮಹಾನಿರ್ದೇಶಕ ರಂಜಿತ್ ಕುಮಾರ್ ಅವರನ್ನು ಆ ಸ್ಥಾನದಿಂದ ಏಕಾಏಕಿ ಕಿತ್ತು ಹಾಕಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ನಡೆಯೇ ಇಂತಹದ್ದಕ್ಕೆ ಸ್ಪಷ್ಟ ನಿದರ್ಶನವಾಗಿದೆ.

ಕೇಂದ್ರ ಮತ್ತು ರಾಜ್ಯಗಳು ಒಗ್ಗೂಡಿ, ಸಂಪನ್ಮೂಲಗಳನ್ನು ಕಲೆ ಹಾಕಿಕೊಂಡು ಸಮರ್ಥವಾಗಿ ಒಗ್ಗಟ್ಟಿನಿಂದ ಎದ್ದು ನಿಂತರೆ ಭಯೋತ್ಪಾದಕರನ್ನು ಇನ್ನಿಲ್ಲದಂತೆ ಮಟ್ಟ ಹಾಕಬಹುದು. ಗಡಿಯಾಚೆಯಿಂದ ಬರುವ ಉಗ್ರರನ್ನು ಸದೆಬಡಿಯಬಹುದು. ಭಯೋತ್ಪಾದಕರ ವಿರುದ್ಧ ಸೆಣಸುತ್ತಿರುವ ಭದ್ರತಾ ಸಿಬ್ಬಂದಿ ಗುಪ್ತಚರ ಇಲಾಖೆಯ ಸ್ಥಳೀಯ ಮಟ್ಟದ ಮಾಹಿತಿಗಳನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಈಚೆಗಿನ ವರ್ಷಗಳಲ್ಲಿ ಅಲ್ಲಲ್ಲಿ ನಡೆದಿರುವ ಬಾಂಬು ಸ್ಫೋಟ ಪ್ರಕರಣಗಳ ನಂತರದ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳನ್ನೆಲ್ಲಾ ವಿಶ್ಲೇಷಣೆಗೆ ಒಳಪಡಿಸಿದಾಗ ಸ್ಥಳೀಯ ಮಟ್ಟದ ಕೆಲವು ಮಾಹಿತಿಗಳನ್ನು ಗಂಭೀರವಾಗಿ ಪರಿಗಣಿಸಿದ್ದರೆ, ಇಂತಹ ಸ್ಫೋಟ ಪ್ರಕರಣಗಳನ್ನು ತಡೆಯಬಹುದಿತ್ತೆಂಬುದು ಗೊತ್ತಾಗುತ್ತದೆ.

ನ್ಯೂಯಾರ್ಕ್ ಮತ್ತು ವಾಷಿಂಗ್ಟನ್ ಮೇಲೆ ಸೆಪ್ಟೆಂಬರ್ 11ರ ದಾಳಿಯ ನಂತರ ಅಮೆರಿಕಾದಲ್ಲಿ ಭದ್ರತಾ ಸಿಬ್ಬಂದಿ ದೇಶದಾದ್ಯಂತ ಅತ್ಯುತ್ತಮ ಗುಪ್ತಚರ ಜಾಲದ ನೆರವಿನಿಂದ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಆ ದೇಶದಲ್ಲಿ ಅಂದಿನಿಂದ ಇಂದಿನವರೆಗೆ ಅಂತಹ ಇನ್ನೊಂದು ಪ್ರಕರಣ ನಡೆದಿಲ್ಲ. ಅದು ಹೇಗೆ ಸಾಧ್ಯವಾಯಿತೆಂದರೆ ಭಯೋತ್ಪಾದಕರನ್ನು ತಹಬಂದಿಗೆ ತರುವ ನಿಟ್ಟಿನಲ್ಲಿ ಪ್ರಬಲವಾದ ಸಂಸ್ಥೆಯೊಂದನ್ನು ಹುಟ್ಟು ಹಾಕಲಾಯಿತು. ಸರ್ವ ಅಧಿಕಾರಗಳನ್ನೂ ಆ ಸಂಸ್ಥೆಗೆ ನೀಡಲಾಯಿತು.

ಆ ಸಂಸ್ಥೆಯು ಗುಪ್ತ ಮಾಹಿತಿ ಸಂಗ್ರಹಿಸಿ ಅದನ್ನು ವಿಶ್ಲೇಷಣೆ ನಡೆಸಿದ ನಂತರ ದೇಶದಾದ್ಯಂತ ಇರುವ ಗುಪ್ತಚರ ಸಿಬ್ಬಂದಿಯ ಮಾಹಿತಿಗಳನ್ನೂ ಗಣನೆಗೆ ತೆಗೆದುಕೊಂಡು ಎಲ್ಲವನ್ನೂ ತುಲನೆ ಮಾಡುತ್ತದೆ. ಆದರೆ ಆ ಇಡೀ ಪ್ರಕ್ರಿಯೆಯಲ್ಲಿ ರಾಜಕಾರಣಿಗಳು ಹಸ್ತಕ್ಷೇಪ ನಡೆಸಲು ಸಾಧ್ಯವೇ ಇಲ್ಲ. ಭಾರತ ಕೂಡಾ ಈ ಮಾದರಿಯನ್ನು ಅನುಸರಿಸಬಹುದಲ್ಲವೇ. ಆದರೆ ಇಲ್ಲಿ ರಾಜ್ಯ ಸರ್ಕಾರಗಳು ಕೇಂದ್ರದ ಮೇಲೆ ಅಪನಂಬಿಕೆ ಇರಿಸಿಕೊಳ್ಳಬಾರದು. ಜತೆಗೆ ಕೇಂದ್ರ ಮತ್ತು ರಾಜ್ಯಗಳೆರಡೂ ಕೂಡಾ ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದಂತೆ ರಾಜಕಾರಣ ಮಾಡಲೇಬಾರದು. ರಾಜ್ಯಗಳಂತೂ ತಮ್ಮ ಮನೆಯನ್ನು ಚೊಕ್ಕವಾಗಿಟ್ಟುಕೊಳ್ಳಲು ಅತೀವ ಆಸಕ್ತಿ ಹೊಂದಿರುತ್ತವೆಯೇ ಹೊರತು, ಸಮಗ್ರ ದೇಶದ ಬಗ್ಗೆ ಅಷ್ಟೇ ಗಂಭೀರವಾಗಿ ಯೋಚಿಸುವುದಿಲ್ಲ ಎಂಬ ಸತ್ಯ ನಮ್ಮ ಅನುಭವಗಳಿಂದಲೇ ತಿಳಿದಿದೆ.

ಕೇರಳದಲ್ಲಿ ಹಿಂದೆ ನಡೆದ ಘಟನೆಯೊಂದು ನನಗೆ ಈಗ ನೆನಪಿಗೆ ಬರುತ್ತಿದೆ. ಆಗ ಯಾವುದೋ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರದ ವಿರುದ್ಧ ರಾಜ್ಯ ಸರ್ಕಾರದ ಇಂಗಿತದಂತೆಯೇ ಆ ರಾಜ್ಯದಾದ್ಯಂತ ಪ್ರತಿಭಟನೆ, ಮುಷ್ಕರ ನಡೆದಿತ್ತು. ಆಗ ಕೇಂದ್ರ ಸರ್ಕಾರವು ಕೇರಳದಲ್ಲಿರುವ ಅಖಿಲ ಭಾರತ ಸೇವೆಯ ಐಪಿಎಸ್ ಅಧಿಕಾರಿಗಳನ್ನು ಸಂಪರ್ಕಿಸಿ ಕೇಂದ್ರ ಸರ್ಕಾರದ ಆಸ್ತಿಪಾಸ್ತಿಗಳಾದ ಅಂಚೆ ಕಚೇರಿ ಮುಂತಾದುವುಗಳಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಬೇಕೆಂದು ಆದೇಶ ನೀಡಿತ್ತು. ಆದರೆ ಒಕ್ಕೂಟ ವ್ಯವಸ್ಥೆಯ ಹೆಸರು ಹೇಳಿಕೊಂಡು ಕೇಂದ್ರವು ಮಾಡಿದ್ದ ಮನವಿಗೆ ಕೇರಳದಲ್ಲಿ ಕವಡೆ ಕಾಸಿನ ಕಿಮ್ಮತ್ತೂ ಸಿಗಲಿಲ್ಲ.

ಈ ಎಲ್ಲಾ ಏಳುಬೀಳುಗಳನ್ನು ಕಂಡಾಗ ನಮಗೆ ಅಮೆರಿಕಾದಲ್ಲಿರುವಂತಹ ಫೆಡರಲ್ ಪೊಲೀಸ್ ಮಾದರಿಯ ವ್ಯವಸ್ಥೆಯೇ ಹೆಚ್ಚು ಸೂಕ್ತ ಎನಿಸುತ್ತದೆ. ಆಗ ಮಾತ್ರ ಗಡಿಭಾಗದಲ್ಲಿ ಕಂಡು ಬರುವಂತಹ ಭಯೋತ್ಪಾದಕ ಚಟುವಟಿಕೆಗಳನ್ನು ಅತ್ಯಂತ ಸಮರ್ಥವಾಗಿ ಸದೆಬಡಿಯಬಹುದಾಗಿದೆ. ಈ ನಾಡಿನಲ್ಲಿ ಕೆಳಜಾತಿಗಳ ಮೇಲೆ ನಡೆಯುವಂತಹ ದೌರ್ಜನ್ಯಗಳನ್ನು ತಡೆಯುವ ಶಕ್ತಿ ಕೂಡ ಇದೇ ಫೆಡರಲ್ ಪೊಲೀಸರಿಗೆ ಇರುತ್ತದೆ.

ಆ ರೀತಿ ದುರ್ಬಲರ ಮೇಲೆ ಅಟ್ಟಹಾಸ ನಡೆಸುವವರನ್ನು ಫೆಡರಲ್ ಪೊಲೀಸರು ಮೀನಮೇಷ ಎಣಿಸದೆ ಬಗ್ಗುಬಡಿಯುವ ಶಕ್ತಿ ಹೊಂದಿರುತ್ತದೆ. ಈ ಸಂಸ್ಥೆಯನ್ನು ಯಾವುದೇ ಆಡಳಿತಗಾರರು ಅಥವಾ ರಾಜಕೀಯ ಪಕ್ಷ `ಮತಪೆಟ್ಟಿಗೆ ರಾಜಕಾರಣ'ಕ್ಕೆ ಬಳಸಿಕೊಳ್ಳಲು ಸಾಧ್ಯವಾಗಲಿಕ್ಕಿಲ್ಲ. ಅದೊಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಸಂಸತ್‌ಗೆ ಮಾತ್ರ ಉತ್ತರದಾಯಿತ್ವ ಹೊಂದಿರುತ್ತದೆ. ಹೀಗಾಗಿ ಆಡಳಿತ ಪಕ್ಷವೂ ಆ ಪೊಲೀಸ್ ವ್ಯವಸ್ಥೆಯನ್ನು ತನ್ನ `ಕೈಗೊಂಬೆ'ಯನ್ನಾಗಿಸಿಕೊಳ್ಳಲು ಸಾಧ್ಯವಾಗದು. ದೇಶದೊಳಗೆ ಹೆಚ್ಚುತ್ತಿರುವ ಪ್ರಾದೇಶಿಕ ಒಲವು ನಿಲುವುಗಳ ಹಿನ್ನೆಲೆಯಲ್ಲಿಯೂ ಇಂತಹದ್ದೊಂದು ಫೆಡರಲ್ ಪೊಲೀಸ್ ವ್ಯವಸ್ಥೆಯಲ್ಲಿ ಸಮರ್ಪಕ ಉತ್ತರ ಕಂಡುಕೊಳ್ಳಬಹುದು ಎಂದೆನಿಸುತ್ತದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT