ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಿ ಇಂಧನಕ್ಕಾಗಿ ಸೋಶಿಯಲ್ ಎಂಜಿನಿಯರಿಂಗ್

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

ಕಚ್ಚಾತೈಲವೆಂಬ ಒಂದೇ ಒಂದು ಶಕ್ತಿದ್ರವ್ಯದ ಮೇಲೆ ಇಡೀ ಮಾನವಕುಲ ನಿಂತಿದೆ. ನಾಗರಿಕ ಎನ್ನಿಸಿಕೊಂಡ ಪ್ರತಿವ್ಯಕ್ತಿಯ ಪ್ರತಿದಿನದ ಬದುಕಿಗೆ ಅದು ಬೇಕೇ ಬೇಕು ಎಂಬ ಡೇಂಜರಸ್ ಹಂತಕ್ಕೆ ನಾವು ಬಂದು ಮುಟ್ಟಿದ್ದೇವೆ.

ಊಹಿಸಿ: ಪೆಟ್ರೋಲಿಯಂ ಆಧರಿತ ಎಲ್ಲ ವಸ್ತುಗಳೂ ‘ಈ ಕ್ಷಣವೇ ಮಾಯವಾಗಲಿ’ ಎಂದು ಯಾರಾದರೂ ಛೂ ಮಂತ್ರ ಮಾಡುವಂತಿದ್ದರೆ ನಾವೆಲ್ಲ ನಿಂತಲ್ಲೇ ನಗ್ನರಾಗಿ ಬಿಡುತ್ತೇವೆ. ತೊಟ್ಟ ಬಟ್ಟೆ ಅಷ್ಟೇ ಅಲ್ಲ, ನಮ್ಮ ಸುತ್ತಲಿನ ಕಟ್ಟಡ, ರಸ್ತೆ, ರೈಲು, ಬಸ್ಸು, ಲೈಟ್‌ಕಂಬ ಎಲ್ಲವೂ ಮಾಯವಾಗುತ್ತದೆ. ಅದು ನಿಜಕ್ಕೂ ಖಡಕ್ ಛೂ ಮಂತ್ರವಾಗಿದ್ದರೆ ನಾವೂ ಮಾಯವಾಗುತ್ತೇವೆ. ಏಕೆಂದರೆ ನಾವು ಕುಡಿದ ನೀರು, ತಿಂದ ಆಹಾರ, ಪೂಸಿಕೊಂಡ ಪರಿಮಳ- ಎಲ್ಲಕ್ಕೂ ಪೆಟ್ರೋ ಶಕ್ತಿಯೇ ಆಧಾರವಾಗಿದೆ. ಅದು ಮಾಯವಾದರೆ ಮರ್ಯಾದೆಯಿಂದ ಬದುಕುಳಿಯುವವರು ಎಲ್ಲೋ ಅಂಡಮಾನ್ ದ್ವೀಪದ ಓಂಗಿ ಜನರು; ಮಧ್ಯ ಆಫ್ರಿಕಾದ ಎಂಬುಟಿ, ಆಕಾ ಬುಡಕಟ್ಟಿನ ಪಿಗ್ಮಿಗಳು ಇಲ್ಲವೆ ಕಾಲಾಹಾರಿ ಮರುಭೂಮಿಯ ಅಂಚಿನಲ್ಲಿ ವಾಸಿಸುವ ಅಪ್ಪಟ ಆದಿವಾಸಿಗಳು. ಕೆಲಮಟ್ಟಿಗೆ ಒರಿಸ್ಸಾದ ಕಾಲಾಹಂಡಿಯ ಕುಗ್ರಾಮದಲ್ಲಿ ತುತ್ತು ಕೂಳಿಗಾಗಿ ಕಾಡಿನ ಗೆಡ್ಡೆಗೆಣಸು ಹುಡುಕುತ್ತಿರುವ ಜನ. ಅಂತೂ ಬೆರಳೆಣಿಕೆಯಷ್ಟು ಜನ.

ಕಳೆದ ಶುಕ್ರವಾರ ನಮ್ಮ ವಿತ್ತ ಸಚಿವ ಪ್ರಣಬ್ ಮುಖರ್ಜಿ ಪ್ಯಾರಿಸ್ಸಿನ ಜಿ-20 ಸಮ್ಮೇಳನಕ್ಕೆ ಹೋಗಿದ್ದರು.  ಆಹಾರವಸ್ತುಗಳ ಬೆಲೆಯೇರಿಕೆ, ಅದಕ್ಕೆ ಕಾರಣವಾದ ಪೆಟ್ರೋಲ್ ಬೆಲೆಯೇರಿಕೆ ಮುಂತಾದ ವಿಷಯಗಳನ್ನು ಚರ್ಚಿಸಲೆಂದು ಕಡುಶಕ್ತ 20 ರಾಷ್ಟ್ರಗಳು ನಡೆಸಿದ ಸಭೆ ಅದಾಗಿತ್ತು. ಅದೇ ದಿನ, ದಿಲ್ಲಿಯಲ್ಲಿ ಕಡುಬಡ 48 ರಾಷ್ಟ್ರಗಳ ಸಮ್ಮೇಳನ ಆರಂಭವಾಗಿತ್ತು. ಇವರದ್ದೂ ಅದೇ ಸಮಸ್ಯೆ. ಇಂಧನದ್ರವ್ಯಗಳ ಸಮಸ್ಯೆ; ಊಟದ ದ್ರವ್ಯಗಳ ಸಮಸ್ಯೆ.

ಪೆಟ್ರೊದ್ರವ್ಯಗಳ ಹೊಗೆಯಿಂದಾಗಿ ಭೂಮಿ ಕಾವೇರುತ್ತಿದೆ. ವಾಯುಗುಣ ಏರುಪೇರಾಗಿ, ಆಹಾರ ಬೆಳೆಗಳ ಉತ್ಪಾದನೆ ಕೂಡ ಯದ್ವಾತದ್ವಾ ಆಗುತ್ತಿದೆ. ಕಳೆದ ವರ್ಷ ರಷ್ಯದ ಗೋಧಿಯ ಪೈರು ನೆಲ ಕಚ್ಚಿತ್ತು. ಈ ವರ್ಷ ಚೀನಾದ ಬಹುಪಾಲು ಗೋಧಿ ಹೊಲಗಳು ಧ್ವಂಸವಾಗಿವೆ. ಈಚೆಗೆ ಈಜಿಪ್ಟ್‌ನ ಜನರು ದಂಗೆ ಏಳಲು ಆಹಾರವಸ್ತುಗಳ ತುಟಾಗ್ರತೆಯೇ ಮೂಲ ಕಾರಣವಾಗಿದ್ದು, ಅಲ್ಲಿ ವ್ಯಕ್ತವಾದ ಜನಾಕ್ರೋಶ ಈಗ ಕಾಳ್ಗಿಚ್ಚಿನಂತೆ ಮಧ್ಯಪ್ರಾಚ್ಯದ ಇತರ ದೇಶಗಳಿಗೂ ಹಬ್ಬುತ್ತಿದೆ. ಪೆಟ್ರೊದೊರೆಗಳ ಪೀಠಕ್ಕೇ ಬಿಸಿ ತಟ್ಟತೊಡಗಿದೆ. ಇಡೀ ಪೃಥ್ವಿಯನ್ನು ಬಿಗಿಹಿಂಡುತ್ತಿರುವ ತೈಲಶಕ್ತಿಯಿಂದ ನುಣುಚಿಕೊಳ್ಳುವ ಮಾರ್ಗ ಉಂಟೆ?

ನುಣುಚಿಕೊಳ್ಳುವ ಉಪಾಯವೆಂದು ಅನೇಕ ದೇಶಗಳು ಪೆಟ್ರೋಶಕ್ತಿಗೆ ಬದಲಿಯಾಗಿ ಜೈವಿಕ ಇಂಧನಗಳಿಗೆ ಕೈ ಹಾಕಿದ್ದೇ ಆಹಾರ ಸಮಸ್ಯೆಯ ಉಲ್ಬಣಕ್ಕೆ ಕಾರಣವಾಗಿದೆ. ಅಮೆರಿಕ, ಬ್ರಝಿಲ್ ದೇಶಗಳು ಜೋಳದಿಂದ ಇಥೆನಾಲ್ (ಜೈವಿಕ ಪೆಟ್ರೋಲ್) ಉತ್ಪಾದನೆಗೆ ತೊಡಗಿವೆ. ಇತ್ತ ಮಲೇಶ್ಯ, ಇಂಡೊನೇಶ್ಯಗಳಲ್ಲಿ ಪಾಮೆಣ್ಣೆಯನ್ನು ಜೈವಿಕ ಡೀಸೆಲ್ ತಯಾರಿಕೆಗೆ ಬಳಸತೊಡಗಿವೆ. ಇಂಥ ಜೈವಿಕ ಇಂಧನವನ್ನು ಬಳಸಿದರೆ ವಾತಾವರಣದಲ್ಲಿ ಹೊಗೆ ಕಡಿಮೆಯಾಗುತ್ತದೆ; ಬಿಸಿಯೇರುತ್ತಿರುವ ಭೂಮಿಗೆ ತುಸುಮಟ್ಟಿನ ಸಾಂತ್ವನ ಸಿಗುತ್ತದೆ ಎಂಬುದೂ ಕಾರಣವಾಗಿದೆ. ಆದರೆ ಆಹಾರ ಮತ್ತು ಇಂಧನಕ್ಕಾಗಿ ಬ್ರಝಿಲ್ ಮತ್ತು ಇಂಡೊನೇಶ್ಯಗಳಲ್ಲಿ ಅಪಾರ ಪ್ರಮಾಣದ ಗೊಂಡಾರಣ್ಯಗಳ ಸ್ವಾಹಾಕಾರ ನಡೆಯುತ್ತಿದೆ. ವಾತಾವರಣ ಇನ್ನಷ್ಟು ಕಾವೇರಲು ಕಾಡಿನ ಹೊಗೆಯೂ ಕಾರಣವಾಗುತ್ತಿದೆ. ಒಂದು ಸಮಸ್ಯೆಗೆ ಪರಿಹಾರ ಹುಡುಕಲು ಹೊರಟರೆ ಇತರ ಹತ್ತಾರು ಸಮಸ್ಯೆಗಳು ಧುತ್ತೆನ್ನುತ್ತಿವೆ. ತುರ್ತಾಗಿ ಏನಾದರೂ ಉತ್ತರ ಹುಡುಕಿರೆಂದು ರಾಜಕಾರಣಿಗಳು ವಿಜ್ಞಾನಿಗಳ ಹಾಗೂ ಟೆಕ್ನಾಲಜಿ ತಜ್ಞರ ದುಂಬಾಲು ಬೀಳುತ್ತಿದ್ದಾರೆ.

ಮೊನ್ನೆ ಬೆಂಗಳೂರಿನಲ್ಲಿ ಎರಡು ದಿನಗಳ ಜೈವಿಕ ಇಂಧನ ಸಮ್ಮೇಳನ ನಡೆಯಿತು. ಅದರಲ್ಲಿ ಜೀವವಿಜ್ಞಾನಿಗಳಿದ್ದರು, ಶಕ್ತಿತಜ್ಞರಿದ್ದರು, ಕೃಷಿತಜ್ಞರಿದ್ದರು. ಸಾಮಾನ್ಯವಾಗಿ ಇಂಥ ಸಂದರ್ಭದಲ್ಲಿ ರಾಜಕಾರಣಿಗಳು ಉದ್ಘಾಟನಾ ಭಾಷಣ ಮಾಡಿ ವೇದಿಕೆಯನ್ನು ವಿಜ್ಞಾನಿಗಳಿಗೆ ಬಿಟ್ಟು ಹೊರಡುತ್ತಾರೆ. ಮಾಧ್ಯಮ ಪ್ರತಿನಿಧಿಗಳೂ ಜಾಗ ಖಾಲಿ ಮಾಡುತ್ತಾರೆ. ಈ ಬಾರಿ ಹಾಗಾಗಲಿಲ್ಲ. ‘ಇದು ಬರೀ ವಿಜ್ಞಾನಿಗಳ ಸಮಸ್ಯೆ ಅಲ್ಲ. ನೀವೂ ಕೂತಿರಲೇಬೇಕು’ ಎಂದು ಗಟ್ಟಿಯಾಗಿ ಸಂಘಟಕರು ರಾಜಕಾರಣಿಗಳಿಗೆ ಹೇಳಿದ್ದರಿಂದ ನಾನಾ ರಾಜ್ಯಗಳ 25ಕ್ಕೂ ಹೆಚ್ಚು ಜನಪ್ರತಿನಿಧಿಗಳು ಎರಡೂ ದಿನ ಕೂತಿದ್ದರು.

ಬದಲೀ ಶಕ್ತಿಮೂಲಗಳಿಗಾಗಿ ಏನೆಲ್ಲ ತ್ವರಿತ ಸಂಶೋಧನೆ ಎಲ್ಲೆಡೆ ನಡೆಯುತ್ತಿದೆ ನಿಜ. ಬಿಸಿಲಿನಿಂದ, ಗಾಳಿಯಿಂದ, ಸಮುದ್ರದ ತೆರೆಗಳಿಂದ, ಭೂಗರ್ಭದ ಉಷ್ಣತೆಯಿಂದ ವಿದ್ಯುತ್ ಉತ್ಪಾದನೆಯ ಯತ್ನಗಳು ಭರದಿಂದ ಸಾಗಿವೆ. ಆದರೆ ನಮಗೆ ಮುಖ್ಯವಾಗಿ ಮೋಟಾರು ನಡೆಸಬಲ್ಲ ದ್ರವರೂಪಿ ಇಂಧನ ಬೇಕು. ಜತೆಗೆ ಪ್ಲಾಸ್ಟಿಕ್ಕು, ರಸಗೊಬ್ಬರ ಮುಂತಾದವುಗಳ ಉತ್ಪಾದನೆಗೆ ಬದಲೀ ದ್ರವ್ಯ ಬೇಕು. ಅವಕ್ಕೆಲ್ಲ ಜೈವಿಕ ಇಂಧನಗಳೇ ಬೇಕು. ಕೋಟಿಗಟ್ಟಲೆ ವರ್ಷಗಳ ಹಿಂದೆ ಗಿಡಮರಗಳು, ಸಮುದ್ರಜೀವಿಗಳು ಪಾತಾಳಕ್ಕೆ ಸೇರಿ ಕಲ್ಲಿದ್ದಲು, ಲಿಗ್ನೈಟ್, ನೈಸರ್ಗಿಕ ಅನಿಲ ಮತ್ತು ಕಚ್ಚಾತೈಲವಾಗಿದ್ದನ್ನೇ ನಾವು ಈಗ ಮೇಲಕ್ಕೆತ್ತಿ ಆಧುನಿಕ ನಾಗರಿಕತೆಯನ್ನು ಕಟ್ಟಿದ್ದೆವು. ಭೂಗತವಾಗಿದ್ದದ್ದು ಮೇಲೆದ್ದು ಬಂದು ಭೂತವಾಗಿ ಕಾಡಿದ್ದರಿಂದ ಈಗ  ವರ್ತಮಾನದ ಜೀವಿಗಳಿಂದಲೇ ನಮಗೆ ಬೇಕಾದ ಚಾಲನಶಕ್ತಿಯನ್ನು ಪಡೆಯಬೇಕು. ತುರ್ತಾಗಿ ಪಡೆಯಬೇಕು; ಬಿಸಿಭೂಮಿಯ ಬಿಕ್ಕಟ್ಟು, ಪೆಟ್ರೊಬೆಲೆಯ ಬಿಕ್ಕಟ್ಟು, ಆಹಾರ ಉತ್ಪಾದನೆಯ ಬಿಕ್ಕಟ್ಟು ಎಲ್ಲ ಒಟ್ಟಾಗಿ ವಕ್ಕರಿಸುವ ಮೊದಲು ಜನಸ್ತೋಮವನ್ನು ಸುರಕ್ಷಿತವಾಗಿ ಪಾರು ಮಾಡಬೇಕು.

ಅದು ತುಂಬ ನಾಜೂಕಿನ, ಹಗ್ಗದ ಮೇಲಿನ ನಡಿಗೆಯ ಕೆಲಸ. ಅದಕ್ಕೆ ಬರೀ ಸೈನ್ಸ್ ಮತ್ತು ಎಂಜಿನಿಯರಿಂಗ್ ಸಾಲದು. ಯಾವ ಸಸ್ಯಗಳ ಯಾವ ಭಾಗಗಳಿಂದ ಎಷ್ಟು ಪ್ರಮಾಣದ ತೈಲ- ಮದ್ಯಸಾರ ಸಿಗುತ್ತದೆ ಎಂಬುದನ್ನು ವಿಜ್ಞಾನಿಗಳು ಆಗಲೇ ಪತ್ತೆ ಮಾಡಿದ್ದಾರೆ. ಧಾನ್ಯಗಳಿಂದ, ಹುಲ್ಲಿನಿಂದ, ಕಟ್ಟಿಗೆಯಿಂದ ಎಣ್ಣೆ ಅಥವಾ ಮದ್ಯಸಾರ ತೆಗೆಯುವ ತಂತ್ರಜ್ಞಾನವೂ ಸಿದ್ಧವಾಗಿದೆ. ಈಗ ಬೇಕಾಗಿರುವುದು ವಿಜ್ಞಾನ ತಂತ್ರಜ್ಞಾನಕ್ಕಿಂತ ಹೆಚ್ಚಾಗಿ ‘ಸಾಮಾಜಿಕ ವಿಜ್ಞಾನ’ ಮತ್ತು ಅದಕ್ಕಿಂತ ಮುಖ್ಯವಾಗಿ ‘ಸೋಶಿಯಲ್ ಎಂಜಿನಿಯರಿಂಗ್’ ನೈಪುಣ್ಯ ಬೇಕು (ಜನಸ್ತೋಮವನ್ನು ಬೇಕಾದತ್ತ ತಿರುಗಿಸುವ, ಎತ್ತರಿಸುವ, ಅಥವಾ ಅದರ ನಡವಳಿಕೆಯನ್ನು ಬದಲಿಸುವ ಕೆಲಸಕ್ಕೆ ‘ಸೋಶಿಯಲ್ ಎಂಜಿನಿಯರಿಂಗ್’ ಎನ್ನುತ್ತಾರೆ). ನಗರಮುಖಿಯಾಗಿರುವ ರೈತರನ್ನು ಮತ್ತೆ ಹಳ್ಳಿಗೆ ತಿರುಗಿಸಬೇಕು. ಹೊಲದ ದುಡಿಮೆಯಿಂದ ನೆಮ್ಮದಿ ಬದುಕು ಸಾಧ್ಯವೆಂಬುದನ್ನು ಅವರಿಗೆ ಮನಗಾಣಿಸಬೇಕು. ನಾನಾ ಮಾಧ್ಯಮಗಳ ಮೂಲಕ ರೈತರಿಗೆ ಸೂಕ್ತ ಪ್ರೇರಣೆ ಮತ್ತು ಸಾಮಗ್ರಿ ಕೊಟ್ಟು ಇಂಧನ ಸಸ್ಯಗಳನ್ನು ಬೆಳೆಸಬಹುದು. ಆದರೆ ಆಗ ಆಹಾರಕ್ಕೆ, ಮೇವಿಗೆ ಹಾಹಾಕಾರ ಏಳುತ್ತದೆ. ಹಾಗಾಗದಂತೆ ಔಡಲದಂಥ ಆಹಾರೇತರ ಬೆಳೆಗಳನ್ನು ಕೃಷಿಭೂಮಿಯ ಅಕ್ಕಪಕ್ಕಗಳಲ್ಲಿ ಮಾತ್ರ ಬೆಳೆಯುವಂತೆ ಹೇಳಬೇಕು. ಅದಕ್ಕೆ ಆಕರ್ಷಕ ಬೆಲೆ ಇಡಬೇಕು. ಇಟ್ಟರೂ ಕಷ್ಟ! ರೈತರು ಹೊಲದಲ್ಲೂ ನೀರಾವರಿಯಲ್ಲೂ ಅದನ್ನೇ ಬೆಳೆಯಲು ನುಗ್ಗಬಹುದು. ಅದರ ತಪಾಸಣೆ, ನಿಯಂತ್ರಣ ಕಷ್ಟದ ಕೆಲಸ. ಅಂಥ ವಾರ್ಷಿಕ ಬೆಳೆಯ ಬದಲು ಜತ್ರೋಫಾ, ಹೊಂಗೆ, ಬೇವು, ಸಿಮಾರೂಬಾ (ಲಕ್ಷ್ಮೀಗಿಡ) ಮುಂತಾದವನ್ನು ಬೆಳೆಯಲು ಹೇಳಬೇಕು.

ನಮ್ಮ ದೇಶದಲ್ಲಿ ಆರು ಕೋಟಿ ಹೆಕ್ಟೇರ್ ಬಂಜರು ಭೂಮಿ ಇದೆ. ಆ ಒರಟು ನೆಲದಲ್ಲಿ ಶ್ರಮಪಟ್ಟು ಗಿಡ ಹಚ್ಚಿದರೆ ಐದಾರು ವರ್ಷಗಳ ನಂತರ ಫಸಲು ಸಿಗತೊಡಗುತ್ತದೆ. ಆದರೆ ಬೆಳೆ ಮತ್ತು ಬೆಲೆ ಎರಡೂ ಗ್ಯಾರಂಟಿ ಇಲ್ಲದ ದೂರ ಭವಿಷ್ಯದ ದುಡಿಮೆಗೆ ರೈತರ ಮನವೊಲಿಸುವುದು, ಅದೊಂದು ಚಳವಳಿಯಾಗುವಂತೆ ರೂಪಿಸುವುದು, ಅದಕ್ಕೆ ಪೂರಕ ಪರಿಕರಗಳನ್ನು ಒದಗಿಸುವುದು, ಅದರ ಕಾವು ನಾಲ್ಕಾರು ವರ್ಷ ತಗ್ಗದಂತೆ ನೋಡಿಕೊಳ್ಳುವುದು ಇವೆಲ್ಲ ‘ಸೋಶಿಯಲ್ ಎಂಜಿನಿಯರಿಂಗ್’ ಎನ್ನಿಸಿಕೊಳ್ಳುತ್ತದೆ. ಅದಕ್ಕೆ ವಿಜ್ಞಾನಿಗಳ ಜತೆಗೆ ಸಾಮಾಜಿಕ ಚಿಂತಕರು, ಆಡಳಿತ ವಿಶಾರದರು ಕೈಜೋಡಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸರ್ಕಾರಕ್ಕೆ ಇಚ್ಛಾಶಕ್ತಿ ಮತ್ತು ದೀರ್ಘಕಾಲೀನ ಬದ್ಧತೆ ಬೇಕು. ಅಂದರೆ ರಾಜಕೀಯ ಮುತ್ಸದ್ಧಿಗಳ ಸಖತ್ ಬೆಂಬಲ ಬೇಕು.

ಕೆಲವರ್ಷಗಳ ಹಿಂದೆ ಅಬ್ದುಲ್ ಕಲಾಂ ಅವರ ಆಶಯದಂತೆ ರಾಷ್ಟ್ರಮಟ್ಟದಲ್ಲಿ ಜತ್ರೋಫಾ ಎಣ್ಣೆಗಿಡದ ಬೆಳೆಗೆ ಚಾಲನೆ ಕೊಟ್ಟು ಎಡವಟ್ಟಾಗಿ ಸಾಕಷ್ಟು ಟೀಕೆ ಬಂದಿತ್ತು. ಆಹಾರ ಬೆಳೆಯಬೇಕಿದ್ದ ಜಮೀನಿನಲ್ಲಿ ರೈತರು ಜತ್ರೋಫಾ ಬೆಳೆದರು. ನಿರೀಕ್ಷಿತ ಫಸಲು ಬಂತೆ? ಅದೂ ಇಲ್ಲ. ತೈಲ ಸಂಸ್ಕರಣ ಘಟಕಗಳು ಹಳ್ಳಿಯಲ್ಲಿ ತಲೆ ಎತ್ತಿದುವೆ? ಅದೂ ಇಲ್ಲ. ಭವಿಷ್ಯದ ಎಣ್ಣೆದೊರೆಗಳಾಗುವ ಕನಸು ಕಂಡ ರೈತರಿಗೆ ದುಃಸ್ವಪ್ನಗಳೇ ಕಂಡವು.

ಆ ವೈಫಲ್ಯದ ಬೆನ್ನಹಿಂದೆಯೇ ಅಸ್ತಿತ್ವಕ್ಕೆ ಬಂದ ಕರ್ನಾಟಕದ ‘ಜೈವಿಕ ಇಂಧನ ಅಭಿವೃದ್ಧಿ ಮಂಡಲಿ’ ಹುಷಾರಾಗಿ ಹೆಜ್ಜೆ ಇಡುತ್ತ ಈ ವಾರವಿಡೀ ಸುದ್ದಿ ಮಾಡುತ್ತಿದೆ. ರೈತರಿಗೆ ಆಸೆ ಹುಟ್ಟಿಸುವ ಮೊದಲು ಅದು ಅರಣ್ಯ ಇಲಾಖೆಯ ಅಧಿಕಾರಿಗಳ ನೆರವು ಪಡೆದು ಬಂಜರು ಭೂಮಿಗಳಲ್ಲೇ ಹೊಂಗೆ, ಬೇವು, ಲಕ್ಷ್ಮೀಗಿಡಗಳನ್ನು ಬೆಳೆಸುತ್ತಿದೆ.

ಹೋಟೆಲ್‌ಗಳಿಂದ ವ್ಯರ್ಥ ಹೊರಚೆಲ್ಲುವ ಎಣ್ಣೆಯ ಸಂಗ್ರಹ, ಮೀನಿನ ಎಣ್ಣೆಯ ಸದ್ಬಳಕೆ, ತ್ಯಾಜ್ಯ ಪ್ಲಾಸ್ಟಿಕ್, ಅಷ್ಟೇಕೆ ತ್ಯಾಜ್ಯ ಟೈರ್‌ಗಳಿಂದಲೂ ಎಣ್ಣೆ ಎತ್ತುವ ತಾಂತ್ರಿಕತೆಯನ್ನು ಉತ್ತೇಜಿಸುತ್ತಿದೆ. ವ್ಯರ್ಥ ಚೆಲ್ಲಾಡುವ ರಬ್ಬರ್ ಬೀಜ ಮತ್ತು ಗೇರುಹಣ್ಣುಗಳ ಖರೀದಿಗೆ ಮುಂದಾಗುತ್ತಿದೆ. ರೈತರಲ್ಲಿ ಸದ್ಯ ಲಭ್ಯವಿರುವ ಖಾದ್ಯೇತರ ಎಣ್ಣೆಬೀಜಗಳಿಂದ ತೈಲ ಉತ್ಪಾದಿಸುವ 9 ಪ್ರಾತ್ಯಕ್ಷಿಕೆ ಘಟಕಗಳನ್ನು ಕೃಷಿವಿಜ್ಞಾನಿಗಳ ನೆರವಿನಿಂದ ಆರಂಭಿಸಿದೆ.

ತೈಲ ತೆಗೆದ ನಂತರದ ಹಿಂಡಿಯ ಸದ್ಬಳಕೆಯನ್ನೂ ರೈತರಿಗೆ ಮನದಟ್ಟು ಮಾಡಿಕೊಡುತ್ತಿದೆ. ಸೋಶಿಯಲ್ ಎಂಜಿನಿಯರಿಂಗ್‌ನ ಈ ಆರಂಭಿಕ ದಾಳಗಳನ್ನು ಸರಿಯಾಗಿ ನಡೆಸುತ್ತ, ವಾಣಿಜ್ಯ ಮಟ್ಟದ ಜೈವಿಕ ಡೀಸೆಲ್ ಉತ್ಪಾದನೆಗೆ ಚಾಲನೆ ಕೊಟ್ಟಿದೆ. ಇದೀಗ ರಾಜಕಾರಣಿಗಳನ್ನು ಎದುರು ಕೂರಿಸಿಕೊಂಡು ಡಾ. ಬಾಲಕೃಷ್ಣ ಗೌಡರಂಥ ವಿಜ್ಞಾನಿಗಳಿಂದ ಅವರಿಗೆ ಪಾಠ ಹೇಳಿಸಿದೆ.

ಬದಲಿ ಪೆಟ್ರೋಲಿಯಂ ದ್ರವ್ಯ ಎಂದರೆ ದ್ರವ ಬಂಗಾರವೇ ಸರಿ. ಅದರ ರಹಸ್ಯವನ್ನು ಕೈವಶ ಮಾಡಿಕೊಳ್ಳಲೆಂದು ರಾಮರ್ ಪಿಳ್ಳೈಯಂಥ ಕಣ್ಕಟ್ಟು ತಜ್ಞರೂ ನುಗ್ಗುತ್ತಾರೆ; ರೈತರನ್ನು ಮರುಳು ಮಾಡಲು ಕೃಷಿಮಾಂತ್ರಿಕರೂ ನುಗ್ಗುತ್ತಾರೆ.

ಈ ಮಧ್ಯೆ ಜೈವಿಕ ಇಂಧನದ ಘಟಕ ಆರಂಭಿಸಲು ಪಟ್ಟಭದ್ರರ ಪಡೆಯೇ ಆಸಕ್ತಿ ತೋರುತ್ತಿದೆ. ಭಾರತದಲ್ಲಿ ಆರುಕೋಟಿ ಹೆಕ್ಟೇರ್ ಬಂಜರು ಭೂಮಿ ಇದ್ದರೂ ಆಫ್ರಿಕ, ಲ್ಯಾಟಿನ್ ಅಮೆರಿಕಗಳಲ್ಲಿ ಜಮೀನು ಖರೀದಿಗೆ ಪೈಪೋಟಿ ನಡೆದಿದೆ (ಟಾಟಾ ಕೆಮಿಕಲ್ಸ್ ಎರಡು ವಾರಗಳ ಹಿಂದಷ್ಟೇ ಮೊಝಾಂಬಿಕ್ ದೇಶದಲ್ಲಿ ಜೈವಿಕ ಇಂಧನ ಉತ್ಪಾದನೆಗೆಂದು ಹಣ ಹೂಡಿದೆ).

ವರ್ತಮಾನದ ವ್ಯಂಗ್ಯ ಏನು ಗೊತ್ತೆ? ಶ್ರೀಮಂತ ದೇಶಗಳ ಹಾಗೂ ಬಡದೇಶದ ಶ್ರೀಮಂತರ ಅಂದಾದುಂದಿಗಳಿಂದಲೇ ಭೂಮಿಗೆ ಕಂಟಕ ಎದುರಾಗಿದೆ. ಅದನ್ನು ಪರಿಹರಿಸಲು ಈಗ ಬಡದೇಶದ ಬಂಜರು ನೆಲವನ್ನು, ನೆಲಕಚ್ಚಿದ ರೈತರ ನೆರವನ್ನು ಕೋರಬೇಕಾಗಿ ಬಂದಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT