ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಚಿತ್ರರಂಗ ಕಾಪಾಡಿದವರು ಯಾರು?

Last Updated 15 ನವೆಂಬರ್ 2012, 19:30 IST
ಅಕ್ಷರ ಗಾತ್ರ

ಸಾಹಿತ್ಯ ಕ್ಷೇತ್ರದಲ್ಲೂ, ಸಿನಿಮಾ ರಂಗದಲ್ಲೂ ತಮ್ಮದೇ ಆದ ಸ್ಥಾನಗಳಿಸಿಕೊಂಡಿರುವ ಗಿರೀಶ್ ಕಾರ್ನಾಡ್, ಕಳೆದ ವಾರದಿಂದ ಭಾರೀ ಸುದ್ದಿಯಲ್ಲಿದ್ದಾರೆ. ನೊಬೆಲ್ ಪುರಸ್ಕೃತ ವಿ. ಎಸ್. ನೈಪಾಲ್ ಅವರ ಚಿಂತನೆ ಸ್ಥಗಿತಗೊಂಡು ಹತ್ತು ವರ್ಷವೇ ಆಯಿತು ಎಂದು ಮೊದಲು ಚಾಟಿ ಬೀಸಿದರು.

ನಂತರ ಭಾರತದ ನೊಬೆಲ್ ಪುರಸ್ಕೃತ ಕವಿ ರವೀಂದ್ರ ನಾಥ ಟ್ಯಾಗೋರರ ನಾಟಕಗಳು ಎರಡನೆಯ ದರ್ಜೆ ನಾಟಕಗಳು ಎನ್ನುವ ಮೂಲಕ ರವೀಂದ್ರರ ಅಭಿಮಾನಿಗಳನ್ನು ಕೆರಳಿಸಿದರು. ಇವೆರಡೂ ಒಂದು ಕಡೆ ಇರಲಿ. ಕಾರ್ನಾಡರು ಹಾಲಿವುಡ್‌ನ ಆಕ್ರಮಣಕಾರಿ ನೀತಿಯನ್ನು ತರಾಟೆಗೆ ತೆಗೆದುಕೊಂಡದ್ದು ಬಹಳಷ್ಟು ಚಿತ್ರ ಪ್ರೇಮಿಗಳ ದನಿಯಾಗಿದೆ ಎಂದು ನನಗನ್ನಿಸುತ್ತದೆ.

`ಹಾಲಿವುಡ್ ದಾಳಿಯಿಂದ ಬಾಲಿವುಡ್ ಪಾರಾಗಲು ಸಂಗೀತವೇ ಕಾರಣ. ಸಂಗೀತದಿಂದಾಗಿ ಬಾಲಿವುಡ್ಡನ್ನು ಹಾಲಿವುಡ್ ನುಂಗಲು ಸಾಧ್ಯವಾಗಲಿಲ್ಲ~ ಎಂದು ಗಿರೀಶ್ ಕಾರ್ನಾಡ್ ಹೇಳಿದ್ದಾರೆ. (ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ಸಂಗೀತಕ್ಕೆ ಅತಿ ಮಹತ್ವದ ಸ್ಥಾನವಿದೆ. ನೈಪಾಲ್ ಅದನ್ನು ಗುರುತಿಸುವಲ್ಲಿ ವಿಫಲರಾಗಿದ್ದಾರೆ ಎಂದು ನೈಪಾಲರ ವಿರುದ್ಧ ತಿರುಗಿ ಬಿದ್ದುದನ್ನು ಗಮನಿಸಿ) ಐವತ್ತು ವರ್ಷಗಳ ಹಿಂದೆ ಇಟಾಲಿಯನ್, ಜಪಾನಿ ಮತ್ತು ಫ್ರೆಂಚ್ ಸಿನಿಮಾಗಳು ಅತ್ಯುತ್ತಮವೆನಿಸಿದ್ದವು.

ಇಂದು ಏನಾಗಿದೆ? ಎಲ್ಲವನ್ನೂ ಹಾಲಿವುಡ್ ತಿಂದು ತೇಗಿದೆ. ನಮಗೆ `ಟೈಟಾನಿಕ್~ ನಂತಹ ಚಿತ್ರಗಳನ್ನು ನಿರ್ಮಿಸಲು ಸಾಧ್ಯವಾಗದಿರಬಹುದು ಆದರೆ ಅವರಿಗೆ `ಹಮ್ ಆಪ್ಕೆ ಹೈ ಕೌನ್~ನಂತಹ ಚಿತ್ರಗಳನ್ನು ಮಾಡಲು ಬರುವುದಿಲ್ಲ ಎಂಬ ಗಿರೀಶ್ ಕಾರ್ನಾಡರ ಮಾತು ಚಿಂತನೆಗೆ ಒಳ್ಳೆಯ ವಿಷಯ.

ಪ್ರಧಾನಿ ಮನಮೋಹನ್ ಸಿಂಗ್ ಅವರು ಯಾವುದೇ ನೀತಿ ರೂಪಿಸುವ ಮುನ್ನ ಅಮೆರಿಕದತ್ತ ಒಮ್ಮೆ ನೋಡುತ್ತಾರೆ. ಆರ್ಥಿಕ ಚಿಂತನೆಗಳ ವಿಷಯ ಬಂದಾಗ `ದೊಡ್ಡಣ್ಣ~ನನ್ನು ಒಂದು ಸಲ ಕೇಳಿ ಬಿಡೋಣ ಎಂದು ಅಂದುಕೊಳ್ಳುತ್ತಾರೆ.

ಇನ್ಫೋಸಿಸ್‌ನವರೂ ಅಮೆರಿಕವನ್ನೇ ನಂಬಿಕೊಂಡಿದ್ದಾರೆ. ತಿನ್ನಲೂ ಅಮೆರಿಕದ ಕೆಂಟಕಿ ಚಿಕನ್, ಜೊತೆಗೆ ಕೋಕಾಕೋಲವೇ ಬೇಕು ಎಂಬ ಹವ್ಯಾಸಕ್ಕೆ ಬಿದ್ದವರಿದ್ದಾರೆ. ಇಷ್ಟೇ ಏಕೆ ನಮ್ಮ ಮಕ್ಕಳೂ ಎಂಜಿನಿಯರಿಂಗ್ ಓದಿ, ಅಮೆರಿಕಕ್ಕೆ ಹೋಗಿ ಸೆಟಲ್ ಆಗಬೇಕು ಎನ್ನುವ ತವಕ ಹೊಂದಿದ್ದಾರೆ.

ಕನ್ನಡ ಚಿತ್ರ ನಿರ್ಮಾಪಕರೂ ಸೇರಿ ಭಾರತೀಯ ಭಾಷೆಗಳ ಇತರ ನಿರ್ಮಾಪಕರೂ ಕೂಡ ಅಮೆರಿಕದ ಹಾಲಿವುಡ್ ಚಿತ್ರಗಳಿಂದ ಸ್ಫೂರ್ತಿ ಪಡೆದೋ, ಕಾಪಿ ಮಾಡಿಯೋ, ರೀಮೇಕ್ ಮಾಡಿಯೋ  ಸಿನಿಮಾ ಮಾಡುವ ಪ್ರವೃತ್ತಿ ಬೇರು ಬಿಟ್ಟಿದೆ. ಮಾನಸಿಕವಾಗಿ, ಸಾಮಾಜಿಕವಾಗಿ ನಾವು ಅಮೆರಿಕದ ಪ್ರಭಾವಳಿಗೆ ತುತ್ತಾಗಿ ಬಿಟ್ಟಿದ್ದೇವೆ.

ಬೌದ್ಧಿಕವಾಗಿಯೂ ಅಮೆರಿಕದ ತಾಳಕ್ಕೆ ಕುಣಿಯುವ ಕೋಲೆಬಸವರಾಗಿ ಬಿಟ್ಟಿದ್ದೇವೆ. ಈ ಆಕ್ರಮಣದ ಬಗ್ಗೆಯೇ ಗಿರೀಶ್ ಕಾರ್ನಾಡ್ ಎಚ್ಚರಿಸಿರುವುದು. ನಾವು ಹಾಲಿವುಡ್‌ನಿಂದ ಬರುವುದೆಲ್ಲಾ ಶ್ರೇಷ್ಠ ಎಂದು ಭಾವಿಸಿರುವುದರಿಂದ ನಾವು ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ. ಹಾಲಿವುಡ್‌ನವರ ಅಭಿಪ್ರಾಯದಲ್ಲಿ ಭಾರತೀಯರಿಗೆ ಸಿನಿಮಾ ಮಾಡಲು ಬರುವುದೇ ಇಲ್ಲ.

ಯಾವ ಚಿತ್ರಗಳೂ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಕೊಡುವಂತಹ ಗುಣಮಟ್ಟದಲ್ಲಿಲ್ಲ. ಇಂತಹ ಟೀಕೆಗಳನ್ನು ಮಾಡುವ ಹಾಲಿವುಡ್ ಜನರಿಗೆ ತಾವೇ ಶ್ರೇಷ್ಠ ಎಂಬ ಭಾವನೆಯಿದೆ. ಪೂರ್ವಗ್ರಹ ಮತ್ತು ಆತ್ಮರತಿಯಲ್ಲಿ ತೊನೆದಾಡುತ್ತಿರುವ ಹಾಲಿವುಡ್, ಸ್ವಾತಂತ್ರ್ಯೋದಯದ ಕಾಲದಲ್ಲಿ ಭಾರತದ ಚಿತ್ರರಂಗವನ್ನು ಆಕ್ರಮಿಸಲು ಆಗಲಿಲ್ಲ.

ಭಾರತದ ಮಾರುಕಟ್ಟೆ ಆ ವೇಳೆಗೆ ಆಕರ್ಷಕವಾಗಿರಲಿಲ್ಲ ಎಂದೂ ಅರ್ಥೈಸಬಹುದು. ಭಾರತೀಯ ಚಿತ್ರಗಳಲ್ಲಿ ಹಿಂದೂಸ್ತಾನಿ, ಕರ್ನಾಟಕ ಸಂಗೀತಗಳೇ ಹೆಚ್ಚಾಗಿರುತ್ತಿದ್ದುದರಿಂದ ಅಂತಹ ಮನೋಭಾವವಿರುವ ಜನರನ್ನು ಟಾಮ್‌ಬಾಯ್‌ಗಳೂ, ಕೌಬಾಯ್‌ಗಳೂ ಬದಲಿಸಲಾರರು ಎಂದೂ ಅಂದುಕೊಂಡಿರಬಹುದು. ದಕ್ಷಿಣ ಏಷ್ಯಾ ಉಪಖಂಡದಲ್ಲಿ ಚಲನಚಿತ್ರ ಸಂಗೀತ ಹಾಗೂ ಹಾಡಿಗೆ ಹಲವಾರು ಆಯಾಮಗಳಿವೆ.

ವಿಶ್ವದ ಇತರ ಭಾಗದಲ್ಲಿ ಈ ವೈಶಿಷ್ಟ್ಯ ಕಂಡುಬರುವುದಿಲ್ಲ. ಭಕ್ತಿ ಚಳವಳಿಯ ಕಾಲದಿಂದಲೇ ಶ್ರೀಸಾಮಾನ್ಯನ ಜೀವನದ ಮೇಲೆ ಹಾಡುಗಳು ದಟ್ಟವಾದ ಪರಿಣಾಮ ಬೀರಿವೆ. ಈ ತಳಪಾಯದಿಂದಾಗಿಯೇ ನಮ್ಮ ಸಂಸ್ಕೃತಿ ಕಲಬೆರಕೆ ಆಗಲಿಲ್ಲ.
 
1900 ರಲ್ಲೇ ಉತ್ತರಭಾರತದಲ್ಲಿ ಗ್ವಾಲಿಯರ್, ಜೈಪುರ, ರಾಂಪುರ, ರೇವಾರಾಜರ ಆಳ್ವಿಕೆಯಲ್ಲಿ ಸಂಗೀತಕ್ಕೆ ಪ್ರೋತ್ಸಾಹವಿತ್ತು. ಮಹಾರಾಷ್ಟ್ರದಲ್ಲಿ ಬಾಲಗಂಧರ್ವ, ಭೋಂಸ್ಲೆ, ದೀನಾನಾಥ್, ಪ್ರಭಾಕರ್ ಪ್ರಭಾವ ಬೀರಿದ್ದರು. ಮರಾಠಿಯಲ್ಲಿ ಲಾವಣಿ, ಸಾಖಿ, ದಿಂಡಿ ಜನಪದ ಗೀತೆಗಳು ಹೆಚ್ಚು ಜನಪ್ರಿಯವಾದವು.

ಉತ್ತರಭಾರತದಿಂದ ಖಯಾಲ್ ಮತ್ತು ಠುಮ್ರಿ, ಕರ್ನಾಟಕ ಸಂಗೀತದಿಂದ ಕಿರವಾಣಿ ಮತ್ತು ಆರಭಿ ಜನಪ್ರಿಯವಾಗಿದ್ದವು. ಪಾರ್ಸಿ ಮತ್ತು ಉರ್ದು ರಂಗಭೂಮಿಯಲ್ಲಿದ್ದ ಮಧುರ ಗೀತೆಗಳು ಸಿನಿಮಾ ಪ್ರವೇಶಿಸಿದವು.  ಠುಮ್ರಿ ಮತ್ತು ಖಯಾಲ್  ಸುಮಾರು ಇಪ್ಪತ್ತು ನಿಮಿಷಗಳ ಗೀತೆ. ಚಿತ್ರಗಳಲ್ಲಿ ಆಗ ಕಥೆ ಮತ್ತು ಸಂಗೀತವೇ ಸ್ಟಾರ್.
 
ಹಾಡು, ಸಂಗೀತಕ್ಕಾಗಿಯೇ ಪ್ರೇಕ್ಷಕರು ಮತ್ತೆ ಮತ್ತೆ ಚಿತ್ರಮಂದಿರಕ್ಕೆ ತೆರಳುತ್ತಿದ್ದರು, ಸ್ವಾತ್ರಂತ್ರ್ಯ ಹೋರಾಟದ ಸಮಯದ್ಲ್ಲಲೂ ಚಿತ್ರಗೀತೆಗಳು ಜನರನ್ನು ರಾಷ್ಟ್ರೀಯತೆಯತ್ತ ತುಡಿಯುವಂತೆ ಮಾಡಿದವು. ಇಂತಹ ಶ್ರೀಮಂತ ಪರಂಪರೆಯನ್ನು ಅಂದು ಒಡೆಯುವುದು ಅಸಾಧ್ಯವೇ ಆಗಿತ್ತು.

 ಆದರೆ ಈಗ ಮತ್ತೆ ಬಾಲಿವುಡ್ ಏಕೆ, ಭಾರತೀಯ ಚಲನ ಚಿತ್ರರಂಗದ ಮೇಲೆ ಹಾಲಿವುಡ್ ದಾಳಿ ನಡೆಸಿದೆ. ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಹಾಲಿವುಡ್ ಚಿತ್ರಗಳು ಡಬ್ ಆಗಿ ಏಕಕಾಲಕ್ಕೆ ಬಿಡುಗಡೆಯಾಗುತ್ತವೆ, ಕನ್ನಡದಲ್ಲಿ ಡಬ್ ಮಾಡಲು ಪ್ರಬಲ ವಿರೋಧವಿರುವುದರಿಂದ ಕರ್ನಾಟಕದಲ್ಲಿ ಸದ್ಯಕ್ಕೆ ಈ ಸಮಸ್ಯೆ ಇಲ್ಲ.

ಆದರೆ ಬಹುಪಾಲು ಭಾರತೀಯ ಮಾರುಕಟ್ಟೆಯನ್ನು, ಟಿ.ವಿ. ಚಾನಲ್‌ಗಳನ್ನು ಹಾಲಿವುಡ್ ಆಕ್ರಮಿಸಿ ಕೊಂಡಾಗಿದೆ. ಜೇಮ್ಸ ಬಾಂಡ್ ಚಿತ್ರ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿರುವುದನ್ನು ಗಮನಿಸಿ. 1940ರ ದಶಕದಲ್ಲಿ ಈ ವ್ಯವಸ್ಥೆ ಇರಲಿಲ್ಲ.
ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳು ಯಾವುವು? ಎಂಬ ಪ್ರಶ್ನೆ ಬಂದಾಗ, ಎಲ್ಲವೂ ಅಮೆರಿಕದ ಚಿತ್ರಗಳೇ ಆಗಿರುತ್ತವೆ.

ಇಂತಹ ಸಾರ್ವಕಾಲಿಕ ಶ್ರೇಷ್ಠತೆಯನ್ನು ನಿರ್ಧರಿಸುವವರು ಅವರೇ ಆಗಿರುವುದರಿಂದ ಜಗತ್ತಿನಲ್ಲಿ ಅತಿ ಹೆಚ್ಚು ಸಿನಿಮಾ ಪ್ರೇಕ್ಷಕರಿರುವ ಭಾರತಕ್ಕೆ ಅನ್ಯಾಯವಾಗಿದೆ. ನಮ್ಮಲ್ಲಿ ನಡೆಯುವ ಪ್ರಯೋಗಗಳು ಯಾರ ಗಮನಕ್ಕೂ ಬರದೆ ತೆರೆಮರೆಯಲ್ಲೇ ಉಳಿಯುತ್ತವೆ. ಇಲ್ಲದಿದ್ದರೆ `ಸಂಸ್ಕಾರ~ ಇಂದಿಗೂ ವಿಶ್ವದ ಅತ್ಯಂತ ಶ್ರೇಷ್ಠ ಚಲನಚಿತ್ರಗಳ ಪಟ್ಟಿಯಲ್ಲಿರಬೇಕಾಗಿತ್ತು.

ಮೊದಲನೆಯ ಮಹಾಯುದ್ಧಕ್ಕೆ ಮುನ್ನ ಚಲನಚಿತ್ರ ತಯಾರಿಕೆಯಲ್ಲಿ ಅಗ್ರಮಾನ್ಯ ಸ್ಥಾನದಲ್ಲಿದ್ದ ಫ್ರಾನ್ಸ್, ಜರ್ಮನಿ, ಸೋವಿಯತ್ ರಷ್ಯ ಹಾಗೂ ಬ್ರಿಟನ್ ಯುದ್ಧದಿಂದಾಗಿ ಚಲನಚಿತ್ರ ಚಟುವಟಿಕೆಯನ್ನು ನಿಲ್ಲಿಸಿದವು. ಅಮೆರಿಕ ಆ ಸಮಯ ನೋಡಿ ಸಿನಿಮಾ ಪ್ರಪಂಚದ ಮೇಲೆ ಹಿಡಿತ ಸಾಧಿಸಿತು.
 
1914ರ ವೇಳೆಗೆ ಫ್ರಾನ್ಸ್ ಪ್ರಪಂಚದ ಶೇ 90 ರಷ್ಟು ಚಿತ್ರಗಳನ್ನು ತಯಾರಿಸಿ, ರಫ್ತು ಮಾಡುತ್ತಿತ್ತು. 1924ರ ವೇಳೆಗೆ ಅಮೆರಿಕ ಆ ಸ್ಥಾನವನ್ನು ಗಳಿಸಿತು. ಯೂರೋಪಿನ ಇತರ ದೇಶಗಳಲ್ಲೆಲ್ಲ ಚಿತ್ರೋದ್ಯಮ ಮುರುಟಿ ಹೋಗಿದ್ದರೂ, ಫ್ರಾನ್ಸ್‌ನಲ್ಲಿ ಬುದ್ಧಿಜೀವಿಗಳು ಅದರ ಕೈ ಹಿಡಿದದ್ದೇ ಫ್ರಾನ್ಸ್ ಸಿನಿಮಾ ಚೈತನ್ಯಗಳಿಸಲು ಕಾರಣವಾಯಿತು. ಹಾಲಿವುಡ್ ಬಗ್ಗೆ ನಮ್ಮ ಗಿರೀಶ್ ಕಾರ್ನಾಡರಂತೆಯೇ ಫ್ರಾನ್ಸ್ ಚಿತ್ರ ನಿರ್ದೇಶಕರಿಗೂ ಜಿಗುಪ್ಸೆಯಿದೆ.

ಫ್ರಾನ್ಸ್‌ನಿಂದ ತೆರಳಿ ಹಾಲಿವುಡ್‌ನಲ್ಲಿ ಕೆಲಸ ಮಾಡಿದ್ದ ರೆನೆಕ್ಲೇರ್ ಎಂಬ ನಿರ್ದೇಶಕ `ಹಾಲಿವುಡ್ ಆತ್ಮವಿಲ್ಲದ ಅತ್ಯಂತ ದಕ್ಷ ಸಮರ್ಥ ದೇಹ, ಸಮರ್ಥ ರೋಬೋ~ ಎಂದು ಹೇಳಿದ್ದಾನೆ. ಆದರೂ ಆ ಕಾಲದಲ್ಲಿ ಯೂರೋಪಿನ ಬಹಳಷ್ಟು ನಿರ್ದೇಶಕರು, ತಂತ್ರಜ್ಞರು ಅನಿವಾರ್ಯವಾಗಿ ಹಾಲಿವುಡ್ಡಿಗೆ ವಲಸೆ ಹೋಗ್ದ್ದಿದರು.

ಗಿರೀಶ್ ಕಾರ್ನಾಡರು ಅಭಿಪ್ರಾಯ ಪಡುವಂತೆ ಭಾರತೀಯ ಚಿತ್ರಗಳು ಸತ್ವಭರಿತ ಕತೆ ಮತ್ತು ಸಂಗೀತದಿಂದ ವಿಭಿನ್ನ ಆಯಾಮವನ್ನು ಪಡೆದುಕೊಂಡಿವೆ. ಸಿನಿಮಾದೊಳಗಿನ ಸಾಹಿತ್ಯ ಮತ್ತು ಸಂಗೀತ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡವು. ವಾಕ್ ಚಿತ್ರಗಳ ಆರಂಭ ಕೂಡ ನಿಧಾನಗತಿಯಲ್ಲಿ ಆಯಿತು.

ಹೊಸ ಆವಿಷ್ಕಾರದ ಮೂಲಕ ಪ್ರೇಕ್ಷಕನನ್ನು ಇದ್ದಕ್ಕಿದ್ದಂತೆ ಹೊಸ ಜಗತ್ತಿಗೆ ಕೊಂಡೊಯ್ಯುವ ಹಾಗು ಆ ಮೂಲಕ ಪ್ರೇಕ್ಷಕನನ್ನು ಪುಳಕಿತನನ್ನಾಗಿಸುವ ಯತ್ನ ಪಾಶ್ಚಾತ್ಯ ದೇಶಗಳಲ್ಲಿ ನಡೆದರೆ, ಭಾರತೀಯ ಚಿತ್ರಗಳು ಅದುವರೆಗೆ ಜನಪ್ರಿಯ ಮನರಂಜನಾ ಮಾಧ್ಯಮವಾಗಿದ್ದ ರಂಗಭೂಮಿಯ ಮುಂದುವರೆದ ಭಾಗವನ್ನಾಗಿ ಸಿನಿಮಾವನ್ನು ಬೆಳೆಸಿದ್ದೇ, ಸಿನಿಮಾ ಗಟ್ಟಿಯಾಗಿ ಬೆಳೆಯಲು ಕಾರಣವಾಯಿತು ಎನಿಸುತ್ತದೆ. ಮೊದಲನೆಯ ವಾಕ್ಚಿತ್ರದಲ್ಲೇ ಹದಿನೈದು ಹಾಡುಗಳಿದ್ದವು.

`ಸಂಸಾರ ನೌಕ~ದಲ್ಲಿ ಹದಿನೇಳು ಹಾಡುಗಳಿದ್ದವು. ಅಮೀರ್‌ಬಾಯಿ ಕರ್ನಾಟಕಿ, ಮಲ್ಲಿಕಾರ್ಜುನ ಮನ್ಸೂರ್, ದಂಡಪಾಣಿ ದೇಶಿಕರ್, ಟಿ. ಚೌಡಯ್ಯ, ಹೊನ್ನಪ್ಪ ಭಾಗವತರ್, ತ್ಯಾಗರಾಜ ಭಾಗವತರ್ .... ಸಂಗೀತ ಕಛೇರಿಯಲ್ಲಿ ಜನಪ್ರಿಯರಾದವರೆಲ್ಲರೂ ಆರಂಭಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಭಾರತೀಯ ಚಿತ್ರರಂಗ ಕಾಶ್ಮೀರದಿಂದ ಕರ್ನಾಟಕದವರೆಗೆ ಒಂದೇ ಎನ್ನುವುದು ಮೇಲಿಂದ ಮೇಲೆ ಸಾಬೀತಾಗಿದೆ.

ವೈವಿಧ್ಯತೆಯಲ್ಲಿ ಏಕತೆ ಎನ್ನುವುದು ಎಲ್ಲ ವಿಷಯಗಳಲ್ಲೂ ನಾವು ಹೇಳಬಹದು. ಹೀಗಾಗಿ ಇಡೀ ಭಾರತೀಯ ಚಿತ್ರರಂಗದಲ್ಲಿ ಹಿಂದಿಯೂ ಸೇರಿ ಎಲ್ಲರೂ ಸಂಗೀತ ಮತ್ತು ಸಾಹಿತ್ಯಕ್ಕೆ ಹೆಚ್ಚಿನ ಗಮನ ಕೊಟ್ಟರು. ಇದರಿಂದಾಗಿ ಭಾರತೀಯ ಚಿತ್ರರಂಗದ ಆರಂಭಕಾಲವಾದ 30 ಮತ್ತು 40ರ ದಶಕವನ್ನು ಸಂಗೀತದ ಸುವರ್ಣ ಕಾಲ ಎನ್ನಬಹುದು. ಭಾರತೀಯ ಚಿತ್ರಗಳನ್ನೇ ನೋಡುವ ಒಲವು ನಮ್ಮಲ್ಲಿ ಬೆಳೆಯುವುದಕ್ಕೆ ಈ ಹಿನ್ನೆಲೆ ಭದ್ರ ಬುನಾದಿಯೊಂದನ್ನು ಸೃಷ್ಟಿಸಿತು ಎನ್ನಬಹುದು.

ನೌಷಾದ್, ಓ. ಪಿ. ನಯ್ಯರ್, ಮದನ್ ಮೋಹನ್, ಆರ್. ಡಿ. ಬರ್ಮನ್, ಲಕ್ಷ್ಮೀಕಾಂತ್ ಪ್ಯಾರೇಲಾಲ್, ಕಲ್ಯಾಣ್ ಆನಂದ್‌ಜಿ ಹೃದಯಕ್ಕೆ ಹತ್ತಿರವಾದ ಸಂಗೀತವನ್ನು ಕೊಟ್ಟರು. ಸೈಗಾಲ್, ನೂರ್ ಜಹಾನ್, ರಫಿ, ಲತಾ ಮಂಗೇಶ್ಕರ್, ಕಿಶೋರ್ ಕುಮಾರ್, ಶಕೀಲ್ ಬದಾಯುನಿ, ಮನ್ನಾಡೆ ಮೊದಲಾದವರೆಲ್ಲಾ ಸಾಹಿತ್ಯವನ್ನು ಜನರ ಮನಸ್ಸಿನಲ್ಲಿ ಆಳವಾಗಿ ನೆಟ್ಟರು.

ಸಾಹಿರ್ ಲುಧಿಯಾನ್ವಿ ಅವರ ಕ್ರಾಂತಿಕಾರಕ ಕವನಗಳು, ಧರ್ಮಾಂಧತೆಯನ್ನು ಟೀಕಿಸುವ ಸಾಲುಗಳು, ಪ್ರೇಕ್ಷಕರು, ಶ್ರೀಸಾಮಾನ್ಯನ ಅಸಹಾಯಕ ಬದುಕು, ಸಾಮಾಜಿಕ ಸಂದೇಶಗಳನ್ನು ಲುಧಿಯಾನ್ವಿ ಹೇಳುತ್ತಿದ್ದ ರೀತಿ ಸಿನಿಮಾ ಭಾಷೆಯನ್ನು ಸಮೃದ್ಧಗೊಳಿಸಿತು. ಅಲ್ಲದೆ ಭಾವತೀವ್ರತೆಗೆ ಇಂಬುಗೊಟ್ಟಿತು.
 
ಜನಸಾಮಾನ್ಯರ ಚಿಂತನೆಗೆ ಸಾಹಿತ್ಯ ಪೂರಕವಾಗಿ ಸ್ಪಂದಿಸತೊಡಗಿದಾಗ ಭಾರತೀಯ ಪ್ರೇಕ್ಷಕರು ಅದರಲ್ಲಿ ತಮ್ಮನ್ನು ಗುರುತಿಸಿಕೊಳ್ಳುವಂತಾಗಿದ್ದು ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ಮಹತ್ವದ ಬೆಳವಣಿಗೆ ಎನಿಸಿತು. ಚಲನಚಿತ್ರ ಸಂಗೀತದ ಮೂಲಕ ಇಂತಹ ಒಂದು ಮಾನಸಿಕ ಬಲ ನಮ್ಮ ಸಮಾಜದಲ್ಲಿ ಹುಟ್ಟಿಕೊಂಡಿತು. ಹಲವಾರು ಸಾಮಾಜಿಕ ಸಮಸ್ಯೆಗಳಿಗೆ ಉತ್ತರ ಹುಡುಕುವ ಯತ್ನವೂ ಈ ಮೂಲಕ ನಡೆಯಿತು.
 
ಇಂದವೀರ್ ಸಾಮಾಜಿಕ ಜವಾಬ್ದಾರಿ ಹೊತ್ತು ಜನಪರವಾದ ಸಾಹಿತ್ಯ ರಚಿಸಿದರು. `ನನ್ನ ಹಾಡುಗಳು ಹಲವಾರು ವಿಚ್ಛೇದನಗಳನ್ನು, ಆತ್ಮಹತ್ಯೆಗಳನ್ನು ತಡೆದಿವೆ ಎಂದು ಅವರೇ ಹೇಳಿಕೊಂಡಿದ್ದಾರೆ. ಇಂತಹ ಒಂದು ಸಾಹಿತ್ಯದ ಗಟ್ಟಿಬುನಾದಿ ಭಾರತೀಯ ಚಿತ್ರರಂಗಕ್ಕೆ ಇರುವುದರಿಂದಲೇ  ಹಾಲಿವುಡ್ ನಮ್ಮನ್ನು ನುಂಗಿ ನೊಣೆಯುವುದರಿಂದ ತಪ್ಪಿಸಿಕೊಂಡೆವು ಎನಿಸುತ್ತದೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT