ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಮನೆ ಆತಿಥ್ಯ

Last Updated 17 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಹಳೆಯ ವಿದ್ಯಾರ್ಥಿಗಳ ಜೊತೆ ನಿಂತು ಮಾತಾಡಲು ತುಂಬಾ ಖುಷಿ ಎನಿಸುತ್ತದೆ. ಗೆಳೆಯರಷ್ಟೇ ಸರಿ ಸಮಾನವಾಗಿ ನಿಂತು ಅವರು ಮಾತಾಡಬಲ್ಲರು. ಅವರು ನಮಗೆ ತೋರಿಸುವ ಅಭಿಮಾನ ಮತ್ತು ಗೌರವಗಳು ನೊಬೆಲ್ ಪ್ರಶಸ್ತಿಗೆ ಸಮಾನವಾಗಿರುತ್ತವೆ. ಒಳ್ಳೇ ಮೇಷ್ಟ್ರಾದ ಬಡಪಾಯಿಗೆ ಅವನ ಇಡೀ ಜೀವಮಾನದಲ್ಲಿ ಸಿಗುವ ಅತಿ ದೊಡ್ಡ ಗೌರವ ಅಂದರೆ ಇದೊಂದೇನೆ.

ಬಸ್ಸಿನಲ್ಲಿ, ರೈಲಿನಲ್ಲಿ ಪ್ರಯಾಣಿಸುವಾಗ ಸಿಗುವ ವಿದ್ಯಾರ್ಥಿಗಳು ಪ್ರೀತಿಯಿಂದ ಸೀಟು ಬಿಟ್ಟು ಕೊಡುತ್ತಾರೆ. ಫೋಟೊ ತೆಗಿಸಿಕೊಳ್ಳುತ್ತಾರೆ. ಹೊಟೇಲ್ಲಿನಂಥ ಕಡೆ ಸಿಕ್ಕರೆ ನಮ್ಮ ಬಿಲ್ಲನ್ನು ಅವರು ಕೊಟ್ಟೇ ಕೊಡುತ್ತಾರೆ ಅನ್ನೋ ನಂಬಿಕೆ ನನ್ನದು. ಇನ್ನು ಮದುವೆ ಊಟಗಳಿಗೆ ಹೋದರಂತೂ ಸುಗ್ಗಿಯೋ ಸುಗ್ಗಿ. ನನಗೆ ಯಾರಾದರೂ ಸಿಗಲೇಬೇಕು. ಅದಂತೂ ಗುರು ಶಿಷ್ಯರ ಸುಮಧುರ ಸಂಗಮ ಸ್ಥಳ.

ನಮ್ಮಲ್ಲಿ ಈಗ ಹಾಲಿ ಓದುವ ಹುಡುಗರಿಂದ ಹಿಡಿದು ಈಗಾಗಲೇ ಓದನ್ನು ಮುಗಿಸಿರುವ ಅನೇಕರು ಮದುವೆ ಮನೆಗಳಲ್ಲಿ ಊಟ ಬಡಿಸುವ ಕೆಲಸಕ್ಕೆ ಸೇರಿಕೊಂಡಿರುತ್ತಾರೆ. ಅಷ್ಟೇನೂ ಕುಶಲತೆ ಅನುಭವ ಬಯಸದ ಸುಲಭದ ಕೆಲಸವದು. ಮೇಲಾಗಿ ಕಷ್ಟದಲ್ಲಿರುವ ಮಕ್ಕಳಿಗೆ ಖರ್ಚು ವೆಚ್ಚಗಳಿಗೆ ಅಷ್ಟೋ ಇಷ್ಟೋ ದುಡ್ಡು ಸಿಗುವುದರಿಂದ ಇವರಲ್ಲಿ ಕಡ್ಡಾಯವಾಗಿ ನನಗೆ ಸಿಕ್ಕೇ ಸಿಗುತ್ತಾರೆ. ಮೇಲಾಗಿ ಮದುವೆ ಊಟದ ಸುಖವೂ ಸಿಕ್ಕು ಹಾಸ್ಟೆಲ್ ಊಟದಿಂದ ಹದಗೆಟ್ಟ ಅವರ ನಾಲಿಗೆಗೆ ಉಪ್ಪು ಹುಳಿ ಖಾರಗಳು ಸ್ವಾದ ದಕ್ಕುತ್ತವೆ. ಹೀಗಾಗಿ ಮದುವೆ ಸೀಝನ್ ಶುರುವಾದರೆ ನಮ್ಮ ಹುಡುಗರು ಕಾಲೇಜಿನ ಕಡೆ ತಲೆಯೇ ಹಾಕುವುದಿಲ್ಲ.

ಮದುವೆ ಮನೆಯಲ್ಲಿ ಊಟದ ಜಾಗ ಹಿಡಿಯಲು ಕುಟುಂಬ ಸಮೇತನಾಗಿ ಪರದಾಡುವ ನನ್ನ ಕಷ್ಟಕ್ಕೆ ಅವರು ಒದಗಿ ಬರುತ್ತಾರೆ. ಅಂಥ ಸಮಯದಲ್ಲಿ  ಬೀಳುವ ಅವರದೊಂದು ನಮಸ್ಕಾರ ಕೋಟಿ ರೂಪಾಯಿಗೆ ಸಮವಾದದ್ದು.  ಇಷ್ಟಾದ ಮೇಲೆ ಆವೊತ್ತಿನ ಊಟ ಜಬರ್‌ದಸ್ತ್ ಆಗಿರುತ್ತೆ ಅನ್ನೋದರಲ್ಲಿ ಅನುಮಾನವಾದರೂ ಯಾಕೆ ಮಾಡಬೇಕು. ಬೇಕಾದ ಐಟಂಗಳನ್ನು ಕೇಳುವುದೊಂದೇ ಬಾಕಿ. ತಂದು ತಂದು ಜಿದ್ದಾಜಿದ್ದಿಯಲ್ಲಿ ಸುರಿಯುತ್ತಾರೆ. ಹತ್ತು ಹಲವು ಸಾರಿ ಸುಳಿದಾಡಿ ಏನಾದರೂ ಬೇಕಾ ಸಾರ್ ಎಂದು ವಿಚಾರಿಸುತ್ತಲೇ ಇರುತ್ತಾರೆ. ಅಲ್ಲಿ ನಮ್ಮ ಸುತ್ತಮುತ್ತ ಕೂತವರು ಇವರ್‍್ಯಾರೋ ರಾಜಪ್ರಮುಖರೇ ಇರಬೇಕು ಕಂಡ್ರಿ ಹಿಂಗಾಗಿ ವಿಶೇಷ ಆತಿಥ್ಯ ನಡೆಯುತ್ತಿದೆ ಎಂದು ಪಿಸುಗುಟ್ಟಿಕೊಳ್ಳುತ್ತಾರೆ.

ಪಾಪ ಯಾರೋ ಪುಣ್ಯಾತ್ಮರು ಕಷ್ಟಪಟ್ಟು  ಮದುವೆ ಊಟ ಹಾಕಿಸುತ್ತಿರುತ್ತಾರೆ. ಆ  ಜಾಗದಲ್ಲಿ ವಕ್ಕರಿಸಿಕೊಳ್ಳುವ ಗುರು ಶಿಷ್ಯರುಗಳಾದ ನಾವು ಯಾರದೋ ದುಡ್ಡಿನ ಯಲ್ಲಮ್ಮನ ಜಾತ್ರೆಯನ್ನು ಆರಾಮಾಗಿ ಪೂರೈಸಿಕೊಂಡು ಬಿಡುತ್ತೇವೆ. ಇಂಥದ್ದೇ ಒಂದು ಸಂಧಿಸಮಾರಾಧನೆ ಪುಕ್ಕಟೆಯಾಗಿ ನಡೆಯುತ್ತಿದ್ದ ಒಂದು ದಿನ ಭಾರೀ ಯಡವಟ್ಟೊಂದು ನಡೆದು ಹೋಯಿತು. ಅವತ್ತು ನನ್ನ ಪರಿಚಿತರ ಮದುವೆ ಇದ್ದದ್ದು ಹೌದಾದರೂ ಅದು ಯಾವ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದೆ ಎಂಬುದನ್ನು ನಾನು ಸರಿಯಾಗಿ ಜಪ್ತಿಯಲ್ಲಿಟ್ಟುಕೊಳ್ಳದೆ ಮರೆತೇ ಬಿಟ್ಟಿದ್ದೆ.

ಪರಿಚಿತರು ಕಾಲೇಜಿಗೆ ಬಂದು ಕೊಟ್ಟಿದ್ದ ಲಗ್ನ ಪತ್ರಿಕೆ ಕೂಡ ಚಿಂದಿ ಚಿತ್ರಾನ್ನವಾಗಿ ಕಸದ ಬುಟ್ಟಿ ಸೇರಿತ್ತು. ಮದುವೆ ಕಾರ್ಡ್ ನೋಡಲು ಚೆನ್ನಾಗಿದೆ ಕಂಡ್ರಿ ಎಂದು ನಸುನಗುತ್ತಾ  ತೆಗೆದುಕೊಂಡ ಸಹದ್ಯೋಗಿಗಳೇನಕರು  ತಮಗೆ ಬೇಕಾದ ಸೈಜಿಗೆ ಅದನ್ನು ಕಟ್ ಮಾಡಿಕೊಂಡು ಪರ್ಸಿನಲ್ಲಿ ಸಿಕ್ಕಿಸಿಕೊಳ್ಳುವ ಸಣ್ಣ ಟೈಮ್ ಟೇಬಲ್ ಕಾರ್ಡ್‌ಗಳಾಗಿ ಪರಿವರ್ತಿಸಿಕೊಂಡಿದ್ದರು.  ಆ ಮದುವೆ ಜರುಗುವ ಮೊದಲೇ ಅದರ ಲಗ್ನದ ಕಾರ್ಡ್ ಹರಿದು ಹಳ್ಳ ಹಿಡಿದಿತ್ತು.

ಮಧ್ಯಾಹ್ನ ಕಾಲೇಜಿನ ಊಟದ ಅವಧಿ ಬಿಟ್ಟಾಗ ಓಡಿ ಹೋಗಿ ಮದುವೆ ಊಟ ಬಾರಿಸಿಕೊಂಡು ಮತ್ತೆ ಕಾಲೇಜಿಗೆ ಹಾಜರಾಗಬೇಕೆಂಬ ಲೆಕ್ಕಾಚಾರ ನನ್ನದಾಗಿತ್ತು. ಅವಸರದಲ್ಲಿ ಬೈಕು ಹತ್ತಿದೆ. ಅಂದಾಜಿನಲ್ಲಿ ಯಾವ ಕಲ್ಯಾಣ ಮಂದಿರ ಇರಬಹುದೆಂದು ಊಹಿಸಿದೆ. ಆ ಪರಿಚಿತರು ಈ ಹಿಂದೆ ತಮ್ಮ ಕುಟುಂಬದ ಎರಡು ಮದುವೆಗಳನ್ನು ಅಲ್ಲೇ ಮಾಡಿದ್ದರು. ಹೀಗಾಗಿ ಅಲ್ಲೇ ಇರಬಹುದೆಂದು ಭಂಡ ಧೈರ್ಯದಲ್ಲಿ ಹೊರಟವನು ಹ್ಯಾಗಾದರೂ ಇರಲಿ ಎಂದು ಅವರಿಗೊಂದು ಫೋನು ಮಾಡಿದೆ.  

ಆ ಚೌಲ್ಟ್ರಿಯಲ್ಲಿ ಗದ್ದಲವೋ ಗದ್ದಲ. ಜೊತೆಗೆ ವಾಲಗದವನ ವಿಪರೀತದ ವಾದ್ಯದ ಸದ್ದು ಬೇರೆ. ಪರಿಚಿತರು ಪ್ರಾಯಶಃ ವಾಲಗದವನ ಮುಂದೆಯೇ ನಿಂತು ಮಾತಾಡುತ್ತಿದ್ದರೋ, ಏನೋ? ಅವನು ನೇರಾ ನನ್ನ ಕಿವಿಯೊಳಗೇ ವಾಲಗ ತೂರಿಸಿದಂತೆ ಪ್ಹೀ ಪ್ಹೀ ಶಬ್ದ ಕೇಳಿಸುತ್ತಿತ್ತು. ಅವರು ಸಾಕಷ್ಟು ಒದರಿ ಒದರಿ ವಿಳಾಸ ಹೇಳುತ್ತಿದ್ದರು. ನನಗೂ ಏನೋ ಒಂದು ಕೇಳಿಸಿತು. ಸರಿ ಖಚಿತವಾಯಿತೆಂದು ಹೊರಟು ಸೀದಾ ಬೇರೆ ಯಾರದೋ ಸಂಬಂಧವಿಲ್ಲದ ಒಂದು ಕಲ್ಯಾಣ ಮಂಟಪಕ್ಕೆ ನುಗ್ಗಿ ಬಿಟ್ಟೆ.

ಪರಿಚಿತರ ಹುಡುಕಿದೆ, ಅವರು ಕಾಣಲಿಲ್ಲ. ಇನ್ನು ಆರತಕ್ಷತೆಗೆ ನಿಂತ ಗಂಡು ಹೆಣ್ಣು ನೋಡಲು ಸಮಯವಿಲ್ಲ. ಈಗಾಗಲೇ ಅವರನ್ನು ನೋಡಲು ಜನ ಸಾಲುಗಟ್ಟಿ ನಿಂತಿದ್ದಾರೆ. ಅವರ ಕ್ಯೂ ಕರಗಲು ಇನ್ನು ಗಂಟೆಯಾದರೂ ಆದೀತು. ಜೊತೆಗೆ ಗಂಡಿನ ಕಡೆಯ ಮತ್ತು ಹೆಣ್ಣಿನ ಕಡೆಯ ಎರಡೆರಡು ಜೊತೆ ಛಾಯಾಚಿತ್ರಗ್ರಾಹಕರು ಹಾಗೂ ವಿಡಿಯೊಗ್ರಾಫರ್‌ಗಳು ಜನರ ನಡಿಗೆಯನ್ನೇ ನಿಧಾನಗೊಳಿಸಿದ್ದಾರೆ.

ಊಟ ರೆಡಿಯಾಗಿದೆ ಮೊದಲು ಅದಕ್ಕೆ ಗೌರವ ಸಲ್ಲಿಸಬೇಕೆಂಬ ಸಣ್ಣ ಪರಿಜ್ಞಾನವೂ ಇಲ್ಲದ ಈ ಜನ ಫೋಟೊಗೆ ಕಾದು ನಿಂತಿದ್ದಾರಲ್ಲ. ಇವರ ಹಿಂದೆ ನಿಲ್ಲುವಷ್ಟು ಸಮಯವಿಲ್ಲದ ನಾನು ಊಟದ ಹಾಲ್‌ಗೆ ದಾರಿ ಎಂದು ಬರೆದಿದ್ದ ಸುಂದರ ಅಕ್ಷರಗಳನ್ನೇ ತಿನ್ನುವಂತೆ ನೋಡುತ್ತಾ ನಿಂತಿದ್ದೆ. ಅಷ್ಟರಲ್ಲಿ ಯಾರೋ ಒಬ್ಬ ದೇವತಾ ಮನುಷ್ಯನೊಬ್ಬರು ಬಂದು ಊಟ ರೆಡಿಯಿದೆ ಬನ್ನಿ ಸಾರ್ ಎಂಬ ಸಂತೋಷದ ಸಂದೇಶ ಕೊಟ್ಟು ನಗುನಗುತ್ತಾ ಕರೆದರು.

ಮೊದಲ ಪಂಕ್ತಿಗೆ ಕರೆಯುವುದನ್ನೇ ಕಾಯುತ್ತಿದ್ದ ಅನೇಕ ಆಕಾಂಕ್ಷಿಗಳ ಜೊತೆ ನಾನೂ ನುಗ್ಗಿ ಹೋದೆ. ಜಾಗ ಹಿಡಿದೆ. ಅಲ್ಲಿ ಎಲೆ ಹಾಕುವವನಿಂದ ಹಿಡಿದು ಮೈಸೂರು ಪಾಕು ಬಡಿಸುವವನ ತನಕ ಎಲ್ಲರೂ ನನ್ನ ವಿದ್ಯಾರ್ಥಿಗಳೇ ತುಂಬಿಕೊಂಡಿದ್ದಾರೆ. ಅಲ್ಲೇ ಒಂದು ತರಗತಿ ನಡೆಸುವಷ್ಟು ಹುಡುಗರು ಓಡಾಡುತ್ತಿದ್ದಾರೆ. ಅವರ ಸಾಕಷ್ಟು ನಮಸ್ಕಾರಗಳಿಗೆ ಖುಷಿಯಿಂದ ಉತ್ತರಿಸಿದೆ. ಗುರುಗಳು ಬಂದಿದ್ದಾರೆ ಎಂಬ ಸಂತೋಷದಲ್ಲಿ ಅವರು ಮತ್ತೆ ಮತ್ತೆ ಬಂದು ಕೇಳುವುದೇನು? ಖಾದ್ಯಗಳ ತಂದು ಪ್ರೀತಿಯಿಂದ ಬಡಿಸುವುದೇನು? ಸಂಭ್ರಮವೋ ಸಂಭ್ರಮ. ಮತ್ತೆ ಸುತ್ತಮುತ್ತ ಇರುವವರೆಲ್ಲಾ ನನ್ನ ವಿಶೇಷ ಆಹ್ವಾನಿತ ಅತಿಥಿಯೆಂದೇ ಭಾವಿಸಿ ಹೊಟ್ಟೆಕಿಚ್ಚಿನಿಂದ ನೋಡುತ್ತಿದ್ದರು. ನಾನು ಸಿಕ್ಕ ಗುರು ಕಾಣಿಕೆಯ ಲಾಭವನ್ನು ಮನಸಾರೆ ಚಪ್ಪರಿಸುತ್ತಿದ್ದೆ.

ಅಷ್ಟರಲ್ಲಿ ಹೆಣ್ಣಿನ ತಂದೆ, ಗಂಡಿನ ತಂದೆ ಊಟ ಮಾಡುತ್ತಿದ್ದ ತಮ್ಮ ನೆಂಟರು, ಬಂಧುಗಳನ್ನು ಮಾತಾಡಿಸಲು  ಸಾವಕಾಶವಾಗಿ ಊಟ ಮಾಡಿ ಎಂದು ಹೇಳಲು ಒಟ್ಟೊಟ್ಟಾಗಿ ಬಂದರು. ನನ್ನ ಆತಿಥ್ಯ ಸಾಗುತ್ತಲೇ ಇತ್ತು. ಅವರಿಬ್ಬರೂ ನನ್ನ ಮುಂದೆ ಬಂದು ನಿಂತು ಆಶ್ಚರ್ಯಕರವಾಗಿ ಒಮ್ಮೆ ಪರಸ್ಪರ ಒಬ್ಬರ ಮುಖ ಮತ್ತೊಬ್ಬರು ನೋಡಿದರು. ಇವರು ನಿಮ್ಮ ಕಡೆಯವರಾ? ಎಂದು ಗುಟ್ಟಿನಲ್ಲಿ ವಿಚಾರಿಸಿಕೊಂಡರು. ನಾನು ಇಬ್ಬರ ಕಡೆಯವನೂ ಆಗಿರಲಿಲ್ಲ.

ಹೀಗಾಗಿ ನನಗೆ ವಿಶೇಷ ಕಾಳಜಿ ತೋರಿಸುತ್ತಿದ್ದ, ಊಟ ಬಡಿಸುತ್ತಿದ್ದ ನನ್ನ ಶಿಷ್ಯರನ್ನು ಹೋಗಿ ವಿಚಾರಿಸಿದರು. ಅವರು ನಮ್ಮ ಪೂಜ್ಯ ಗುರುಗಳು ಎಂದು ಹೇಳಿರಲೇಬೇಕು. ಆ ಕ್ಷಣದಲ್ಲೇ ನನ್ನ ಆ ಪ್ರೀತಿಯ ವಿದ್ಯಾರ್ಥಿಗಳಿಗೆ ಅವರಿಬ್ಬರೂ ಸೇರಿ ಜೋರು ಮಾಡುತ್ತಿರುವುದು, ನನ್ನ ಕಡೆ ಬೆರಳು ಮಾಡಿ ತೋರಿಸುತ್ತಲೇ ಹಿಗ್ಗಾಮುಗ್ಗಾ ಉಗಿಯುತ್ತಿರುವುದು ನನಗೆ ಕಾಣಿಸುತ್ತಿತ್ತು. ಅಷ್ಟಕ್ಕೆ ತೃಪ್ತರಾಗದ ಅವರಿಬ್ಬರು ಮತ್ತೆ ಮುಖಗಳನ್ನು ಕೆಂಡ ಮಾಡಿಕೊಂಡು ನನ್ನ ಕಡೆಗೆ ಮರು ವಿಚಾರಣೆಗೆ ಬರತೊಡಗಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT