ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಕಾವ್ಯದ ಅನುವಾದಕ್ಕೊಂದು ಮಾದರಿ

ಅಕ್ಷರ ಗಾತ್ರ

‘ಮೂರ್ತಿ ಕ್ಲಾಸಿಕಲ್ ಲೈಬ್ರರಿ ಆಫ್‌ ಇಂಡಿಯಾ’ ಸರಣಿಯಲ್ಲಿ ರಾಘವಾಂಕನ ಹರಿಶ್ಚಂದ್ರ ಕಾವ್ಯವು ಪ್ರಕಟವಾಗಿರುವುದು ಕನ್ನಡ ಅಭಿಜಾತ ಸಾಹಿತ್ಯದ ಅನುವಾದದ ಇತಿಹಾಸದಲ್ಲಿ ಒಂದು ಮುಖ್ಯವಾದ ಮೈಲುಗಲ್ಲು. ವನಮಾಲಾ ವಿಶ್ವನಾಥ್ ಅವರು ‘ದ ಲೈಫ್‌ ಆಫ್‌ ಹರಿಶ್ಚಂದ್ರ’ ಎಂಬ ಶೀರ್ಷಿಕೆಯಡಿಯಲ್ಲಿ ಈ ಕಾವ್ಯವನ್ನು ಅನುವಾದಿಸಿದ್ದಾರೆ. ಇದರಲ್ಲಿ ರಾಘವಾಂಕನ ಮೂಲಕೃತಿ ಮತ್ತು ಇಂಗ್ಲಿಷ್ ಅನುವಾದಗಳೆರಡೂ ಅಕ್ಕಪಕ್ಕದ ಪುಟಗಳಲ್ಲಿ ಪ್ರಕಟವಾಗಿವೆ.

ಇತರ ಭಾರತೀಯ ಭಾಷೆಗಳಿಂದ ಅನುವಾದವಾಗಿರುವಷ್ಟು ಕನ್ನಡದಿಂದ ಆಗಿಲ್ಲವೆನ್ನುವುದು ನಿಜವಾದರೂ, ಆಧುನಿಕಪೂರ್ವ ಕನ್ನಡ ಸಾಹಿತ್ಯದ ಕೆಲವು ಮುಖ್ಯ ಕೃತಿಗಳು ಅನುವಾದಿತವಾಗಿವೆ. ಎ.ಕೆ. ರಾಮಾನುಜನ್, ಎಚ್.ಎಸ್. ಶಿವಪ್ರಕಾಶ್ ಮತ್ತು ಓ.ಎಲ್. ನಾಗಭೂಷಣಸ್ವಾಮಿಯವರು ವಚನಗಳನ್ನು ಅನುವಾದಿಸಿದ್ದಾರೆ. ಟಿ.ಆರ್.ಎಸ್. ಶರ್ಮಾ ಅವರು ಜನ್ನನ ಯಶೋಧರ ಚರಿತೆಯನ್ನೂ, ಸಿ.ಎನ್. ರಾಮಚಂದ್ರನ್ ಅವರು ಮಲೆಮಾದೇಶ್ವರ ಕಾವ್ಯವನ್ನೂ ಅನುವಾದಿಸಿದ್ದಾರೆ. 1960 ಮತ್ತು 70ರ ದಶಕಗಳಲ್ಲಿ ಅರ್ಮಾಂಡೊ ಮೆನೆಜಿಸ್ ಅವರ ನೇತೃತ್ವದಲ್ಲಿ ವಚನಗಳು ಮತ್ತು ಶೂನ್ಯಸಂಪಾದನೆಗಳು ಅನುವಾದಗೊಂಡವು. ಇದಲ್ಲದೆ ಇತ್ತೀಚೆಗೆ ಕನ್ನಡ ವಿಶ್ವವಿದ್ಯಾಲಯದಿಂದ ಕನ್ನಡ ಕಾವ್ಯಗಳ ಹಾಗೂ ಜಾನಪದ ಮಹಾಕಾವ್ಯಗಳ ಆಯ್ದ ಭಾಗಗಳ ಸಂಕಲನಗಳು ಕೂಡ ಪ್ರಕಟವಾಗಿವೆ. ಜೊತೆಗೆ ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಸೇರಿದಂತೆ ಆಧುನಿಕ ಮಹಾಕಾವ್ಯಗಳನ್ನು ಅನುವಾದಿಸುವ ಪ್ರಯತ್ನಗಳೂ ನಡೆದಿವೆ.

ಇಷ್ಟಾದರೂ ತಮಿಳು, ತೆಲುಗು, ಹಿಂದಿ, ಬಂಗಾಳಿಗಳಿಗೆ ಹೋಲಿಸಿದರೆ ಕನ್ನಡದ ಮಹತ್ವದ ಕೃತಿಗಳು ಇಂಗ್ಲಿಷ್‌ಗೆ ಅನುವಾದಗೊಂಡಿಲ್ಲ ಎನ್ನುವುದು ನಿಜವೇ. ಪಂಪ, ರನ್ನ, ಹರಿಹರ, ಕುಮಾರವ್ಯಾಸರು ಇನ್ನೂ ತಮ್ಮ ಅನುವಾದಕರಿಗಾಗಿ ತಾಳ್ಮೆಯಿಂದ ಕಾಯುತ್ತಿದ್ದಾರೆ. ಈವರೆಗಿನ ಕನ್ನಡ ಅನುವಾದಗಳ ನಡುವೆ ವನಮಾಲಾ ವಿಶ್ವನಾಥ್ ಅವರ ಅನುವಾದ ಮುಖ್ಯವಾಗುವುದು ಈ ಕೆಳಗಿನ ಕಾರಣಗಳಿಂದ. ಇಲ್ಲಿ ಕನ್ನಡದ ಪ್ರಮುಖ ಆಧುನಿಕಪೂರ್ವ ಮಹಾಕಾವ್ಯವೊಂದನ್ನು ಇಡಿಯಾಗಿ ಅನುವಾದಿಸುವ ಮಹತ್ವಾಕಾಂಕ್ಷೆಯ ಯೋಜನೆಯೊಂದಿದೆ. ಮಿಗಿಲಾಗಿ ಇಂತಹ ಅನುವಾದವನ್ನು ಹಾರ್ವರ್ಡ್ ವಿಶ್ವವಿದ್ಯಾಲಯ ಪ್ರೆಸ್ ಪ್ರಕಟಿಸುತ್ತಿದೆ ಎಂದರೆ ಪ್ರಕಟಣೆಯ ಪ್ರಕ್ರಿಯೆಯುದ್ದಕ್ಕೂ ಈ ಕೃತಿಯ ಹಸ್ತಪ್ರತಿಯನ್ನು ಎಚ್ಚರಿಕೆಯಿಂದ ಮತ್ತು ವಿಮರ್ಶಾತ್ಮಕ ವಾಗಿ ಪರೀಕ್ಷಿಸಲಾಗಿದೆ ಎಂದೇ ಅರಿಯ ಬೇಕು. ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಮುದ್ರಣಾಲಯದಿಂದ ಯಾವುದೇ ಕೃತಿ ಪ್ರಕಟವಾಗುತ್ತದೆ ಎಂದರೆ ಅದು ಒಣ ಟೊಳ್ಳು ಪ್ರತಿಷ್ಠೆಯ ವಿಚಾರವಲ್ಲ. ಕೃತಿಯು ಹಲವಾರು ಹಂತಗಳಲ್ಲಿ ಪರಿಣತರಿಂದ ನಿಷ್ಪಕ್ಷಪಾತವಾದ ಪರೀಕ್ಷೆಗೊಳಗಾಗಿದೆ ಹಾಗೂ ಪದಸೂಚಿ, ಪಾರಿಭಾಷಿಕ ಕೋಶ, ಗ್ರಂಥಸೂಚಿಗಳೂ ಸೇರಿದಂತೆ ಒಂದು ಪ್ರಕಟಿತ ಕೃತಿಯಲ್ಲಿರಬೇಕಾದ ಎಲ್ಲ ಘಟಕಗಳು ಇಲ್ಲಿವೆ ಎಂದರ್ಥ. ಕನ್ನಡದ ಬೌದ್ಧಿಕ ವಲಯದಲ್ಲಿ ಹೀಗೆ ಮುದ್ರಣಪೂರ್ವ ಹಸ್ತಪ್ರತಿ ಪರೀಕ್ಷೆ ನಡೆಯುವುದಿಲ್ಲ ಎನ್ನುವುದನ್ನು ನಾನಿಲ್ಲಿ ವಿಶೇಷವಾಗಿ ಹೇಳಬೇಕಿಲ್ಲ.

ನಾನು ಮೇಲೆ ಹೆಸರಿಸಿದ ರಾಮಾನುಜನ್ ಮತ್ತು ಶಿವಪ್ರಕಾಶರಿಂದ ಅನುವಾದಿತವಾದ ಕೃತಿಗಳು ಪೆಂಗ್ವಿನ್‌ನಂತಹ ಅಂತರರಾಷ್ಟ್ರೀಯ ಪ್ರಕಾಶಕರ ಮೂಲಕ ಪ್ರಕಟವಾಗಿವೆ ಹಾಗೂ ಗಣನೀಯ ಯಶಸ್ಸನ್ನೂ ಗಳಿಸಿವೆ ನಿಜ, ಆದರೆ ಇವು ಬಿಡಿ ವಚನಗಳ ಅನುವಾದಗಳು.  ಹರಿಶ್ಚಂದ್ರ ಕಾವ್ಯದಂತಹ 728 ಪಂಕ್ತಿಗಳನ್ನೊಳಗೊಂಡ ವಿಸ್ತೃತ ಮಹಾಕಾವ್ಯದ ಅನುವಾದವು ಬೇರೆಯ ಬಗೆಯ ಧೈರ್ಯ, ಮಹತ್ವಾಕಾಂಕ್ಷೆ, ಸಿದ್ಧತೆ ಮತ್ತು ವೃತ್ತಿಪರತೆಗಳನ್ನು ಬಯಸುತ್ತದೆ. ಅವುಗಳನ್ನು  ತೋರಿಸಿರುವ ವನಮಾಲಾರವರು ನಮ್ಮ ಅಭಿನಂದನೆಗೆ ಪಾತ್ರರಾಗುತ್ತಾರೆ.

ಅನುವಾದದ ಬಗ್ಗೆ ನನ್ನ ಟಿಪ್ಪಣಿಗಳನ್ನು ಹಂಚಿಕೊಳ್ಳುವ ಮೊದಲು, ಹರಿಶ್ಚಂದ್ರ ಕಾವ್ಯದ ಬಗ್ಗೆ ಒಂದೆರಡು ಮಾತುಗಳನ್ನು ದಾಖಲಿಸಬೇಕು. ಶೈವ ಕಥನಕಾವ್ಯ ಪರಂಪರೆಯೊಂದು ಕನ್ನಡದಲ್ಲಿ ಹುಟ್ಟುತ್ತಿದ್ದ ಸಂದರ್ಭದಲ್ಲಿ ರಚಿತವಾದ ಹರಿಶ್ಚಂದ್ರ ಕಾವ್ಯವು ಅಭಿಜಾತ ಕನ್ನಡ ಸಾಹಿತ್ಯದ ಹತ್ತು ಮುಖ್ಯ ಕೃತಿಗಳಲ್ಲಿ ಒಂದು. ಶಿವನ ಇಲ್ಲವೆ ಶಿವಭಕ್ತನ ಮೇಲೆ ರಾಘವಾಂಕ ಬರೆಯಲಿಲ್ಲ ಎನ್ನುವ ಕಾರಣದಿಂದ ಅವನ ಸೋದರಮಾವ ಹರಿಹರ ಕುಪಿತನಾದ ಎನ್ನುವ ದಂತಕಥೆಯೂ ಪ್ರಚಲಿತವಾಗಿದೆ. ಮಿಗಿಲಾಗಿ, ನಾವು ಇಂದು ನಂಬಿರುವಂತೆ ಹರಿಶ್ಚಂದ್ರ ಕಾವ್ಯವು ರಾಘವಾಂಕನ ಮೊದಲ ಕಾವ್ಯವಾದರೆ, ಮುಂದೆ ಬಹಳ ಜನಪ್ರಿಯವಾದ ಷಟ್ಪದಿಯನ್ನು ಪ್ರಥಮ ಬಾರಿಗೆ ಬಳಸುತ್ತ ರಾಘವಾಂಕನು ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮವನ್ನು ನೀಡಿದ.

ಛಂದಸ್ಸು ಮತ್ತು ಕಾವ್ಯ ಭಾಷೆಗಳ ಆಯಾಮದಾಚೆಗೆ, ಹರಿಶ್ಚಂದ್ರ ಕಾವ್ಯಕ್ಕೆ ಭಾರತೀಯ ಸಾಹಿತ್ಯದಲ್ಲಿಯೇ ವಿಶಿಷ್ಟವಾದ ಸ್ಥಾನವಿದೆ. ಅದೇನೆಂದರೆ ಹರಿಶ್ಚಂದ್ರನ ಕಥೆಯನ್ನು ಮಹಾಕಾವ್ಯದ ವ್ಯಾಪ್ತಿಯಲ್ಲಿಟ್ಟು ಅನ್ವೇಷಿಸಿದ ಮೊದಲ ಭಾರತೀಯ ಕಾವ್ಯವಿದು. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವಿದೆ. ನಮ್ಮ ಕಥನಗಳಲ್ಲಿ ಮೂವರು ವಿಭಿನ್ನ ಹರಿಶ್ಚಂದ್ರರು ಕಂಡುಬರುತ್ತಾರೆ. ಮೊದಲನೆಯವನು ತನ್ನ ಮಗನ ಬದಲಿಗೆ ಶುನಃಷೇಪನನ್ನು ಬಲಿ ನೀಡಲು ಸಿದ್ಧನಾದ ಹರಿಶ್ಚಂದ್ರ. ಎರಡನೆಯ ಕಥನದ ಕೇಂದ್ರದಲ್ಲಿರುವವನು ಹರಿಶ್ಚಂದ್ರನ ತಂದೆಯಾದ ತ್ರಿಶಂಕು. ಆದರೆ ಇಲ್ಲಿ ಹರಿಶ್ಚಂದ್ರನ ಪಾತ್ರ ಗೌಣ. ಈ ಎರಡು ಕಥನಗಳಲ್ಲಿಯೂ ವಿಶ್ವಾಮಿತ್ರ ಮುನಿಗೂ ಮಹತ್ವದ ಪಾತ್ರವಿದೆ. ರಾಘವಾಂಕನು ಬಳಸಿಕೊಳ್ಳುವ ಕಥನವು ಹರಿಶ್ಚಂದ್ರನ ಕುರಿತು ಇರುವ ಮೂರನೆಯ ನಿರೂಪಣೆ. ಇದರ ವಿವಿಧ ರೂಪಾಂತರಗಳು ಮಾರ್ಕಂಡೇಯ ಪುರಾಣ ಮತ್ತು ದೇವಿಭಾಗವತ ಪುರಾಣಗಳಲ್ಲಿ ದೊರಕುತ್ತವೆ. ವಿವರಗಳು ಮತ್ತು ಕಾರಣಗಳ ನಿರೂಪಣೆಯಲ್ಲಿ ವ್ಯತ್ಯಾಸವಿದ್ದರೂ, ಮೂಲಭೂತವಾಗಿ ಈ ಮೂರನೆಯ ಕಥೆಯ ಕೇಂದ್ರದಲ್ಲಿರುವುದು ತನ್ನ ಮೌಲ್ಯಗಳನ್ನು ಬಿಡದ ಹರಿಶ್ಚಂದ್ರ ಮತ್ತು ಹೇಗಾದರೂ ಅವನನ್ನು ವಿಮುಖನನ್ನಾಗಿಸಬೇಕು ಎಂದು ಪಣ ತೊಟ್ಟಿರುವ ವಿಶ್ವಾಮಿತ್ರ ಮುನಿಗಳ ನಡುವಿನ ಸಂಘರ್ಷ.

ಪುರಾಣಗಳ ಅವತರಣಿಕೆಗಳಲ್ಲದೆ, ಆರ್ಯ ಕ್ಷೇಮೀಶ್ವರನ ಚಂಡಕೌಶಿಕ (10-11 ಶತಮಾನಗಳು) ಹಾಗೂ ರಾಮಚಂದ್ರಸೂರಿಯ ಸತ್ಯಹರಿಶ್ಚಂದ್ರ (ಸುಮಾರು 12ನೆಯ ಶತಮಾನ) ಎನ್ನುವ ರಾಘವಾಂಕಪೂರ್ವ ಸಂಸ್ಕೃತ ನಾಟಕಗಳಿವೆ. ಈ ಎರಡನೆಯ ನಾಟಕದ ವೈಶಿಷ್ಟ್ಯವೆಂದರೆ ವಿಶ್ವಾಮಿತ್ರನೇ ಇಲ್ಲದಿರುವುದು ಹಾಗೂ ಜೈನ ತಾತ್ವಿಕತೆಯ ಪ್ರಭಾವದಿಂದ ಇಲ್ಲಿರುವ ಹಿಂಸೆಯ ಬಗೆಗಿನ ಮಂಥನ.

ರಾಘವಾಂಕನಲ್ಲಿ ಮೊದಲ ಬಾರಿಗೆ ಹರಿಶ್ಚಂದ್ರನು ಮಹಾಕಾವ್ಯವೊಂದರ ಕೇಂದ್ರಬಿಂದುವಾಗುತ್ತಾನೆ. ಅಂದರೆ 13ನೆಯ ಶತಮಾನದವರೆಗೆ ಮೇಲೆ ಹೆಸರಿಸಿದ ಎಲ್ಲ ಕೃತಿಗಳಲ್ಲಿ ಸಂಕ್ಷಿಪ್ತವಾಗಿಯೇ ಉಳಿದಿರುವ ಈ ಕಥನಕ್ಕೆ, ರಾಘವಾಂಕನು ಮಹಾಕಾವ್ಯದ ವ್ಯಾಪ್ತಿಯನ್ನು ಎರಡು ರೀತಿಯಲ್ಲಿ ಒದಗಿಸುತ್ತಾನೆ. ಒಂದು, ಅಂದು ಪ್ರಚಲಿತವಾಗಿದ್ದ ಕಾವ್ಯನಿರೂಪಣೆಯ ಕ್ರಮಗಳನ್ನು - ಉದಾಹರಣೆಗೆ, ಅಷ್ಟಾದಶ ವರ್ಣನೆಗಳು ಇತ್ಯಾದಿ- ಅವನು ಅನುಸರಿಸುತ್ತಾನೆ. ಎರಡನೆಯದಾಗಿ, ಮತ್ತು ಹೆಚ್ಚು ಮುಖ್ಯವಾಗಿ, ಹರಿಶ್ಚಂದ್ರನ ಮೌಲ್ಯಗಳು ಮತ್ತು ಬದ್ಧತೆಗಳನ್ನು ಕಾವ್ಯದ ಕೇಂದ್ರಕ್ಕೆ ತಂದು, ಆ ಮೂಲಕ ಕಥೆಯಲ್ಲಿರುವ ಸಂಘರ್ಷವನ್ನು ರಾಘವಾಂಕನು ಬೆಳಸುತ್ತಾನೆ. ರಾಘವಾಂಕನ ಹರಿಶ್ಚಂದ್ರ ಸತ್ಯದ ಪ್ರತಿಪಾದಕನಾದರೂ, ಅವನು ಮಧ್ಯಕಾಲೀನ ಯುಗದಲ್ಲಿ ಸೃಷ್ಟಿಯಾದ ಪಾತ್ರವೆನ್ನುವುದನ್ನು ನಾವು ಮರೆಯುವಂತಿಲ್ಲ. ಹಾಗಾಗಿ ಇಲ್ಲಿನ ಹರಿಶ್ಚಂದ್ರನು ಬದ್ಧತೆ ತೋರಿಸುವ ಕುಲಾಚಾರ ನಿಷ್ಠೆ ಹಾಗೂ ಹೊಲೆತನದ ಬಗೆಗಿನ ನಿಲುವುಗಳು ಆಧುನಿಕ ಯುಗದಲ್ಲಿ ಸಲ್ಲದ ಮೌಲ್ಯಗಳಾಗಿ ಕಾಣಿಸುತ್ತವೆ. 20ನೆಯ ಶತಮಾನದ ನಾಟಕಗಳು ಮತ್ತು  ಚಲನಚಿತ್ರಗಳಲ್ಲಿ ಕಾಣುವ ಹರಿಶ್ಚಂದ್ರನು ಬದ್ಧನಾಗಿರುವ ಸತ್ಯದ ಪರಿಕಲ್ಪನೆಯು ಆಧುನಿಕ ಕಾಲದಿಂದ ಪ್ರೇರಿತವಾಗಿರುವುದು ಎನ್ನುವ ಟಿಪ್ಪಣಿಯನ್ನು ಇಲ್ಲಿ ಸೇರಿಸಬೇಕು.

ಹೀಗೆ ರಾಘವಾಂಕನ ಹರಿಶ್ಚಂದ್ರಕಾವ್ಯವು ಕನ್ನಡದಲ್ಲಿ ಮಾತ್ರವಲ್ಲ, ಭಾರತೀಯ ಪರಂಪರೆಯಲ್ಲಿಯೇ ಮುಖ್ಯವಾದ ಹರಿಶ್ಚಂದ್ರ ಕಥನ ಎನ್ನುವುದು ಸ್ಪಷ್ಟ. ಈ ಕೃತಿಯ ಕಥನಸಾರ, ಸಾಹಿತ್ಯಕ ವೈಶಿಷ್ಟ್ಯ ಮತ್ತು ಕಾವ್ಯಾತ್ಮಕತೆಗಳನ್ನು ಮತ್ತೊಂದು ಭಾಷೆಯಲ್ಲಿ, ಅದರಲ್ಲೂ ಭಾರತೀಯೇತರ ಭಾಷೆಯೊಂದರಲ್ಲಿ, ತರುವುದು ಯಾವುದೇ ಅನುವಾದಕರಿಗೂ ಸವಾಲಾಗುತ್ತವೆ. ವನಮಾಲಾ ವಿಶ್ವನಾಥ್ ಅವರು ಈ ಸವಾಲನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಷಟ್ಪದಿಯಲ್ಲಿರುವ ಈ ಕಾವ್ಯವನ್ನು ಬಹುತೇಕ ಗದ್ಯರೂಪದಲ್ಲಿ ಮತ್ತು ಅಲ್ಲಲ್ಲಿ ಪದ್ಯರೂಪದಲ್ಲಿ ಅನುವಾದಿಸಿದ್ದಾರೆ. ರಗಳೆಯ ಓಘ, ಕೆಲವು ಷಟ್ಪದಿಯ ಪಂಕ್ತಿಗಳಲ್ಲಿರುವ ನಾಟಕೀಯ ಮಾತುಕತೆಗಳು, ಪದ್ಯದಲ್ಲಿಯೇ ಉಳಿಯಲಿಚ್ಛಿಸುವ ಪಂಕ್ತಿಗಳು ವನಮಾಲಾರ ಅನುವಾದದಲ್ಲಿ ಹಾಗೆಯೇ ಉಳಿದುಬರುತ್ತವೆ. ಇಂಗ್ಲಿಷ್‌ನ ಓದುಗನಿಗೆ ರಾಘವಾಂಕನ ಕಾವ್ಯದ ಅನುಭವ ದಟ್ಟವಾಗಿ ಆಗುತ್ತದೆ. ವನಮಾಲಾ ಅವರೇ ಬರೆದಿರುವ ಉಪಯುಕ್ತ ಮುನ್ನುಡಿಯಿದ್ದರೂ, ವಿಸ್ತೃತವಾದ ಹರಿಶ್ಚಂದ್ರ ಕಥನಗಳ ಚರ್ಚೆಯೊಂದು ಇಲ್ಲಿದ್ದರೆ ಕೃತಿಯ ಮೌಲ್ಯ ಮತ್ತಷ್ಟು ಹೆಚ್ಚುತ್ತಿತ್ತು.

ಎಲ್ಲಕ್ಕಿಂತ ಬಹುಮುಖ್ಯವಾಗಿ ಕನ್ನಡ ಮಹಾಕಾವ್ಯವೊಂದರ ಅನುವಾದ ಹೇಗಿರಬೇಕು ಎನ್ನುವ ಚರ್ಚೆಯನ್ನು ಆರಂಭಿಸಲು ಮಾದರಿಯೊಂದು ಈ ಅನುವಾದದ ಮೂಲಕ ನಮಗೆ ದೊರಕುತ್ತಿದೆ. ಹಾಗಾಗಿಯೇ ವನಮಾಲಾರ ಅನುವಾದದ ತಂತ್ರಗಳ ಬಗ್ಗೆ ಒಂದೆರಡು ಪ್ರಶ್ನೆಗಳನ್ನು ಎತ್ತಬೇಕೆನ್ನಿಸುತ್ತಿದೆ. ಬಹಳ ಮುಖ್ಯವಾದ ಒಂದು ಪ್ರಶ್ನೆ ತುಂಬ ಸರಳವಾದುದು ಮತ್ತು ಮೂಲಭೂತವಾದುದು. ಷಟ್ಪದಿಯ ಪ್ರತಿಯೊಂದು ಪಂಕ್ತಿಯೂ ಸಾಮಾನ್ಯವಾಗಿ ಒಂದು ವಾಕ್ಯವಾಗಿಯೇ ಓದಿಸಿಕೊಳ್ಳುತ್ತದೆ. ಇಂತಹ ಒಂದು ಪಂಕ್ತಿಯನ್ನು ಅನುವಾದಿಸುವಾಗ, ರಾಘವಾಂಕನ ನಿರೂಪಣೆಯ ಕ್ರಮವನ್ನೇ ಅನುವಾದಕರು ಉಳಿಸಿಕೊಳ್ಳಬೇಕೋ ಇಲ್ಲವೆ ಬದಲಾಯಿಸಬಹುದೇ? ನನ್ನ ಪ್ರಶ್ನೆಯ ಇಂಗಿತವಿಷ್ಟೆ: ಇಂಗ್ಲಿಷ್ ವಾಕ್ಯದ ಪ್ರಾರಂಭದಲ್ಲಿಯೇ ಆ ಪಂಕ್ತಿಯ ಕೇಂದ್ರದಲ್ಲಿರುವ ವಸ್ತು ಅಥವಾ ಪಾತ್ರ ಬರುತ್ತದೆ. ಇದು ಅನಿವಾರ್ಯ. ಆದರೆ ಆ ನಂತರದಲ್ಲಿ ಬರುವ ವಿವರಣೆಗಳು ಅಥವಾ ರೂಪಕಗಳನ್ನು ನಿರ್ದಿಷ್ಟ ಕ್ರಮದಲ್ಲಿ ರಾಘವಾಂಕನು ಇಟ್ಟಿರುತ್ತಾನೆ. ಈ ಕ್ರಮದಲ್ಲಿ ಬದಲಾವಣೆಯಾದರೆ, ಅ ಪಂಕ್ತಿಯ ಅರ್ಥಪೂರ್ಣತೆಯಲ್ಲಿ ವ್ಯತ್ಯಾಸವಾಗುತ್ತದೆಯೇ? ವನಮಾಲಾ ಅವರು ಆಗಾಗ ಇಂತಹ ಬದಲಾವಣೆಗಳನ್ನು ಮಾಡಿಕೊಂಡಿರುವುದರಿಂದ ಈ ಪ್ರಶ್ನೆ ನನ್ನಲ್ಲಿ ಮೂಡಿತು. ಜೊತೆಗೆ, ಅಲ್ಲಲ್ಲಿ ಕೆಲವು ಪದಪುಂಜಗಳು ಅನುವಾದಿತಗೊಂಡಿಲ್ಲ. ಅವುಗಳನ್ನು ಸೇರಿಸುವುದರಿಂದ ಇಂಗ್ಲಿಷ್‌ ವಾಕ್ಯಕ್ಕೆ ತೊಂದರೆಯಾಗುತ್ತಿತ್ತು ಎಂದು ನನಗನ್ನಿಸಲಿಲ್ಲ.

ಈ ಪ್ರಶ್ನೆಗಳನ್ನು ಕೇಳುತ್ತಲೇ ಕನ್ನಡ ಕಾವ್ಯಗಳ ಅನುವಾದ ಹೇಗಿರಬೇಕು ಎನ್ನುವ ಚರ್ಚೆಯನ್ನು ಮುಂದೆ ಸಾಗಿಸಲು ಸಾಧ್ಯ. ಇಂತಹ ಚರ್ಚೆಯನ್ನು ಸಾಧ್ಯವಾಗಿಸಿರುವ ಹಾಗೂ ಹರಿಶ್ಚಂದ್ರಕಾವ್ಯವನ್ನು ಇಂಗ್ಲಿಷ್ ಓದುಗರಿಗೆ ಸಮರ್ಥವಾಗಿ ತಲುಪಿಸಿರುವ ವನಮಾಲಾ ವಿಶ್ವನಾಥರಿಗೆ ಅಭಿನಂದನೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT