ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತು ಬಂದಾಗ, ಇತಿಹಾಸ ತೆರೆದಾಗ...

Last Updated 8 ಮಾರ್ಚ್ 2012, 19:30 IST
ಅಕ್ಷರ ಗಾತ್ರ

ಭಾರತದ ಮೊದಲ ವಾಕ್ಚಿತ್ರ `ಆಲಂ ಆರಾ~ ಬಿಡುಗಡೆಯಾಗಿ 81 ವರ್ಷಗಳಾಗುತ್ತಿದೆ (ಮಾರ್ಚ್ 14, 1931), ಈ ಚಿತ್ರ ನೆನಪಾಗುತ್ತಿರುವುದಕ್ಕೆ ಕಾರಣವಿದೆ. ಬೆಂಗಳೂರಿನಲ್ಲಿ `ಆಲಂ ಆರಾ~ ಬಿಡುಗಡೆಯಾದ ಎಲ್ಜಿನ್ ಚಿತ್ರಮಂದಿರ ಇತ್ತೀಚೆಗಷ್ಟೇ ಬಂದ್ ಆಗಿದೆ.

ಕನ್ನಡದ ಮೊದಲ ವಾಕ್ಚಿತ್ರ ಪ್ರದರ್ಶನಗೊಂಡ ಪ್ಯಾರಾಮೌಂಟ್, ಹೆಸರು ಬದಲಿಸಿಕೊಂಡು, ಕಟ್ಟಡದ ಸ್ವರೂಪವನ್ನೇ ಮಾರ್ಪಡಿಸಿಕೊಂಡಿದೆ. ದಂಡು ಪ್ರದೇಶದಲ್ಲಿರುವ ಎಲ್ಜಿನ್, 115 ವರ್ಷಗಳ ಚಲನಚಿತ್ರ ಇತಿಹಾಸವನ್ನು ಕಟ್ಟಿಕೊಟ್ಟು ಮರೆಯಾಗಿದೆ.

400 ಆಸನಗಳಿದ್ದ, ಮೂಕಿ ಚಿತ್ರಗಳನ್ನು ಸತತವಾಗಿ ಪ್ರದರ್ಶಿಸುತ್ತಿದ್ದ ಎಲ್ಜಿನ್, ಬೆಂಗಳೂರಿನಲ್ಲಿ ಮೊದಲ ವಾಕ್ಚಿತ್ರ `ಆಲಂ ಆರಾ~ ಬಿಡುಗಡೆಯಾದಾಗ ನಡೆದ ಸಂಭ್ರಮ, ಪುಳಕಗಳಿಗೆ ಸಾಕ್ಷಿಯಾಗಿತ್ತು.

ಭಾರತೀಯ ಚಿತ್ರರಂಗಕ್ಕೆ ಮಾದರಿಯೊಂದನ್ನು ರೂಪಿಸಿಕೊಟ್ಟ ಚಿತ್ರ `ಆಲಂ ಆರಾ~. ಇಬ್ಬರು ಸ್ಟಾರ್‌ಗಳು, ಮೂರು ಡ್ಯಾನ್ಸ್, ಆರು ಹಾಡುಗಳು ಚಿತ್ರವೊಂದಕ್ಕೆ ಕಡ್ಡಾಯ ಎನ್ನುವುದನ್ನು ಸೂತ್ರವಾಗಿಸಿದ ಚಿತ್ರ.

81 ವರ್ಷಗಳ ನಂತರವೂ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ಅದೇ ರೋಮಾಂಚನ ಉಳಿದು ಬಂದಿದೆ. ಇಂತಹ ಸೂತ್ರವನ್ನು, ಜೊತೆಗೆ ಭಾರತೀಯ  ಚಿತ್ರರಂಗಕ್ಕೆ ದನಿ ತಂದು ಕೊಟ್ಟದ್ದಕ್ಕಾಗಿ ಈ ಚಿತ್ರದ ನಿರ್ಮಾಪಕ, ನಿರ್ದೇಶಕ ಆರ್ದೇಶಿರ್ ಇರಾನಿ ಭಾರತದ ವಾಕ್ಚಿತ್ರದ ಪಿತಾಮಹನೆನಿಸಿಕೊಂಡಿದ್ದಾರೆ.

ಈ ಚಿತ್ರಕ್ಕೆ ಸಹಜವಾಗಿಯೇ ಎಲ್ಲ `ಮೊದಲು~ಗಳ ದಾಖಲೆ ಇದೆ. ವಾಕ್ಚಿತ್ರಕ್ಕೆ ಚಿತ್ರಕಥೆ ಬರೆಯುವವರಾರು? ಸಂಗೀತ ನೀಡುವವರಾರು? ಹಿನ್ನೆಲೆ ಗಾಯಕರನ್ನು ಎಲ್ಲಿ ಹುಡುಕುವುದು? ಧ್ವನಿ ಮುದ್ರಣ ಹೇಗೆ? ಎಲ್ಲವನ್ನೂ ಸಜ್ಜುಗೊಳಿಸುವುದು ಸವಾಲಿನ ವಿಷಯ. ಅಂತಹ ಸವಾಲನ್ನು ಆರ್ದೇಶಿರ್ ಇರಾನಿ ಸ್ವೀಕರಿಸಿದರು.

ಇಂತಹ ತಂತ್ರಜ್ಞಾನದ ಕೃತಿಸ್ವಾಮ್ಯ ನಮ್ಮದು ಎನ್ನುತ್ತಾ, ವಾಕ್ಚಿತ್ರದ ರಹಸ್ಯವನ್ನು ಬಹಿರಂಗಗೊಳಿಸಲು ಇಷ್ಟಪಡದೆ ಬಿಗಿ ಭದ್ರತೆಯಲ್ಲಿ ಚಿತ್ರೀಕರಣ ನಡೆಸುತ್ತಿದ್ದ ಹಾಲಿವುಡ್ ನಿರ್ಮಾಪಕರು ಯಾರಿಗೂ ಗುಟ್ಟು ಬಿಟ್ಟುಕೊಡಲು ಸಿದ್ಧರಿರಲಿಲ್ಲ.
 
ಇದನ್ನೇ ಸವಾಲು ಎಂದು ಸ್ವೀಕರಿಸಿದ ಇರಾನಿ, ಧ್ವನಿಮುದ್ರಣ ತಂತ್ರಜ್ಞಾನವನ್ನು ಒಂದೇ ತಿಂಗಳಲ್ಲಿ ಸ್ವಯಂ ಆಗಿ ಕಲಿತರು. ಇದೆಲ್ಲದಕ್ಕೆ ಸ್ಫೂರ್ತಿ 1929ರ `ಶೋಬೀಟ್~ ಎಂಬ ಆಂಗ್ಲ ಚಿತ್ರ.

ಶೇ.40ರಷ್ಟು ಮಾತು ಇದ್ದ ಈ ಚಿತ್ರವನ್ನು ವೀಕ್ಷಿಸುವಾಗ ನಾನೂ ಈ ರೀತಿ ಭಾರತೀಯ ಭಾಷೆಯಲ್ಲಿ ಏಕೆ ಚಿತ್ರ ತಯಾರಿಸಬಾರದು ಎಂಬ ಬಯಕೆ ಅವರಲ್ಲಿ ಮೊಳೆಯಿತು. ಅವರು ಶೇ.40 ರಷ್ಟು ಮಾತಿನ ಚಿತ್ರ ತಯಾರಿಸಿದರೆ ನಾನು ನೂರಕ್ಕೆ ನೂರು ಮಾತಿರುವ ಚಿತ್ರ ತಯಾರಿಸುವೆ ಎಂದು ಪಣತೊಟ್ಟಿದ್ದರ ಫಲ ಭಾರತದಲ್ಲಿ ವಾಕ್ಚಿತ್ರಯುಗದ ಆರಂಭಕ್ಕೆ ನಾಂದಿಯಾಯಿತು.

ವಾಕ್ಚಿತ್ರಗಳ ಪಿತಾಮಹ ಆರ್ದೇಶಿರ್ ಇರಾನಿ ಮೊದಲ ವಾಕ್ಚಿತ್ರ ತಯಾರಿಸುವ ವೇಳೆಗೆ ಚಿತ್ರೋದ್ಯಮಕ್ಕೆ ಅಪರಿಚಿತರೇನೂ ಆಗಿರಲಿಲ್ಲ. ಅವರು ಯುರೋಪಿನ ಎಲ್ಲ ಚಿತ್ರಗಳ ಭಾರತದ ವಿತರಕರಾಗಿದ್ದರು. ಮೂಕಿ ಚಿತ್ರಗಳ ನಿರ್ಮಾಣದಲ್ಲೂ ಸಿದ್ಧಹಸ್ತರಾಗಿದ್ದರು. 1917ರಲ್ಲೇ ಸ್ಟಾರ್ ಫಿಲಂ ಕಂಪೆನಿ ಸ್ಥಾಪಿಸಿದರು.

ಮೊದಲ ಚಿತ್ರ `ವೀರ ಅಭಿಮನ್ಯು~ 1922ರಲ್ಲಿ ಬಿಡುಗಡೆಯಾಯಿತು. ಮೆಜೆಸ್ಟಿಕ್ ಫಿಲಂ ಕಂಪೆನಿ, ರಾಯಲ್ ಆರ್ಟ್ ಸ್ಟುಡಿಯೋ, ದಿ ಇಂಪೀರಿಯಲ್ ಫಿಲಂ ಕಂಪೆನಿಗಳ ಮೂಲಕ ಆರ್ದೇಶಿರ್ ಇರಾನಿ ಸುಮಾರು 250 ಚಿತ್ರಗಳನ್ನು ನಿರ್ಮಿಸಿದ್ದಾರೆ.

ಮೂಕಿ ಚಿತ್ರಯುಗದಲ್ಲಿ ಇರಾನಿಯವರ ಕಂಪೆನಿಗಳ ಮೂಲಕ ಹಲವಾರು ಸ್ಟಾರ್‌ಗಳ ಉದಯವಾಯಿತು. 130 ಮೂಕಿ ಚಿತ್ರಗಳನ್ನು ನಿರ್ಮಿಸಿದ್ದಾರೆ. ಭಾರತದ ಎಲ್ಲ ಪ್ರೇಮ ಮಹಾಕಾವ್ಯಗಳನ್ನು ಇರಾನಿ ಚಲನಚಿತ್ರವನ್ನಾಗಿಸಿದ್ದಾರೆ. `ನೂರ್‌ಜಹಾನ್~ ಎಂಬ ಚಿತ್ರವನ್ನು ಹಿಂದಿ ಮತ್ತು ಇಂಗ್ಲಿಷಿನಲ್ಲಿ ತಯಾರಿಸಿದರು.

ಭಾರತದಲ್ಲಿ ತಯಾರಾದ ಮೊದಲ ಇಂಗ್ಲಿಷ್ ವಾಕ್ಚಿತ್ರ ಇದು. ಭಾರತದ ಮೊದಲ ವರ್ಣಚಿತ್ರ `ಕಿಸಾನ್ ಕನ್ಯಾ~ (1937) ತಯಾರಿಸಿದ ಖ್ಯಾತಿಯೂ ಇರಾನಿಯವರದೇ. ಈ ವೇಳೆಗೆ ಮುಂಬೈನಲ್ಲಿ ಬಣ್ಣದಲ್ಲಿ ತಯಾರಾಗುವ ಚಿತ್ರಗಳ ತಂತ್ರಜ್ಞರನ್ನು ಇರಾನಿಯವರೇ ಪ್ರೋತ್ಸಾಹಿಸಿ ಬೆಳೆಸಿದರು.

ಆಲಂ ಆರಾ ಪಾರ್ಸಿ ಥಿಯೇಟರ್ಸ್‌ನ ಪ್ರಮುಖ, ಜನಪ್ರಿಯ ನಾಟಕ. ಆ ದಿನಗಳಲ್ಲಿ ಮುಂಬೈನಲ್ಲಿ ಗುಜರಾತಿ, ಪಾರ್ಸಿ ಮತ್ತು ಮರಾಠಿ ನಾಟಕಗಳ ಪ್ರಭಾವ ಹೆಚ್ಚಾಗಿತ್ತು. ನಾಟಕ ಬರೆಯುವವರು ಇದ್ದರೇ ಹೊರತು, ಸಿನಿಮಾಕ್ಕೆ ಸಂಭಾಷಣೆ, ಹಾಡು, ಚಿತ್ರಕಥೆ ಬರೆಯುವ ಪದ್ಧತಿಯೇ ಹೊಸದು.
 
ಚಲನಚಿತ್ರ ಸಂಗೀತ ನಿರ್ದೇಶಕರ ಕಲ್ಪನೆಯೂ ಇರಲಿಲ್ಲ. ಎಲ್ಲವನ್ನೂ ಶೂನ್ಯದಿಂದಲೇ ಆರಂಭಿಸಬೇಕಾದ ಸವಾಲು ಇರಾನಿಯವರದಾಗಿತ್ತು. ಪಾರ್ಸಿ ನಾಟಕ ಬರೆದಿದ್ದ ಜೋಸೆಫ್ ಡೇವಿಡ್, ಅವರದೇ `ಆಲಂ ಆರಾ~ ನಾಟಕವನ್ನು ತೆರೆಗೆ ಅಳವಡಿಸಿದರು.

ಕಥೆ, ಚಿತ್ರಕಥೆ, ಸಂಭಾಷಣೆ ಹಾಡು ಎಲ್ಲವೂ ಜೋಸೆಫ್ ಡೇವಿಡ್ ಅವರದೇ. ಮೊದಲ ವಾಕ್ಚಿತ್ರದ ಈ ಎಲ್ಲ ದಾಖಲೆಗಳು ಅವರ ಹೆಸರಿಗೆ ಸೇರಿದವು. ಆಗ ಪಾರ್ಸಿ ನಾಟಕದಲ್ಲಿ ಜನಪದ ಹಾಡುಗಳನ್ನು ಹಾಡಲಾಗುತ್ತಿತ್ತು. `ಆಲಂ ಆರಾ~ಗೆ ಇರಾನಿಯವರೇ ಸಂಗೀತ ನಿರ್ದೇಶಕರಾದರು. ಹಾಡುಗಳ ಧಾಟಿ, ರಾಗ ಎಲ್ಲವೂ ಅವರದೇ ಆಯ್ಕೆ.
 
ತಬಲ, ಹಾರ್ಮೋನಿಯಂ ಮತ್ತು ಪಿಟೀಲು ಈ ಮೂರು ವಾದ್ಯಗಳನ್ನಷ್ಟೇ ಬಳಸಿ ಸಂಗೀತ ಸಂಯೋಜಿಸಲಾಯಿತು. ಡಬ್ಲ್ಯು.ಎಂ. ಖಾನ್ ಎನ್ನುವ ಕಲಾವಿದರಿಂದ `ದೇ ದೇ ಖುದಾಕೆ ನಾಮಸೆ... ತಾಖತ್ ಹೈ ಫರ್ ದೇನೇಕೆ...~ ಎನ್ನುವ ಹಾಡು ಅತ್ಯಂತ ಜನಪ್ರಿಯ ಚಿತ್ರಗೀತೆಯಾಯಿತು.
 
ತನ್ನ ಆಶ್ರಯದಾತರನ್ನು ಹಾಡಿ ಹೊಗಳುವಂಥ ಲಾವಣಿ ಸ್ವರೂಪದ ಇಂತಹ ಹಾಡುಗಳ ಛಾಪು ಭಾರತೀಯ ಚಿತ್ರರಂಗದಲ್ಲಿ ಇಂದಿಗೂ ರೂಢಿಯಲ್ಲಿರುವುದನ್ನು ಗಮನಿಸಬಹುದು. ಈ ಚಿತ್ರದ ಹಾಡುಗಳು ಉಳಿದಿಲ್ಲ. ಇದ್ದ ಒಂದೇ ಒಂದು ಡಿಸ್ಕ್ 1934ರಲ್ಲಿಯೇ ಮುರಿದುಹೋಗಿದೆ. ಎಂಬತ್ತೊಂದು ವರ್ಷಕ್ಕೇ ನಾವು ನಮ್ಮ ದಾಖಲೆಗಳನ್ನು ಕಳೆದುಕೊಳ್ಳುತ್ತೇವೆ.

`ಆಲಂ ಆರಾ~ ಕತೆ ಕೂಡ ಕಾಲಕ್ಕೆ ತಕ್ಕಂತೆಯೇ ಇದೆ. ಮಲತಾಯಿಯ ಕ್ರೌರ‌್ಯ, ಕೊನೆಯಲ್ಲಿ ಪ್ರೇಮಿಗಳ ಮಿಲನ, ಸುಖಾಂತ್ಯ, ದುಷ್ಟ ಶಕ್ತಿಗೆ ಶಿಕ್ಷೆ... ಈ ಸೂತ್ರದ ಕತೆ, ಪ್ರೇಕ್ಷಕರ ಕಣ್ಣೀರಿನ ಮೇಲೆ ಗುರಿಯಿಟ್ಟಿರುವಂತಿದೆ.
 
ಕುಮಾರಪುರದ ರಾಜ ಮತ್ತು ಅವನ ಇಬ್ಬರು ರಾಣಿಯರ ಕತೆ. ಇಬ್ಬರಿಗೂ ಸಂತಾನ ಭಾಗ್ಯವಿಲ್ಲ. ಫಕೀರನೊಬ್ಬನ ಭವಿಷ್ಯದಂತೆ ಕಿರಿಯ ರಾಣಿ, ಆಲಂ ಆರಾಗೆ (ಜುಬೇದ) ಜನ್ಮನೀಡಿ ಸಾಯುತ್ತಾಳೆ.

ಮೊದಲ ರಾಣಿಯ ಹೊಟ್ಟೆಕಿಚ್ಚಿನಿಂದ ಮಗು ಜಿಪ್ಸಿಗಳ ಶಿಬಿರ ಸೇರುತ್ತದೆ. ಮತ್ತೊಬ್ಬ ರಾಜಕುವರನ (ಮಾಸ್ಟರ್ ವಿಠಲ್) ಜೊತೆ ಪ್ರೇಮಾಂಕುರವಾಗಿ, ಆಲಂ ಆರಾಳ ಜನ್ಮರಹಸ್ಯ ಬಯಲಾಗಿ ಪ್ರೇಮಿಗಳು ಒಂದುಗೂಡುತ್ತಾರೆ, ಮಾಸ್ಟರ್ ವಿಠಲ್ ನಾಯಕ (ಅಂದಿನ ದಿನದಲ್ಲಿ ಮೂಕಿ ಚಿತ್ರಗಳಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಾಯಕ ನಟ. ಸ್ಟಂಟ್‌ಗಳಿಗಾಗಿ ಹೆಚ್ಚು ಖ್ಯಾತಿ ಪಡೆದಿದ್ದ). ಜುಬೇದಾ ನಾಯಕಿ. ಭಾರತದ ವಾಕ್ಚಿತ್ರದ ಮೊದಲ ನಾಯಕ-ನಾಯಕಿ.

ಚಿತ್ರದ ಇತರ ತಾರಾಗಣದಲ್ಲಿ ಸೊಹ್ರಾಬ್ ಮೋದಿ, ಎಲಿಗರ್, ಯಾಕೂಬ್, ಪೃಥ್ವಿರಾಜ್‌ಕಪೂರ್, ಡಬ್ಲ್ಯು.ಎಂ. ಖಾನ್, ಜಗದೀಶ್ ಸೇಥಿ ಇದ್ದರು. ಆರ್ದೇಶಿರ್ ಇರಾನಿ 130 ಮೂಕಿ ಚಿತ್ರಗಳು ಸೇರಿದಂತೆ 250 ಚಿತ್ರಗಳ ಮೂಲಕ ಭಾರತೀಯ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಮಹತ್ವದ್ದು. ಜೇಬುನ್ನಿಸಾ, ಜಾಲ್ ಮರ್ಚೆಂಟ್, ದಾದಾಸಾವಿ, ಬಿಲ್‌ಮೋರಿಯಾ, ಗೇಹರ್, ಸುಲೋಚನಾ, ಮಹಜರ್‌ಖಾನ್, ಯಾಕೂಬ್ ಇವೆಲ್ಲಾ ಹೆಸರುಗಳು ಮೂಕಿ ಚಿತ್ರಗಳಲ್ಲಿ ಅತ್ಯಂತ ಜನಪ್ರಿಯ.

ಮೊದಲ ಚಿತ್ರದ ಚಿತ್ರೀಕರಣ ಕೂಡ ದೊಡ್ಡ ಸವಾಲು. ರಿಕಾರ್ಡಿಂಗ್ ಯಂತ್ರ ಧ್ವನಿ ಮತ್ತು ಫಿಲಂ ಒಂದರಲ್ಲೇ ಇರುವ ಸಿಂಗಲ್ ಸಿಸ್ಟಂ ಆಗಿದ್ದುದರಿಂದ ಎರಡೆರಡು ಕೆಲಸ ಒಟ್ಟಿಗೆ ಆಗಬೇಕಿತ್ತು. ಅಮೆರಿಕದಿಂದ ಡೆಮ್ಮಿಂಗ್ ಎಂಬುವವರನ್ನು ಈ ಧ್ವನಿಮುದ್ರಣ ಯಂತ್ರ ಜೋಡಿಸಲು ಭಾರತಕ್ಕೆ ಕರೆಸಲಾಗಿತ್ತು.
 
ಅವರ ಸಂಭಾವನೆ ಅಂದಿನ ಕಾಲದ ಬಹುದೊಡ್ಡ ಮೊತ್ತವಾಗಿದ್ದ ನೂರು ರೂಪಾಯಿ. ಇರಾನಿಯವರು ಒಂದೇ ತಿಂಗಳಲ್ಲಿ ಅವರಿಂದ ಧ್ವನಿಮುದ್ರಣ ತಂತ್ರವನ್ನು ಕಲಿತುಕೊಂಡರು. ರುಸ್ತುಂ ಭರೂಚ ಅವರೊಡಗೂಡಿ ಆಲಂ ಆರಾವನ್ನು ರೆಕಾರ್ಡ್ ಮಾಡಿಕೊಂಡರು.

ಇರಾನಿಯವರ ಇಂಪೀರಿಯಲ್ ಸ್ಟುಡಿಯೋ ಮುಂಬೈನ ಗ್ರಾಂಟ್‌ರೋಡ್‌ನಲ್ಲಿತ್ತು. ಸ್ಟುಡಿಯೋ ಹಿಂದೆಯೇ ರೈಲು ಹಳಿಗಳಿದ್ದುದರಿಂದ ಆಗಾಗ ರೈಲು ಹಾದುಹೋಗುವ ಶಬ್ದವಾಗುತ್ತಿತ್ತು. ಮುಂಬೈ ಲೋಕಲ್ ರೈಲುಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ. ರೈಲು ಹೋಗುವುದನ್ನೇ ಕಾಯುತ್ತಿದ್ದು ನಂತರ ಚಿತ್ರೀಕರಣ ನಡೆಸುವುದು ತಾಳ್ಮೆಯ ಕೆಲಸ.
 
ಅಂದಿನ ದಿನಗಳಲ್ಲಿ ಚಿತ್ರೀಕರಣವನ್ನು ಹಗಲು ಹೊತ್ತಿನಲ್ಲಿ ಸೂರ್ಯನ ಬೆಳಕಿನಲ್ಲಿ ರಿಫ್ಲೆಕ್ಟರ್‌ಗಳನ್ನು ಹಾಕಿ ಮಾಡಲಾಗುತ್ತಿತ್ತು. ಆದರೆ `ಆಲಂ ಆರಾ~ದಲ್ಲಿ ಪ್ರಥಮಬಾರಿಗೆ ಸ್ಟುಡಿಯೋ ಒಳಗಡೆ ಕೃತಕ ದೀಪಗಳನ್ನು ಉಪಯೋಗಿಸಿ ಚಿತ್ರೀಕರಿಸಲಾಯಿತು. ಚಿತ್ರೀಕರಣವಾಗುವಾಗ ಅನವಶ್ಯಕ ಶಬ್ದ, ರೈಲುಗಾಡಿ ಹೋಗುವ ಶಬ್ದ ರೆಕಾರ್ಡ್ ಆಗುತ್ತಿತ್ತು.
 
ಹೀಗಾಗಿ ಇರಾನಿಯವರು ರಾತ್ರಿಯ ವೇಳೆ ದೀಪದ ಬೆಳಕಿನಲ್ಲಿ ಚಿತ್ರೀಕರಣ ಮಾಡುತ್ತಿದ್ದರು. ನಾಲ್ಕು ತಿಂಗಳಕಾಲ ಚಿತ್ರೀಕರಣದ ನಂತರ ಚಿತ್ರ ಸಿದ್ಧವಾಯಿತು. 40 ಸಾವಿರ ರೂ. ವೆಚ್ಚದಲ್ಲಿ ಚಿತ್ರ ವಿದೇಶಿ ತಂತ್ರಜ್ಞರ ನೆರವೇ ಇಲ್ಲದೆ ತಯಾರಾಗಿದ್ದು ಈ ಚಿತ್ರದ ಹೆಗ್ಗಳಿಕೆ.

ಮುಂಬೈನ ಮೆಜೆಸ್ಟಿಕ್ ಚಿತ್ರಮಂದಿರದಲ್ಲಿ ಮಾರ್ಚ್ 14, 1931ರಂದು (ಈ ಚಿತ್ರಮಂದಿರವೂ ಇರಾನಿ ಅವರಿಗೆ ಸೇರಿದ್ದು) ಆಲಂ ಆರಾ ಬಿಡುಗಡೆಯಾಗುವುದರೊಂದಿಗೆ ಮೂಕಿ ಚಿತ್ರಯುಗ ಅಂತ್ಯಕಂಡಿತು.
 
ಜನ ಶಬ್ದದ ಮೋಡಿಗೆ ಬೆರಗಾಗಿದ್ದರು. ಮುಂಬೈನಲ್ಲಿ ಎಂಟುವಾರಗಳ ಕಾಲ ಪ್ರದರ್ಶನಗೊಂಡು ಯಶಸ್ವಿಯಾದದ್ದು ಈಗ ನೆನಪು. ಜನ ಆಗ ತೋರಿದ ಸಂಭ್ರಮ ಮುಂದೆ ನಿರ್ಮಾಪಕರು ಮೂಕಿ ಚಿತ್ರಗಳಿಗೆ ನಮಸ್ಕಾರ ಹಾಕಿ ವಾಕ್ಚಿತ್ರದತ್ತ ಸಾಗಲು ಧೈರ್ಯ ತುಂಬಿತು. ಬೆಂಗಳೂರಿನ ಎಲ್ಜಿನ್ ಚಿತ್ರಮಂದಿರದಲ್ಲೂ ಜನಸಾಗರ. ಆರು ವಾರಗಳ ಕಾಲ ಜನ ಈ ಚಿತ್ರವನ್ನು ನೋಡಿ ಆನಂದಿಸಿದ್ದು ಚಿತ್ರಮಂದಿರದ ದಾಖಲೆಗಳಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT