ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮಗಳಿಗೆ ಲಕ್ಷ್ಮಣ ರೇಖೆ :ಹಾಕುವವರು ಯಾರು?

Last Updated 25 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಒಂದು ಮನೆ. ಅಲ್ಲಿ ಒಬ್ಬ ಪುರುಷ ಮತ್ತು ಒಬ್ಬ ಮಹಿಳೆ ಕುಳಿತಿದ್ದಾರೆ. ಮಹಿಳೆಯರ ಒಂದು ಗುಂಪು ಏಕಾಏಕಿ ಆ ಮನೆಗೆ ನುಗ್ಗುತ್ತದೆ. ಮನೆಯ ಹಜಾರದಲ್ಲಿಯೇ ಸೋಫಾ ಮೇಲೆ ಕುಳಿತ, ಸಾಕಷ್ಟು ಸುಶಿಕ್ಷಿತ ಎನಿಸುವ ಪುರುಷನ ತಲೆಗೆ, ಕೆನ್ನೆಗೆ ಚೆನ್ನಾಗಿ ಥಳಿಸುತ್ತದೆ. ಅವರ ಪಕ್ಕದಲ್ಲಿ ಕುಳಿತ ಅಷ್ಟೇ ಸುಶಿಕ್ಷಿತಳಾದ ಮಹಿಳೆಗೂ ಅದೇ ಗುಂಪು ಮುಖ ಮೂತಿ ಎನ್ನದೆ ಬಾರಿಸುತ್ತದೆ. ಆಕೆಯ ಮುಂಗೂದಲನ್ನು ಹಿಡಿದು ಎಳೆದಾಡುತ್ತದೆ.

ಇಬ್ಬರಿಗೂ ಬಾಯಿಗೆ ಬಂದಂತೆ ಬೈಯುತ್ತದೆ. ಕಾರಣ, ಅವರಿಬ್ಬರ ಮಧ್ಯೆ ಅನೈತಿಕ ಸಂಬಂಧ ಇದೆ ಎಂಬ ಆರೋಪ. ಪುರುಷನಿಗೆ ಒಬ್ಬ ಹೆಂಡತಿ ಇದ್ದಾಳೆ. ಮಹಿಳೆಗೆ ಒಬ್ಬ ಗಂಡ ಇದ್ದಾನೆ. ಏಟು ತಿಂದ ಪುರುಷ ಮತ್ತು ಮಹಿಳೆ, ತಮ್ಮ ತಮ್ಮ ಹೆಂಡತಿ ಮತ್ತು ಗಂಡನನ್ನು ತೊರೆದು ಈ ಮನೆಯಲ್ಲಿ ಸಹಜೀವನ ನಡೆಸುತ್ತಿದ್ದಾರೆ. ಹಲ್ಲೆ ಮಾಡಲು ಬಂದ ಗುಂಪಿನಲ್ಲಿ ಆ ಪುರುಷನ ಹೆಂಡತಿಯೂ ಇದ್ದಾಳೆ. ಆಕೆಯೇ ಈ ಗುಂಪನ್ನು ಕರೆದುಕೊಂಡು ಬಂದಿದ್ದಾಳೆ... ಇದು ಯಾವುದೇ ಮನೆಯಲ್ಲಿ ನಡೆಯಬಹುದಾದ ಒಂದು ಘಟನೆ.

ವಿಶೇಷವೇನು ಎಂದರೆ ಆ ಪುರುಷ ಮತ್ತು ಮಹಿಳೆಯ ಮೇಲೆ ಹಲ್ಲೆ ನಡೆಯುವುದನ್ನು ಟೀವಿ ವಾಹಿನಿಗಳು ಚಿತ್ರೀಕರಣ ಮಾಡಿಕೊಳ್ಳುತ್ತವೆ. ತಮ್ಮ 24 ಗಂಟೆಗಳ ಸುದ್ದಿಯಲ್ಲಿ ಅಗ್ರ ವಾರ್ತೆಯಾಗಿ ಪ್ರಕಟ ಮಾಡುತ್ತವೆ. ಹಿನ್ನೆಲೆಯಲ್ಲಿ ಯಾವುದೋ ಚಿತ್ರದ ಕೆಟ್ಟ ಹಾಡೊಂದನ್ನೂ ಪ್ರಸಾರ ಮಾಡುತ್ತವೆ. ಇದು ಯಾವುದೋ ಒಂದು ಅವಧಿಯ ವಾರ್ತೆಯ ಒಂದು ತುಣುಕಾಗಿ ಇರುವುದಿಲ್ಲ. ದಿನದ 24 ಗಂಟೆಗಳಲ್ಲಿ ಮತ್ತೆ ಮತ್ತೆ ಪ್ರಸಾರವಾಗುತ್ತದೆ.
ಹೆಂಡತಿಯ ಜತೆಗೆ ಬಂದ ಗುಂಪು, ಪುರುಷ ಮತ್ತು ಅವರ ಜತೆಗೆ ಇದ್ದ ಮಹಿಳೆಗೆ ಬಾರಿಸಿದ ನಂತರ ವಿವೇಕನಗರ ಪೊಲೀಸರು ಸ್ಥಳಕ್ಕೆ ಬರುತ್ತಾರೆ. ಈ ಪುರುಷ ಮತ್ತು ಮಹಿಳೆಯನ್ನು ಠಾಣೆಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿಯೂ ಟೀವಿ ವಾಹಿನಿಗಳು ಬೆನ್ನಟ್ಟುತ್ತವೆ...

ಸುದ್ದಿ ಪತ್ರಿಕೆಗಳಿಗೂ ಟೀವಿ ವಾಹಿನಿಗಳಿಗೂ ಇರುವ ವ್ಯತ್ಯಾಸ ಇದು. ಘಟನೆ ನಡೆಯುವ ಸ್ಥಳದಲ್ಲಿ ಸುದ್ದಿ ಪತ್ರಿಕೆಗಳು ಇರಬೇಕಾಗಿಲ್ಲ. ಆದರೆ, ಟೀವಿ ವಾಹಿನಿಗಳು ಆ ಸ್ಥಳದಲ್ಲಿ ಇರಲೇಬೇಕು. ಪತ್ರಿಕೆಗಳು ಇಂಥ ಅಪರಾಧ ಘಟನೆಗಳು ನಡೆದ ಮೇಲೂ ಅದನ್ನು ವರದಿ ಮಾಡುತ್ತವೆ. ಹಾಗೆ ನೋಡಿದರೆ ನಡೆದ ಮೇಲೆಯೇ ಅವು ವರದಿ ಮಾಡುತ್ತವೆ. ಆದರೆ, ಟೀವಿ ವಾಹಿನಿಗಳು ಅಪರಾಧ ನಡೆಯುವ ಸ್ಥಳದಲ್ಲಿಯೇ ಇರಬೇಕು ಎಂದು ಬಯಸುತ್ತವೆ. ಜತೆಗೊಂದು ದೃಶ್ಯ ಇಲ್ಲದೇ ಇದ್ದರೆ ಅದು ಅವರಿಗೆ ಸುದ್ದಿ ಆಗಲು ಸಾಧ್ಯವೇ ಇಲ್ಲ.

ಅವರಿಗೆ ಬೈಟ್ ಬೇಕೇ ಬೇಕು; ಬರೀ ಬೈಟ್ ಮಾತ್ರವಿದ್ದರೆ ಸಾಲದು ಈಗ ದೃಶ್ಯವೇ ಬೇಕು. ಇಲ್ಲವಾದರೆ, ಯಾರೋ ಒಬ್ಬ ಪುರುಷ ಯಾವುದೋ ಮಹಿಳೆಯ ಜತೆಗೆ ಸಂಬಂಧವಿಟ್ಟುಕೊಳ್ಳುತ್ತಾನೆ, ಆತನ ಹೆಂಡತಿ ತನ್ನ ಓಣಿಯ ಹೆಂಗಸರನ್ನೆಲ್ಲ ಸೇರಿಸಿ ಗಂಡನ ಮನೆಗೆ ದಾಳಿ ಇಡುತ್ತಾಳೆ; ಆಕೆಯ ಗಂಡ ಮತ್ತು ಆತನ ಜತೆಗೆ ಇದ್ದ ಹೆಂಗಸನ್ನು ಎಲ್ಲ ಸೇರಿ ಥಳಿಸುತ್ತಾರೆ. ಅಲ್ಲಿ ಟೀವಿ ವಾಹಿನಿಯವರಿಗೆ ಏನು ಕೆಲಸ? ಹೀಗೆ ಯಾರು ಯಾರೋ ಕಾನೂನನ್ನು ಕೈಗೆ ತೆಗೆದುಕೊಂಡು ಯಾರು ಯಾರನ್ನೋ ಹೊಡೆಯುವುದನ್ನು ನಿರ್ವಿಕಾರವಾಗಿ ಚಿತ್ರಿಸಬಹುದೇ? ಅದೇ ಗುಂಪಿನಲ್ಲಿ ಇದ್ದ ಒಬ್ಬ ಮಹಿಳೆ, ಪುರುಷನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿದರೂ ಟೀವಿ ವಾಹಿನಿಗಳು ಅದನ್ನು ಅಷ್ಟೇ ನಿರ್ವಿಕಾರವಾಗಿ ಚಿತ್ರೀಕರಿಸಿಕೊಳ್ಳುತ್ತವೆಯೇ? ಚಿತ್ರೀಕರಿಸಿಕೊಳ್ಳಬಹುದೇ?

ಆ ಜಾಗಕ್ಕೆ ಪೊಲೀಸರು ಬರುತ್ತಾರೆ ಎಂದರೆ ಅಲ್ಲಿ ಒಂದು ಅಪರಾಧ ಕೃತ್ಯ ನಡೆದಿದೆ ಎಂದೇ ಅರ್ಥ. ಹಾಗಾದರೆ ಅಪರಾಧ ನಡೆಯುವ ಸ್ಥಳಕ್ಕೆ ಟೀವಿ ವಾಹಿನಿಯವರು ಹೋಗಿ ಅದನ್ನು ಚಿತ್ರೀಕರಿಸಬಹುದೇ? ಭಾರತೀಯ ದಂಡ ಸಂಹಿತೆಯಲ್ಲಿ ಅಪರಾಧಕ್ಕೆ ಎಷ್ಟು ಶಿಕ್ಷೆಯಿದೆಯೋ ಅಪರಾಧಕ್ಕೆ ಕುಮ್ಮಕ್ಕು ಕೊಡುವುದಕ್ಕೂ ಅಷ್ಟೇ ಶಿಕ್ಷೆ ಇದೆ.

ವಾಹಿನಿಯವರು ಚಿತ್ರೀಕರಿಸಿಕೊಳ್ಳುತ್ತಾರೆ ಎಂದರೆ ನಮ್ಮ ರೋಷಾವೇಶ ಇದ್ದಕ್ಕಿದ್ದಂತೆ ಹಲವು ಮಡಿ ಹೆಚ್ಚಾಗುತ್ತದೆ. ಒಂದು ಏಟು ಹಾಕುವಲ್ಲಿ ನಾಲ್ಕು ಏಟು ಹಾಕುತ್ತೇವೆ. ನಾಲ್ಕು ಏಟು ಎಂಟು ಏಟು ಆದರೂ ಆಗಬಹುದು. ಬರೀ ಕೈಯಿಂದ ಹೊಡೆದರೆ ಸಾಲದು ಎಂದು ಕೈಗೆ ಇನ್ನೇನಾದರೂ ಸಿಕ್ಕರೆ ಅದನ್ನೂ ಬಳಸಬಹುದು!
 
ಹೀಗೆ `ಪೌರುಷ~ ಏರುತ್ತ ಹೋಗಿ ಏನಾದರೂ ಹೆಚ್ಚೂ ಕಡಿಮೆಯಾದರೆ ಅದಕ್ಕೆ ವಾಹಿನಿಯವರು ಪ್ರೇರಣೆ ಕೊಟ್ಟಂತೆಯೇ ಅಲ್ಲವೇ? ವಾಹಿನಿಗಳ ಮುಂದೆಯೇ ಆ ಹೆಂಡತಿ ತನ್ನ ಸೇಡನ್ನು ತೀರಿಸಿಕೊಳ್ಳಲು ಏಕೆ ಬಯಸುತ್ತಾಳೆ? ಹಾಗಾದರೂ ತನ್ನ ಗಂಡನ ಮತ್ತು ಆತನ ಜತೆಗೆ ಇರುವ ಹೆಣ್ಣಿನ ಮಾನ ಹೋಗಲಿ ಎಂದು ಆಕೆ ಬಯಸುತ್ತಾಳೆಯೇ? ಆಕೆಗೆ ನೆಲದ ಕಾನೂನಿನಲ್ಲಿ ನಂಬಿಕೆ ಹೊರಟು ಹೋಗಿದೆಯೇ? ಆಕೆಗೆ ನೆಲದ ಕಾನೂನಿನಲ್ಲಿ ನಂಬಿಕೆ ಕಡಿಮೆ ಆಗಿದೆ ಎಂದೇ ಅಂದುಕೊಳ್ಳೋಣ. ಮಾಧ್ಯಮದವರಾಗಿ ನಾವೂ ನಂಬಿಕೆ ಕಳೆದುಕೊಳ್ಳುವುದೇ? ಯಾವುದಾದರೂ ಪತ್ರಿಕೆಗೆ ಒಬ್ಬ ಹೆಣ್ಣು ಮಗಳು ಫೋನ್ ಮಾಡಿ ತನ್ನ ಗಂಡ ಅನೈತಿಕ ಸಂಬಂಧವಿಟ್ಟುಕೊಂಡಿದ್ದಾನೆ, ಅವರ ಚಿತ್ರ ತೆಗೆದುಕೊಂಡು ಪತ್ರಿಕೆಯಲ್ಲಿ ಹಾಕಿರಿ ಎಂದು ನಾವು, ವಾಹಿನಿಯವರು ಮಾಡಿದಂತೆ ಮಾಡುತ್ತೇವೆಯೇ?

ಗಂಡು ಹೆಣ್ಣಿನ ನಡುವಿನ ಇಂಥ ಸಂಬಂಧ ರೋಚಕವಾಗಿರುತ್ತದೆ. ಅದು ವಾಹಿನಿಗಳಿಗೆ ರೋಚಕ ಸಾಮಗ್ರಿ ಎಂದು ಖಂಡಿತ ಅನಿಸುತ್ತದೆ. ವಾಹಿನಿಗಳು ರೋಚಕತೆಯ ಬೆನ್ನು ಹತ್ತಿರುವುದರಿಂದಲೇ ಜನರೂ ಅವರನ್ನು ಕರೆಸಿ ಅವರ ಮುಂದೆಯೇ `ನ್ಯಾಯ ಇತ್ಯರ್ಥ~ ಮಾಡುತ್ತಿರುವಂತಿದೆ.
 
ಮೈಸೂರು ವಿಶ್ವವಿದ್ಯಾಲಯದಲ್ಲಿ ಶಿವಬಸವಯ್ಯ ಎಂಬ ಪ್ರಾಧ್ಯಾಪಕರು ತಮ್ಮ  ಪಿಎಚ್.ಡಿ ವಿದ್ಯಾರ್ಥಿನಿಯೊಬ್ಬರ ಜತೆಗೆ ಅನುಚಿತವಾಗಿ ನಡೆದುಕೊಂಡ ಘಟನೆ ಬಹಿರಂಗವಾಗುತ್ತಿದ್ದಂತೆಯೇ ಅಂಥದೇ ಇನ್ನೊಂದು ಘಟನೆಯ ಬೆನ್ನು ಹತ್ತಿ ಒಬ್ಬ ಅಧ್ಯಾಪಕ ಮತ್ತು ಆತನ ವಿದ್ಯಾರ್ಥಿನಿ ಜತೆಗಿದ್ದ ಅನೈತಿಕ ಸಂಬಂಧವನ್ನು ವಾಹಿನಿಗಳು ಬಯಲಿಗೆ ಎಳೆದುವು. ಅದು ವಾಹಿನಿಗಳಿಗೆ ಹೇಗೆ ಗೊತ್ತಾಯಿತು ಎಂಬುದು ವಿಸ್ಮಯ!
 
ಆ ಅಧ್ಯಾಪಕನ ಹೆಂಡತಿಯೇ ವಾಹಿನಿಗಳಿಗೆ ಮಾಹಿತಿ ಕೊಟ್ಟಿರಬೇಕು. ಆಕೆ, ಟೀವಿ ವಾಹಿನಿಗಳ ಜತೆಗೆ ಗಂಡನ ಮನೆಗೆ ಹೋಗಿ ಅವನ ಮನೆಯ ಮುಂದೆ ಬ್ದ್ದಿದು ಹೊರಳಾಡಿ ಅತ್ತು ರಂಪಾಟ ಮಾಡಿದ್ದನ್ನು ವಾಹಿನಿಗಳು ಸಂಭ್ರಮದಿಂದ ಗಂಟೆಗಟ್ಟಲೆ  ಪ್ರಸಾರ ಮಾಡಿದುವು. ಅಧ್ಯಾಪಕನ ಜತೆಗೆ ಸಂಬಂಧವಿಟ್ಟುಕೊಂಡಿದ್ದ ವಿದ್ಯಾರ್ಥಿನಿಯ ಮನೆಗೂ ಹೋದುವು. ವಾಹಿನಿಗಳ ಜತೆಗೆ ಮಾತನಾಡಲು ನಿರಾಕರಿಸಿದ ವಿದ್ಯಾರ್ಥಿನಿ ಎರಡೂ ಕೈ ಜೋಡಿಸಿ ತನ್ನನ್ನು ತನ್ನ ಪಾಡಿಗೆ ಬಿಟ್ಟು ಬಿಡಲು ಗೋಗರೆಯುತ್ತಿದ್ದಳು. ಮುಂದೆ ಏನಾಯಿತು ಎಂದು ಯಾರಿಗೂ ಗೊತ್ತಿಲ್ಲ. ಮಾಧ್ಯಮಗಳು `ಟ್ರಯಲ್~ ಮಾಡಲು ನಿಂತಾಗ ಆಗುವುದು ಹೀಗೆಯೇ. ಅದು ಒಂದು ಕ್ಷಣದಲ್ಲಿ ಮುಗಿದು ಹೋಗುತ್ತದೆ. ಅಪರಾಧಿ ಯಾರು, ನಿರಪರಾಧಿ ಯಾರು ಎಂಬುದನ್ನು ಒಂದು ಕ್ಷಣದಲ್ಲಿ ನಿರ್ಣಯ ಮಾಡಿ, ಹಣೆಪಟ್ಟಿ ಹಚ್ಚಿ ಅಲ್ಲಿಂದ ಕಾಲು ತೆಗೆದು ಬಿಡುತ್ತೇವೆ. ಜೀವನ ಅಷ್ಟು ಸುಲಭವಾಗಿರುವುದಿಲ್ಲ. ಆದರೆ, ಅದನ್ನು ಅರ್ಥ ಮಾಡಿಕೊಳ್ಳುವಷ್ಟು ವ್ಯವಧಾನ ನಮಗೆ ಇರುವುದಿಲ್ಲ.

ಒಂದು ಸಾರಿ ನಾವು `ಟ್ರಯಲ್~ ಮಾಡುವ ನ್ಯಾಯಾಧೀಶನ ಸ್ಥಾನದಲ್ಲಿ ಕುಳಿತು ಬಿಟ್ಟರೆ ತೀರ್ಪು ಕೊಡುವುದು ಕಷ್ಟವೇನೂ ಅಲ್ಲ. ನಮ್ಮ ಭಾಷೆ ಬದಲಾಗಿ ಬಿಡುತ್ತದೆ. ನಮ್ಮ ವಾಹಿನಿಗಳ ಯಾವ ಹೊತ್ತಿನ ಸುದ್ದಿಯನ್ನು ನೀವು ನೋಡಿದರೂ ಈ ಪೂರ್ವಗ್ರಹೀತ ನಮಗೆ ಗೊತ್ತಾಗುತ್ತದೆ. ವಾರ್ತಾ ವಾಚಕಿ ಮೊದಲೇ  ತೀರ್ಮಾನಕ್ಕೆ ಬಂದು ಅದಕ್ಕೆ ಪೂರಕವಾಗಿಯೇ ಸುದ್ದಿಯನ್ನು ರೂಪಿಸುತ್ತ ಹೋಗುತ್ತಾಳೆ. ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ ನಮ್ಮ ಹಿರಿಯರು ಬಹು ಹಿಂದೆಯೇ `ಸಂಗತಿ ಪವಿತ್ರ, ಟೀಕು ಸ್ವತಂತ್ರ~ ಎಂದರು. ಈಗ ಸಂಗತಿ ಮತ್ತು ಟೀಕುವಿನ ನಡುವಿನ ಅಂತರ ಬಹಳ ಕಡಿಮೆಯಾಗುತ್ತಿದೆ.
ವಾಹಿನಿಗಳ ಪ್ರಭಾವ ನೇರವಾಗಿ ಪತ್ರಿಕೆಗಳ ಮೇಲೂ ಆಗಿದೆ. ಈಗ ಬಹುತೇಕ ಪತ್ರಿಕೆಗಳ ಸುದ್ದಿ ಟೀಕುವೇ ಆಗಿರುತ್ತದೆ. ಅದನ್ನು ಸುಲಭವಾಗಿ ಸಂಪಾದಕೀಯ ಎಂದು ಬಣ್ಣಿಸಬಹುದು. ಸಂಗತಿ ನೇರವಾಗಿ, ನಿರ್ದುಷ್ಟವಾಗಿ ಇರಬೇಕು. ಸಂಪಾದಕೀಯದಲ್ಲಿ ಅಭಿಪ್ರಾಯ ಇರಬೇಕು. ಸಂಪಾದಕೀಯ ಓದಿ ಜನರು ಸಂಗತಿಯನ್ನು ಅರ್ಥೈಸಿಕೊಳ್ಳುವುದನ್ನು ಕಲಿಯಬೇಕು. ಸಂಗತಿಯನ್ನೇ ಓದಿ ಅಲ್ಲ.

ಒಂದು ಸಾರಿ ಸುದ್ದಿಯಲ್ಲಿ ಹೀಗೆ ಟೀಕು ಸೇರಿಕೊಳ್ಳುತ್ತ ಹೋದರೆ ಆಗ ನಮ್ಮ ಭಾಷೆ ಮತ್ತೆ ಬದಲಾಗುತ್ತದೆ. ಸರಳ, ನೇರ ಭಾಷೆ ಸಾಲದು ಎನಿಸತೊಡಗುತ್ತದೆ. ಟ್ಯಾಬ್ಲಾಯಿಡ್ ಭಾಷೆಯ ಬಳಕೆಗೆ ನಾವು ಜಾರಿಕೊಳ್ಳುವುದು ಇಂಥದೇ ಸಂದರ್ಭದಲ್ಲಿ.

ಟ್ಯಾಬ್ಲಾಯಿಡ್‌ಗಳಿಗೆ ತಮ್ಮದೇ ಜರೂರುಗಳು ಇರುತ್ತವೆ. ಅವುಗಳ ಭಾಷೆ ಬೇರೆ, ನಿಲುವು ಬೇರೆ. ಅದು ಹಾಗೆಯೇ ಇರಬೇಕು. ದೈನಿಕಗಳ ವಿಚಾರ ಹಾಗಲ್ಲ. ಅವುಗಳ ಭಾಷೆ ಬೇರೆ, ನಿಲುವು ಬೇರೆ. ಈಗ ಈ ಅಂತರ ಕಡಿಮೆಯಾಗುತ್ತಿದೆ. ಹಾಗೆ ಆದರೆ, ದೈನಿಕಗಳ ಬದಲು ಟ್ಯಾಬ್ಲಾಯಿಡ್‌ಗಳೇ ಇರಬಹುದಲ್ಲ! ಆಗ ಜನರಿಗೆ ನಾವು ಆಯ್ಕೆ ಕೊಟ್ಟಂತೆ ಆಗುವುದಿಲ್ಲ. ಅವರು ದೈನಿಕಗಳನ್ನು ಕೊಂಡು ಓದಬೇಕಾದ ಅಗತ್ಯವಿಲ್ಲ. ವಾಹಿನಿಗಳ ಜತೆಗೆ ಪೈಪೋಟಿ ಮಾಡುತ್ತ ಮಾಡುತ್ತ ಬರೀ ಸುದ್ದಿಯ ಭಾಷೆ ಮಾತ್ರ ಬದಲಾಗುತ್ತಿಲ್ಲ.

ಪತ್ರಿಕೆಗಳ ಲೀಡ್ ಸುದ್ದಿಯ ಶೀರ್ಷಿಕೆಯಲ್ಲಿಯೂ ರೋಚಕತೆ ಢಾಳವಾಗಿ ಗೋಚರಿಸತೊಡಗಿದೆ. ಅದರಲ್ಲಿ ಸೃಜನಶೀಲತೆಗಿಂತ ಕಸರತ್ತು ಕಾಣತೊಡಗಿದೆ. ನಾವು ಮೆಲುದನಿಯಲ್ಲಿ ಮಾತನಾಡುವ ಬದಲು ಅರಚತೊಡಗಿದ್ದೇವೆ ಅನಿಸತೊಡಗಿದೆ. ಬರೀ ಲೀಡ್ ಸುದ್ದಿಯ ಶೀರ್ಷಿಕೆಯಲ್ಲಿ ಮಾತ್ರ ಈ ಕಸರತ್ತು ಅಥವಾ `ಸೃಜನಶೀಲತೆ~ ಇದ್ದರೆ  ಸಾಕೇ? ಒಳಪುಟಗಳಲ್ಲಿ ಅದೇ ಕಸರತ್ತು ಕಾಣುವುದಿಲ್ಲ. ಅಂದರೆ ಬರೀ ಮೊದಲ ಪುಟದ ಲೀಡ್ ಸುದ್ದಿಯ ಶೀರ್ಷಿಕೆ ಮಾತ್ರ ನೋಡಿ ಜನರು ಪತ್ರಿಕೆಗಳನ್ನು ಕೊಳ್ಳಬೇಕೇ? ನಾವು ಹಾಗೆಯೇ ಯೋಚಿಸುತ್ತ ಇರುವಂತೆ ಕಾಣುತ್ತದೆ. ಆಗ ಸಂಜೆ ಪತ್ರಿಕೆಗಳಿಗೂ ನಮಗೂ ವ್ಯತ್ಯಾಸ  ಇರುವುದಿಲ್ಲ!

ದೈನಿಕಗಳು ವಾಹಿನಿಗಿಂತ ಬೇರೆ. ವಾಹಿನಿಗಳೂ ಈಗಿಗಿಂತ ಭಿನ್ನವಾಗಿ ಇರಲು ಸಾಧ್ಯವಿದೆ. `ಪ್ರದರ್ಶನ~ದ ಬೆನ್ನು ಹತ್ತಿದಾಗ ಹೀಗೆಯೇ ಆಗುತ್ತದೆ. ಎಷ್ಟು ಪ್ರದರ್ಶನ ಮಾಡಿದರೂ ಸಾಲದು ಎನಿಸುತ್ತದೆ. ಜನರ ಅಭಿರುಚಿ ಕೂಡ ಹಾಳಾಗಿ ಬಿಡಬಹುದು.

ತೆಲುಗಿನಲ್ಲಿ ಈ ಸಮಸ್ಯೆ ಇದ್ದಂತೆ ಕಾಣುತ್ತದೆ. ಮೊದಲು ಸಿನಿಮಾಗಳಲ್ಲಿ `ಕ್ಯಾಬರೆ~ ಡಾನ್ಸ್ ಮಾಡುವ ಪಾತ್ರ ಬೇರೆಯದೇ ಆಗಿತ್ತು. ಬರು ಬರುತ್ತ ಈಗ ನಾಯಕಿಯೇ ಐಟಂ ಸಾಂಗಿಗೆ ಹೊಟ್ಟೆ-ಎದೆ ಬಿಟ್ಟುಕೊಂಡು ಕುಣಿಯುತ್ತಿದ್ದಾಳೆ. ಆದರೂ ನಮಗೆ ಸಾಕು ಎನಿಸಿಲ್ಲ. `ಕ್ಯಾಬರೆ~ ಡಾನ್ಸ್ ಮಾಡುತ್ತಿದ್ದ ಪಾತ್ರಕ್ಕೆ ಅದು ಉಪಜೀವನದ ದಾರಿಯಾಗಿತ್ತು. ನಾಯಕಿಗೆ ಅದು ಉಪಭೋಗದ ದಾರಿ. ಪ್ರೇಕ್ಷಕನಿಗೆ ಅದು ಯಾವ ದಾರಿ? ಗೊತ್ತಿಲ್ಲ.

ಪ್ರಾದೇಶಿಕ ಭಾಷೆಗಳ ವಾಹಿನಿಗಳಲ್ಲಿ ಕಾಣುತ್ತಿರುವ ಈ ಅಪಭೃಂಶದಂಥ ನಡವಳಿಕೆ ಇಂಗ್ಲಿಷ್ ವಾಹಿನಿಗಳಲ್ಲಿ ಕಾಣುವುದಿಲ್ಲ. ಅಲ್ಲಿಯೂ ಕೂಗಾಟ ಜಾಸ್ತಿ. ರೋಚಕತೆಯೂ ಇರುತ್ತದೆ ಎಂದು ಅನೇಕ ಸಾರಿ ಅನಿಸುತ್ತದೆ. ಆದರೆ, ಅವರು ಪ್ರಾದೇಶಿಕ ವಾಹಿನಿಗಳ ಹಾಗೆ ಕಾಮ, ಕ್ರೌರ್ಯ, ಹಿಂಸೆ, ಅಪರಾಧ ಮತ್ತು ಮೂಢನಂಬಿಕೆಯ ಬೆನ್ನು ಹತ್ತಿದಂತೆ ಕಾಣುವುದಿಲ್ಲ. ನಮ್ಮ ಟೀವಿ ವಾಹಿನಿಗಳಿಗೆ ಇನ್ನೂ ಹದಿ ಹರಯ. `ವಯಸ್ಕ~ ಆಗುತ್ತ ಅವು ಕೂಡ ಆರಂಭದ ಈ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಬಹುದು. ಇಲ್ಲವಾದರೆ, ಜನರ ಕೈಯಲ್ಲಿ ರಿಮೋಟ್ ಇದ್ದೇ ಇರುತ್ತದೆ. ಟಿಆರ್‌ಪಿ ಗಳಿಸಬೇಕಾದರೆ ಜನರು ರಿಮೋಟ್‌ನ `ಆಫ್~ ಗುಂಡಿಯನ್ನು ಒತ್ತದಂತೆ ನೋಡಿಕೊಳ್ಳಬೇಕು.

ನಮಗೆ ನಾವೇ ಲಕ್ಷ್ಮಣ ರೇಖೆ ಹಾಕಿಕೊಂಡರೆ ಈ ಸಮಸ್ಯೆ ಇರುವುದಿಲ್ಲ. ಮೂವರು ಮಾಜಿ ಸಚಿವರ ಬ್ಲೂ ಫಿಲಂ ವೀಕ್ಷಣೆ ಹಗರಣದಲ್ಲಿ ನಾವು ಪ್ರದರ್ಶನ ಪಿಪಾಸೆಗೆ ಬಲಿಯಾದೆವು; ಲಕ್ಷ್ಮಣ ರೇಖೆಯನ್ನು ದಾಟಿದೆವು ಎಂಬ `ಗೂಬೆ~ ಈಗ ನಮ್ಮ ತಲೆಯ ಮೇಲೆ ಕುಳಿತಿದೆ! ಅದು ನಿರಾಧಾರವಾದುದೇನೂ ಅಲ್ಲ! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT