ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುರೋಪ್ ಒಡಕಿಗೆ ಬ್ರೆಕ್ಸಿಟ್ ಮುನ್ನುಡಿಯೇ?

Last Updated 16 ಜೂನ್ 2016, 19:30 IST
ಅಕ್ಷರ ಗಾತ್ರ

ಬ್ರಿಟನ್ ಜನಮತಗಣನೆಗೆ ಸಜ್ಜಾಗಿದೆ. ‘ಐರೋಪ್ಯ ಒಕ್ಕೂಟದ ಭಾಗವಾಗಿ ಬ್ರಿಟನ್ ಉಳಿಯಬೇಕೇ’ ಎಂಬ ಪ್ರಶ್ನೆಗೆ ಬ್ರಿಟನ್ ಜನರು ‘ಹೌದು’ ಅಥವಾ ‘ಇಲ್ಲ’ ಎಂಬ ನಿಖರ ಉತ್ತರ ನೀಡಬೇಕಿದೆ.

ಐರೋಪ್ಯ ಒಕ್ಕೂಟದ ಭಾಗವಾಗಿ ಉಳಿಯಬೇಕು ಎಂದು ಒಂದು ಗುಂಪು ವಾದಿಸುತ್ತಿದ್ದರೆ, ಹೊರಬಂದರೆ ಲಾಭ ಎಂದು ಮತ್ತೊಂದು ಗುಂಪು ಪ್ರತಿವಾದಕ್ಕೆ ಇಳಿದಿದೆ. ಈ ಪ್ರಶ್ನೆಗೆ ಅಂತಿಮ ಉತ್ತರವನ್ನು ಈ ತಿಂಗಳ 23ರಂದು ಮತ ಚಲಾಯಿಸುವ ಮೂಲಕ ಬ್ರಿಟನ್ ಜನರು ನೀಡುತ್ತಾರೆ. ನಂತರ ಜನಾಭಿಪ್ರಾಯದ ಅನ್ವಯ ಡೇವಿಡ್ ಕ್ಯಾಮರೂನ್ ಆಡಳಿತ ಹೆಜ್ಜೆಯಿಡುತ್ತದೆ.

ಬ್ರಿಟನ್ ಹೀಗೆ ತಾನು ತೆಗೆದುಕೊಳ್ಳಬೇಕಾದ ನಿರ್ಣಯದ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸುತ್ತಿರುವುದು ಇದೇ ಮೊದಲೇನಲ್ಲ. 1975ರಲ್ಲಿ ಐರೋಪ್ಯ ಒಕ್ಕೂಟದಲ್ಲಿ ಮುಂದುವರೆಯುವ ಬಗ್ಗೆ ಜಿಜ್ಞಾಸೆ ಬೆಳೆದು, ಕೊನೆಗೆ ಅಂತಿಮ ನಿರ್ಣಯ ತೆಗೆದುಕೊಳ್ಳಲು ಅಂದಿನ ಪ್ರಧಾನಿ ಹೆರಾಲ್ಡ್ ವಿಲ್ಸನ್ ಜನಮತ ಸಂಗ್ರಹಕ್ಕೆ ಮುಂದಾ
ಗಿದ್ದರು.

ತರ ಜನಾಭಿಪ್ರಾಯದ ಪ್ರಕಾರ ಬ್ರಿಟನ್ ಒಕ್ಕೂಟದಲ್ಲಿ ಮುಂದುವರೆಯಿತು. ಅಂದಿನಿಂದ ಈವರೆಗೆ, ಒಕ್ಕೂಟದ ನೀತಿ ನಿಲುವುಗಳಲ್ಲಿ ಸಾಕಷ್ಟು ಬದಲಾವಣೆ ಆಗಿರುವುದರಿಂದ, ಜಾಗತಿಕ ಆರ್ಥಿಕ ಮತ್ತು ರಾಜಕೀಯ ಸ್ಥಿತಿಗತಿಗಳಲ್ಲೂ ಪಲ್ಲಟಗಳಾಗಿರುವುದರಿಂದ, ಬ್ರಿಟನ್  ಒಕ್ಕೂಟದಲ್ಲಿ ಮುಂದುವರೆಯುವ ಬಗ್ಗೆ ಪರಾಮರ್ಶೆ ನಡೆಯಬೇಕು, ಪುನಃ ಜನಾಭಿಪ್ರಾಯ ಪಡೆಯಬೇಕು ಎಂಬ ಒತ್ತಾಯ ಕೆಲವು ವರ್ಷಗಳಿಂದ ಕೇಳಿಬರುತ್ತಿತ್ತು.

ಕಳೆದ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯ ವೇಳೆ ಡೇವಿಡ್ ಕ್ಯಾಮರೂನ್ ತಾವು ಅಧಿಕಾರಕ್ಕೆ ಬಂದರೆ ಬ್ರಿಟನ್ ಭವಿಷ್ಯ ಕುರಿತ ಈ ನಿರ್ಣಾಯಕ ಪ್ರಶ್ನೆಗೆ ಜನರ ಉತ್ತರ ಪಡೆಯುವುದಾಗಿ ಹೇಳಿದ್ದರು. ಇದೀಗ ತಾವು ನೀಡಿದ್ದ ಆಶ್ವಾಸನೆಯನ್ನು ಪೂರ್ಣಗೊಳಿಸಲು ಕ್ಯಾಮರೂನ್ ಆಡಳಿತ ಮುಂದಾಗಿದೆ. ‘ಬ್ರೆಕ್ಸಿಟ್’ ಪರ ಇರುವ ಮತ್ತು ಐರೋಪ್ಯ ಒಕ್ಕೂಟದಲ್ಲಿ ಬ್ರಿಟನ್ ಮುಂದುವರೆಯಬೇಕು ಎಂದು ವಾದಿಸುತ್ತಿರುವ ಎರಡು ಗುಂಪುಗಳು ಜನಾಭಿಪ್ರಾಯ ರೂಪಿಸಲು ಸಾಕಷ್ಟು ಕಸರತ್ತು ಮಾಡುತ್ತಿವೆ. ಪ್ರಚಾರಕ್ಕೆ ದೊಡ್ಡ ಮೊತ್ತವನ್ನೇ ಬಳಸುತ್ತಿವೆ.

ಅಷ್ಟಕ್ಕೂ ಬ್ರಿಟನ್, ಐರೋಪ್ಯ ಒಕ್ಕೂಟದಿಂದ ಹೊರಬರಬೇಕೆಂಬ ಕೂಗು ಎದ್ದಿದ್ದು ಏಕೆ? ಕೊಂಚ ವಿವರವಾಗಿ ನೋಡಬೇಕು. ಐರೋಪ್ಯ ಒಕ್ಕೂಟ ರಚನೆಯ ಹಿಂದಿದ್ದ ಏಕಸೂತ್ರ ‘ಆರ್ಥಿಕ ವಲಯದ ನಿಕಟ ಸ್ನೇಹ, ರಾಜಕೀಯವಾಗಿಯೂ ದೇಶ ದೇಶಗಳ ನಡುವೆ ಸಂಬಂಧವನ್ನು ಉತ್ತಮಗೊಳಿಸುತ್ತದೆ’ ಎಂಬುದು.

ಎರಡನೇ ಜಾಗತಿಕ ಮಹಾಸಮರದ ವೇಳೆ ಯುರೋಪಿನ ನೆರೆಹೊರೆಯ ರಾಷ್ಟ್ರಗಳು, ಒಂದರ ಮೇಲೊಂದು ಮುಗಿಬಿದ್ದು ಹಗೆತನದಲ್ಲೇ ಅವಸಾನದ ಹಾದಿ ಹಿಡಿದಿದ್ದವು. ಇದರಿಂದ ಹೊರಬರಲು 1951ರಲ್ಲಿ ಫ್ರಾನ್ಸ್ ಮತ್ತು ಪಶ್ಚಿಮ ಜರ್ಮನಿ ಕಲ್ಲಿದ್ದಲು ಮತ್ತು ಉಕ್ಕಿನ ವ್ಯಾಪಾರ ಸಂಬಂಧ ಒಪ್ಪಂದಗಳನ್ನು ಮಾಡಿಕೊಂಡವು. ಈ ಎರಡರ ಜೊತೆ ಇಟಲಿ, ಬೆಲ್ಜಿಯಂ, ನೆದರ್ಲೆಂಡ್‌ ದೇಶಗಳೂ ಕೈ ಜೋಡಿಸಿದಾಗ ‘ಉಕ್ಕು ಮತ್ತು ಕಲ್ಲಿದ್ದಲು ಒಕ್ಕೂಟ’ ಅಸ್ತಿತ್ವಕ್ಕೆ ಬಂತು.

ನಂತರ ಈ ಒಕ್ಕೂಟ ‘ಯುರೋಪ್ ಎಕಾನಮಿಕ್ ಕಮ್ಯುನಿಟಿ’ಯಾಗಿ ರೂಪಾಂತರಗೊಂಡು, ವ್ಯಾಪಾರ ವಹಿವಾಟುಗಳು ವಿಸ್ತಾರಗೊಂಡವು. ಹೀಗೆ ನಿರ್ಮಾಣವಾದ ಮುಕ್ತ ಏಕ ಮಾರುಕಟ್ಟೆಯ ಸಫಲತೆ, ಇತರ ದೇಶಗಳನ್ನೂ ಒಕ್ಕೂಟದತ್ತ ಸೆಳೆಯಿತು. ಬ್ರಿಟನ್ ಒಕ್ಕೂಟದ ಭಾಗವಾಯಿತು. 1993ರ ಹೊತ್ತಿಗೆ ಹತ್ತಾರು ರಾಷ್ಟ್ರಗಳು ಕೈ ಕೈ ಹಿಡಿದು ನಿಂತಿದ್ದರ ಪರಿಣಾಮ, ‘ಐರೋಪ್ಯ ಒಕ್ಕೂಟ’ ಬಲಗೊಂಡಿತು.

ಗೆತನ ಮರೆತು ಕೈ ಜೋಡಿಸಿದ ಯುರೋಪಿನ ದೇಶಗಳು, ‘ಯುನೈಟೆಡ್ ಸ್ಟೇಟ್ಸ್ ಆಫ್ ಯುರೋಪ್’ ಆದೆವೆಂದು ಸಂಭ್ರಮಿಸಿದವು. ಆದರೆ ‘ಯುರೊ’ವನ್ನು ಒಕ್ಕೂಟದ ಎಲ್ಲ ರಾಷ್ಟ್ರಗಳು ಒಪ್ಪಿಕೊಳ್ಳಲಿಲ್ಲ. ಒಕ್ಕೂಟದ ಭಾಗವಾಗಿದ್ದರೂ ಸಾರ್ವಭೌಮತೆಯನ್ನು ಉಳಿಸಿಕೊಳ್ಳಲು ಬ್ರಿಟನ್ ಹೆಣಗಾಡಿತು. ಒಕ್ಕೂಟದ ಸದಸ್ಯ ರಾಷ್ಟ್ರಗಳೊಂದಿಗೆ ಸಂಬಂಧ ವೃದ್ಧಿಸಿಕೊಂಡು ವ್ಯಾವಹಾರಿಕವಾಗಿ ಬ್ರಿಟನ್ ಲಾಭ ಗಳಿಸಿದರೂ, ಒಕ್ಕೂಟದ ನೀತಿ ನಿಯಮ ರೂಪಿಸುವ ‘ಯುರೋಪಿಯನ್ ಕಮಿಷನ್’ ತನ್ನ ಹಿಡಿತ ಬಿಗಿಗೊಳಿಸುತ್ತಾ ಬಂದಂತೆ ಉಸಿರುಗಟ್ಟಿದ ಸ್ಥಿತಿಯನ್ನೂ ಅನುಭವಿಸಿತು.

ಒಕ್ಕೂಟದ ಭಾಗವಾಗಿದ್ದ ಗ್ರೀಸ್ ಆರ್ಥಿಕ ಕುಸಿತದಿಂದ ದಿವಾಳಿ ಅಂಚಿಗೆ ತಲುಪಿದ ಮೇಲೆ, ಐರೋಪ್ಯ ಒಕ್ಕೂಟ ತೊರೆಯಬೇಕೆಂಬ ಆಗ್ರಹ ಬ್ರಿಟನ್‌ನಲ್ಲಿ ಬಲಗೊಂಡಿತು. ಇದೀಗ ‘ಬ್ರೆಕ್ಸಿಟ್’ ಪರ ವಾದಿಸುತ್ತಿರುವ ಗುಂಪು ಮುಂದಿಡುತ್ತಿರುವ ಕಾರಣಗಳಿಷ್ಟೇ. ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರಗಳ ನಡುವೆ ಮುಕ್ತ ಗಡಿ ಒಪ್ಪಂದ ಇರುವುದರಿಂದ ಕಟ್ಟಡ ನಿರ್ಮಾಣ, ಕೃಷಿ, ಉತ್ಪಾದನಾ ಕ್ಷೇತ್ರದಲ್ಲಿರುವ ಬ್ರಿಟನ್ ಮೂಲದ ದೈತ್ಯ ಕಂಪೆನಿಗಳು ತಮಗೆ ಅಗತ್ಯವಾದ ನೌಕರ ವರ್ಗವನ್ನು ರೊಮೇನಿಯಾ, ಬಲ್ಗೇರಿಯಾದಂತಹ ರಾಷ್ಟ್ರಗಳಿಂದ ಪಡೆಯುತ್ತಿವೆ, ಸ್ಥಳೀಯರಿಗೆ ನೌಕರಿ ದೊರೆಯುತ್ತಿಲ್ಲ.

ಈ ಕಂಪೆನಿಗಳು ಒಕ್ಕೂಟದ ನೀತಿ ನಿಯಮಗಳನ್ನು ತಮ್ಮ ಲಾಭಕ್ಕೆ ತಕ್ಕಂತೆ ಬದಲಿಸಿಕೊಳ್ಳಲು ಲಾಬಿ ಮಾಡುತ್ತಿವೆ. ಜಟಿಲ ಕಾನೂನಿನ ಮೂಲಕ ಸಣ್ಣ ಉದ್ದಿಮೆಗಳು ಬೆಳೆಯದಂತೆ ವ್ಯವಸ್ಥಿತವಾಗಿ ಪಿತೂರಿ ನಡೆಸುತ್ತಿವೆ. ಒಕ್ಕೂಟದಿಂದ ಹೊರಬಂದರೆ ವಲಸೆ ಕಾಯ್ದೆಯನ್ನು ಮಾರ್ಪಾಟು ಮಾಡಿ ಕೇವಲ ವಿಜ್ಞಾನಿಗಳು ಮತ್ತು ಪರಿಣತ ನೌಕರ ವರ್ಗವನ್ನು ಮಾತ್ರ ಒಳಬಿಟ್ಟುಕೊಳ್ಳಬಹುದು.

ದರಿಂದಾಗಿ ಸಾಮಾನ್ಯ ಕೌಶಲ ಬೇಡುವ ಕೆಲಸಗಳು ಬ್ರಿಟಿಷ್ ಪ್ರಜೆಗಳಿಗೇ ದೊರೆಯುತ್ತವೆ. ಬ್ರಿಟನ್ ವರ್ಷಕ್ಕೆ ಸರಿಸುಮಾರು 1800 ಕೋಟಿ ಪೌಂಡ್ ಹಣವನ್ನು (ಸುಮಾರು ₹ 1.71 ಲಕ್ಷ ಕೋಟಿ) ಸದಸ್ಯತ್ವ ಶುಲ್ಕವಾಗಿ ಒಕ್ಕೂಟದ ಬೊಕ್ಕಸಕ್ಕೆ ನೀಡುತ್ತಿದೆ. ಕೃಷಿ ಸಬ್ಸಿಡಿ, ಅಭಿವೃದ್ಧಿ ಯೋಜನೆಗಳಿಗೆ ಒಕ್ಕೂಟದಿಂದ ಹಣ ಪಡೆಯುತ್ತಿದೆಯಾದರೂ, ಅದು ತಾನು ನೀಡುತ್ತಿರುವ ಹಣಕ್ಕಿಂತ ಕಡಿಮೆ.

ಕೇವಲ 500 ಕೋಟಿ ಪೌಂಡ್‌ನಷ್ಟು ಹಣ (ಸುಮಾರು ₹ 47 ಸಾವಿರ ಕೋಟಿ) ಮರಳಿ ಬರುತ್ತಿದೆ. ಹಾಗಾಗಿ ಒಕ್ಕೂಟದಿಂದ ಹೊರಬಂದರೆ ಸದಸ್ಯತ್ವ ಶುಲ್ಕವಾಗಿ ತೆರುತ್ತಿರುವ ದೊಡ್ಡ ಮೊತ್ತವನ್ನು ದೇಶದ ಇತರ ಆದ್ಯತೆಗಳಿಗೆ ಬಳಸಬಹುದು. ಒಕ್ಕೂಟದ ಕೃಷಿ, ಮೀನುಗಾರಿಕಾ ನೀತಿ (CAP & CFP) ಬ್ರಿಟನ್ನಿಗೆ ಮಾರಕವಾಗಿ ಪರಿಣಮಿಸಿದೆ. ಈ ಕ್ಷೇತ್ರಗಳಿಗೆ ಪುನರ್‌ಜೀವ ತುಂಬಲು ‘ಬ್ರೆಕ್ಸಿಟ್’ ಅನುವು ಮಾಡಿಕೊಡುತ್ತದೆ.

ದೇಶದ ಭದ್ರತೆಯ ವಿಚಾರವೂ ಇದರೊಂದಿಗೆ ತಳುಕು ಹಾಕಿಕೊಂಡಿದೆ. ಪ್ಯಾರಿಸ್ ಮತ್ತು ಬ್ರಸೆಲ್ಸ್‌ನಲ್ಲಿ ನಡೆದ ಉಗ್ರರ ದಾಳಿಯಿಂದಾಗಿ ಭದ್ರತೆ ಐರೋಪ್ಯ ಒಕ್ಕೂಟ ರಾಷ್ಟ್ರಗಳ ಮೊದಲ ಆದ್ಯತೆಯಾಗಿ ಪರಿಣಮಿಸಿದೆ. ಒಕ್ಕೂಟದ ಸದಸ್ಯ ರಾಷ್ಟ್ರವಾಗಿ ಇತರ ದೇಶಗಳೊಂದಿಗೆ ಮುಕ್ತ ಗಡಿ ಹೊಂದಿದ್ದರೆ, ಉಗ್ರರು ದೇಶದೊಳಗೆ ಸರಾಗ
ವಾಗಿ ನುಸುಳಬಹುದು ಎಂಬ ಮಾತು ಕೇಳಿಬರುತ್ತಿದೆ. ಜೊತೆಗೆ ಒಕ್ಕೂಟದಿಂದ ಹೊರಬಂದರೆ ಬ್ರಿಟನ್ ಸ್ವಹಿತಾಸಕ್ತಿಗೆ ಪೂರಕವಾಗಿ, ಒಕ್ಕೂಟದ ಯಾವುದೇ ನಿಬಂಧನೆಗ
ಳಿಲ್ಲದೆ ಇತರ ದೇಶಗಳೊಂದಿಗೆ ರಾಜಕೀಯ ಮತ್ತು ವಾಣಿಜ್ಯ ಸಂಬಂಧಗಳನ್ನು ಕಾಯ್ದುಕೊಳ್ಳಬಹುದು.

ಹೆಚ್ಚೆಚ್ಚು ಬಂಡವಾಳವನ್ನು ಆಕರ್ಷಿಸಬಹುದು. ಜೊತೆಗೆ ಒಕ್ಕೂಟದ ಸದಸ್ಯ ರಾಷ್ಟ್ರಗಳೊಂದಿಗೂ ವ್ಯವಹರಿಸಬಹುದು ಎಂಬ ವಾದವನ್ನೂ ಮಂಡಿಸಲಾಗುತ್ತಿದೆ.
ಆದರೆ ಇದಕ್ಕೆ ಪ್ರತಿವಾದವೂ ಇದೆ. ಒಕ್ಕೂಟದ ಭಾಗವಾಗಿರುವುದರಿಂದ ಬ್ರಿಟನ್ ಪ್ರಜೆಗಳು ಐರೋಪ್ಯ ಒಕ್ಕೂಟದ ಯಾವುದೇ ಸದಸ್ಯ ರಾಷ್ಟ್ರಗಳಲ್ಲಿ ಕೆಲಸ ಮಾಡ
ಬಹುದು. ಇತರ ಸದಸ್ಯ ರಾಷ್ಟ್ರಗಳೊಂದಿಗೆ ವ್ಯವಹರಿಸುವುದೂ ಸುಲಭ. ವಲಸಿಗರಾಗಿ ಬರುತ್ತಿರುವ ದುಡಿಯುವ ಚೈತನ್ಯವಿರುವ ತರುಣ ಸಮೂಹದಿಂದ ಬ್ರಿಟನ್ ಆರ್ಥಿಕ
ತೆಗೆ ಲಾಭವೇ ಆಗಿದೆ. ವಲಸಿಗರು ಬ್ರಿಟನ್ ಪ್ರಜೆಗಳಿಗಿಂತ ಹೆಚ್ಚು ತೆರಿಗೆ ಪಾವತಿಸುತ್ತಿದ್ದಾರೆ.

28 ರಾಷ್ಟ್ರಗಳು ಕೈ ಕೈ ಹಿಡಿದು ನಿಂತಿರುವುದರಿಂದಲೇ ಒಕ್ಕೂಟಕ್ಕೆ ರಾಜಕೀಯವಾಗಿ ಜಾಗತಿಕ ಮಟ್ಟದಲ್ಲಿ ಮಹತ್ವವಿದೆ. ಒಕ್ಕೂಟ ತೊರೆದರೆ ಬ್ರಿಟನ್ ಏಕಾಂಗಿಯಾಗಲಿದೆ.
ಬ್ರಿಟನ್ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳಿಗೆ ಒಕ್ಕೂಟ ಸಾಕಷ್ಟು ಅನುದಾನ ನೀಡುತ್ತಿದೆ. ವಿದ್ಯಾರ್ಥಿ ವಿನಿಮಯ ಯೋಜನೆ ಅಡಿಯಲ್ಲಿ ಬ್ರಿಟನ್ನಿನ ವಿದ್ಯಾರ್ಥಿಗಳು ವಿವಿಧ ದೇಶಗಳಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಶೇಕಡ 73ರಷ್ಟು ಕೃಷಿ ಉತ್ಪನ್ನಗಳನ್ನು ಬ್ರಿಟನ್ ‘ಇಯು’ ಸದಸ್ಯ ರಾಷ್ಟ್ರಗಳಿಗೆ ರಫ್ತು ಮಾಡುತ್ತದೆ. ಬ್ರಿಟನ್ನಿನ ಸುಮಾರು ಮೂವತ್ತು ಲಕ್ಷ ಉದ್ಯೋಗಗಳು ‘ಇಯು’ ಸದಸ್ಯತ್ವದ ಮೇಲೆ ಅವಲಂಬಿತವಾಗಿವೆ. ಒಕ್ಕೂಟದಿಂದ ಹೊರಬರುವ ನಿರ್ಧಾರ ಈ ಎಲ್ಲದರ ಮೇಲೆ ಪರಿಣಾಮ ಬೀರುತ್ತದೆ. ಈಗಾಗಲೇ ಶೇಕಡ 20ರಷ್ಟಿರುವ ನಿರುದ್ಯೋಗ ಸಮಸ್ಯೆ ಇನ್ನಷ್ಟು ಹೆಚ್ಚಬಹುದು, ಆರ್ಥಿಕತೆ ಕುಸಿದು ಬೆಳವಣಿಗೆ ಕುಂಠಿತವಾಗುತ್ತದೆ ಎಂಬ ಕಳವಳ ವ್ಯಕ್ತವಾಗಿದೆ.

‘ಬ್ರೆಕ್ಸಿಟ್‌’ ಕುರಿತಾದ ಬ್ರಿಟನ್ ಜನಮತಗಣನೆ ಜಗತ್ತಿನ ಹಲವು ರಾಷ್ಟ್ರಗಳ ಗಮನವನ್ನೂ ಸೆಳೆದಿದೆ. ಕಾರಣ, ‘ಬ್ರೆಕ್ಸಿಟ್‌’ ಜಾಗತಿಕ ಆರ್ಥಿಕ ಮತ್ತು ರಾಜಕೀಯ ಸ್ಥಿತಿ
ಗತಿಗಳ ಮೇಲೆ ಪರಿಣಾಮ ಬೀರುತ್ತದೆ. ಒಂದೊಮ್ಮೆ ಬ್ರಿಟನ್ ಆರ್ಥಿಕತೆ ಕುಸಿದರೆ, ಅದರ ಪರಿಣಾಮ ಐರೋಪ್ಯ ಒಕ್ಕೂಟದ ಇತರ ರಾಷ್ಟ್ರಗಳ ಮೇಲೂ ಆಗುತ್ತದೆ.  ಐರೋಪ್ಯ ಒಕ್ಕೂಟದ ಬಲ ಕ್ಷೀಣಿಸಿದರೆ, ರಷ್ಯಾ ಮಂದಹಾಸ ಬೀರುತ್ತದೆ. ರಷ್ಯಾದ ಕಿರುನಗು ಅಮೆರಿಕದ ನಿದ್ದೆ ಕಸಿಯುತ್ತದೆ. ಹಾಗಾಗಿ ಫ್ರಾನ್ಸ್, ಜರ್ಮನಿ ಮತ್ತು ಅಮೆರಿಕ ‘ಬ್ರಿಟನ್, ಐರೋಪ್ಯ ಒಕ್ಕೂಟ ತೊರೆಯುವ ನಿರ್ಧಾರ ಮಾಡಬಾರದು’ ಎಂದು ಸಲಹೆ ನೀಡುತ್ತಿವೆ.

ಬ್ರಿಟನ್ ಹಿತ ಬಯಸುವ, ಉತ್ತಮ ಸಂಬಂಧ ಹೊಂದಿರುವ ಇತರ ರಾಷ್ಟ್ರಗಳು, ಐರೋಪ್ಯ ಒಕ್ಕೂಟದಲ್ಲಿ ಬ್ರಿಟನ್ ಮುಂದುವರೆಯಬೇಕು ಎಂದು ಅಭಿಪ್ರಾಯಪಟ್ಟರೆ, ಆ ಬಗ್ಗೆ ಚಿಂತಿಸುವುದು ಒಳಿತು’ ಎಂದು ಬರಾಕ್‌ ಒಬಾಮ ಹೇಳಿದ್ದರೆ, ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ‘ಅಂತಿಮ ನಿರ್ಧಾರ ನಿಮ್ಮದು. ಆದರೆ ಅಮೆರಿಕ ಐರೋಪ್ಯ ಒಕ್ಕೂ
ಟದ ಏಕತೆಯನ್ನು ಬಯಸುತ್ತದೆ.

ಬ್ರಿಟನ್, ಒಕ್ಕೂಟದಲ್ಲಿ ಪ್ರಮುಖ ಪಾತ್ರ ವಹಿಸುವುದನ್ನು ನಾವು ಎದುರು ನೋಡುತ್ತೇವೆ’ ಎಂದಿದ್ದಾರೆ. ಆದರೆ ರಷ್ಯಾ ಮಾತ್ರ ಮೌನವಾಗಿದೆ. ಹಿಂದೆ ಡೇವಿಡ್ ಕ್ಯಾಮರೂನ್ ‘ಐರೋಪ್ಯ ಒಕ್ಕೂಟದಲ್ಲಿ ಒಡಕನ್ನು ಬಯಸುತ್ತಿರುವುದು ಇಬ್ಬರೇ, ಒಂದು ಉಗ್ರ ಸಂಘಟನೆ ಐಎಸ್ ಮತ್ತೊಂದು ರಷ್ಯಾ’ ಎಂದಾಗಲೂ, ಪುಟಿನ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಜೊತೆಗೆ, ‘ಬ್ರೆಕ್ಸಿಟ್’ನೊಂದಿಗೆ ಬ್ರಿಟನ್ನಿನ ಏಕತೆಯ ಪ್ರಶ್ನೆಯೂ ಎದ್ದಿದೆ. ಬ್ರಿಟನ್ ಮಾಜಿ ಪ್ರಧಾನಿ ಜಾನ್ ಮೇಜರ್ ಮತ್ತು ಟೋನಿ ಬ್ಲೇರ್ ‘Unity of UK itself on the ballot paper’ ಎಂದಿದ್ದಾರೆ. ಅದಕ್ಕೆ ಕಾರಣವೂ ಇದೆ. ಬ್ರಿಟನ್ ಭಾಗವಾಗಿರುವ ಸ್ಕಾಟ್‌ಲ್ಯಾಂಡ್‌ ಒಕ್ಕೂಟದಲ್ಲಿ ಉಳಿಯುವ ನಿಟ್ಟಿನಲ್ಲಿ ಮತ ಚಲಾಯಿಸಿ, ಜನಾಭಿ
ಮತದ ಒಟ್ಟಾರೆ ಫಲಿತಾಂಶ ಒಕ್ಕೂಟದಿಂದ ಹೊರಬರಬೇಕು ಎಂದಾದರೆ,  ಬಲವಂತವಾಗಿ ಸ್ಕಾಟ್‌ಲ್ಯಾಂಡನ್ನು ಒಕ್ಕೂಟದಿಂದ ಹೊರಗೆಳೆದು ತಂದಂತಾಗುತ್ತದೆ.

ಅದು ವೈಮನಸ್ಯಕ್ಕೆ, ಪ್ರತ್ಯೇಕತೆಯ ಕೂಗಿಗೆ ಕಾರಣವಾಗಬಹುದು. ಬ್ರಿಟನ್ ಒಡೆದು ಹೋಗಬಹುದು. ಹೀಗೆ ಬ್ರೆಕ್ಸಿಟ್ ಪರ-ವಿರೋಧದ ವಾದ, ಆತಂಕದ ಮಾತು ರಾಜಕೀಯ ನಾಯಕರ, ತಜ್ಞರ ಅಂಗಳದಲ್ಲಿ ಚಾಲ್ತಿಯಲ್ಲಿರುವಾಗ, ಬ್ರಿಟನ್ನಿನ ಸಾಮಾನ್ಯ ಜನ ಐರೋಪ್ಯ ಒಕ್ಕೂಟದಿಂದ ಹೊರಬಂದರೆ ಜೀವನ ವೆಚ್ಚ ತಗ್ಗುತ್ತದೆಯೇ, ಹೆಚ್ಚು ಉಳಿತಾಯ ಸಾಧ್ಯವೇ, ನೌಕರಿ ಸಿಗುತ್ತದೆಯೇ, ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಆಗಲಿದೆಯೇ ಎಂದು ತಮ್ಮನ್ನು ಬಾಧಿಸುತ್ತಿರುವ ಪ್ರಶ್ನೆಗಳನ್ನಷ್ಟೇ ಮುಂದಿಡುತ್ತಿದ್ದಾರೆ.

ಕೊನೆಗೆ ಬ್ರಿಟನ್ ಭವಿಷ್ಯ ಬರೆಯುವುದು ಈ ಸಮೂಹವೇ. ಬಿಡಿ, ದಶಕಗಳ ಹಿಂದೆ ಚರ್ಚಿಲ್ ‘If Europe were once united in the sharing of its common inheritance, there would be no limit to the happiness, to the prosperity and glory which it’s three or four hundred million people would enjoy’ ಎಂದಿದ್ದರು.

ಆದರೆ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಒಂದಾದ ಯುರೋಪ್, ಒಡೆದು ಹೋಗುವ ಸೂಚನೆಯೇ ಕಾಣುತ್ತಿದೆ. ಈ ತಿಂಗಳ 23ರ ಜನಮತ ಗಣನೆಯ ನಂತರ ಬ್ರಿಟನ್ ಐರೋಪ್ಯ ಒಕ್ಕೂಟದ ಇತರ ದೇಶಗಳ ಕೈ ಹಿಡಿದು ಮುಂದುವರೆಯಲಿದೆಯೇ ಅಥವಾ ಐರೋಪ್ಯ ಒಕ್ಕೂಟದ ಅವನತಿಗೆ ಮುನ್ನುಡಿ ಬರೆಯಲಿದೆಯೇ ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT