ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಮೇಲೆ ಪ್ರಾಣಹರಣ; ಹಾಕಲಾಗದೇ ಕಡಿವಾಣ?

ಅಕ್ಷರ ಗಾತ್ರ

ಅಂದು ಗೀತಾ ತನ್ನ ಜೀವನದ ಮೊತ್ತಮೊದಲ ಸಂಬಳ ಪಡೆಯುವ ಸಡಗರದಲ್ಲಿದ್ದಳು. ಮೈಸೂರಿನ ಸಿದ್ಧ ಉಡುಪು ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದ ಬಡ ಕುಟುಂಬದ ಆಕೆ, ತನ್ನ ಮೊದಲ ಸಂಬಳವನ್ನು ಹೇಗೆ ಖರ್ಚು ಮಾಡಬೇಕೆಂದು ಮೊದಲೇ ಲೆಕ್ಕಾಚಾರ ಹಾಕಿಕೊಂಡಿದ್ದಳು.

ತಾಯಿಗೆ ಅತಿ ಅಗತ್ಯವಾಗಿರುವ ಸೀರೆಯೊಂದನ್ನು ಕೊಡಿಸಬೇಕು; ಶಾಲೆಯಲ್ಲಿ ಕಲಿಯುತ್ತಿರುವ ತಮ್ಮನಿಗೆ ಒಂದು ಬ್ಯಾಗ್ ಮತ್ತು ಸದಾ ಅವನು ಕೇಳುತ್ತಲೇ ಇರುವ ಜಾಮಿಟ್ರಿ ಬಾಕ್ಸ್ ತೆಗೆಸಿಕೊಡಬೇಕು, ಕೆಲಸಕ್ಕೆ ಸೇರಿದ ಖುಷಿಗಾಗಿ, ತಮ್ಮೆಲ್ಲರಿಗೂ ಅಪರೂಪವೇ ಆದ ಒಂದಷ್ಟು ಸಿಹಿ ತಿನಿಸು ಕೊಂಡು ನೆರೆಯವರಿಗೂ ಹಂಚಿ ಸಂತೋಷ ಪಡಬೇಕು ಇತ್ಯಾದಿ...

ಗೀತಾ ಮತ್ತು ಅವಳ ಗೆಳತಿಯರು ನಸುಕಿನ ನಾಲ್ಕು ಗಂಟೆ ಹೊತ್ತಿಗೆಲ್ಲಾ ಸಿದ್ಧರಾಗಿ ಬಿಡುತ್ತಿದ್ದರು. ತಮ್ಮ ಊರಾದ ಹೈರಿಗೆಗೆ ತಮ್ಮನ್ನು ಕರೆದುಕೊಂಡು ಹೋಗಲೆಂದೇ ಬರುತ್ತಿದ್ದ ಟ್ಯಾಕ್ಸಿಗಾಗಿ ರಸ್ತೆ ಬದಿ ನಿಂತು ಕಾಯುತ್ತಿದ್ದರು. ಗ್ರಾಮದಿಂದ ಮೈಸೂರಿಗೆ ಒಂದು ಗಂಟೆಯ ಪ್ರಯಾಣ. ಈ ಅವಧಿಯಲ್ಲಿ ದಾರಿಯುದ್ದಕ್ಕೂ ಎಲ್ಲರೂ ತಮ್ಮ ಕಷ್ಟ, ಸುಖ, ನೋವು, ನಲಿವು ಹಂಚಿಕೊಂಡು ಹಗುರಾಗುತ್ತಿದ್ದರು.

ಅದೇ ರೀತಿ ಆ ದಿನವೂ ಅಲ್ಲಿದ್ದ ಬಹುತೇಕರು ಸಂಬಳದ ಆ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಾ, ಆ ಬಗ್ಗೆ ಸಂಭ್ರಮದಿಂದ ಮಾತನಾಡಿಕೊಳ್ಳುತ್ತಿದ್ದರು. ಕುಡಿದ ಮತ್ತಿನಲ್ಲಿದ್ದ ಚಾಲಕನ ರೂಪದಲ್ಲಿ ವಿಧಿ ತಮಗಾಗಿ ಹೊಂಚು ಹಾಕುತ್ತಿರುವುದು ಅವರಿಗಾದರೂ ಹೇಗೆ ತಾನೇ ಗೊತ್ತಾಗಬೇಕು? ಕ್ಷಣಾರ್ಧದಲ್ಲಿ ಎಂತಹ ಅನಾಹುತ ಸಂಭವಿಸಿಬಿಟ್ಟಿತೆಂದರೆ, ಅಲ್ಲಿದ್ದ ಯಾರಿಗೂ ಏನಾಯಿತು, ಹೇಗಾಯಿತು ಎಂಬುದರ ಸ್ಪಷ್ಟ ನೆನಪೂ ಇಲ್ಲ.

ಯರ‌್ರಾಬಿರ‌್ರಿ ಬಂದ ಮಾರುತಿ ಆಲ್ಟೊ ಕಾರೊಂದು ಇದ್ದವರ ಮೇಲೆಲ್ಲಾ ಹಠಾತ್ ನುಗ್ಗಿದ ರಭಸಕ್ಕೆ ಐವರು ಸ್ಥಳದಲ್ಲೇ ಸಾವಿಗೀಡಾದರು. ಇತರ 10 ಜನ ಗಾಯಗೊಂಡರು. ಯಾರೂ ಊಹಿಸಲಾಗದ ದೃಶ್ಯವನ್ನು ಅಲ್ಲಿ ಸೃಷ್ಟಿಸಿದ್ದ ಕಾರಿನ ಚಾಲಕ ಕೂಡಲೇ ಅಲ್ಲಿಂದ ಕಾಲ್ಕಿತ್ತಿದ್ದ.

ಇನ್ನೂ ನಿದ್ದೆಯಲ್ಲಿದ್ದ ಗ್ರಾಮದ ಜನ ಕೂಗಾಟ, ಚೀರಾಟದಿಂದ ಎಚ್ಚರಾಗಿ ದಿಗ್ಗನೆದ್ದು ಹೊರಗೋಡಿ ಬಂದರು. ಆತುರಾತುರದಲ್ಲಿ ಪೊಲೀಸರನ್ನು ಸಂಪರ್ಕಿಸಿ, ಗಾಯಗೊಂಡವರನ್ನು ಮೈಸೂರಿನ ಆಸ್ಪತ್ರೆಗೆ ಕರೆದೊಯ್ದರು. ಇದಾದ ಕೆಲ ದಿನಗಳಲ್ಲೇ ಗಾಯಾಳುಗಳಲ್ಲಿ ಒಬ್ಬಳಾಗಿದ್ದ ಹುಡುಗಿ, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಅಸುನೀಗಿದಳು.

ಮೈಸೂರು- ಹೆಗ್ಗಡದೇವನಕೋಟೆ ಹೆದ್ದಾರಿಯಲ್ಲಿರುವ ಹೈರಿಗೆ ಬಡ ದಲಿತ ಕುಟುಂಬಗಳು ಹೆಚ್ಚಾಗಿರುವ ಗ್ರಾಮ. ಈ ಊರಿನಲ್ಲಿ ಪ್ರಾಥಮಿಕ ಶಿಕ್ಷಣ ಸವಲತ್ತನ್ನು ಕಂಡ ಮೊದಲ ಪೀಳಿಗೆ ಈಗಿನದೇಆಗಿದೆ. ಇಲ್ಲಿನ ಯುವಜನರು ಇದೀಗ ತಾನೇ ಮೈಸೂರು ಹಾಗೂ ಸುತ್ತಮುತ್ತ ಉದ್ಯೋಗಾವಕಾಶಗಳನ್ನು ಅರಸಲು ಆರಂಭಿಸಿದ್ದಾರೆ.

ಅಪಘಾತದಲ್ಲಿ ಮೃತಪಟ್ಟ ಆರು ಮಹಿಳೆಯರ ಪೈಕಿ ಐವರು 19-20 ವರ್ಷದವರು. ಈ ಅಪಘಾತದಿಂದ ಉಂಟಾದ ಆಘಾತದ ಬಿಸಿ ಅಲ್ಲಿನ ಸಂತ್ರಸ್ತ ಕುಟುಂಬಗಳನ್ನು ಮಾತ್ರವಷ್ಟೇ ತಟ್ಟಿಲ್ಲ. ಇಡೀ ಸಮುದಾಯದ ಜನರನ್ನು ಅದು ದೀರ್ಘಕಾಲದವರೆಗೂ ತಟ್ಟಲಿದೆ. ಒಬ್ಬ ಬೇಜವಾಬ್ದಾರಿ ಚಾಲಕ ಮಾಡಿದ ತಪ್ಪು ಐವರು ಯುವತಿಯರು ಹಾಗೂ ಅವರ ಕುಟುಂಬಗಳ ಭವಿಷ್ಯವನ್ನು ಮಸುಕು ಮಾಡಿಬಿಟ್ಟಿತು.

ಈ ಯುವತಿಯರ ಸಾವಿನ ವಿಷಾದದಲ್ಲಿ ಮುಳುಗಿದ್ದ ನನಗೆ, ಎರಡೂವರೆ ವರ್ಷಗಳ ಹಿಂದೆ ಸಂಭವಿಸಿದ ಇಂತಹುದೇ ಮತ್ತೊಂದು ದುರಂತ ನೆನಪಾಯಿತು. ನಮ್ಮ ಸಹೋದ್ಯೋಗಿ ಕಿರಿಯ ವೈದ್ಯರೊಬ್ಬರು ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಬಸವಕಲ್ಯಾಣದ ದೇವಾಲಯದಲ್ಲಿ ಆಚರಿಸಲು ಇಚ್ಛಿಸಿದರು.

ದರ್ಶನ ಮುಗಿಸಿದ ನಂತರ, ಬಾಡಿಗೆ ಟ್ಯಾಕ್ಸಿಯೊಂದರಲ್ಲಿ ಸಮೀಪದ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದರು. ಕಾಂಕ್ರೀಟ್ ವಿದ್ಯುತ್ ಕಂಬಗಳನ್ನು ಹೊತ್ತ ಲಾರಿ ಎದುರಿನಿಂದ ಧಾವಿಸುತ್ತಿತ್ತು. ಅಧಿಕ ವೇಗದಲ್ಲಿ ಬರುತ್ತಿದ್ದ ಲಾರಿ ಚಾಲಕನ ಕಣ್ಣಿಗೆ, ನಡುವೆ ಇದ್ದ ಅವೈಜ್ಞಾನಿಕ ರಸ್ತೆಯುಬ್ಬು (ಹಂಪ್) ಕಾಣಲೇ ಇಲ್ಲ.

ಹೀಗೆ ಲಾರಿಯು ರಸ್ತೆಯುಬ್ಬಿನ ಮೇಲೆ ಹತ್ತಿದ ವೇಗಕ್ಕೆ ಅದರೊಳಗಿದ್ದ ವಿದ್ಯುತ್ ಕಂಬವೊಂದು ಎಗರಿ ಈಚೆ ಬಂದಿತ್ತು. ಹೀಗೆ ಈಚೆ ಬಂದ ಕಂಬ ನೆಲಕ್ಕೆ ಬಡಿದು ನಂತರ ವೈದ್ಯರು ತೆರಳುತ್ತಿದ್ದ ಟ್ಯಾಕ್ಸಿಯ ಮುಂಭಾಗದ ಗಾಜನ್ನು ಸೀಳಿಕೊಂಡು ಒಳನುಗ್ಗಿ ನೇರವಾಗಿ ವೈದ್ಯರ ಹಣೆಗೆ ಬಡಿದಿತ್ತು.

ಅವರು ಸ್ಥಳದಲ್ಲೇ ಮೃತಪಟ್ಟರು. ಅವರ ಪಕ್ಕ ಕುಳಿತಿದ್ದ ಅವರ ಪತ್ನಿ ಗಾಯಗೊಂಡರು. ನಗರದ ಆಮಿಷಗಳನ್ನು ತೊರೆದು, ಗ್ರಾಮೀಣ ಜನ ಹಾಗೂ ಆದಿವಾಸಿಗಳ ಸೇವೆ ಮಾಡುವ ಹಂಬಲ ಹೊಂದಿದ್ದ ವೈದ್ಯರನ್ನು ಈ ದುರಂತ ಹೊಸಕಿಹಾಕಿತ್ತು.
ಇಂತಹ ಅಪಘಾತಗಳ ಬಗ್ಗೆ ನಾವೆಲ್ಲರೂ ಪತ್ರಿಕೆಗಳಲ್ಲಿ ಓದುತ್ತಲೇ ಇರುತ್ತೇವೆ.

ಕಳೆದ ತಿಂಗಳ ದಿನಪತ್ರಿಕೆಗಳ ಮೇಲೆ ಕಣ್ಣಾಡಿಸಿದಾಗ, ರಸ್ತೆ ಅಪಘಾತಗಳಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆ ನೋಡಿ ನನಗೆ ದುಃಖವಾಯಿತು. ಪತ್ರಿಕೆಗಳಲ್ಲಿ ಬರುವ ಇಂತಹ ಅಪಘಾತದ ಸುದ್ದಿಗಳು ಅದೆಷ್ಟು ಮಾಮೂಲಾಗಿ ಬಿಟ್ಟಿವೆಯೆಂದರೆ, ನಾವು ಬಹುತೇಕರು ಅವನ್ನು ಗಮನಿಸಲು ಕೂಡ ಹೋಗುವುದಿಲ್ಲ.
 
ನಮ್ಮ ಆತ್ಮೀಯ ಸ್ನೇಹಿತರೋ ಅಥವಾ ನೆಂಟರೋ ಅಪಘಾತದಿಂದ ಪ್ರಾಣ ಕಳೆದುಕೊಂಡಾಗ ಮಾತ್ರ ರಾಷ್ಟ್ರದ ರಸ್ತೆಗಳಲ್ಲಿ ಸಾವಿನ ಜಾಲವೇ ಹರಡಿದೆ ಎಂಬುದು ನಮ್ಮ ಅರಿವಿಗೆ ಬರುತ್ತದೆ. ಇತ್ತೀಚೆಗಷ್ಟೇ ಮೈಸೂರು ಪೊಲೀಸರು, ಕಳೆದ ತಿಂಗಳು ದ್ವಿಚಕ್ರ ವಾಹನ ಅಪಘಾತಗಳಲ್ಲಿ 12 ಯುವಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪ್ರಕಟಿಸಿದರು.

ಇವರ‌್ಯಾರೂ ಹೆಲ್ಮೆಟ್ ಧರಿಸಿರಲಿಲ್ಲವೆಂಬುದು   ಗಮನಿಸಬೇಕಾದ ಸಂಗತಿ. ಆದರೆ ಪರಿಸ್ಥಿತಿಯ ವ್ಯಂಗ್ಯವೆಂದರೆ, ಇಷ್ಟಾದರೂ ಸಂಚಾರ ಪೊಲೀಸರು ಹೆಲ್ಮೆಟ್ ಧರಿಸಬೇಕೆಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗುವ ಲಕ್ಷಣಗಳು ಕಂಡುಬರುತ್ತಿಲ್ಲ. ಪೊಲೀಸರ ಬಗ್ಗೆಯಾಗಲೀ, ಸಂಚಾರ ನಿಯಮಗಳ ಬಗ್ಗೆಯಾಗಲೀ ಯಾವ ಅಂಜಿಕೆಯೂ ಇಲ್ಲದೆ, ಸಾವಿರಾರು ದ್ವಿಚಕ್ರ ವಾಹನ ಸವಾರರು ಅಧಿಕ ವೇಗದಲ್ಲಿ ಸಾಗುವುದು ಎಗ್ಗಿಲ್ಲದೇ ಮುಂದುವರಿದಿದೆ.

ರಸ್ತೆ ಅಪಘಾತಗಳಿಂದಾಗಿ ಜಗತ್ತಿನಲ್ಲಿ ಪ್ರತಿ ಗಂಟೆಗೆ 25ಕ್ಕಿಂತ ಕಡಿಮೆ ವಯಸ್ಸಿನ 40 ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ವರದಿಯ ಪ್ರಕಾರ, 5ರಿಂದ 29 ವರ್ಷದೊಳಗಿನವರ ಸಾವಿಗೆ ಇದು ಎರಡನೇ ಮುಖ್ಯ ಕಾರಣವಾಗಿದೆ.

ನಮ್ಮ ರಾಷ್ಟ್ರದಲ್ಲಿ, 2009ರಲ್ಲಿ ರಸ್ತೆ ಅಪಘಾತಗಳಿಂದ ಪ್ರತಿ ಗಂಟೆಯಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 14. ಅದರ ಹಿಂದಿನ ವರ್ಷ ಈ ಸಂಖ್ಯೆ 13 ಆಗಿತ್ತು. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ರಸ್ತೆ ಅಪಘಾತಗಳಿಂದ ಸಾವಿಗೀಡಾಗುವವರ ಸಂಖ್ಯೆ ಪ್ರತಿ ವರ್ಷ ಹೆಚ್ಚಾಗುತ್ತಿದ್ದು, ಈಗ 1,35,000 ತಲುಪಿದೆ.

ಈ ಸಾವಿನ ಪ್ರಮಾಣದಲ್ಲಿ ಶೇ 40ರಷ್ಟು, ಲಾರಿ ಹಾಗೂ ದ್ವಿಚಕ್ರ ವಾಹನಗಳಿಂದ ಸಂಭವಿಸುತ್ತಿದೆ. ಮಧ್ಯಾಹ್ನ ಹಾಗೂ ಸಂಜೆಯ ಜನದಟ್ಟಣೆಯ ಅವಧಿ ಕೂಡ ಪ್ರಯಾಣಿಕರಿಗೆ ಹೆಚ್ಚು ಅಪಾಯಕರ ಎಂಬುದು ಕಂಡುಬಂದಿದೆ. ರಸ್ತೆ ಸುರಕ್ಷತೆ ಕುರಿತು ಡಬ್ಲ್ಯುಎಚ್‌ಒ ಬಿಡುಗಡೆ ಮಾಡಿರುವ ಮೊದಲ ಜಾಗತಿಕ ವರದಿಯಲ್ಲಿ ಕೂಡ ಇದನ್ನು ಪ್ರಸ್ತಾಪಿಸಲಾಗಿದೆ.

ಅಧಿಕ ವೇಗ, ಮದ್ಯ ಸೇವಿಸಿ ಚಾಲನೆ, ಹೆಲ್ಮೆಟ್ ಧರಿಸದಿರುವುದು, ಸೀಟ್ ಬೆಲ್ಟ್‌ಗಳನ್ನು ಕಟ್ಟಿಕೊಳ್ಳದಿರುವುದು ಅಪಘಾತಗಳಿಗೆ ಪ್ರಮುಖ ಕಾರಣ.ಡಬ್ಲ್ಯಎಚ್‌ಒ ಪ್ರಕಾರ, ಅತ್ಯಧಿಕ ಅಪಘಾತಗಳ ಸಂಖ್ಯೆಯಲ್ಲಿ ನಮ್ಮ ರಾಷ್ಟ್ರ ಎರಡನೇ ಸ್ಥಾನದಲ್ಲಿದೆ. ಶೇ 78.5ರಷ್ಟು ರಸ್ತೆ ಅಪಘಾತಗಳಿಗೆ ಚಾಲಕರೇ ಹೊಣೆ.

ಪಾದಚಾರಿಗಳು ಶೇ 2.2ರಷ್ಟು, ಸೈಕಲ್ ಸವಾರರು ಶೇ 1.2ರಷ್ಟು, ರಸ್ತೆಯ ದೋಷ ಶೇ 1.3ರಷ್ಟು, ದ್ವಿಚಕ್ರ ವಾಹನಗಳ ದೋಷ ಶೇ 1.8ರಷ್ಟು, ಪ್ರತಿಕೂಲ ಹವಾಮಾನ ಶೇ 0.8ರಷ್ಟು ಹಾಗೂ ಇತರ ಅಂಶಗಳು ಶೇ 14.2ರಷ್ಟು ದುರಂತಗಳಿಗೆ ಕಾರಣವಾಗಿವೆ. ಬಹುತೇಕ ಚಾಲಕರು ರಸ್ತೆ ಸಂಚಾರ ನಿಯಮಗಳನ್ನು ಪಾಲಿಸುವುದಿಲ್ಲ.
 
ಮಿತಿ ಮೀರಿದ ವೇಗ, ಸಿಗ್ನಲ್ ದೀಪಗಳ ಉಲ್ಲಂಘನೆ, ಮದ್ಯ ಸೇವಿಸಿ ಚಾಲನೆ, ವಾಹನಗಳನ್ನು ಹಿಂದಿಕ್ಕಲು ಆಕ್ರಮಣಕಾರಿಯಾದ ರೀತಿಯಲ್ಲಿ ಮುನ್ನುಗ್ಗುವುದು, ಮೊಬೈಲ್ ಕಿವಿಗಿಟ್ಟುಕೊಂಡೇ ವಾಹನ ಚಲಾಯಿಸುತ್ತಾ ಹೋಗುವುದು- ಇವು ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣಗಳಾಗಿವೆ.

ಸುರಕ್ಷಾ ಮಂಡಲಿ:
ರಸ್ತೆ ಅಪಘಾತಗಳ ಸಂಖ್ಯೆ ತೀವ್ರವಾಗಿ ಏರುತ್ತಿರುವ ಬಗ್ಗೆ ಕಳವಳಗೊಂಡಿರುವ ಭಾರತ ಸರ್ಕಾರ, ರಾಷ್ಟ್ರೀಯ ರಸ್ತೆ ಸುರಕ್ಷಾ ಮಂಡಲಿಯನ್ನು ಅಸ್ತಿತ್ವಕ್ಕೆ ತಂದಿದೆ. ಈ ಮಂಡಲಿಯು, ಅಪಘಾತಗಳನ್ನು ನಿಯಂತ್ರಿಸುವ ಉದ್ದೇಶದಿಂದ ರಾಷ್ಟ್ರೀಯ ರಸ್ತೆ ಸುರಕ್ಷಾ ನೀತಿಯನ್ನು ರೂಪಿಸಿದೆ.
 
11ನೇ ಯೋಜನೆಯ ಅವಧಿಯಲ್ಲೇ (2007-2012) ರಸ್ತೆ ಸುರಕ್ಷತೆಗಾಗಿ ವೆಚ್ಚ ಮಾಡಲು ಮೀಸಲಿರುವ ಹಣ 448 ಕೋಟಿ ರೂಪಾಯಿ. ಇಷ್ಟೆಲ್ಲಾ ಆದರೂ ಪರಿಸ್ಥಿತಿಯಲ್ಲಿ ಸುಧಾರಣೆ ಆಗಿಲ್ಲ. ಬದಲಿಗೆ, ದಿನೇ ದಿನೇ ಇನ್ನಷ್ಟು ಶೋಚನೀಯವಾಗುತ್ತಿದೆ.

ರಸ್ತೆ ಸುರಕ್ಷತೆ ಹೊಣೆಗಾರಿಕೆಯನ್ನು ಸಂಪೂರ್ಣವಾಗಿ ಸರ್ಕಾರದ ತಲೆಗೆ ಕಟ್ಟಲಾಗದು. ರಸ್ತೆ ಮೇಲೆ ಸುರಕ್ಷಿತವಾಗಿ ತೆರಳುವುದರಲ್ಲಿ ಪ್ರಯಾಣಿಕರಾದ ನಮ್ಮ ಹೊಣೆಯೂ ಸಾಕಷ್ಟಿದೆ. ವಾಹನ ಚಾಲನಾ ಪರವಾನಗಿ ಪಡೆಯುವ ಮುನ್ನ, ಸಂಚಾರ ನಿಯಮಗಳನ್ನು ಮನನ ಮಾಡಿಕೊಳ್ಳುವವರ ಸಂಖ್ಯೆ ನಮ್ಮಲ್ಲಿ ಎಷ್ಟಿದೆ? ಚಾಲನಾ ಸಾಮರ್ಥ್ಯವೊಂದನ್ನೇ ಆಧರಿಸಿ ಪರವಾನಗಿ ಪಡೆಯುವವರು ಎಷ್ಟು ಜನ ಇದ್ದಾರೆ? ಎಂಬ ಪ್ರಶ್ನೆಗಳು ಮೂಡುತ್ತವೆ.

ರಾಷ್ಟ್ರದ ಪ್ರಾದೇಶಿಕ ಸಾರಿಗೆ ಕಚೇರಿಗಳು (ಆರ್‌ಟಿಒ) ಲಂಚದ ಗೂಡುಗಳಾಗಿವೆ ಎಂಬುದು ಅಧ್ಯಯನಗಳಿಂದ ಗೊತ್ತಾಗಿದೆ. ಅವು ನಿಯಮಾವಳಿ ಪಾಲಿಸದೆ ಪರವಾನಗಿಗಳನ್ನು ಹಾಗೂ ವಾಹನಗಳಿಗೆ ಚಾಲನಾ ಪ್ರಮಾಣಪತ್ರಗಳನ್ನು ನೀಡುತ್ತಿವೆ. ಯುವಜನರಿಗೆ ಮೊದಲ ಸಲ ಚಾಲನಾ ಪರವಾನಗಿ ನೀಡುವ ಮುನ್ನ ಅಧಿಕೃತ ತರಬೇತಿ, ಶಿಕ್ಷಣ ಹಾಗೂ ಪರೀಕ್ಷೆಗೆ ಒಳಪಡುವುದನ್ನು ಕಡ್ಡಾಯಗೊಳಿಸಬೇಕಿದೆ. ಸಂಚಾರ ಪೊಲೀಸರು ಕಾನೂನು ಅನುಷ್ಠಾನದ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಳ್ಳಬೇಕಿದೆ.

ಹೆಲ್ಮೆಟ್ ಧರಿಸುವುದೇ ಇರಲಿ, ಮದ್ಯ ಸೇವನೆ ತಪಾಸಣೆ, ವೇಗ ಮಿತಿ ಪಾಲನೆಯೇ ಆಗಿರಲಿ ಯಾವುದರಲ್ಲೂ ವಿನಾಯಿತಿ ನೀಡಬಾರದು. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಬೆಂಗಳೂರು ನಗರ ಪೊಲೀಸರು ಮನಸ್ಸು ಮಾಡಿರುವುದು ಈಗಾಗಲೇ ಒಳ್ಳೆಯ ಫಲಿತಾಂಶ ನೀಡಲು ಆರಂಭಿಸಿದೆ. ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳು ಕಡಿಮೆಯಾಗಿರುವುದರ ಜತೆಗೆ, ಅಪಘಾತಗಳಿಂದ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಕೂಡ ಇಳಿಮುಖವಾಗುತ್ತಿದೆ.

ವಿಮೆ ಕಂಪೆನಿಗಳು ಯುವ ಚಾಲಕರಿಗೆ ಹೆಚ್ಚಿನ ಪ್ರೀಮಿಯಂ ವಿಧಿಸುವ ಬಗ್ಗೆ ಯೋಚಿಸಬೇಕು. ವಾಹನ ಚಾಲಕರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಹಾಗೂ ಅಪಘಾತಕ್ಕೆ ಕಾರಣವಾದ ಪ್ರಕರಣಗಳನ್ನು ಗಣನೆಗೆ ತೆಗೆದುಕೊಂಡು ಅಂಥವರಿಗೆ ಹೆಚ್ಚು ಪ್ರೀಮಿಯಂ ನಿಗದಿ ಮಾಡಬೇಕು. ನಗರ ಯೋಜನೆ ನಿರೂಪಿಸುವವರು ವಾಹನ ನಿಲುಗಡೆ ಸೌಲಭ್ಯದತ್ತ ಗಮನಹರಿಸಬೇಕು.

ಉತ್ತಮ ವಾಹನ ನಿಲುಗಡೆ ಸೌಲಭ್ಯ ಒದಗಿಸಿದರೆ ಮಾತ್ರ ಮಾಲ್, ಕಲ್ಯಾಣ ಮಂಟಪ, ವಾಣಿಜ್ಯ ಸಂಕೀರ್ಣ, ಚಿತ್ರಮಂದಿರಗಳಿಗೆ ಪರವಾನಗಿ ನೀಡಬೇಕು. ರಾಷ್ಟ್ರದ ಎಲ್ಲ ಪ್ರಮುಖ ನಗರಗಳಲ್ಲಿ ಅಧಿಕ ದಟ್ಟಣೆಯ ಅವಧಿಯಲ್ಲಿ ಸಂಚಾರ ನಿಯಂತ್ರಣಕ್ಕೆ ಹೆಚ್ಚಿನ ಕ್ರಮ ಕೈಗೊಳ್ಳಬೇಕು. ವಾಣಿಜ್ಯ ವಲಯ ವ್ಯಾಪ್ತಿಯಲ್ಲಿ ಖಾಸಗಿ ವಾಹನಗಳ ಮೂಲಕ ಸಂಚರಿಸುವವರಿಗೆ ಅಧಿಕ ತೆರಿಗೆ ವಿಧಿಸುವ ಚಿಂತನೆ ನಡೆಯಬೇಕು.

ಇವುಗಳ ಜತೆಗೆ ಸಾರ್ವಜನಿಕ ಸಮೂಹ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಬೇಕು. ದೊಡ್ಡ ನಗರಗಳಲ್ಲಿ ಸಂಚಾರ ನಿಯಮಗಳ ಪಾಲನೆ ಮೇಲೆ ನಿಗಾ ಇಡಲು ವಿಡಿಯೊ ಕಣ್ಗಾವಲು ವ್ಯವಸ್ಥೆ ಅಳವಡಿಸಬೇಕು. ಪೂರ್ಣಾವಧಿ ಕಾರ್ಯ ನಿರ್ವಹಿಸುವ ಸಂಚಾರ ನಿರ್ವಹಣಾ ಕೇಂದ್ರಗಳನ್ನು ತೆರೆಯಬೇಕು. ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ತೆಗೆದು ಹಾಕಿ, ವೇಗ ನಿಯಂತ್ರಿಸುವ ಬೇರೆ ಪರಿಣಾಮಕಾರಿ ಮಾರ್ಗೋಪಾಯಗಳನ್ನು ಜಾರಿಗೊಳಿಸುವ ಬಗ್ಗೆ ಪರಿಶೀಲಿಸಬೇಕು.

ಬರೀ ಸಲಹೆಗಳನ್ನು ನೀಡುವುದಷ್ಟೇ ಅಲ್ಲ, ರಸ್ತೆ ಮತ್ತು ಸಂಚಾರ ಸುರಕ್ಷೆ ಪ್ರಜೆಗಳೆಲ್ಲರ ಹೊಣೆ ಎಂಬುದನ್ನು ನಾವು ಮನವರಿಕೆ ಮಾಡಿಕೊಳ್ಳಬೇಕು. ಪ್ರಜ್ಞಾವಂತ ನಾಗರಿಕರು, ಲಂಚಗುಳಿತನವಿಲ್ಲದ ಕಾನೂನು ಅನುಷ್ಠಾನ ಇಲಾಖೆ, ಉತ್ತಮ ರಸ್ತೆ ಮೂಲಸೌಕರ್ಯ ಹಾಗೂ ಪ್ರಬಲ ರಾಜಕೀಯ ಶಕ್ತಿ- ಇವೆಲ್ಲವೂ ಸೇರಿದರೆ ಪರಿಸ್ಥಿತಿಯಲ್ಲಿ ಬದಲಾವಣೆ ನಿಶ್ಚಿತ. ನಾವೆಲ್ಲರೂ ಒಂದು ರಾಷ್ಟ್ರವಾಗಿ, ರಸ್ತೆ ಮೇಲೆ ಅಮೂಲ್ಯ ಯುವಜನರ ಪ್ರಾಣಹರಣ ಆಗುತ್ತಿರುವುದನ್ನು ತಡೆದು, ರಸ್ತೆ ಸುರಕ್ಷೆಯನ್ನು ಖಾತ್ರಿಗೊಳಿಸಿಕೊಳ್ಳುವ ಜರೂರು ಈಗ ನಮ್ಮ ಮುಂದಿದೆ.

(ನಿಮ್ಮ ಅನಿಸಿಕೆ ತಿಳಿಸಿ;editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT