ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾಲು ಮತ್ತು ಎದುರಿಸುವ ಬಗೆ...

ಅಕ್ಷರ ಗಾತ್ರ
ಇದು, ಪರೀಕ್ಷೆ ಫಲಿತಾಂಶಗಳ ಮತ್ತು ಘಟಿಕೋತ್ಸವಗಳ ಋತು. ರ‍್ಯಾಂಕ್ ವಿಜೇತರ ಬಗ್ಗೆ ವರದಿಗಳು, ಉತ್ತಮ ಫಲಿತಾಂಶ ಪಡೆದಿರುವ ಸಂಸ್ಥೆಗಳ ಜಾಹೀರಾತುಗಳು ದಿನವೂ ವೃತ್ತಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ.
 
ಪ್ರೌಢಶಾಲೆ, ಪಿ.ಯು.ಸಿ. ಮತ್ತು ಉನ್ನತ ಶಿಕ್ಷಣ ಮುಗಿಸಿರುವ ಲಕ್ಷಾಂತರ ವಿದ್ಯಾರ್ಥಿಗಳು ಭವಿಷ್ಯವನ್ನು ಕಟ್ಟಿಕೊಳ್ಳಲು ಇರುವ ಅವಕಾಶಗಳನ್ನು ಉತ್ಸುಕತೆಯಿಂದ, ಕಾತರದಿಂದ ಅವಲೋಕಿಸುತ್ತಿದ್ದಾರೆ. ಉನ್ನತ ಶಿಕ್ಷಣದ ಅವಕಾಶಗಳ ಕುರಿತಾಗಿ ಸಮಾಲೋಚನಾ ಕಾರ್ಯಕ್ರಮಗಳು ನಡೆಯುತ್ತಿವೆ.
 
ಯಾವ ಪದವಿಯನ್ನು ಪಡೆದರೆ ಮುಂದಿನ ದಿನಗಳಲ್ಲಿ ಕೆಲಸಗಳು ಸುಲಭವಾಗಿ ಸಿಗುತ್ತವೆ? ಯಾವ ವೃತ್ತಿಗಳು ಮುಂದಿನ ಪೀಳಿಗೆಯ ಸಮಯದಲ್ಲಿ ಪ್ರಸ್ತುತವಾಗಿ ಉಳಿಯಬಹುದು?   ಈ ಪ್ರಶ್ನೆಗಳು ಮನೆಗಳಲ್ಲಿ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಚರ್ಚಿತವಾಗುತ್ತಿವೆ. ಇವುಗಳಲ್ಲಿ ಕೇಳಿಬರದ ಕೆಲವು ಮಾತುಗಳನ್ನು ಇಂದಿನ ಅಂಕಣದಲ್ಲಿ ಚರ್ಚಿಸುವ ಉದ್ದೇಶ ನನ್ನದು.
 
ತಾಂತ್ರಿಕ ಶಿಕ್ಷಣ, ವೈದ್ಯಕೀಯ ಶಿಕ್ಷಣ ಅಥವಾ ನಿರ್ವಹಣೆ ಇಲ್ಲವೇ ವಾಣಿಜ್ಯಶಾಸ್ತ್ರಗಳಲ್ಲಿ ಪದವಿ ಪಡೆಯುವವರಿಗೆ ಕೆಲಸಗಳು ದೊರಕುವುದು ಸುಲಭ ಎನ್ನುವುದು ಕಳೆದ ಕೆಲವು ದಶಕಗಳ ಹಾಗೂ ಇಂದಿನ ಸಾಂಪ್ರದಾಯಿಕ ತಿಳಿವಳಿಕೆ.
 
ಆದರೆ ಭವಿಷ್ಯವನ್ನು ರೂಪಿಸುವ ಚರ್ಚೆಗಳು, ಬದುಕನ್ನು ಕಟ್ಟಿಕೊಳ್ಳುವ ಮಾತುಕತೆಗಳು, ಅವು ವೈಯಕ್ತಿಕ ಮಟ್ಟದಲ್ಲಾಗಲಿ ಅಥವಾ ಸಮುದಾಯದ ಹಂತದಲ್ಲಿರಲಿ, ಕೇವಲ ಏನನ್ನು ಓದಿದರೆ ನಮಗೆ ಕೆಲಸ ಸಿಗುತ್ತದೆ ಎನ್ನುವುದಕ್ಕೆ ಸೀಮಿತವಾಗಿರಬೇಕೇ? ಇದರ ಜೊತೆಗೆ ಅಥವಾ ಬದಲಿಗೆ ನಮ್ಮ ಕಾಲದ ಅತ್ಯಂತ ದೊಡ್ಡ ಸವಾಲುಗಳು ಯಾವುವು? ಅವುಗಳನ್ನು ಎದುರಿಸುವುದು ಹೇಗೆ ಎಂದು ಕೇಳಿಕೊಳ್ಳುವ ಧೈರ್ಯವನ್ನು ನಾವು ತೋರಿಸಬೇಕೇ?
 
ಈ ಪ್ರಶ್ನೆಗಳು ಪ್ರಸ್ತುತವಾಗಲು ಮತ್ತೊಂದು ಕಾರಣವಿದೆ. ನಾವು ಈಗ ಬದುಕಿರುವ ಕಾಲಮಾನ ಮನುಕುಲದ ಇತಿಹಾಸದಲ್ಲಿಯೇ ಬೇರಾವ ಕಾಲಕ್ಕಿಂತಲೂ ಭಿನ್ನವೆಂದು ನಾನು ಈ ಅಂಕಣದಲ್ಲಿ ಹಲವು ಬಾರಿ ಗುರುತಿಸಿದ್ದೇನೆ. ಮೂಲಭೂತ ಸ್ವರೂಪದ ಬದಲಾವಣೆಗಳು ತುಂಬ ಕ್ಷಿಪ್ರವಾಗಿ ಆಗುತ್ತಿವೆ. ಇದನ್ನು ನಿಜವೆಂದು ಒಪ್ಪುವುದಾದರೆ ನಮ್ಮ ಮುಂದಿನ ಹಲವು ದಶಕಗಳನ್ನು, ಮುಂದಿನ ಒಂದು ಶತಮಾನವನ್ನು ಹೇಗೆ ನಿರೀಕ್ಷಿಸುತ್ತಿದ್ದೇವೆ, ಅವುಗಳಿಗೆ ಹೇಗೆ ತಯಾರಾಗುತ್ತಿದ್ದೇವೆ ಎನ್ನುವುದು ಇಂದಿನ ಪೋಷಕರು ಹಾಗೂ ಯುವಜನರ ಮುಂದಿರುವ ಸವಾಲು. 
 
ಇತ್ತೀಚೆಗೆ ಬಿಲ್ ಗೇಟ್ಸ್ 14 ಟ್ವಿಟರ್ ಸಂದೇಶಗಳ (ಟ್ವೀಟ್) ಮೂಲಕ ಇಂದಿನ ಪದವೀಧರರಿಗೆ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಬಗ್ಗೆ ಒಂದಷ್ಟು ಸಲಹೆಗಳನ್ನು ನೀಡಿದರು. ಅವುಗಳಲ್ಲಿ ಮುಖ್ಯವಾದ ಒಂದು ಅಂಶವು ತಾನು ವಿದ್ಯಾರ್ಥಿಯಾಗಿದ್ದರೆ ಏನನ್ನು ಕಲಿಯಲು ಬಯಸುತ್ತಿದ್ದೆ ಎಂದು ಗೇಟ್ಸ್ ಗುರುತಿಸಿದ ವಿಷಯಗಳ ಕುರಿತಾದುದು ಆಗಿತ್ತು.
 
ಗೇಟ್ಸ್ ಅವರ ಪ್ರಕಾರ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಕೃತಕ ಬುದ್ಧಿಮತ್ತೆ), ಎನರ್ಜಿ (ಇಂಧನ ಶಕ್ತಿ) ಹಾಗೂ ಬಯೊ ಎಂಜಿನಿಯರಿಂಗ್ (ಜೈವಿಕ ತಾಂತ್ರಿಕತೆ) ಇಂದಿನ ಭರವಸೆಯ ಕ್ಷೇತ್ರಗಳು. ಎಲ್ಲರಿಗೂ ತಿಳಿದಿರುವಂತೆ ಗೇಟ್ಸ್ ತಮ್ಮ ಸ್ನಾತಕಪೂರ್ವ ಪದವಿಯನ್ನು ಮುಗಿಸಲೇ ಇಲ್ಲ. ಹಾರ್ವರ್ಡ್ ವಿಶ್ವವಿದ್ಯಾಲಯವನ್ನು ಬಿಟ್ಟು ಹೊರಬಂದು ಮೈಕ್ರೊಸಾಫ್ಟ್‌್ ಕಂಪೆನಿಯನ್ನು ಸ್ಥಾಪಿಸಿದರು ಹಾಗೂ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಗಳಿಸಿದರು.
 
ಗಮನಿಸಿ, ಗೇಟ್ಸ್ ಅವರು ಗುರುತಿಸಿದ ಕ್ಷೇತ್ರಗಳು ಸಾಕಷ್ಟು ನಿರ್ದಿಷ್ಟವಾದವುಗಳು. ಅವರು ಸರಳವಾಗಿ ಕಂಪ್ಯೂಟರ್ ವಿಜ್ಞಾನ ಎನ್ನಲಿಲ್ಲ, ಕೃತಕ ಬುದ್ಧಿಮತ್ತೆ ಎಂದರು. ಇವುಗಳನ್ನು ಅಧ್ಯಯನ ಮಾಡಿದರೆ ಕೆಲಸ ಸಿಗುತ್ತದೆ ಎನ್ನಲಿಲ್ಲ. ಬದಲಿಗೆ ಈ ಕ್ಷೇತ್ರಗಳಲ್ಲಿ ಪರಿಣತರಾದರೆ ಅವುಗಳಲ್ಲಿ ದೊಡ್ಡ ಪ್ರಭಾವವನ್ನು ಬೀರಬಹುದು ಎಂದರು.
 
ಸ್ವಚ್ಛ ಇಂಧನದ ಮೂಲಗಳ ಅಧ್ಯಯನ ಮತ್ತು ಅದನ್ನು ಒಳಗೊಂಡ ಹೊಸ ಕೈಗಾರಿಕಾ ವ್ಯವಸ್ಥೆಯೊಂದನ್ನು ಕಟ್ಟುವುದು ಭೂಮಿ ಎದುರಿಸುತ್ತಿರುವ ತುರ್ತುಗಳಲ್ಲಿ ಒಂದು ಎನ್ನುವುದು ಎಲ್ಲರೂ ಒಪ್ಪುವ, ಎಲ್ಲರಿಗೂ ತಿಳಿದಿರುವ ವಿಚಾರ. ಹಾಗೆಯೇ ಬಯೊ ಎಂಜಿನಿಯರಿಂಗ್ ಮೂಲಕ ಇಂದು ಸಾಂಕ್ರಾಮಿಕ ರೋಗಗಳಿಗೆ, ಆನುವಂಶಿಕ ಧಾತುಗಳಲ್ಲಿ (ಜೀನ್)  ಆಗುವ ಬದಲಾವಣೆಗಳಿಂದ ಬರುವ ಕ್ಯಾನ್ಸರ್‌ಗೆ, ಅವಘಡಕ್ಕೀಡಾಗುವ ಅಥವಾ ವಯಸ್ಸಿನ ಕಾರಣದಿಂದ ದುರ್ಬಲವಾಗುವ ದೇಹದ ಅಂಗಾಂಗಗಳಿಗೆ ಬದಲಿ ಅಂಗಗಳನ್ನು ಒದಗಿಸಲು ಗಂಭೀರ ಪ್ರಯತ್ನಗಳು ನಡೆಯುತ್ತಿವೆ. ಇವುಗಳನ್ನು ಸಾವನ್ನು ಗೆಲ್ಲಲು ಮನುಷ್ಯ ಮಾಡುತ್ತಿರುವ ಪ್ರಯತ್ನಗಳು ಎಂದು ಹೇಳುವವರೂ ಇದ್ದಾರೆ. 
 
ಮೂರು ಅಂಶಗಳ ಬಗ್ಗೆ ವಿಶೇಷವಾಗಿ ಪೋಷಕರ ಮತ್ತು ಯುವ ಓದುಗರ ಗಮನವನ್ನು ಸೆಳೆಯಲು ಬಯಸುತ್ತೇನೆ. ಮೊದಲನೆಯದು, ಇಂದಿನ ವಿದ್ಯಾರ್ಥಿ ಪರಿಣತಿ ಹೊಂದಬೇಕಿರುವ ಜ್ಞಾನಕ್ಷೇತ್ರವು ಹಲವಾರು ಸಾಂಪ್ರದಾಯಿಕ ಕ್ಷೇತ್ರಗಳನ್ನು ಒಳಗೊಂಡ, ಬಹುಜ್ಞಾನ ಕ್ಷೇತ್ರವಾಗಿರುತ್ತದೆ. ಇದಕ್ಕೆ ಉದಾಹರಣೆಯಾಗಿ ಮೇಲೆ ಗುರುತಿಸಿರುವ ಕ್ಷೇತ್ರಗಳಲ್ಲೊಂದನ್ನು ಗಮನಿಸಿ.
 
ತೀರ ಇತ್ತೀಚಿನ ಜ್ಞಾನಶಿಸ್ತಾದ ಕಂಪ್ಯೂಟರ್ ವಿಜ್ಞಾನವನ್ನೇ ಕೈಬಿಟ್ಟು, ಅದನ್ನು ಒಳಗೊಂಡ ಆದರೆ ಅದೊಂದೇ ಅಲ್ಲದ ಕೃತಕ ಬುದ್ಧಿಮತ್ತೆ ಕಡೆಗೆ ಚಲಿಸುತ್ತಿದ್ದೇವೆ. ಎರಡನೆಯದಾಗಿ, ಈ ಕ್ಷೇತ್ರಗಳಲ್ಲಿ ಇಂದು ಪಡೆಯುವ ಶಿಕ್ಷಣ ಮತ್ತು ಪರಿಣತಿ ಅವರ ವೃತ್ತಿಜೀವನದುದ್ದಕ್ಕೂ ಸಾಕಾಗುತ್ತದೆ ಎನ್ನುವಂತಿಲ್ಲ. ಅಂದರೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪಡೆಯುವ ಶಿಕ್ಷಣವು ಒಂದೆರಡು ದಶಕಗಳ ನಂತರ ಅಪ್ರಸ್ತುತವಾಗಬಹುದು.
 
ಇದಕ್ಕೆ ಒಂದು ಕಾರಣ ಜಾಗತಿಕ ಆರ್ಥಿಕ ವ್ಯವಸ್ಥೆಯು  ಕ್ಷಿಪ್ರಗತಿಯಲ್ಲಿ ಬದಲಾಗುತ್ತಿದೆ ಎನ್ನುವುದಾಗಿದೆ. ಶಿಕ್ಷಕ, ಅಗ್ನಿಶಾಮಕ ದಳ, ವಿಜ್ಞಾನಿ ಹೀಗೆ ಯಾವುದೇ ವೃತ್ತಿಯನ್ನು ಅನುಸರಿಸುತ್ತಿರಲಿ ಕನಿಷ್ಠ ಎರಡು– ಮೂರು ಬಾರಿಯಾದರೂ ವೃತ್ತಿಜೀವನದ ಸಂದರ್ಭದಲ್ಲಿ ಗಣನೀಯ ಪ್ರಮಾಣದಲ್ಲಿ ಮರುತರಬೇತಿ ಪಡೆಯಬೇಕಾಗುವ ಅನಿವಾರ್ಯ ಮೂಡುತ್ತಿದೆ.
 
ಮೂರನೆಯದಾಗಿ, ಇಂದು ವಿದ್ಯಾರ್ಥಿಗಳಾಗಿರುವ ಮುಂದಿನ ತಲೆಮಾರಿನವರ ವೃತ್ತಿ ಬದುಕಿನ ವ್ಯಾಪ್ತಿ ಖಂಡಿತವಾಗಿಯೂ ಹೆಚ್ಚಲಿದೆ. ಅವರ ಆಯಸ್ಸು ಹೆಚ್ಚಲಿದೆ, ಜೊತೆಗೆ 70–80ರ ವಯಸ್ಸಿನಲ್ಲಿಯೂ ಬಹುತೇಕ ಮನುಷ್ಯರು ಕೆಲಸ ಮಾಡುತ್ತಿರುವ ಸಾಧ್ಯತೆ ಖಂಡಿತವಾಗಿಯೂ ಇದೆ. ಆದುದರಿಂದ ಹಲವರು ತಮ್ಮ ಜೀವನದ ಸಮಯದಲ್ಲಿ ಎರಡು– ಮೂರು ಬೇರೆಯ ವೃತ್ತಿಗಳನ್ನು ಅನುಸರಿಸಿದರೆ ಆಶ್ಚರ್ಯವಿಲ್ಲ.
 
ಇದರಿಂದಲೂ ಸಹ ಉನ್ನತ ಶಿಕ್ಷಣವನ್ನು, ಮರುತರಬೇತಿಯನ್ನು ಯೌವನದಲ್ಲಿ ಮಾತ್ರವಲ್ಲ, ನಡುವಯಸ್ಸಿನಲ್ಲಿಯೂ ಪಡೆಯಬೇಕಾಗುತ್ತದೆ. ಹಾಗಾಗಿ ಉನ್ನತ ಶಿಕ್ಷಣ, ವೃತ್ತಿಬದುಕು ಇವುಗಳ ಬಗ್ಗೆ ಈಗಾಗುತ್ತಿರುವ ಬದಲಾವಣೆಗಳ ಹಿನ್ನೆಲೆಯಲ್ಲಿ ನೋಡಬೇಕಾದ ಅವಶ್ಯಕತೆಯಿದೆ. ಇಲ್ಲಿ ನಾನು ಮೇಲೆ ಗುರುತಿಸಿರುವ ಮೂರು ಅಂಶಗಳು ನನ್ನ ವೃತ್ತಿಬದುಕಿನ ಸಂದರ್ಭದಲ್ಲಿಯೇ ನಾನು ಅನುಭವಿಸಿರುವ ವಾಸ್ತವಗಳು. 
 
ವೃತ್ತಿಬದುಕಿನ ಅನಿವಾರ್ಯಗಳು ಒಂದೆಡೆ ಇರಲಿ. ಇವುಗಳಾಚೆಗೆ ನಮ್ಮ ಸಮಾಜದ ಬಗ್ಗೆ, ನಮ್ಮ ಪರಿಸರದ ಬಗೆಗಿನ ಅರಿವು, ಎಚ್ಚರ ಇರಬೇಕಾಗುವುದು ಅನಿವಾರ್ಯ ಮತ್ತು ಸಹಜ. ಅಂದರೆ ನಮ್ಮಲ್ಲಿರಬೇಕಿರುವ ನೈತಿಕ ಹಾಗೂ ನ್ಯಾಯ ಪ್ರಜ್ಞೆಗಳ ಬಗ್ಗೆ ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ.
 
ಈ ಚರ್ಚೆಯನ್ನು ಮುಂದುವರೆಸಲು ಬುದ್ಧ, ಗಾಂಧಿ ಮೊದಲಾಗಿ ಯಾರ ಉದಾಹರಣೆಯನ್ನಾದರೂ ಕೊಡಬಹುದು. ಆದರೆ ಸಾಂದರ್ಭಿಕವಾಗಿ ಮೇಲೆ ಪ್ರಸ್ತಾಪಿಸಿದ ಬಿಲ್ ಗೇಟ್ಸ್ ಅವರ ಟ್ವೀಟ್ ಸಲಹೆಗಳಲ್ಲಿದ್ದ ಮತ್ತೊಂದು ಅಂಶವನ್ನು ಮುಂದಿಡುತ್ತೇನೆ. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ತನಗೆ ಜಗತ್ತಿನ ಅಸಮಾನತೆಗಳ ಬಗ್ಗೆ ಇದ್ದ ತಿಳಿವಳಿಕೆ ಕಡಿಮೆ ಎಂದು ಗೇಟ್ಸ್ ಹೇಳುತ್ತಾರೆ. 
 
ಇಂತಹ ಅಸಮಾನತೆಗಳ ವಿರುದ್ಧ ಹೋರಾಡುವುದು ನಮ್ಮ ವೃತ್ತಿ ಮತ್ತು ವೈಯಕ್ತಿಕ ಬದುಕುಗಳ ಅಂಗವಾಗಬೇಕು ಎನ್ನುವುದನ್ನು ನಿಜವಾಗಿಯೂ ಯಾವ ಸಾಧಕನೂ, ಋಷಿಯೂ ನಮಗೆ ತಿಳಿ ಹೇಳಬೇಕಿಲ್ಲ. ಆದರೆ ಈ ನೈತಿಕ ಮತ್ತು ನ್ಯಾಯ ಪ್ರಜ್ಞೆಯಿಲ್ಲದಿದ್ದರೆ ನಮ್ಮ ಕಾಲದ ದೊಡ್ಡ ಸವಾಲುಗಳೇನು ಎನ್ನುವುದು ಅರ್ಥವಾಗುವುದಿಲ್ಲ. ನೂರು ವರ್ಷಗಳ ಹಿಂದೆ ವಸಾಹತು ಆಳ್ವಿಕೆಯೆನ್ನುವುದು ಭಾರತ ಎದುರಿಸಿದ ದೊಡ್ಡ ಸವಾಲುಗಳಲ್ಲೊಂದು.
 
ಆ ಸವಾಲಿನ ಮುಂದೆ ಯಾವುದೇ ವೃತ್ತಿಪರ ಬದುಕು ಅರ್ಥಹೀನವೆನಿಸಿತು. ಅದಕ್ಕಾಗಿಯೇ ಗಾಂಧೀಜಿ ಅಸಹಕಾರ ಚಳವಳಿಯನ್ನು ರೂಪಿಸಿದರು. ಸಹಸ್ರಾರು ವಕೀಲರು, ವೈದ್ಯರು, ಪ್ರಾಧ್ಯಾಪಕರು  ತಮ್ಮ ವೃತ್ತಿಗಳನ್ನು ತೊರೆದು ವಸಾಹತು ವಿರೋಧಿ ಆಂದೋಲನ ಹಾಗೂ ದೇಶ ಕಟ್ಟುವ ರಚನಾತ್ಮಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡರು.
 
ಆದರೆ ಗಾಂಧೀಜಿ ಮತ್ತವರ ಜೊತೆಗಾರರ  ನೈತಿಕ ಪ್ರಜ್ಞೆಗೆ ಮತ್ತಷ್ಟು ಸೂಕ್ಷ್ಮತೆಯಿತ್ತು. ಹಾಗಾಗಿಯೇ ವಸಾಹತುಶಾಹಿ ವಿರೋಧಿ ಚಳವಳಿಯು ಅಸ್ಪೃಶ್ಯತೆ ವಿರೋಧಿ ಆಂದೋಲನ, ಸ್ವದೇಶಿ ಉತ್ಪನ್ನಗಳ ತಯಾರಿಕೆ, ಸ್ತ್ರೀ ಶಿಕ್ಷಣ, ಬಾಲ್ಯವಿವಾಹ ತಡೆ ಇತ್ಯಾದಿ ಬದಲಾವಣೆಯ ನೂರಾರು ಹಾದಿಗಳಿಗೆ  ತೆರೆದುಕೊಂಡಿತು. 
 
ನಾನು ಮೇಲೆ ಪ್ರಸ್ತಾಪಿಸಿದ ಟ್ವೀಟ್‌ಗಳ ಪೈಕಿ ಕ್ಲೀಷೆಯೆನ್ನಿಸಬಹುದಾದ ಮಾತೊಂದನ್ನು ಇಂದಿನ ಯುವಕರಿಗೆ ಗೇಟ್ಸ್ ಹೇಳುತ್ತಾರೆ: ‘ನಿಮ್ಮ ಸುತ್ತಲೂ ನಿಮಗೆ ಸವಾಲು ಹಾಕುವ, ಪಾಠ ಕಲಿಸುವ ಮತ್ತು ನಿಮ್ಮ ಅತ್ಯುತ್ತಮ ವ್ಯಕ್ತಿತ್ವವನ್ನು ಹೊರತರುವವರನ್ನು ಇಟ್ಟುಕೊಳ್ಳಿ’. ಇದು ಹಳಸಲು ಮಾತಾಗಿ, ಎಲ್ಲರಿಗೂ ಗೋಚರವಾಗುವ ಮಾತಾಗಿಯೇ ಇದ್ದರೂ, ಇಂದು ತಮ್ಮ ಕನಸಿನ ಪದವಿಯನ್ನು ಪಡೆಯಲು ಕಾಲೇಜು ಸೇರುತ್ತಿರುವವರು ನೆನಪಿನಲ್ಲಿ ಇಟ್ಟುಕೊಳ್ಳಬೇಕಿರುವ ವಿಚಾರ. ಯಾಕೆಂದರೆ ಈ ಸಲಹೆಯನ್ನು ಆಚರಣೆಯಲ್ಲಿ ತರುವುದು ಸುಲಭದ ಮಾತಲ್ಲ. 
 
ಕನ್ನಡದ ತರುಣ, ತರುಣಿಯರು ತಮ್ಮ ಕಾಲದ ದೊಡ್ಡ ಸವಾಲುಗಳೇನು, ಅವುಗಳನ್ನು ತಾವು ಹೇಗೆ ಎದುರಿಸುತ್ತೇವೆ ಎಂದು ಕೇಳಿಕೊಳ್ಳುವುದನ್ನು ಮರೆಯಬಾರದು. ಭೂಮಿಯ ಮೇಲೆ ಸುಸ್ಥಿರ ಬದುಕು ಹೇಗೆ ಸಾಧ್ಯ ಎನ್ನುವುದು ಇಂತಹ ಪ್ರಶ್ನೆಗಳಲ್ಲೊಂದಾದರೆ ಗೇಟ್ಸ್ ಗುರುತಿಸಿದ ವಿಷಯಗಳ ಜೊತೆಗೆ ಸುಸ್ಥಿರ ವಾಸ್ತುಶಿಲ್ಪ, ನಗರಯೋಜನೆ, ಪರಿಸರ ಅಧ್ಯಯನ, ಸುಸ್ಥಿರ ಕೃಷಿ ಹಾಗೂ ಪಶುಪಾಲನೆಗಳನ್ನು ನಾವಿಂದು ಅಗತ್ಯವಾಗಿ ಅಧ್ಯಯನ ಮಾಡಬೇಕಾಗಿರುವ ಜ್ಞಾನಶಿಸ್ತುಗಳ ಪಟ್ಟಿಗೆ ಸೇರಿಸಬಹುದು. ಅಧ್ಯಯನದ ಜೊತೆಗೆ ನೈತಿಕ-ನ್ಯಾಯ ಪ್ರಜ್ಞೆಗಳು ಜೊತೆಗೂಡಿದಾಗ ಮಾತ್ರ ಅವರು ಕಲಿಯಬಯಸುವ, ಕಲಿಯುತ್ತಿರುವ ವಿಷಯಗಳಿಗೆ ಮತ್ತಷ್ಟು ಪ್ರಸ್ತುತತೆ, ಪ್ರಾಯೋಗಿಕತೆ ದೊರಕುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT