ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ಪ್ರಶಸ್ತಿ: ಸಿಬಿಐ ತನಿಖೆ ಆಗಲಿ

Last Updated 25 ಜುಲೈ 2013, 19:59 IST
ಅಕ್ಷರ ಗಾತ್ರ

ಬಿಜೆಪಿ ಸರ್ಕಾರದ ಕಾಲ ಎಂದರೆ ಹಗರಣಗಳ ಮತ್ತು ಭ್ರಷ್ಟಾಚಾರದ ಕಾಲ ಎಂದು ಹೇಳುವುದಕ್ಕೆ ಸಂಕೋಚ ಪಡಲೇಬೇಕಾಗಿಲ್ಲ. ಭ್ರಷ್ಟಾಚಾರ, ಒಳಜಗಳ, ಪ್ರತಿಷ್ಠೆ, ಹಗರಣಗಳ ಭಾರದಲ್ಲೇ ಸರ್ಕಾರ ಮುಳುಗಿ ಹೋಯಿತು. ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರವೂ ಹಿಂದಿನ ಸರ್ಕಾರದ ಮತ್ತಷ್ಟು ಹಗರಣಗಳು ಒಂದೊಂದಾಗಿ ಹೊರಬರುತ್ತಿವೆ.

ಈ ಹಗರಣಗಳ ಸುಳಿ ಕಲೆ, ಸಾಹಿತ್ಯ, ಸಂಸ್ಕೃತಿ ಹೀಗೆ ಯಾವುದೇ ಕ್ಷೇತ್ರವನ್ನೂ ಬಿಡದೆ ವ್ಯಾಪಿಸಿಕೊಂಡಿರುವುದು ಆಘಾತಕಾರಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯಲ್ಲಿ ಲೋಕಾಯುಕ್ತ ದಾಳಿ ನಡೆದು, ಅಕ್ರಮಗಳ ಹಲವು ದಾಖಲೆಗಳನ್ನು ವಶಪಡಿಸಿಕೊಂಡ ಘಟನೆಯಿಂದ ಸಾಂಸ್ಕೃತಿಕ ವಲಯ ಬೆಚ್ಚಿ ಬಿದ್ದು ಚೇತರಿಸಿಕೊಳ್ಳುವಷ್ಟರಲ್ಲಿ, 2010-11ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನಡೆದಿರುವ ಹಲವಾರು ಅಕ್ರಮಗಳ ಬಗ್ಗೆ ಸಿಬಿಐ ತನಿಖೆ ಏಕೆ ನಡೆಸಬಾರದು ಎಂದು ಹೈಕೋರ್ಟ್ ಪ್ರಶ್ನಿಸಿದೆ.

ಹೈಕೋರ್ಟಿನ ಚಾಟಿ ಏಟಿಗೆ ತತ್ತರಿಸಿರುವ ಸರ್ಕಾರ, 2010-11ರ ಸಾಲಿನ ರಾಜ್ಯ ಪ್ರಶಸ್ತಿಗಳನ್ನು ಹಿಂತೆಗೆದುಕೊಳ್ಳುವುದಾಗಿ ಪ್ರಮಾಣ ಪತ್ರ ಸಲ್ಲಿಸಿದೆ. ಅಲ್ಲದೆ, ಅಂದು ರಚಿಸಲಾಗಿದ್ದ ಪ್ರಶಸ್ತಿ ಆಯ್ಕೆ ಸಮಿತಿಯನ್ನು ರದ್ದುಗೊಳಿಸಿ, ಹೊಸ ಸಮಿತಿ ರಚಿಸುವುದಾಗಿ ತಿಳಿಸಿದೆ. ಆಗಸ್ಟ್ 5ರಂದು ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸುವುದಾಗಿ ನ್ಯಾಯಾಲಯಕ್ಕೆ ಸರ್ಕಾರದ ವಕೀಲರು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಕನ್ನಡ ಚಲನಚಿತ್ರಗಳಿಗೆ ಪ್ರಶಸ್ತಿ ನೀಡುವ ಸಂಪ್ರದಾಯವನ್ನು ಆರಂಭಿಸಿ 47 ವರ್ಷಗಳಾಯಿತು. ಅಂದಿನಿಂದ ಪ್ರತೀ ವರ್ಷ ಪ್ರಶಸ್ತಿ ನೀಡುವಾಗಲೂ ಒಂದಲ್ಲಾ ಒಂದು ರೀತಿಯ ವಿವಾದ ಇತ್ತಾದರೂ, 2010-11ರ ಸಾಲಿನ ಪ್ರಶಸ್ತಿಗಳಿಗೆ ಬಂದಂತಹ ದುರ್ಗತಿ ಇದುವರೆಗೆ ಬಂದಿರಲಿಲ್ಲ.

ಇಡೀ ಪ್ರಶಸ್ತಿ ಪಟ್ಟಿಯನ್ನೇ ರದ್ದುಗೊಳಿಸಿ, ಆಯ್ಕೆ ಸಮಿತಿಯನ್ನು ರದ್ದುಗೊಳಿಸಿ ಪ್ರಶಸ್ತಿ ಪಡೆಯುವಲ್ಲಿ ರಾಜಕೀಯ ಹಸ್ತಕ್ಷೇಪ ನಡೆದಿರುವ ಬಗ್ಗೆ ಸಿಬಿಐ ತನಿಖೆಯ ಎಚ್ಚರಿಕೆಯನ್ನೂ ನೀಡಿದ ಪ್ರಸಂಗ, ಸರ್ಕಾರಕ್ಕೆ ಮುಖಭಂಗ, ರಾಜಕಾರಣಿಗಳ ಗರ್ವಭಂಗ, ಸಿನಿಮಾ ಮಂದಿಗೆ ಅಭಿಮಾನ ಭಂಗ.

ಚಿತ್ರ ನಟಿ ಭಾರತಿ ಅವರ ನೇತೃತ್ವದಲ್ಲಿ ರಚನೆಯಾಗಿದ್ದ ಆಯ್ಕೆ ಸಮಿತಿಯ ಹೊಣೆಗಾರಿಕೆ ಇದರಲ್ಲಿದೆಯೇ? ವಿಚಾರಣೆ ಸಮಯದಲ್ಲಿ ಹೈಕೋರ್ಟ್, `ಸೂಪರ್' ಚಿತ್ರವನ್ನು ಮೊದಲ ಅತ್ಯುತ್ತಮ ಚಿತ್ರ ಎಂದು ಆಯ್ಕೆ ಮಾಡಿರುವ ಹಿನ್ನೆಲೆಯಲ್ಲಿ ನಿಕಷಕ್ಕೊಳಪಡಿಸಿದೆ. ಆಯ್ಕೆ ಸಮಿತಿಯಲ್ಲಿ ಸ್ಪರ್ಧೆಗೆ ಬಂದ ಚಲನಚಿತ್ರಗಳಿಗೆ ಸಂಬಂಧಪಟ್ಟವರು ಇರುವಂತಿಲ್ಲ.

ಆದರೆ ಛಾಯಾಗ್ರಾಹಕ ಅಶೋಕ್ ಕಶ್ಯಪ್ (ಸೂಪರ್), ನಟಿ ಹೇಮಾ ಚೌಧುರಿ (ಸೊಗಸುಗಾರ) ಈ ಸಮಿತಿಯಲ್ಲಿ ಹೇಗೋ ಸೇರಿಕೊಂಡಿದ್ದಾರೆ. ವಾರ್ತಾ ಇಲಾಖೆಯ ನಿಯಮಾವಳಿಗಳ ಪ್ರಕಾರ ಯಾವುದೇ ಚಿತ್ರಗಳಲ್ಲಿ ತೊಡಗಿಸಿಕೊಂಡವರು, ಸಮಿತಿಯಲ್ಲಿ ಇರುವಂತಿಲ್ಲ. ಸಮಿತಿಯ ಅಧ್ಯಕ್ಷರು ಈ ನಿಯಮಾವಳಿಗಳನ್ನು ಅನ್ವಯಿಸಿ, ಅವರಿಬ್ಬರನ್ನೂ ಬದಲಿಸುವಂತೆ ಸರ್ಕಾರಕ್ಕೆ ಸೂಚಿಸುವ ಅವಕಾಶವಿತ್ತು.

ಆದರೆ ಅದನ್ನು ಯಾರೂ ಮಾಡಿಲ್ಲ. `ಸೂಪರ್' ಚಿತ್ರಕ್ಕೆ ಮೊದಲ ಅತ್ಯುತ್ತಮ ಚಿತ್ರ ಪ್ರಶಸ್ತಿ ಬಂದಿದೆ. ಹೇಮಾ ಚೌಧುರಿ ಅಭಿನಯದ `ಸೊಗಸುಗಾರ'ಕ್ಕೂ ಪ್ರಶಸ್ತಿ ಸಂದಿದೆ. ಪ್ರಾದೇಶಿಕ ಭಾಷಾ ಚಿತ್ರ ವಿಭಾಗದಲ್ಲಿ ಪ್ರಶಸ್ತಿ ಪಡೆದಿದ್ದ ತುಳು ಚಿತ್ರ `ಕಂಚಿಲ್ದ ಬಾಲೆ' ಚಿತ್ರ ಕೂಡ ವಿವಾದಕ್ಕೆ ಸಿಲುಕಿದೆ. ಸರ್ಕಾರದ ನಿಯಮಾವಳಿಗಳ ಪ್ರಕಾರ ಒಟ್ಟು 29 ಪ್ರಶಸ್ತಿಗಳನ್ನು ನೀಡಬೇಕು. ಆದರೆ ಈ ಸಮಿತಿ 30 ಪ್ರಶಸ್ತಿಗಳನ್ನು ನೀಡಿದೆ.

`ಜಯಹೇ' ಎಂಬ ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ನೀಡುವ ಮೂಲಕ ನಿಯಮವನ್ನು ಉಲ್ಲಂಘಿಸಲಾಗಿದೆ. ಈ ರೀತಿ ಪ್ರಶಸ್ತಿಗಳನ್ನು ಹೆಚ್ಚುವರಿಯಾಗಿ ನೀಡುವ ಸಂದರ್ಭ ಬಂದರೆ, ಅಂತಹ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರು ಸರ್ಕಾರಕ್ಕೆ ವಿವರಣಾತ್ಮಕ ವರದಿ ಕೊಡುವ ಮೂಲಕ ಸಮ್ಮತಿ ಪಡೆಯಬೇಕಾಗುತ್ತದೆ. ಆದರೆ ಈ ಸಮಿತಿ ಅಂತಹ ಕೆಲಸ ಮಾಡಿಲ್ಲ.

ಈ ಹಿಂದಿನ ವರ್ಷಗಳಲ್ಲಿ `ಮನಬಂದಂತೆ', `ತೋಚಿದಂತೆ' ಪ್ರಶಸ್ತಿಗಳನ್ನು ಹಂಚಿದ ಉದಾಹರಣೆ ಹೇರಳವಾಗಿದೆ. ನಿಯಮಗಳು ಎದ್ದು ಕಾಣುವಂತೆಯೇ ಉಲ್ಲಂಘನೆಯಾಗಿದೆ. ಆದರೆ ಯಾರೂ ನ್ಯಾಯಾಲಯದಲ್ಲಿ ಅದನ್ನು ಪ್ರಶ್ನಿಸಲಿಲ್ಲವಾದ್ದರಿಂದ ವಿವಾದ ಬರೀ ಗೊಣಗುವುದರಲ್ಲಿಯೇ ಕೊನೆಗಾಣುತ್ತಿತ್ತು. ಸಿಬಿಐ ತನಿಖೆ ಮೂಲಕ ಅಂತಹವುಗಳನ್ನು ಹೊರತೆಗೆಯಬಹುದು.

ನಟಿ ಭಾರತಿ ನೇತೃತ್ವದ ಆಯ್ಕೆ ಸಮಿತಿ ಪ್ರಶಸ್ತಿ ಪಟ್ಟಿಯನ್ನು ಪ್ರಕಟಿಸಿದ ಕೂಡಲೇ ಮೊದಲಿಗೆ ಅತೃಪ್ತಿ ವ್ಯಕ್ತಪಡಿಸಿದವರು, ನಿರ್ಮಾಪಕ ಬಸಂತ್‌ಕುಮಾರ್ ಪಾಟೀಲ್. ಬಸಂತ್ ಅವರ ನಿರ್ಮಾಣದ ಚಿತ್ರ ಕೂಡ ಸ್ಪರ್ಧೆಯಲ್ಲಿದ್ದು ಪ್ರಶಸ್ತಿ ವಂಚಿತವಾಗಿತ್ತು. ಆದರೆ, ಈ ವಿಷಯವನ್ನು ಪ್ರಸ್ತಾಪಿಸದ ಬಸಂತ್‌ಕುಮಾರ್, ಆಯ್ಕೆ ಸಮಿತಿಯಲ್ಲಿದ್ದ ಇಬ್ಬರು ಪ್ರಶಸ್ತಿ ವಿಜೇತ ಚಿತ್ರಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಆದುದರಿಂದ ಪ್ರಶಸ್ತಿಗಳು ಪಕ್ಷಪಾತದಿಂದ ಕೂಡಿವೆ. ಇದೊಂದು ಲೋಪವಾಗಿರುವುದರಿಂದ 2010-11ರ ಸಾಲಿನ ಪ್ರಶಸ್ತಿ ಆಯ್ಕೆ ಪಟ್ಟಿಯನ್ನೇ ರದ್ದುಪಡಿಸಬೇಕೆಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರಿಯಾಹಾಸನ್ ಎನ್ನುವ ನಟಿ ಅಭಿನಯಿಸಿ, ನಿರ್ಮಿಸಿದ್ದ `ಬಿಂದಾಸ್ ಹುಡುಗಿ' ಚಿತ್ರ ಕೂಡ ಪ್ರಶಸ್ತಿ ಪಡೆಯುವಲ್ಲಿ ವಿಫಲವಾಗಿತ್ತು.

`ನನ್ನ ಚಿತ್ರವನ್ನು ಉದ್ದೇಶಪೂರ್ವಕವಾಗಿ ತಿರಸ್ಕರಿಸಲಾಗಿದೆ' ಎಂದು ಆರೋಪಿಸಿದ ಪ್ರಿಯಾಹಾಸನ್ ನ್ಯಾಯಾಲಯದ ಮೆಟ್ಟಲೇರಿದರು. ಎರಡೂ ಅರ್ಜಿಗಳನ್ನು ಪುರಸ್ಕರಿಸಿದ ಹೈಕೋರ್ಟ್, ವಿಚಾರಣೆ ಆರಂಭಿಸಿದಾಗ ಹಲವಾರು ಸ್ವಾರಸ್ಯಕರ ಸಂಗತಿಗಳು ಹೊರಬಿದ್ದವು.

ರಾಜ್ಯ ಸರ್ಕಾರ ಪ್ರಶಸ್ತಿಗಳಿಗೆ ಆಹ್ವಾನ ನೀಡಿದಾಗ `ಸೂಪರ್' ಚಿತ್ರ ಪ್ರವೇಶ ಪಡೆದಿರಲಿಲ್ಲ. ಕೊನೆಯ ದಿನಾಂಕವೂ ಮುಗಿದು ಹೋದ ನಂತರ, `ಸೂಪರ್' ಪ್ರವೇಶ ಪಡೆಯಲು ಯತ್ನಿಸಿತು. ಅಧಿಕಾರಿಗಳ ಮಟ್ಟದಲ್ಲಿ ಈ ಕೆಲಸ ಆಗದಿದ್ದಾಗ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರೂ ಆಗಿದ್ದ ರಾಕ್‌ಲೈನ್ ವೆಂಕಟೇಶ್, ಅಂದಿನ ಮುಖ್ಯಮಂತ್ರಿಗೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಪತ್ರವೊಂದನ್ನು ನೀಡಿ, ರಾಜ್ಯ ಚಲನಚಿತ್ರ ಪ್ರಶಸ್ತಿ ಸಲ್ಲಿಕೆಗೆ ಗಡುವು ವಿಸ್ತರಿಸಬೇಕೆಂದು ಕೋರಿದರು.

ಬೇರೆ ಯಾವುದೇ ಸಂದರ್ಭದಲ್ಲೂ ಸರ್ಕಾರ ಹೀಗೆ ಗಡುವು ವಿಸ್ತರಿಸಿದ ಉದಾಹರಣೆಯೇ ಇಲ್ಲ. ಆದರೆ ಅಂದಿನ ಮುಖ್ಯಮಂತ್ರಿಗೆ `ದಕ್ಷಿಣ ಕನ್ನಡದ ಮೋಹ' ಜಾಸ್ತಿ. ಹೀಗಾಗಿ ಅವರು ನೇರವಾಗಿ ವಾರ್ತಾ ಇಲಾಖೆಗೆ ಆದೇಶ ನೀಡಿ, ಗಡುವು ವಿಸ್ತರಿಸುವಂತೆ ಹಾಗೂ `ಸೂಪರ್' ಚಿತ್ರವನ್ನು ಪರಿಗಣಿಸುವಂತೆ ಸೂಚಿಸಿದರು. ಹೀಗೆ ಪ್ರವೇಶ ಪಡೆದ `ಸೂಪರ್' ಮೊದಲನೆಯ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿತು. ಇದನ್ನು ಕಾಕತಾಳೀಯ ಎನ್ನೋಣವೇ?

ನಾವು ಕಾಕತಾಳೀಯ ಎನ್ನಬಹುದು, ಆದರೆ ಹೈಕೋರ್ಟ್ `ಚಲನಚಿತ್ರ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ರಾಜಕಾರಣಿಗಳ ಪಾತ್ರ ಇರುವುದು ಕಾಣುತ್ತಿದೆ. ಚಲನ ಚಿತ್ರರಂಗಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಸರ್ಕಾರ ಮತ್ತು ರಾಜಕಾರಣಿಗಳ ಹಸ್ತಕ್ಷೇಪ ಇರುವುದನ್ನು ಖಚಿತವಾಗಿ ತಿಳಿಯಲು ಏಕೆ ಸಿಬಿಐ ತನಿಖೆಗೆ ಆದೇಶಿಸಬಾರದು' ಎಂದು ಪ್ರಶ್ನಿಸಿದೆ. ಕೆಲವೇ ವ್ಯಕ್ತಿಗಳ ಹಿತಾಸಕ್ತಿಗಾಗಿ ಚಿತ್ರೋದ್ಯಮವನ್ನು ಹಾಳು ಮಾಡಬಾರದು. ಈ ವಿವಾದ ಮೇಲ್ನೋಟಕ್ಕೆ ಕಾಣಿಸುವಷ್ಟು ಸರಳವಾಗಿಲ್ಲ ಅನಿಸುತ್ತಿದೆ.

ಆಳದಲ್ಲಿ ಏನಿದೆ ಎಂಬುದನ್ನು ತಿಳಿಯಬೇಕಾಗಿದೆ' ಎಂದು ಹೇಳಿರುವ ಹೈಕೋರ್ಟ್‌ನ ಏಕಸದಸ್ಯ ಪೀಠ, `ಪ್ರಶಸ್ತಿ ಪಟ್ಟಿಯನ್ನು ನೀವಾಗಿಯೇ ಹಿಂತೆಗೆದುಕೊಳ್ಳುತ್ತೀರೋ, ನಾವೇ ಕ್ರಮ ತೆಗೆದುಕೊಳ್ಳಬೇಕೋ' ಎಂದು ತರಾಟೆಗೆ ತೆಗೆದುಕೊಂಡಿರುವುದು ಸರ್ಕಾರಕ್ಕೆ ತೀವ್ರ ಮುಜುಗರದ ವಿಷಯವಾಗಿದೆ. ಆದರೆ ಈ ವಿವಾದದ ಹುತ್ತವನ್ನು ಸಿಬಿಐ ತನಿಖೆಯ ಮೂಲಕ ತೋಡಿದರೆ, ಭ್ರಷ್ಟಾಚಾರದ ಪರಮ ಅನ್ಯಾಯಗಳ, ಪ್ರಶಸ್ತಿ ರಾಜಕೀಯದ ದೊಡ್ಡ ಭೂತವೇ ಹೊರ ಬರುವ ಸಾಧ್ಯತೆ ಇದೆ.

ಎರಡು ವರ್ಷಗಳ ಹಿಂದೆ, ಪ್ರಶಸ್ತಿ ಸಮಿತಿಯ ಸದಸ್ಯರು ಕೂಡ ನಿರ್ಮಾಪಕರಿಂದ `ಲಂಚ' ಪಡೆದು ಪ್ರಶಸ್ತಿಗಳನ್ನು ಹಂಚಿದರು ಎಂಬ ಮಾತುಗಳು ಕೇಳಿ ಬಂದವು. ಪ್ರಶಸ್ತಿಯ ಘನತೆಯನ್ನು ತಗ್ಗಿಸುವ ಇಂತಹ ಆರೋಪಗಳಿಗೂ ಸಿಬಿಐ ತನಿಖೆ ಮದ್ದಾಗಲಿದೆ. ಏಕೆಂದರೆ ಸಿನಿಮಾ ಪ್ರಶಸ್ತಿಗಳೂ ಕೂಡ ಭೂಹಗರಣಗಳ ರೀತಿಯಲ್ಲೇ ದೊಡ್ಡ ಹಗರಣವಾಗಿವೆ. ಸಾಂಸ್ಕೃತಿಕ ಲೋಕದ ಇಂತಹ ಭ್ರಷ್ಟಾಚಾರವನ್ನು ಬಯಲಿಗೆಳೆಯುವುದು ಇಂದಿನ ತುರ್ತೂ ಆಗಿದೆ.

`ಯಾರಿಗೆ ಪ್ರಶಸ್ತಿ ನೀಡಬೇಕು ಎಂಬುದು ರಾಜಕೀಯ ನೆಲೆಯಲ್ಲಿ ನಿರ್ಧಾರ ಆಗುತ್ತದೆ. ಪ್ರಶಸ್ತಿ ಘೋಷಣೆಯಲ್ಲಿ ಮಂತ್ರಿಗಳು, ಆಡಳಿತಾರೂಢರ ಪಾತ್ರ ಇದೆ' ಎಂದು ಹೈಕೋರ್ಟ್ ನ್ಯಾಯಮೂರ್ತಿಯವರು ಕಿಡಿ ಕಾರಿರುವುದು ನ್ಯಾಯಯುತವಾಗಿಯೇ ಇದೆ. ಸಮಿತಿಗೆ ಸದಸ್ಯರಾಗುವವರನ್ನು ರಾಜಕಾರಣಿಗಳು, ಐಎಎಸ್ ಅಧಿಕಾರಿಗಳು ನೇಮಕ ಮಾಡುವುದು, ಶಿಫಾರಸು ಮಾಡುವುದು ನಡೆಯುತ್ತಲೇ ಇದೆ.

ಹೀಗೆ ವಾರ್ತಾ ಇಲಾಖೆಯ ಪರಮಾಧಿಕಾರದಲ್ಲಿ ಹಸ್ತಕ್ಷೇಪ ಮಾಡುವುದರಿಂದ ಸರಿಯಾದ ಸಮಿತಿ ರಚನೆಗೆ ಅವಕಾಶವಾಗುವುದಿಲ್ಲ. ಕೆಲವೊಮ್ಮೆ ಸಂಬಂಧಪಟ್ಟ ಇಲಾಖೆಯಲ್ಲಿ ಅಂದರೆ ಸರ್ಕಾರದ ಸೇವೆಯಲ್ಲಿದ್ದುಕೊಂಡೇ ಚಲನ ಚಿತ್ರಗಳನ್ನು ನಿರ್ಮಿಸಿ, ಹಿಂದಿನ ಬಾಗಿಲಿನಿಂದ ಪ್ರಶಸ್ತಿಗಳನ್ನು ಪಡೆದುಕೊಳ್ಳುವ ಕೆಲಸ ನಡೆದಿದೆ. 1966ರಲ್ಲಿ ಪ್ರಶಸ್ತಿ ಸಮಿತಿಯನ್ನು ರಾಜ್ಯ ಸರ್ಕಾರ, ಮೈಸೂರು ರಾಜ್ಯ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಮಳೀಮಠ ಅವರ ಅಧ್ಯಕ್ಷತೆಯಲ್ಲಿ ರಚಿಸಿತ್ತು.

ಕೆ. ಶಿವರಾಮ ಕಾರಂತ, ದೇವಿಕಾ ರಾಣಿ ರೋರಿಚ್, ವಾರ್ತಾ ಇಲಾಖೆ ನಿರ್ದೇಶಕರು ಇದ್ದ ಸಮಿತಿಯನ್ನು ರಚಿಸಲಾಯಿತು. ಆನಂತರದ ದಿನಗಳಲ್ಲಿ ಇಂತಹ ಘನಸಮಿತಿಗಳನ್ನು ನೋಡುವುದು ಅಪರೂಪದ ಸಂಗತಿಯೇ ಆಯಿತು. ಪ್ರಶಸ್ತಿ ನೀಡುವಾಗ ಪರ್ಯಾಯ ಚಿತ್ರಗಳನ್ನು `ಅದು ಜನ ನೋಡದಿರುವ' ಚಿತ್ರ ಎಂದು ಹಣೆಪಟ್ಟಿ ಅಂಟಿಸಿ ಅದನ್ನು ದೂರವಿಡುವ ಬೆಳವಣಿಗೆಯೂ ನಡೆದಿದೆ.

ಇಂದು ಪ್ರಶಸ್ತಿ ಪಟ್ಟಿಯನ್ನೇ ಹಿಂಪಡೆಯುವ ವಿಷಾದಕರ ಬೆಳವಣಿಗೆ ನಡೆದಿದೆ ಎಂದರೆ ಅದಕ್ಕೆ ಹೊಸ ಅಲೆ ಚಿತ್ರ ಹಾಗೂ ಕಮರ್ಷಿಯಲ್ ಚಿತ್ರಗಳ ನಿರ್ಮಾಪಕರ ನಡುವೆ ನಡೆಯುತ್ತಿರುವ ಶೀತಲ ಸಮರವೂ ಕಾರಣ ಎಂದು ಹೇಳಬೇಕಾಗುತ್ತದೆ. ರಾಷ್ಟ್ರೀಯ ಪ್ರಶಸ್ತಿ ಪಡೆದ ಚಿತ್ರಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ, ರಾಜ್ಯ ಪ್ರಶಸ್ತಿ ಸಮಿತಿ, ಸ್ಥಳೀಯವಾಗಿ ಹೆಚ್ಚು ಜನಪ್ರಿಯವಾದ ಚಿತ್ರಗಳನ್ನು ಗಮನಿಸುತ್ತಿರುವುದು ವಿವಾದಕ್ಕೆ ಕಾರಣವಾಗಿರಬಹುದು.

ರಾಷ್ಟ್ರಪ್ರಶಸ್ತಿ ಪಡೆದ ಚಿತ್ರವನ್ನು ಮೂಲೆಗಿಟ್ಟು, `ಸೂಪರ್' ಎನ್ನುವಂತಹ ತೀರಾ ಬಾಲಿಶ ಕಲ್ಪನೆಯ, ಅಗ್ಗದ ಮನರಂಜನೆಯ ಚಿತ್ರವನ್ನು ಮೊದಲ ಪ್ರಶಸ್ತಿಗೆ ಪರಿಗಣಿಸಿರುವುದರ ಬಗ್ಗೆ ಪ್ರಶಸ್ತಿ ಆಯ್ಕೆ ಸುದೀರ್ಘವಾದ ಸಮರ್ಥನೆಯನ್ನೇ ಕೊಡಬೇಕಾಗುತ್ತದೆ. ಕನ್ನಡದಲ್ಲಿ ಹೊಸ ಅಲೆಯ ಚಿತ್ರಗಳನ್ನು ನಿರ್ಮಿಸುತ್ತಿರುವ ಒಂದು ಗುಂಪಿದೆ. ಪ್ರತೀ ವರ್ಷ ಇದೇ ಗುಂಪಿನ ಸದಸ್ಯರೇ ಪ್ರಶಸ್ತಿಗಳನ್ನು ಹಂಚಿಕೊಂಡರೆ, ಕೋಟ್ಯಂತರ ರೂಪಾಯಿಗಳನ್ನು ಸುರಿದು ಚಿತ್ರ ನಿರ್ಮಿಸುವ ನಿರ್ಮಾಪಕರಿಗೆ ಪ್ರೋತ್ಸಾಹ ಕೊಡುವುದು ಯಾವಾಗ? ಎಂದು ಗಾಂಧಿನಗರ ಪ್ರಬಲ ವಾದವನ್ನು ಮುಂದಿಟ್ಟಿದೆ.

ಹೀಗಾಗಿ ಸಿನಿಮಾವನ್ನು ಒಂದು ಕಲೆ ಎಂದು ಭಾವಿಸಿ, ಗಂಭೀರವಾದ ಸಿನಿಮಾಗಳನ್ನು ತಯಾರಿಸುತ್ತಿರುವವರಿಗೆ ನಿರಾಶೆಯಾಗಿರುವುದು ನಿಜ. ಪ್ರಶಸ್ತಿ ನಿಯಮಾವಳಿಗಳಿಗೆ ತಿದ್ದುಪಡಿ ಮಾಡುವ ಮೂಲಕ, ಸರಿಯಾದ ಮಾನದಂಡಗಳನ್ನು ರೂಪಿಸುವ ಮೂಲಕ ಎಲ್ಲ ಗೊಂದಲಗಳನ್ನು ನಿವಾರಿಸುವ ಕೆಲಸ ಮಾಡಬೇಕಾಗಿದೆ. ಇಲ್ಲದಿದ್ದರೆ ಗೊಂದಲ ಮತ್ತಷ್ಟು ಮುಂದುವರಿಯುವ ಸಾಧ್ಯತೆಗಳೇ ಹೆಚ್ಚು.

2010-11ನೇ ಸಾಲಿನ ಸಿನಿಮಾ ಪ್ರಶಸ್ತಿ ಪಟ್ಟಿಯನ್ನು ಸಂಪೂರ್ಣವಾಗಿ ವಾಪಸ್ ತೆಗೆದುಕೊಂಡಿರುವ ಸರ್ಕಾರದ ಕ್ರಮ, ಚಲನಚಿತ್ರ ಪ್ರಶಸ್ತಿ ವಿಷಯದಲ್ಲಿ ಒಂದು ಕಪ್ಪು ಚುಕ್ಕೆ. 1986ರಲ್ಲಿ ಸರ್ಕಾರಿ ಅಧಿಕಾರಿಯೊಬ್ಬರೇ ಭಾಗಿಯಾಗಿದ್ದ ಚಿತ್ರಕ್ಕೆ ಹಲವಾರು ಪ್ರಶಸ್ತಿಗಳು ಬಂದವು. ನಿರ್ಮಾಪಕರು ನ್ಯಾಯಾಲಯ ಕಟ್ಟೆ ಏರಿದ ಪರಿಣಾಮ ಐದು ವರ್ಷಗಳ ಕಾಲ ಚಲನಚಿತ್ರ ಪ್ರಶಸ್ತಿ ವಿತರಣೆಗೇ ತಡೆಯಾಜ್ಞೆ ಬಂದಿತ್ತು. ಆನಂತರವೂ ಸಂಬಂಧಪಟ್ಟ ಇಲಾಖೆಯಿಂದ ಪ್ರಶಸ್ತಿ ಮಾನದಂಡದ ಬಗ್ಗೆ ಕಟ್ಟುನಿಟ್ಟಾದ ನಿಯಮ ರೂಪಿತವಾಗಲಿಲ್ಲ. ಈಗ ಇಡೀ ಪ್ರಶಸ್ತಿಯನ್ನೇ ವಾಪಸು ಪಡೆಯುವ ವಿದ್ಯಮಾನ ನಡೆದಿದೆ.

ಈ ಪ್ರಶಸ್ತಿ ಪಟ್ಟಿಯಲ್ಲಿ ಅಂಬರೀಷ್ ಅವರಿಗೆ ಜೀವಮಾನದ ಸಾಧನೆಗಾಗಿ ಡಾ. ವಿಷ್ಣುವರ್ಧನ್ ಪ್ರಶಸ್ತಿಯನ್ನು ನೀಡಲಾಗಿತ್ತು. ಈಗ ಅವರು ಸಚಿವರೂ ಆಗಿರುವುದರಿಂದ ಅವರ ಅವಧಿ ಮುಗಿಯುವವರೆಗೂ ಪ್ರಶಸ್ತಿಗೆ ಅವರ ಹೆಸರನ್ನು ಪರಿಗಣಿಸುವಂತೆಯೇ ಇಲ್ಲ. ಪುನೀತ್ ಹಾಗೂ ಕಲ್ಯಾಣಿ ಅವರನ್ನು ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿಗೆ, ಡಾ. ರಾಜ್‌ಕುಮಾರ್ ಪ್ರಶಸ್ತಿಯನ್ನು ಶಿವರಾಂ ಅವರಿಗೆ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಭಾರ್ಗವ ಅವರಿಗೆ ನೀಡಲಾಗಿತ್ತು. ಯಾರೋ ಮಾಡಿದ ತಪ್ಪಿಗೆ ಯಾರಿಗೋ ಇರಿಸು ಮುರಿಸಾಗುವುದು ಕಲಾ ಅವಮಾನವಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT