ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಷಾರ್! ಅಮ್ಮನಿಗೆ ಏನೂ ಅನ್ನಬೇಡಿ!

Last Updated 29 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಕೇಳಿದ್ದನ್ನು, ಕೋರಿದ್ದನ್ನು ಸರಿಯಾಗಿ ಕೊಡದಿದ್ದರೆ ‘ನಿನಗೆ ಕಣ್ಣಿಲ್ಲ, ಕಿವಿಯಿಲ್ಲ, ಕರುಣೆಯಿಲ್ಲ’ ಎಂದು ಮನುಷ್ಯರು ದೇವರನ್ನೇ ದೂರುವುದುಂಟು. ಕೆಲವು ಹಳ್ಳಿಗಳ ದೇವಾಲಯಗಳಲ್ಲಿ ಪ್ರತೀವರ್ಷ ಜಾತ್ರೆಯ ದಿನ ಭಕ್ತಾದಿಗಳು ನೆರೆದು ಅಲ್ಲಿನ ದೇವರಿಗೆ ವಾಚಾಮಗೋಚರವಾಗಿ ಬೈಯುವುದೇ ಒಂದು ಆಚರಣೆ.

ನಮ್ಮ ಪುರಾಣ ಕಾವ್ಯಗಳಲ್ಲಂತೂ ಎದುರಾಳಿ ವೀರರು ಪರಸ್ಪರ ಬೈದಾಡುವುದು ಯುದ್ಧದ ಒಂದು ಮುಖ್ಯಭಾಗ. ಬಾಣ ಬಿಡುವ ಮೊದಲು ವಾಗ್ಬಾಣ ಬಿಡುವ, ಖಡ್ಗ ಝಳಪಿಸುವ ಮೊದಲು ನಾಲಿಗೆ ಝಳಪಿಸುವ ಆ ವರ್ಣನೆಗಳಲ್ಲಿ ಬೈಗುಳವೂ ಕರ್ಣಾನಂದಕರ! ಬೈಗುಳ, ತೆಗಳಿಕೆ, ಮೂದಲಿಕೆ, ಟೀಕೆ ಇವೆಲ್ಲ ಇಲ್ಲದ ಭಾಷೆ ಮನುಷ್ಯರಿಗೆ ಬಿಡಿ, ದೇವತೆಗಳಿಗೂ ಗೊತ್ತಿಲ್ಲ.

ಆದರೆ ತಮಿಳುನಾಡನ್ನು ಆಳುವ ಜಯಲಲಿತಾ ಅಮ್ಮನಿಗೆ ಗೊತ್ತಿರುವುದು ಹೊಗಳಿಕೆ ಮಾತ್ರ. ಏಕೆಂದರೆ ಅವರು ಧರೆಗೆ ದೊಡ್ಡವರು ಮಾತ್ರವಲ್ಲ, ದೇವರಿಗೂ ದೊಡ್ಡವರು. ಅಂಥ ಅಮ್ಮನಿಗೆ ಹುಲುಮಾನವರ ಪೈಕಿ ಯಾರಾದರೂ ಏನಾದರೂ ಅಂದುಬಿಟ್ಟರೆ ಅವರನ್ನು ಒಂದು ರೀತಿಯಲ್ಲಿ ಹುಟ್ಟಲಿಲ್ಲ ಅನ್ನಿಸಿಬಿಡಲಾಗುತ್ತದೆ ಅಥವಾ ಅವರಿಗೆ ಹುಟ್ಟಿದ ದಿನ ಕಾಣಿಸಲಾಗುತ್ತದೆ ಅಥವಾ ಅವರ ಹುಟ್ಟಡಗಿಸಲಾಗುತ್ತದೆ.

ಅಂಥ ಶಿಕ್ಷೆಗೆ ಜನ್ಮ ಕೊಟ್ಟಿರುವ ಅಮ್ಮ, ಜನರಿಗೆ ತಲೆ ಇರುವುದು ತನಗೆ ಬಾಗುವುದಕ್ಕೆ ಮಾತ್ರ ಎಂದು ಭಾವಿಸುತ್ತಾರೆ. ಅಮ್ಮನ ಇಂದಿನ ರಾಜಕೀಯ ಪಕ್ಷದ ಮೂಲ ಅವತಾರವಾದ ದ್ರಾವಿಡ ಚಳವಳಿಯಲ್ಲಿ ಒಂದಾನೊಂದು ಕಾಲದಲ್ಲಿ ದೇವರನ್ನೇ ಟೀಕಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಲಾಗಿತ್ತು. ಈಗ ಇರುವುದು ಈ ಟೀಕಾತೀತ ‘ದೇವರು’ ಮಾತ್ರ. 

ಸರ್ವಾಧಿಕಾರಕ್ಕೆ ದೇಶಕಾಲದ ಹಂಗಿಲ್ಲ. ಹಿಟ್ಲರ್‌ಗೆ ಹಿಂದೆಯೂ ಸರ್ವಾಧಿಕಾರಿಗಳು ಇದ್ದರು, ನಂತರವೂ ಇದ್ದಾರೆ, ಮುಂದೆಯೂ ಇರುತ್ತಾರೆ. ಅಪ್ಪಟ ಪ್ರಜಾಪ್ರಭುತ್ವದಲ್ಲೂ ರಾಜರಾಣಿಯರು ಇರಬಾರದೆಂದೆಲ್ಲಿದೆ? ಪ್ರತಿಯೊಂದು ರಾಜಕೀಯ ಪಕ್ಷದಲ್ಲೂ ಅವರು ಇದ್ದೇ ಇರುತ್ತಾರೆ. ಸಮಕಾಲೀನ ರಾಜಕಾರಣದಲ್ಲಿ ಬಿಜೆಪಿಯ ನರೇಂದ್ರ ಮೋದಿ ಸರ್ವಾಧಿಕಾರದತ್ತ ಸಾಗುತ್ತಿದ್ದಾರೆ ಎಂದು ಅನೇಕರು ಸಕಾರಣವಾಗಿಯೇ ಹೇಳುತ್ತಾರೆ;

ಆದರೆ ಅಲ್ಲಿ ಅವರನ್ನು ಬರಮಾಡಿಕೊಳ್ಳಲು ಅಮ್ಮ ಇದ್ದಾರೆ. ಅಖಿಲ ಭಾರತ ಅಣ್ಣಾ ಡಿಎಂಕೆ ‘ಅಮ್ಮಾ ಪಕ್ಷ’ ಆಗಿ ಎಷ್ಟೋ ಕಾಲವಾಗಿದೆ. ಜನರು ಮತ ಹಾಕಿ ಗೆಲ್ಲಿಸುವಾಗ, ಬೇರೆ ಯಾರಾದರೂ ಟೀಕೆ ಏಕೆ ಮಾಡಬೇಕು? ಅಮ್ಮನ ವಿರುದ್ಧ ಯಾರಾದರೂ ನಾಲಿಗೆ ಹೊರಗೆಳೆದರೆ ಅವರ ಮೇಲೆ ಕೂಡಲೇ ‘ಮಾನನಷ್ಟ ಮೊಕದ್ದಮೆ’ ಜಡಿದು ಕೋರ್ಟಿಗೆ ಎಳೆಯಲಾಗುತ್ತದೆ. ಹೀಗೆ ಹೇಳಿದ್ದಕ್ಕೂ ಹಾಗೆ ಮಾಡಬಹುದು!

ರಾಜಕೀಯ ರಂಗದಲ್ಲಿ ಅಷ್ಟು ದಶಕಗಳಿಂದ ಸಕ್ರಿಯವಾಗಿ ಇದ್ದಮೇಲೆ, ಅಷ್ಟು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಮೇಲೆ ಬೇರೆ ವಿಚಾರಗಳಲ್ಲಿ ಬರುವಂತೆ, ಟೀಕೆ, ವಿಮರ್ಶೆಗಳನ್ನು ತಡೆದುಕೊಳ್ಳುವ ವಿಚಾರದಲ್ಲೂ ಒಂದು ಪಕ್ವತೆ ಮೈಗೂಡುತ್ತದೆ ಎಂಬ ನಿರೀಕ್ಷೆ ಇರುತ್ತದೆ.

ಅಥವಾ ಯಾರು ಏನಾದರೂ ಅಂದುಕೊಳ್ಳಲಿ ನನಗೆ ಬೇಕಾದಂತೆ ಮಾಡುತ್ತೇನೆ ಎಂಬ ಹಟದಲ್ಲಿ ಟೀಕೆ, ವಿಮರ್ಶೆಗಳನ್ನು ಲೆಕ್ಕಿಸದಂತೆ ‘ದಪ್ಪ ಚರ್ಮ’ ಬೆಳೆಯುತ್ತದೆ ಎನ್ನುವುದೂ ನಿಜ. ಈ ಮನೋಧರ್ಮ ಎನ್ನುವುದು ಎಲ್ಲರಿಗಿಂತ ಹೆಚ್ಚಾಗಿ ಸಾರ್ವಜನಿಕ ಜೀವನದಲ್ಲಿರುವ ರಾಜಕಾರಣಿಗೆ ಅನ್ವಯಿಸುತ್ತದೆ.

ಆದರೆ ಈ ‘ಪುರಚ್ಚಿ ತಲೈವಿ’ ಜಯಲಲಿತಾ ಅವರ ಪಾಲಿಗೆ ಅಧಿಕಾರ ಹೆಚ್ಚಿದಂತೆ ಅಹಂಕಾರ ಹೆಚ್ಚಿತೇ? ಚಿತ್ರರಂಗದಲ್ಲಿ ನಾಯಕಿಯಾಗಿ ಮೆರೆದ ಅವರು ದಶಕಗಳ ಕಾಲ ಹೊಗಳಿಕೆಯ ಸಿಂಹಾಸನದ ಮೇಲೆ ಕೂತ ಅನಭಿಷಿಕ್ತ ರಾಣಿಯಾಗಿದ್ದರು.

ಅಲ್ಲಿ ಅಭಿಮಾನಿಗಳ ಮೆಚ್ಚುಗೆಯ ಮೊರೆತದ ನಡುವೆ ಟೀಕೆಗೀಕೆ ಇತ್ಯಾದಿ ಕಿವಿಗೆ ಬೀಳುವುದಿಲ್ಲ. ಆದರೆ ರಾಜಕಾರಣ ಹಾಗಲ್ಲವಲ್ಲ. ಅಲ್ಲಿ ಎಂಥ ಸನ್ನಡತೆಗೂ ಭಿನ್ನಮತ ಇರುತ್ತದೆ- ಅಂದ ಮೇಲೆ ಭ್ರಷ್ಟಾಚಾರ, ಸರ್ವಾಧಿಕಾರ ಇವುಗಳಿಗೆ ವಿರೋಧ ಇದ್ದೇ ಇರುತ್ತದೆ ಮತ್ತು ಇರಲೇಬೇಕು.

ಟೀಕೆಟಿಪ್ಪಣಿ, ಹಾಸ್ಯ, ವಿಡಂಬನೆ, ವಿಮರ್ಶೆ, ಭಿನ್ನಾಭಿಪ್ರಾಯ ಇವುಗಳನ್ನು ವ್ಯಕ್ತಪಡಿಸಿದವರ ವಿರುದ್ಧ ಕಳೆದ ಐದು ವರ್ಷಗಳಲ್ಲಿ ಜಯಲಲಿತಾ ಹಾಕಿರುವ, ಹಾಕಿಸಿರುವ ಮಾನಹಾನಿ ಅಥವಾ ಮಾನನಷ್ಟ ಮೊಕದ್ದಮೆಗಳ ಸಂಖ್ಯೆ ಇನ್ನೂರು ದಾಟುತ್ತದೆ ಎನ್ನುವುದೇ ಅವರ ಮನೋಧರ್ಮ ಮತ್ತು ವ್ಯಕ್ತಿತ್ವದ ಬಗ್ಗೆ ಬಹಳಷ್ಟನ್ನು ವಿವರಿಸುತ್ತದೆ.

ಇದರಲ್ಲಿ ಅವರ ನಿಡುಗಾಲದ ವೈರಿ ಡಿಎಂಕೆಗೆ ಸಂಬಂಧಿಸಿದಂತೆ ಸುಮಾರು 85 ಮೊಕದ್ದಮೆಗಳಿವೆ. ಇನ್ನೊಬ್ಬ ಕಡುವೈರಿಯಾದ ಮಾಧ್ಯಮದ ವಿರುದ್ಧ 55 ದಾವೆಗಳಿವೆ. ಡಿಎಂಡಿಕೆ ಪಕ್ಷದ ನೇತಾರ ವಿಜಯಕಾಂತ್ ಎಂಬ ಹೊಸ ವೈರಿಗೆ 28 ರಷ್ಟು ಸುತ್ತಿಕೊಂಡಿವೆ. ಭ್ರಷ್ಟಾಚಾರದ ಕಾರಣಕ್ಕಾಗಿ ಸೆರೆಮನೆಗೆ ಹೋದ ಪ್ರಥಮ ಅಧಿಕಾರಾರೂಢ ಮುಖ್ಯಮಂತ್ರಿ ಎಂಬ ಅಪಖ್ಯಾತಿಯನ್ನು ಜಯಲಲಿತಾ ಪಡೆದಿದ್ದಾರೆ, ಆದರೆ ತನ್ನ ವಿರುದ್ಧ ಯಾರೂ ಟೀಕೆ ಮಾಡಬಾರದು ಎಂದು ಗದರುತ್ತಾರೆ.

ಜಯಲಲಿತಾ ಸ್ವಂತ ಪಕ್ಷದಲ್ಲಂತೂ ಅವರನ್ನು ಟೀಕೆ ಮಾಡುವ ತಾಕತ್ತು ಯಾರಿಗೂ ಇಲ್ಲ, ಟೀಕೆ ಮಾಡಿದರೆ ಉಳಿಯುವುದೂ ಇಲ್ಲ. ಅವರಿಗೆ ಇಷ್ಟವಾಗದ ಹಾಗೆ ನಡೆದುಕೊಂಡರೆ ಏನಾಗುತ್ತದೆ ಎನ್ನುವುದು ಮೊನ್ನೆ ಸಂಸದೆ ಶಶಿಕಲಾಗೆ ಒದಗಿದ ಅವಸ್ಥೆಯೇ ಹೇಳುತ್ತದೆ. ಅವರ ಪಕ್ಷ ಎನ್ನುವ ದೊಡ್ಡಮಂದೆಯಲ್ಲಿ ಇರುವವರೆಲ್ಲ, ಅವರ ಹೆಸರು ಕೇಳಿದರೆ ಮಂಡಿಯೂರುವ ವಂಧಿಮಾಗಧರು ಮಾತ್ರ ಎನ್ನುವುದರ ಬಗ್ಗೆ ಹೆಚ್ಚು ಹೇಳಬೇಕಿಲ್ಲ.

ಆದರೆ ಸರ್ಕಾರದ ಅಧಿಕಾರಿವರ್ಗವೂ ವಿರೋಧ ಪಕ್ಷಗಳೂ ಹಾಗೇ ಇರಬೇಕು ಎನ್ನುವುದು ಮುಖ್ಯಮಂತ್ರಿಯ ಇರಾದೆ. ಆದರೆ ಏನು ಮಾಡೋಣ, ಅವರ ಪಕ್ಷದಾಚೆ ಇರುವುದು ಪ್ರಜಾಪ್ರಭುತ್ವ!  

ಇಂಥ ಜಯಲಲಿತಾಗೆ ಈ ನಿಲುವು ಸರಿಯಲ್ಲ ಎಂಬುದನ್ನು ಅವರಿವರಲ್ಲ, ಸ್ವತಃ ಸುಪ್ರೀಂ ಕೋರ್ಟೇ ಇತ್ತೀಚೆಗೆ ಹೇಳಬೇಕಾಯಿತು. ‘ನೀವೊಬ್ಬ ಸಾರ್ವಜನಿಕ ವ್ಯಕ್ತಿ. ಆದ್ದರಿಂದ ಟೀಕೆಗಳನ್ನು ಎದುರಿಸುವುದನ್ನು ಕಲಿಯಿರಿ’ ಎಂದು ರಾಜಕಾರಣದ ಪ್ರಾಥಮಿಕ ಪಾಠವನ್ನು ಅವರಿಗೆ ಬೋಧಿಸಿತು. ವಿಜಯಕಾಂತ್‌ಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯಲ್ಲಿ, ಟೀಕೆ ಸಹಿಸದ ಜಯಲಲಿತಾ ನಡವಳಿಕೆಯನ್ನು ಕಟುವಾಗಿ ಟೀಕಿಸಿತು. 

‘ವಿರೋಧ ಪಕ್ಷಗಳ ನಾಯಕರ ಬಾಯಿ ಮುಚ್ಚಿಸಲು ಅವರ ಮೇಲೆ ಕೂತರೆ ನಿಂತರೆ ಮಾನಹಾನಿ ಮೊಕದ್ದಮೆಗಳನ್ನು ಜಡಿಯುವ ಪ್ರವೃತ್ತಿಯನ್ನು ಒಪ್ಪಲಾಗದು, ಇದರ ಬದಲು ಸರಿಯಾಗಿ ಆಡಳಿತ ನಡೆಸುವುದನ್ನು ಕಲಿಯಿರಿ’ ಎಂದು ನ್ಯಾಯಾಲಯ ಹೇಳಿತು. ಅಷ್ಟೇ ಅಲ್ಲ, ‘ಪಬ್ಲಿಕ್ ಪ್ರಾಸಿಕ್ಯೂಷನ್ ಎಂಬುದನ್ನು ನಿಮ್ಮ ಅಂಚೆಕಚೇರಿ ಮಾಡಿಕೊಂಡು ಪಬ್ಲಿಕ್ ಪ್ರಾಸಿಕ್ಯೂಟರ್ ಎಂಬುವವರನ್ನು ನಿಮ್ಮ ಅಂಚೆಯಾಳು ಮಾಡಿಕೊಳ್ಳಬೇಡಿ, ಆ ವ್ಯಕ್ತಿಗಾದರೂ ಬುದ್ಧಿ ಬೇಡವೇ’ ಎಂದೂ ಸಿಟ್ಟಿನಿಂದ ಕೇಳಿತು.

ವಿರೋಧ ಪಕ್ಷದವರ ಮೇಲೆ ಮಾನಹಾನಿ ಮೊಕದ್ದಮೆಗಳನ್ನು ಹಾಕಲು ಸರ್ಕಾರಿ ಆಡಳಿತಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ತಮಿಳುನಾಡು ಸರ್ಕಾರವೊಂದೇ ಎಂದು ಅಸಮಾಧಾನ ವ್ಯಕ್ತಪಡಿಸಿತು. ಸೆ. 22 ಕ್ಕೆ ವಿಚಾರಣೆಯ ಜೊತೆಗೆ ಕುತೂಹಲವೂ ಮುಂದುವರೆದಿದೆ.

ಜಯಲಲಿತಾ ಅವರ ಆರೋಗ್ಯ ಯಾಕೋ ಸರಿಯಾಗಿಲ್ಲ ಎಂದು ಯಾರೋ ಹೇಳಿದೊಡನೆ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿರುವುದಕ್ಕೆ ತಮಿಳುನಾಡಿನಲ್ಲಿ ಉದಾಹರಣೆಯುಂಟು. ಚುನಾವಣಾ ಪ್ರಚಾರದಲ್ಲಿ ಹೆಚ್ಚಾಗಿಯೇ ಇರುವ ಪ್ರಹಾರಗಳ ಬಗ್ಗೆ ಹೇಳುವುದೇ ಬೇಡ.

ಅಂದಮೇಲೆ ಭ್ರಷ್ಟಾಚಾರದ ಹಗರಣಗಳು, ಸ್ವಜನ ಪಕ್ಷಪಾತ, ಏಕಪಕ್ಷೀಯ ನಿರ್ಧಾರಗಳು, ಆಡಳಿತಶಾಹಿಯ ಡೊಗ್ಗು ಸಲಾಮು, ವಿರೋಧ ಪಕ್ಷದ ಮೇಲಿನ ದಾಳಿಗಳು ಇತ್ಯಾದಿ ನೂರೆಂಟು ವಿಚಾರಗಳ ಬಗ್ಗೆ ಮಾತನಾಡುವುದು ಜಯಲಲಿತಾ ದೃಷ್ಟಿಯಲ್ಲಿ ಎಂಥ ಮಹಾಪರಾಧ ಎನ್ನುವುದನ್ನು ಊಹಿಸಿಕೊಳ್ಳಬಹುದು. ಅವರ ಸೇಡಿನ ಕ್ರಮಗಳನ್ನು ಗಮನಿಸಿದರೆ, ವಿಧಾನ ಮಂಡಲದಲ್ಲಿ ಚರ್ಚೆ, ವಿರೋಧ ಪಕ್ಷದ ಶಾಸಕರು ಕೇಳುವ ಪ್ರಶ್ನೆಗಳು ಇವೆಲ್ಲವೂ ಅವರ ದೃಷ್ಟಿಯಲ್ಲಿ ಅಪ್ರಸ್ತುತ.

ಜಯಲಲಿತಾ ಎಂದಿಗೂ ಟೀಕೆಗಳನ್ನು ಸಹಿಸುವುದಿಲ್ಲ ಎನ್ನುವುದಕ್ಕೆ ಅವರ ರಾಜಕೀಯ ಜೀವನದಷ್ಟೇ ಸುದೀರ್ಘವಾದ ದಾಖಲೆಗಳಿವೆ. ಹಿಂದೊಮ್ಮೆ ತನ್ನನ್ನು ಟೀಕಿಸಿದ, ವಿಮರ್ಶಿಸಿದ ಪತ್ರಿಕೆಗಳ ಮೇಲೆ ಅವರು ಗದಾಪ್ರಹಾರ ಮಾಡಿದ್ದರು. ಪತ್ರಕರ್ತರನ್ನು ಹದಿನೈದು ದಿನಗಳ ಕಾಲ ಸೆರೆಮನೆಗೆ ತಳ್ಳಬೇಕೆಂದು ಹಕ್ಕುಚ್ಯುತಿ ಮಂಡಿಸಿ, ವಿಧಾನ ಮಂಡಲದಲ್ಲಿ ಮಾಡಿಸಿದ್ದ ನಿರ್ಣಯಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು.

ತಮಿಳುನಾಡಿನ ಕ್ರಮವನ್ನು ಆಗ ಪ್ರಧಾನಿಯಾಗಿದ್ದ ವಾಜಪೇಯಿ, ಉಪಪ್ರಧಾನಿಯಾಗಿದ್ದ ಅಡ್ವಾಣಿ, ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್ ಸೇರಿ ದೇಶದ ಉದ್ದಗಲಕ್ಕೆ ಪ್ರಮುಖರೆಲ್ಲ ಖಂಡಿಸಿದ್ದರು. ತುರ್ತು ಪರಿಸ್ಥಿತಿಯಲ್ಲಿ ಪತ್ರಿಕಾ ಸೆನ್ಸಾರ್‌ಶಿಪ್ ಜಾರಿ ಮಾಡಿದ್ದ ಸರ್ಕಾರದ ಕಾಂಗ್ರೆಸ್ ಪಕ್ಷವೂ ಈ ಸೇಡಿನ ಕ್ರಮವನ್ನು ಕಟುವಾಗಿ ಟೀಕಿಸಿತ್ತು.

ಜಯಲಲಿತಾ ಮಾಡಿದ ಶಾಸಕಾಂಗದ ದುರ್ಬಳಕೆ, ದೇಶಕ್ಕೇ ಒಂದು ರೀತಿಯಲ್ಲಿ ಕಳವಳ ತಂದಿತ್ತು. ಆದರೆ ತನ್ನ ಮೇಲಿನ ಟೀಕೆ ಇಷ್ಟಪಡದೆ ಸೇಡು ತೀರಿಸಿಕೊಳ್ಳುವ ಅಮ್ಮ, ಅದರ ಮೇಲಿನ ಟೀಕೆಗೂ ತಾನು ಜಗ್ಗುವುದಿಲ್ಲ ಎಂಬ ಭಂಡತನ ತೋರುತ್ತಾರೆ. 

ತಮಿಳುನಾಡಿನಲ್ಲಿ (ಅಥವಾ ಬೇರಾವುದೇ ರಾಜ್ಯದಲ್ಲಿ) ಅಧಿಕಾರದಲ್ಲಿ ಇಲ್ಲದ ರಾಜಕೀಯ ಪಕ್ಷಗಳು ತಮ್ಮ ಕರ್ತವ್ಯ, ಜವಾಬ್ದಾರಿಗಳನ್ನು ಬಹಳ ಅದ್ಭುತವಾಗಿ ನಿರ್ವಹಿಸಿವೆ ಎಂದೇನೂ ಭಾವಿಸಬೇಕಿಲ್ಲ. ವಿರೋಧ ಪಕ್ಷಗಳು ತಮ್ಮ ಎಲ್ಲ ಕೆಲಸಗಳನ್ನು ಬಹಳ ನ್ಯಾಯೋಚಿತವಾಗಿ, ಜನಪರ ಕಾಳಜಿಯಿಂದಲೇ ಮಾಡಿವೆ ಎಂಬುದೇನೂ ನಿಜವಲ್ಲ.

ಭ್ರಷ್ಟಾಚಾರವೂ ಸೇರಿದಂತೆ ಇವರ ಮೇಲೆ ಮಾಡುವ ಆರೋಪಗಳು ಅವರಿಗೂ ಅನ್ವಯಿಸುತ್ತವೆ. ಪಾತ್ರಗಳು ಅದಲುಬದಲಾಗಿರುವುದೇ ಹೆಚ್ಚು ಕಾಣುತ್ತದೆ. ಆದರೆ ಅವರ ಲೋಪಗಳು ಅಥವಾ ವೈಫಲ್ಯಗಳು ಇವರ ಸರ್ವಾಧಿಕಾರಕ್ಕೆ ಮೆಟ್ಟಿಲುಗಳಾಗಬಾರದು.

ಹಾಗೆ ನೋಡಿದರೆ, ರಾಜಕಾರಣದಲ್ಲಿ ದಕ್ಕುವ ಅದ್ಭುತ ಯಶಸ್ಸಿಗೆ ಜಯಲಲಿತಾ ಹೇಗೆ ಮಾದರಿಯಾಗಿದ್ದಾರೋ ಹಾಗೆಯೇ ರಾಜಕಾರಣದಲ್ಲಿ ಮಹಿಳೆ ಅನುಭವಿಸುವ ಕಷ್ಟನಷ್ಟಗಳಿಗೂ ಒಂದು ಉಲ್ಲೇಖವಾಗಿ ನಿಂತಿದ್ದಾರೆ. ನಮ್ಮ ದೇಶದ ರಾಜಕೀಯ ರಂಗದಲ್ಲಿ ಅಬ್ಬರಿಸುವ ಪುರುಷ ಪ್ರತಾಪ, ವಿಧಾನ ಸಭೆಯಲ್ಲಿ ಅವರ ಸೀರೆ ಸೆಳೆಯುವ ಹೀನ ಕೆಲಸಕ್ಕೂ ಕೈಹಾಕಿತ್ತು ಎನ್ನುವುದನ್ನು ಮರೆಯುವಂತಿಲ್ಲ.

ಅವರಷ್ಟು ಬೈಗುಳ ತಿಂದ ಮಹಿಳಾ ರಾಜಕಾರಣಿ ಇನ್ನೊಬ್ಬರಿಲ್ಲ ಎನ್ನುವಂಥ ಕಾಲವೊಂದಿತ್ತು. ಅತಿಭ್ರಷ್ಟ ಮುಖ್ಯಮಂತ್ರಿಗಳ ಸಾಲಿನಲ್ಲಿ ಅವರ ಹೆಸರೂ ಕೆತ್ತಿಹೋಗಿದೆ. ಅತ್ಯಂತ ಸಂಕೀರ್ಣ ವ್ಯಕ್ತಿತ್ವದ ಅವರು ರಾಜಕಾರಣದಲ್ಲಿ ಕೆಲವು ಜಾಣನಡೆಗಳ ಮೂಲಕವೇ ಖ್ಯಾತರಾಗಿದ್ದಾರೆ. ಮಾನಹಾನಿ ಪ್ರಕರಣ ಜಡಿಯುವ ಕ್ರಮ ದಡ್ಡತನಕ್ಕೆ ಮಾತ್ರ ಉದಾಹರಣೆ.

ನಮ್ಮ ದೇಶದ ಎಪ್ಪತ್ತು ವರ್ಷಗಳ ಪ್ರಜಾಪ್ರಭುತ್ವದಲ್ಲಿ ವಿರೋಧ, ಪ್ರತಿರೋಧ, ಟೀಕೆ, ವಿಮರ್ಶೆ ಎಲ್ಲವನ್ನೂ ಘನತೆಯಿಂದ ನಿರ್ವಹಿಸಿರುವ ನೂರಾರು ಉದಾಹರಣೆಗಳಿವೆ. ಬಡಿಗೆ ಹಿಡಿಯದೆ ವಿರೋಧಿಗಳ ಬಾಯಿ ಬಡಿದಿರುವ ಚಾಣಾಕ್ಷ ಪ್ರಸಂಗಗಳೂ ನೂರಾರಿವೆ. ಲಾರ್ಡ್ ಮೌಂಟ್‌ಬ್ಯಾಟನ್ ಅವರ ಪತ್ನಿ ಎಡ್ವಿನಾ ಅವರೊಂದಿಗಿನ ಸ್ನೇಹದ ಕಾರಣದಿಂದಲೇ ದೇಶದ ವಿಭಜನೆಗೆ ಒಪ್ಪಿಕೊಂಡಿರಿ ಎಂಬಂಥ ಗಂಭೀರತಮ ಚಾರಿತ್ರಿಕ ಆರೋಪವನ್ನು ಜವಾಹರಲಾಲ್ ನೆಹರೂ ಎದುರಿಸಿದ್ದರು.

ಸಂಸತ್ತಿನಲ್ಲಂತೂ ಬೇರೆಯವರಿಂದ ಬಿಡಿ, ಸ್ವತಃ ತಮ್ಮ ಅಳಿಯ ಫಿರೋಜ್ ಗಾಂಧಿ ಅವರ ಟೀಕಾ ಪ್ರಹಾರವನ್ನೇ ಅವರು ಹಲವು ಬಾರಿ ಎದುರಿಸಬೇಕಾಯಿತು. ವಿರೋಧ ಪಕ್ಷಗಳ ರಾಜಕಾರಣಿಗಳಲ್ಲದೆ ಸ್ವಂತ ಪಕ್ಷದ ರಾಜಕೀಯ ಪಟುಗಳೂ ಕಟುಟೀಕೆ ಮಾಡುವ ಪ್ರಸಂಗಗಳು ಎಲ್ಲ ರಾಜಕಾರಣಿಗಳ ಬದುಕಿನಲ್ಲೂ ಇದ್ದೇ ಇರುತ್ತವೆ. ಇದಕ್ಕೆ ಯಾವ ರಾಜ್ಯವೂ ಹೊರತಲ್ಲ.

ಚಿತ್ರರಂಗ ಮತ್ತು ರಾಜಕೀಯ ರಂಗ ಹೀಗೆ ಜಯಲಲಿತಾ ಸಾರ್ವಜನಿಕ ಜೀವನಕ್ಕೆ ಬಂದ ಮೇಲೆ ಕಾವೇರಿಯಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. ಆದರೆ ಅವರ ನಿಲುವು ಮಾತ್ರ ಬಂಡೆಯಂತೆ ಅಚಲವಾಗಿದೆ. ಯಾರ ಮೇಲಾದರೂ ಜಯಲಲಿತಾ ಮಾನನಷ್ಟ ಮೊಕದ್ದಮೆ ಹಾಕಬಹುದು. ಆದರೆ ಇತಿಹಾಸದ ಮೇಲೆ ಹಾಕಲು ಅವರಿಂದ ಸಾಧ್ಯವಿಲ್ಲ; ಬದಲಿಗೆ ಅದೇ ಅವರ ಮೇಲೆ ಹಾಕುವುದನ್ನು ತಪ್ಪಿಸಿಕೊಳ್ಳಲೂ ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT