ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ನುಡಿ ಮತ್ತು ಪೊಲೆಟಿಕಲ್ ಕರೆಕ್ಟ್‌ನೆಸ್

Last Updated 12 ಮೇ 2012, 19:30 IST
ಅಕ್ಷರ ಗಾತ್ರ

ಚಂದ್ರಶೇಖರ ಕಂಬಾರರು ಒಮ್ಮೆ ಮಾತನಾಡುತ್ತ ಹಿಂದೆಲ್ಲ ಪದದ ಅರ್ಥವನ್ನು ಕವಿಗಳು ನಿರ್ಣಯಿಸುತಿದ್ದರು, ಈಗ ಅರ್ಥದ ನಿರ್ಣಯದ ಅಧಿಕಾರ ರಾಜಕಾರಣಿಗಳದ್ದಾಗಿದೆ ಅಂದಿದ್ದರು. ಹಾಗೆ ಅರ್ಥ ನಿರ್ಣಯ ರಾಜಕಾರಣಿಗಳದ್ದೇ ಆದಾಗ ಪರಿಸ್ಥಿತಿ ಹೇಗಿರುತ್ತದೆ ಅನ್ನುವುದನ್ನು ಜಾರ್ಜ್ ಆರ‌್ವೆಲ್ `1984~ ಎಂಬ ಕಾದಂಬರಿಯಲ್ಲಿ ಚಿತ್ರಿಸಿದ್ದಾನೆ. ಅದನ್ನು ಅವನು ಬರೆದದ್ದು 1949ರಲ್ಲಿ.

ಜನರ ಗ್ರಹಿಕೆ ಮತ್ತು ಆಲೋಚನೆಗಳನ್ನು ಭಾಷೆಯ ಮೂಲಕ ನಿಯಂತ್ರಿಸುವುದು ಸಾಧ್ಯ ಅನ್ನುವ ನಂಬಿಕೆಯನ್ನೇ ತಳಹದಿಯನ್ನಾಗಿಟ್ಟುಕೊಂಡು ಆರ‌್ವೆಲ್ ಆ ಕಾದಂಬರಿ ಬರೆದಿದ್ದಾನೆ.
 
ಇಂಗ್ಲೆಂಡಿನಲ್ಲಿ ಹೊಸ ಪಕ್ಷದ ನಿರಂಕುಶ ಆಡಳಿತ ಶುರುವಾಗಿತ್ತು. ಅದರ ಹೆಸರು ಇಂಗ್‌ಸಾಕ್. ಇಂಗ್-ಸಾಕ್ ಅನ್ನುವುದು ಇಂಗ್ಲಿಶ್-ಸೋಶಿಯಲಿಸಂ ಅನ್ನುವುದರ ಸಂಕ್ಷಿಪ್ತ ರೂಪ. ದೇಶದ ಎಲ್ಲ ನಾಗರಿಕರೂ `ನವ ನುಡಿ~ಯನ್ನು (ನ್ಯೂಸ್ಪೀಕ್) ಬಳಸುವುದು ಕಡ್ಡಾಯವಾಗಿತ್ತು. ಅದು ಇಂಗ್ಲಿಶ್‌ನ `ಹಳೆ ನುಡಿ~ಯ (ಓಲ್ಡ್ ಸ್ಪೀಕ್) ಸುಧಾರಿತ ರೂಪ.
 
ಈ ನವ ನುಡಿ ಆಳುವ ಪ್ರಭುತ್ವಕ್ಕೆ ಒಲ್ಲದ ಅರ್ಥಗಳನ್ನೆಲ್ಲ ಕಿತ್ತು ಹಾಕಿ ಪ್ರಭುತ್ವಕ್ಕೆ ಬೇಕಾದ ಅರ್ಥಗಳನ್ನು ಮಾತ್ರ ಉಳಿಸಿಕೊಂಡ ಭಾಷೆಯಾಗಿತ್ತು. ಇಂಗ್‌ಸಾಕ್‌ನ ಅನುಯಾಯಿಗಳ ಲೋಕದೃಷ್ಟಿಯನ್ನು ಅಭಿವ್ಯಕ್ತಿಸುವ ಮಾಧ್ಯಮವನ್ನು ರೂಪಿಸುವುದು, ಆ ಲೋಕದೃಷ್ಟಿಗೆ ತಕ್ಕ ಮಾನಸಿಕ ವರ್ತನೆಗಳನ್ನು ರೂಪಿಸುವುದು, ಅದಕ್ಕೆ ಒಲ್ಲದ ಎಲ್ಲ ಆಲೋಚನೆಗಳನ್ನೂ ಬಹಿಷ್ಕರಿಸುವುದು ನವನುಡಿಯ ಉದ್ದೇಶ.

ಲೋಕದ ಗ್ರಹಿಕೆಯನ್ನು ಭಾಷೆ ನಿಯಂತ್ರಿಸುತ್ತದೆ ಅನ್ನುವ ತತ್ವದ ಮೇಲೆ ನವನುಡಿ ರೂಪುಗೊಂಡಿತ್ತು. ಸರಳ ಉದಾಹರಣೆ ಎಂದರೆ ನವಭಾಷೆಯಲ್ಲಿ ಫ್ರೀ ಅನ್ನುವ ಪದವಿದ್ದರೂ ಅದು ನಾಯಿ ಫ್ರೀ ಫ್ರಂ ಲೈಸ್ (ನಾಯಿ ಹೇನುಗಳಿಂದ ಮುಕ್ತ), ಹೊಲ ಫ್ರೀ ಫ್ರಂ ವೀಡ್ಸ್ (ಹೊಲ ಕಳೆಗಳಿಂದ ಮುಕ್ತ) ಅನ್ನುವ ಬಳಕೆ ಸಾಧ್ಯವಿತ್ತೇ ಹೊರತು `ಮುಕ್ತ ಚಿಂತನೆ~, `ಮುಕ್ತ ರಾಜಕೀಯ~ ಅನ್ನುವುದು ಅಸಾಧ್ಯವಾಗಿತ್ತು.
 
ರಾಜಕೀಯ ಮತ್ತು ಬೌದ್ಧಿಕ ಮುಕ್ತತೆ ಕಲ್ಪನೆಯಾಗಿಯೂ ಅಸ್ತಿತ್ವದಲ್ಲಿರಲಿಲ್ಲ. ಹಾಗಾಗಿ ಅವಕ್ಕೆ ಹೆಸರೂ ಇರಲಿಲ್ಲ. ನವ ನುಡಿಯಲ್ಲೇ ಬೆಳೆದ ಮಗುವಿಗೆ ಮುಕ್ತ ಅನ್ನುವುದಕ್ಕೆ `ಬೌದ್ಧಿಕ ಮುಕ್ತತೆ~ ಅನ್ನುವ ಅರ್ಥವಿತ್ತು, ಸಮಾನತೆ ಅನ್ನುವುದಕ್ಕೆ `ರಾಜಕೀಯ ಸಮಾನತೆ~ ಅನ್ನುವ ಅರ್ಥವಿತ್ತು ಅನ್ನುವುದು ಗೊತ್ತೇ ಇರಲು ಸಾಧ್ಯವಿರಲಿಲ್ಲ.

ಈ ನವ ನುಡಿಯ ಇನ್ನೊಂದು ಅಂಶ ಅಹಿತವಾದ ಸತ್ಯಗಳಿಗೆ ಚೆಲುವಿನ ನುಡಿಗಳನ್ನು ಹೊಂದಿಸುವುದು. ಇಂಗ್‌ಸಾಕ್ ಸರ್ಕಾರದಲ್ಲಿ `ಪ್ರೀತಿ ಸಚಿವಾಲಯ~ ಅನ್ನುವುದು ಇತ್ತಂತೆ. ಅದರ ಕೆಲಸ ಸೈನ್ಯವು ಯುದ್ಧಕ್ಕೆ ಸದಾ ಸನ್ನದ್ಧವಾಗಿರುವ ಹಾಗೆ ನೋಡಿಕೊಳ್ಳುವುದು; `ಸಮೃದ್ಧಿ ಸಚಿವಾಲಯ~ದ ಕೆಲಸ ಜನಕ್ಕೆ ಎಷ್ಟು ಕಡಿಮೆ ಪ್ರಮಾಣದ ರೇಶನ್ ಕೊಡಬಹುದು ಅನ್ನುವುದನ್ನು ನಿರ್ಧರಿಸುವುದು; `ಸತ್ಯ ಸಚಿವಾಲಯ~ದ ಕೆಲಸ ಪಕ್ಷಕ್ಕೆ ಹಿತವಾಗುವಂಥ ಸುಳ್ಳುಗಳನ್ನು ಸತ್ಯವೆಂಬಂತೆ ಪ್ರಚಾರಮಾಡುವುದು, ಹೀಗೆ. ಆಳುವ ಪಕ್ಷವು ಒಲ್ಲದ ವಿಚಾರಗಳನ್ನು ಮಾಡುವವರು `ಚಿಂತನಾಪರಾಧಿ~ಗಳೆಂಬ ಹೆಸರು ಪಡೆಯುತಿದ್ದರು, ಅವರನ್ನು ಕಂಡು ಹಿಡಿಯುವುದಕ್ಕೆ ಥಾಟ್ ಪೋಲೀಸ್, ಆಲೋಚನೆಯ ಆರಕ್ಷಕರು ಇದ್ದರು.
ಆರ‌್ವೆಲ್‌ನ ಕಾದಂಬರಿಯ ಈ ವಿವರಗಳು ಕೇವಲ ಕಾಲ್ಪನಿಕ ಅನಿಸುತ್ತದೆಯೇ? ಹಾಗಿದ್ದರೆ `ಕನ್ನಡ ಶಾಲೆಗಳ ವಿಲೀನ~ ಅನ್ನುವ ಮಾತಿನ ಅರ್ಥವೇನು? `ಕನ್ನಡ ಶಾಲೆಗಳನ್ನು ಮುಚ್ಚುತ್ತೇವೆ~ ಅನ್ನುವ ಕಹಿ ಸತ್ಯ ಹೇಳಲಾಗದೆ ವಿಲೀನ ಅನ್ನುವ ಸುಂದರ ಶಬ್ದದ ಬಳಕೆ ಆಗುತ್ತಿಲ್ಲವೇ? `ವಿಶೇಷ ಆರ್ಥಿಕ ವಲಯ~ಗಳ ಸೃಷ್ಟಿ ಅನ್ನುವ ಚೆಲುವಾದ ಮಾತಿಗೆ ಬೇಸಾಯಗಾರರನ್ನು ಒಕ್ಕಲೆಬ್ಬಿಸುವ, ಬೆಳೆ ಬೆಳೆಯುವ ಭೂಮಿಯನ್ನು ಕೈಗಾರಿಕೋದ್ಯಮಿಗಳಿಗೆ ದಾನಮಾಡುವುದು ಅನ್ನುವ ಅರ್ಥವಲ್ಲವೇ? `ಸಹಿಷ್ಣುತೆ~ ಅಂದರೆ ನಮ್ಮ ಬದುಕಿನ ರೀತಿಯೇ ಸರಿ ಎಂದು ಮಿಕ್ಕವರೆಲ್ಲ ಒಪ್ಪಬೇಕು, ಹಾಗೆ ಒಪ್ಪದಿದ್ದರೆ ಅವರನ್ನು ಕೊಲ್ಲುತ್ತೇವೆ ಅನ್ನುವ ದನಿ ಕೇಳುವುದಿಲ್ಲವೇ?
 
ಹೀಗೆ ಮಾತನ್ನು ಬದಲಿಸಿದರೆ ಆಲೋಚನೆಯನ್ನೂ ಬದಲಿಸಬಹುದು ಅನ್ನುವ ನಂಬಿಕೆಯೇ ಶಾಲೆಗಳ ಪಠ್ಯಕ್ರಮದ ನಿಗದಿಯಲ್ಲೂ ಪಠ್ಯ ಪುಸ್ತಕ ನಿರ್ಮಾಣದಲ್ಲೂ ಕೆಲಸಮಾಡುತ್ತದೆ. ಹಾಗಾಗಿಯೇ ಚರಿತ್ರೆಯ ಪಠ್ಯಪುಸ್ತಗಳ ವಿಷಯ ನಿರೂಪಣೆ ಸದಾ ವಾದಗ್ರಸ್ತವಾಗಿಯೇ ಇರುತ್ತದೆ.
 
ಮುಕ್ತ ಮಾರುಕಟ್ಟೆಯ ನೀತಿಯನ್ನು ಒಪ್ಪಿಕೊಂಡ ರಾಜಕಾರಣದಲ್ಲಿ ವ್ಯಾಪಾರ, ವಾಣಿಜ್ಯಕ್ಕೆ ತಕ್ಕ ಭಾಷೆಯನ್ನು ಕಲಿಸುವುದು ಮುಖ್ಯವಾಗುತ್ತದೆಯೇ ಹೊರತು ಮನಸ್ಸು, ಭಾಷೆ, ಆಲೋಚನೆಗಳನ್ನು ತಿದ್ದುವ, ರೂಪಿಸುವ ಸಾಹಿತ್ಯ ಶಿಕ್ಷಣಕ್ಕೆ ಅಲ್ಲ. ಎಳೆಯ ತಲೆಮಾರಿನ ಆಲೋಚನೆಯನ್ನು ಭಾಷೆಯ ಮೂಲಕ ತಿದ್ದುವುದೇ ಶಿಕ್ಷಣ ರಾಜಕಾರಣದ ಗುರಿ.

`ನವ ನುಡಿ~ ದುಷ್ಟ ನಿರಂಕುಶಾಧಿಕಾರದ ಸೃಷ್ಟಿಯಾದರೆ ಪೊಲೆಟಿಕಲಿ ಕರೆಕ್ಟ್ ಆದ ಭಾಷೆ ಜಗತ್ತಿನ ಉದ್ಧಾರದ ಅಪೇಕ್ಷೆಯಿಂದ ಮೂಡಿದ್ದು. ಜಾತಿಗಳನ್ನು ಕುರಿತು ಪರಿಶಿಷ್ಟ ಎಂಬ ಪದದ ಬಳಕೆ, ಅಂಗವಿಕಲತೆಯನ್ನು ಕುರಿತ ಹೊಸ ಪದಗಳು ಇಂಥ ದೃಷ್ಟಿಕೋನಕ್ಕೆ ಉದಾಹರಣೆಗಳು. ಇರುವ ಸ್ಥಿತಿಯನ್ನೇ ಉಳಿಸಿಕೊಳ್ಳುವ ರಾಜಕೀಯ ಮನಸ್ಸು ಕೆಲವು ಮುಖ್ಯ ಪದಗಳನ್ನು ಲೇವಡಿಮಾಡುವುದರಲ್ಲಿ ತೊಡಗುತ್ತದೆ, ಅಂಥ ಪದಗಳನ್ನು ಬಳಸುವವರ ಪ್ರಾಮಾಣಿಕತೆಯನ್ನು ಅನುಮಾನಿಸುವ, ವ್ಯಂಗ್ಯವನ್ನು ಹುಟ್ಟಿಹಾಕುತ್ತದೆ.

ಸೆಕ್ಯುಲರ್ ಅನ್ನುವ ಪದವನ್ನು ಕುರಿತು ಬಲಪಂಥೀಯರು ಮಾಡುವ ಲೇವಡಿ, ವ್ಯಂಗ್ಯ ಟೀಕೆಗಳನ್ನು ಗಮನಿಸಿ. ಬುದ್ಧಿಜೀವಿ ಅನ್ನುವ ಪದಕ್ಕೆ ಬಂದಿರುವ ಹೀನಾರ್ಥವನ್ನು ಗಮನಿಸಿ. ಗಾಂಧಿಯನ್ನು ಕುರಿತು ಹುಟ್ಟಿಕೊಂಡಿರುವ ಲೇವಡಿಯಂಥ ಮಾತುಗಳನ್ನು ಗಮನಿಸಿ. ಇಲ್ಲೆಲ್ಲ ರಾಜಕೀಯ ಉದ್ದೇಶಕ್ಕೆಂದೇ ಹೊಸ ಅರ್ಥದ ನಿರ್ಮಾಣ, ಹಳೆಯ ಅರ್ಥದ ನಿರಾಕರಣೆ, ಚೆಲುವಿನ ಸೌಮ್ಯೊಕ್ತಿ, ಲೇವಡಿ ಅನ್ನುವ ಭಾಷಾ ಪರಿಕರಗಳ ಬಳಕೆಯಾಗುವುದು ನಿಮ್ಮ ಗಮನಕ್ಕೆ ಬರುತ್ತದೆ. 
*
`ರಾಜಕಾರಣಿಗಳು ಯಾವಾಗ ಸುಳ್ಳು ಹೇಳುತ್ತಾರೆ?~ ಅನ್ನುವ ಪ್ರಶ್ನೆಗೆ `ಅವರು ತುಟಿ ಅಲುಗಿಸಿದಾಗಲೆಲ್ಲ~ ಅನ್ನುವ ಉತ್ತರ ಸವೆದ ಜೋಕು. ರಾಜಕೀಯದ ಭಾಷೆ ಅಂದರೆ ಅಸಮರ್ಥನೀಯವಾದದ್ದನ್ನು ಸಮರ್ಥಿಸುವ ಭಾಷೆ; ಅದು ಕಪಟ ಮೃದುವಚನ; ಮೋಡ ಕವಿದ ಆಕಾಶದ ಹಾಗೆ ಅಸ್ಪಷ್ಟ; ಸುಳ್ಳನ್ನು ಸತ್ಯವೆಂಬಂತೆ ಬಿಂಬಿಸುವ, ಕೊಲೆಯನ್ನು ಗೌರವಾರ್ಹಗೊಳಿಸುವ, ಗಾಳಿಯನ್ನೂ ಬಂಡೆಯಷ್ಟೇ ಅಚಲ ಎಂದು ನಂಬಿಸುವ ಉದ್ದೇಶದ ಭಾಷೆ ಅನ್ನುವುದು ಆರ‌್ವೆಲ್‌ನ ವಿವರಣೆ. ಭಾಷೆಯ ಬಗ್ಗೆ ಸೂಕ್ಷ್ಮತೆಯನ್ನು ಕಳಕೊಳ್ಳುವುದು ಸಮಾಜದ ಅವನತಿಯ ಮುಖ್ಯ ಲಕ್ಷಣ ಅನ್ನುತ್ತಾನೆ ಆರ‌್ವೆಲ್.

ಸ್ಪಷ್ಟವಾದ, ಪ್ರಾಮಾಣಿಕವಾದ, ಅರ್ಥವಾಗುವಂಥ ಸಂವಹನಕ್ಕಾಗಿ ರಾಜಕಾರಣಿಗಳು ಮತ್ತು ಎಲ್ಲ ಲೇಖಕರೂ ಮಾತುಗಾರರೂ ಅನುಸರಿಸಬೇಕಾದ ಕೆಲವು ನಿಯಮಗಳನ್ನು ಆರ‌್ವೆಲ್ ರೂಪಿಸಿದ್ದಾನೆ.

ಈಗಾಗಲೇ ನೀವು ಮುದ್ರಣದಲ್ಲಿ ಕಂಡಿರುವ ಯಾವುದೇ ರೂಪಕ, ಉಪಮೆ ಅಥವ ಅಲಂಕಾರವನ್ನು ಬಳಸಬೇಡಿ ಅನ್ನುವುದು ಮೊದಲ ನಿಯಮ. ನಾಡಿನ ಸರ್ವತೋಮುಖ ಏಳಿಗೆಗಾಗಿ; ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವುದಕ್ಕಾಗಿ, ಶಕ್ತಿ ಪ್ರದರ್ಶನ, ವ್ಯಕ್ತಿಗಿಂತ ರಾಷ್ಟ್ರ ಮುಖ್ಯ; ನಾನು ಪಕ್ಷದ ಶಿಸ್ತಿನ ಸಿಪಾಯಿ, ನಿಷ್ಠಾವಂತ ಕಾರ್ಯಕರ್ತ, ಸೂಕ್ತಕಾಲದಲ್ಲಿ ಸೂಕ್ತಕ್ರಮ, ವಚನಭಂಗ, ವಚನ ಪರಿಪಾಲನೆ, ಜನಪರ ಆಲೋಚನೆ, ಜನಪರ ಆಡಳಿತ, ಇಂಥ ಅಕ್ಷರಶಃ ನೂರಾರು ನುಡಿಗಟ್ಟುಗಳೇ ರಾಜಕಾರಣಿಗಳ ಮಾತಿನ ತುತ್ತುಗಳು. ಇಂಥ ಮಾತುಗಳ ಸುತ್ತ ಆಗಲೇ ಒಂದು ಭಾವ ಪರಿವೇಶ ಸೃಷ್ಟಿಯಾಗಿರುತ್ತದೆ. ರಾಜಕಾರಣಿಯ ಮಾತು ಅಂಥ ಭಾವಪರಿವೇಶವನ್ನು ಸ್ಥಿರಗೊಳಿಸುತ್ತದೆಯೇ ಹೊರತು ಪ್ರಶ್ನಿಸುವುದಿಲ್ಲ.

ಇಂಥ ಮಾತುಗಳಲ್ಲಿರುವ ಐಡಿಯಾಲಜಿಯನ್ನು ಕಾಮನ್‌ಸೆನ್ಸ್ ಅನ್ನುವಂತೆ ರಾಜಕಾರಣಿಗಳು ಬಳಸುತ್ತಾರೆ. ಬಳಸಿ ಸವೆದುಹೋಗಿರುವ ಮಾತುಗಳನ್ನು ಬಳಸುವ ಮೂಲಕ ಏನನ್ನೋ ಹೇಳುತ್ತಿದ್ದೇವೆ ಎಂಬ ಭ್ರಮೆಯನ್ನು ಹುಟ್ಟಿಸುತ್ತಾರೆಯೇ ಹೊರತು ಸಾಮಾನ್ಯವಾಗಿ ಅರ್ಥವೇನೂ ಇರುವುದಿಲ್ಲ. ರಾಜಕಾರಣಿಯ ಇಂಥ ಮಾತು ಬೌದ್ಧಿಕ ಸೋಮಾರಿತನವನ್ನು ಸೂಚಿಸುತ್ತದೆ, ಅಸ್ಪಷ್ಟತೆಯನ್ನು ಹುಟ್ಟಿಸುತ್ತದೆ, ಪರಿಚಿತ ನುಡಿಗಟ್ಟು ಆದುದರಿಂದಲೇ ಅರ್ಥವಾಯಿತೆಂಬ ಭ್ರಮೆಯನ್ನು ಹುಟ್ಟಿಸಿ ಜನರ ಆಲೋಚನೆಯನ್ನೇ ಮೊಟಕುಗೊಳಿಸುತ್ತದೆ.

ರಾಜಕೀಯ ಭಾಷೆಯ ಇನ್ನೊಂದು ಲಕ್ಷಣವನ್ನು ಆರ‌್ವೆಲ್ ಗುರುತಿಸುತ್ತಾನೆ. ಅದು ಚಿಕ್ಕ ಚಿಕ್ಕ ಅರ್ಥವಾಗುವ ಪದಗಳ ಬದಲಾಗಿ ದೊಡ್ಡ ದೊಡ್ಡ ಪದಗಳನ್ನು ಬಳಸುವುದು. `ಹಿರಿಯ ನಾಗರಿಕರು~ ಎಂದರೆ ಮುದುಕರು ಅಷ್ಟೇ ಅಲ್ಲವೇ! `ಸರ್ಕಾರದ ಆರ್ಥಿಕ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳುವುದು~ ಅನ್ನುವುದು ಬಹಳ ಗಂಭೀರ ಸಮಸ್ಯೆಯಾಗಿ ಕಂಡೀತು. ದಿನ ನಿತ್ಯದ ಮಾತಿಗೆ ಅನುವಾದಿಸಿದರೆ `ತೆರಿಗೆಯನ್ನು ಹೆಚ್ಚಿಸುವುದು~ ಅನ್ನುವ ಅರ್ಥ ಅಷ್ಟೇ ಅಲ್ಲವೇ! `ಮೂಲ ಸೌಕರ್ಯ ಅಭಿವೃದ್ಧಿ~ ಅನ್ನುವುದು ರಸ್ತೆ, ನೀರು, ವಿದ್ಯುತ್. ವಸತಿಗಳನ್ನು ಒದಗಿಸುವುದು ಅಲ್ಲವೇ! `ಖಾಸಗಿಯವರ ಸಹಯೋಗದೊಡನೆ~ ಅಂದರೆ ಶ್ರಿಮಂತ ಕಂಪನಿಗಳ ಜೊತೆಗೂಡಿ, ಅವರಿಗೆ ಲಾಭವಾಗುವಂತೆ ಅನ್ನುವ ಅರ್ಥವಲ್ಲವೇ!

ನೆರವು ಅನ್ನುವ ಬದಲಾಗಿ ಸಹಾಯ ಹಸ್ತ ಅನ್ನುವುದು, ಏನೂ ತೀರ್ಮಾನವಾಗಿಲ್ಲ ಅನ್ನುವ ಬದಲಾಗಿ `ಸರ್ಕಾರದ ಪರಿಶೀಲನೆಯಲ್ಲಿದೆ~ ಅನ್ನುವುದು, `ಒಕ್ಕಲೆಬ್ಬಿಸುವುದು~ ಅನ್ನುವ ಬದಲಾಗಿ `ಪುನರ್ವಸತಿ ಕಲ್ಪಿಸುತ್ತೇವೆ~ ಅನ್ನುವುದು, ಇಂಥ ಉದಾಹರಣೆಗಳು ನಿಮಗೇ ನೂರಾರು ಹೊಳೆಯುತ್ತವೆ. ಜನರನ್ನು ಇಂಪ್ರೆಸ್ ಮಾಡುವುದಕ್ಕೆ, ಹೆದರಿಸುವುದಕ್ಕೆ, ಗೊಂದಲಕ್ಕೆ ಗುರಿಮಾಡುವುದಕ್ಕೆ, ಜವಾಬ್ದಾರಿಯಿಂದ ನುಣುಚಿಕೊಳ್ಳುವುದಕ್ಕೆ ರಾಜಕಾರಣದ ಭಾಷೆ ಇಂಥ ಸ್ವರೂಪವನ್ನು ತಾಳುತ್ತದೆ. ರಾಜಕಾರಣಿಗಳ ಹಾಗೇ ಲಾಯರುಗಳು, ಡಾಕ್ಟರುಗಳು, ಶಿಕ್ಷಣವೇತ್ತರು ಭಾಷೆಯನ್ನು ಅನೇಕ ಬಾರಿ ಹೀಗೇ ಬಳಸುತ್ತಾರೆ. 

ಅನಗತ್ಯವಾದ ಪದಗಳನ್ನು ಬಳಸುವುದು, ಒಂದು ಮಾತನಾಡುವ ಬದಲು ಒಂಬತ್ತು ಮಾತಾಡುವುದು ರಾಜಕಾರಣಿಗಳ ಭಾಷೆಯ ಇನ್ನೊಂದು ಪ್ರಮುಖ ತಂತ್ರ. ಇದರಿಂದ ಹೇಳುತ್ತಿರುವ ಮಾತು ಪರಿಣಾಮಕಾರಿ ಅನ್ನುವ ಭ್ರಮೆ ರಾಜಕಾರಣಿಗಳಿಗೆ ಇರುತ್ತದೆ, ಆದರೆ ಇದರಿಂದ ಅವರ ಮಾತನ್ನು ಅರ್ಥಮಾಡಿಕೊಳ್ಳುವುದಕ್ಕೆ ತೊಡಕಾಗುತ್ತದೆ.

`ಅದ್ಭುತ ಯುವಶಕ್ತಿಯನ್ನು ಸಾಮಾಜಿಕ ಶಕ್ತಿಯನ್ನಾಗಿ ಮಾಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಯುವ ನೀತಿ ರೂಪಿಸಲು ಉದ್ದೇಶಿಸಲಾಗಿದೆ. ಹೋರಾಟ-ಸಾಧನೆ-ತ್ಯಾಗದ ಪರಿಕಲ್ಪನೆಯಲ್ಲಿ ಯುವ ಪಡೆಯನ್ನು ಸಜ್ಜುಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಚಿಂತಕರ ಹಾಗೂ ಜನರ ಅಭಿಪ್ರಾಯಗಳನ್ನು ಪಡೆಯಲಾಗುವುದು. ಮುಂದಿನ ಬಜೆಟ್‌ನಿಂದ ಯುವಜನರಿಗಾಗಿ ವಿಶೇಷ ಅನುದಾನ ನೀಡಲಾಗುವುದು~ ಇದು ದಿನಾಂಕ 24-4-2012 `ಪ್ರಜಾವಾಣಿ~ಯಲ್ಲಿ ಬಂದಿರುವ ವರದಿಯ ಸಾಲುಗಳು.

ಮುಖ್ಯಮಂತ್ರಿಯವರ ಮಾತು ಅರ್ಥಪೂರ್ಣವೆಂಬಂತೆ ಕಂಡರೂ ಉತ್ತರವಿಲ್ಲದ ಪ್ರಶ್ನೆಗಳನ್ನು ಹುಟ್ಟಿಸುವ, ಅರ್ಥ ರಹಿತ ಮಾತಿನ ಉದಾಹರಣೆಯಲ್ಲವೇ? ಯುವಕರು ಅಂದರೆ ಹಳ್ಳಿಗಾಡಿನವರೋ, ನಗರವಾಸಿ ಸುಶಿಕ್ಷಿತರೋ, ನಿರುದ್ಯೋಗಿ ಯುವಕರೋ, ಕಟ್ಟಡದ ಕೆಲಸಗಾರರಾಗಿ ಕೆಲಸ ಮಾಡುವವರೋ, ಬೇಸಾಯ ಮಾಡಿ ಬೇಸತ್ತವರೋ..

.ಎಲ್ಲ ಬಗೆಯ ಯುವಕರಿಗೂ ಅನ್ವಯವಾಗುವಂಥ ನೀತಿ ಇರಲು ಸಾಧ್ಯವೇ... ಹೋರಾಟ, ಸಾಧನೆ, ತ್ಯಾಗ ಇವನ್ನು ಇಡೀ ಯುವ ಸಮೂಹಕ್ಕೆ ಅನ್ವಯಿಸುವುದು ಸಾಧ್ಯವೇ...

ಚಿಂತಕರೆಲ್ಲ ಸಾಮಾನ್ಯವಾಗಿ ವಯೋವೃದ್ಧರೇ ಆದುದರಿಂದ ಇಂದಿನ ಯುವಕರ ಸಮಸ್ಯೆಗೆ ಅವರು ಯಾವ ಪರಿಹಾರ ಸೂಚಿಸಬಹುದು... ಅಂಥ ಸಮಿತಿಯಲ್ಲಿ ಯುವಕರ ಪ್ರಾತಿನಿಧ್ಯ ಇರುತ್ತದೆಯೇ...ಇದುವರೆಗೂ ಯುವ ನೀತಿ ಇರಲಿಲ್ಲವೇ... ಯುವಜನ ಸೇವೆ ಅನ್ನುವ ಇಲಾಖೆ ಇಷ್ಟೂ ವರ್ಷ ಯಾವ ನೀತಿಯೂ ಇಲ್ಲದೆ ಕೆಲಸಮಾಡುತ್ತಿತ್ತೇ... ಬಜೆಟ್‌ನಲ್ಲಿ ಹಣ ತೆಗೆದಿಟ್ಟರೆ ಹೋರಾಟ, ಸಾಧನೆ, ತ್ಯಾಗಗಳ ಆದರ್ಶ ಬೆಳೆದೀತೇ...

ಪ್ರಶ್ನೆಗಳನ್ನು ಕೇಳುವುದೇ ಅಸಂಬದ್ಧ ಅನ್ನಿಸುತ್ತದಲ್ಲವೇ? ಅಸಂಬದ್ಧ ಭಾಷೆಯನ್ನು ಬಳಸದೆ ಇದ್ದರೆ ರಾಜಕಾರಣಿಗಳ ಅಧಿಕಾರ ಉಳಿಯದು.  ಅಸಂಬದ್ಧತೆಯನ್ನು ಪ್ರಶ್ನಿಸಬೇಕಾದವರು ನಾವು, ನೀವು.

 

ಗಾಳಿಯನ್ನೂ ಬಂಡೆಯಷ್ಟೇ ಅಚಲ ಎಂದು ನಂಬಿಸುವ ಉದ್ದೇಶದ ಭಾಷೆ ಅನ್ನುವುದು ಆರ‌್ವೆಲ್‌ನ ವಿವರಣೆ. ಭಾಷೆಯ ಬಗ್ಗೆ ಸೂಕ್ಷ್ಮತೆಯನ್ನು ಕಳಕೊಳ್ಳುವುದು ಸಮಾಜದ ಅವನತಿಯ ಮುಖ್ಯ ಲಕ್ಷಣ ಅನ್ನುತ್ತಾನೆ ಆರ‌್ವೆಲ್.

ಸ್ಪಷ್ಟವಾದ, ಪ್ರಾಮಾಣಿಕವಾದ, ಅರ್ಥವಾಗುವಂಥ ಸಂವಹನಕ್ಕಾಗಿ ರಾಜಕಾರಣಿಗಳು ಮತ್ತು ಎಲ್ಲ ಲೇಖಕರೂ ಮಾತುಗಾರರೂ ಅನುಸರಿಸಬೇಕಾದ ಕೆಲವು ನಿಯಮಗಳನ್ನು ಆರ‌್ವೆಲ್ ರೂಪಿಸಿದ್ದಾನೆ.

ಈಗಾಗಲೇ ನೀವು ಮುದ್ರಣದಲ್ಲಿ ಕಂಡಿರುವ ಯಾವುದೇ ರೂಪಕ, ಉಪಮೆ ಅಥವ ಅಲಂಕಾರವನ್ನು ಬಳಸಬೇಡಿ ಅನ್ನುವುದು ಮೊದಲ ನಿಯಮ. ನಾಡಿನ ಸರ್ವತೋಮುಖ ಏಳಿಗೆಗಾಗಿ; ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವುದಕ್ಕಾಗಿ, ಶಕ್ತಿ ಪ್ರದರ್ಶನ, ವ್ಯಕ್ತಿಗಿಂತ ರಾಷ್ಟ್ರ ಮುಖ್ಯ; ನಾನು ಪಕ್ಷದ ಶಿಸ್ತಿನ ಸಿಪಾಯಿ, ನಿಷ್ಠಾವಂತ ಕಾರ್ಯಕರ್ತ, ಸೂಕ್ತಕಾಲದಲ್ಲಿ ಸೂಕ್ತಕ್ರಮ, ವಚನಭಂಗ, ವಚನ ಪರಿಪಾಲನೆ, ಜನಪರ ಆಲೋಚನೆ, ಜನಪರ ಆಡಳಿತ, ಇಂಥ ಅಕ್ಷರಶಃ ನೂರಾರು ನುಡಿಗಟ್ಟುಗಳೇ ರಾಜಕಾರಣಿಗಳ ಮಾತಿನ ತುತ್ತುಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT