ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೂಫಿ ರೊಮಾನ್ಸ್’ ಮತ್ತು ಇತಿಹಾಸದ ಗ್ರಹಿಕೆ

Last Updated 17 ಫೆಬ್ರುವರಿ 2017, 7:24 IST
ಅಕ್ಷರ ಗಾತ್ರ

ಕಳೆದ ತಿಂಗಳ 27ರಂದು ಬಾಲಿವುಡ್ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಮತ್ತು ಅವರ ಚಿತ್ರತಂಡದ ಮೇಲೆ ಜೈಪುರದಲ್ಲಿ ಕರ್ಣಿಸೇನಾ ಎಂಬ ರಾಜಪೂತ ಸಂಘಟನೆಯೊಂದು ಹಲ್ಲೆ ಮಾಡಿತು. ಆಗ ಅಲಾವುದ್ದೀನ್ ಖಿಲ್ಜಿ ಮತ್ತು ರಾಣಿ ಪದ್ಮಿನಿಯರ ಜೀವನ ಆಧಾರಿತ ಐತಿಹಾಸಿಕ ಚಲನಚಿತ್ರ ‘ಪದ್ಮಾವತಿ’ಯ ಚಿತ್ರೀಕರಣವನ್ನು ಬನ್ಸಾಲಿ ನಡೆಸಿದ್ದರು.

ಕರ್ಣಿಸೇನಾವು ತನ್ನ ಹಿಂಸಾತ್ಮಕ ಚಟುವಟಿಕೆಗಳನ್ನು ಸಮರ್ಥಿಸಿಕೊಳ್ಳಲು ನೀಡಿದ ಕಾರಣವಿದು: ಕನಸಿನ ದೃಶ್ಯವೊಂದರಲ್ಲಿ ಪದ್ಮಿನಿ ಮತ್ತು ಅಲಾವುದ್ದೀನರನ್ನು ಪ್ರಣಯದ ಸನ್ನಿವೇಶದಲ್ಲಿ ಇರುವಂತೆ ಚಲನಚಿತ್ರದಲ್ಲಿ ಬನ್ಸಾಲಿ ತೋರಿಸುತ್ತಾರೆ. ಅಂತಹ ದೃಶ್ಯಗಳು ಚಿತ್ರದಲ್ಲಿ ಇಲ್ಲವೆನ್ನುವ ಸ್ಪಷ್ಟೀಕರಣವನ್ನು ಬನ್ಸಾಲಿ ಮತ್ತು ಚಿತ್ರದ ನಾಯಕಿ ದೀಪಿಕಾ ಪಡುಕೋಣೆಯವರು ನೀಡಿದರೂ ಅದನ್ನು ಕೇಳಲು ಯಾರೂ ಸಿದ್ಧರಿರಲಿಲ್ಲ.

‘ಪದ್ಮಾವತಿ’ ಚಿತ್ರದ ಚಿತ್ರಕಥೆಯನ್ನು ತಾನು ಪರಿಶೀಲಿಸಿ ಒಪ್ಪಿಗೆ ನೀಡಬೇಕೆನ್ನುವ ತನ್ನ ನಿಲುವನ್ನು ಕರ್ಣಿಸೇನಾ ಸಡಿಲಿಸಿಲ್ಲ. ಹಿಂದೂ ಆಗಿರುವ ಕಾರಣಕ್ಕಾಗಿ ಪದ್ಮಿನಿಯನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅಭಿಪ್ರಾಯಪಟ್ಟರು. ಇದಕ್ಕೆ ಪ್ರತಿಯಾಗಿ ಬಾಲಿವುಡ್‌ನ ಹಲವು ಪ್ರಮುಖರು ಬನ್ಸಾಲಿಯವರ ಮೇಲಿನ ಹಲ್ಲೆಯನ್ನು ಖಂಡಿಸಿದರು. ಈ ಮೊದಲು 2008ರಲ್ಲಿ ಫ್ರೆಂಚ್ ಒಪೆರಾ ತಂಡವೊಂದಕ್ಕೆ ‘ಪದ್ಮಾವತಿ’ ಶೀರ್ಷಿಕೆಯ ನೃತ್ಯರೂಪಕವನ್ನು ಬನ್ಸಾಲಿ ನಿರ್ದೇಶಿಸಿದ್ದರು.

ಇದಿಷ್ಟೂ ನಡೆದ ಘಟನೆ ಮತ್ತು ಅದಕ್ಕೆ ದೊರಕಿದ ಪ್ರತಿಕ್ರಿಯೆಗಳ ವಿವರ. ಇಂಗ್ಲಿಷ್‌  ಮಾಧ್ಯಮಗಳಲ್ಲಿ ಬನ್ಸಾಲಿಯವರ ಮೇಲಿನ ಹಲ್ಲೆಯ ಬಗ್ಗೆ ಒಂದಷ್ಟು ಚರ್ಚೆಯಾಯಿತು. ಅಲ್ಲಿ ಮುಖ್ಯವಾಗಿ ಎರಡು ಅಂಶಗಳು ಪ್ರಸ್ತಾಪಿತವಾದವು. ಮೊದಲನೆಯದು, ಬರಹಗಾರರು ಮತ್ತು ಚಲನಚಿತ್ರ ನಿರ್ಮಾಪಕ, ನಿರ್ದೇಶಕರು ತಮ್ಮ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಾಗ ತಮ್ಮ ಕೃತಿಗಳಿಗೆ ಹಿಂಸಾತ್ಮಕ ಪ್ರತಿಕ್ರಿಯೆ ಬರುವ ಆತಂಕವನ್ನು ಎದುರಿಸುತ್ತಿರುವುದು. ಇದಕ್ಕೆ ಕಲಾವಿದ- ಬರಹಗಾರರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಅಗತ್ಯ ಪ್ರಯತ್ನವೂ ಮತ್ತೆ ನಡೆಯಿತು.

ಮತ್ತೊಂದೆಡೆ ಈ ಘಟನೆಯ ಮತ್ತು ಇದರಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಪಾತ್ರಧಾರಿಗಳ, ಅದರಲ್ಲೂ ಪದ್ಮಿನಿಯ ಐತಿಹಾಸಿಕತೆಯ ಚರ್ಚೆಯೂ ಜರುಗಿತು. ಐತಿಹಾಸಿಕ ವಿದ್ಯಮಾನಗಳನ್ನು ನಾವು ಹೇಗೆ ಗ್ರಹಿಸಲು ಸಾಧ್ಯ ಎನ್ನುವತ್ತ ಬೆಳಕು ಚೆಲ್ಲುವ ಈ ಎರಡನೆಯ ಆಯಾಮವು ಅಭಿವ್ಯಕ್ತಿ ಸ್ವಾತಂತ್ರ್ಯದ ಚರ್ಚೆಗಿಂತ ಹೆಚ್ಚು ಕುತೂಹಲಕರವಾಗಿಯೂ ಮತ್ತು ಆಳವಾಗಿಯೂ ಸಾಗಿತು. ಹಾಗಾಗಿ ಇತಿಹಾಸದ ಗ್ರಹಿಕೆಯ ಪ್ರಶ್ನೆಯ ಕುರಿತಾದ ಕೆಲವು ಟಿಪ್ಪಣಿಗಳನ್ನು ಓದುಗರೊಡನೆ ಇಂದು ಹಂಚಿಕೊಳ್ಳಬಯಸುತ್ತೇನೆ.

ರಾಣಿ ಪದ್ಮಿನಿಯ ಬದುಕಿನ ವಿವರ ನಮ್ಮ ಜನಪ್ರಿಯ ಸ್ಮೃತಿಪಟಲದಲ್ಲಿ ಸಾಕಷ್ಟು ಭದ್ರವಾಗಿಯೇ ಮೂಡಿದೆ. ಪದ್ಮಿನಿ, ಚಿತ್ತೋರಿನ ರಾಜಾ ರತ್ನಸೇನನ ಮಡದಿ. ದೆಹಲಿಯ ಸುಲ್ತಾನ ಅಲಾವುದ್ದೀನ್‌ ಖಿಲ್ಜಿಯು ಚಿತ್ತೋರಿನ ಮೇಲೆ ದಾಳಿ ಮಾಡಿ, ಹಲವು ತಿಂಗಳ ನಂತರ ಅದನ್ನು ವಶಪಡಿಸಿಕೊಳ್ಳುವ ಸನ್ನಿವೇಶ ತಲೆದೋರಿದಾಗ, ಪದ್ಮಿನಿ ತನ್ನ ರಾಣಿವಾಸದ ಇತರರೊಡನೆ ಅಗ್ನಿಯನ್ನು ಪ್ರವೇಶಿಸಿ, ಸತಿಹೋದಳು. ಈ ವಿವರವನ್ನು ಹದಿನಾರನೆಯ ಶತಮಾನದ ಸೂಫಿ ಕವಿ ಮಲಿಕ್ ಮುಹಮದ್ ಜಯಸಿಯ ಕೃತಿ ‘ಪದ್ಮಾವತ್’ನಲ್ಲಿ ನಾವು ಮೊದಲು ಕಾಣುತ್ತೇವೆ. ವಾಸ್ತವದಲ್ಲಿ ಪದ್ಮಿನಿಯ ಮೊದಲ ಐತಿಹಾಸಿಕ ಉಲ್ಲೇಖವು ಸಹ ಆ ಕೃತಿಯಲ್ಲಿಯೇ ಇರುವುದು.

ಅಲಾವುದ್ದೀನನ ಆಸ್ಥಾನದಲ್ಲಿದ್ದ ಪ್ರಖ್ಯಾತ ಕವಿ ಅಮೀರ್ ಖುಸ್ರೌ ಪದ್ಮಿನಿಯ ಉಲ್ಲೇಖವನ್ನೇ ಮಾಡುವುದಿಲ್ಲ. ಚಿತ್ತೋರಿನ ದಾಳಿಯನ್ನು ದಾಖಲಿಸುವ ಖುಸ್ರೌ ಆ ಸಂದರ್ಭದಲ್ಲಿ ಅಲ್ಲಿನ ರಾಜಪೂತ ಮಹಿಳೆಯರು ಸತಿ ಹೋದರು ಎಂದು ಪ್ರಸ್ತಾಪಿಸುವುದಿಲ್ಲ. ಆದರೆ ಅಲಾವುದ್ದೀನನು ರಣತಂಬೋರನ್ನು ವಶಪಡಿಸಿಕೊಂಡ ನಂತರ ಅಲ್ಲಿ ನಡೆದ ಸತಿ ಘಟನೆಯನ್ನು ಖುಸ್ರೌ ದಾಖಲಿಸುತ್ತಾನೆ. ಆದುದರಿಂದಲೇ ಮಧ್ಯಕಾಲೀನ ಉತ್ತರ ಭಾರತದ ಬಗ್ಗೆ ಬರೆಯುವ ಬಹುತೇಕ ಇತಿಹಾಸಕಾರರು ಪದ್ಮಿನಿ ಸತಿ ಘಟನೆಯನ್ನು ತಿರಸ್ಕರಿಸುತ್ತಾರೆ. ಉದಾಹರಣೆಗೆ ಸತೀಶ್ ಚಂದ್ರ ಮತ್ತು ಗೌರಿ ಶಂಕರ್ ಓಝಾರನ್ನು ಇಲ್ಲಿ ಹೆಸರಿಸಬಹುದು.

ಖುಸ್ರೌ ನಂತರದ ಕವಿಗಳಾಗಲಿ ಅಥವಾ ದೆಹಲಿಯ ಸುಲ್ತಾನರ ಆಸ್ಥಾನಗಳಲ್ಲಿದ್ದ ಚರಿತ್ರಕಾರರಾಗಲಿ (ಕೋರ್ಟ್ ಕ್ರಾನಿಕ್ಲರ್ಸ್) ಪದ್ಮಿನಿಯ ಉಲ್ಲೇಖ ಮಾಡಲಿಲ್ಲ ಅಥವಾ ಚಿತ್ತೋರಿನ ದಾಳಿಯ ನಂತರದ ಸತಿ (ಜೌಹರ್) ಬಗ್ಗೆ ಪ್ರಸ್ತಾಪಿಸಲಿಲ್ಲ. ಹಾಗೆಂದ ಮಾತ್ರಕ್ಕೆ ಆ ಘಟನೆ ನಡೆಯಲೇ ಇಲ್ಲ ಎನ್ನುವ ಸಂಪೂರ್ಣ (ಅಬ್ಸಲ್ಯೂಟ್) ನಿರ್ಣಯಕ್ಕೆ ಬರಲು ಅಸಾಧ್ಯ. ಅಲಾವುದ್ದೀನನ ಕಾಲದಿಂದ (1296- 1316) 250  ವರ್ಷಗಳ ನಂತರದಲ್ಲಿ ಜಯಸಿಯು ‘ಪದ್ಮಾವತ್’ ಕಾವ್ಯವನ್ನು 1540ರ ಸುಮಾರಿನಲ್ಲಿ ರಚಿಸಿದ. ಅವನೇ ಪದ್ಮಿನಿಯ ಕುರಿತಾಗಿ ಮತ್ತು ಚಿತ್ತೋರಿನಲ್ಲಿ ನಡೆದಿರಬಹುದಾದ ಸತಿಯ ಬಗ್ಗೆ ಮೊದಲು ಬರೆದವನು.

ಇಲ್ಲಿ ನೆನಪಿಡಬೇಕಾದ ಎರಡು ಅಂಶಗಳಿವೆ. ಮೊದಲಿಗೆ, ಇತಿಹಾಸದಲ್ಲಿ ನಾನು ಮೇಲೆ ಪ್ರಸ್ತಾಪಿಸಿದ ರೀತಿಯ ಸಂಪೂರ್ಣ ನಿರ್ಣಯಗಳನ್ನು ಮಾಡುವುದು ಬಹುತೇಕ ಸಂದರ್ಭಗಳಲ್ಲಿ ಅಸಾಧ್ಯ. ಹಾಗಾಗಿ ಅಂತಹ ಸಂದರ್ಭಗಳಲ್ಲಿ ಲಭ್ಯ ಐತಿಹಾಸಿಕ ಆಧಾರಗಳನ್ನು ಪರಿಶೀಲಿಸಿ, ಸಂಭವನೀಯ ನಿರ್ಣಯಗಳನ್ನು ಮಾಡಬಹುದು. ಸತೀಶ್ ಚಂದ್ರ ಮತ್ತಿತರರು ನಮಗೆ ನೀಡಿರುವುದು ಕೂಡ ಇಂತಹ ಸಂಭವನೀಯ ನಿರ್ಣಯ ಮಾತ್ರ. ಹೊಸ ಆಧಾರಗಳು ದೊರಕಿದರೆ ಈ ನಿರ್ಣಯಗಳು ಬದಲಾಗುತ್ತವೆ.

ನಾನು ಮೇಲೆ ಹೇಳಿದ ತಾತ್ವಿಕ ಅಂಶ ಒಂದೆಡೆಯಿರಲಿ. ನಮ್ಮನ್ನು ಕಾಡುವ ಎರಡನೆಯ ಅಂಶವು ಈ ಮುಂದಿನ ಪ್ರಶ್ನೆ: ಕವಿ ಜಯಸಿಯು ಯಾವ ಆಧಾರದ ಮೇಲೆ ತನ್ನ ‘ಪದ್ಮಾವತ್’ ಕಾವ್ಯವನ್ನು ರಚಿಸಿದ? ಈಗ ನಮಗೆ ಲಭ್ಯವಿರುವ ಯಾವ ಲಿಖಿತ ಆಕರದಲ್ಲಿಯೂ ಪದ್ಮಿನಿಯ ಉಲ್ಲೇಖ ಇಲ್ಲದಿರುವ ಕಾರಣ ಜಯಸಿಗೆ ಪದ್ಮಿನಿಯ ಕಥೆಯು ನಮಗೆ ಇನ್ನೂ ದೊರಕಿರದ ಲಿಖಿತ ಮೂಲದಿಂದ ಇಲ್ಲವೆ ಮೌಖಿಕ ಕಥನಗಳಿಂದ ದೊರಕಿರಬಹುದು. ಎರಡನೆಯ ಸಾಧ್ಯತೆಯೇ ಹೆಚ್ಚು ಸಂಭವನೀಯ. ಇಂತಹ ಮೌಖಿಕ ಕಥನಗಳಲ್ಲಿ ಹಲವಾರು ಕಥೆಗಳ ಎಳೆಗಳು ಸೇರಿ ಪದ್ಮಿನಿಯ ಕಥೆಯೂ ರೂಪುಗೊಂಡಿರುವ ಸಾಧ್ಯತೆಯಿದೆ. ಅಂದರೆ ಚಿತ್ತೋರಿನಲ್ಲಿ ಸತಿ ಘಟನೆ ನಡೆಯದೆ ಇದ್ದರೂ, ಇತರ ಸನ್ನಿವೇಶಗಳಲ್ಲಿ ನಡೆದಿರಬಹುದಾದ ಇಂತಹ ಘಟನೆಗಳ ವಿವರವನ್ನು ಪದ್ಮಿನಿಯ ಕಥೆಗೆ ಆರೋಪಿಸಿರಬಹುದು. ಈ ಯಾವ ವಿಚಾರಗಳನ್ನೂ ನಮಗೆ ನಿರ್ದಿಷ್ಟವಾಗಿ, ನಿರ್ಣಾಯಕವಾಗಿ ಹೇಳಲು ಸಾಧ್ಯವಿಲ್ಲ.

ಹೀಗೆ ಮೌಖಿಕ ಪರಂಪರೆಗಳಿಂದ ಸ್ಫೂರ್ತಿ ಪಡೆದು, ಕವಿ ಜಯಸಿಯು ರಚಿಸಿರುವ ಕಾವ್ಯವಾದರೂ ಯಾವ ಬಗೆಯದು? ಅದರ ಸ್ವರೂಪವೇನು? ಇದು ನಿಜವಾಗಿಯೂ ಮುಖ್ಯವಾದ ಪ್ರಶ್ನೆ. ಸಂಸ್ಕೃತ ಮತ್ತು ಪರ್ಶಿಯನ್ ಕಾವ್ಯ ಪರಂಪರೆಗಳ ಪ್ರಭಾವದಿಂದ ರೂಪುಗೊಳ್ಳುವ ಹಿಂದವಿ ಕಥನ ಪರಂಪರೆಗೆ ಕವಿ ಜಯಸಿ ಸೇರಿದವನು. ಇವನ ಸಾಲಿಗೆ ಸೇರುವ ಇತರ ಪ್ರಮುಖ ಕವಿ-ಕೃತಿಗಳೆಂದರೆ ದೌದ್ (‘ಚಾಂದಾಯನ’, 1379), ಖುತ್‍ಬಾನ್ (‘ಮೃಗವತಿ’, 1503), ಮಂಜನ್ (‘ಮಧುಮಾಲತಿ’, 1545).  ಮಧ್ಯಕಾಲೀನ ಹಿಂದವಿ ಸೂಫಿ ಪರಂಪರೆಗಳನ್ನು ಅಭ್ಯಸಿಸಿರುವ ಆದಿತ್ಯ ಬೆಹ್ಲ್ ಹೇಳುವಂತೆ, ಈ ಪರಂಪರೆಗಳ ಮೇಲೆ ಪರ್ಶಿಯನ್ ಕಥನ ಪರಂಪರೆಗಳ ಜೊತೆಗೆ ರಸ ಸಿದ್ಧಾಂತದ, ಯೋಗ ಮತ್ತು ತಂತ್ರ ಸಂಪ್ರದಾಯಗಳ ಆಧ್ಯಾತ್ಮಿಕ ಆಚರಣೆಗಳ ಪ್ರಭಾವವಿದೆ.

ಇವೆಲ್ಲವೂ ಒಳಗೊಂಡು 13- 14ನೆಯ ಶತಮಾನಗಳಲ್ಲಿ ಹೊರಹೊಮ್ಮುವ ರಸ ಆಧಾರಿತ ಹಿಂದವಿ ಕಾವ್ಯಮೀಮಾಂಸೆಯು ಸೂಫಿ ಆಧ್ಯಾತ್ಮಿಕ ಸಾಧನೆಗಳಿಗೆ ಬಳಕೆಯಾಗುತ್ತಿತ್ತು ಎಂದೂ ಬೆಹ್ಲ್ ವಾದಿಸುತ್ತಾರೆ. ಇಲ್ಲಿ ಗಮನಾರ್ಹ ಅಂಶವೆಂದರೆ, ಸಾಂಪ್ರದಾಯಿಕ ಇಸ್ಲಾಮ್ ಧರ್ಮದ ಮೌಲ್ವಿಗಳು ಇಂತಹ ಕಲ್ಪನೆ-ಆಚರಣೆಗಳನ್ನು ತಿರಸ್ಕರಿಸುತ್ತಿದ್ದರಲ್ಲದೆ ಸುಲ್ತಾನರ ಮೇಲೆ ಸೂಫಿ ಪ್ರಭಾವ ತಗ್ಗಿಸುವಂತೆ ಒತ್ತಡ ಹೇರುತ್ತಿದ್ದರು. ಅಷ್ಟೇ ಏಕೆ, ಈ ಸೂಫಿ ಕಥನಕಾವ್ಯಗಳ ಪ್ರಾರಂಭದಲ್ಲಿ ದೇವರು ಮತ್ತು ಸಂತರನ್ನು ವರ್ಣಿಸುವ ಭಾಗಗಳನ್ನು ಗಮನಿಸಿ. ಅಲ್ಲಾನ ಮಹತ್ವವನ್ನು ಅಭಿವ್ಯಕ್ತಿಸುವ ಭಾಗಗಳಲ್ಲಿ ಕೃಷ್ಣನ ಹೆಸರನ್ನು ಸೇರಿಸಿದರೆ ಹೆಚ್ಚಿನ ವ್ಯತ್ಯಾಸ, ಅಪಚಾರಗಳು ಆಗುವುದಿಲ್ಲ. ಅಷ್ಟರ ಮಟ್ಟಿಗೆ ಅಲ್ಲೊಂದು ಸಂಕೀರ್ಣ, ಬಹುಧರ್ಮೀಯ ಸಂವೇದನೆ ರೂಪುಗೊಂಡಿದೆ. ‘ಪದ್ಮಾವತ್’ ಕಾವ್ಯವನ್ನೇ ನೋಡಿದರೆ, ಅದರಲ್ಲಿ ಅಲಾವುದ್ದೀನ ಆಕಸ್ಮಿಕ ಪಾತ್ರದಂತೆಯೇ ಕಾಣುತ್ತಾನೆ.

ಕಥನದ ಕೇಂದ್ರದಲ್ಲಿ ಸಿಂಹಳ ದ್ವೀಪದ ರಾಜಕುಮಾರಿ ಮತ್ತು ಪರಿಪೂರ್ಣ ನಾರಿಯ ಪ್ರತಿರೂಪವಾದ ಪದ್ಮಿನಿಯಿದ್ದಾಳೆ. ಅವಳ ಬಳಿಯಿದ್ದ ಮಾತನಾಡುವ ಹೀರಾಮಣಿಯೆನ್ನುವ ಗಿಣಿಯು ಒಮ್ಮೆ ಚಿತ್ತೋರಿನ ರಾಜ ರತ್ನಸೇನನಿಗೆ ಅವಳ ಗುಣ-ರೂಪಗಳ ವರ್ಣನೆಯನ್ನು ಮಾಡುತ್ತದೆ. ಗಿಣಿಯ ಮಾತುಗಳಿಂದ ಸಂಪೂರ್ಣವಾಗಿ ಆಕರ್ಷಿತನಾದ ರತ್ನಸೇನ ಹಲವಾರು ಸಾಹಸಗಳು ಮತ್ತು ಯುದ್ಧಗಳ ನಂತರ ಪದ್ಮಿನಿಯನ್ನು ಮದುವೆಯಾಗುತ್ತಾನೆ ಹಾಗೂ ಚಿತ್ತೋರಿಗೆ ಹಿಂದಿರುಗುತ್ತಾನೆ. ಇಲ್ಲಿಯವರೆಗಿನ ಕಥೆ ನಮ್ಮ ದೇಶದ ಸಾವಿರಾರು ಜನಪದ ಕಥೆಗಳನ್ನೇ ಹೋಲುತ್ತದೆ.

ಕಥೆಯ ಮುಂದುವರಿಕೆಗೆ ಕಾರಣಕರ್ತನಾಗುವವನು ರಾಘವ ಚೈತನ್ಯನೆಂಬ ಮಾಂತ್ರಿಕ. ಅವನ ಚಟುವಟಿಕೆಗಳಿಂದ ಬೇಸತ್ತ ರತ್ನಸೇನನು ರಾಘವನನ್ನು ಚಿತ್ತೋರಿನಿಂದ ಓಡಿಸುತ್ತಾನೆ. ಕೋಪಗೊಂಡ ಮಾಂತ್ರಿಕ ಅಲಾವುದ್ದೀನನಿಗೆ ಪದ್ಮಿನಿಯ ಸೌಂದರ್ಯ ವರ್ಣನೆಯನ್ನು ಮಾಡಿ, ಅವಳನ್ನು ಪಡೆಯಲು ಚಿತ್ತೋರಿನ ಮೇಲೆ ದಾಳಿ ಮಾಡುವಂತೆ ಪ್ರೇರೇಪಿಸುತ್ತಾನೆ. ಅಲಾವುದ್ದೀನನ ವಶವಾಗಬಾರದೆಂದು ರಾಣಿಯು ಸತಿಹೋಗುತ್ತಾಳೆ.

‘ಪದ್ಮಾವತ್’ನ ಕಡೆಯಲ್ಲಿ ಅಲಾವುದ್ದೀನನ ವಿಜಯವಿದ್ದರೂ, ಅದರ ರಚನೆಯ ಉದ್ದೇಶವು ಅಲಾವುದ್ದೀನನ ಸಾಧನೆಗಳನ್ನು ಶ್ಲಾಘಿಸುವುದಾಗಿರುವಂತೆ ತೋರುವುದಿಲ್ಲ. ಇದು ರತ್ನಸೇನ- ಪದ್ಮಿನಿಯರ ಪ್ರೇಮವನ್ನು ಹಿಡಿದಿಡುವ ಸೂಫಿ ರೊಮಾನ್ಸ್. ಇಲ್ಲಿನ ಸತಿಯ ಕಥೆಯನ್ನು ಅಕ್ಷರಶಃ ಸತ್ಯವೆಂದು ಓದುವುದು ಕಷ್ಟ. ‘ಪದ್ಮಾವತ್’ನಂತಹ ಕಾವ್ಯಗಳ ಓದು ಹಾಗೂ ಮಧ್ಯಕಾಲೀನ ಇತಿಹಾಸದ ಪುನಾರಚನೆಗಳೆರಡೂ ನಮ್ಮಿಂದ ಮತ್ತಷ್ಟು ಸೂಕ್ಷ್ಮತೆಯನ್ನು ಬಯಸುತ್ತವೆ ಎನ್ನುವುದು ಮಾತ್ರ ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT