ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಕೆಸರಿನಲ್ಲಿ ಮಿಂದೆದ್ದ ಪುಳಕ, ಮಣ್ಣಿನ ಸಂಬಂಧ ಬೆಸೆದ ಸಂಭ್ರಮ

ಮಾರಿಕಾಂಬಾ ದೇವಾಲಯದಿಂದ ಕೆಸರು ಗದ್ದೆ ಓಟ, ಹಗ್ಗ ಜಗ್ಗಾಟ ಸ್ಪರ್ಧೆ
Last Updated 14 ಅಕ್ಟೋಬರ್ 2018, 14:20 IST
ಅಕ್ಷರ ಗಾತ್ರ

ಶಿರಸಿ: ಕಾಲುದಾರಿಯಲ್ಲಿ ಸಾಗುವಾಗ ರಸ್ತೆ ಹೊಂಡದ ಕೆಸರು ನೀರನ್ನು ಹಾರಿಸಿ ಹೋದ ವಾಹನದ ಮೇಲೆ ಸಿಡಿಮಿಡಿಗೊಂಡವರು, ಇಂದು ಕೆಸರು ಗದ್ದೆಗೆ ಇಳಿದು ಸಂಭ್ರಮಿಸಿದರು. ಮೈ–ಮುಖಕ್ಕೆ ಕೆಸರು ಸಿಡಿಸಿಕೊಂಡು ಓಡಿದರು, ಹಗ್ಗ ಜಗ್ಗಿದರು. ಆಯತಪ್ಪಿದ ಬೀಳುವ ಈ ಕೆಸರು ಗದ್ದೆಯಲ್ಲಿ ನೀರಿನ ಕೊಡ ಹೊತ್ತು ನಡೆದರು.

ಶರನ್ನವರಾತ್ರಿಗೆ ಪ್ರತಿವರ್ಷ ವಿವಿಧ ಸ್ಪರ್ಧೆಗಳನ್ನು ನಡೆಸುವ ಇಲ್ಲಿನ ಮಾರಿಕಾಂಬಾ ದೇವಾಲಯವು ಇದೇ ಮೊದಲ ಬಾರಿಗೆ ಕೆಸರು ಗದ್ದೆಯಲ್ಲಿ ಓಟ, ವಾಲಿಬಾಲ್, ಹಗ್ಗ ಜಗ್ಗಾಟ, ನೀರಿನ ಕೊಡ ಹೊತ್ತು ಓಡುವ ಸ್ಪರ್ಧೆ ಆಯೋಜಿಸಿತ್ತು. ಬಹು ನಿರೀಕ್ಷಿತ ಈ ಸ್ಪರ್ಧೆ ನೋಡಲು ಸಹಸ್ರಾರು ಜನರು ಸೇರಿದ್ದರು.

ಮೊಣಕಾಲಿನ ತನಕ ಮುಳುಗುವ ಕೆಸರಿನಲ್ಲಿ ಇಳಿದು ಯುವಕ–ಯುವತಿಯರು, ಮಕ್ಕಳು, ಹಿರಿಯರು ಇಳಿದು ಭಾನುವಾರದ ಖುಷಿ ಅನುಭವಿಸಿದರು. ‘ಮೊದಲ ಬಾರಿಗೆ ಕೆಸರು ಗದ್ದೆ ಕೀಡೆಯಲ್ಲಿ ಭಾಗವಹಿಸಿದ್ದು ಖುಷಿ ಕೊಟ್ಟಿದೆ. ಶಾಲಾ ದಿನಗಳ ನಂತರ ಈಗಲೇ ಕ್ರೀಡೆಯಲ್ಲಿ ಭಾಗವಹಿಸಿದ್ದು. ಪ್ರತಿವರ್ಷ ಇಂತಹ ಕ್ರೀಡೆ ನಡೆಯಬೇಕು’ ಎಂದು ಸ್ಪರ್ಧಿ ಮಮತಾ ಅಭಿಪ್ರಾಯ ವ್ಯಕ್ತಪಡಿಸಿದರು.

ಆಡಳಿತ ಮಂಡಳಿಯ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ, ’ಮಾನವ ಮತ್ತು ಮಣ್ಣಿನ ನಡುವಿನ ಸಂಬಂಧ ಗಟ್ಟಿಯಾಗಬೇಕು. ಜನಪದ ಇತಿಹಾಸವಿರುವ ಮಾರಿಕಾಂಬಾ ದೇವಾಲಯದಿಂದ ಜನಪದ ಕ್ರೀಡೆ ರಕ್ಷಣೆಯಾಗಬೇಕು. ದೇವಾಲಯದ ರೈತ ಬಾಬುದಾರರಿಗೆ ಮನರಂಜನೆ ಸಿಗಬೇಕು ಎಂಬ ಆಶಯದಿಂದ ಈ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು’ ಎಂದರು. ದೇವಾಲಯದ ಆಡಳಿತ ಮಂಡಳಿ ಉಪಾಧ್ಯಕ್ಷ ಮನೋಹರ ಮಲ್ಮನೆ, ಸದಸ್ಯರು ಹಾಜರಿದ್ದರು.

ಬಹುಮಾನ ವಿಜೇತರು
ಪುರುಷರ 80 ಮೀ ಓಟದಲ್ಲಿ ಅರ್ಜುನ್ ಜೋಗಳೇಕರ ಪ್ರಥಮ, ಪ್ರವೀಣ ನಾಗೇಕರ್ ದ್ವಿತೀಯ, ಶ್ರೀಧರ ದೇವಾಡಿಗ ತೃತೀಯ, ಹಗ್ಗ ಜಗ್ಗಾಟದಲ್ಲಿ ಎಂ.ಆರ್. ಬ್ರದರ್ಸ್‌ ತಂಡ ಪ್ರಥಮ, ಗೋ ರಕ್ಷಕ ತಂಡ ದ್ವಿತೀಯ, ಪುರುಷರ ವಾಲಿಬಾಲ್‌ನಲ್ಲಿ ಮಾರಿಕಾಂಬಾ ತಂಡ ಪ್ರಥಮ, ಶಿವಂ ತಂಡ ದ್ವಿತೀಯ, ಮಹಿಳೆಯರ 40 ಮೀ ಓಟದಲ್ಲಿ ಗೀತಾ ನಾಯ್ಕ ಪ್ರಥಮ, ವೀಣಾ ಜಾಧವ, ಸುಮಾ ಜಡೆ ದ್ವಿತೀಯ, ಸಾವಿತ್ರಿ ಪಟಗಾರ ತೃತೀಯ, ಕೊಡ ಹೊತ್ತು ಓಡುವ ಸ್ಪರ್ಧೆಯಲ್ಲಿ ಅರುಣಾ ಗೌಡ ಪ್ರಥಮ, ಲಲಿತಾ ಲಮಾಣಿ ದ್ವಿತೀಯ, ಪೂರ್ಣಿಮಾ ಪಿ.ಸಿ ತೃತೀಯ, ಮಹಿಳೆಯರ ವಾಲಿಬಾಲ್‌ನಲ್ಲಿ ಪ್ರಭಾ ಹೆಗಡೆ ತಂಡ ಪ್ರಥಮ, ಸ್ಕೊಡ್‌ವೆಸ್ ತಂಡ ದ್ವಿತೀಯ, ರಿಲೆಯಲ್ಲಿ ವಿಜಯಲಕ್ಷ್ಮಿ ಸಂಗಡಿಗರು ಪ್ರಥಮ, ಪ್ರಭಾ ಹೆಗಡೆ ಸಂಗಡಿಗರು ದ್ವಿತೀಯ ಮತ್ತು ಹಗ್ಗ ಜಗ್ಗಾಟದಲ್ಲಿ ಕವಿತಾ ಓವಿಕೊಪ್ಪ ಸಂಗಡಿಗರು ಪ್ರಥಮ, ಸ್ಕೊಡ್‌ವೆಸ್ ಸಂಗಡಿಗರು ದ್ವಿತೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT