ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pv Web Exclusive: ’ಚಪ್ಪಾಳೆ ತಟ್ಟುವ’ ಕೈಗಳಲ್ಲಿ ಕಾಮಧೇನು!

ಹೈನುಗಾರಿಕೆಯಲ್ಲಿ ಯಶಸ್ವಿಯಾದ ತೃತೀಯ ಲಿಂಗಿಗಳು
Last Updated 28 ಸೆಪ್ಟೆಂಬರ್ 2020, 8:06 IST
ಅಕ್ಷರ ಗಾತ್ರ
ADVERTISEMENT
""
""
""

ಟ್ರಾಫಿಕ್ ಸಿಗ್ನಲ್‌ಗಳಲ್ಲಿ, ರಸ್ತೆಗಳಲ್ಲಿ ಧುತ್ತನೆ ಎದುರಾಗಿ ಚಪ್ಪಾಳೆ ತಟ್ಟುತ್ತಾ ಭಿಕ್ಷೆ ಬೇಡುತ್ತಿದ್ದ ಕೈಗಳೀಗ ಕೊಟ್ಟಿಗೆಯಲ್ಲಿ ಹಸುಗಳ ಕೆಚ್ಚಲಿನಲ್ಲಿ ಹಾಲು ಕರೆಯುತ್ತವೆ. ರಸ್ತೆ ಬದಿ, ಹೈವೇಗಳಲ್ಲಿ ಸಿಂಗರಿಸಿಕೊಂಡು ಗಿರಾಕಿಗಳಿಗಾಗಿ ಕಾಯುತ್ತಿದ್ದ ಅವರೀಗ ಅಚ್ಚುಕಟ್ಟಾಗಿ ಹುಲ್ಲು ಕೊಯ್ದು, ರಾಸುಗಳಿಗೆ ಮೇವುಣಿಸಿ, ಅವುಗಳ ಮೈದಡುವುತ್ತಾರೆ...

ತೃತೀಯಲಿಂಗಿಗಳು, ಮಂಗಳ ಮುಖಿಯರು, ಟ್ರಾನ್ಸ್ ಜೆಂಡರ್ಸ್, ಲಿಂಗತ್ವ ಅಲ್ಪಸಂಖ್ಯಾತರು... ಹೀಗೆ ನಾನಾ ಹೆಸರುಗಳಲ್ಲಿ ಕರೆಯಲಾಗುವ ಈ ಸಮುದಾಯ, ಹೈನುಗಾರಿಕೆಯ ಮೂಲಕ ಹೊಸ ಬದುಕಿನತ್ತ ತೆರೆದುಕೊಂಡಿದೆ.

ಕೋಲಾರ ಬೈಪಾಸ್‌ನ ಕೋಗಿಲಹಳ್ಳಿಯ ಸಿದ್ಧಾರ್ಥ ಡಾಬಾದ ಬಳಿಯಲ್ಲಿ ಹತ್ತು ಮಂದಿ ತೃತೀಯಲಿಂಗಿಗಳು ಕಟ್ಟಿಕೊಂಡಿರುವ ‘ಸಂಕಲ್ಪ’ ಟ್ರಸ್ಟ್ ಸ್ವಾವಲಂಬನೆಯ ಬದುಕಿಗೆ ನಾಂದಿ ಹಾಡಿದೆ. ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮ ಮತ್ತು ಸರ್ಕಾರೇತರ ಸಂಸ್ಥೆಗಳ ಮೂಲಕ ಹೈನುಗಾರಿಕೆಯಲ್ಲಿ ತರಬೇತಿ ಪಡೆದುಕೊಂಡ ಹತ್ತು ಮಂದಿ ತೃತೀಯಲಿಂಗಿಗಳು ತಾವೇ ಹಸು ಸಾಕಿ, ಹಾಲಿನ ಡೈರಿಗೆ ಹಾಲು ಪೂರೈಸುತ್ತಿರುವ ಯಶಸ್ವಿಗಾಥೆ ಇದು.

ಶುರುವಾಗಿದ್ದು ಹೇಗೆ?

ಬೆಂಗಳೂರಿನ ‘ಸಂಗಮ’ ಸಂಸ್ಥೆ ಕೋಲಾರದಲ್ಲಿರುವ ಈ ಸಮುದಾಯಕ್ಕೆ ಹತ್ತಾರು ಬಾರಿ ಕೌನ್ಸೆಲಿಂಗ್ ಕೈಗೊಂಡಿತ್ತು. ಭಿಕ್ಷಾಟನೆ, ಲೈಂಗಿಕ ವೃತ್ತಿಯ ಹೊರತಾಗಿ ಜೀವನೋಪಾಯಕ್ಕಾಗಿ ಪರ್ಯಾಯ ಮಾರ್ಗಗಳ ಹುಡುಕಾಟಕ್ಕೆ ಮಾರ್ಗದರ್ಶನ ನೀಡಿತ್ತು. ತೃತೀಯಲಿಂಗಿಗಳು ಕೆಲಸ ಕೊಟ್ಟರೆ ಸ್ವಾಭಿಮಾನದಿಂದ ಬದುಕುತ್ತೇವೆಂಬ ಸಂಕಲ್ಪ ತೊಟ್ಟಮೇಲೆ ಆರಂಭವಾಗಿದ್ದು ಹೈನುಗಾರಿಕೆಯ ಯೋಜನೆ.

ನಿಶಾ

‘2019ರಲ್ಲಿ ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮ ಈ ಸಮುದಾಯಕ್ಕೆ ಹೈನುಗಾರಿಕೆಯಲ್ಲಿ ತರಬೇತಿ ನೀಡುವ ಕುರಿತು ಆಸಕ್ತಿ ತೋರಿತು. ಅಷ್ಟೇ ಅಲ್ಲ ಸಿಎಸ್‌ಆರ್ ಫಂಡಿಂಗ್ ನೆರವು ಕೊಡಿಸುವುದಾಗಿಯೂ ಹೇಳಿತು. ಆಗ ಕೋಲಾರದ ಹತ್ತು ತೃತೀಯಲಿಂಗಿಗಳು ಸೇರಿ ‘ಸಂಕಲ್ಪ್‌’ ಎನ್ನುವ ಟ್ರಸ್ಟ್ ಕಟ್ಟಿಕೊಂಡರು. ಅದರ ಮೂಲಕ ‘ಪ್ರಾಜೆಕ್ಟ್ ಹೋಪ್’ ಅಡಿಯಲ್ಲಿ ಹೈನುಗಾರಿಕೆ ತರಬೇತಿ ಪಡೆದರು’ ಎಂದು ಆರಂಭದ ದಿನಗಳನ್ನು ಬಿಚ್ಚಿಟ್ಟರು ‘ಸಂಗಮ’ ಸಂಸ್ಥೆಯ ನಿಶಾ ಗೂಳೂರು.

ಏನಿದು ‘ಸಂಕಲ್ಪ್‌’?

‘ನಮಗೂ ಘನತೆಯಿಂದ ಬದುಕುವ ಹಕ್ಕಿದೆ ಎಂಬುದನ್ನು ಸಾಬೀತುಪಡಿಸಲು ನಮ್ಮ ಸಮುದಾಯದವರು ರೂಪಿಸಿಕೊಂಡಿದ್ದೇ ‘ಸಂಕಲ್ಪ’ ಟ್ರಸ್ಟ್. ಸದ್ಯಕ್ಕೆ 9 ಮಂದಿ ಸದಸ್ಯರಿರುವ ಈ ಟ್ರಸ್ಟ್ ಹೈನುಗಾರಿಕೆಯಲ್ಲಿ ನಿಧಾನವಾಗಿ ಯಶಸ್ಸು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಇತರರಿಗೂ ಈ ಬಗ್ಗೆ ತರಬೇತಿ ಕೊಡುವ ಆಲೋಚನೆ ಇದೆ’ ಎನ್ನುತ್ತಾರೆ ‘ಸಂಕಲ್ಪ್‌’ ಟ್ರಸ್ಟ್‌ನ ಅಧ್ಯಕ್ಷೆಯೂ ಆಗಿರುವ ನಿಶಾ.

‘ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮವು, ಕಾಲಿನ್ಸ್ ಏರೋಸ್ಪೇಸ್ ಇಂಡಿಯಾ, ಯುಎಸ್‌ಎ ಗ್ಲೋಬಲ್, ಆರೆಂಜ್ ಟೆಕ್ ಸಲ್ಯೂಷನ್ಸ್ ನ ಸಿಎಸ್‌ಆರ್ ಫಂಡ್‌ನಲ್ಲಿ ₹ 4 ಲಕ್ಷ ನೀಡಿತು. ಆ ಹಣದಲ್ಲಿ ಎರಡು ಹಸು ಮತ್ತು ಒಂದು ಎಮ್ಮೆ ಖರೀದಿಸಿದೆವು. ನಿತ್ಯವೂ ಹಾಲು ಕರೆದು ಸಮೀಪದ ಹಾಲಿನ ಡೈರಿಗೆ ಕೊಡುವ ಕೆಲಸ ಶುರು ಮಾಡಿದೆವು’ ಎನ್ನುತ್ತಾರೆ ಅವರು.

ಸಂಕಲ್ಪ್ ಟ್ರಸ್ಟ್‌ನ ಸದಸ್ಯರಾಗಿರುವ ಅಶ್ವಿನಿ ರಾಜನ್, ರಾಧಿಕಾ, ಗಗನ, ಅನುಷಾ, ಕವಿರಾಜ್, ನೂರ್ ಅಹಮ್ಮದ್, ತಂಗರಾಜ್, ಕೃಷ್ಣಮೂರ್ತಿ ಒಂದು ತಿಂಗಳ ಕಾಲ ಹೈನುಗಾರಿಕೆಯ ತರಬೇತಿ ಪಡೆದಿದ್ದಾರೆ. ಪಾಳಿಯ ಆಧಾರದಲ್ಲಿ ಹಸುಗಳನ್ನು ನೋಡಿಕೊಂಡು ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ಅವರ ಮನದಲ್ಲೀಗ ಭವಿಷ್ಯದ ಕುರಿತು ಹೊಸ ಕನಸುಗಳಿವೆ.

ಹಸುಗಳಿಗಾಗಿ ಹುಲ್ಲು ಸಂಗ್ರಹಿಸುತ್ತಿರುವ ತೃತೀಯಲಿಂಗಿಗಳು

ಆರಂಭದ ಹಾದಿ ಸುಗಮವಾಗಿರಲಿಲ್ಲ...

‘ಒಂದು ತಿಂಗಳು ಹೈನುಗಾರಿಕೆ ತರಬೇತಿ ಪಡೆಯುವ ಮುನ್ನವೇ ನಾವೆಲ್ಲ ಸೇರಿ ತಿಂಗಳಿಗಾಗುವಷ್ಟು ರೇಷನ್ ಖರೀದಿಸಿದೆವು. ಆದಾದ ಮೇಲೆ ತರಬೇತಿಯಲ್ಲಿ ಪಾಲ್ಗೊಂಡು, ಹಸುಗಳನ್ನು ಖರೀಸಿದಿಸಿದೆವು. ಆರಂಭದ ದಿನಗಳಲ್ಲಿ ಆರ್ಥಿಕ ಕಷ್ಟದ ಜತೆಗೆ ಇತರ ಸಂಕಷ್ಟಗಳೂ ಎದುರಾದವು’ ಎನ್ನುತ್ತಾರೆ ಸಂಕಲ್ಪ್ ಟ್ರಸ್ಟ್‌ನ ಕಾರ್ಯದರ್ಶಿ ಅಶ್ವಿನಿ ರಾಜನ್.

‘ಹೈನುಗಾರಿಕೆಯ ಅನುಭವವಿಲ್ಲದ ನಮಗೆ ನಿತ್ಯವೂ 45 ಲೀಟರ್ ಹಾಲು ಕರೆಯುವುದು ಸವಾಲಿನ ಕೆಲಸವಾಗಿತ್ತು. ಸರಿಯಾಗಿ ಹುಲ್ಲು ಕೊಯ್ಯಲೂ ಬರುತ್ತಿರಲಿಲ್ಲ. ಹತ್ತಿರದ ಕೆರೆಯಲ್ಲಿ ಸೊಳ್ಳೆ ಜೊತೆಗೆ ಇತರ ಹುಳಹುಪ್ಪಟೆಗಳ ಕಾಟವೂ ಇತ್ತು. ಗಲೀಜಾಗಿದ್ದ ಕೆರೆಯನ್ನು ಸ್ವಚ್ಛಗೊಳಿಸಿದೆವು, ಹುಲ್ಲು ಕೊಯ್ಯುವುದನ್ನೂ ಕಲಿತೆವು. ಕೊಟ್ಟಿಗೆಯಲ್ಲಿ ಸಗಣಿ ಬಾಚುವುದರಿಂದ ಹಿಡಿದು ಹಾಲು ಕರೆಯುವ ತನಕ ನಮ್ಮ ಕೌಶಲ ವೃದ್ಧಿಸಿಕೊಂಡಿದ್ದೇವೆ. ಯಾವುದೇ ಅಳುಕಿಲ್ಲದೇ ಈಗ ಡೈರಿಗೆ ಹೋಗಿ ಹಾಲು ಹಾಕಿ ಬರುತ್ತೇವೆ. ಒಂದು ವರ್ಷ ಹೇಗೆ ಕಳೆಯಿತು ಎಂಬುದೇ ತಿಳಿಯಲಿಲ್ಲ’ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ ಅವರು.

ಹೆಮ್ಮೆ ಮೂಡಿದ ಘಳಿಗೆ

‘ನಿತ್ಯ ಬೆಳಿಗ್ಗೆ ಕೋಲಾರದ ಹಾಲಿನ ಡೈರಿಗೆ ಕ್ಯಾನ್‌ಗಳಲ್ಲಿ ಹಾಲು ಒಯ್ಯುತ್ತಿದ್ದನ್ನು ನೋಡಿ ಸುತ್ತಮುತ್ತಲಿನ ಗ್ರಾಮಸ್ಥರು ನಮ್ಮನ್ನು ಆಶ್ಚರ್ಯಚಕಿತರಾಗಿ ನೋಡುತ್ತಿದ್ದರು. ಕೆಲವರು ನಮ್ಮ ದನದ ಕೊಟ್ಟಿಗೆಗೆ ಬಂದು ನಾವು ಏನು ಮಾಡುತ್ತೇವೆಂದು ನೋಡಿಕೊಂಡು ಹೋದದ್ದೂ ಇದೆ. ಕೆಲ ರೈತರು ಹಸು ಸಾಕಾಣಿಕೆ, ಅವುಗಳಿಗೆ ಬರುವ ರೋಗ ಇತ್ಯಾದಿ ಬಗ್ಗೆ ಸಲಹೆಯನ್ನೂ ಕೊಟ್ಟರು. ಮೇವು ಮತ್ತು ನೀರಿಗೆ ಕೊರತೆ ಆದಾಗ ಅವರೇ ನಮಗೆ ಸಹಾಯ ಮಾಡಿದ್ದಾರೆ...’

‘ಕೆಲ ಮಹಿಳೆಯರು ನಮಗೂ ಮನೆಗಳಿಗೆ ಎಮ್ಮೆ ಹಾಲು ಕೊಡಿ ಅಂತ ಕೇಳಿದ್ದಾರೆ. ಆದರೆ, ನಾವು ಡೈರಿಗೆ ಕೊಡಲು ಒಪ್ಪಿಕೊಂಡದ್ದರಿಂದ ಅವರಿಗೆ ಕೊಡಲಾಗಲಿಲ್ಲ. ಆದರೆ, ಆ ಹೆಣ್ಣುಮಕ್ಕಳು ನಮ್ಮಿಂದ ಹಾಲು ಪಡೆಯಲು ಮುಂದಾಗಿದ್ದ ಸಂಗತಿ ನಮ್ಮ ಸಮುದಾಯಕ್ಕೆ ಹೆಮ್ಮೆ ಮೂಡಿಸಿದೆ. ಡೈರಿಗೆ ಹಾಲು ಹಾಕಿ ಹಿಂತಿರುಗುವಾಗ ಒಮ್ಮೆ ಲಾರಿ ಚಾಲಕರೊಬ್ಬರು ನಮ್ಮನ್ನು ನೋಡಿ ಮಾತನಾಡಿಸಿ, ನಾವು ಮಾಡುವ ಕೆಲಸದ ಬಗ್ಗೆ ತಿಳಿದುಕೊಂಡು ತುಂಬಾ ಸಂತೋಷ ಪಟ್ಟರು. ನಿಮ್ಮನ್ನು ಬೇರೆ ಕೆಲಸಗಳಲ್ಲಿ ನೋಡಿದ್ದೆ. ಆದರೆ, ಹೈನುಗಾರಿಕೆಯಲ್ಲಿ ತೊಡಗಿದ್ದು ನೋಡಿ ಖುಷಿಯಾಯ್ತು ಅಂದ್ರು. ಅವರ ಮಾತುಗಳನ್ನು ಕೇಳಿ ನಮ್ಮ ಸಮುದಾಯದ ಬಯಸಿದ್ದ ಘನತೆ ಮತ್ತು ಗೌರವ ದೊರೆತಂತಾಯಿತು. ನಾವೂ ಸ್ವಾಭಿಮಾನದಿಂದ ಬದುಕಬಲ್ಲೆವು ಅನ್ನುವ ಆತ್ಮವಿಶ್ವಾಸವನ್ನು ಹೈನುಗಾರಿಕೆ ನೀಡಿದೆ’ ಎಂದರು ಅಶ್ವಿನಿ ರಾಜನ್.

ಜನರ ಸಹಕಾರ

‘ನಮ್ಮನ್ನು ನೋಡಿ ಅಸಹ್ಯ ಪಟ್ಟುಕೊಳ್ಳುತ್ತಿದ್ದ ಜನರೇ ಈಗ ನಮ್ಮನ್ನು ನೋಡಿ ಗೌರವದಿಂದ ಮಾತನಾಡಿಸುತ್ತಾರೆ. ನಮ್ಮ ಹಸುಗಳು ಅವರ ಗ್ರಾಮಗಳಲ್ಲಿ ಕಂಡುಬಂದರೆ ತಕ್ಷಣವೇ ಫೋನ್ ಮಾಡಿ ತಿಳಿಸುತ್ತಾರೆ. ಕೋಲಾರವಷ್ಟೇ ಅಲ್ಲ ಬೇರೆ ತಾಲ್ಲೂಕುಗಳ ಜನರೂ ನಮ್ಮ ಕೆಲಸ ನೋಡಲು ಬಂದು ಖುಷಿಪಟ್ಟಿದ್ದಾರೆ. ಲಾಕ್‌ಡೌನ್ ಇದ್ದಾಗ ಹಲವರು ನಮಗೆ ಮಾಸ್ಕ್ ಮತ್ತು ರೇಷನ್ ಕೊಟ್ಟಿದ್ದಾರೆ’ ಅವರೆಲ್ಲರ ಸಹಕಾರ ಮರೆಯಲಾದೀತೆ’ ಎನ್ನುತ್ತಾರೆ ಅಶ್ವಿನಿ.

ಅಶ್ವಿನಿ ರಾಜನ್

‘ಈಗ ನಮ್ಮ ಬಳಿ ಒಟ್ಟು ಏಳು ಹಸು, ಅವುಗಳಲ್ಲಿ ಮೂರುಪಡ್ಡೆಗಳಿವೆ (ವಯಸ್ಸಿಗೆ ಬಂದಿರುವ ಹಸುಗಳು), ಒಂದು ಎಮ್ಮೆ, ಮೂರು ಕರುಗಳಿವೆ. ಸದ್ಯಕ್ಕೆ ಟ್ರಸ್ಟ್‌ನ ಸದಸ್ಯರು ಬೇರೆ ಕಡೆ ಕೆಲಸ ಮಾಡುತ್ತಲೇ ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಬರುವ ಹಣ ಮೇವು, ಹಿಂಡಿ, ಬೂಸಾಕ್ಕೆ ಖರ್ಚಾಗುತ್ತಿದೆ. ಮಳೆ ಕೊರತೆ, ಈ ಹಿಂದೆ ಹಸುಗಳು ಗರ್ಭ ಧರಿಸಿದ್ದಾಗ ಹಾಲಿನ ಪ್ರಮಾಣ ಕಡಿಮೆಯಾಗಿದೆ. ಆಗ ನಮಗೆ ಆದಾಯ ಕಡಿಮೆಯಾಗಿದೆ. ಆದರೂ ನಾವೂ ಧೃತಿಗೆಡದೇ ಕೆಲಸ ಮುಂದುವರಿಸಿದ್ದೇವೆ. ಲಾಕ್‌ಡೌನ್‌ನಲ್ಲಿ ‘ಸಂಗಮ’ ನೆರವಿಗೆ ನಿಂತಿದೆ. ತಿಂಗಳಿಗೆ ಕನಿಷ್ಠ ಒಂದು ಲಕ್ಷ ರೂಪಾಯಿಯಷ್ಟು ಆದಾಯ ಬಂದರೆ ಮಾತ್ರ ನಮಗೆ ಲಾಭ...’ ಎಂದು ಹೈನುಗಾರಿಕೆಯ ಲೆಕ್ಕಾಚಾರ ಬಿಚ್ಚಿಡುತ್ತಾರೆ ಅವರು.

ಮುಂದಿನ ಯೋಜನೆ

‘ಕೋಲಾರದ ಮಾದರಿಯಲ್ಲಿ ಸಮುದಾಯದ ಇತರರಿಗೂ ಈ ರೀತಿ ತರಬೇತಿ ನೀಡುವ ಯೋಜನೆ ಇದೆ. ಚಿಕ್ಕಮಗಳೂರು ಮತ್ತು ಕೋಲಾರದಿಂದ ಮೂರು ಸಮುದಾಯಗಳು ಮುಂದೆ ಬಂದಿವೆ. ಕೊರೊನಾ ಕಾರಣಕ್ಕಾಗಿ ಇದನ್ನು ಸದ್ಯಕ್ಕೆ ಮುಂದೂಡಿದ್ದೇವೆ. ಕೋಲಾರದ ಜಿಲ್ಲಾಡಳಿತ ನಮಗೆ ಎರಡು ಎಕರೆ ಜಮೀನು ನೀಡಲು ಮುಂದಾಗಿದೆ. ಜಾಗ ಇನ್ನೂ ಗುರುತಿಸಿಲ್ಲ. ರಾಜ್ಯ ಕೌಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ರತ್ನಪ್ರಭಾ ಮೇಡಂ ನಮಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಎರಡು ಎಕರೆ ಜಮೀನು ಸಿಕ್ಕರೆ ಅದರಲ್ಲಿ ಸಾವಯವ ಕೃಷಿ ಮಾಡುವ ಕನಸಿದೆ. ನಂದಿನಿ ಪೇಡಾ, ಮೊಸರು ಮಾದರಿಯಲ್ಲೇ ’ಸಂಕಲ್ಪ್’ ಮೊಸರು, ಪನ್ನೀರ್ ಇತ್ಯಾದಿ ಹಾಲಿನ ಉತ್ಪನ್ನಗಳನ್ನು ತಯಾರಿಸುವ ಯೋಚನೆ ಇದೆ’ ಎಂದು ತಮ್ಮ ಹೊಸ ಯೋಜನೆ ಬಿಚ್ಚಿಡುತ್ತಾರೆ ಅಶ್ವಿನಿ ರಾಜನ್ ಮತ್ತು ನಿಶಾ ಗೂಳೂರು.

ಫೇಸ್‌ಬುಕ್ ಲಿಂಕ್: https://www.facebook.com/Sankalp-105386967743443/

ಸಂಪರ್ಕಕ್ಕೆ: 96208 89944

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT