ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ಸುಖ ದುಃಖಗಳೇ ಇಲ್ಲದ ಅವಧೂತ

ಅಕ್ಷರ ಗಾತ್ರ

ಆಪತತ್ಸು ಯಥಾಕಾಲಂ ಸುಖದುಃಖೇಷ್ವನಾರತಃ ।

ನ ಹೃಷ್ಯತಿ ಗ್ಲಾಯತಿ ಯಃ ಸ ಜೀವನ್ಮುಕ್ತ ಉಚ್ಯತೇ ।।

ಅವಧೂತರು ಜೀವನ್ಮುಕ್ತರು. ಅವಧೂತರು ಎಂದರೆ ಲೋಕವ್ಯವಹಾರಕ್ಕಿಂತ ಅತೀತಸ್ಥಿತಿಯಲ್ಲಿರುವ ಜ್ಞಾನಿಗಳು. ಅವರ ರೀತಿ–ನೀತಿಗಳು ನಮ್ಮ ರೀತಿನೀತಿಗಳಿಗಿಂತಲೂ ಭಿನ್ನವಾಗಿರುತ್ತವೆ. ಅವು ನಮಗೆ ಅರ್ಥವೂ ಆಗುವುದಿಲ್ಲವೆನ್ನಿ! ಜೀವನ್ಮುಕ್ತಿ ಎಂದರೆ ಇಲ್ಲಿಯೇ ಇದ್ದು, ಮೋಕ್ಷವನ್ನು ಸಂಪಾದಿಸುವುದು ಎಂದು ಅರ್ಥ. ಅವಧೂತರು ಹೀಗೆ ನಮ್ಮ ನಿಮ್ಮಂತೆ ಈ ಲೋಕದಲ್ಲಿ ಇದ್ದರೂ ಅವರು ಲೋಕೋತ್ತರ ಸ್ಥಿತಿಯಲ್ಲಿರುತ್ತಾರೆ. ಅಂಥ ಅವಧೂತರು ಹೇಗಿರುತ್ತಾರೆ ಎಂಬುದನ್ನು ಈ ಶ್ಲೋಕ ಹೇಳುತ್ತಿದೆ.

‘ಈ ಲೋಕದಲ್ಲಿ ಸುಖ–ದುಃಖಗಳು ಕಾಲಕಾಲಕ್ಕೆ ನಿರಂತರವಾಗಿ ಎರಗಿಬೀಳುತ್ತಲೇ ಇರುತ್ತವೆ. ಆದರೆ ಸುಖ–ದುಃಖಗಳ ಕಾರಣದಿಂದ ಸಂತೋಷನ್ನಾಗಲೀ ದುಃಖವನ್ನಾಗಲೀ ಯಾರು ಹೊಂದುವುದಿಲ್ಲವೋ ಅಂಥವನನ್ನು ಜೀವನ್ಮುಕ್ತ ಎನ್ನುತ್ತಾರೆ‘ ಎಂಬುದು ಈ ಶ್ಲೋಕದ ತಾತ್ಪರ್ಯ.

ಈ ಶ್ಲೋಕದ ಬಗ್ಗೆ ಸೊಗಸಾದ ವಿವರಣೆಯನ್ನು ಸಾ. ಕೃ. ರಾಮಚಂದ್ರರಾವ್‌ ಅವರು ನೀಡಿದ್ದಾರೆ. ಅವರ ಕೆಲವು ಮಾತುಗಳನ್ನು ಇಲ್ಲಿ ಮೆಲುಕು ಹಾಕಬಹುದು:

’ಸುಖವಾಗಲಿ ದುಃಖವಾಗಲಿ ನಮ್ಮನ್ನು ಕೇಳಿ ಬರುವುದಿಲ್ಲ. ನಮ್ಮನ್ನು ಕೇಳಿದರೆ ಯಾವಾಗಲೂ ಸುಖವೇ ಇರಲಿ, ದುಃಖ ಒಂದಿಷ್ಟೂ ಎಂದಿಗೂ ಬೇಡ ಎನ್ನುವೆವು! ಆದರೆ ಕಾಲಕಾಲದಲ್ಲಿ ನಮಗೆ ಬೇಡವಾದರೂ ದುಃಖ ನಮ್ಮ ಮೇಲೆ ಎರಗಿ ಬೀಳುತ್ತದೆ. ನಾವು ಬಯಸದಿದ್ದಾಗಲೂ ಸುಖ ಬಂದೊದಗುತ್ತದೆ. ಅವಧೂತನಿಗೂ ಸುಖ–ದುಃಖಗಳು ಬಂದೇ ಬರುತ್ತವೆ. ಅವನೂ ಮನುಷ್ಯ ತಾನೆ? ಆದರೆ ಅವಧೂತನಾದವನು ಸುಖ ಬಂದಿತೆಂದು ಹಿಗ್ಗುವುದಿಲ್ಲ, ದುಃಖ ಬಂದಿತೆಂದು ಕುಗ್ಗುವುದಿಲ್ಲ.

’ಪ್ರಪಂಚದಲ್ಲಿರುವವನಿಗೆ ಸುಖ–ದುಃಖಗಳ ಅನುಭವ. ಪ್ರಪಂಚಭಾವವನ್ನು ಕೈಬಿಟ್ಟು ಆತ್ಮದಲ್ಲೆ ನೆಲೆನಿಂತ ಈ ಅವಧೂತನಿಗೆ ಈ ಅನುಭವವಿರದು. ಆತ್ಮನಿಗೇನು ಸುಖವೂ ಇಲ್ಲ, ದುಃಖವೂ ಇಲ್ಲ. ಅವಧೂತನಿಗೆ ಜೀವಭಾವವಿರದು; ಆತ್ಮದಲ್ಲೆ ನೆಲಸಿ ಆತ್ಮವೇ ಆಗಿರುವವನು.’

ಎಂದರೆ ಆತ್ಮದ ಸ್ವರೂಪವಾದ ಆನಂದದಲ್ಲಿಯೇ ಅವಧೂತನು ನೆಲೆಯಾಗಿರುತ್ತಾನೆ ಎಂಬುದು ಇದರ ತಾತ್ಪರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT