ಶನಿವಾರ, ಆಗಸ್ಟ್ 13, 2022
28 °C

ದಿನದ ಸೂಕ್ತಿ: ಅಪಾಯ ಇದೆ, ಎಚ್ಚರ!

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಲೋಭಾವಿಷ್ಟೋ ನರೋ ವಿತ್ತಂ ವೀಕ್ಷತೇ ನೈವ ಚಾಪದಮ್‌ ।

ದುಗ್ಧಂ ಪಶ್ಯತಿ ಮಾರ್ಜಾರೋ ಯಥಾ ನ ಲಗುಡಾಹತಿಮ್‌ ।।

ಇದರ ತಾತ್ಪರ್ಯ ಹೀಗೆ:

‘ಲೋಭಕ್ಕೆ ವಶನಾದವನು ಹಣವನ್ನು ನೋಡುತ್ತಾನೆ; ಮುಂದೆ ಎದುರಾಗುವ ವಿಪತ್ತನ್ನು ಕಾಣುವುದೇ ಇಲ್ಲ. ಬೆಕ್ಕು ಹಾಲನ್ನು ಮಾತ್ರವೇ ನೊಡುತ್ತದೆಯೆ ವಿನಾ ದೊಣ್ಣೆಯ ಪೆಟ್ಟನ್ನು ಯೋಚಿಸುವುದಿಲ್ಲವಷ್ಟೆ?‘

ಆಸೆಯ ಪಾಶ ಎಷ್ಟು ಬಿಗಿಯಾದದ್ದು ಎಂಬುದನ್ನು ಸುಭಾಷಿತ ಹೇಳುತ್ತಿದೆ.

ಹೊಟೇಲ್‌ಗೆ ಹೋಗುತ್ತೇವೆ; ದೊಸೆಯನ್ನು ತಿನ್ನುತ್ತೇವೆ. ಚೆನ್ನಾಗಿದೆ ಎಂದೆನಿಸುತ್ತದೆ. ಇನ್ನೊಂದನ್ನು ತಿನ್ನುತ್ತೇವೆ. ನಾಳೆ ಆರೋಗ್ಯ ಏನಾಗುತ್ತದೆ ಎಂದು ನಾವು ಯೋಚಿಸುವುದೇ ಇಲ್ಲ.

ನಮ್ಮ ಜೀವನದಲ್ಲಿ ಹಲವು ವಿಷಯಗಳಿಗೆ ನಾವು ಇದೇ ರೀತಿಯಲ್ಲಿ ನಡೆದುಕೊಳ್ಳುತ್ತಿರುತ್ತೇವೆ. ಮುಂದೆ ಏನಾಗುತ್ತದೆ ಎಂದು ಯೋಚಿಸುವುದೇ ಇಲ್ಲ; ಆ ಕ್ಷಣ ನಮಗೆ ಇಷ್ಟವಾದುದು ಸಿಕ್ಕಿದರೆ ಮುಗಿಯಿತು ಎಂಬಂತೆ ನಡೆದುಕೊಳ್ಳುತ್ತೇವೆ.

ಪರೀಕ್ಷೆಯಲ್ಲಿ ಹೇಗಾದರೂ ಉತ್ತೀರ್ಣವಾಗಬೇಕೆಂದು ಕಾಪಿ ಮಾಡುತ್ತೇವೆ; ಅದರಿಂದ ಮುಂದೆ ಏನಾಗಬಹುದೆಂದು ಯೋಚಿಸುವುದೇ ಇಲ್ಲ. ರಾಶಿ ದುಡ್ಡನ್ನು ಸಂಪಾದಿಸಬೇಕೆಂಬ ದುರಾಸೆಯಿಂದ ಕಚೇರಿಯಲ್ಲಿ ಲಂಚವನ್ನು ತೆಗೆದುಕೊಳ್ಳುತ್ತೇವೆ; ಮುಂದೆ ಏನಾಗುತ್ತದೆ ಎಂದು ಯೋಚಿಸುವುದೇ ಇಲ್ಲ. ಸಮಾಜದ ಬಗ್ಗೆಯಾಗಲೀ ದೇಶದ ಬಗ್ಗೆಯಾಗಲೀ ಯೋಚಿಸದೆ ಕೇವಲ ಸ್ವಾರ್ಥದಿಂದ ಭ್ರಷ್ಟಾಚಾರದಲ್ಲಿ ತೊಡಗುತ್ತೇವೆ; ಅದರಿಂದ ನಾಳೆಯ ದಿನಗಳು ಎಷ್ಟು ಭಯಂಕರವಾಗಬಹುದು ಎಂಬುದನ್ನು ನಾವು ಯೋಚಿಸುವುದೇ ಇಲ್ಲ.

ಸುಭಾಷಿತ ಹೇಳುತ್ತಿದೆ, ಲೋಭಕ್ಕೆ ವಶನಾದವನು ಹಣವನ್ನು ಮಾತ್ರವೇ ನೋಡುತ್ತಾನೆ; ಮುಂದೆ ಒದಗುವ ವಿಪತ್ತನ್ನು ಯೋಚಿಸುವುದೇ ಇಲ್ಲ.

ಲೋಭ ಎಂದರೆ ಅತಿಯಾದ ಆಸೆ; ಆಸೆಯಲ್ಲಿ ಮುಳುಗಿದವನಿಗೆ ಎಲ್ಲೆಲ್ಲೂ ಕಾಣುವುದು ಹಣ ಹಣ ಹಣ. ಈ ಹಣದ ಬಲೆ ನಮ್ಮನ್ನು ಏನೆಲ್ಲ ಮಾಡಬಹುದು ಎಂಬುದನ್ನು ಲೋಭಿಯಾದವನು ಯೋಚಿಸುವುದೇ ಇಲ್ಲ.

ಸುಭಾಷಿತ ಇಲ್ಲಿ ನೀಡಿರುವ ಉದಾಹರಣೆ ಕೂಡ ಸೊಗಸಾಗಿದೆ. 

ಬೆಕ್ಕೊಂದು ರಹಸ್ಯವಾಗಿ ಅಡುಗೆಮನೆಯನ್ನು ಪ್ರವೇಶಿಸಿದೆ; ಅಲ್ಲಿಯೇ ಇರುವ ಹಾಲಿನ ಬಟ್ಟಲು ಅದರ ಕಣ್ಣಿಗೆ ಬಿತ್ತು; ಅದು ಹಾಲನ್ನು ಕುಡಿಯಲು ಆರಂಭಿಸಿತು; ಅದೂ ಕಣ್ಣು ಮುಚ್ಚಿಕೊಂಡು! ಆ ಕ್ಷಣ ಅದು ಹಾಲಿನ ರುಚಿಗೆ ಮನಸೋತಿದೆಯೇ ವಿನಾ ಮುಂದಿನ ಕ್ಷಣ ಏನಾಗಬಹುದೆಂಬ ನಿರೀಕ್ಷೆಯೇ ಅದಕ್ಕಿಲ್ಲ. ಪಾತ್ರೆಯ ಸದ್ದಿಗೆ ಮನೆಯವರಿಗೆ ಎಚ್ಚರವಾಗುತ್ತದೆ; ಆಗ ಅವರು ಬೆಕ್ಕನ್ನು ನೋಡಿ ಅವರು ಅದನ್ನು ಬಡಿಯಲು ದೊಣ್ಣೆಯನ್ನು ತರುತ್ತಾರೆ. ಆದರೆ ಇದರ ಸುಳಿವೂ ಇಲ್ಲದೆ ಪಾಪ, ಆ ಬೆಕ್ಕು ಹಾಲನ್ನು ಕುಡಿಯುತ್ತಲೇ ಇರುತ್ತದೆ!

ಲೋಭದಲ್ಲಿ ಮುಳುಗಿರುವ ನಾವೂ ಆ ಬೆಕ್ಕಿನಂತೆಯೇ, ಮುಂದೆ ನಮಗೆ ದೊಣ್ಣೆಯ ಏಟು ಕಾದಿದೆ ಎಂಬುದನ್ನು ನಿರೀಕ್ಷಿಸದೆಯೇ ಅಪಾಯದಲ್ಲಿ ಬದುಕುತ್ತಿರುತ್ತೇವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.