ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ನಾಲಗೆಯ ರುಚಿ

Last Updated 31 ಮಾರ್ಚ್ 2021, 2:29 IST
ಅಕ್ಷರ ಗಾತ್ರ

ಜಿಹ್ವಯಾತಿಪ್ರಮಾಥಿನ್ಯಾ ಜನೋ ರಸವಿಮೋಹಿತಃ ।

ಮೃತ್ಯುಮೃಚ್ಛತ್ಯಸದ್‌ ಬುದ್ಧಿರ್ಮೀನಸ್ತು ಬಡಿಶೈರ್ಯಥಾ ।।

ಇದರ ತಾತ್ಪರ್ಯ ಹೀಗೆ:

‘ನಾಲಗೆ ತುಂಬ ಅಪಾಯಕಾರಿ. ರುಚಿಗಾಗಿ ವ್ಯಾಮೋಹಗೊಳ್ಳುವ ಬುದ್ಧಿಹೀನರು ನಾಶವನ್ನು ಹೊಂದುತ್ತಾರೆ, ಮೀನು ಗಾಳದಿಂದ ಸಾಯುವಂತೆ.’

ಅತ್ಯಂತ ಕಡಿಮೆ ಮಾತುಗಳಲ್ಲಿ ಕಟು ವಾಸ್ತವವನ್ನು ಹೇಳಿದೆ ಈ ಸುಭಾಷಿತ.

ರುಚಿಯ ವ್ಯಾಮೋಹದಲ್ಲಿ ಸಿಕ್ಕಿಬೀಳುವ ಮನುಷ್ಯರು ನಾಶವನ್ನು ಹೊಂದುತ್ತಾರೆ ಎನ್ನುತ್ತಿದೆ ಅದು. ಈ ರುಚಿಯ ಮೂಲ ಯಾವುದು ಎಂದರೆ ನಾಲಗೆ ಎಂದಿರುವುದು ಇಲ್ಲಿ ಸ್ವಾರಸ್ಯಕರವಾಗಿದೆ.

ನಾಲಗೆಗೂ ರುಚಿಗೂ ಸಂಬಂಧವಿದೆ. ನಾವು ತಿನ್ನುವ ಆಹಾರ ಹೇಗಿದೆ, ಎಷ್ಟು ರುಚಿಯಾಗಿದೆ ಎಂಬ ತಿಳಿವಳಿಕೆಯನ್ನು ಕೊಡುವುದು ನಾಲಗೆಯೇ ಹೌದು. ನಾಲಗೆಯ ರುಚಿಗೆ ಸೋಲುವ ನಾವು ನಮ್ಮ ಆವಶ್ಯಕತೆಯನ್ನು ಮೀರಿ ತಿನ್ನುತ್ತೇವೆ. ಮಾತ್ರವಲ್ಲ, ನಾಲಗೆಗೆ ರುಚಿಯಾಗಿರುವುದೆಲ್ಲವೂ ನಮ್ಮ ಆರೋಗ್ಯಕ್ಕೆ ಒಳ್ಳೆಯದೇ ಆಗಿರುತ್ತದೆ ಎಂದೇನಿಲ್ಲ. ಹೀಗಾಗಿ ನಾವು ನಾಲಗೆಯ ರುಚಿಗೆ ವಶರಾದರೆ ಅನಾರೋಗ್ಯಕ್ಕೆ ತುತ್ತಾಗುತ್ತೇವೆ ಎಂದು ಎಚ್ಚರಿಸುತ್ತದೆ ಸುಭಾಷಿತ.

ಆದರೆ ಸುಭಾಷಿತ ಇಲ್ಲಿ ನಾಲಗೆಯ ರುಚಿಯನ್ನು ಕೇವಲ ನಾವು ತಿನ್ನುವ ಆಹಾರದೊಂದಿಗೆ ಮಾತ್ರವೇ ಸಮೀಕರಿಸಿ ಮಾತನಾಡುತ್ತಿಲ್ಲ; ಇನ್ನೂ ಏನನ್ನೋ ತನ್ನ ಒಡಲಲ್ಲಿ ಅಡಗಿಸಿಕೊಂಡಿದೆ. ಇಲ್ಲಿ ನಾಲಗೆ ಎಂದರೆ ಅದು ನಮ್ಮ ಮಾತು ಕೂಡ ಆಗುತ್ತದೆ.

ನಾಲಗೆ ರುಚಿ ಎಂದರೆ ಇಲ್ಲಿ ನಮ್ಮ ಮಾತಿನ ಚಪಲವೂ ಆಗುತ್ತದೆ. ಮಾತಿನ ಚಪಲದಿಂದಲೂ ನಾವು ಹಾಳುಗುತ್ತೇವೆ. ಮಾತಿನ ಚಟ ದೊಡ್ಡ ದೌರ್ಬಲ್ಯ. ಒಂದು ಮಾತನಾಡುವ ಜಾಗದಲ್ಲಿ ಹತ್ತು ಮಾತನಾಡುತ್ತೇವೆ; ಆಮೇಲೆ ಅಪಾಯವನ್ನು ತಂದುಕೊಳ್ಳುತ್ತೇವೆ. ಹೀಗೆಯೇ ಆಡಬಾರದ ಮಾತನ್ನೂ ಆಡುತ್ತೇವೆ, ನಾಲಗೆಯ ಮೇಲೆ ನಿಯಂತ್ರಣವನ್ನು ಕಳೆದುಕೊಂಡು. ಆಗಲೂ ನಮಗೆ ಅಪಾಯ ಕಟ್ಟಿಟ್ಟ ಬುತ್ತಿ. ನಾವು ಮಿತ್ರರನ್ನು ಸಂಪಾದಿಸುವುದೂ ಶತ್ರುಗಳನ್ನು ಸಂಪಾದಿಸುವುದೂ ನಾಲಗೆಯ ಮೂಲದಿಂದಲೇ.

ಗಾಳಕ್ಕೆ ಸಿಕ್ಕಿರುವ ಹುಳುವಿನ ಕಡೆಗೆ ಮೀನಿನ ಗಮನ ಇರುತ್ತದೆಯೇ ವಿನಾ ಗಾಳವನ್ನು ಅದು ನೋಡವುದೇ ಇಲ್ಲ. ಹುಳುವನ್ನು ತಿನ್ನಲು ಹೋಗಿ ಅದು ಕೊನೆಗೆ ಗಾಳಕ್ಕೆ ಸಿಕ್ಕಿಹಾಕಿಕೊಳ್ಳುತ್ತದೆ. ಹೀಗೆಯೇ ಕ್ಷಣಿಕವಾದ ನಾಲಗೆಯ ರುಚಿಗೆ ಮನಸೋತು ನಾವು ಅಪಾಯಗಳನ್ನು ತಂದುಕೊಳ್ಳುತ್ತಿರುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT