ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ನ್ಯಾಯಮಾರ್ಗದ ಸುಖ

Last Updated 24 ಡಿಸೆಂಬರ್ 2020, 0:48 IST
ಅಕ್ಷರ ಗಾತ್ರ

ಯಾಂತಿ ನ್ಯಾಯಪ್ರವೃತ್ತಸ್ಯ ತಿರ್ಯಂಚೋsಪಿ ಸಹಾಯತಾಮ್‌ ।

ಅಪಂಥಾನಂ ತು ಗಚ್ಛಂತಂ ಸೋದರೋsಪಿ ವಿಮುಂಚತಿ ।।

ಇದರ ತಾತ್ಪರ್ಯ ಹೀಗೆ:

‘ನ್ಯಾಯವಾದ ದಾರಿಯಲ್ಲಿ ಹೋಗುವವನಿಗೆ, ರಾಮನಿಗೆ ಪ್ರಾಣಿಗಳು ಸಹಾಯ ಮಾಡಿದಂತೆ, ಮನುಷ್ಯೇತರ ಪ್ರಾಣಿಗಳೂ ಸಹಾಯಮಾಡುತ್ತವೆ. ತಪ್ಪುದಾರಿಯನ್ನು ತುಳಿಯುವವನನ್ನು, ರಾವಣನನ್ನು ವಿಭಿಷಣನು ಬಿಟ್ಟಂತೆ, ಸಹೋದರನೂ ಕೈ ಬಿಡುತ್ತಾನೆ.’

ಋಜುಮಾರ್ಗ ಎಂದರೆ ಸರಿಯಾದ ದಾರಿಯಲ್ಲಿ ಜೀವನವನ್ನು ನಡೆಸಿ – ಎಂದು ಸುಭಾಷಿತ ಹೇಳುತ್ತಿದೆ. ಈ ಸಂದೇಶವನ್ನು ಸ್ಪಷ್ಟಪಡಿಸಲು ಅದು ರಾಮಾಯಣದ ಕಥೆಯನ್ನು ಬಳಸಿಕೊಂಡಿದೆ.

ತಂದೆ ಕೊಟ್ಟ ಮಾತನ್ನು ಸತ್ಯವನ್ನಾಗಿಸಲು ಶ್ರೀರಾಮನು ಸೀತೆ ಮತ್ತು ಲಕ್ಷ್ಮಣರ ಜೊತೆ ಕಾಡಿಗೆ ಹೋದ. ಅವರು ಕಾಡಿನಲ್ಲೂ ಸಂತೋಷವಾಗಿಯೇ ಇದ್ದರು. ಆದರೆ ರಾವಣ ಮೋಸದಿಂದ ಸೀತೆಯನ್ನು ಅಪಹರಿಸಿದ. ಆ ಕ್ಷಣದಿಂದ ರಾಮನ ಕಷ್ಟ ಆರಂಭವಾಯಿತು. ಈ ಕಷ್ಟದಿಂದ ಅವನನ್ನು ಪಾರು ಮಾಡಲು ಅವನ ನೆರವಿಗೆ ಬಂದವರು ಪ್ರಾಣಿಗಳು; ಎಂದರೆ ವಾನರರು ಮತ್ತು ಕರಡಿಗಳು; ಪಕ್ಷಿಗಳೂ ನೆರವಿಗೆ ಬಂದವೆನ್ನಿ! ಸುಭಾಷಿತ ಇದಕ್ಕೆ ಕಾರಣವನ್ನು ಹೇಳುತ್ತಿದೆ: ಶ್ರೀರಾಮನು ನ್ಯಾಯವಾದ ಮಾರ್ಗದಲ್ಲಿ ನಡೆದವನು. ನ್ಯಾಯಮಾರ್ಗ ಎಂದರೆ ಧರ್ಮದ ಮಾರ್ಗ. ರಾಮ ಎಂಥ ಧರ್ಮಿಷ್ಠ ಎಂಬುದನ್ನು ರಾಮಾಯಣದುದ್ದಕ್ಕೂ ನಾವು ಕಾಣಬಹುದು. ಹೀಗೆ ಧರ್ಮದ ಮಾರ್ಗದಲ್ಲಿ ನಡೆಯುವವನಿಗೆ ಕಷ್ಟಗಳ ಬಂದಾಗ ಮನುಷ್ಯರಿರಲಿ, ಪ್ರಾಣಿಗಳೂ ನೆರವಿಗೆ ಧಾವಿಸುತ್ತವೆ ಎಂಬುದನ್ನು ಸುಭಾಷಿತ ಹೇಳುತ್ತಿದೆ.

ರಾವಣ ರಾಕ್ಷಸರ ರಾಜ; ಪರಾಕ್ರಮಿ; ಅವನ ಶೌರ್ಯದಿಂದ ದೇವತೆಗಳಿಗೂ ಹೆದರಿಕೆ ಹುಟ್ಟಿಸಿದ್ದವ. ಇಂಥವನು ಪರಸ್ತ್ರೀವ್ಯಾಮೋಹಕ್ಕೆ ಬಿದ್ದ. ಸೀತೆಯನ್ನು ಅವನು ಮೋಸದಿಂದ ಅಪಹರಿಸಿದ. ಹೀಗೆ ಹೆಣ್ಣನ್ನು ಅಪಹರಿಸುವುದು ಅನ್ಯಾಯದ ದಾರಿಯಲ್ಲದೆ ಮತ್ತೇನು? ಅಧರ್ಮದ ಮಾರ್ಗದಲ್ಲಿ ಹೆಜ್ಜೆ ಹಾಕಬೇಡ – ಎಂದು ರಾವಣನಿಗೆ ಹಲವರು ಬುದ್ಧಿವಾದ ಹೇಳಿದರು. ಅವನ ಹೆಂಡತಿಯೂ ಹೇಳಿದಳು. ತಮ್ಮನಾದ ವಿಭಿಷಣನಂತೂ ಪರಿಪರಿಯಾಗಿ ಬೇಡಿಕೊಂಡ, ತಪ್ಪುದಾರಿಯಲ್ಲಿ ನಡೆಯಬೇಡ; ಸೀತೆಯನ್ನು ರಾಮನಿಗೆ ಒಪ್ಪಿಸು ಎಂದು ಅಣ್ಣನನ್ನು ಅಂಗಲಾಚಿದ. ಅದರೆ ರಾವಣ ಅದಕ್ಕೆ ಒಪ್ಪಲಿಲ್ಲ. ವಿಭೀಷಣನನ್ನೇ ಮೂದಲಿಸಿದ. ಆಗ ಬೇರೆ ದಾರಿಯಿಲ್ಲದೆ ವಿಭೀಷಣ ತನ್ನ ಅಣ್ಣನಾದ ರಾವಣನನ್ನು ತೊರೆದು ರಾಮನನ್ನು ಸೇರಿದ.

ನ್ಯಾಯಮಾರ್ಗದಲ್ಲಿದ್ದ ರಾಮನ ಸಹಾಯಕ್ಕೆ ವಾನರಗಳೂ ಸಿದ್ಧವಾದವು; ಅನ್ಯಾಯಮಾರ್ಗದಲ್ಲಿದ್ದ ಅಣ್ಣನನ್ನು ತಮ್ಮನೇ ತೊರೆದ. ಇದರ ತಾತ್ಪರ್ಯ: ಎಂಥ ಸಂದರ್ಭದಲ್ಲೂ ನಾವು ನ್ಯಾಯಮಾರ್ಗವನ್ನು ಬಿಡಬಾರದು. ಹೌದು, ಧರ್ಮಮಾರ್ಗದಲ್ಲಿದ್ದಾಗ ಹಲವು ಕಷ್ಟಗಳು ಎದುರಾಗಬಹುದು. ಆದರೆ ಅವುಗಳಿಗೆ ಪರಿಹಾರವೂ ಅಷ್ಟೇ ಸುಲಭವಾಗಿ, ನಾವು ಊಹಿಸದ ವಿಧಾನದಲ್ಲಿ, ದೊರೆಯುವುದು ಕೂಡ ನಿಶ್ಚಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT