ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವ: ತ್ಯಾಗಭೋಗದ ಸಮನ್ವಯ

Last Updated 11 ಮಾರ್ಚ್ 2021, 2:16 IST
ಅಕ್ಷರ ಗಾತ್ರ

ಪಂಕಜಾತಸಮಾನಾಸ್ಯಃ ಪಂಕಹಾರೀ ಪದೇಯುಷಾಮ್‌ ।

ಕಿಂಕರೀಕೃತದೇವಾಗ್ರ್ಯಃ ಶಂಕರಃ ಶಂ ಕರೋತು ನಃ ।।

ಇದರ ತಾತ್ಪರ್ಯ ಹೀಗೆ:

‘ಕಮಲಮುಖನೂ, ಪಾದಕ್ಕೆ ಎರಗಿದವರ ಪಾಪಪಂಕವನ್ನು ಪರಿಹರಿಸುವವನೂ, ಶ್ರೇಷ್ಠರಾದ ದೇವತೆಗಳನ್ನು ಕಿಂಕರರನ್ನಾಗಿ ಮಾಡಿಕೊಂಡವನೂ ಆದ ಶಂಕರನು ನಮಗೆ ಸುಖವನ್ನು ಉಂಟುಮಾಡಲಿ.’

ನಮ್ಮ ಸಂಸ್ಕೃತಿಯಲ್ಲಿ ಶಿವತತ್ತ್ವದ ಕಲ್ಪನೆ ತುಂಬ ಪುರಾತನವಾದುದು; ವೇದಕಾಲದಲ್ಲಿಯೇ ಶಿವನು ಪ್ರಮುಖ ದೇವತೆಯಾಗಿದ್ದ ಎನ್ನುವುದು ಸ್ಪಷ್ಟ. ಶಿವನ ಆರಾಧನೆಗೆಂದೇ ಮೀಸಲಾದ ಪರ್ವದಿನ ಮಹಾಶಿವರಾತ್ರಿ.

ತ್ರಿಮೂರ್ತಿಗಳ ಕಲ್ಪನೆ ನಮಗೆ ಗೊತ್ತಿದೆ; ಬ್ರಹ್ಮ, ವಿಷ್ಣು, ಶಿವ – ಇವರು ಸೃಷ್ಟಿ, ಸ್ಥಿತಿ, ಸಂಹಾರಗಳನ್ನು ಮಾಡುವವರು. ಈ ಮೂರು ತತ್ತ್ವಗಳೂ ಒಂದೇ ತತ್ತ್ವದ ಬೇರೆ ಬೇರೆ ಆಯಾಮಗಳ ಅಭಿವ್ಯಕ್ತಿಯಷ್ಟೆ ಎಂದೂ ಹೇಳಬಹುದು. ಭಾರತೀಯ ಸಂಸ್ಕೃತಿಯ ಸೃಷ್ಟಿತತ್ತ್ವಗಳಾಗಿ ಮೂವರನ್ನು ರಾಮಮನೋಹರ ಲೋಹಿಯಾ ಅವರು ನಿರೂಪಿಸುವ ಕ್ರಮವೂ ವಿಶಿಷ್ಟವಾಗಿದೆ; ಈ ಗುಂಪಿನಲ್ಲೂ ಶಿವನಿದ್ದಾನೆ; ಉಳಿದ ಇಬ್ಬರು ರಾಮ ಮತ್ತು ಕೃಷ್ಣ.

ಶಿವನಿಗೆ ಹಲವು ಹೆಸರುಗಳು: ರುದ್ರ, ಶಂಕರ, ಮಹಾದೇವ, ಶಂಭು, ತ್ರಿನೇತ್ರ, ಚಂದ್ರಶೇಖರ, ಗಿರೀಶ, ಫಾಲನೇತ್ರ, ಪಾರ್ವತೀರಮಣ, ಭೂತನಾಥ, ಕಪಾಲಿ, ನಟರಾಜ, ಮಹಾನಟ – ಹೀಗೆ ಅವನ ಒಂದೊಂದು ತತ್ತ್ವಕ್ಕೂ ಒಂದೊಂದು ಹೆಸರು. ಪ್ರಧಾನವಾಗಿ ಎರಡು ಹೆಸರುಗಳು ಅವನ ಎಲ್ಲ ತತ್ತ್ವಗಳನ್ನೂ ಪ್ರತಿನಿಧಿಸುತ್ತವೆ; ಅವೇ ಒಂದು ರುದ್ರ, ಮತ್ತೊಂದು ಶಿವ. ಮಾತ್ರವಲ್ಲ, ಈ ಎರಡು ತತ್ತ್ವಗಳು ಎಲ್ಲ ದೇವತೆಗಳನ್ನೂ ಪ್ರತಿನಿಧಿಸುತ್ತವೆ ಎಂದೂ ಹೇಳಬಹುದು. ‘ಸರ್ವದೇವಾತ್ಮಕೋ ರುದ್ರಃ ಸರ್ವೇ ದೇವಾ ಶಿವಾತ್ಮಕಾಃ’ ಎಂಬ ಮಾತೊಂದಿದೆ; ’ರುದ್ರನು ಸರ್ವದೇವತಾರೂಪಿ, ಎಲ್ಲ ದೇವತೆಗಳೂ ಶಿವಸ್ವರೂಪರೇ ಹೌದು‘ ಎಂಬುದು ಇದರ ತಾತ್ಪರ್ಯ. ಶಿವತತ್ತ್ವದಲ್ಲಿಯೇ ಎಲ್ಲ ದೇವತೆಗಳ ತತ್ತ್ವವೂ ಅಡಕವಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ‘ರುದ್ರ’ ಎಂದರೆ ರೋದನಕ್ಕೆ ಕಾರಣನಾಗಿರುವವನು, ಎಂದರೆ ಅಳುವಂತೆ ಮಾಡುವವನು ಎಂಬ ಅರ್ಥವಿದೆ; ‘ಶಿವ’ ಎಂದರೆ ಮಂಗಳಕರ ಎಂಬ ಅರ್ಥವಿದೆ. ಹೀಗಾಗಿ ಶಿವತತ್ತ್ವವು ದುಷ್ಟ ಶಿಕ್ಷಣ ಮತ್ತು ಶಿಷ್ಟ ರಕ್ಷಣ – ಎಂಬ ಸೂತ್ರವನ್ನು ಎತ್ತಿಹಿಡಿಯುವುದು.

ಶಿವನನ್ನು ಕುರಿತು ನಮ್ಮಲ್ಲಿ ಹೇರಳವಾದ ಸಾಹಿತ್ಯವೂ ಇದೆ; ವೇದಗಳಲ್ಲಿ ಮಾತ್ರವಲ್ಲದೆ ಕಾವ್ಯ, ನಾಟಕ, ಸ್ತೋತ್ರಗಳಲ್ಲಿ ಶಿವ, ಶಿವತತ್ತ್ವ ಮತ್ತು ಅವನ ಪರಿವಾರದ ಬಗ್ಗೆ ವರ್ಣನೆಗಳಿವೆ. ಆಗಮಗಳಲ್ಲೂ ಈ ತತ್ತ್ವದ ಉಲ್ಲೇಖ–ಪ್ರಶಂಸೆಗಳನ್ನು ಧಾರಾಳವಾಗಿಯೇ ಕಾಣುತ್ತೇವೆ.

ಶಿವತತ್ತ್ವವು ಸೃಷ್ಟಿಯ ಹಲವು ವಿವರಗಳನ್ನು ಒಳಗೊಂಡಿದೆ. ಶಿವನ ನಟರಾಜಸ್ವರೂಪವು ಇಡಿಯ ಸೃಷ್ಟಿಪ್ರಕ್ರಿಯೆಯನ್ನು ಸಂಕೇತಿಸುತ್ತದೆ. ಸೃಷ್ಟಿ, ಸ್ಥಿತಿ, ಸಂಹಾರಗಳಲ್ಲದೆ ತಿರೋಭಾವ ಮತ್ತು ಅನುಗ್ರಹ ಎಂಬ ಇನ್ನೆರಡು ತತ್ತ್ವಗಳನ್ನೂ ನಟರಾಜನ ಕಲ್ಪನೆಯಲ್ಲಿ ಕಾಣಬಹುದು. ಅವನು ಕೈಯಲ್ಲಿ ಹಿಡಿದಿರುವ ಡಮರುಗದ ನಾದದಿಂದಲೇ ಇಡಿಯ ಸೃಷ್ಟಿ, ಅದೂ ನಾದಮಯವಾಗಿ ಸೃಷ್ಟಿಯಾಯಿತೆಂಬ ಕಲ್ಪನೆಯಿದೆ. ಮಾತ್ರವಲ್ಲ, ನಟರಾಜನೇ ಮಹಾನಟ; ಅವನು ಎಲ್ಲ ಕಲೆಗಳಿಗೂ ಅಧಿಪತಿ.

ಶಿವನ ಕುಟುಂಬ, ಅದು ಆದರ್ಶ ಸಂಸಾರಕ್ಕೂ ನಿದರ್ಶನವಾಗಿದೆ; ಅನ್ಯೋನ್ಯ ದಾಂಪತ್ಯ ಎಂದರೆ ಅದು ಶಿವ–ಪಾರ್ವತಿಯರ ದಾಂಪತ್ಯವೇ ಹೌದು. ಶಿವನು ತನ್ನ ಶರೀರದ ಅರ್ಧಭಾಗವನ್ನೇ ತನ್ನ ಮಡದಿಗೆ ಮೀಸಲಾಗಿರಿಸಿ ಅರ್ಧನಾರೀಶ್ವರನಾದವನು; ದಾಂಪತ್ಯ ಎಂದರೆ ಗಂಡು ಹೆಚ್ಚು, ಹೆಣ್ಣು ಕಡಿಮೆ ಎಂದೋ ಅಥವಾ ಹೆಣ್ಣು ಹೆಚ್ಚು, ಗಂಡು ಕಡಿಮೆ ಎಂದೋ ಲೆಕ್ಕಾಚಾರದ ವ್ಯವಹಾರ ಅಲ್ಲ, ಅದು ಇಬ್ಬರ ಸಮಪಾಲಿನ ಸಮಬಾಳು ಎಂಬುದನ್ನು ಅರ್ಧನಾರೀಶ್ವರನ ಕಲ್ಪನೆಯಲ್ಲಿ ಕಾಣಬಹುದು. ಪಾರ್ವತಿಯ ತಪಸ್ಸಿನ ಫಲ ಶಿವ, ಶಿವನ ತಪಸ್ಸಿನ ಫಲ ಪಾರ್ವತಿ – ಎಂಬ ಅಪ್ಪಯ್ಯ ದೀಕ್ಷಿತರ ಒಕ್ಕಣೆ ದಾಂಪತ್ಯದ ಪರಿಕಲ್ಪನೆಯ ಮಹೋನ್ನತೆಯನ್ನು ಸಾರುವಂತಿದೆ.

ಶಿವನಿಗೆ ತನ್ನ ಮಡದಿಗೆ ಅರ್ಧಶರೀರವನ್ನೇ ಕೊಡುವಷ್ಟು ಪ್ರೀತಿ ಇದೆ ನಿಜ; ಹೀಗಿದ್ದರೂ ಅವನು ಪರಮವೈರಾಗ್ಯಸ್ವರೂಪಿ. ಅವನು ಕೇವಲ ಭೋಗದಲ್ಲಿಯೇ ಮುಳುಗುವವನೂ ಅಲ್ಲ ಅಥವಾ ಕೇವಲ ತ್ಯಾಗದಲ್ಲಿಯೇ ತಲ್ಲಿನನಾಗುವವನೂ ಅಲ್ಲ; ತ್ಯಾಗಭೋಗದ ಸಮನ್ವಯದ ಸಂಕೇತವೇ ಅವನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT