ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಮೋಕ್ಷಸುಖ

Last Updated 8 ಅಕ್ಟೋಬರ್ 2020, 1:35 IST
ಅಕ್ಷರ ಗಾತ್ರ

ಅರ್ಥಾರ್ಥೀ ಯಾನಿ ಕಷ್ಟಾನಿ ಮೂಢೋsಯಂ ಸಹತೇ ಜನಃ ।

ಶತಾಂಶೇನಾಪಿ ಮೋಕ್ಷಾರ್ಥೀ ತಾನಿ ಚೇನ್ಮೋಕ್ಷಮಾಪ್ನುಯಾತ್ ।।

ಇದರ ತಾತ್ಪರ್ಯ ಹೀಗೆ: ಮೋಕ್ಷಸುಖ

‘ಅವಿವೇಕಿಗಳಾದ ಈ ಜನರು ಹಣದ ಸಂಪಾದನೆಗಾಗಿ ಯಾವ ಯಾವ ಕಷ್ಟಗಳನ್ನೆಲ್ಲ ಸಹಿಸುವರೋ, ಅದರ ನೂರರಲ್ಲಿ ಒಂದು ಪಾಲನ್ನು ಸಹಿಸಿದರೂ ಸಾಕು, ಮೋಕ್ಷವನ್ನು ಬೇಕೆನ್ನುವವರಿಗೆ ಮುಕ್ತಿ ಸಿಗುವುದು ಖಂಡಿತ.’

ದಿನದ ಸೂಕ್ತಿ ಕೇಳಿ:

ಮೋಕ್ಷವನ್ನು ಪಡೆಯುವುದು ಎಷ್ಟು ಸುಲಭ ಎನ್ನುವುದನ್ನು ಸುಭಾಷಿತ ಹೇಳುತ್ತಿದೆ.

ಮೋಕ್ಷವೇ ನಮ್ಮ ಜೀವನದ ನಿಜವಾದ ಗುರಿಯಾಗಿರತಕ್ಕದ್ದು ಎನ್ನುವುದು ವೇದಾಂತದರ್ಶನದ ನಿಲವು.

ಮೋಕ್ಷ ಎಂದರೇನು?

ಸಂಸಾರದ ಸುಖ–ದುಃಖಗಳ ಚಕ್ರದಿಂದ ಬಿಡುಗದೆ; ನಮ್ಮ ಸ್ವರೂಪದಲ್ಲಿ ನೆಲೆ ನಿಲ್ಲುವುದು. ಆನಂದವೇ ನಮ್ಮ ದಿಟವಾದ ಸ್ವರೂಪ. ಇದು ವೇದಾಂತದ ಸಾರ.

ಆದರೆ ಮೋಕ್ಷವನ್ನು ಬಯಸುವವರು ಸಂಖ್ಯೆ ತುಂಬ ಕಡಿಮೆ. ಅದಕ್ಕಾಗಿ ಸಾಧನೆಯನ್ನು ಮಾಡುವವರ ಸಂಖ್ಯೆ ಇನ್ನೂ ಕಡಿಮೆ. ಅದನ್ನೇ ಸುಭಾಷಿತ ಹೇಳುತ್ತಿರುವುದು. ಮೋಕ್ಷದ ಬಗ್ಗೆ ಆಲೋಚಿಸುವುದಕ್ಕೂ ವಿವೇಕ ಬೇಕು ಎನ್ನುವುದು ಅದರ ಇಂಗಿತ.

ಆದರೆ ಅವಿವೇಕಿಗಳು ಬಯಸುವುದು ಮಾತ್ರ ವಿಷಯಸುಖವನ್ನೇ. ಅದಕ್ಕಾಗಿ ಅವರು ಏನೋನು ಕಷ್ಟಗಳನ್ನು ಪಡುತ್ತಾರೆ. ಈ ವಿಷಯಸುಖದ ಮೂಲ ಇರುವುದು ಹಣದ ಗಳಿಕೆಯಲ್ಲಿ. ಅದರ ಸಂಪಾದನೆಗಾಗಿ ಮನುಷ್ಯ ಮಾಡದ ಕೆಲಸವೇ ಇಲ್ಲ. ಇಷ್ಟೆಲ್ಲ ಕಷ್ಷಪಟ್ಟು ಸಂಪಾದಿಸುವ ಹಣದಿಂದ ಅವನಿಗೆ ಎಂದಿಗೂ ಸುಖವೇ ಇರುತ್ತದೆಯೋ? ಅದೂ ಇಲ್ಲ. ಹೀಗಿದ್ದರೂ ಅವನು ಹಣದ ಸಂಪಾದನೆಗಾಗಿ ಪಡಬಾರದ ಕಷ್ಟವನ್ನೆಲ್ಲ ಅನುಭವಿಸುತ್ತಾನೆ. ಹಣಕ್ಕಾಗಿ ಪಡುವ ಈ ಕಷ್ಟಗಳ ಪ್ರಮಾಣದಲ್ಲಿ ಮೋಕ್ಷಕ್ಕಾಗಿ ಒಂದೇ ಒಂದು ಶತಾಂಶದಷ್ಟು ಕಷ್ಟಪಟ್ಟರೂ ಅವನಿಗೆ ಮುಕ್ತಿ ಸಿಗುತ್ತದೆ ಎಂದು ಸುಭಾಷಿತ ಹೇಳುತ್ತಿದೆ. ನಿಜವಾದ ಆನಂದವನ್ನು ಪಡೆಯುವುದು ಸುಲಭ ಎಂದು ಸೂಚಿಸುತ್ತಿದೆ.

ಜೀವನದಲ್ಲಿ ಶಾಶ್ವತ ಯಾವುದು, ಅಶಾಶ್ವತ ಯಾವುದು, ದಿಟವಾದ ಸುಖ ಯಾವುದು, ದುಃಖ ಯಾವುದು – ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಂಡರೆ ಅಗ ಸಹಜವಾಗಿಯೇ ನಮ್ಮ ಹಣದ ಮೋಹ ಕಡಿಮೆಯಾಗುವುದು ಖಂಡಿತ. ಆನಂದ ಎಲ್ಲಿದೆ – ಎಂಬುದರ ಹುಡುಕಾಟವೇ ಮೋಕ್ಷದ ಮಾರ್ಗ. ಈ ಮಾರ್ಗದಲ್ಲಿಯೇ ನಮ್ಮ ಜೀವನಸಾರ್ಥಕತೆಯ ಗುರಿಯನ್ನು ತಲಪಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT