ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ನಾಲ್ಕು ಮಹಾಗುಣಗಳು

Last Updated 28 ಜನವರಿ 2021, 8:57 IST
ಅಕ್ಷರ ಗಾತ್ರ

ದಾತೃತ್ವಂ ಪ್ರಿಯವಕ್ತೃತ್ವಂ ಧೀರತ್ವಮುಚಿತಜ್ಞತಾ ।
ಅಭ್ಯಾಸೇನ ನ ಲಭ್ಯಂತೇ ಚತ್ವಾರಃ ಸಹಜಾ ಗುಣಾಃ ।।

ಇದರ ತಾತ್ಪರ್ಯ ಹೀಗೆ:
‘ಉದಾರವಾಗಿ ದಾನಮಾಡುವ ಗುಣ, ಪ್ರಿಯವಾಗಿ ಮಾತನ್ನು ಆಡುವುದು, ಧೈರ್ಯ ಮತ್ತು ಔಚಿತ್ಯವನ್ನು ತಿಳಿದುಕೊಂಡು ಅದರಂತೆ ನಡೆದುಕೊಳ್ಳುವುದು – ಇವು ಮನುಷ್ಯನಲ್ಲಿ ಸಹಜವಾಗಿ ಬರುವಂಥ ನಾಲ್ಕು ಗುಣಗಳೇ ಹೊರತು, ಅಭ್ಯಾಸದಿಂದ ಬರುವಂಥವಲ್ಲ.’

ಕೆಲವೊಂದು ಗುಣಗಳನ್ನು ನಾವು ಕಾಲಕ್ರಮದಲ್ಲಿ ರೂಢಿಸಿಕೊಳ್ಳಬಹುದು; ಕೆಲವೊಂದನ್ನು ಮಾತ್ರ ರೂಢಿಸಿಕೊಳ್ಳಲು ಆಗುವುದಿಲ್ಲ, ಅವು ಜನ್ಮಜಾತವಾಗಿಯೇ ಬಂದಿರಬೇಕು ಎನ್ನುತ್ತಿದೆ ಸುಭಾಷಿತ. ಅಂಥ ನಾಲ್ಕು ಗುಣಗಳನ್ನು ಕೂಡ ಅದು ಇಲ್ಲಿ ಹೇಳಿದೆ.

ಮೊದಲನೆಯದು, ದಾನಬುದ್ಧಿ. ದಾನ ಎಂದರೆ ನಮಗೆ ಬೇಡವಾದುದುನ್ನು, ಬಿಸಾಕುವ ಬದಲು ಇನ್ನೊಬ್ಬರಿಗೆ ಕೊಡುವಂಥದ್ದಲ್ಲ. ಯಾರಿಗೆ ಯಾವುದು ಆವಶ್ಯಕವಾಗಿದೆಯೋ ಅದನ್ನು ನಾವು ಅವರಿಗೆ ಶ್ರದ್ಧೆಯಿಂದ ಕೊಡುವುದು ದಾನ. ಹೀಗೆ ಕೊಡುವ ಬುದ್ದಿಯನ್ನು ನಾವು ರಾತ್ರೋರಾತ್ರಿ ಕಲಿಯಲು ಸಾಧ್ಯವಿಲ್ಲ. ಕರೊನಾಸಂಕಷ್ಟದ ಸಮಯದಲ್ಲೋ ಪ್ರವಾಹ ಎದುರಾದಾಗಲೋ ಅಥವಾ ಜನರಿಗೆ ಇನ್ನಾವುದೋ ಸಂಕಷ್ಟ ಬಂದಾಗಲೋ ಒಮ್ಮೆಲೇ ನಾವು ಕಲಿಯಬಹುದಾದ ಗುಣ ಇದಲ್ಲ.

ಎರಡನೆಯದು, ಪ್ರಿಯವಾಗಿ ಮಾತನ್ನಾಡುವುದು. ಇದನ್ನು ಕಲಿಯುವುದು ಸಾಧ್ಯವೇ ಇಲ್ಲವೆನ್ನಿ! ಮಾತು ನಮ್ಮ ವ್ಯಕ್ತಿತ್ವವನ್ನು ಪ್ರಕಟಿಸುತ್ತದೆ. ಪ್ರಿಯವಾಗಿ ಮಾತನ್ನಾಡಿದರೆ ಜನರ ಸ್ನೇಹ ನಮಗೆ ದಕ್ಕುತ್ತದೆ, ದಕ್ಕಿರುವ ಸ್ನೇಹ ಉಳಿಯುತ್ತದೆ. ಆದರೆ ಹೀಗೆ ಪ್ರಿಯವಾಗಿ ಮಾತನ್ನಾಡುವುದನ್ನು ಯಾವುದೋ ವರ್ಕ್‌ಶಾಪ್‌ಗೆ ಹೋಗಿ ಕಲಿತುಬರಲು ಆಗದು. ಕೆಲವರು ಕೆಲವೊಂದು ದೇವಾಲಯಕ್ಕೆ ಹೋಗುವಾಗ ದೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ. ಆ ಸಮಯದಲ್ಲಿ ಇತರರೊಂದಿಗೆ ಗೌರವವಾಗಿ ಮಾತನಾಡಬೇಕೆಂಬುದು ನಿಯಮ. ಆದರೆ ಹೀಗೆ ಸಹಜವಾಗಿ ಒಳ್ಳೆಯ ಮಾತುಗಳನ್ನಾಡುವುದನ್ನು ದಕ್ಕಿಸಿಕೊಂಡಿರದವರು, ಒಂದೆರಡು ವಾಕ್ಯಗಳನ್ನು ಮಾತನಾಡುವುದರಲ್ಲಿ ತಮ್ಮ ನಿಜವಾದ ಬಂಡವಾಳವನ್ನು ಹೊರಹಾಕುತ್ತಾರೆನ್ನಿ!

ಧೈರ್ಯವೂ ನಮ್ಮ ಹುಟ್ಟುಗುಣವಾಗಿ ಬರಬೇಕೆ ಹೊರತು ಯಾವುದೋ ಔಷಧದಿಂದಲೋ ಪುಸ್ತಕದಿಂದಲೋ ಬರುವಂಥದ್ದಲ್ಲ. ನಾಲ್ಕು ಜನರು ನಮ್ಮ ಸುತ್ತಮುತ್ತ ಇದ್ದಾಗ ನಮಗೆ ಬರುವ ಧೈರ್ಯ ಅದು ಧೈರ್ಯವೇ ಅಲ್ಲ; ನಾವು ಒಂಟಿಯಾಗಿದ್ದಾಗಲೂ ಮನಸ್ಸು–ಬುದ್ಧಿ–ಶರೀರಗಳು ನಮ್ಮ ಮಾತನ್ನು ಕೇಳುವಂತೆ ಸುಸ್ಥಿರವಾಗಿಟ್ಟುಕೊಳ್ಳುವುದು ಧೈರ್ಯ ಎನಿಸಿಕೊಳ್ಳುತ್ತದೆ. ಧೈರ್ಯ ಎಂಬುದು ಶರೀರದ ಗಟ್ಟಿತನವೂ ಅಲ್ಲ, ಅದು ಮಾನಸಿಕ ಬಲ.

ಯಾವಾಗ ಹೇಗೆ ನಡೆದುಕೊಳ್ಳಬೇಕು ಎಂಬುದೇ ಔಚಿತ್ಯವನ್ನು ತಿಳಿದು ನಡೆದುಕೊಳ್ಳುವುದು ಎಂದಿರುವುದು. ಇದನ್ನು ಕಲಿಯುವುದಾದರೂ ಹೇಗೆ? ಇದಕ್ಕಾಗಿ ನಿರಂತರ ಶ್ರಮ ಪಡಬೇಕು. ಒಂದು ವಿಷಯವನ್ನು, ವಸ್ತುವನ್ನು, ಒಬ್ಬ ವ್ಯಕ್ತಿಯನ್ನು ಹತ್ತಾರು ದಿಕ್ಕುಗಳಿಂದ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ದಿಢೀರನೆ ಮೂವತ್ತು ದಿನಗಳಲ್ಲಿ ಈ ಸೂಕ್ಷ್ಮತೆಗಳನ್ನು ಕಲಿಯಲು ಸಾಧ್ಯವಿಲ್ಲವೆನ್ನಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT