ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ದುಡ್ಡನ್ನು ಹೀಗೆ ಖರ್ಚು ಮಾಡಿ

Last Updated 9 ಜನವರಿ 2021, 17:50 IST
ಅಕ್ಷರ ಗಾತ್ರ

ಧರ್ಮಾಯ ಯಶಸೇsರ್ಥಾಯ ಕಾಮಾಯ ಸ್ವಜನಾಯ ಚ ।

ಪಂಚಧಾ ವಿಭಜನ್‌ ವಿತ್ತಮಿಹಾಮುತ್ರ ಚ ಮೋದತೇ ।।

ಇದರ ತಾತ್ಪರ್ಯ ಹೀಗೆ:

‘ಮನುಷ್ಯನು ತನ್ನ ಹಣವನ್ನು ಧರ್ಮಕ್ಕೆ, ಕೀರ್ತಿಗೆ, ಅರ್ಥಕ್ಕೆ, ಕಾಮಕ್ಕೆ ಮತ್ತು ಸ್ವಜನರಿಗೆ – ಹೀಗೆ ಐದು ರೀತಿಯಲ್ಲಿ ಖರ್ಚುಮಾಡುವವನು ಈ ಲೋಕದಲ್ಲಿ ಮಾತ್ರವಲ್ಲ, ಪರಲೋಕದಲ್ಲಿಯೂ ಸುಖವನ್ನು ಪಡೆಯುತ್ತಾನೆ.’

ನಾವು ದುಡ್ಡನ್ನು ಸಂಪಾದಿಸುವುದಾದೂ ಏಕೆ? ಖರ್ಚುಮಾಡಲು ತಾನೆ? ನಮ್ಮ ಹಣವನ್ನು ಹೇಗೆ ಖರ್ಚು ಮಾಡಬೇಕು ಎಂಬುದನ್ನು ಈ ಸುಭಾಷಿತ ಹೇಳುತ್ತಿದೆ.

ನಮ್ಮಲ್ಲಿ ಪುರುಷಾರ್ಥಗಳ ಕಲ್ಪನೆ ಇದೆ. ಜೀವನದಲ್ಲಿ ನಮಗೆ ಏನೆಲ್ಲ ಆವಶ್ಯಕತೆಗಳು ಇವೆಯೊ ಅವೆಲ್ಲವನ್ನೂ ಪೂರೈಸಿಕೊಳ್ಳಲು ಇರುವ ದಾರಿಗಳೇ ಪುರುಷಾರ್ಥಗಳು. ಇವುಗಳಲ್ಲಿ ನಮ್ಮ ಆಸೆಗಳೂ ಇವೆ, ಅನಿವಾರ್ಯಗಳೂ ಇವೆ ಎಂಬುದನ್ನು ಗಮನಿಸಿಬೇಕು; ಪುರುಷಾರ್ಥಗಳಲ್ಲಿ ಎರಡೂ ಸೇರಿಕೊಂಡಿದೆ.

ಧರ್ಮಕ್ಕೆ ಹಣವನ್ನು ಖರ್ಚು ಮಾಡಬೇಕು. ಧರ್ಮ ಎಂದರೆ ನಮ್ಮ ಕರ್ತವ್ಯಗಳ ನಿರ್ವಹಣೆ; ಅದೂ ಸರಿಯಾದ ರೀತಿಯಲ್ಲಿ ನಿರ್ವಹಣೆ. ನಮ್ಮ ಕುಟುಂಬದ ನಿರ್ವಹಣೆ, ನಮ್ಮ ಪಾಲಿನ ಹೊಣೆಗಾರಿಕೆಗಳ ಪಾಲನೆ, ಸಮಾಜದ ಪೋಷಣೆ, ಗುರು–ಹಿರಿಯರ ತೋಷಣೆ – ಇವೆಲ್ಲವೂ ಧಾರ್ಮಿಕತೆಯ ವ್ಯಾಪ್ತಿಯಲ್ಲೇ ಬರುತ್ತವೆ.

ಕೀರ್ತಿಗಾಗಿ ದುಡ್ಡನ್ನು ಖರ್ಚುಮಾಡುವುದು ಸರಿ ಎಂಬುದು ಸುಭಾಷಿತದ ಇಂಗಿತ. ನಾಲ್ಕು ಜನರಿಗೆ ಉಪಯೋಗವಾಗುವಂಥ ಕೆಲಸ ಮಾಡಿದರೆ ಆಗ ನಮ್ಮ ಹೆಸರು ಹತ್ತು ಜನರ ನಾಲಗೆಯ ಮೇಲೆ ನಲಿದಾಡುತ್ತದೆ. ಇದೇ ಕೀರ್ತಿ. ಜನರಿಂದ ನಾವು ಪ್ರಯೋಜನವನ್ನು ಪಡೆದುಕೊಳ್ಳುವುದಲ್ಲ; ನಮ್ಮಿಂದಲೂ ಅವರಿಗೆ ಉಪಯೋಗ ಆಗಬೇಕು, ಅಲ್ಲವೆ?

ದುಡ್ಡನ್ನು ಸಂಪಾದಿಸಲು ಒದಗುವ ದಾರಿ ಎಂದರೆ ಅದು ಕೂಡ ದುಡ್ಡೇ! ಹೀಗಾಗಿಯೇ ಅರ್ಥಕ್ಕೆ ಹಣವನ್ನು ಖರ್ಚುಮಾಡುವಂತೆ ಸುಭಾಷಿತ ಹೇಳುತ್ತಿದೆ. ಅರ್ಥ ಎಂದರೆ ಜೀವನದ ಸುಖಕ್ಕೆ ಬೇಕಾದ ಸಾಧನಗಳೂ ಹೌದು.

ಕಾಮ ಎನ್ನುವುದು ನಮ್ಮ ಬಯಕೆಗಳು. ಅವುಗಳನ್ನು ಪೂರೈಸಿಕೊಳ್ಳಲು ಹಣವನ್ನು ಖರ್ಚುಮಾಡಲೇ ಬೇಕೆನ್ನಿ! ನಮ್ಮ ಬಯಕೆಗಳು ಎಂದರೆ ಅದು ಎಂಥ ಬಯಕೆಗಳೂ ಆಗಿರಬಹುದು ಎಂದಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಪುರುಷಾರ್ಥವಾಗಿರುವ ಬಯಕೆಗಳೇ ದಿಟವಾದ ಬಯಕೆಗಳು. ಎಂದರೆ ಧರ್ಮಕ್ಕೆ ವಿರುದ್ಧವಲ್ಲದವು; ನಮಗೆ ಆವಶ್ಯಕವಾಗಿರುವ, ಆದರೆ ನಮಗೂ ಯಾರಿಗೂ ಹಾನಿಯಾಗದಿರುವಂಥವು, ಅವೇ ದಿಟವಾದ ಬಯಕೆಗಳು. ಅವುಗಳನ್ನು ನೆರವೇರಿಸಿಕೊಳ್ಳಲು ಹಣವನ್ನು ಖರ್ಚುಮಾಡುವುದು ಕ್ಷೇಮಕರ ಮತ್ತು ಲಾಭಕರ.

ನಮ್ಮ ಸಂಪಾದನೆಯನ್ನು ನಮಗಷ್ಟೆ ವಿನಿಯೋಗಿಸಿದರೆ ಅದರಿಂದ ಯಾವ ಸುಖ? ನಮ್ಮ ಬಂಧುಗಳಿಗೆ, ಸ್ನೇಹಿತರಿಗೆ ನಮ್ಮ ಹಣ ಖರ್ಚಾಗಬೇಕು; ಅದರಲ್ಲಿಯೇ ನಮ್ಮ ನಿಜವಾದ ಸುಖ ಕೂಡ ಇರುವಂಥದ್ದು. ಸುಭಾಷಿತ ಅದನ್ನೇ ಇಲ್ಲಿ ಹೇಳುತ್ತಿರುವುದು.

ಹಣವನ್ನು ಸಂಪಾದಿಸುವುದು ತಪ್ಪು – ಎಂದು ನಮ್ಮ ಪರಂಪರೆಯಲ್ಲಿ ಹೇಳಿಲ್ಲ; ಅದನ್ನು ಚೆನ್ನಾಗಿಯೇ ಸಂಪಾದಿಸಬೇಕು ಎಂದೇ ಹೇಳಿರುವುದು. ಆದರೆ ಅದನ್ನು ಸರಿಯಾದ ದಾರಿಯಲ್ಲಿ ಸಂಪಾದಿಸಬೇಕು ಮತ್ತು ಸರಿಯಾದ ದಾರಿಯಲ್ಲಿ ಖರ್ಚುಮಾಡಬೇಕು – ಎಂದು ಹೇಳುವುದನ್ನು ಮಾತ್ರ ಅದು ಮರೆತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT