ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ | ಪೋಷಣ ಭೂಷಣ ತೋಷಣ ಶೋಷಣ

Last Updated 20 ಜುಲೈ 2020, 1:31 IST
ಅಕ್ಷರ ಗಾತ್ರ

ಮಾತ್ರಾ ಸಮಂ ನಾಸ್ತಿ ಶರೀರಪೋಷಣಂ
ವಿದ್ಯಾಸಮಂ ನಾಸ್ತಿ ಶರೀರಭೂಷಣಮ್‌ ।
ಭಾರ್ಯಾಸಮಂ ನಾಸ್ತಿ ಶರೀರತೋಷಣಂ
ಚಿಂತಾಸಮಂ ನಾಸ್ತಿ ಶರೀರಶೋಷಣಮ್‌ ।।

ಇದರ ತಾತ್ಪರ್ಯ ಹೀಗೆ:

‘ತಾಯಿಗೆ ಸಮವಾದ ಶರೀರದ ಪೋಷಣವಿಲ್ಲ; ವಿದ್ಯೆಗೆ ಸಮವಾದ ಶರೀರದ ಭೂಷಣವಿಲ್ಲ; ಮಡದಿಗೆ ಸಮವಾದ ಶರೀರದ ತೋಷಣವಿಲ್ಲ; ಚಿಂತೆಗೆ ಸಮವಾದ ಶರೀರದ ಶೋಷಣವಿಲ್ಲ.‘

ನಾವು ಏನನ್ನು ಮಾಡಬೇಕಾದರೂ ನಮ್ಮ ಶರೀರ ಮುಖ್ಯ; ಚಿಕ್ಕ ಕೆಲಸದಿಂದ ಹಿಡಿದು ದೊಡ್ಡ ಸಾಧನೆಯವರೆಗೂ ನಮಗೆ ಸಾಧನವಾಗುವುದೇ ಶರೀರ. ‘ಶರೀರಮಾದ್ಯಂ ಖಲು ಧರ್ಮಸಾಧನಮ್‘ ಎಂಬ ಕಾಳಿದಾಸನ ಮಾತು ಪ್ರಸಿದ್ಧವಾಗಿದೆ. ‘ಧರ್ಮಕ್ಕೆ ಸಾಧನವೇ ಶರೀರ’.

ನಮ್ಮ ಶರೀರ ಹೀಗೆ ಧರ್ಮಸಾಧನವಾಗಬೇಕಾದರೆ ಅದರ ಪೋಷಣೆ ಮತ್ತು ರಕ್ಷಣೆಗಳು ತುಂಬ ಮುಖ್ಯ. ನಮ್ಮ ಶರೀರದ ಬೆಳವಣಿಗೆ ಪ್ರಮುಖವಾಗಿ ನಾಲ್ಕು ಹಂತಗಳಲ್ಲಿ ಹಾದುಹೋಗುತ್ತದೆ. ಪೋಷಣ, ಭೂಷಣ, ತೋಷಣ, ಶೋಷಣ – ಇವೇ ಈ ನಾಲ್ಕು ಹಂತಗಳು.

ಮೊದಲನೆಯದ್ದು ಪೋಷಣ – ಎಂದರೆ ದೇಹದ ರಕ್ಷಣೆ, ಪೋಷಣೆ. ಎರಡನೆಯದ್ದು ಭೂಷಣ – ಎಂದರೆ ಅಲಂಕಾರ; ಶರೀರವನ್ನು ಪೋಷಿಸಿದರಷ್ಟೆ ಸಾಲದು, ಅದನ್ನು ಪ್ರೀತಿಸುವುದನ್ನೂ ಅಲಂಕರಿಸುವುದನ್ನೂ ಮನಸ್ಸು ಬಯಸುತ್ತದೆ. ಮೂರನೆಯದ್ದು ತೋಷಣ – ಎಂದರೆ ತೃಪ್ತಿಗೊಳಿಸುವುದು, ಸಂತೋಷಪಡಿಸುವುದು.ಪ್ರೀತಿಸುವ ಶರೀರಕ್ಕೆ ಸಂತೋಷವೂ ಬೇಕಲ್ಲವೆ? ಜೀವನದಲ್ಲಿ ಯಾವುದೂ ಒಂದೇ ರೀತಿಯಲ್ಲಿ ನಡೆಯದು, ಏರುಪೇರು ಸಹಜ; ಇದು ಶರೀರಕ್ಕೂ ಅನ್ವಯವಾಗುತ್ತದೆ, ಶರೀರಕ್ಕೂ ತೊಂದರೆಗಳು ಎದುರಾಗುತ್ತವೆ. ಅದೇ ಶೋಷಣ, ಶರೀರದ ಅವನತಿಗೂ ಸಂಕಟಕ್ಕೂ ಕಾರಣವಾಗುವಂಥದ್ದು.

ಸುಭಾಷಿತದ ಸೊಗಸು ಎಂದರೆ ಶರೀರಕ್ಕೆ ಒದಗುವ ನಾಲ್ಕು ಹಂತಗಳಾದ ಪೋಷಣ, ಭೂಷಣ, ತೋಷಣ ಮತ್ತು ಶೋಷಣ – ಇವಿಷ್ಟು ಮಾತ್ರವನ್ನೇ ಹೇಳಿಲ್ಲ, ಅವಕ್ಕೆ ಕಾರಣವಾಗುವ ಮೂಲಗಳನ್ನೂ ಹೇಳಿದೆ.

ಶರೀರದ ಪೋಷಣೆಗೆ ಕಾರಣ ಎಂದರೆ ತಾಯಿ. ಹೌದು, ತಾಯಿ ನಮಗೆ ಜನ್ಮವನ್ನು ನೀಡಿದ್ದಲ್ಲದೆ, ಈ ಶರೀರವನ್ನು ಬೆಳಸುವವಳು, ಕಾಪಾಡುವವಳು ಕೂಡ ಅವಳೇ. ಅವಳು ನಮಗಾಗಿ ಮಾಡಿರುವ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ತಾಯಿಯ ಋಣವನ್ನು ನಾವು ಎಂದಿಗೂ ತೀರಿಸಲು ಸಾಧ್ಯವಿಲ್ಲ.

ನಮ್ಮ ಶರೀರಕ್ಕೆ ಭೂಷಣ, ಎಂದರೆ ಅಲಂಕಾರ ಯಾವುದು? ನಾವು ಧರಿಸುವ ಹಾರವನ್ನೋ ಬಟ್ಟೆಯನ್ನೋ ಅಲಂಕಾರ ಎಂದು ಭಾವಿಸಿಕೊಂಡಿದ್ದೇವೆ. ಆದರೆ ಸುಭಾಷಿತ ಹೇಳುತ್ತಿದೆ, ವಿದ್ಯೆಯೇ ನಮ್ಮ ದಿಟವಾದ ಭೂಷಣ. ಈ ಆಭರಣವನ್ನು ಯಾರೂ ನಮ್ಮಿಂದ ಕಸಿಯಲು ಕೂಡ ಸಾಧ್ಯವಿಲ್ಲವಷ್ಟೆ!

ಶರೀರಕ್ಕೆ ಸಂತೋಷವೂ ಬೇಕು. ಈ ಸಂತೋಷ, ಎಂದರೆ ತೋಷಣವನ್ನು ನೀಡುವವಳೇ ಹೆಂಡತಿ. ಎಂದರೆ ಗಂಡನಿಗೆ ಹೆಂಡತಿ, ಹೆಂಡತಿಗೆ ಗಂಡನೇ ದಿಟವಾದ ಸಂತೋಷ. ಅನ್ಯೋನ್ಯ ದಾಂಪತ್ಯಕ್ಕಿಂತಲೂ ದಿಟವಾದ ಸಂತೋಷ ಇನ್ನೊಂದಿಲ್ಲ. ಗೃಹಸ್ಥಾಶ್ರಮವೇ ಶ್ರೇಷ್ಠ ಎಂಬ ಮಾತಿದೆ. ಇದು ಸಾರ್ಥಕವಾಗುವುದು ದಂಪತಿಗಳ ಅನ್ಯೋನ್ಯ ಸಾಂಗತ್ಯದಲ್ಲಿ.

ಶೋಷಣ, ಎಂದರೆ ಶರೀರವೂ ಕ್ಷೀಣಿಸಲು ತೊಡಗುತ್ತದೆ. ಇದಕ್ಕೆ ಕಾರಣವಾಗಿ ನಾವು ಮುಪ್ಪನ್ನೂ ಕಾಯಿಲೆಗಳನ್ನೂ ಕಾಣುತ್ತೇವೆ. ಆದರೆ ದಿಟವಾಗಿಯೂ ನಮ್ಮ ಶರೀರದ ಶಕ್ತಿಯನ್ನೂ ಉತ್ಸಾಹವನ್ನೂ ಕುಗ್ಗಿಸುವಂಥದ್ದು ಚಿಂತೆ, ಮನೋವ್ಯಾಧಿ. ಸಂಸ್ಕೃತದ ಸುಭಾಷಿತವೊಂದು ಚಿಂತೆಯ ಅಪಾಯದ ಬಗ್ಗೆ ಸೊಗಸಾಗಿ ಹೇಳಿದೆ: ಚಿಂತೆಗೂ ಚಿತೆಗೂ ಇರುವ ವ್ಯತ್ಯಾಸ ಸ್ವಲ್ಪ ಮಾತ್ರ, ಕೇವಲ ಸೊನ್ನೆಯಷ್ಟೆ ವ್ಯತ್ಯಾಸ. ಆದರೆ ಚಿತೆ ಶವವನ್ನು ಮಾತ್ರವೇ ಸುಡುತ್ತದೆ; ಚಿಂತೆ ಜೀವಂತವ್ಯಕ್ತಿಯನ್ನೇ ಸುಡುತ್ತದೆ.

ಹೌದು, ಇದು ಎಷ್ಟು ನಿಜ ಅಲ್ಲವೆ? ಹೀಗಾಗಿ ನಾವು ಚಿಂತೆಗೆ ಬಲಿಯಾಗದಂತೆ ನಮ್ಮ ಮನಸ್ಸನ್ನು ಕಾಪಾಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT